ಸೋಮವಾರ, ಡಿಸೆಂಬರ್ 29, 2025

ಸಂಚಿಕೆ - ೦೯

ಸಹಾಯ

      ಒಂದು ಸಹಾಯ ಏನೆಲ್ಲಾ ಪರಿಣಾಮ ಬೀರಬಹುದು ಎಂಬುದಕ್ಕೆ ಆ ದಿನ ಸಾಕ್ಷಿಯಾಗಿತ್ತು. ಮನೆಯಿಂದ ಕಾಲೇಜಿನ ಕಡೆ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಮಾರ್ಗ ಮಧ್ಯೆ ನಮ್ಮ ಕಾಲೇಜಿನ ಪ್ರಾಧ್ಯಾಪಕರು ನಾನಿದ್ದ ಬಸ್ಸು ಹತ್ತಿದರು. ಸೀಟಿಗಾಗಿ ಹುಡುಕುತಿದ್ದ ಅವರ ಕಣ್ಣುಗಳು, ಅದೇ ಸಮಯಕ್ಕೆ ನಾನು ಅವರನ್ನು ನೋಡಿದ ಘಳಿಗೆ ಒಂದೇ ಆಗಿತ್ತು. ಹಿಂದೆ ಮುಂದೆ ಯೋಚಿಸದೆ ಅವರಿಗೆ ಸೀಟು ಬಿಟ್ಟು ಕೊಟ್ಟೆ, ಅವರು ಬೇಡ ಅಂದರು ನನ್ನ ಮನಸು ಒಪ್ಪಲಿಲ್ಲ. ನಾನು ಅಲ್ಲಿಂದ ಎದ್ದು ಅವರಿಗೆ ಕುಳಿತುಕೊಳ್ಳಲು ದಾರಿ ಮಾಡಿದೆ. ಬ್ಯಾಗಿಗೆ ಕೈ ಹಾಕಿ ನನ್ನ ಫೋನ್ ಹಾಗು ಇಯರ್ ಫೋನ್ ಎತ್ತಿಕೊಂಡೆ. ಪ್ರಯಾಣ ಮುಂದುವರಿಯಿತು. ಕೈಯಲ್ಲಿದ್ದ ಪೋನಿಗೆ ಬ್ಲೂಟೂತ್ ಕನೆಕ್ಷ ಮಾಡಿದೆ. ಪೋನನಿಂದ ಸುಮಧುರ ಹಾಡುಗಳು ನನ್ನ ಕಿವಿಗೆ ಮುತ್ತಿಕ್ಕಿ ನನ್ನ ಪ್ರಯಾಣ ದೂರವನ್ನು ಸಂಗೀತ ಮಯವಾಗಿಸಿತು. ಕಂಡೆಕ್ಟರ್ ಬಂದು ಟಿಕೇಟ್ ಕೇಳಿದರು. ಜೇಬಿನಿಂದ ಹಣ ತೆಗೆಯಲು ಕೈ ಹಾಕಿದಾಗ ಪ್ರಾಧ್ಯಾಪಕರು ಟಿಕೇಟ್ ಆಯಿತಾ ಎಂದು ಕೇಳಿದರು. ನಾನು ಆಯಿತು ಎನ್ನಬೇಕಿತ್ತು. ಆದರೆ ಸರ್ ಅವರೆ ನನ್ನ ಟಿಕೇಟ್ ತೆಗಿಸಿದ್ದರು. ಹಣವನ್ನು ಹಾಗೆಯೇ ಜೇಬಿನಲ್ಲಿ ಇಟ್ಟೆ. ನನಗೆ ಆಗ ಯಾವ ಭಾವ ಮೂಡಿತೋ ನನಗೆ ಗೊತ್ತಿಲ್ಲ, ಅವರ ಕಡೆ ದೃಷ್ಟಿ ಹಾಯಿಸುವುದನ್ನು ಬಿಟ್ಟು ಇಯರ್ ಫೋನ ಕಿವಿಗೆ ಸಿಕ್ಕಿಸಿ ಬೇರೆ ಕಡೆ ದೃಷ್ಟಿ ಹಾಯಿಸಿ, ಪ್ರಯಾಣ ಮುಂದುವರಿಸಿದೆವು. ತಂಗುದಾಣ ಹತ್ತಿರವಾಗುತ್ತಿದ್ದಂತೆ ಇಳಿಯಲು ಅಣಿಯಾಗುತ್ತಿರುವಾಗ ಅವರು ನನ್ನ ಛತ್ರಿಯನ್ನು ಜೋಪಾನ ಮಾಡಿ ನನಗೆ ನೀಡಿದರು. ನಾವಿಬ್ಬರೂ ಇಳಿದು ಇನ್ನೊಂದು ಬಸ್ಸು ಹತ್ತಿದೆವು.

      ಅವರು ಒಂದು ಸೀಟಲ್ಲಿ ಕುಳಿತರು. ನಾನು ಮುಂದಿನ ಎಡಗಡೆಯ ಸೀಟಿನಲ್ಲಿ ಕುಳಿತೇನು. ಪ್ರಯಾಣ ಮುಂದುವರೆಯಿತು, ಆಗಲು ನನ್ನ ಟಿಕೇಟ್ ಅವರೇ ತೆಗೆದರು. ನನ್ನಲ್ಲಿ ಹಣ ಉಳಿತಾಯ ಆಗಿರಬಹುದು ಆದರೆ ಅದಕ್ಕೆ ಕಾರಣ ಅವರ ಸಹಾಯ ಎಂದು ಭಾವಿಸಿದೆ. ದೇವರು ಮತ್ತೆ ಪರೀಕ್ಷಿಸಲೆಂದು ಹಿರಿಯ ವ್ಯಕ್ತಿಯನ್ನು ನಾನಿದ್ದ ಬಸ್ಸು ಹತ್ತಿಸಿದರು. ಸೀದಾ ನನ್ನ ಹತ್ತಿರಕ್ಕೆ ಬಂದು ಆ ಕಡೆ ಈ ಕಡೆ ನೋಡುತ್ತಿದ್ದರು. ನಾನು ಎದ್ದು ಅವರಿಗೆ ಸೀಟು ಕೊಟ್ಟೆ ಎಂದು ನಿಮಗೆ ಅನಿಸಿರಬಹುದು. ಆದರೆ ನಾನು ಅವರಿಗೆ ಸೀಟು ಬಿಟ್ಟು ಕೊಡಲಿಲ್ಲ. ಕಾರಣ ಅತಿಯಾಗಿ ಒಳ್ಳೆಯವನಾಗುವುದು ಬೇಡ ಅನಿಸಿತು. ನನ್ನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕ ಎದ್ದು ಅವರಿಗೆ ಸೀಟು ಬಿಟ್ಟುಕೊಡಲು ಅಣಿಯಾಗುತ್ತಿದ್ದಾಗ ನಾನು ಅವರ ಮಾನವೀಯತೇ ಏಕೆ ಭಂಗ ಪಡಿಸಲಿ ಎನಿಸಿತು. ಕೊನೆಗು ನಾವು ತಲುಪಬೇಕಾಗಿರುವ ಸ್ಥಳ ಬಂತು. ನಾವು ಇಳಿದೆವು. ನಮ್ಮ ದಾರಿಯ ಕಡೆ ಮುಖ ಮಾಡಿ ಹೊರಟೆವು.

ಶ್ರೇಯಸ್ ಬನ್ನಡ್ಕ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೯

ಅರ್ಥವಿಲ್ಲದ ಜೀವನ

ಸಾಗುವ ಮೋಡಗಳಡಿ 

ಕುಳಿತ ವೃಕ್ಷವೇ 

ನಿನಗೆ ಯಾರು ನೆಂಟರು 

ನಿನಗೆ ಯಾರು ಮಿತ್ರರು


ಬೆಳಕು ನಿಲ್ಲುವುದಿಲ್ಲ 

ಕತ್ತಲು ನಿಲ್ಲುವುದಿಲ್ಲ 

ಹಸಿರಿನ ಅಂಬಿಕೆ 

ಗಾಳಿಯೇ ಮರೀಚಿಕೆ


ಹೂವು ನಿನ್ನದಲ್ಲ 

ಹಣ್ಣು ನಿನ್ನದಲ್ಲ 

ರಕ್ಷಣೆ ನಿನಗಿಲ್ಲ 

ಸೇವೆ ಮೊದಲೇ ಇಲ್ಲ


ಜನ್ಮ ಯಾರದೋ 

ಲಾಲಿ ಇನ್ಯಾರದೋ 

ಬದುಕುವ ನೂರು ದಿನ 

ಹೊರಡುವೇ ಮಾರನೇ ದಿನ


ಗುರುವೇ ಇಲ್ಲದ 

ಗುರುವಾಗಿರುವೆ 

ಪಾತ್ರ ಮುಗಿಸು 

ದೇಹ ತ್ಯಜಿಸು


ತ್ರಿವೇಣಿ. ವಿ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೯

ನಿತ್ಯೋತ್ಸವ

ಇದು ನಿತ್ಯದ ಉತ್ಸವ 

ಇದೇ ನಿತ್ಯದ ವಾಸ್ತವ 

ಸ್ವಾರ್ಥವಿಲ್ಲದ ತನ್ನದೆನ್ನದೆ 

ಭಯದ ಭಕ್ತಿಯ ಮಾಡದೆ 

ಸತ್ಯ ಅರಿಯದೆ ನಿಜವ ನುಡಿಯದೆ 

ಮಾತು ಮಾತಿಗು ತಲೆ ತೂಗಿದೆ 

ಇದು ನಿತ್ಯದ ಉತ್ಸವ 

ಇದೇ ನಿತ್ಯದ ವಾಸ್ತವ ॥೧॥


ದೇವನಿಲ್ಲ ದೇವನೆಲ್ಲ 

ಎಂಬ ಎರಡು ಬಣಗಳು 

ಇವರು ಅವರನು ಅವರು ಇವರನು 

ಕಂಡು ಕಾಣದ ನರಿಗಳು 

ಇದು ನಿತ್ಯದ ಉತ್ಸವ 

ಇದೇ ನಿತ್ಯದ ವಾಸ್ತವ ॥೨॥


ದ್ವೇಷ ದ್ವೇಷದಿ ಸಮರಸಾರುತ 

ತನ್ನದೇ ಸರಿಯೆನ್ನುತಾ 

ನಿತ್ಯ ನೂತನ ಜಗವ ಬಯಸುತ 

ಎಳೆಯ ಮನಗಳ ಕೊಲ್ಲುತಾ 

ಇದು ನಿತ್ಯದ ಉತ್ಸವ 

ಇದೇ ನಿತ್ಯದ ವಾಸ್ತವ ॥೩॥


ಸರ್ವರೊಳು ಒಂದಾಗಿ 

ಸರ್ವವು ತನದಾದರೇ 

ಸರ್ವೇಶ್ವರನಿಗೂ ಮೆಚ್ಚುಗೆಯಾಗುವೇ 

ಇಲ್ಲವಾದರೆ ತಿಪ್ಪೆಗುಂಡಿಯ ಗೊಚ್ಚೆಯಾಗುವೆ 

ಇದು ನಿತ್ಯದ ಉತ್ಸವ 

ಇದೇ ನಿತ್ಯದ ವಾಸ್ತವ ॥೪॥


ದುಶ್ಯಂತ್, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೯

ಹಸಿರು ಹಾದಿಯ ಸ್ನೇಹ

ಹಸಿರು ಗಾಳಿಯ ಹಾಡಿನ ಜೊತೆಯಲ್ಲಿ ನಡೆವೆನು ನಾನು 

ಜೊತೆಯಾಗಿ ನನ್ನ ಮಿತ್ರನು,


ಮರಗಳ ನೆರಳಿನಲಿ ನದಿ ಹರಿದಂತೆ ನಮ್ಮ ಮಾತುಗಳು, 

ಪರ್ವತದಂತೆ ಗಟ್ಟಿಯಾದ ಸ್ನೇಹದ ನಂಬಿಕೆ. 

ಹೂ ಸುಗಂಧದಂತೆ ಬೆರೆತು ಹೋದ ಭಾವನೆ, 

ನಮ್ಮ ಕನಸಿಗೆ ಸಾಕ್ಷಿಯಾದವು


ನದಿ ಹರಿದಂತೆ ನಿರಾಳವಾದ ಹೃದಯ, 

ಮಣ್ಣಿನ ಮಡಿಲಲ್ಲಿ ಬೆಳೆದ ಬಾಂಧವ್ಯ.

ಮಳೆ ಹನಿ ತೊಳೆದಂತೆ ನೋವುಗಳು, 

ನಮ್ಮ ಸ್ನೇಹದ ನೆನಪಾಗಿ ಬೆಳೆದು ನಿಂತವು 

ಸಂಜೆಯ ಸೂರ್ಯ ಮಂಕಾದರೂ, 

ಪ್ರಕೃತಿಯಂತೆ ಶಾಶ್ವತ ನಮ್ಮ ಮಿತ್ರತ್ವ.


ದಿವ್ಯಶ್ರೀ ಎ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೯

ಸೂರ್ಯಕಾಂತಿ

ಕಣ್ಣು ಸೂರ್ಯ ಕಾಂತಿಯೇ 

ತುಟಿಯು ವೀಣೆ ತಂತಿಯೇ 

ನಿನ್ನ ಪ್ರೇಮ ನನ್ನೊಳಗೆ ಕಾವ್ಯ ಸೃಷ್ಟಿಯೇ


ನೋಟ ಸೂರ್ಯ ಅಸ್ತಮ 

ಮಾತು ಶಶಿಯ ಬಿಂದಿಗೆ 

ಸದಾ ದಾಸ ನಾನು ಅವಳ ಕಾಲ ಗೆಜ್ಜೆಗೆ


ಕಣ್ಣು ಸೂರ್ಯ ಕಾಂತಿಯೇ //೨//


ನಿನ್ನ ಸ್ನೇಹದಿಂದ ಬಂತೆ ಬಾಳಿಗೆ ಬದಲಾವಣೆ 

ಎಲ್ಲಾ ತೊರೆದ ನನಗೆ ನೀನೊಬ್ಬಳೇ ಆಕರ್ಷಣೆ 

ನಿನ್ನ ಉಸಿರ ಧಮನಿ ಧಮನಿ ಹೃದಯ ಮೆಟ್ಟಿಲು 

ಅವಳ ನಗುವೇ ಸ್ಫೂರ್ತಿ ಎನಗೆ ಬದುಕ ಕಟ್ಟಲು 

ಎಷ್ಟು ಅಂದ ನಿನ್ನಲಿದೆಯೇ ಶಾಕುಂತಲೇ 

ಅಷ್ಟೇ ಚೆಂದ ಸಾಲ ನೀಡೆ ನೀ ಬೇಕಂತಲೇ


ಕಣ್ಣು ಸೂರ್ಯ ಕಾಂತಿಯೇ //೨//


ಕನಸಿನಲ್ಲಿ ಕೆರಳಿ ನಿನ್ನ ನಗುವೇ ಪಾರಿಜಾತವು 

ಸುತ್ತಿ ಸುತ್ತಿ ನಿನ್ನ ಪ್ರೀತಿ ರಥವೇ ಪ್ರೇಮ ಪರ್ವವೂ 

ಕೋಪ ಮಾಡುವಾಗ ನೀನು ಸ್ವರ್ಣ ಕಡಲೆಯೇ 

ನಿನ್ನ ನಗುವಿಗಾಗಿ ಒಲವ ಧಾರೆ ಎರೆಯಲೇ 

ಮೆಚ್ಚಿಕೊಂಡ ದಿವ್ಯಾತಾರೆ ನೀನು ಮಾಯೆಯೇ 

ನಿನ್ನ ಹೆಸರ ನನ್ನ ಮನದಿ ಹಚ್ಚೆ ಹಾಕಲೇ...


ಕಣ್ಣು ಸೂರ್ಯ ಕಾಂತಿಯೇ ||೨||


ಪರಶುರಾಮ್, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೯

“ವಿಶ್ವದ ಅತಿ ದೊಡ್ಡ ಹೂವು”

      ಪ್ರಕೃತಿಯ ವೈಶಿಷ್ಟ್ಯವೆ ವಿಭಿನ್ನವಾಗಿರುತ್ತದೆ. ನಾವು ನೋಡಿದಕ್ಕಿಂತ ನೋಡದೆ ಇರುವುದು ಹಲವಾರು ಪ್ರಕೃತಿಯ ಮಡಿಲಲ್ಲಿ ಸೇರಿಕೊಂಡಿರುತ್ತದೆ. ಇವುಗಳಲ್ಲಿ ಅಪರೂಪವಾಗಿರುವ ಮತ್ತು ಅಳಿವಿನಂಚಿನಲ್ಲಿರುವ ಪ್ರಪಂಚದ ಅತೀ ದೊಡ್ಡ ಹೂ ಆಗಿರುವ ರಾಫ್‌ ಲೆಸಿಯಾ (Rafflesia), ಬ್ರಿಟಿಷ್ ಅಧಿಕಾರಿ ಸರ್ ಸ್ಪ್ಯಾಮ್‌ ಫೋರ್ಡ್ ರಾಫೆಲ್ಸ್ ಮತ್ತು ಸಸ್ಯವಿಜ್ಞಾನಿ ಡಾ. ಜೋಸೆಫ್ ಅರ್ನಾಲ್ಡ್ ಅವರು ೧೮೧೮ರಲ್ಲಿ ಇದನ್ನು ಮೊದಲು ಗುರುತಿಸುತ್ತಾರೆ. ಈ ಕಾರಣಕ್ಕೆ ಅವರ ಗೌರವಾರ್ಥವಾಗಿ ಇದಕ್ಕೆ 'ರಾಫೆಸಿಯಾ ಅರ್ನಾಲ್ಲಿ' (Rafflesia Arnoldi) ಎಂದು ಹೆಸರಿಡಲಾಯಿತು. ಈ ಪ್ರಭೇದದ ಹೂವುಗಳು ಸುಮಾರು ೩ ಅಡಿ ೧ ಮೀಟರ್ ವ್ಯಾಸದವರೆಗೆ ಬೆಳೆಯಬಲ್ಲವು ಮತ್ತು ಇವುಗಳ ತೂಕ ಸುಮಾರು ೭ ರಿಂದ ೧೧ ಕಿಲೋ ಗ್ರಾಂಗಳವರೆಗೆ ಇರುತ್ತದೆ. ಈ ಸಸ್ಯ ಆಹಾರಕ್ಕಾಗಿ 'ಟೆಟ್ರಾಸ್ಟಿಗ್ಗಾ' (Tetrastigma) ಎಂಬ ಬಳ್ಳಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ರಫೀಸಿಯ ಆವೃತಬೀಜಸಸ್ಯಗಳ (ಆಂಜಿಯೋಸ್ಪರ್ಮ್ಸ್) ಪೈಕಿ ರಫೀಸಿಯೇಸಿ ಕುಟುಂಬಕ್ಕೆ ಸೇರಿರುವ ಸಸ್ಯ ವಲಯ. ದ್ವೀಪ ಸಮೂಹಗಳಲ್ಲಿ ಮಾತ್ರ ಕಂಡುಬರುವ ಈ ಸಸ್ಯ ಒಂದು ಪರಾವಲಂಬಿ ಸಸ್ಯ. ವಿವಿಧ ಜಾತಿಯ ಸಸ್ಯಗಳ ಮೇಲೆ ಇದು ಪರಾವಲಂಬಿಯಾಗಿ ಜೀವನ ನಡೆಸುತ್ತದೆ. ಆವೃತಬೀಜ ಸಸ್ಯಗಳ ಮುಖ್ಯ ಭಾಗಗಳಾದ ಬೇರು, ಕಾಂಡ, ಎಲೆಗಳಾವುವೂ ಈ ಸಸ್ಯದಲ್ಲಿ ಇರುವುದಿಲ್ಲ. ಸಸ್ಯ ಬಿಳಿಯ ಸೂಕ್ಷ್ಮ ನಾಳಗಳ ತಂತುಜಾಲದಂತಿದ್ದು ಆತಿಥೇಯ ಸಸ್ಯದ ಒಳಭಾಗದಲ್ಲಿ ಹರಡಿಕೊಂಡಿರುತ್ತದೆ. ಹೀಗಾಗಿ ಹೊರನೋಟಕ್ಕೆ ಸಸ್ಯದ ಇರುವಿಕೆಯ ಅರಿವೇ ಆಗುವುದಿಲ್ಲ. ಶವದ ಹೂವು (Corpse Flower) ಎಂದು ಸಹ ಕರೆಯಲಾಗುತ್ತದೆ. ಏಕೆಂದರೆ ಇದು ಅರಳಿದಾಗ ಕೊಳೆತ ಮಾಂಸದಂತಹ ಅಸಹ್ಯಕರ ವಾಸನೆಯನ್ನು ಬೀರುತ್ತದೆ. ಈ ವಾಸನೆಯು ಪರಾಗಸ್ಪರ್ಶಕ್ಕಾಗಿ ನೊಣಗಳನ್ನು ಮತ್ತು ಕೀಟಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಇದನ್ನು ಸ್ಥಳೀಯವಾಗಿ 'ಶವದ ಹೂವು' ಅಥವಾ 'ಮಾಂಸದ ಹೂವು' ಎಂದು ಕರೆಯಲಾಗುತ್ತದೆ. ಸಸ್ಯದ ರಚನೆ ಎಷ್ಟು ಭಿನ್ನವೊ ಅದರ ಹೂ ಕೂಡ ಅಷ್ಟೇ ವಿಶಿಷ್ಟವಾದ್ದು. ಹೂವಿನ ಸುತ್ತ ಪುಷ್ಪ ಪಾತ್ರೆಯಿರುತ್ತದೆ. ಪುಷ್ಪದಳಗಳಿರುವುದಿಲ್ಲ. ಹೂಗಳಲ್ಲಿ ಗಂಡು ಹೆಣ್ಣುಗಳೆಂಬ ಭೇಧವಿದೆ. ಗಂಡುಹೂಗಳಲ್ಲಿರುವುದು ಕೇಸರಗಳು ಮಾತ್ರ. ಅಗಣಿತ ಸಂಖ್ಯೆಯಲ್ಲಿರುವ ಕೇಸರಗಳ ತುದಿಯಲ್ಲಿ ಎರಡು ಪರಾಗಕೋಶಗಳಿವೆ. 


      ಅವುಗಳ ಮೇಲ್ಬಾಗದಲ್ಲಿರುವ ರಂಧ್ರಗಳ ಮೂಲಕ ಪರಾಗರೇಣು ಹೊರಬೀಳುತ್ತದೆ. ಕೀಟಗಳಿಂದ ಪರಾಗಸ್ಪರ್ಶಕ್ರಿಯೆ ನಡೆಯುತ್ತದೆ. ಹೆಣ್ಣು ಹೂವಿನಲ್ಲಿ ಒಂದು ಶಲಾಕೆ ಮಾತ್ರ ಇರುತ್ತದೆ. ಅಂಡಾಶಯ ಶಲಾಕ ಸ್ಥಿತಿಯಲ್ಲಿಯೇ ಇದ್ದು ಅದರಲ್ಲಿ ಒಂದು ಕೋಣೆ ಮಾತ್ರ ಇರುತ್ತದೆ. ಕಾರ್ಪೆಲ್‌ಗಳ ಒಳಭಿತ್ತಿಯ ಮೇಲೆ ಭ್ರೂಣ ಬೆಳೆಯುತ್ತದೆ. ಶಲಾಕ ನಳಿಕೆಯ ತುದಿಯಲ್ಲಿ ಶಲಾಕಾಗ್ರವಿರುತ್ತದೆ. ಈ ಪುಷ್ಪದಿಂದ ಬೆಳೆಯುವ ಹಣ್ಣು ರಸಭರಿತ ಬರ್ರಿ ಮಾದರಿಯದು. ಈ ಹೂವುಗಳು ಕೆಂಪು ಅಥವಾ ಕಂದು ಬಣ್ಣದ್ದಾಗಿದ್ದು, ಐದು ದೊಡ್ಡ ದಳಗಳನ್ನು ಹೊಂದಿರುತ್ತವೆ. ಈ ದಳಗಳ ಮೇಲೆ ಬಿಳಿ ಬಣ್ಣದ ಚುಕ್ಕೆಗಳಿರುತ್ತವೆ. ಈ ಹೂವು ಅರಳಲು ಒಂಬತ್ತರಿಂದ ಹತ್ತು ತಿಂಗಳು ಬೇಕಾಗುತ್ತದೆ, ಆದರೆ ಅರಳಿದ ನಂತರ ಇದು ಕೇವಲ ೫ ರಿಂದ ೭ ದಿನಗಳವರೆಗೆ ಮಾತ್ರ ಜೀವಂತವಾಗಿರುತ್ತದೆ. ಮುಖ್ಯವಾಗಿ ಆನ್ನೇಯ ಏಷ್ಯಾದ ಮಳೆಕಾಡುಗಳಲ್ಲಿ ಕಂಡುಬರುತ್ತದೆ. ವಿಶೇಷವಾಗಿ ಈ ಹೂವು ಇಂಡೋನೇಷ್ಯಾ, ಮಲೇಷ್ಯಾ ಥೈಲ್ಯಾಂಡ್ ಮತ್ತು ಫಿಲಿಪೈನ್ಸ್ ದೇಶಗಳಲ್ಲಿ ಇವು ಹೆಚ್ಚಾಗಿ ಕಾಣಸಿಗುತ್ತವೆ. ಇದು ಇಂಡೋನೇಷ್ಯಾದ ಮೂರು ರಾಷ್ಟ್ರೀಯ ಹೂವುಗಳಲ್ಲಿ ಒಂದಾಗಿದೆ. ಅರಣ್ಯ ನಾಶ ಮತ್ತು ಆವಾಸಸ್ಥಾನಗಳ ಕುಸಿತದಿಂದಾಗಿ ಈ ಅಪರೂಪದ ಹೂವು ಅಳಿವಿನ ಅಂಚಿನಲ್ಲಿದೆ ಎಂದು ಪರಿಗಣಿಸಲಾಗಿದೆ. ಪ್ರಕೃತಿಯೂ ವಿಸ್ಮಯಕಾರಿ ಈ ಹೂವು ಅದಕ್ಕೆ ಸಾಕ್ಷಿ ಎನ್ನುವಂತಿದೆ.

ಪೂಜಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೯

 'ಸೀಕ್ರೆಟ್ ಸಂತ' ಆಟದ ಅಭಿಪ್ರಾಯ

      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿ ಮಿತ್ರರು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ 'ಸೀಕ್ರೆಟ್ ಸಂತ'ಎಂಬ ಆಟವನ್ನು ಆಯೋಜಿಸಿದ್ದರು. ಈ ಆಟವು ವಿಭಿನ್ನವಾಗಿದ್ದು ಬಹಳ ವಿಶೇಷತೆಯನ್ನು ಹೊಂದಿತ್ತು. ಮೊದಲು ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಹೆಸರುಗಳನ್ನು ಚೀಟಿಗಳಲ್ಲಿ ಬರೆದು. ಹೆಸರು ಕಾಣದಂತೆ ಚೀಟಿಗಳನ್ನು ಮಡಚಿ ಒಂದು ಪೆಟ್ಟಿಗೆಯಲ್ಲಿ ಹಾಕಿ ಚೆನ್ನಾಗಿ ಕುಲುಕಲಾಯಿತು. ನಂತರ ಪ್ರಥಮ ಮತ್ತು ದ್ವಿತೀಯ ವರ್ಷದ ಸಹಪಾಠಿಗಳನ್ನು ಒಟ್ಟಾಗಿ ಸೇರಿಸಿ ಎಲ್ಲರಿಗೂ ಒಂದೊಂದು ಚೀಟಿಯನ್ನು ತೆಗೆದುಕೊಳ್ಳುವಂತೆ ಹೇಳಲಾಯಿತು. ಚೀಟಿಯಲ್ಲಿ ಹೆಸರು ಬಂದವರಿಗೆ ಒಂದು ಸೀಮಿತ ಮೌಲ್ಯದೊಳಗೆ ತಮಗೆ ಇಷ್ಟವಾದ ಉಡುಗೊರೆಯನ್ನು ನೀಡಬೇಕು ಎಂಬುದೇ ಈ ಆಟದ ನಿಯಮವಾಗಿತ್ತು. ಹಾಗೆಯೇ ಯಾರು ಸಹ ತಮ್ಮ ಚೀಟಿಯಲ್ಲಿ ಬಂದ ಹೆಸರನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಮತ್ತು ತಾವು ತಂದ ಉಡುಗೊರೆಯ ವಿಷಯವನ್ನೂ ಯಾರಿಗೂ ಹೇಳಬಾರದು ಎಂಬ ನಿಯಮವಿತ್ತು.

      ಈ ಆಟವು ಎಲ್ಲರಿಗೂ ಒಂದಲ್ಲೊಂದು ಕುತೂಹಲವನ್ನು ಮೂಡಿಸಿತು. ಎಲ್ಲರೂ ಒಬ್ಬೊಬ್ಬರಾಗಿ ಬಂದು ಚೀಟಿಯನ್ನು ತೆಗೆದು. ಗೌಪ್ಯವಾಗಿ ಹೆಸರನ್ನು ನೋಡಿ, ಕಿರು ನಗುವಿನೊಂದಿಗೆ ತಮ್ಮ ಆಸನಕ್ಕೆ ತೆರಳಿದರು. ಆ ಪೆಟ್ಟಿಗೆಯಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಹೆಸರುಗಳಿದ್ದುದರಿಂದ ಹಿರಿಯ ಮಿತ್ರರಿಗೆ-ಕಿರಿಯ ಮಿತ್ರರ ಹೆಸರು, ಕಿರಿಯ ಮಿತ್ರರಿಗೆ ಹಿರಿಯ ಮಿತ್ರರ ಹೆಸರು, ಹುಡುಗರಿಗೆ-ಹುಡುಗಿಯರ ಹೆಸರು. ಹುಡುಗಿಯರಿಗೆ-ಹುಡುಗರ ಹೆಸರು, ಹೇಗೆ ಬೇಕಾದರೂ ಬರುವ ಅವಕಾಶವಿತ್ತು. ಯಾರಿಗೆ ಯಾರ ಹೆಸರಿನ ಚೀಟಿ ಬಂದಿದೆ ಎನ್ನುವುದೇ ಎಲ್ಲರಿಗೂ ಕುತೂಹಲವಾಗಿತ್ತು. ಆದರೆ ಯಾರು ಸಹ ಹೆಸರನ್ನು ಹೇಳುವಂತಿರಲಿಲ್ಲ. ದಿನಾಂಕ ೩೧ ಡಿಸೆಂಬರ್ ೨೦೨೫ರಂದು ಎಲ್ಲರೂ ತಮ್ಮ ಉಡುಗೊರೆಯೊಂದಿಗೆ ತಮಗೆ ಬಂದ ಹೆಸರನ್ನು ಪ್ರಕಟಿಸಿ ಅವರಿಗೆ ಉಡುಗೊರೆ ನೀಡಬೇಕು ಎಂದು ಹೇಳಲಾಗಿತ್ತು.

      ನನ್ನ ಸರದಿಯಲ್ಲಿ ನಾನು ಚೀಟಿಯನ್ನು ತೆಗೆದುಕೊಂಡು ನನ್ನ ಆಸನಕ್ಕೆ ಬಂದು ಸ್ವಲ್ಪ ಭಾಗವನ್ನು ಮಾತ್ರ ತೆರೆದು ನೋಡಿದೆ. ನನಗೆ ತುಂಬಾ ಆಶ್ಚರ್ಯವಾಯಿತು. ಆದರೂ ನನ್ನ ಮುಖದಲ್ಲಿ ಯಾವ ಭಾವವನ್ನೂ ವ್ಯಕ್ತಪಡಿಸದೆ ಸಾಮಾನ್ಯವಾಗಿ ನಟಿಸಿದೆ. ನಾನು ತರಗತಿಯಲ್ಲಿ ಪ್ರಥಮ ವರ್ಷದಿಂದಲೂ ಯಾರೊಂದಿಗೂ ಹೆಚ್ಚು ಮಾತಾಡುವವನಲ್ಲ. ಕೆಲವು ಸೀಮಿತ ಸಹಪಾಠಿಗಳೊಂದಿಗೆ ಮಾತ್ರ ನನ್ನ ಮಾತುಕತೆ ನಡೆಯುತ್ತಿತ್ತು. ಪ್ರಥಮ ವರ್ಷದ ಸಹಪಾಠಿಗಳ ಪರಿಚಯವೂ ಅಪರೂಪವೇ. ನಮ್ಮ ತರಗತಿಯಲ್ಲಿ ನನ್ನನ್ನು ಸೇರಿಸಿ ಒಟ್ಟು ೨೦ ವಿದ್ಯಾರ್ಥಿಗಳಿದ್ದರೂ, ನಾನು ಅವರೆಲ್ಲರೊಂದಿಗೂ ಕಡಿಮೆ ಪ್ರಮಾಣದಲ್ಲೇ ಮಾತಾಡುತ್ತಿದ್ದೆ. ಆಪ್ತರು ಬಹಳ ಕಡಿಮೆ. ಒಟ್ಟು ೩೯ ಚೀಟಿಗಳಲ್ಲಿ ನನಗೆ ಬಂದ ಚೀಟಿಯ ವ್ಯಕ್ತಿ ನನ್ನ ಬಹು ಆಪ್ತರಾಗಿರುವುದು ನನಗೆ ಆಶ್ಚರ್ಯವಾಯಿತು.

      ಅವರು ಪ್ರಥಮ ವರ್ಷದಿಂದಲೂ ನನ್ನೊಂದಿಗೆ ಮುಕ್ತವಾಗಿ ಮಾತಾಡುತ್ತಿದ್ದರು. ನಮ್ಮ ಪರಿಚಯ ಮೊದಲು ಯಕ್ಷಗಾನದಿಂದ ಆಯಿತು. ಅಂದಿನಿಂದ ಇಬ್ಬರೂ ಆಪ್ತ ಸ್ನೇಹಿತರಾದೆವು. ಪ್ರಥಮ ವರ್ಷದ ಕೊನೆಯ ಹಂತದಲ್ಲಿ ಬಿತ್ತಿ ಗೋಡೆ ಬರಹಕ್ಕೆ ಸಂಪಾದಕ ಮತ್ತು ಉಪಸಂಪಾದಕರ ಆಯ್ಕೆಯ ವೇಳೆ ಚೀಟಿ ಎತ್ತಲಾಯಿತು. ಸಂಪಾದಕರಾಗಿ ಅವರು. ಉಪಸಂಪಾದಕರಾಗಿ ನನ್ನ ಹೆಸರು ಚೀಟಿಯಲ್ಲಿ ಬಂದಿತ್ತು. ಅಂದು ಬೆನ್ನು ಹತ್ತಿದ ಬೇತಾಳ, ಇಂದು ಸಹ ನನ್ನ ಬೆನ್ನು ಬಿಡದಂತೆ, ನಾನು ತೆಗೆದ ಚೀಟಿಯಲ್ಲಿ ಅವಳ ಹೆಸರೇ ಬಂದಿತ್ತು. ಈ ಬೆನ್ನು ಹತ್ತಿದ ಬೇತಾಳ ಬರಿಗೈಯಲ್ಲಿ ಹೋಗುವುದಿಲ್ಲ ಎಂಬುದು ನನಗೆ ತಿಳಿಯಿತು. ಆದ್ದರಿಂದ ಆ ಕೈಗೆ ಏನಾದರೂ ಕೊಡಬೇಕು ಎಂದು ನಿರ್ಧರಿಸಿದೆ.

      ಆ ಸಮಯದಲ್ಲಿ ಮಂಗಳೂರಿನಲ್ಲಿ ನಮ್ಮ ವಿಭಾಗದ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆವು. ಕಾರ್ಯಕ್ರಮ ಮುಗಿದ ನಂತರ ಪಥ್ವಿ ಉಡುಗೊರೆ ತರುವುದಕ್ಕೆ ಹೋಗೋಣ ಎಂದು ನನ್ನನ್ನು ಕರೆದುಕೊಂಡು ಹೋದಳು. ನಾವು ಇಬ್ಬರೂ ಅಂಗಡಿಗಳಲ್ಲಿ ತಿರುಗಿ ಉಡುಗೊರೆ ಹುಡುಕುತ್ತಿದ್ದೆವು. ಅವಳು ಅಲ್ಲಿ ಇಲ್ಲಿ ನೋಡುತ್ತಾ ಒಂದು ಉಡುಗೊರೆಯನ್ನು ಆಯ್ಕೆ ಮಾಡಿದರು. ನನಗೆ ಏನು ತೆಗೆದುಕೊಳ್ಳಬೇಕು ಎಂಬುದು ಅಷ್ಟೊಂದು ತಿಳಿಯುತ್ತಿರಲಿಲ್ಲ. ಅವಳಿಗೆ ಏನು ಬೇಕು ಎಂದು ನೇರವಾಗಿ ಕೇಳಲು ಸಾಧ್ಯವಿರಲಿಲ್ಲ, ಏಕೆಂದರೆ ಇದು ಗುಪ್ತ ಉಡುಗೊರೆ ಆಟವಾಗಿತ್ತು. ಹುಡುಗಿಯರಿಗೆ ಏನು ಕೊಡಬಹುದು ಎಂದು ನಾನು ಪ್ರಥ್ವಿಯನ್ನೇ ಕೇಳಿದೆ. "ನಿಮಗೆ ಏನು ಕೊಡಬೇಕು ಅನಿಸುತ್ತದೋ ಅದನ್ನೇ ತೆಗೆದುಕೊಳ್ಳಿ" ಎಂದಳು. ಆದರೂ ನಾನು ಅವಳ ಬೆನ್ನು ಬಿಡದೆ "ನಿನಗೆ ಏನು ಇಷ್ಟ ಆಗುತ್ತದೆಯೋ ಅದನ್ನೇ ಕೊಡಿಸು. ನಿನಗೆ ಇಷ್ಟವಾಗಿದೆ ಅವಳಿಗೆ ಕೊಡುವೆನು" ಎಂದು ಕಾಡಿದೆ.

      ಅವಳು ಬಳೆಯನ್ನು ಸೂಚಿಸಿದಳು. ನಾನು ಒಪ್ಪಿಕೊಂಡು ಮೂರು ನಾಲ್ಕು ಅಂಗಡಿಗಳಲ್ಲಿ ಹುಡುಕಿದೆವು. ಅಂಗಡಿಯವನು ಬಳೆಯ ಅಳತೆ ಕೇಳಿದಾಗ ನಾನು ಪ್ರಥ್ವಿಯ ಕೈ ತೋರಿಸಿ "ಇದೇ ಅಳತೆಯಲ್ಲಿ ಕೊಡಿ" ಎಂದೆ. ಅವನು ಕೆಲವು ಆಯ್ಕೆಗಳನ್ನು ಇಟ್ಟನು. ಪ್ರಥ್ವಿಯು ತನಗೆ ಇಷ್ಟವಾದ ಬಳೆಯನ್ನು ಆಯ್ಕೆ ಮಾಡಿದಳು. ಅದನ್ನು ತೆಗೆದುಕೊಂಡು ಬಂದೆವು. ಆಟದ ನಿಯಮದಂತೆ, ಉಡುಗೊರೆ ಯಾರಿಗೆ ಕೊಡಬೇಕೋ ಅವರಿಗೆ ತಿಳಿಯದಂತೆ. ಹಾಗೆಯೇ ನನಗೆ ಬಂದ ಹೆಸರೂ ಹೊರಗೆ ಬಾರದಂತೆ ನಾನು ಉಡುಗೊರೆಯನ್ನು ತಂದುಕೊಂಡೆ.

      ಈ ಆಟ ಯಾರ್ಯಾರಿಗೆ ಎಷ್ಟೆಷ್ಟು ಖುಷಿ ನೀಡಿದೆಯೋ ನನಗೆ ತಿಳಿಯದು. ಆದರೆ ನನಗೆ ಮಾತ್ರ, ನಾನು ಆಡಿದ ಆಟದೊಳಗಿನ ಆಟ ಅಪಾರ ಖುಷಿ ನೀಡಿತು. ಕೊಟ್ಟಿರುವ ಗುಪ್ತ ಆಟದೊಳಗೆ ನಾನು ಇನ್ನೊಂದು ಗುಪ್ತ ಆಟವಾಡಿದ್ದೆ. ಅಂದರೆ ನಾನು ಯಾರಿಗೆ ಉಡುಗೊರೆ ಕೊಡಬೇಕಿತ್ತೋ ಅವರಿಂದಲೇ ಆ ಉಡುಗೊರೆಯ ಆಯ್ಕೆ ಮಾಡಿಸಿಕೊಂಡಿದ್ದೆ. ಕೊನೆಯವರೆಗೂ ಪಾಪ ಅವಳಿಗೆ ಗೊತ್ತಾಗಲೇ ಇಲ್ಲ. ಈ ಬಳೆ ಮುಂದೆ ಅವಳ ಕೈ ಸೇರುವುದು ಎಂದು. ಮೊದಲೇ ಇದು ಗುಪ್ತವಾದ (ಸೀಕ್ರೆಟ್) ಆಟ, ಆದರೊಳಗೆ ಅವಳಿಗೆ ಕೊಡಬೇಕಾದ ಉಡುಗೊರೆಯನ್ನು ಅವಳಿಗೇ ತಿಳಿಯದಂತೆ ಅವಳಿಂದಲೇ ಆಯ್ಕೆ ಮಾಡಿಸಿ. ಕೊನೆಯಲ್ಲಿ ಅವಳಿಗೇ ನೀಡುವುದು – ಏನೋ ಒಂದು ತರದ ಖುಷಿ ಅಲ್ವಾ!

      ಏನೇ ಇರಲಿ, ಈ ಆಟದಲ್ಲಿ ನಾನು ಆಟಗಾರನಾಗಿದ್ದು, ಅವಳನ್ನು ವಿಭಿನ್ನ ರೀತಿಯಲ್ಲಿ ಆಡಿಸಿದ್ದು, ಇಷ್ಟು ಅಲ್ಲದೇ ನಮ್ಮ ವಿಭಾಗದ ಸ್ನೇಹಿತರಿಗೆ ಅವರ ಹೆಸರನ್ನು ಸೂಚಿಸಲು ಬಿತ್ತಿ ಗೋಡೆಯ ಮೂಲಕ ಒಂದು ಚಿಕ್ಕ ಸ್ಪರ್ಧೆ ಆಯೋಜಿಸಿದ್ದೆ. ನನ್ನೆಲ್ಲಾ ಸ್ನೇಹಿತರು ಬಹಳ ಕಷ್ಟ ಪಟ್ಟು ಹುಡುಕಿದ್ದಾರೆ. ಒಟ್ಟು ೧೮ ಜನರು ೧೨ ಹೆಸರನ್ನು ಊಹಿಸಿದ್ದಾರೆ. ಅದರಲ್ಲಿ ಒಬ್ಬರು ಮಾತ್ರ ಸರಿಯಾದ ಉತ್ತರ ನೀಡಿದ್ದಾರೆ. ಸರಿಯಾದ ಹೆಸರನ್ನು ಸೂಚಿಸಿದವರಿಗೆ ಉಡುಗೊರೆ ನೀಡುವ ಅವಕಾಶ ನೀಡಿದ್ದೆ. ಅವರಿಗೂ ಸಹಾ ಉಡುಗೊರೆ ತಂದು ನೀಡುವೆನು ಇದು ನನಗೆ ಎಂದೂ ಮರೆಯದ ಸ್ಮೃತಿಯಾಗಿರುತ್ತದೆ.

ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ




ಸಂಚಿಕೆ - ೦೯

ದಲಿತರೇಕೆ ಇನ್ನೂ ದಾರಿದ್ರರು?

      ಹೌದು, ನಾಡಿಗೆ ಸ್ವಾತಂತ್ರ ಬಂದು ಸುಮಾರು ೭೯ ವರ್ಷಗಳು ಕಳೆದರೂ ಕಡು ಬಡತನ, ನಿರುದ್ಯೋಗ, ಅಸಮಾನತೆ, ನೋವು ಮತ್ತು ಹಸಿವಿನಿಂದ ದಾರಿದ್ರದಲ್ಲಿ ಬದುಕುತ್ತಿರುವವರು ಬಹು ಸಂಖ್ಯಾತರಾದ ದಲಿತರೆ. ರಾಷ್ಟ್ರದಲ್ಲಿ ಯಾವುದೇ ಪಕ್ಷಗಳು ಆಡಳಿತಕ್ಕೆ ಬಂದರೂ ಯಾರು? ಏನು? ಎಷ್ಟು? ದಲಿತರಿಗೆ ನ್ಯಾಯ ಒದಗಿಸಿದ್ದಾರೆ?.

      ಕಳೆದ ೭೯ ವರ್ಷಗಳಲ್ಲಿ ಸರ್ಕಾರಗಳು ಮನಸ್ಸು ಮಾಡಿದ್ದರೆ ದಲಿತರು ಇಷ್ಟೊತ್ತಿಗಾಗಲೆ ಸಮಾಜದ ಮುಖ್ಯ ನೆಲೆಗೆ ಬರುತ್ತಿದ್ದರು. ಆದರೆ ಸರ್ಕಾರಗಳು, ರಾಜಕೀಯ ಪಕ್ಷಗಳು ಏನು ಮಾಡುತ್ತಿವೆ?. ಪಂಪನಿಂದ ಹಿಡಿದು ಶರಣರು, ದಾಸರು, ಯತಿಗಳು, ಹೆಸರಾಂತ ಲೇಖಕರು, ಕವಿಗಳು, ದಾರ್ಶನಿಕರು ಎಲ್ಲಾರು ಹೇಳಿರುವುದು ಜಾತಿ ಮತಗಳು ತೊಲಗಿ ಮಾನವ ಧರ್ಮವೆ ಮೊದಲಾಗಬೇಕು ಎಂದು. ಆದರೆ ಅದೇ ಜ್ಞಾನಿಗಳ ಕುಲದವರೆಂದು ಹೇಳಿಕೊಳ್ಳುವವರೆ ತಾರತಮ್ಯಕ್ಕೆ ಮುಖ್ಯ ಬಾಗಿಲಾಗಿದ್ದಾರೆ. ಇನ್ನು ರಾಜಕೀಯ ಪಕ್ಷಗಳಂತೂ ಜಾತಿ ಮತಗಳ ಹೆಸರಿನಲ್ಲಿ ಉತ್ತಮ ಬೆಳೆಯನ್ನೆ ಬೆಳೆಯುತ್ತಿವೆ. ಸರ್ಕಾರದ ಯೋಜನೆಗಳಿಂದ, ಮೀಸಲಾತಿಯಿಂದ ಎಷ್ಟು ದಲಿತರ ಮನೆಯಲ್ಲಿ ಒಲೆ ಉರಿಯುತಿದೆಯೊ ನಾ ಕಾಣೆ. ಆದರೆ ರಾಜಕೀಯ ಪಕ್ಷಗಳಂತೂ ಅವುಗಳಿಂದ ಕುಕ್ಕರಿಗಿಂತಲೂ ವೇಗವಾಗಿ ತಮ್ಮ ಬೇಳೆ ಬೆಮ್ಮಿಸಿಕೊಳ್ಳುತ್ತಿರುವುದರಲ್ಲಿ ಎರಡು ಮಾತಿಲ್ಲ.

      ಶಿಕ್ಷಣವನ್ನು ಪಡೆದು ಎಲ್ಲವನ್ನೂ ಓದಿ ತಿಳಿದವರೆ ಜಾತಿ ತಾರತಮ್ಯ ವರ್ಗ ತಾರತಮ್ಯವನ್ನು ಮಾಡುವರು. ರಾಷ್ಟ್ರದಲ್ಲಿ ಮನುಷ್ಯನು ಸಮಾಜವನ್ನೆ ತೊರೆದು ಬದುಕಬಹುದೇನೊ ಆದರೆ ಜಾತಿಯನ್ನು ತೊರೆದು ಬದುಕಲು ಸಾಧ್ಯವೆ ಇಲ್ಲದಂತೆ ಹುಟ್ಟಿನಿಂದ ಮಸಣಕ್ಕೆ ಹೋಗುವವರೆಗೂ ಪ್ರತಿಯೊಂದರಲ್ಲೂ ಜಾತಿ ಬೇಕು ಎನ್ನುವ ಮಟ್ಟಿಗೆ ಸಮಾಜ ಮಾಡಿದೆ. ಒಂದು ವೇಳೆ ಸಮಾಜ ಅದನ್ನು ಮರೆಯದರೂ ಸರ್ಕಾರಗಳು, ರಾಜಕೀಯ ಪಕ್ಷಗಳು ತಕ್ಷಣವೆ ನೆನಪಿಸುವ ಕಾರ್ಯ ಮಾಡುತ್ತವೆ. ಜಾತಿಯತೆಯನ್ನು ಹೊಗಲಾಡಿಸುವ ಗೋಜಿಗೆ ಸರ್ಕಾರಗಳು ಹೋಗಿಲ್ಲ ಮತ್ತು ಅದು ಅವರಿಗೆ ಬೇಕಾಗಿಯೂ ಇಲ್ಲ. ವಿಪರ್ಯಾಸವೆಂದರೆ ಅವರೆ ಅದನ್ನು ಇನ್ನು ನೀರು ಗೊಬ್ಬರಹಾಕಿ ಗಟ್ಟಿ ಗೊಳಿಸುತ್ತಿದ್ದಾರೆ.

      ಸ್ವಾತಂತ್ರ ನಂತರವೂ ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ರಾಜಕೀಯವಾಗಿ ದಲಿತರೆ ಇನ್ನೂ ದಾರಿದ್ರರಾಗಿದ್ದಾರೆ. ತಾವು ಜಾತ್ಯಾತೀತರೆಂದು ಹೇಳಿಕೊಳ್ಳುವವರೇ ಪ್ರತಿಯೊಂದರಲ್ಲೂ ಜಾತಿ ಕೇಳುವರು, ಜಾತಿ ಜಾತಿಗಳ ನಡುವೆ ಒಳಕಿಚ್ಚು ಹಚ್ಚುವರು. ತಾನೂ ದಲಿತನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ರಾಜಕೀಯಕ್ಕೆ ಹೊದರೆ ಅವನಾದರೂ ಇತರೆ ದಲಿತರಿಗೆ ಬೆಳೆಸುವನೆ? ಸನ್ಯಾಸಿ ಸಹವಾಸದಿಂದ ಸಂಸಾರಿ ಕೆಟ್ಟ ಎನ್ನುವ ಜನಪದರ ನುಡಿಯಂತೆ, ಅವನೂ ಇತರರಂತೆ ಪರಿವಾರ ರಾಜಕಾರಣವನ್ನೆ ಬೆಳೆಸುವನು. ಸರ್ಕಾರದ ತಪ್ಪುಗಳನ್ನು ಜನ ಸಾಮಾನ್ಯರು ಎತ್ತಿ ಹೇಳಿ, ಕೇಳಿದರೆ ಅದು ಅಪರಾಧವಂತೆ ಆದರೆ ರಾಜಕೀಯ ಪಕ್ಷಗಳನ್ನು ಕೇಳಿ ಟೀಕಿಸಬಹುದಂತೆ, ರಾಜಕೀಯ ಪಕ್ಷಗಳಲ್ಲಿ ಇಲ್ಲದವರು ಬಂದು ಸರ್ಕಾರಗಳನ್ನು ನಡೆಸುವರೆ? ಈ ರಾಷ್ಟ್ರದಲ್ಲಿ ದಲಿತರು ಮುಖ್ಯ ವಾಹಿನಿಗೆ ಬರಲು ಇನ್ನು ಎಷ್ಟು ಕಾಲಗಳು ಕಳೆಯಬೇಕೊ ತಿಳಿಯದು. ಆ ಕಾಲವಾದರೂ ಬರಬಲ್ಲದೆ ಎನ್ನುವುದೆ ಯಕ್ಷ ಪ್ರಶ್ನೆಯಾಗಿದೆ?.

ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೯

 ಚಿತ್ರಗಳು

ಚಿತ್ರ ರಚನೆ : - ಟಿ.ಎ. ಸುಮನ್ ಜಬೀನಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೯

 ಚಿತ್ರಗಳು 

ಚಿತ್ರ ರಚನೆ : - ಚೈತ್ರ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೯

 ಚಿತ್ರಗಳು 




ಚಿತ್ರ ರಚನೆ : - ಮರಿಯಮ್ಮತ್ ಮಿಸ್ಬಾ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೯

ಚಿತ್ರಗಳು 




ಸಂಚಿಕೆ - ೦೯




ಚಿತ್ರಗಳು 

ಚಿತ್ರ ರಚನೆ : - ಪ್ರೇಮಾವತಿ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸೋಮವಾರ, ಡಿಸೆಂಬರ್ 22, 2025

ಸಂಚಿಕೆ - ೦೮

ಅಣ್ಣ ತಂಗಿಯ ಅನುಬಂಧ

ನನ್ನ ಮನೆಯ ಬೆಳಕು ನೀನು 

ನನ್ನ ಬದುಕಿನ ದೀಪವು ನೀನು 

ನನ್ನ ಒಳಿತು ಬಯಸುವವನು ನೀನೊಬ್ಬನೆ 

ನನ್ನ ಸಂತೋಷವನ್ನು ಸ್ಮರಿಸುವನು ನೀನು 

ನಿನ್ನ ಸಂತೋಷದಲ್ಲಿ ನಾನಗುವೆ 

ನಿನ್ನ ನಾ ನಗಿಸುವೆ 

ಕಷ್ಟವೆಂದರೆ ಕಣ್ಣ ರೆಪ್ಪೆಯಾಗಿ ನನ್ನ ರಕ್ಷಿಸುವೆ 

ನಗು ನಗುತ್ತಾ ಇರು ಅಣ್ಣಯ್ಯ 

ನೀನು ನಗುತ್ತಿದ್ದರೇ ನಾ ಎಂದೆದಿಗೂ 

ಹಸನ್ಮುಖಿಯಾಗಿರುವೆ.....


ಭವ್ಯ ಎಸ್, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೮

ಅವಳು

ಬಾಲ್ಯದ ಮೊದಲ ಹೆಜ್ಜೆಗೆ ದಾರಿ ತೋರಿದವಳು 

ಅಳುತಿರುವ ಕಣ್ಣೀರಿಗೆ ಮಧುರ ನಗು ತರಿಸಿದವಳು 

ಹಸಿದ ಹೊಟ್ಟೆಗೆ ಅನ್ನರೂಪವಾಗಿದ್ದವಳು

ದಣಿದ ಮನದ ಕನಸಿಗೆ ಧೈರ್ಯದ ರೂಪ ಅವಳು 

ಅವಳ ಮಾತು ದೇವರ ಮಾತಿನಂತೆ ಸ್ಪಷ್ಟ 

ಅವಳ ಸ್ಪರ್ಶವೇ ಮಮತೆಯ ಹೂವು 

ಲೋಕವೆಲ್ಲಾ ಅಗಲಿದರೂ...

ಆಕೆ ಮಾತ್ರ ನನ್ನನ್ನು ಬಿಟ್ಟು ದೂರ ಸರಿಯಲಾರಳು 

ಎಂಬ ನಂಬಿಕೆ... ಕಾರಣ 

ಅವಳು ನನ್ನವಳು.


ಆಶ್ರಿತ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೮

ಬುದ್ಧಿವಂತರು

ಅನ್ಯರ ಮಾತ ಕೇಳಿ ಮೋಸ ಹೋಗದಿರಯ್ಯ 

ಎಂಬವರೇ, ಅನ್ಯರ ಮಾತ ಕೇಳಿ ಮೋಸ 

ಹೋಗುತ್ತಿರುವರಯ್ಯ


ನಿನ್ನ ದಾರಿಯಲಿ ನೀ ನಡೆ 

ಎಂಬವರೇ, ಬೇರೆಯವರ ದಾರಿಯಲಿ 

ನಡೆಯುತಿರುವರಯ್ಯ


ಬುದ್ದಿ ಹೇಳುವರು ಶ್ರೇಷ್ಠರಂತೆ 

ಮಾತುಗಳೆಲ್ಲ ಅನಿಷ್ಟರಂತೆ 

ಬಣ್ಣ ಬಣ್ಣದ ಮಾತೇ ಭಂಡಾರ 

ಅವರೇ ಈ ದೇಶದ ಚಂಡಾಳ


ದುಶ್ಯಂತ್, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೮

ಹುಡುಗರು ಹೀಗೆ

ಹೌದು ನಾವು ಹುಡುಗರೇ ಹೀಗೆ 

ಓದಲೊಲ್ಲೆವು ಬರೆಯಲೊಲ್ಲೆವು 

ಸದಾ ಅವಳಿಂದೆ ಓಡುತ್ತಲೇ ಇರುವೆವು 

ಹೌದು ನಮ್ಮ ಹುಡಗರ ಕಥೆಯೇ ಹೀಗೇ..


ಕಣ್ಣು ತುಟಿ ನಡಿಗೆಯನ್ನೇ ನೋಡುವೆವು 

ಒಂದಿನ ಹೋಗಿ ಪ್ರೀತಿಯನ್ನೂ ಹೇಳುವೆವು 

ಒಪ್ಪಿದರೇ ಊರೆಲ್ಲಾ ಅವಳನ್ನು ಮೆರೆಸುವೆವು


ಸಿನಿಮಾ ಶಾಪಿಂಗ್ ಉದ್ಯಾನವನ ತಿರುಗುವೆವು, 

ಇನ್ನೊಬ್ಬನ ಕೈಯ್ಯವಳು ಹಿಡಿದಾಗ ಮನದಲ್ಲೇ ಮರಗುವೆವು.. 

ಗಡ್ಡ ತಲೆಕೂದಲು ಬಿಟ್ಟು ಕುಡಿತದಲ್ಲಿ ಕೊರಗುವೆವು..


ಅನಾಮಿಕಳಾಗಿ ಮಗು ಹೊತ್ತು ಬಂದಾಗ ಬೆರಗಾಗುವೆವು.. 

ಅಷ್ಟು ಬೇಗ ಮರೆತಳೇ ಗೆಳತಿ ಎಂದು ತವಕಿಸುವೆವು, 

ಸಂತೆಯಲ್ಲಿ ಅವಳು ಸಿಕ್ಕ ಅಂತೆ ಕಂತೆ ಕಥೆ ಕೇಳುವೆವು..


ಮೋಸದ ನಲ್ಲಿ ಮನದಲ್ಲಿ ಬೇಡ ಎನ್ನುವೆವು. 

ಮಾಯಾದ ನಗೆ ನೋಟವನ್ನು ಮರೆಯುವೆವು.. 

ಕೈ ಕೊಟ್ಟವಳಲ್ಲಿಯೇ ಕೊರಗದೇ ಸಂಸಾರಿಗಳಾಗುವೆವು 

ಹೌದು ನಾವು ಹುಡುಗರೇ ಹೀಗಿರಬೇಕು


ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೮

ಬಾಲ್ಯ

ಬಾಲ್ಯವೆಂಬ ಜೀವನ 

ಮರೆಯಲಾಗದ ಸವಿ ಸವಿ 

ನೆನಪಿನಂಗಳವ ಆ 

ಅಮೂಲ್ಯ ಕ್ಷಣಗಳಾ.


ಅಂಗನವಾಡಿ ಎಂಬ ಮೊತ್ತ 

ಮೊದಲ ಜೀವನದ 

ಬಾಲ್ಯತನದ ಬಾಲವಾಡಿಯ 

ಅಕ್ಷರಭ್ಯಾಸ ಪ್ರಾರಂಭ.


ಸಂಜೆಯ ವೇಳೆಗೆ ಆಟದ 

ಓಟದ ನೋಟದ ಆಟೋಟದ 

ಮೋಜು ಮಸ್ತಿಯ ನಡುವೆ 

ಪಾಠ-ಊಟದ ನೆನಪು.


ವಾರಕ್ಕೊಮ್ಮೆ ಆದಿತ್ಯವಾರದಂತೆ 

ಕಾಲಕ್ಕೆ ಒಮ್ಮೆ ರಜಾ ದಿನ 

ಬೇಸಿಗೆ ಕಾಲದ ಐವತ್ತು 

ದಿನಗಳ ಮಜಾ ದಿನಗಳ ನೆನಪು...


ಸುಡುಬಿಸಿಲಿನಲ್ಲಿ ತನ್ನ ಗೆಳೆಯರೊಡನೆ 

ನಾನಾ ರೀತಿಯ 

ಗ್ರಾಮೀಣ ಕ್ರೀಡೆಗಳ ಆಟವಾಡಿದ 

ಆ ಮರೆಯಲಾರದ ದಿನ.


ಆ ಮರೆಯಲಾಗದ ದಿನದಲ್ಲಿ 

ಕೆರೆ-ದಡದಲ್ಲಿ, ನದಿ-ತೀರದಲ್ಲಿ 

ಗೆಳೆಯ-ಗೆಳತಿಯರೊಡನೆ ಸಂತಸದಿ 

ಕಳೆದ ಆ ಕ್ಷಣವೇ ಅವಿಸ್ಮರಣೀಯ...


ಅನೂಪ ಕುಮಾರ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೮

ಒಳ್ಳೆಯ ಅಭ್ಯಾಸ ರೂಢಿಸಿಕೊಳ್ಳೋಣ

      ಜೀವನದಲ್ಲಿ ಒಳ್ಳೆಯ ಅಭ್ಯಾಸಗಳನ್ನು ಆಳವಡಿಸಿಕೊಳ್ಳುವುದು ಉತ್ತಮ. ಆದರೆ ಅವುಗಳನ್ನು ಜೀವನದಲ್ಲಿ ಹಾಗೆಯೇ ರೂಡಿಸಿಕೊಂಡು ನಡೆಯುವುದು ಸ್ವಲ್ಪ ಕಷ್ಟ ಯಾಕೆಂದರೆ ಒಂದು ದಿನ ನಾವು ಆ ಅಭ್ಯಾಸವನ್ನು ಬಿಟ್ಟರೆ ಮತ್ತೆ ರೂಢಿಸಿಕೊಳ್ಳುವುದು ಕಷ್ಟ, ಹಾಗಾಗಿ ನಾವು ಅಳವಡಿಸಿಕೊಳ್ಳುವ ಅಭ್ಯಾಸವನ್ನು ಯಾವಾಗಲೂ ನಮ್ಮ ಜೀವನದ ಒಂದು ಭಾಗವಾಗಿ ಮಾಡಿಕೊಳ್ಳಬೇಕು. ಮುಂಜಾನೆ ಎದ್ದು ವ್ಯಾಯಾಮಗಳನ್ನು ಮಾಡಿ, ಸ್ವಲ್ಪ ನಡಿಗೆ, ಎಲ್ಲಾ ದೇಹದ ಅಂಗಾಂಗಗಳಿಗೂ ಸಂಬಂಧಿಸಿದಂತೆ ಯೋಗಾಭ್ಯಾಸ ಬರದಿದ್ದರು. ಸಣ್ಣಪುಟ್ಟ ವ್ಯಾಯಮಗಳನ್ನು ಮಾಡಬೇಕು. ಹೀಗೆ ಮಾಡುವುದರಿಂದ ನಮ್ಮಲ್ಲಿ ಅಲಸ್ಯವು ಕಡಿಮೆಯಾಗಿ ಚೈತನ್ಯ ಮೂಡುತ್ತದೆ. ಹಾಗೆಯೇ ಯಾವುದೇ ಕೆಲಸವನ್ನು ಮಾಡುವುದರಿಂದ ಉತ್ಸಾಹದಿಂದ ಮಾಡುವಂತಾಗುತ್ತದೆ. ಹಾಗಾಗಿ ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಆದರೂ ಕೆಟ್ಟ ಅಭ್ಯಾಸಗಳನ್ನು ರೂಡಿಸಿಕೊಂಡಿರುತ್ತೇವೆ. ಅದು ನಮ್ಮನ್ನು ಹೀಗೆ ಇರು ಎಂದು ಪ್ರೇರೇಪಿಸುತ್ತದೆ. ಆದರೆ ಒಳ್ಳೆಯ ಅಭ್ಯಾಸಗಳು ಸದಾ ನಮ್ಮನ್ನು ಚೈತನ್ಯ ಶೀಲರನ್ನಾಗಿಸುತ್ತದೆ. ಜೊತೆಗೆ ಮತ್ತಷ್ಟು ಒಳ್ಳೆಯ ಕಾರ್ಯಕ್ಕೆ ಪ್ರೇರೇಪಿಸುವುದು. ಹಾಗಾಗಿ ಎಲ್ಲರೂ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಆರೋಗ್ಯವಾಗಿ ಚೈತನ್ಯದಿಂದ ಜೀವನವನ್ನು ನಡೆಸೋಣ.

ಸೌಮ್ಯ ಟಿ.ಎಸ್., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೮

ತಾಳ್ಮೆ

      ಒಂದೂರಿನಲ್ಲಿ ಸಾಕವ್ವ ಎಂಬುವವಳು ವಾಸಿಸುತ್ತಿದ್ದಳು. ಅವಳಿಗೆ ರಾಮು ಎಂಬ ಒಬ್ಬ ಮಗನಿದ್ದ. ಕಡು ಬಡವರಾಗಿದ್ದ ಇವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತ ಪರಿಸ್ಥಿತಿ ಇವರದಾಗಿತ್ತು. ಸಾಕವ್ವ ಬೇರೆಯವರ ಮನೆ ಕೆಲಸಕ್ಕೆ ಹೋಗುತ್ತಿದ್ದಳು. ಆಕೆಯ ಮಗ ರಾಮು ಊರಿನಲ್ಲಿ ಕೆಲಸ ಸಿಗದ ಕಾರಣ ಆತ ಆ ಊರನ್ನು ತೊರೆದು ಪಟ್ಟಣವೊಂದರಲ್ಲಿ ಹೋಟೆಲ್ ಕೆಲಸಕ್ಕೆ ಸೇರಿಕೊಂಡಿದ್ದ. ಆಗೊಮ್ಮೆ ಹೀಗೊಮ್ಮೆ ತನ್ನ ತಾಯಿಯ ನೆನಪಾದಾಗ ಊರಿಗೆ ಬಂದು ತಾಯಿಯನ್ನು ನೋಡಿಕೊಂಡು ಮತ್ತೆ ಪಟ್ಟಣಕ್ಕೆ ಹಿಂದಿರುಗುತ್ತಿದ್ದ. ಹೀಗೆ ಹಲವು ದಿನಗಳು ಉರುಳಿದವು ಎಂದಿನಂತೆ ರಾಮು ಹೋಟೆಲ್ ನಲ್ಲಿ ಕೆಲಸ ಮಾಡಿ ಸಂಜೆ ವಿಹಾರಕ್ಕೆಂದು ಹೊರಗಡೆ ಹೋಗುತ್ತಿರುವಾಗ ಆತನ ಕಣ್ಣಿಗೆ ಚಿನ್ನ ತುಂಬಿದ ಬ್ಯಾಗ್ ಒಂದು ಕಾಣಿಸುತ್ತದೆ. ಅದನ್ನು ನೋಡಿದ ರಾಮುವಿಗೆ ಚಿನ್ನದ ಮೇಲೆ ವ್ಯಾಮೋಹ ಉಂಟಾಗಿ ಆ ಬ್ಯಾಗನ್ನು ಯಾರಿಗೂ ಕಾಣದಂತೆ ಹೋಟೆಲ್‌ನಲ್ಲಿ ಬಚ್ಚಿಡುತ್ತಾನೆ. ಮಾರನೇ ದಿನ ಆತ ತಾನು ಹೇಗೋ ಕೋಟ್ಯಾಧಿಪತಿಯಾಗುವವನು ಈ ಕಡಿಮೆ ಸಂಬಳಕ್ಕಾಗಿ ಈ ಹೋಟೆಲ್‌ನಲ್ಲಿ ಕೆಲಸ ಮಾಡುವುದೇ? ಎಂದು ಅಹಂಕಾರದಿಂದ ಆ ಕೆಲಸವನ್ನು ತ್ಯಜಿಸಿ ಅಲ್ಲಿಂದ ಊರಿಗೆ ಬರುತ್ತಾನೆ. ತನಗೆ ಚಿನ್ನದ ಬ್ಯಾಗ್ ದೊರೆತ ಬಗ್ಗೆ ರಾಮು ತನ್ನ ತಾಯಿ ಬಳಿ ಕೂಡ ಹೇಳದೆ ಆ ಊರಿನ ನದಿ ಬಳಿ ಅದನ್ನು ಬಚ್ಚಿಡುತ್ತಾನೆ. ಹಾಗೆ ಬಚ್ಚಿಟ್ಟು ಆತ ಮನೆಗೆ ಹಿಂದಿರುಗಿ ಸಂತೋಷದಿಂದ ಊಟ ಮಾಡಿ ಮಲಗುತ್ತಾನೆ. ನಾಳೆ ಹೇಗಾದರೂ ಮಾಡಿ ಆ ಚಿನ್ನವನ್ನು ಮಾರಿ ಹಣವನ್ನು ಪಡೆದರೆ ಆಯ್ತು ಎಂದು ಭಾವಿಸಿ ನಿದ್ದೆಗೆ ಜಾರುತ್ತಾನೆ. ಬೆಳಗ್ಗೆ ಬೇಗ ಎದ್ದು ಆತ ತಾಯಿಗೂ ಈ ವಿಷಯ ತಿಳಿಸದೆ ಆ ಚಿನ್ನವನ್ನು ಬಚ್ಚಿಟ್ಟ ನದಿಯ ಬಳಿ ಹೋಗಿ ನೋಡುತ್ತಾನೆ. ಆದರೆ ಅಲ್ಲಿ ಚಿನ್ನದ ಬ್ಯಾಗ್ ಇಲ್ಲದ್ದನ್ನು ನೋಡಿ ತಾನು ಎಂತ ದೊಡ್ಡ ತಪ್ಪು ಮಾಡಿದೆ. ಈ ಚಿನ್ನದ ಮೇಲಿನ ವ್ಯಾಮೋಹದಿಂದ ಪಟ್ಟಣದಲ್ಲಿ ಇದ್ದ ಹೋಟೆಲ್ ಕೆಲಸವನ್ನು ಬಿಟ್ಟು ಬಂದೆ. ಮುಂದೆ ತನ್ನ ಜೀವನ ಹೇಗೆ ನಡೆಸುವುದೆಂದು ತಲೆಯ ಮೇಲೆ ಕೈ ಇಟ್ಟು ಚಿಂತಿಸುತ್ತಾ ಅಲ್ಲೆ ಕುಳಿತುಬಿಡುತ್ತಾನೆ. ಮನುಷ್ಯನಿಗೆ ಜೀವನದಲ್ಲಿ ಅತಿ ಮುಖ್ಯವಾಗಿ ತಾಳ್ಮೆ ಇರಬೇಕು ಎಂಬುದನ್ನು ಇಲ್ಲಿ ಕಾಣಬಹುದಾಗಿದೆ.

ರಮ್ಯಶ್ರೀ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೮

ಮೌನದ ಮಮತೆಯ ರೂಪ ಅಪ್ಪ

      ಅಪ್ಪ ಎಂದರೆ ಪ್ರೀತಿಯ. ತ್ಯಾಗದ ಮತ್ತು ಜವಾಬ್ದಾರಿಯ ಪ್ರತೀಕ. ಅಪ್ಪನು ಮನೆಯ ಶಕ್ತಿ, ಕುಟುಂಬದ ಆಧಾರಸ್ತಂಭ, ಅವನು ಹಗಲುರಾತ್ರಿ ದುಡಿಯುತ್ತಾ ಮಕ್ಕಳ ಭವಿಷ್ಯಕ್ಕಾಗಿ ತನ್ನ ಸೌಖ್ಯವನ್ನು ಬಲಿಕೊಡುತ್ತಾನೆ.

      ಅಪ್ಪನ ಮೌನದಲ್ಲೇ ಅನೇಕ ಮಾತುಗಳು ಅಡಗಿವೆ ಅವನ ಕಣ್ಣಲ್ಲಿ ಕಾಳಜಿ, ಅವನ ನಗೆಯಲ್ಲಿ ಪ್ರೋತ್ಸಾಹ, ಅವನ ಹೃದಯದಲ್ಲಿ ಅಪಾರ ಪ್ರೀತಿ ಇರುತ್ತದೆ.

      ಅಪ್ಪನು ನಮ್ಮ ಬದುಕಿಗೆ ದಾರಿ ತೋರಿಸುವ ದೀಪದಂತೆ ಕಷ್ಟದ ಸಮಯದಲ್ಲಿ ಧೈರ್ಯ ನೀಡುವ ನೆರಳಾದವನು. ಅಪ್ಪನ ಪ್ರೀತಿ ಮಾತಿಲ್ಲದ ಮಮತೆ ಅವನ ತ್ಯಾಗವನ್ನು ಶಬ್ದಗಳಲ್ಲಿ ವರ್ಣಿಸಲಾಗದು. ಅಪ್ಪ ನಮ್ಮ ಜೀವನದ ಅರ್ಥವನ್ನು ಕಲಿಸುವ ಮಹಾನ್ ವ್ಯಕ್ತಿ.

      ಆದ್ದರಿಂದ ಅಪ್ಪನ ಪ್ರೀತಿಯ ಮೌಲ್ಯವನ್ನು ಯಾವಾಗಲೂ ಅರಿತು. ಅವನಿಗೆ ಗೌರವ ನೀಡುವುದು ನಮ್ಮ ಕರ್ತವ್ಯ.

ತ್ರಿವೇಣಿ ವಿ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೮

ಅಮ್ಮ

      ಅಮ್ಮ ಎಂದರೆ ಅವಳು ಬರಿ ತಾಯಿಯಾಗಿ ಅವಳ ಕರ್ತವ್ಯಗಳನ್ನು ಮಾತ್ರ ನೆರವೇರಿಸುವವಳು ಅಲ್ಲ. ಬದಲಾಗಿ ಒಂದು ಒಳ್ಳೆಯ ಸ್ನೇಹಿತೆಯಾಗಿಯು ನನ್ನೊಂದಿಗೆ ಇರುವವಳು ನನ್ನ ಅಮ್ಮ ನನ್ನ ಬೆನ್ನ ಹಿಂದೆ ನಿಂತು ಬೆಂಬಲವನ್ನು ನೀಡುತ್ತಾಳೆ. ನನ್ನ ಚೇಷ್ಟೆಗಳನ್ನು ಮತ್ತು ಕೆಲವೊಂದು ತುಂಟಾಟಗಳನ್ನು ಕೋಪವನ್ನು ಎಲ್ಲವನ್ನೂ ಸಹಿಸಿಕೊಂಡು ನನ್ನನ್ನು ಚಿಕ್ಕ ವಯಸ್ಸಿನಿಂದಲೂ ಇಲ್ಲಿಯವರೆಗೂ ಅಂಗೈಯಲ್ಲಿ ಹಿಡಿದುಕೊಂಡು ಆಸರೆ ಆದವಳು ನನ್ನ ಅಮ್ಮ. ನಾನು ಹಾಸ್ಟೆಲಿನಲ್ಲಿ ಇರುವುದರಿಂದ ದಿನಕ್ಕೆ ಎಷ್ಟು ಬಾರಿ ಪೋನ್ ಮಾಡುತ್ತಾಳೋ ಲೆಕ್ಕವಿಲ್ಲ. ಪ್ರತಿಯೊಂದು ವಿಷಯವನ್ನು ಅಮ್ಮನಲ್ಲಿ ತಕ್ಕಮಟ್ಟಿಗಾದರೂ ಹೇಳಿಕೊಳ್ಳದಿದ್ದರೇ ಸಮಧಾನವೇ ಇರದು. ಒಂದು ದಿನ ಪೋನ್ ಲೇಟಾಗಿ ಮಾಡಿದರೆ ಅಥವಾ ಮಾಡದೇ ಇದ್ದರೆ ಕಣ್ಣಿನಲ್ಲಿ ನೀರು ತುಂಬಿಕೊಂಡ ದಿನಗಳು ಅದೇಷ್ಟೋ ಇದೆ. ತಾಯಿ ಎಂದರೆ ಹಾಗೆ ಅಲ್ವ, ಅವಳು ಇಲ್ಲದ ಆ ಸಮಯ ಕಳೆಯುವುದೇ ಒಂದು ಯುದ್ಧದ ಹಾಗೆ. ನಮಗೆ ಒಳ್ಳೆಯ ವಿಚಾರಗಳನ್ನು ಹೇಳಿ ನಮ್ಮನ್ನು ಪ್ರೋತ್ಸಾಯಿಸುತ್ತಾಳೆ. ನಮ್ಮ ಅಂದ ಚೆಂದವನ್ನು ನೋಡುತ್ತಾ ನಿಂತಲ್ಲಿಯೇ ಸಂಭ್ರಮಿಸುತ್ತಾ ಕಳೆದು ಹೋಗುತ್ತಾಳೆ. ಹಬ್ಬ ಜಾತ್ರೆಗಳು ಬಂದರೆ ನಮಗೆಲ್ಲಾ ಹೊಸ ಬಟ್ಟೆಗಳನ್ನು ಕೊಡಿಸಿ ಅವಳು ಇದ್ದ ಸೀರೆಯನ್ನೇ ಉಡುತ್ತಾಳೆ. ಅಂತಹ ಒಂದು ಔದಾರ್ಯದ ಮನಸ್ಸಿರುವವಳು ನನ್ನ ಮುದ್ದಿನ ಅಮ್ಮ.

ಚೈತ್ರಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೮

ಊರ - ಹಾದಿ 

ಊರ ಪಯಣವಿದು ಸಿಕ್ಕಿತೇನು ಗುರುತು!

ಊರಿನದೋ? ನನ್ನದೋ?

ಡಾಂಬರು ರಸ್ತೆ ಮಣ್ಣಿನ ದಾರಿಯಾಯಿತು...

ಸ್ಥಿತವಾಯಿತು ನನ್ನ ಪ್ರಜ್ಞೆ!

ರಸ್ತೆ ಮಧ್ಯ, ಎಡ ಬಲದಿ ಹಸಿರ ಹೊನ್ನ ಗದ್ದೆ 

ಉಳಿದ ಜಾಗ ನನಗೆ ಸ್ವಂತ ಎಂಬಂತೆ 

ಬೆಳೆದ ಜಾಲಿ ಮುಳ್ಳು.

ಪ್ರಾಯಶ ಬಂದಿತೇನೋ ನನ್ನ ಊರು 

ಜಾತ್ರೆಗೆ ಬಿದ್ದಿವೆ ಬಣ್ಣ ಬಣ್ಣದ ಪ್ಲೆಕ್ಸ್‌ಗಳು 

ಪ್ರತಿ ಮನೆಗೂ ತಂಪು, 

ಎರೆವ ಬೇವಿನ ಮರಗಳು. 

ಹುಟ್ಟುವುದೇ ಊರು,

ಬಿಟ್ಟು ಕಟ್ಟುವುದೇ ಜೀವನ.

ಹಡೆದವ್ವನ ಹೊಟ್ಟೆ ಬಿಟ್ಟು, 

ಮಲತಾಯಿ ಮಡಿಲ ಸೇರಿ

ನಮ್ಮ ಊರಿಗೆ ನಾವೇ ಅತಿಥಿ ಆದೆವು


ಪರಶುರಾಮ್, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೮

 ಬೊಳ್ಳಿ

      ಆಕೆ ಕೋಳಿ ಸಾಕಾಣಿಕೆ ಮಾಡುವವಳು ಅಲ್ಲ ಆದರೂ ಸೇವಂತಿ ಮನೆಯಲ್ಲಿ ಅದು ಎಷ್ಟೊಂದು ಕೋಳಿಗಳಿದ್ದವು ಏನೋ. ಕೋಳಿಗಳನ್ನು ನೋಡಿಕೊಳ್ಳುವುದೆಂದರೆ ತುಂಬಾ ಇಷ್ಟ. ಅದು ಅಲ್ಲದೆ ಬಂಧು ಬಳಗ ಇಲ್ಲದ ಸೇವಂತಿಗೆ ಕೋಳಿಗಳೇ ಎಲ್ಲವೂ ಆಗಿತ್ತು. ಆ ಕೋಳಿಗಳಿಗೂ ಕೂಡ ಆಕೆ ಕಂಡ್ರೆ ತುಂಬಾ ಪ್ರೀತಿ. ಆಕೆಯ ಬಳಿ ಇರುವ ಕೋಳಿಗಳಲ್ಲಿ ಅದೊಂದು ಕೋಳಿ ಕಂಡರೆ ಒಂದು ರೀತಿಯಾದಂತಹ ವಿಶೇಷವಾದ ಪ್ರೀತಿ. ಆ ಕೋಳಿಯು ಬಿಳಿ ಮಿಶ್ರಿತ ಬಣ್ಣದಿಂದ ಕೂಡಿದ ಕೋಳಿಯಾಗಿತ್ತು. ಸೇವಂತಿಯ ಊರಿನಲ್ಲಿ ವರ್ಷ ನಡೆಯುವಂತಹ ಜಾತ್ರೆಯಲ್ಲಿ ಒಂದು ಸ್ಪರ್ಧೆಗೆ ಭಾಗವಹಿಸಿದ್ದಳು. ಅದರಲ್ಲಿ ವಿಜೇತೆಯಾದಂತಹ ಸೇವಂತಿಗೆ ಬಹುಮಾನವಾಗಿ ಬಂದ ಕೋಳಿ ಇದಾಗಿತ್ತು. ಆದ್ದರಿಂದ ಆ ಕೋಳಿಯು ಸೇವಂತಿಗೆ ವಿಶೇಷವಾಗಿತ್ತು. ಸೇವಂತಿ ಆ ಕೋಳಿಗೆ ಒಂದು ಹೆಸರನ್ನು ಕೂಡ ಇಟ್ಟಿದ್ದಳು 'ಬೊಳ್ಳಿ' ಎಂದು ಹೆಸರು. ಆ ಬೊಳ್ಳಿಗೂ ಕೂಡ ಸೇವಂತಿಯನ್ನು ಕಂಡರೆ ತುಂಬಾ ಪ್ರೀತಿ, ಸೇವಂತಿ ಬೊಳ್ಳಿಯನ್ನು ತನ ಜೊತೆಯಲ್ಲಿ ಕರೆದುಕೊಂಡು ಹೋಗುವವಳು. ಆದರೆ ಒಂದು ದಿನ ಆಕೆ ಬೊಳ್ಳಿಯನ್ನು ಕರೆದುಕೊಂಡು ಹೋಗಲು ಕರೆಯುತ್ತಾ ಹುಡುಕುತ್ತಾಳೆ. ಆದರೆ ಬೊಳ್ಳಿಯು ಕಾಣಿಸುವುದಿಲ್ಲ. ಸ್ವಲ್ಪ ಸಮಯದ ನಂತರ ಆ ಕೋಳಿಯ ಕೂಗುವ ಶಬ್ದವು ಕೇಳಿಸುತ್ತದೆ. ಸೇವಂತಿ ಆ ಶಬ್ದವನ್ನು ಹಿಂಬಾಲಿಸಿಕೊಂಡು ಹೋಗುತ್ತಾಳೆ. ಬೊಳ್ಳಿ ಗೂಡಿನ ಒಳಗೆ ಇದ್ದದ್ದನ್ನು ಸೇವಂತಿ ನೋಡಿದಳು. ಬೊಳ್ಳಿಯ ಹತ್ತಿರ ಇದ್ದಂತಹ ಮೊಟ್ಟೆಯನ್ನು ನೋಡಿದ ಆಕೆ, ಬೊಳ್ಳಿಯು ಮೊಟ್ಟೆ ಇಡುತ್ತಿದೆ ಎಂದು ತಿಳಿದ ಸೇವಂತಿಯು ಖುಷಿಪಟ್ಟಳು.

      ದಿನ ಎನಿಸಿದಂತೆ ದಿನಗಳು ಹೇಗೆ ಹೋದವು ಎಂದು ತಿಳಿಯದು. ಬೊಳ್ಳಿಯು ಮೊಟ್ಟೆಗಳಿಗೆ ಕಾವು ಕೊಡಲು ಪ್ರಾರಂಭಿಸಿತ್ತು. ಸೇವಂತಿಗೆ ಮಾತ್ರ ಯಾವಾಗ ಕೋಳಿ ಮರಿಗಳನ್ನು ನೋಡುತ್ತೇನೆ ಎಂದು ಅನಿಸಿಬಿಟ್ಟಿತ್ತು. ಆಕೆ ಮಾತ್ರ ಕೋಳಿ ಮರಿಗಳು ಬರುವ ನಿರೀಕ್ಷೆಯಲ್ಲಿದ್ದಳು. ಒಂದು ದಿನ ಬೊಳ್ಳಿಗೆ ಕಾಳು ಹಾಕಲೆಂದು ಗೂಡಿನ ಬಳಿ ಬಂದಾಗ ಆಕೆಗೆ ಆಶ್ಚರ್ಯವಾಯಿತು. ಏನೆಂದರೆ ಹತ್ತು ಮೊಟ್ಟೆಗಳು ಇದ್ದುದು ಅದರಲ್ಲಿ ಒಂದು ಮೊಟ್ಟೆ ಒಡೆದು ಹೋಗಿತ್ತು. ಆಕೆ ಗೂಡಿನ ಬಾಗಿಲನ್ನು ತೆಗೆದು ಮರಿಯನ್ನು ಹುಡುಕಲು ಪ್ರಾರಂಭಿಸಿದಳು ಆದರೆ ಮರಿಯು ಸಿಗುವುದಿಲ್ಲ. ಆಕೆ ಯೋಚನೆ ಮಾಡ ತೊಡಗಿದಳು "ಅರೆ ಇದ್ದಂತಹ ದೃಶ್ಯ ಹತ್ತು ಮೊಟ್ಟೆಗಳಲ್ಲಿ ಒಂಬತ್ತು ಮೊಟ್ಟೆ ಮಾತ್ರವಿದೆ. ಒಂದು ಮೊಟ್ಟೆ ಒಡೆದಿದೆ. ಹಾಗಾದರೆ ಮರಿ ಎಲ್ಲಿ ಹೋಯಿತು?".

      ಮರುದಿನ ಬೊಳ್ಳಿಗೆ ಕಾಳು ಹಾಕಲೆಂದು ಬಂದಾಗ ಎಂಟು ಮೊಟ್ಟೆಗಳು ಮಾತ್ರ ಇರೋದನ್ನು ಗಮನಿಸಿದಳು. ಸೇವಂತಿಗೆ ಇದು ಏನು ಎಂದು ತಿಳಿಯದೆ ಹೋಯಿತು. ಇದು ಹೇಗೆ ಸಾಧ್ಯ. ಮೊಟ್ಟೆ ಒಡೆದು ಹೋಗಿದೆ ಅದರ ಮರಿಗಳು ಮಾತ್ರ ಇಲ್ಲ. ಸೇವಂತಿ ಯೋಚನೆ ಮಾಡುತ್ತಾ ಇದಕ್ಕೆ ಒಂದು ಉಪಾಯವನ್ನ ಮಾಡಬೇಕೆಂದು ಕೊಂಡು ಮನೆಯೊಳಗೆ ಹೊರಟಳು. ಸೇವಂತಿಯು ಅದೇ ದಿನ ರಾತ್ರಿವಿಡೀ ಕೋಳಿಯ ಗೂಡಿನ ಬಳಿ ಕುಳಿತಿದ್ದಳು. ಆಗ ಅವಳಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಅದು ಆಶ್ಚರ್ಯಕ್ಕಿಂತ ನಂಬಲಾಗದ ಒಂದು ವಿಷಯ ತಿಳಿಯಿತು. ತನ ಮೊಟ್ಟೆಗಳನ್ನು ಬೊಳ್ಳಿಯು ಕುಡಿಯುತ್ತಿರುವುದನ್ನು ಕಂಡು ಆಕೆಯ ಕಣ್ಣುಗಳಿಂದ ನೀರು ಜಲಧಾರಯಂತೆ ಇಳಿತು. ಆಕೆಗೆ ಬಂಧು-ಬಳಗವಾಗಿದಂತಹ ಬೊಳ್ಳಿಯು ಇಂತಹ ಕೆಲಸ ಮಾಡಿದೆ. ತನ್ನ ಪ್ರೀತಿಯ ಬೊಳ್ಳಿಯ ಮೇಲೆ ಕೋಪ ಬೇಸರ ತಡೆಯಲಾಗದೆ ಅದನ್ನು ಕೊಂದೆ ಬಿಟ್ಟಳು. ಆಕೆ ಬೇಸರದಿಂದ ಕುಳಿತುಕೊಂಡು ತನ್ನ ತಾಯಿಗೂ, ಈ ಕೋಳಿಗೂ ಏನು ವ್ಯತ್ಯಾಸ. ಆಕೆ ನನ್ನನ್ನು ಬಿಟ್ಟು ಹೊರಟಳು. ಈ ಕೋಳಿ ತನ್ನ ಮಕ್ಕಳನ್ನೇ ಕೊಲ್ಲುತ್ತಿತ್ತು.

ಪಲ್ಲವಿ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೮

ಬದುಕು

ಬದುಕಿದರೆ ಬದುಕು ನೀ ಸಮುದ್ರದಂತೆ, 

ತೀರದಲ್ಲಿ ನಿಂತು ನೋಡುವವರಿಗೆ ಸಿಗದ ಕೋಣೆಯಾಗಿ 

ತನ್ನಲ್ಲಿ ಬಂದು ಸೇರಿ ಬೆರೆಯುವ ನದಿಗಳೆಷ್ಟೋ, 

ಕಸ ಕಡ್ಡಿಗಳೆಷ್ಟೋ, ಆದರೂ ಅಳುಕದ ಅದರ ಸೌಂದರ್ಯ.. 

ಅದು ನೋಡುಗರಿಗೇ ನೀಡುವ ಆನಂದ ನೆಮ್ಮದಿ 

ಬದುಕಿದರೆ ಬದುಕಬೇಕು ಇದರಂತೇ ವಿಶಾಲವಾಗಿ.


ಬದುಕಿದರೇ ಬದುಕು ನೀ ಆಕಾಶದಂತೇ 

ಇಡೀ ದಿನ ಸುಡುವ ಸೂರ್ಯ, ಚಲಿಸುವ ಮೋಡಗಳು 

ರಾತ್ರಿ ಹಿತ ನೀಡುವ ಚಂದ್ರ, ಸೌಂದರ್ಯ ಹೆಚ್ಚಿಸುವ ನಕ್ಷತ್ರಗಳು 

ಕಾಲ ಕಾಲಕ್ಕೆ ಬದಲಾಗುವ ವಾತಾವರಣಗಳು 

ಎಲ್ಲಿಯೂ ತಮ್ಮನ್ನು ತಾನು ಬದಲಿಸಿದ ಆಗಸ 

ಬದುಕಿದರೆ ಬದುಕಬೇಕು ಇದರಂತೇ ಏಕಾತ್ಮಕವಾಗಿ


ಬದುಕಿದರೇ ಬದುಕು ನೀ ದೀಪದಂತೇ 

ನಂಬಿ ಜೊತೆ ನಡೆಯುವವರಿಗೇ ಬೆಳಕು ನೀಡುವುದು 

ತಲುಪಬೇಕಾದ ಗುರಿಗೆ ದಾರಿ ತೋರುವುದು 

ದಾರಿಯಲ್ಲಿ ಸಿಗುವ ಕಲ್ಲು ಮುಳ್ಳುಗಳಿಂದ ಎಚ್ಚರಿಸುವುದು 

ಎಲ್ಲವನ್ನೂ ದಾಟಿ ಸಾಗಲು ಭರವಸೆಯಾಗುವುದು 

ಬದುಕಿದರೇ ಬದುಕಬೇಕು ಇದರಂತೆ ಪರಸ್ಪರ ಜೊತೆಗಾರರಾಗಿ.


ಸುಜಾತಾ, ಗಿ. ಪೂಜೇರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೮

ಗೆಳತಿ

ನಗುವೇ ಸಾಕು ನಿನಗೆ 

ಬೇಕಿಲ್ಲ ಬಂಗಾರದ ಒಡವೆ 

ನಿನ್ನ ನೋಡಿ ತುಸು ಮೆಲ್ಲನೆ ನಗುವೆ 

ಓ ನನ್ನ ಗೆಳತಿಯೇ 

ನನ್ನ ನೀನು ವಿಪರೀತವಾಗಿ ನೀ ಕಾಡುವೆ 

ಅಳಿದು ಉಳಿಯದೇ ಹೋಗುವ 

ಈ ಪ್ರಪಂಚದಲ್ಲಿ ನಮ್ಮಿಬ್ಬರ 

ಈ ಸ್ನೇಹಕ್ಕೆ ಎಂದೆಂದೂ ನಾ 

ಕಾವಲಾಗಿರುವೆ


ಸಂಗ್ರಹ - ಮರಿಯಮತ್ ಮಿಸ್ಬಾ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೮

ಸ್ಪರ್ಧಾರ್ಥಿ

ಯಶಸ್ವಿಗಾಗಿ ಹಂಬಲಿಸುವುದು, ಗೆಲುವಿಗಾಗಿ ಹಾತೊರೆಯುವುದು, ಗಮ್ಯಸ್ಥಾನಕ್ಕೆ ಸೇರುವ 

ಮಾರ್ಗಗಳನ್ನು ಹುಡುಕುವುದು, 

ಆಯ್ಕೆ ಮಾಡಿದ ಮಾರ್ಗವು ಹೆದ್ದಾರಿಯಷ್ಟು ಉತ್ತಮವಾಗಿದ್ದರೂ ಕಾಲದ ಕಾರಣದಿಂದಾಗಿ 

ವಯಸ್ಸಿನ ಪ್ರಭಾವದಿಂದಾಗಿ ತಪ್ಪುಗಳನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. 

ಆದರೂ 

ಆ ಸರಿಪಡಿಸಲಾಗದ ತಪ್ಪುಗಳಿಂದ ಕಲಿಯುವುದು 

ಭವಿಷ್ಯದಲ್ಲಿ ಯಾವುದೇ ತಪ್ಪುಗಳನ್ನು ಮಾಡದಿರಲು ಪ್ರಯತ್ನಿಸುವುದು. 

ಎಂದಿಗೂ ಬಿಟ್ಟುಕೊಡದ ಭಗೀರಥನಂತೆ, 

ಎಂದಿಗೂ ಹಿಂದೆ ಸರಿಯದ ವಿಕ್ರಮಾರ್ಜುನನಂತೆ, 

ಏನನ್ನಾದರು ಸಾಧಿಸಲು ಶ್ರಮಿಸುವುದು. 

ಎಲ್ಲರ ಮುಖಗಳ ಮೇಲೆ ತನ್ನ ಹೆಸರಿದೆ ಎಂದು ಭಾವಿಸುವುದು 

ಗೆಲುವಿಗಾಗಿ ಓಡುವುದನ್ನು ನಿಲ್ಲಿಸದೆ, ಅವನು ಒಂದೊಂದೇ ಹೆಜ್ಜೆ ಇಡುತ್ತಲೇ ಸಾಗುತ್ತಾನೆ.


ಗುಲಾಮರು

ಬಣ್ಣದ ಕಾಗದದ ಮೇಲೆ ಚಿತ್ರಿಸಿದ ನಕಲಿ ಜನರ ಬಣ್ಣಗಳನ್ನು 

ಬದಲಾಯಿಸುವ ರಾಜಕೀಯದ ಮೇಲೆ ಪ್ರಮಾಣ ಮಾಡುವರು 

ಗುಲಾಮರು


ಹಣದ ಗೀಳು ಹಿಡಿದು ನಿಷ್ಪಕ್ಷಪಾತತೆಯ ಕೊರತೆಯಿರುವ 

ಕಾನೂನುಗಳನ್ನು ಹೊಂದಿ, ನ್ಯಾಯ ಒದಗಿಸದ ನ್ಯಾಯಾಂಗ 

ವ್ಯವಸ್ಥೆಯನ್ನು ಹೊಂದಿರುವ ಈ ಸಮಾಜದಲ್ಲಿ ಬದುಕುವ 

ಅಸಹಾಯಕರು ಗುಲಾಮರು


ಹಣಕ್ಕಾಗಿ ಮತಗಳನ್ನು ಅವಲಂಬಿಸಿ, ಲಾಭಕ್ಕಾಗಿ ಯೋಜನೆಗಳನ್ನು 

ಮಣಿದು, ದಬ್ಬಾಳಿಕೆಯ ರತ್ನಗಂಬಳಿಗಳನ್ನು ಹಾಸತ್ತಾ 

ತಲೆಮಾರುಗಳಿಂದ ನಡೆದುಕೊಂಡು ಬಂದವರು 

ಗುಲಾಮರು


ಇಂಟರ್ನೆಟ್ ವೇಶ್ಯಾವಾಟಿಕೆಯ ಕರಾಳ ಅಶ್ಲೀಲತೆಯಲ್ಲಿ, 

ಅಮಾನವೀಯ ಕೃತ್ಯಗಳಲ್ಲಿ ಕೊಳೆತಿರುವ ಯುವ ಜನರು 

ಗುಲಾಮರು


ಮಹೇಶ್ ಜಿ.ಕೆ., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೮

ಚಿತ್ರಗಳು

ಚಿತ್ರ ರಚನೆ - ಟಿ.ಎ. ಸುಮನ್ ಜಬೀನಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ



ಸೋಮವಾರ, ಡಿಸೆಂಬರ್ 15, 2025

ಸಂಚಿಕೆ - ೦೭

ಸೌಂದರ್ಯದ ಸೊಬಗು (ಭಾಗ - ೨)

      ಅವನು ಪ್ರೀತಿಯ ನೆನಪುಗಳ ನೆನಪ ಮಾಡಿಕೊಂಡು ಸುಮ್ಮನೆ ಮನೆಯಲ್ಲಿನ ತನ್ನ ಕೋಣೆಯಲ್ಲಿ ಮುಗುಳುನಗುತ್ತಾ ಹಾಗೆ ನಿದ್ದೆಗೆ ಜಾರಿದ, ನಂತರ ಮನೆಯಲ್ಲಿ ಯಾರು ಬಂದಿರುವ ಹಾಗೆ ಗೋಚರಿಸುತ್ತ ಮಾತಾಡುತ್ತಿರುವುದು ಸದ್ದು ಕೇಳಿಸಿತು.... 

      ಕೆಲಸ ಮಾಡುತ್ತಿದ್ದ ಅವನ ತಾಯಿ ಜಯಮ್ಮ ಬಾಗಿಲನ್ನು ತೆರೆದಳು ನೋಡಿದರೆ ಅವನು ದೂರದ ಸಂಬಂಧಿ. ತಾಯಿಗೆ ಗೊತ್ತು ಆದರೆ ಮಗನಿಗೆ ಗೊತ್ತಿಲ್ಲ. ಇದನ್ನು ನೋಡಿದ ಓಣಿಯ ಹೆಂಗಸರು ಇವರನ್ನು ಕಣ್ಣು ಮಿಟುಕಿಸುವಂತೆ ಮಾತಾಡುತ್ತಿದ್ದರು ಕೆಲವರು ಮನೆಯ ಮುಂದೆಯೇ ಬಂದರು. "ಯಾರಮ್ಮ ಇವರು ಇಷ್ಟು ದಿನ ನಾ ನಿಮ್ಮ ಮನೆಗೆ ಬಂದಿರುವುದನ್ನ ನೋಡಿಲ್ಲ ಯಾರು ಇವರು ಮುನಿಸಿಪಾಲಿಟಿಯವರು ಇರಬೇಕಲ್ಲ" ಎಂದು ಕೇಳಿದರು.

      ಇವರು ನಮಗೆ ಗೊತ್ತಿರುವವರು "ಬಂದು ಬಿಟ್ಟು ಸುಬ್ಬಾತಿ ಮಾತಾಡದ ನೋಡು. ಬನ್ನಿ ನೀವು" ಬಂದಿರುವವರನ್ನು ಒಳಗೆ ಕರೆದು ಕೊಂಡು ಹೋಗಿ ಮಾತನಾಡಿಸ ತೊಡಗಿದರು. ಅವರನ್ನು ಕೂರಿಸಿ ಪಾನಕ ನೀಡಿ ಕುಡಿಯಲು ಕೊಟ್ಟರು. ನಂತರ ಅವರಿಗೆ ಅಡುಗೆ ಮಾಡಲು ದಿನಸಿ ಖಾಲಿಯಾಗಿತ್ತು ಎನ್ ಅಡಿಗೆ ಮಾಡೋದು ಎಂದು ಯೋಚನೆ ಮಾಡುತ್ತಿದ್ದಳು. ನಂತರ ಮಗನಿಗೆ ಹೇಳಲು ಮಗನ ಕೋಣೆಯ ಬಳಿ ಬಂದಳು. ಮಗ ಪ್ರೀತಿಯ ಕನಸೋಳಗೆ ಮುಳುಗಿದ ಏನೆಂದರೆ "ಹುಣ್ಣಿಮೆಯ ಬೆಳಕಿನ ಸುಂದರಿ, ನಸು ಇಬ್ಬನಿಯ ತಟತಟ ಹನಿ.

      ಹಕ್ಕಿಗಳ ಚಿಲಿಪಿಲಿ, ಕೋಗಿಲೆ ಕೂಗು, ಸುಮಧುರವಾದ ಹಾಡು ಹೇಳುತಿದ್ದಳು, ಸುತ್ತಲೂ ಚಿಟ್ಟೆಗಳ ಸ್ವಾಗತ. ಸ್ವರ್ಗದ ಮೆಟ್ಟಿಲುಗಳಿಂದ ಬರುವ ಸೂಚನೆ ಸಿಗಲು ಮಗನು ಕನಸಿನಲ್ಲಿ 'ಮನಿಷ ಮನಿಷ' ಎಂದು ಕನಸಿನಲ್ಲಿರುವವಳನ್ನ ಜೋರಾಗಿ ಕೂಗುತ್ತಿದ್ದನು" !!!

      ಇದನ್ನು ನೋಡಿದ ತಾಯಿಯ ಬಕೇಟಿನ್ ಒಳಗಿರುವ ನೀರನ್ನು ಮುಖದ ಮೇಲೆ ಎರಚಿದರು. ತಕ್ಷಣ ಮಗ ಎಚ್ಚರಗೊಂಡು ಎದ್ದು ಯಾಕಮ್ಮ ಮಲಗಿರೋದು ಕಾಣಿಸ್ತಾ ಇಲ್ಲ ನೀರು ಯಾಕೆ?.... ಹಾಕಿದ್ದು ಎಂದು ಕೇಳಿದ?

      ತಾಯಿ ಬೇಗ ಎದ್ದು ದಿನಸಿ ಖಾಲಿಯಾಗಿದೆ ಟೌನ್ಸೆ ಹೋಗಿ ತಗೊಂಡು ಬಾ ಎಂದು ಕಳಿಸಿದಳು ಅವನು ಸ್ವಲ್ಪ ಸಮಯದ ನಂತರ ರೆಡಿಯಾಗಿ ಮನೆಯಿಂದ ಹೊರಟನು. ಅವನು ದಿನಸಿಗಳ ಪಟ್ಟಿಯನ್ನು ತೆಗೆದುಕೊಂಡು ೧೦ ಕಿ.ಮೀ. ದೂರವಿರುವ ಟೌನ್ಸೆ ಬಂದನು. ನ್ಯೂದುರ್ಗಾ ದಿನಸಿ ಅಂಗಡಿಗೆ ಬಂದು ಅಂಗಡಿ ಯಜಮಾನನ ಬಳಿ ಕೇಳಿಕೊಂಡು ದಿನಸಿಗಳನ್ನು ತರಿಸಿಕೊಳ್ಳುತ್ತಿದ್ದನು.

      ಸ್ವಲ್ಪ ಸಮಯದ ನಂತರ ವಸ್ತುಗಳನ್ನು ಪಕ್ಕದ ಅಂಗಡಿಗೆ ಹೇಳಿ ತರಲು ಹೋದವನು. ಅವನಿಗೆ ಕನಸಿನಲ್ಲಿ ಬಂದಿರುವ ಹುಡುಗಿಯನ್ನು ಬಸ್ಸಿನಲ್ಲಿ ಹೋಗುವುದನ್ನು ನೋಡಿಕೊಂಡು ಅವನು ಅವಳ ಹಿಂದೆಯೇ ಹೋದನು.

ಮಲ್ಲಿಕಾರ್ಜುನ ಹ ಕೆರೂಡಿ, ಎಂ.ಎಸ್.ಸಿ. ಭೂಗೋಳ ಶಾಸ್ತ್ರ

ಸಂಚಿಕೆ - ೦೭

ನಲ್ಲೆಯ ಮನಂ ಒಪ್ಪದ ನುಡಿ


೨೨ ॥ ಸಕ್ಕರೆಯ ಬೊಂಬೆಯಾಗಿರುವ ನಲ್ಲೆಯ ಮನದ ಪ್ರೀತಿಯನ್ನೊಂದಿದ 

         ಅಕ್ಷರವನೆನ್ಮನದ ಪ್ರೀತಿಯ ಮುತ್ತಿನಲ್ಲೋಡಿಸಿರುವೆನಾನಿಂದು 

         ಅಕ್ಕರೆಯಲ್ಲಂದ ನನ್ಮನದ ಹೃದಯದ ಒಡತಿಗೆಂದೇ ಬರೆದಾ 

         ಈ ಕಾವ್ಯಂ ಎನ್ಮನಸಾಳದಲ್ಲಿ ಹುದುಗಿರುವ ನುಡಿಗಳನೊಂದಿದೆ ॥ ೧ ॥


೨೧ ॥ ನಿನ್ನ ಮನದಾಳದಲ್ಲಿ ನಾನಿರುವನೆಂಬ ಶಂಕೆ ಇದೇ ಎನಗೆ 

         ನನ್ನ ಮನದ ಈ ಶಂಕೆಯನ್ನೊರೆಯಲು ನೀ ನನ್ನ ಹೆಸರಾ ಕೂಗೆ 

         ನನ್ನ ಪ್ರತಿಕನಸ್ಸೆಲ್ಲವೂ ನಿನ್ನಯ ನೆನಪನ್ನೆ ಸ್ಮರಿಸುತ್ತಿವೆ 

         ನನ್ನ ಹೃದಯದಲ್ಲಿದಯವನ್ನ ಅಡಗಿಸಿ ಬಚ್ಚಿಟ್ಟಿರುವೆ ॥ ೨ ॥


೨೦ ॥ ನಿನ್ಮನಸಿನಾಳದಲ್ಲಿ ಹುದುಗಿರುವ ಪ್ರೀತಿಯನೋಮ್ಮೆ ನೋಡು 

         ನನ್ನಿನಿದುವರೆಗಿನ ತಪ್ಪುಗಳಲ್ಯಾರ್ಯಾರ್ತಪ್ಪು ಎಷ್ಟೆಷ್ಟೆಂದು 

         ನನ್ನಾಡಿದ ತಪ್ಪುಗಳೇ ಹೆಚ್ಚಿದ್ದರೆ ಯೋಚಿಸದೆ ನನ್ನ ಬಿಡು 

         ನಿನ್ನಾಡಿದ ತಪ್ಪುಗಳೇ ಹೆಚ್ಚಿದ್ದರೆ ಹೇಳು ಶಿಕ್ಷೆ ಯಾರಿಗೆಂದು ॥ ೩ ॥


೧೯ ॥ ಎನ್ನ ಮನದರಸಿ ಹೃದಯಪೊಕ್ಕುದಾಟಿದಳೆನ್ನ ಕೇಳೇ 

         ಎನ್ನ ನುಡಿನುಡಿಯೊಂದಿನ ತಪ್ಪೇ ಕಾರಣವಿತ್ತಲು ತಪ್ಪೆ 

         ಎನ್ನ ಮನಂ ಮಿಡಿಯುವುದು ಅವಳ ಆಗಮನಕ್ಕೆ ಕಾಯ್ದೆ 

         ಎನ್ನ ಮನವು ಕಾಯುವುದಾದರುಸಿರ ಮನಪೊಕ್ಕೂ ಎನ್ನೆ ॥ ೪ ॥


೧೮ ॥ ನುಡಿಗೊಳಗನ್ನುಡಿಗೊಡಗಿ ನುಡಿದೆ ತಪ್ಪಮ್ಮನ್ನಿಸಿ 

         ಬಿಡುವಮಾತೆನ್ನದೆ ಶಿಕ್ಷಿಸುಮನಕ್ಕೆ ಎನ್ಮನಾರ್ತಿಸಿ 

         ನುಡಿದಳವಳು ನಿನ್ನಿಡುವುದೇ ನಿಂಗೆ ಶಿಕ್ಷೆಂದು ಘಾಸಿ 

         ಮಾಡಿದಳೆನ್ನನಕ್ಕೆ ಜೀವಮಾಗಿದ್ದ ಎನ್ಮನಾದರಸಿ ॥ ೫ ॥


೧೭ ॥ ಅನುಭವಿಸುವೆ ಏನಪ್ಪಿಗೆ ಬೇರೆಲ್ಲಾ ಶಿಕ್ಷೆಯನ್ನ 

         ಅನುಸರಿಸಿ ನಡೆಯುವೇನವಳಿತ್ತ ನುಡಿಯನ್ನ 

         ಅನುಮಾನಿಸದೆನ್ನ ತಪ್ಪು ಬಗೆಹರಿಸುವುದನ್ನ 

         ಅನುತ್ತಿರುವಳರಿಯುವೆನು ಎನ್ನ ಮನೋಪ್ಪದನ್ನ ॥ ೬ ॥


೧೬ ॥ ಒಪ್ಪಲೊಳ್ಳಲು ಎನ್ನ ಮನ್ದ್ರದಯಮರ್ತಿ ಬಿಡಲು 

         ಒಪ್ಪದು ಅವಳ ಪ್ರೀತಿಯ ಸವಿ ನೆನಪುಗಳು 

         ಕೋಪದಲ್ಮಾಡಿದ ತಪ್ಪಿಗೆ ಅನುಭವಿಸಿರುಲು 

         ತಾಪವನ್ನದೇಗೆ ಸಹಿಸುವುದು ಎನ್ನ ಕರುಳು ॥ ೭ ॥


೧೫ ॥ ಮನೋಪ್ಪುವ ಶಿಕ್ಷೆಯಾನಿತ್ತಡೆ ಪಾಲಿಸುವೆನು 

         ಅನುಸರಿಸುವೆನವಳುಡಿನುಡಿಗಳನು 

         ಮನೋಪ್ಪದದನ್ನು ಅದೇಗೆ ಪಾಲಿಸುವೆನೆನು 

         ಏನುಮಾವಳಿಗೆ ನುಡಿಯದೆ ಸ್ಥಿರವಾದೇನು ॥ ೮ ॥


೧೪ ॥ ಎನಿಸಲಾವಳ ತಪ್ಪು ಎನಿಸಲಾಗದು 

         ನಿನ್ನ ತಪ್ಪುಗಳನ್ನು ಕ್ಷಮಿಸಿದೆನ್ನಾನಂದು 

         ಎನ್ನ ಒಂದಪ್ಪನ್ನು ಕ್ಷಮಿಸಲಿಲ್ಲಾ ಅವಳು 

         ನಿನ್ನಾನೊಪ್ಪಿಸುವ ಬಗೆ ತಿಳಿಯಾದವಳು ॥ ೯ ॥


೧೩ ॥ ನುಡಿದರ್ನುಡಿಯದಿದ್ದರ್ತೊರೆಯುವಳು 

         ನುಡಿದಲೆನಗೊಪ್ಪದ ಆ ಮಾತುಗಳು 

         ನುಡಿದೆನೀ ಮಾಡಿದ ತಪ್ಪೆ ಎಲ್ಲೀವನಂ 

         ಆಡುವರ್ಬಾಯಲ್ಲಿ ತೇಲುತ್ತಿರುವುದನಂ ॥ ೧೦ ॥


೧೨ ॥ ಅವಳ್ಯಾರೆಂದು ಪೆಸರ ಕೇಳದಿರಿ 

         ಅವಳೆಸರ್ನುಡಿದು ಕೆಟ್ಟದನ್ನರಿ 

         ದವಳ ಮನಂ ಕೆಡಿಸಿತು ಈ ಜಗಮ್ 

         ಅವಳೆಸರ್ಗುಪ್ತವಾಗಿರಲೆನ್ನನಮ್ ॥ ೧೧ ॥


೧೧ ॥ ಎನ್ನ ಒಂದಪ್ಪಿಗೆ ತೊರೆವ ಮಾರ್ಗ 

         ವನ್ನು ಬಿಟ್ಟೇರೆ ಮಾರ್ಗದಲೆಡೆಗೆ 

         ಎನ್ನರ್ಪಲಿಸುವೇನಿದೊಂದೊಪ್ಪದ 

         ನಿನ್ನ ಮಾರ್ಗ೦ ಪಾಲಿಸಲ್ಮನೋಪ್ಪದು ॥ ೧೨ ॥


೧೦ ॥ ಜರಿಯಲು ನಾ ಮನಕ್ಕೆ ಕಷ್ಟಂ 

         ಬರಲು ನಿನ್ನ ಮನಕ್ಕೆ ಕಷ್ಟಂ 

         ಕರೆಯುವೆ ಒಂದೊಮ್ಮೆ ನನ್ನನ್ನು 

         ಬರುವೆ ಇನ್ನೆಂದೂ ಬಿಡೆನಿನ್ನು ॥ ೧೩ ॥


೦೯ ॥ ದಿನವೂ ಅವಳದೇ ಜಪ 

         ತನುವಿನಲ್ಲಿ ಆದ ತಾಪ 

         ಮನದಲ್ಲಿ ಉಂಟಾದ ಕೋಪ 

         ಏನ್ಮನ ಬಿಡದು ನೆನಪ ॥ ೧೪ ॥


೦೮ ॥ ಕಣ್ಮರೆಯಾದಲವಳು 

         ಕ್ಷಣದಲ್ಲಿ ಕಾಡುವಳು 

         ಕಾಣಿಸುವಳ್ಳರೆಯಲಿ 

         ಕುಣಿಸುವಳ್ಳನದಲಿ ॥ ೧೫ ॥


೦೭ ॥ ಬೇಡುವೆನು ಭೀಕ್ಷವ 

         ನೀಡುವೆನೀ ಪ್ರೇಮವ 

         ಪಡೆಯದ ಜೀವವ 

         ಕಾಡುವೆನೀ ಮನವ ॥ ೧೬ ॥


೦೬ ॥ ಕಂಬನಿ ಸುರಿತು

         ನಂಬದ ನನ್ನಯ

         ಅಂಬರ ಸೋರಿತು 

         ಇಂಬುವ ದರೆಯ ॥ ೧೭ ॥


೦೫ ॥ ಹುಚ್ಚು ಪ್ರೇಮವ

         ನುಚ್ಚು ಮಾಡಿದೆ

         ಕಚ್ಚಿ ಮನವ

         ಬೆಚ್ಚು ಮಾಡಿದೆ ॥ ೧೮ ॥


೦೪ ॥ ಮತಿಸಿದ

         ಪ್ರೀತಿಸುವೆ

         ಗತಿಸಿದ

         ಭರ್ತಿಸುವೆ ॥ ೧೯ ॥


೦೩ ॥ ಬಾನಿನ 

         ಕನಸ್ಸು

         ಮನ್ನಿನ

         ನೆನಸ್ಸು ॥ ೨೦ ॥


೦೨ ॥ ಪ್ರೀತಿ 

         ಸ್ಥಿತಿ

         ಭೀತಿ 

         ಯತಿ ॥ ೨೧ ॥


೦೧ ॥ ನನ್ 

         ಕಾಮ್

         ನಿನ್

         ಪ್ರೇಮ್ ॥ ೨೨ ॥


(ಸೂಚನೆ : ಈ ಕಾವ್ಯ ಛಂದಸ್ಸಿನ ಚಿಕ್ಕ ನಿಯಮ ಅನುಸರಿಸಿ ರಚಿಸಲ್ಪಟ್ಟಿದ್ದು. ಪ್ರತಿಯೊಂದು ಚರಣದಲ್ಲೂ ಮೊದಲ ಪದ್ಯದ ೨೨ ಅಕ್ಷರಗಳಿವೆ. ನಂತರದ ಪದ್ಯಗಳಲ್ಲಿ ಕ್ರಮೇಣ ಒಂದೊಂದು ಅಕ್ಷರ ಇಳಿಸುತ್ತಾ ಇಳಿಕೆಕ್ರಮದಲ್ಲಿ ಈ ಕಾವ್ಯವನ್ನು ಕಟ್ಟಲಾಗಿದೆ.) 


ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೭

ಬಾಳಿನ ಬಂಡಿ

ಬಾಳಿನ ಬಂಡಿ ಸಾಗುತಿದೆ, ಜಂಜಾಟದ ಹಾದಿಯಲ್ಲಿ, 

ಜೀವನ ಮೌಲ್ಯಗಳ ಸಾರ, ಅಡಗಿದೆ ಮೂಲೆಯಲ್ಲಿ. 

ವೇಗದ ಓಟದಲ್ಲಿ ಮನುಜ ತನ್ನತನ ಮರೆತಿದ್ದಾನೆ. 

ತನ್ನತನವ ಕಳೆದುಕೊಂಡು, ತಾನೇ ಬಂಧಿಯಾಗಿದ್ದಾನೆ.


ಜವಾಬ್ದಾರಿಯ ಸರಪಳಿ ಕೈ-ಕಾಲು ಬಿಗಿದಿದೆ, 

ಪ್ರತಿ ಹೆಜ್ಜೆಯಲ್ಲೂ ಕರ್ತವ್ಯದ ಭಾರ ಗೋಚರಿದೆ. 

ಸಣ್ಣ ಸಂತೋಷಕೂ ಇಲ್ಲಿ ಜಾಗ ಉಳಿದಿಲ್ಲ, 

ಮನಸ್ಸಿನ ಮಾತು ಕೇಳೋಕೆ ಯಾರಿಗೂ ಸಮಯವಿಲ್ಲ.


ಜೀವನದ ಸುಖ, ಸಿಹಿ ಮಾತು ಮಾಯವಾಗಿದೆ, 

ಯಾಂತ್ರಿಕ ಬದುಕಿಗೆ ಮನಸು ಒಗ್ಗಿಕೊಂಡಿದೆ. 

ನಿತ್ಯದ ನೋವಿನಲ್ಲಿ ನಗುವಿನ ನೆರಳು ಇಲ್ಲವಾಗಿದೆ, 

ಕಣ್ಣುಗಳಲ್ಲಿ ಕೇವಲ ಆಯಾಸ ಮನೆ ಮಾಡಿದೆ.


ಹೇ ಮಾನವ, ನಿಲ್ಲು ಒಂದಿಷ್ಟು ಈ ಸಾಗಾಟದಿ, 

ಕಳೆದುಹೋದ ಸವಿ ಕ್ಷಣವ ಹುಡುಕು ನಿನ್ನೊಳಗೆ. 

ಮೌಲ್ಯಗಳಿಲ್ಲದ ಈ ಜೀವನ ಒಂದು ವ್ಯರ್ಥ ಪಯಣ, 

ನೆಮ್ಮದಿಗಾಗಿ ಬಿಡು ಚಿಂತೆಯ ಭಾರ, 

ನೀ ನಡೆಸು ಹೊಸ ಜೀವನ ಯಾನ !


ಸಂಗ್ರಹ - ಪುನೀತ್ ಕೆ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೭

ಏಕೆ ನನ್ನ ಪ್ರಶ್ನೆಗೆ ಉತ್ತರವಿಲ್ಲ....

ಯೌವ್ವನದ ಸಾವಿರ ಪ್ರಶ್ನೆಗೆ 

ಉತ್ತರಿಸಲು ಮನಸ್ಸಿಗೂ ತಿಳಿದಿಲ್ಲ... 

ಕಾಣದ ಪ್ರೀತಿಯ ಪ್ರಶ್ನೆಗೆ 

ಹೃದಯವೂ ಪ್ರಕ್ರಿಯೆ ನೀಡುತ್ತಿಲ್ಲ...


ಆ ಪುಟ್ಟ ಕಣ್ಣಿನ ನೋಟಕ್ಕೆ 

ಗುಂಡಿಗೆಯ ಬಡಿತ ಹೆಚ್ಚಾಗುವಾಗ..

ನಿಯಂತ್ರಿಸುವ ಬಂಡು ಧೈರ್ಯ, 

ನನ್ನ ಮನಸ್ಸಿಗೂ ಏಕಿಲ್ಲ, 

ಎಂಬ ಸಣ್ಣ ಪ್ರಶ್ನೆಗೂ ಅದರ ಬಳಿ ಉತ್ತರವಿಲ್ಲ...


ಜೀವನದ ಜವಬ್ದಾರಿಯ ಮುಂದೆ 

ಪ್ರಿಯ ಹೃದಯವನ್ನ ದೂಷಿಸಲೇ, 

ಅಥವಾ ಕಾಣದ ಒಳ ಮನಸ್ಸಿನ 

ಜೊತೆಗೆ ನನ್ನ ನೋಡಿ ನಗುತ್ತಿದ್ದ ನನ್ನ ಪ್ರತಿಬಿಂಬವನ್ನೇ....


ಕೊನೆವರೆಗೂ ಕಾಡುತ್ತಿದೆ ಒಂದು ಚಿಂತೆ, 

ಏಕೆ ನನ್ನ ಪ್ರಶ್ನೆಗೆ ಉತ್ತರವಿಲ್ಲ....


ಬಿ ವಿಖ್ಯಾತ್, ಎಂ.ಎ. ಪ್ರಥಮ ವರ್ಷ, ರಾಜ್ಯಶಾಸ್ತ್ರ ವಿಭಾಗ

ಸಂಚಿಕೆ - ೦೭

ಕಾನನ

ಕಣ್ಮನ ಸೆಳೆಯುವ ಸುಂದರ ನೋಟ 

ಪ್ರಾಣಿ ಪಕ್ಷಿಗಳ ಕಣ್ಣಾಮುಚ್ಚಾಲೆ ಆಟ 

ಆನೆ ಹುಲಿ ಸಿಂಹಗಳ ಕಾದಾಟ 

ಗಿಳಿ ಗುಬ್ಬಿ ಗೊರವಂಕಗಳ ಕಿತ್ತಾಟ


ಮರ ಗಿಡಗಳಿಗೆ ಬಳ್ಳಿಗಳ ತೋರಣ 

ಬೆಳಕು ಕಾಣದ ಕಗ್ಗತ್ತಲಿನ ತಾಣ 

ಚಾಚಿದರು ಎಟುಕದು ಕರಣ 

ಅದುವೇ ಕಾನನ


ಶ್ವೇತಾ ಬಿ. ಎಸ್., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೭

ಕಡಲಿನ ಮೌನ

ಕಡಲಿಗೆ ಏಕೆ ಇಂಥ ಮೌನವೊ 

ಒಡಲಲೆಲ್ಲ ಸಂಕಟವಿದ್ದರೂ 

ನೀಡುತಿಹುದೇನೊ ಸೂಚನೆಮಗೆ 

ಕಾಡುವೆನೆಂದೊ ಕಾಯುವೆನಾನೆಂದೊ


ಲೋಕವೆಲ್ಲಾ ಕತ್ತಲಾಗಿದೆಯಾದರೂ 

ಮೂಕವಾಗಿದೆ ನುಡಿಯಲೊಲ್ಲದ ಮನ 

ಬೇಕಿರುವುದನ್ನು ಹೇಳಲೊಲ್ಲದೆಕೆ 

ನೂಕುತಿದೆ ಬೇಕಿರದರೆಡೆಗೆ ಜನ


ಏಕೆ ಶಶಿಯು ನನ್ನನ್ನೆ ನೋಡುತಿದ್ದಾನೆ 

ಏಕಾಂಗಿಯಾಗಿರುವೆನೆಂದೊ ಇಲ್ಲವೆ 

ಕಾಕಬುದ್ದಿಯವನಿವನೆಂದೊ ತಿಳಿಯದು 

ಸಾಕಾಯಿತೆಂದವನು ಸಣ್ಣಗೆ ಜಾರಿದ


ಧಹಿಸುತಿದೆ ಧರಣಿಯಾಕೊ ಭಸ್ಮಮುಚ್ಚಿ 

ಸಹಿಸುತಲೆ ಎಲ್ಲರನ್ನೂ ಎಲ್ಲವನ್ನೂ 

ಮಹಿಷಾಸುರನ ಮರ್ಧನದಂತೆಯೆ 

ಬಹಿಷ್ಕರಿಸುವುದೊ ಮನುಕುಲವನು


ಕಡಲಂಚಲಾ ಕುಳಿತು ಕಂಗೆಟ್ಟು ಯೋಚಿಸಿದೆ 

ಕಡೆಗೆ ಉತ್ತರವೆ ಇಲ್ಲ ಪ್ರಶ್ನೆಯೇ ಎಲ್ಲ 

ತಡೆಯದೆಯೆ ಮೇಲೆದ್ದು ಹಾಗೆಯೆ 

ನಡೆದೆನಾ ಕಡೆಯಿಲ್ಲದಾ ಕಡಲಂಚಲಿ.


ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೭

ಕಾರಿಂಜೇಶ್ವರ ಬೆಟ್ಟ

      ಶ್ರೀ ಕಾರಿಂಜೇಶ್ವರ ದೇವಸ್ಥಾನವು ಕಾರಿಂಜ ಎಂಬ ಸ್ಥಳದಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಶಿವ ದೇವಾಲಯವಾಗಿದೆ. ಇದು ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. 'ಭೂ ಕೈಲಾಸ' ಎಂದೆ ಕರೆಯಲ್ಪಡುವ ಈ ದೇವಾಲಯವನ್ನು ಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಶಿವನಿಗೆ ಎರಡು ಮತ್ತೊಂದು ಪಾರ್ವತಿ ಮತ್ತು ಗಣೇಶ ದೇವರಿಗೆ ದೇವಾಲಯವನ್ನು ತಲುಪಲು ಸುಮಾರು ೩೫೫ ಮೆಟ್ಟಿಲುಗಳಿವೆ. ಈ ದೇವಾಲಯವನ್ನು ಜೈನ ಮತ್ತು ವೈಷ್ಣವರ ಶೈಲಿಯಲ್ಲಿ ನಿರ್ಮಿಸಲಾಗಿದೆ.

      ಪುರಾಣದಲ್ಲಿ ಬರುವ ನಾಲ್ಕು ಯುಗಗಳು ಈ ದೇವಾಲಯದೊಂದಿಗೆ ಹಣಿದುಕೊಂಡಿದೆ ಇದು ಅದೆಲ್ಲದಕ್ಕೂ ಸಾಕ್ಷಿಯಾಗಿದೆ. ಈ ದೇವಾಲಯವನ್ನು ಕೃತ ಯುಗದ ಸಮಯದಲ್ಲಿ 'ರೌದ್ರ ಗಿರಿ', ತ್ರೇತ್ರಾಯುಗದಲ್ಲಿ 'ಗಜೇಂದ್ರ ಗಿರಿ', ದ್ವಾಪರ ಯುಗದಲ್ಲಿ 'ಭೀಮ ಶೈಲ' ಮತ್ತು ಕಲಿಯುಗದಲ್ಲಿ 'ಕಾರಿಂಜ' ಎಂದು ಕರೆಯಲಾಗುತ್ತಿತ್ತು. ಇದು ಈ ನಾಲ್ಕು ಪ್ರಮುಖ ಯುಗಳಿಗೆ ಸಾಕ್ಷಿಯಾಗಿರುವ ದೇವಾಲಯವಾಗಿದೆ.

      ಪ್ರಮುಖವಾಗಿ ಇಲ್ಲಿ ಕೆಲವು ತೀರ್ಥ ಸ್ಥಳಗಳು ಕಂಡುಬಂದಿದೆ. ಇವುಗಳನ್ನು ಮಹಾಭಾರತದಲ್ಲಿ ಬರುವ ಪಾಂಡವರಲ್ಲಿ ಕೆಲವರು ನಿರ್ಮಿಸಿದ್ದಾರೆ ಎನ್ನುವ ಪುರಾಣ ಕಥೆಗಳಿವೆ. ಭೀಮನು ತನ್ನ ಗದೆಯನ್ನು ನೆಲದ ಮೇಲೆ ಎಸೆದನು ಇದರಿಂದಾಗಿ ಅಲ್ಲಿ ಒಂದು ಕೊಳ ರೂಪುಗೊಂಡಿತು. ಈ ಕೊಳವನ್ನು ಗದಾ ತೀರ್ಥದೆಂದು ಕರೆಯಲಾಗುತ್ತದೆ. ಇದಲ್ಲದೆ ಭೀಮನ ಹೆಬ್ಬೆರಳಿನಿಂದ ಅಂಗುಷ್ಟ ತೀರ್ಥ ಹುಟ್ಟಿಕೊಂಡಿತು, ಮತ್ತು ಅವನು ನೆಲದ ಮೇಲೆ ಮಂಡಿಯೂರಿದಾಗ ಜನುತೀರ್ಥವೆಂದು ಮತ್ತೊಂದು ಕೊಳವಾಯಿತು. ಈ ಕೊಳವನ್ನು ದೇವಾಲಯದ ಸುತ್ತಲೂ ನೋಡಬಹುದು. ಮಹಾಯೋಧನಾದ ಅರ್ಜುನನು ಹಂದಿಗೆ ಬಾಣವನ್ನು ಹೂಡೆದು ಅದರಿಂದ ಹಂದಿಕೆರೆ ಎಂದು ಪ್ರಸಿದ್ಧವಾಗಿದೆ. ಇದೆಲ್ಲದರಿಂದ ಪಾಂಡವರು ಅಲ್ಲಿಗೆ ಬಂದ್ದಿದರು ಎಂಬುದು ಆಧಾರಗಳೊಂದಿಗೆ ತಿಳಿಯುತ್ತದೆ. ಬೆಟ್ಟದ ತುದಿಯಲ್ಲಿರುವ ಈ ಕೊಳಗಳು ಬತ್ತದೆ ಇರುವುದು ಇಲ್ಲಿನ ವಿಶೇಷ.

      ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ 'ಶಿವರಾತ್ರಿ' ಪ್ರಮುಖ ಹಬ್ಬವಾಗಿದೆ. ಶಿವರಾತ್ರಿಯ ದಿನದಂದು ವಿಸ್ತಾರವಾದ ಪೂಜೆಗಳನ್ನು ನಡೆಸಲಾಗುತ್ತದೆ. ಈ ಹಬ್ಬವೂ ನಾಲ್ಕು ದಿನಗಳವರೆಗೆ ಆಚರಣೆ ನಡೆಯುತ್ತದೆ. ಎರಡನೆಯ ದಿನದಂದು ಶಿವನ ವಿಗ್ರಹವು ಪಾರ್ವತಿ ದೇವಿಯೊಂದಿಗೆ ಐಕ್ಯವಾಗುತ್ತದೆ. ಮೂರನೇ ದಿನ ರಥೋತ್ಸವ ನಡೆಯುತ್ತದೆ. ಈ ದಿನ ದೇವರ ವಿಗ್ರಹವನ್ನು ರಥದಲ್ಲಿ ಇಟ್ಟು ಮೆರವಣಿಗೆಯನ್ನು ಮಾಡಲಾಗುತ್ತದೆ. ಪಾರ್ವತಿ ದೇವರ ದರ್ಶನವ ನಂತರ ೧೪೬ ಮೆಟ್ಟಿಲು ಹತ್ತಿ ಹೋದರೆ ಅಲ್ಲಿ ದೊಡ್ಡದಾದ ಕಲ್ಲಿನಿಂದ ನಿರ್ಮಾಣವಾದ ದ್ವಾರ ಸೀಗುತ್ತದೆ. ಪ್ರಕೃತಿಯಿಂದ ಸುತ್ತುವರಿದ ಬೆಟ್ಟಗಳ ಮಧ್ಯ ೧೧೮ ಮೆಟ್ಟಿಲುಗಳನ್ನು ಏರಿ ಸಾಗಿದರೆ ಬೆಟ್ಟದ ತುದಿಯಲ್ಲಿ ಶಿವನ ದೇಗುಲ ಸೀಗುತ್ತದೆ. ಈ ದೇವಾಲಯವು ವಾನರರಿಂದ ತುಂಬಿದೆ ಅವುಗಳಿಗೆ ಆಹಾರವನ್ನು ನೀಡುವ ಪದ್ಧತಿ ಇಂದಿಗೂ ಇದೆ.

ಪೂಜಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೭

ಚಿತ್ರಗಳು 

ಚಿತ್ರ ರಚನೆ - ಲಿಖಿತ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ



ಸೋಮವಾರ, ಡಿಸೆಂಬರ್ 8, 2025

ಸಂಚಿಕೆ - ೦೬

ಚಿಂತೆ ನೀನೇಕೆ ಹೀಗೆ

ಅತ್ತೆ ಅವರು ಅವರ ಚಿಂತೆ ಮಾಡುತಿದ್ದರು 

ಇತ್ತ ನಾನು ನನ್ನ ಚಿಂತೆಯ ನನ್ನೊಳಗೆ ಮಾಡುತಿದ್ದೆ 

ಚಿ ಚಿಂತೆ ಚಿ ಚಿಂತೆಯೆ ನೀನೇಕೆ ಹೀಗೆ ನೀನೇಕೆ ಹೀಗೆ 

ಎಲ್ಲಂದರಲ್ಲಿ ಬರುವೆ ಏನೆಂದಿಲ್ಲದೆ ಬರುವೆ 

ಒಂದು ಕ್ಷಣದಲ್ಲೆ ಮಾಯವಾಗಿವೆ 

ಮಾಯವಾದ ಕ್ಷಣದಲ್ಲಿ ನಿನ್ನ ನೆನಪಿಸಲು ಪ್ರಯತ್ನಿಸಿದರೆ 

ನೀನು ಇನ್ನೊಂದು ಚಿಂತೆಯನ್ನು ತಂದು ಕೊಡುವೆ 

ಹೀಗೇ ಬಂದ ಚಿಂತೆಯನ್ನು ಚಿಂತಿಸಲು 

ಹೊರಟರೆ ಇನ್ನೊಂದು ಚಿಂತೆಗೆ ಜನನ ನೀಡುವೆ 

ಚಿ ಚಿಂತೆ ನೀನೇಕೆ ಹೀಗೆ ನೀನೇಕೆ ಹೀಗೆ


ಚೇತನ್, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೬

ಅಮ್ಮ

ನೀ ಒಬ್ಬಳು ಇದ್ದರೆ ಸಾಕು ಜಗವನ್ನೇ ಗೆಲ್ಲುವೆ 

ನೀ ಒಬ್ಬಳಿದ್ದರೆ ಸಾಕು ಲೋಕವನ್ನೇ ಮೆಚ್ಚಿಸುವೆ, 

ನೀ ಯಾವ ಶಕ್ತಿ ನಾ ಕಾಣೆ, ನೀನೆ ನನ್ನ ದೇವರು ನನ್ನಾಣೆ. 

ನೀ ನೀಡಿದ ಆ ಕೈ ತುತ್ತು ಅದುವೇ ನನಗೀಗ ತಾಕತ್ತು. 

ನನಗೋಸ್ಕರ ಮಾಡಿದೆಯಲ್ಲ ತ್ಯಾಗ 

ನನ್ನ ಹೃದಯದಲ್ಲಿ ಇರುತ್ತೆ ನಿನಗೆಂದು ಜಾಗ. 

ಅದೆಂತ ಸಂಬಂಧ ನಮ್ಮಿಬ್ಬರ ಅನುಬಂಧ 

ಜನ್ಮ ಜನ್ಮದ ಋಣಾನುಬಂಧ.

ಆ ಕರುಳಿನ ರಕ್ತ ಸಂಬಂಧ 

ಅದುವೆ ತಾಯಿಯ ಮಗಳ ಸಂಬಂಧ.


ವನ್ಯಶ್ರೀ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೬

ಬೆಳ್ಳಲ್ ತೀರ್ಥ

      ಇದು ಕೊಲ್ಲೂರು ಸಮೀಪದ ಜಡ್ಕಲ್ ಗ್ರಾಮದ ಮೂದುರಿನಲ್ಲಿದೆ. ಬೆಳ್ಳಲ್ ತೀರ್ಥ ಕಾಡಿನ ಮಧ್ಯೆ ಇದೆ. ಅಲ್ಲಿಗೆ ಹೋಗಬೇಕಾದರೆ ಸುಮಾರು ೫ ಕಿಲೋಮೀಟರ್ ಬೇಕಾಗುತ್ತದೆ. ಇಳಿಜಾರು ಗುಡ್ಡ ಬಂಡೆಗಳಿಂದ ನಡೆದು ಹೋಗಬೇಕು. ಅಲ್ಲಿನ ವಿಶೇಷ ಏನೆಂದರೆ ಎಳ್ಳಮಾವಾಸ್ಯೆಯ ದಿನದಂದು ತೀರ್ಥದಲ್ಲಿ ಸ್ನಾನ ಮಾಡಿದರೆ ಎಲ್ಲಾ ಪಾಪ ನಶಿಸಿ ಪುಣ್ಯ ಪ್ರಾಪ್ತವಾಗುತ್ತದೆ ಎಂಬುದು ಹಿಂದಿನ ಜನರ ಒಂದು ನಂಬಿಕೆಯಾಗಿದೆ ಮತ್ತು ಅದನ್ನು ಈಗಿನ ಜನರು ಮುಂದುವರಿಸಿಕೊಂಡು ಹೋಗುತ್ತಾರೆ.

    ಅಲ್ಲಿ ಎತ್ತರದಿಂದ ದುಮುಕುತ್ತಿರುವ ನೀರಿನಿಂದ ಸ್ನಾನ ಮಾಡುತ್ತಾರೆ. ಆ ಜಲಪಾತವನ್ನು ಗೋವಿಂದ ತೀರ್ಥ ಎಂಬ ಹೆಸರಿನಿಂದ ಕರೆಯುತ್ತಾರೆ. ಆ ತೀರ್ಥದಿಂದ ಹಿಂದಕ್ಕೆ ಬಂದು ಮಹಾಗಣಪತಿ ದೇವಸ್ಥಾನದ ದೇವರ ದರ್ಶನವನ್ನು ಪಡೆದು ಅಲ್ಲಿಂದ ಕೆರಾಡಿ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ದೇವರ ದರ್ಶನವನ್ನು ಪಡೆದರೆ ಒಳ್ಳೆಯದಾಗುತ್ತದೆ ಎಂಬ ಕಾರಣದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಬೆಳ್ಳಲ್ ತೀರ್ಥಕ್ಕೆ ಗೋವಿಂದ ಎಂಬ ಹೆಸರು ಬರಲು ಇದೆ ಕಾರಣ. ಆ ಜಲಪಾತದ ಕೆಳಗೆ ನಿಂತು ಮೇಲಕ್ಕೆ ಮುಖ ಮಾಡಿ ಗೋವಿಂದ ಎಂದು ಜಪ ಮಾಡಿದಾಗ ನೀರು ವೇಗವಾಗಿ ಆಶೀರ್ವಾದದ ರೂಪದಲ್ಲಿ ಎಲ್ಲರ ತಲೆಯ ಮೇಲೆ ಸುರಿಯುತ್ತದೆ. ಆ ಕಾರಣಕ್ಕಾಗಿ ಇದೊಂದು ಪ್ರೇಕ್ಷಣೀಯ ಸ್ಥಳವಾಗಿದೆ.

ಪ್ರೇಮಾವತಿ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೬

ವಚನ ರಚನ

ಘನ ಘನ ಕೂಡಿದಡೆ ಗುಣ ಒಂದಾಗುವುದೆ 

ಬೆಂಕಿ ಗಾಳಿ ಒಂದಾದೆಡೆ ಧಹಿಸದೆ ಬಿಡಲುಂಟೆ 

ಮಣಿಯದೆ ಮಲಗಿದಡೆ ಮೃಷ್ಟಾನ್ನ ದೊರೆಯುವುದೆ 

ಅವರಿವರಾಣೆ ಯಾಕಯ್ಯ ಆಣೆ ನಿಮ್ಮಾಣೆ ನೀವು ಕೇಳಿ 

ತನ್ನ ಮನ ತನಗಲ್ಲದೆ ಪರರರಿತು 

ಪರಿವರ್ತಿಸಲಾಗದೆಂದ ಸಿದ್ದ ಶ್ರೀಶೈಲೇಶ್ವರ


ಶಿವನು ಕೊಟ್ಟ ಸುಖದಿ ಬದುಕಿ 

ಶರಣರಿತ್ತ ವಚನಗಳೋದಿ 

ಕರುಳು ಕೊಯ್ದ ಮರುಳರಂಥ 

ಪರರ ಮಾತಿಗೆ ಮರಳಾಗೊ 

ನರರ ನೀವು ಏನೆಂಬಿರಯ್ಯ ಸಿದ್ದ ಶ್ರೀಶೈಲೇಶ್ವರ


ನಾಯಿಗೆ ನೆರೆಮನೆಯ ಒಲೆಯಲ್ಲಾನಂದ 

ಎಮ್ಮೆಗೆ ನಿಂತ ನೀರಿನಲ್ಲಿ ಸುಖದಾನಂದ 

ಹಂದಿಗೆ ಕೊಚ್ಚೆಯ ರೊಚ್ಚೆ ಬಲು ಆನಂದ 

ಹಾಗೆ ಕಪಟ ವೇಷದ ಶರಣಂಗೆ ಸಮಾಜವನ್ನೊಡೆಯುವುದೇ 

ಮಹದಾನಂದವಾಯಿತಯ್ಯ ಸಿದ್ದ ಶ್ರೀಶೈಲೇಶ್ವರ


ಮಾಡಿದವರ ಪಾಪ ಆಡಿದ ಬಾಯಿಗೆಂಬುವರು 

ಕೊಂದವರ ಕರ್ಮ ತಿಂದವರಿಗೆಂಬುವರು 

ನಿಂತ ನೀರಂತೆ ಮಲೆತಿಹರು ಮನುಜರು 

ನಮ್ಮ ಶರಣರೆಸರಲಿ ಸಮಾಜವನೊಡೆವವರು 

ಆಡಿಕೆಯ ಕೊಲೆಗಡುಕರಿವರೆಂದ ಸಿದ್ದ ಶ್ರೀಶೈಲೇಶ್ವರ


ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೬

ನಿವೇಕೆ ಹೀಗೆ? ಅವರೇಕೆ ಹಾಗೆ?

ನಿವೇಕೆ ಹೀಗೆ? ಅವರೇಕೆ ಹಾಗೆ? 

ಮಾತುಗಳು ಮೌನಕ್ಕೆ ಜಾರಿದ್ದು ಹೇಗೆ? 

ನಿವೇಕೆ ಹೀಗೆ? ಅವರೇಕೆ ಹಾಗೆ?


ಮುಗುಳಗೆಯು ಭಾರವಾಯಿತು ಹೇಗೆ? 

ತರಗತಿಯು ಒಡೆದ ಗೂಡಾಯಿತು ಹೇಗೆ? 

ನಿವೇಕೆ ಹೀಗೆ? ಅವರೇಕೆ ಹಾಗೆ? 

ಬಿರುಕಾದ ಮನಸ್ಸನ್ನು ನಾ ಜೋಡಿಸುದಾದರೂ ಹೇಗೆ?


ನಿವೇಕೆ ಹೀಗೆ? ಅವರೇಕೆ ಹಾಗೆ? 

ಮುಗುಲ್ನಕ್ಕು ಮಾತಾಡಿ ಹಾಗೆ! 

ಕೇಳುತ್ತಿದ್ದೆನಲ್ಲ ನಿವೇಕೆ ಹೀಗೆ? ಅವರೇಕೆ ಹಾಗೆ? 

ವಿದಾಯ ಸಮಾರಂಭದ ದಿನ ಅತ್ತು ಕೊರಗುದಾದರೂ ಯಾಕೆ?


ಶ್ರೇಯಸ್ ಬನ್ನಡ್ಕ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೬

ಅವಳ ನೋಟ

ಹೊಳೆಯುವ ನಕ್ಷತ್ರಗಳು ಚಂದ್ರನ ಬೆಳಕಿನೊಂದಿಗೆ 

ಬೆರೆತಂತೆ ಅವಳ ಕಣ್ಣುಗಳಲ್ಲಿ ಕಾಂತಿಯು ತುಂಬಿ 

ಪ್ರೇಮ ಗೀತೆಯನ್ನು ಹಾಡುತ್ತವೆ.


ನೀಲಿ ಮೋಡಗಳ ನಡುವೆ ಹೊಳೆಯುವ ಮಿಂಚಿನಂತೆ 

ಅವಳ ಕಣೋಟದಲ್ಲಿ ಅರಳುವ ಬಯಕೆಯ ಕಥೆಗಳು ನೂರಾರು 

ಗಂಗಾನದಿಯ ದಡದಲ್ಲಿ ಅರಳುವ ಕಮಲಗಳಲ್ಲಿ 

ಅಡಗಿರುವ ಸೌಂದರ್ಯದ ರಹಸ್ಯವೇ ಅವಳ ನೋಟ


ಅವಳ ನೋಟವು ಹಿಮಪಾತಗಳ ಮೇಲೆ 

ಹೊಳೆಯುವ ಪ್ರೀತಿಯ ದೀಪದಂತೆ, 

ಹೃದಯದ ಕಿಟಕಿಯಲ್ಲಿ ನಿಂತಿರುವ ಚಿತ್ರಕಲೆಯಂತೆ.


ಅಕಾಶದಲ್ಲಿನ ಮೋಡಗಳು ತೇಲುತ್ತಿರುವ ಸಮಯದಲ್ಲಿ 

ಅವಳ ಹುಬ್ಬುಗಳ ವಕ್ರರೇಖೆಗಳಲ್ಲಿ ಅಡಗಿರುವ ಮಾಧುರ್ಯವು 

ಚಂದ್ರನ ಬೆಳಕಿನಿಂದ ಬರೆದ ಒಂದು ಪ್ರೇಮ ಪತ್ರವಾಗಿದೆ.


ಅವಳ ನೋಟದಲ್ಲಿನ ಮೌನ ಸಂಗೀತ ಸ್ವರಗಳು 

ಸಂಜೆಯ ಆಕಾಶದಲ್ಲಿ ಬಣ್ಣಗಳ ವೈಭವದಂತೆ 

ಅವಳ ನೋಟದ ಮಾಧುರ್ಯವು ಹೃದಯವನ್ನು ಮುಟ್ಟುತ್ತದೆ.


ಪ್ರಕೃತಿಯ ಕಾವ್ಯದಲ್ಲಿ ಬರೆದ ಪ್ರೀತಿಯ ಸಾಲುಗಳು ಅವಳ ನೋಟ


ಮಹೇಶ ಜಿ.ಕೆ., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೬

 ಪ್ರಕೃತಿಯೊಂದಿಗೆ ನಮ್ಮ ಜೀವನ

      ಪ್ರಕೃತಿಯಲ್ಲಿ ಎಷ್ಟೊಂದು ವೈವಿಧ್ಯತೆ, ಸಣ್ಣ ಹುಲ್ಲಿನಿಂದ ಹಿಡಿದು ಬೃಹಾದಾಕಾರದಲ್ಲಿ ಬೆಳೆದ ಮರದ ಎಲೆಯಿಂದ ಹಿಡಿದು ಅದರ ಕಾಂಡ ಭಾಗ ಹಾಗೂ ಹೂವುಗಳಲ್ಲಿಯು ವೈವಿಧ್ಯತೆಯನ್ನು ನೋಡಬಹುದು. ಪ್ರಕೃತಿಯಲ್ಲಿನ ಹಲವಾರು ಗಿಡ ಮರಗಳಲ್ಲಿನ ವಿಭಿನ್ನ ಎಲೆಗಳು ಗಾಡ ಹಸಿರು ತಿಳಿ ಹಸಿರು, ಕೆಂಪಲೆ, ಹಳದಿ ಎಲೆ. ಈ ಎಲೆ ಆಹಾರವನ್ನು ತಯಾರಿಸಿ ಸಸ್ಯದ ಇತರ ಭಾಗಗಳಿಗೆ ಕಳಿಸುವ ಸಾಮಾರ್ಥ್ಯವನ್ನು ಹೊಂದಿರುತ್ತದೆ. ಕೊನೆಗೆ ಸಾಮಾರ್ಥ್ಯ ಕಳೆದುಕೊಂಡು ಉದುರುತ್ತದೆ. ಎಷ್ಟೊಂದು ವಿಶೇಷತೆ. ಸಸ್ಯಗಳು ತಮಗೆ ಬೇಕಾದ ಆಹಾರವನ್ನು ತಯಾರಿಸುತ್ತವೆ. ಹಾಗೆಯೇ ಈ ಮನುಷ್ಯ ಸಂಕುಲಕ್ಕೆ ತಮ್ಮಿಂದ ಆಹಾರವನ್ನು ನೀಡುವ ವಿಶೇಷತೆಯು ಇವುಗಳಿಗಿದೆ. ಪ್ರಕೃತಿಯಲ್ಲಿ ಇರುವ ಎಷ್ಟೋ ಹೂ, ಹಣ್ಣು, ಮರ ಗಿಡಗಳ ಹೆಸರೆ ನಮಗೆ ತಿಳಿದಿಲ್ಲ. ಹಾಗೆಯೆ ಎಷ್ಟೋ ಅನಾರೋಗ್ಯದ ಸಂದರ್ಭದಲ್ಲಿ ಔಷದಿಯಾಗಿ ಹಲವಾರು ಸಸ್ಯಗಳನ್ನು, ಎಲೆಗಳನ್ನು ಹಾಗೆಯೇ ಬೀಜ, ಹೂಗಳನ್ನು ಬಳಸಿ, ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಂಡು ಜೀವಿಸಬಹುದು ಅಲ್ಲವೇ?. ಕೆಲವು ಹಣ್ಣುಗಳು ವಾಣಿಜ್ಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಬೆಲೆಯನ್ನು ಪಡೆದರೆ ಇನ್ನೂ ಕೆಲವು ಹಣ್ಣು ಕಾಡಿನಲ್ಲಿಯೆ ಪಕ್ಷಿಗಳಿಗೆ ಆಹಾರವಾಗಿ ಮತ್ತೆ ಕೆಲವು ಹಳ್ಳಿಯಲ್ಲಿಯೆ ಉಳಿದುಕೊಂಡಿದೆ ಮತ್ತೆ ಕಾಡಿನಲ್ಲಿನ ವಿಭಿನ್ನ ಹಣ್ಣುಗಳ ರುಚಿಯೆ ಭಿನ್ನ ಈ ರುಚಿಯು ತಂತ್ರಜ್ಞಾನ ಬಳಸಿ ಕಾಯಿಯನ್ನು ಹಣ್ಣು ಮಾಡಿದರೆ ಅದರಲ್ಲಿ ರುಚಿಯು ನೈಸರ್ಗಿಕವಾಗಿ ಹಣ್ಣಾದ ಹಣ್ಣಿನಲ್ಲಿ ಮಾತ್ರ ಇರುವುದು ಇದೇ ಪ್ರಕೃತಿಯ ಶಕ್ತಿ. ಆದರೆ ಮನುಷ್ಯ ಪ್ರಕೃತಿಗೆ ವಿರುದ್ಧವಾದ ಎಷ್ಟು ಕಾಮಗಾರಿಗಳನ್ನು ಮಾಡಿ ಅದರ ನಾಶದತ್ತ ಮುಂದಾಗುತ್ತಿದ್ದಾನೆ. ತನಗೆ ಅವಶ್ಯಕತೆಗೆ ಬೇಕಾದಷ್ಟು ಮಾತ್ರ ಪ್ರಕೃತಿಯಿಂದ ಪಡೆದು ಬದುಕಬೇಕು. ಏಕೆಂದರೆ ಪ್ರಕೃತಿಯ ಉಸಿರು, ಪ್ರಕೃತಿಯಿಲ್ಲದೆ ಯಾವ ಜೀವ ಸಂಕುಲವು ಜೀವಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರಕೃತಿಯ ಜೊತೆಗೆ ಪ್ರಕೃತಿಯ ಉಳಿವಿಗೆ ಪ್ರಯತ್ನಿಸೋಣ.

ಸೌಮ್ಯ ಟಿ.ಎಸ್., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...