ಸಂಪಾದಕೀಯ
ಉತ್ತೀರ್ಣ ಪ್ರಮಾಣ ಏರಿಕೆ: ಸಾಧನೆಯೋ, ವ್ಯವಸ್ಥೆಯೋ?
೨೦೨೫-೨೬ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ೯೪.೧% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ೮೦.೪% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ರೀತಿಯ ಬೆಳವಣಿಗೆ ನಮ್ಮ ರಾಜ್ಯದ ಮಕ್ಕಳ ವಿದ್ಯಾಭ್ಯಾಸ ಎಷ್ಟು ಚುರುಕಾಗಿದೆ ಎಂಬುದಕ್ಕೆ ರಾಜ್ಯ ಸರ್ಕಾರ ಈ ಉತ್ತಮ ದಾಖಲೆಯನ್ನು ನಿರ್ಮಿಸಿದೆ. ನಮ್ಮ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ೧೦೦% ಸಾಧಿಸಬೇಕು ಎಂಬ ಕನಸು ಸಾಕಾರಗೊಳ್ಳಲು ಇನ್ನೂ ಕೆಲವೇ ವರ್ಷಗಳು ಬಾಕಿ ಇವೆ. ಇದಕ್ಕೆ ರಾಜ್ಯದ ಪ್ರತಿಯೊಬ್ಬ ನಾಯಕರಿಗೂ, ಪರೀಕ್ಷಾ ಸಿದ್ಧತೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಿದ ಪ್ರತಿಯೊಂದು ಇಲಾಖೆಗೂ, ಪರೀಕ್ಷಾ ಮೌಲ್ಯಮಾಪನದ ಪ್ರತಿಯೊಂದು ಅಂಶವನ್ನೂ ಮೌಲ್ಯಮಾಪನ ಮಾಡಿದ ಅಧಿಕಾರಿಗಳಿಗೂ, ಶಿಕ್ಷಕರಿಗೂ, ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಕಿಂಚಿತ್ತೂ ಸೌಲಭ್ಯದಿಂದ ವಂಚಿತರಾಗದಂತೆ ನಿಗಾವಹಿಸಿದ ಶಿಕ್ಷಣ ಇಲಾಖೆಗೂ ಎಷ್ಟು ಕೊಂಡಾಡಿದರೂ ಸಾಲದು.
ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಶಿಕ್ಷಕರ ಕೊರತೆ ಇದೆ. ಆದರೆ ಶಿಕ್ಷಣದ ಕೊರತೆ ಇಲ್ಲ ಎಂದು ಸಾಧಿಸಲು ನಮ್ಮ ಶಿಕ್ಷಣ ಇಲಾಖೆ ತುಂಬ ಕಷ್ಟಪಟ್ಟಿದೆ ಎನ್ನುವುದಕ್ಕೆ ಇಂದಿನ ಫಲಿತಾಂಶವೇ ಕಾರಣ. ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡದೆಯೇ ಉತ್ತಮ ಮಟ್ಟದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಈ ದಾಖಲೆ ಮುಂದಿನ ಪೀಳಿಗೆಗೆ ಒಂದು ಮಾರ್ಗದರ್ಶನವಾಗುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಎಷ್ಟೋ ಸೌಲಭ್ಯಗಳು ಕಡಿಮೆ ಇದ್ದರೂ ಫಲಿತಾಂಶದಲ್ಲಿ ಕಿಂಚಿತ್ತೂ ಕುಂದದೆ ಉತ್ತಮ ರೀತಿಯಲ್ಲಿ ಮೌಲ್ಯಮಾಪನ ನಡೆಸಲಾಗಿದೆ. ಇಂದಿನ ಸರ್ಕಾರದ ಪರಿಸ್ಥಿತಿ ಹೇಗಿದೆ ಎಂದರೆ ಸಾಮಾನ್ಯವಾಗಿ ಇಷ್ಟು ವಿದ್ಯಾರ್ಥಿಗಳಿಗೆ ಇಷ್ಟೇ ಪ್ರಮಾಣದಲ್ಲಿ ಶಿಕ್ಷಕರು ಇರಬೇಕು ಎಂಬ ನಿಯಮವಿದೆ. ಆದರೆ ಕೆಲವು ಶಾಲೆಗಳಲ್ಲಿ ಎರಡು-ಮೂರು ತರಗತಿಗಳಿಗೆ ಒಬ್ಬ ಶಿಕ್ಷಕ ಇರುವಷ್ಟು ಸಂಕಷ್ಟದ ವ್ಯವಸ್ಥೆಯಲ್ಲಿ ಶಾಲೆ ನಡೆಸುವ ಈ ಸಮಯದಲ್ಲಿ ಇಂದಿನ ಆಶ್ಚರ್ಯಕರ ಫಲಿತಾಂಶ ಮುಂದಿನ ದಿನಗಳಲ್ಲಿ ಶಿಕ್ಷಕರ ಭರ್ತಿಯಲ್ಲಿ ಕಡಿತವಾಗುವ ಮುನ್ಸೂಚನೆಯಾಗಬಹುದು.
ಇದೆಲ್ಲ ಮೇಲ್ನೋಟಕ್ಕೆ ಕಂಡರೂ, ಫಲಿತಾಂಶವನ್ನು ಗಮನಿಸಿದರೆ ಒಂದು ವಿಶೇಷ ಆಶ್ಚರ್ಯ ಅಡಗಿದೆ. ನಮ್ಮ ರಾಜ್ಯದ ಮಾತೃಭಾಷೆ ಕನ್ನಡ ಆದರೂ ಹೆಚ್ಚಿನ ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ ಕಡಿಮೆ ಅಂಕ ಪಡೆದಿದ್ದಾರೆ. ಇಂಗ್ಲಿಷಿನಲ್ಲಿ ಕನ್ನಡಕ್ಕಿಂತ ಹೆಚ್ಚು ಅಂಕಗಳು ಬಂದಿವೆ. ಇದು ಶಿಕ್ಷಣ ವ್ಯವಸ್ಥೆಯಲ್ಲಿನ ಖಾಸಗೀಕರಣದ ಪ್ರಭಾವವೇ, ಇಂಗ್ಲಿಷ್ ಶಿಕ್ಷಣ ವ್ಯವಸ್ಥೆಯ ಪ್ರಭಾವವೇ ಎಂದು ತಿಳಿಯುತ್ತಿಲ್ಲ. ಆದರೂ ನಮ್ಮ ರಾಜ್ಯದ ವಿದ್ಯಾರ್ಥಿಗಳು ಇಂಗ್ಲಿಷ್ ಶಿಕ್ಷಣದ ಕಡೆ ಅತಿ ಹೆಚ್ಚು ಗಮನ ಹರಿಸಿರುವುದು ಇಲ್ಲಿ ಕಂಡುಬರುತ್ತಿದೆ. ಹಾಗೆಯೇ ಬಹುತೇಕ ವಿದ್ಯಾರ್ಥಿಗಳ ಫಲಿತಾಂಶವನ್ನು ಗಮನಿಸಿದರೆ ಬಾಹ್ಯ ಪರೀಕ್ಷೆಯ ಅಂಕಕಿಂತ ಅಂತರಿಕ ಅಂಕಗಳೇ ಹೆಚ್ಚು ಬಂದಿವೆ (ಆಂತರಿಕ ಅಂಕಗಳು ಗರಿಷ್ಠ ಪ್ರಮಾಣದಲ್ಲಿ ದೊರೆತಿವೆ). ಆಂತರಿಕ ಅಂಕಗಳನ್ನು ವಿದ್ಯಾರ್ಥಿಗಳ ಸಹಪಠ್ಯ ಚಟುವಟಿಕೆಗಳು, ಪತ್ಯೇತರ ಚಟುವಟಿಕೆಗಳು, ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಆಸಕ್ತಿ, ಬಹುಮುಖ ಪ್ರತಿಭೆಗಳನ್ನೆಲ್ಲ ಗಮನಿಸಿ ಕೊಡುವ ಕಾರಣ ಅವರ ಬಾಹ್ಯ ಪರೀಕ್ಷೆಯ ಅಂಕಗಳೊಂದಿಗೆ ನೇರವಾಗಿ ಸಂಬಂಧಿಸಲು ಸಾಧ್ಯವಿಲ್ಲ. ಆದರೂ ಪರೀಕ್ಷೆಯ ಮೌಲೀಕರಣದಲ್ಲಿ ಆಂತರಿಕ ಅಂಕಗಳ ಮಹತ್ವ ಹೆಚ್ಚು ಬೀರಿರುವುದು ಎನ್ನುವುದಕ್ಕೆ ಇಂದಿನ ಫಲಿತಾಂಶವೇ ಕಾರಣವಾಗಿದೆ.
ಎಲ್ಲಾ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳು ಗರಿಷ್ಠ ಮಟ್ಟದಲ್ಲಿ ನೀಡಿದ್ದು ಬಾಹ್ಯ ಪರೀಕ್ಷೆಯ ಅಂಕದಲ್ಲಿ ಕನಿಷ್ಠ ಅಂಕ ಪಡೆದಿರುವುದು ಕಾಣುತ್ತದೆ. ಪ್ರಥಮ ಭಾಷಾ ವಿಷಯಕ್ಕೆ ಗರಿಷ್ಠ ೧೨೫ ಅಂಕಗಳಿದ್ದರೆ ೧೦೦ ಅಂಕ ಬಾಹ್ಯ ಪರೀಕ್ಷೆ, ೨೫ ಅಂಕ ಆಂತರಿಕ ಪರೀಕ್ಷೆ. ಉಳಿದ ಎಲ್ಲಾ ವಿಷಯದಲ್ಲೂ ಗರಿಷ್ಠ ೧೦೦ ಅಂಕ, ೮೦ ಅಂಕ ಬಾಹ್ಯ ಪರೀಕ್ಷೆ. ೨೦ ಅಂಕ ಆಂತರಿಕ ಪರೀಕ್ಷೆ. ಹೀಗೆ ಮೌಲ್ಯಮಾಪನ ನಡೆಯುತ್ತದೆ. ವಿದ್ಯಾರ್ಥಿ ಉತ್ತೀರ್ಣರಾಗಲು ಕನಿಷ್ಠ ೩೩% ಅಂಕ ಕಡ್ಡಾಯವಾಗಿದೆ. ವಿಷಯವಾರು ಪ್ರತಿ ವಿಷಯಕ್ಕೆ ಕನಿಷ್ಠ ೩೦-೩೩% ಅಂಕಗಳು ಕಡ್ಡಾಯಗೊಳಿಸಲಾಗಿದೆ. ಆಂತರಿಕ ಅಂಕಗಳಲ್ಲಿ ಬಹುತೇಕ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆಗೆ ೨೫ ಅಂಕ. ಉಳಿದ ಎಲ್ಲಾ ವಿಷಯಗಳಲ್ಲೂ ೨೦ ಅಂಕ ನೀಡಿದ್ದು, ಅಂದರೆ ಪೂರ್ಣ ಅಂಕಗಳನ್ನು ನೀಡಿದ್ದಾರೆ. ಇನ್ನು ವಿದ್ಯಾರ್ಥಿ ಉತ್ತೀರ್ಣರಾಗಲು ಕೇವಲ ೧೩ ಅಂಕಗಳ ಅವಶ್ಯಕತೆ ಮಾತ್ರ ಇದೆ. ಆಂತರಿಕ ಪರೀಕ್ಷೆ ೨೦ ಅಂಕಕ್ಕೆ ೨೦ ಅಂಕ ಪಡೆದ ವಿದ್ಯಾರ್ಥಿ ಬಾಹ್ಯ ಪರೀಕ್ಷೆಯಲ್ಲಿ ೮೦ ಅಂಕಕ್ಕೆ ೧೩ ಅಂಕ ಪಡೆದರೆ ಆ ವಿದ್ಯಾರ್ಥಿ ಉತ್ತೀರ್ಣರಾಗಬಹುದು. ಇದು ಯಾವ ಕಾರಣಕ್ಕೆ ಹೀಗೆ ಮಾಡಿದ್ದಾರೆ? ಇಷ್ಟೆಲ್ಲಾ ವ್ಯವಸ್ಥೆ ಮಾಡಿರುವ ಸರ್ಕಾರ ಅನುತ್ತೀರ್ಣರಾದ ವಿದ್ಯಾರ್ಥಿಗಳ ಏಳಿಗೆಗಾಗಿ ಪೂರಕ ಪರೀಕ್ಷೆಯ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಾರೆ. ಪೂರಕ ಪರೀಕ್ಷೆಯಿಂದ ಉತ್ತೀರ್ಣ/ಅನುತ್ತೀರ್ಣ ವಿದ್ಯಾರ್ಥಿಗಳು ಈ ಮೊದಲು ಪಡೆದ ಅಂಕಕ್ಕಿಂತ ಹೆಚ್ಚು ಅಂಕ ಪಡೆಯಲು ಸಹಾಯಕವಾಗುತ್ತದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳು ಯಾವ ರೀತಿಯಿಂದಲೂ ಅನುತ್ತೀರ್ಣರಾಗಬಾರದು ಎಂಬ ಧೈಯೋದ್ದೇಶವನ್ನು ಇಂದಿನ ಸರ್ಕಾರ ಹೊಂದಿದೆ. ಈ ರೀತಿಯ ಬೆಳವಣಿಗೆ ಗಮನಿಸಿದರೆ ಇನ್ನು ಕೆಲವೇ ವರ್ಷಗಳಲ್ಲಿ ರಾಜ್ಯದ ಉತ್ತೀರ್ಣ ಪ್ರಮಾಣ ೧೦೦% ಮಟ್ಟಕ್ಕೆ ತಲುಪುತ್ತದೆ. ಇದು ಸರ್ಕಾರದ ಗ್ಯಾರಂಟಿ ಯೋಜನೆಯಂತಾಗಿದೆ.
ಒಟ್ಟಿನಲ್ಲಿ, ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆ ಈಗ ಅಚ್ಚರಿಗಳ ಯುಗಕ್ಕೆ ಕಾಲಿಟ್ಟಿದೆ ಎನ್ನಬಹುದು. ಶಿಕ್ಷಕರ ಕೊರತೆ ಇದ್ದರೂ ಜ್ಞಾನಕ್ಕೆ ಕೊರತೆ ಇಲ್ಲ, ಸೌಲಭ್ಯಗಳು ಕಡಿಮೆಯಿದ್ದರೂ ಫಲಿತಾಂಶಗಳು ಗಗನಕ್ಕೇರಿವೆ. ಓದಿದ ಅಂಕಕ್ಕಿಂತ ಅಂತರಿಕ ಅಂಕವೇ ಹೆಚ್ಚು ಹೊಳೆಯುತ್ತಿದೆ. ವಿದ್ಯಾರ್ಥಿ ಕಡಿಮೆ ಬರೆದರೂ ಉತ್ತೀರ್ಣ, ಹೆಚ್ಚು ಬರೆದರೆ ಹೆಚ್ಚಿನ ಶ್ರೇಣಿ-ಎಲ್ಲರಿಗೂ ಬೆಳಕಿನ ಭವಿಷ್ಯ ಸಿದ್ಧವಾಗಿದೆ. ಇದೇ ವೇಗ ಮುಂದುವರಿದರೆ ಮುಂದಿನ ಕೆಲವು ವರ್ಷಗಳಲ್ಲಿ ಓದಿಲ್ಲದವರೂ ಉತ್ತೀರ್ಣರಾಗುವ ದಿನ ದೂರದಲ್ಲಿಲ್ಲ ಎನ್ನುವ ಭಾವನೆ ಮೂಡುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಶ್ರಮಕ್ಕಿಂತ ಶೇಕಡಾವಾರು ಮುಖ್ಯ ಎಂಬ ಹೊಸ ತತ್ವವನ್ನು ನಮ್ಮ ವ್ಯವಸ್ಥೆ ಯಶಸ್ವಿಯಾಗಿ ಸ್ಥಾಪಿಸಿದೆ ಎನ್ನಬಹುದು.
ಉಪಸಂಪಾದಕ, ಬಿತ್ತಿ ಸಂಪಾದಕ ಮಂಡಳಿ












