‘ಬಿತ್ತಿ’ ಗೋಡೆ ಬರಹವು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 1991ರಲ್ಲಿ ಆರಂಭಗೊಂಡ ವಿದ್ಯಾರ್ಥಿಗಳ ಸೃಜನಶೀಲ ಬರವಣಿಗೆಯ ವೇದಿಕೆ. ಇದುವರೆಗೆ 35 ಸಂಪುಟಗಳನ್ನು ಪ್ರಕಟಿಸಿರುವ ‘ಬಿತ್ತಿ’, ವಿದ್ಯಾರ್ಥಿಗಳ ಸಾಹಿತ್ಯಾಸಕ್ತಿ, ಬರವಣಿಗೆಯ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ನಮ್ಮ ಹಿರಿಯರು ಆರಂಭಿಸಿದ ಬ್ಲಾಗ್ ಪ್ರಕಟಣೆಯ ಪರಂಪರೆಯನ್ನು ಮುಂದುವರಿಸಿಕೊಂಡು, 2025-26 ನೇ ಸಾಲಿನ 35ನೇ ಸಂಪುಟದ ಬರಹಗಳನ್ನು ಈ ಬ್ಲಾಗ್ ಮೂಲಕ ಡಿಜಿಟಲ್ ರೂಪದಲ್ಲಿ ಓದುಗರಿಗೆ ತಲುಪಿಸಲಾಗುತ್ತಿದೆ.
ಬಿತ್ತಿ ಸಂಬಂಧಿಸಿದ links
ಮಂಗಳವಾರ, ಅಕ್ಟೋಬರ್ 28, 2025
ಸಂಪಾದಕ ಮಂಡಳಿ
ಸೋಮವಾರ, ಅಕ್ಟೋಬರ್ 27, 2025
ಸಂಚಿಕೆ - ೦೧
ಸಂಪಾದಕೀಯ
ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ 'ಬಿತ್ತಿ' ಗೋಡೆ ಬರಹವು ೧೯೯೧ರಲ್ಲಿ ಪ್ರಾರಂಭಗೊಂಡು, ಇಂದಿನವರೆಗೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಸತತವಾಗಿ ಮುಂದುವರಿಯುತ್ತಿದೆ. ಇತ್ತೀಚೆಗೆ ೩೪ ಸಂಪುಟಗಳನ್ನು ಪ್ರಕಟಿಸಿಕೊಂಡಿರುವ ಈ ವೇದಿಕೆ, ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಪ್ರತಿಭೆ ಮತ್ತು ಕೌಶಲ್ಯಗಳನ್ನು ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದೆ.
ನಮ್ಮ ಬರಹಗಳ ಕಿರು ವೇದಿಕೆಯಂತೆಯೇ ಕಾರ್ಯನಿರ್ವಹಿಸುವ ಈ ಬಿತ್ತಿ ಬರಹವು ನಮ್ಮಲ್ಲಿ ಒಬ್ಬ ಕವಿ, ಸಾಹಿತ್ಯಕಾರ ಅಥವಾ ವಿಮರ್ಶಕನನ್ನು ರೂಪಿಸಲು ಸಹಾಯಕವಾಗಿದೆ. ಅಯಸ್ಕಾಂತದ ಹಾಗೆ ಮನಸ್ಸಿನ ಎಲ್ಲ ಭಾವನೆಗಳನ್ನು ಸೆಳೆದು ಹಿಡಿ ಬಿಡಿಗಳನ್ನು ಕೈಗಳ ಮೂಲಕ ಬರಹದ ರೂಪದಲ್ಲಿ ಚಿತ್ರಿಸಿ, ಸಮಗ್ರತೆಗೆ ಒಂದು ರೂಪ ನೀಡುವ ಈ ಬಿತ್ತಿ ಬರಹವು ಒಂದು ಕಿರು ವೇದಿಕೆಯಾಗಿದೆ. ಅಕ್ಷರದಿಂದ ಪದ, ಪದದಿಂದ ನುಡಿ, ನುಡಿಯಿಂದ ಕಾವ್ಯ ಹೇಗೆ ಸೃಷ್ಟಿಯಾಗುವುದೋ ಹಾಗೆಯೇ ನಿಮ್ಮೆಲ್ಲರ ಉತ್ತಮ ಬರಹಗಳಿಂದ ಈ ಕಿರು ವೇದಿಕೆಯು ಸಂಪೂರ್ಣಗೊಳ್ಳುತ್ತದೆ.
ಹಿರಿಯರು ಸೃಷ್ಟಿಸಿದ ಈ ವೇದಿಕೆಯಲ್ಲಿ ಸಾಹಿತ್ಯ ಬರವಣಿಗೆಯ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡು ಇಂದು ಸಾಹಿತಿಗಳಾಗಿ ಸಾಧನೆ ಮಾಡಿದವರಲ್ಲಿ ಹಲವರಿದ್ದಾರೆ. ಅಂತಹ ಈ ವೇದಿಕೆ ಕೇವಲ ಸ್ನಾತಕೋತ್ತರ ಕನ್ನಡ ವಿಭಾಗದ ವಿದ್ಯಾರ್ಥಿಗಳಿಗೆ ಅಲ್ಲದೆ ಕ್ಯಾಂಪಸ್ಸಿನ ಇತರೆ ವಿಭಾಗಗಳ ವಿದ್ಯಾರ್ಥಿಗಳಿಗೂ, ಸಂಶೋಧನಾ ವಿದ್ಯಾರ್ಥಿಗಳಿಗೂ ಪೀಠದ ಸಂಶೋಧಕರಿಗೂ ಸಾಹಿತ್ಯಿಕ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.
ಪ್ರತಿ ವರ್ಷವೂ ಬಿತ್ತಿ ಬರಹ ಹೊಸ ರೂಪವನ್ನು ಪಡೆದುಕೊಳ್ಳುತ್ತ ಬಂದಿದೆ. ಇದೇ ರೀತಿಯಲ್ಲಿ ಈ ವರ್ಷವೂ ಹೊಸ ಪ್ರಯತ್ನಗಳನ್ನು ಕೈಗೊಂಡಿದ್ದೇವೆ - ವ್ಯಂಗ್ಯ ಚಿತ್ರಗಳ ಚಿತ್ರಣ, ಪುಸ್ತಕ ಪರಿಚಯ ಮತ್ತು ವಿಮರ್ಶೆ, ವಾಚಕರ ವಾಣಿ, ಕಾರ್ಯಕ್ರಮಗಳ ವರದಿ, ಸ್ಪರ್ಧೆಗಳ ಆಯೋಜನೆ, ವಿಚಾರ ಸಂಕಿರಣ ಹಾಗೂ 'ಬಿತ್ತಿ' ಸಂಪುಟವನ್ನು ಡಿಜಿಟಲ್ ಮಾದರಿಯಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ರೂಪಿಸಿದ್ದೇವೆ.
ಈ ಎಲ್ಲ ಕಾರ್ಯಗಳ ಯಶಸ್ಸಿಗೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ. ನಿಮ್ಮ ಬರಹಗಳು ಈ ವೇದಿಕೆಯ ಶಕ್ತಿ - ಬನ್ನಿ, ಅಕ್ಷರಗಳ ಮೂಲಕ ಆ ಶಕ್ತಿಯನ್ನು ಹಂಚಿಕೊಳ್ಳೋಣ.
ಉಪಸಂಪಾದಕ, ಬಿತ್ತಿ ಸಂಪಾದಕ ಮಂಡಳಿ
ಸಂಚಿಕೆ - ೦೧
ಪ್ರೇಮ ಖೈದಿ
ನಿನ್ನ ರೂಪದ ನೆನಪಿನ
ಸ್ವರೂಪದ ನೀಲಾಂಜನಕ್ಕೆ
ನಾ ಸೋತಂತಿದೆ ನಿನ್ನ ನಿಲುವಿನ
ನಿರಾಳತೆಯನ್ನು ಕಾಣಲು
ನಾ ಪ್ರೇಮಕೈದಿಯಾದಂತೆ....
ನನ್ನ ಭಾವನೆಗಳ ಭೂಮಿಯಲ್ಲಿ
ನಿನ್ನ ಅಂದವು ಗಂಧದ
ಸುಗಂಧದಂತೆ ಸವಿಯಾಗಿ ಸೇರಲು
ನನ್ನೊಳಗಿನ ಮನಸ್ಸಿಗೆ ನಿನ್ನ ಸ್ವಾಗತಕ್ಕೆ
ನಾ ಪ್ರೇಮಕೈದಿಯಾದಂತೆ....
ಎಲ್ಲೋ ಇರುವಂತಿದೆ ನಿನ್ನ
ರೂಪದ ಸೊಗಡು ಮತ್ತೆ
ಬರುವಂತಿದೆ ನಾ ನಿನ್ನಲ್ಲಿಗೆ
ನಿನ್ನ ಮಾತುಗಳು ಕೇಳಿಸಿಕೊಳ್ಳಲು
ನಾ ಪ್ರೇಮಕೈದಿಯಾದಂತೆ....
ನಿನ್ನ ಬಯಕೆಗಳಿಗೆ ಬಹುಮಾನವಾಗಿ
ನಾ ಸಿಗಲು ಈ ಪೂರ್ಣ ಜೀವನದ
ಪರಿಪೂರ್ಣತೆಯನ್ನು ಪ್ರೀತಿ ಎಂಬ
ಪದವಿ ಕೊಟ್ಟು ಪೂರೈಸಲು
ನಾ ಪ್ರೇಮಕೈದಿಯಾದಂತೆ....
ನನ್ನ ಮನಸ್ಸಿನ ಸತಿ ನೀನಿರಲು
ನಿನ್ನ ಕನಸಿನ ಪತಿ ನಾನಾಗಲು
ನಾ ಪ್ರೇಮಿಯಾದಂತೆ.....
ಮಲ್ಲಿಕಾರ್ಜುನ ಹ ಕೆರೂಡಿ, ಎಂ.ಎಸ್.ಸಿ. ಭೂಗೋಳಶಾಸ್ತ್ರ
ಸಂಚಿಕೆ - ೦೧
ಅಪ್ಪನ ಅರಗಿಣಿ
ಅಪ್ಪನೆಂದರೆ ಮುಗಿಲೆತ್ತರದ ವೃಕ್ಷವಂತೆ
ನಾ ಬದುಕಿದೆ ಆ ವೃಕ್ಷದ ನೆರಳಿನಂತೆ
ಎನಗೆ ನೆರಳಾದವನು ಅವನಂತೆ
ಅವನಿಂದಲೇ ಎನ್ನ ಬದುಕು ಅರಳಿದಂತೆ
ನಾ ಆತನ ಅರಗಿಣಿ ಎಂದವನು
ಅರಗಿಣಿಗೆ ನೆರಳಾಗಿ ಉಳಿದನಂತೆ
ಆತನ ಮಾತು ಎನ್ನ ಕಿವಿಯಲ್ಲಿರಲು
ಆತನ ನೋಟ ಎನ್ನ ಕಣ್ಣಂಚಲ್ಲಿ ನುಸುಳಿರಲು
ಬಲು ಕೋಪಿಷ್ಟನಂತೆ
ಆತನ ಕೋಪವೆ ಎನ್ನ ಕೆಡದೆ ಉಳಿಸಿದಂತೆ
ನೀ ಏನೇ ಹೇಳಲಂತೆ ನಾ ತಲೆ ತಗ್ಗಿ ಕೇಳುವೆನಂತೆ
ಏಕೆ ಎನ್ನುವೆಯಂತೆ
ಏನೆಂದು ಹೇಳಲಯ್ಯ
ಈ ದೇಹವೇ ನಿನ್ನ ಭಿಕ್ಷೆ ಅಯ್ಯ
ನಾ ಉಟ್ಟ ಬಟ್ಟೆ ನಿನ್ನದಂತೆ
ನಾ ತೊಟ್ಟ ಚಪ್ಪಲಿ ನಿನ್ನದಂತೆ
ನಾ ತೊಟ್ಟ ವಸ್ತುವೆಲ್ಲ ನಿನ್ನದಂತೆ
ನಾ ಆ ಭಿಕ್ಷೆಯನ್ನು ತೊಟ್ಟ ನಿನ್ನ ಅರಗಿಣಿಯಂತೆ
ನೀ ಪಟ್ಟ ಶ್ರಮದ ಕೂಲಿ ನಾ ಉಂಡೆನಂತೆ
ನೀ ಪಟ್ಟ ಶ್ರಮದಲಿ ನಾ ಬದುಕಿದೆನಂತೆ
ಇನ್ನಾದರೂ ಸುಮ್ಮನಿರುವೆಯಾ
ಈ ಅರಗಿಣಿಯ ಮರಿಯಂತೆ
ನಿನ್ನ ಬೆಚ್ಚಗೆ ಇಡುವೆನಂತೆ
ನೀ ಕೊಟ್ಟ ಬದುಕೇ ನಿನ್ನದಂತೆ
ದಿವ್ಯಶ್ರೀ. ಎ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಸಂಚಿಕೆ - ೦೧
ವಿಶ್ವವಿದ್ಯಾನಿಲಯದ ವತಿಯಿಂದ ಉಪನ್ಯಾಸ ಮಾಲಿಕೆ ಉದ್ಘಾಟನೆ
“ತಂತ್ರಜ್ಞಾನದಿಂದ ಕನ್ನಡ ಭಾಷೆ ಸೊರಗುತ್ತಿದೆ” ಪ್ರೊ. ವಿವೇಕ ರೈ
ಮಂಗಳೂರು : 'ತಂತ್ರಜ್ಞಾನದಿಂದ ಕನ್ನಡ ಭಾಷೆ ಸೊರಗುತ್ತಿದೆ, ಹೊಸ ತಲೆಮಾರಿನ ಕವಿಗಳು ಕಾವ್ಯಗಳಲ್ಲಿ ಶಬ್ದಗಳನ್ನು ಕುಣಿಸುವ ಪ್ರಯತ್ನ ಮಾಡಬೇಕು' ಎಂದು ಪಂಪ ಪ್ರಶಸ್ತಿ ಪುರಸ್ಕೃತ ವಿದ್ವಾಂಸರಾದ ಪ್ರೊ.ಬಿ.ಎ. ವಿವೇಕ ರೈ ಅವರು ಹೇಳಿದರು.
ಅವರು ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಮಂಗಳಗಂಗೋತ್ರಿ ಇದರ ಸಹಭಾಗಿತ್ವದಲ್ಲಿ ಸೋಮವಾರ ಇಲ್ಲಿನ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ, 'ಶ್ರೀಸಾಮಾನ್ಯರಿಗೆ ಪ್ರಾಚೀನ ಕನ್ನಡ ಸಾಹಿತ್ಯ ಸರಣಿ' ಉಪನ್ಯಾಸ ಮಾಲಿಕೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಬಳಿಕ ವಿವೇಕ ರೈ ಅವರಿಂದ ಪಂಪನ ಕಾವ್ಯಗಳ ಉಪನ್ಯಾಸ ನಡೆಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಕೆ. ರಾಜು ಮೊಗವೀರ, ಹಣಕಾಸು ಅಧಿಕಾರಿಗಳಾದ ಶ್ರೀ ಪಂಚಲಿಂಗಸ್ವಾಮಿ, ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಂಶುಪಾಲರಾದ ಪ್ರೊ. ಗಣಪತಿ ಗೌಡ ಉಪಸ್ಥಿತರಿದ್ದರು. ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ನಾಗಪ್ಪ ಗೌಡ ಸ್ವಾಗತಿಸಿದರು. ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ರಕ್ಷಾ ಎಸ್.ಎಚ್. ಪೂಜಾರಿ ಅವರ ತಂಡ ವೀಣಾವಾದನ ನಡೆಸಿಕೊಟ್ಟರು.
ವರದಿಗಾರ - ಸಲೀಂ ಸುಳ್ಯ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಸಂಚಿಕೆ - ೦೧
ಶ್ರಾವಣದ ಸುಗ್ಗಿ
ಹಡ್ಡಾಕಿ ದೂರ ದಬ್ಬಿದ್ರೂ ಭೂಮಿತಾಯಿ ದಬ್ಬಂಗಿಲ್ಲ ಅಂಬ ಮಾತೈತೆ. ಅಂಗೆ ನಂಬಿ ಬಕ್ಕೋರು ಬಾಳ್ಮಂದಿ. ಮನ್ಷ ಹುಟ್ಟಿ ಸಾಯತನ ಅನುಬೊಸದು ಬಾಳೈತೆ "ಬರವ್ವೋ ಬರಿ ಜಲ್ದಿ" ಅಂದ್ಕಂತ ತೆಲೆ ಮ್ಯಾಗ ಬುತ್ತಿ ಇಟ್ಟು ಸರಸರ ಬಂದು ಟ್ಯಾಕ್ಟ್ರಿ ಏರಿದ್ಲು ಗಂಗಮ್ಮ.
ಇದೇನು ಅನ್ಕಂಡ್ರ, ಇದು ಸುಗ್ಗಿ ಬದ್ಕ ಮಾಡೊರ ಮಾತು. ಆಶಾಡಲಿಂದ ಶ್ರಾವಣತ್ತನ ಹಚ್ಚುವ(ಭತ್ತ ನಾಟಿ ಮಾಡುವ) ಕಾಲ ನಸುಗಿನ್ಯಾಗ ಎದ್ದು ಮುಸುಗು ಸರಿ ವತ್ಗೆ ಅಡ್ಗಿಮಾಡೋರು. ಸೂರ್ಯ ಸೀಳೊವತ್ಗೆ ಮೈ - ಕೈ ಮುಗಿಸಿ. ಪೂಜಿ ಮಾಡಿ ಓಣ್ಯಾಗ ಒತ್ತಟಿಲಿದ್ದ ಬಂಟದವ್ರನೆಲ್ಲನೊ ಕರ್ದು, ಗಾಡಿ ಏರೊರು, ರೈತ್ರು ಅಂದ್ರೇನೆ ಅಂಗೆಲ್ವ ಕೊಣ್ತುಂಬ ನಿದ್ದೆ ಇಲ್ದ ಈ ಸುಗ್ಗಿ ಕಾಲ್ದಾಗ ಎಣ್ಣು-ಗೊಂಡು ಸರಿಬರೆ ಬದ್ಕು ಮಾಡೋರು. ಅಚ್ಚ ಕಾಲ ಬಂದ್ರೆ ಸಾಕು. ಎಂತ ಹುಮ್ಮಸ್ಸು, ಏನ್ ಆನಂದ ಅದೆಲ್ಲ ಹೇಳಕ ಬಾಯೇ ಸಾಕಾಗಕಲ್ಲ.
ಬಂಟದಾಕಿ(ಗುಂಪಿನ ನಾಯಕಿ) ಗಂಗವ್ವ ಸರಿ ಸರ್ರಿ ಅನ್ನಂತ ಎಲ್ಲಾರ ಗಾಡ್ಯಾಗ ಕುಂದ್ರಿಸಿ. ತನಿಗಿ ಕುಂದ್ರಾಕಿಲ್ಲ ಹೋಗ ಗಾಡ್ಯಾಗ ನಿಂತೆ ಎಲ್ಲಾರಿಗೆ ಹುಮ್ಮಸ್ಸು ತುಂಬಾಕಿ. ಅಲ್ಯಾವ ಜಾತಿಲ್ಲ, ಧರ್ಮಿಲ್ಲ, ಸೊಣ್ಣೂರು, ದೊಡ್ಡರು ಅಂಬದು ಮೊದ್ದೇ ಇಲ್ಲ ಬದು ಮಾಡಾಕೂ ಮೊದ್ಲು ಇವು. ಅಮ್ಮ ಗಂಗವ್ವನ ಬಂಟ ಅಂದ್ರೆ ಸುತ್ತಳ್ಳಿಗೆಸ್ರು, ನಾರಚೊಗಡ್ಯಾಗ ನೋಡೋಕು ಅವು ಪರಾಕ್ರಮ, ಹುಮ್ಮಸ್ಸು. ಐಕ್ಯತೆ, ಆನಂದ, ಸಹಕಾರ, ಪದಾಡಾದು, ಒಡುಪೇಳದು, ನಕ್ಲಿಕತೆ ಏಳದು. ತಂಗಾಳ್ಯಾಗವು ಕುಣ್ಣಟ, ಗುದ್ದಾಟ ಎಲ್ಲಾನೂ ಸರೆಬರಿ ಆಗಿರ್ತತ.
ಉಂಬವತ್ತಾಗ ಸುತ್ತೂರ ಕುಂತು ಅತ್ತಾರ್ಮಂದಿ ಬುತ್ತಿ ಬಿಚ್ಚಿ ಎಲ್ಲಾ ಒಮ್ಮೆಲೆ ಕಲ್ಪಿ, ವಡ್ಡಿನ ಮ್ಯಾಗ ಕುಂತ ಗೊಂಡಿಸಿಗಿ ನೀಡಿಕೊಟ್ಟು, ಬಂಡಿಜಾಡ್ಯಾಗ ವುಡುಗ್ರು ಎಣ್ಮಕ್ಕು ಸುತ್ತ ಕುಂತು. ಚೂಣ್ಯಕ ಜ್ವಾಳುದ್ರಟ್ಟಿ ಈ ಚಚ್ಚೆರಟ್ಟಿ ಜತಿಗಿ ಎಲ್ಲಾರು ತಂದ ವಿವಿಧ ತರಕಾರಿ ಪಲ್ಲೆನ ತಿಂಬದಂದ್ರ ಬಲು ಚಂದ ಆಮ್ಯಾಗ ಬಟ್ಯಾಗ ಕಲ್ಲಿದನ್ನ ಅದ್ರುಕೂಡ ಹಸೆ ಮೆಣಸಿನಕಾಯಿ ಕಡೆದಂದ್ರೆ, ಭಾರಿ ಆನಂದ ಕಾರ ಆದ್ರೂ ನಿರ್ ಕುಡಿಲಾರರು. ಒಬ್ಬೊಬ್ಬರಿಗಿ ಗಾಳಿಗೆತ್ತೊರು, ನಲ್ಲಿ ಮಾಡೊರು, ಅಲ್ಲವ್ರ ತಣ್ಣಗೆ ಬೀಸೊ ಗಾಳಿಕಿನ ಸ್ವತಂತ್ರರು ಮತ್ತೆ ಅವರ ಆನಂದ ಕಂಡು ಗಾಳಿ-ಸೂರ್ಯಗುಡ ಅಸೂಯೆಪಟ್ಟು ಅವರ ಪ್ರಭಾವ ಹೆಚ್ಚಿಸಿದಂಗೆ ಕಾಣುತ್ತೆ.
ಗುಡ್ಡಿ ಬಟ್ಕ ಮಾಡೊರಿವು ಒಂದೊಂದಿನ ಮುಗೆ ವಲ ಇದ್ರೆ ರಾತ್ರಿ ಹೊತ್ತಾದ್ರನ್ನ ಬುಡದಿಲ್ಲ. ಗಾಡಿ ಲೈಟ್ ಆಕಿ ಅದೇ ಬೆಳ್ಳನ್ಯಾಗ ನಾರಚೂರು. ಒತ್ತು ರಾತ್ರಿ ಎಂಟಾದ್ರು ಸರೆ ಅತ್ತಾದ್ರು ಸರೆ ಆಗಿಮಾಡತನ ಬುಡ ಮಾತೇ ಇಲ್ಲ. ಅದೇ ಹುಮ್ಮಸ್ಸುಲ್ಲೆ ಬದು ಮಾಡಿ ಸರಿವತ್ತಾಗ ಮನಿಗಿ ಬಂದು ಮನೆಬದ್ದೆಲ್ಲ ಬ್ಯಾಸಿಲ್ಲೆ ಮಾಡಿ ಉಂಡು ನೆಮ್ಮಿಲಿದ್ದ ನಿದ್ದೆ ಮಾಡೊರು. ಈ ಬಂಟದವನ್ನ ನೋಡಿ ನನಗೆ ನೆನಪಾಗಿದ್ದು, ಜಗತ್ತು ಹಸಿದಿರುವುದು ಅನ್ನಕ್ಕಲ್ಲ. ಪ್ರೀತಿ, ಭ್ರಾತೃತ್ವ, ಸಹಕಾರ, ಶಾಂತಿಗಾಗಿ ಎಂದು ಅನ್ನಿಸಿತು.
ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಸಂಚಿಕೆ - ೦೧
ನಾ ಕಂಡ ಕರ್ಣ......
ಕರ್ಣ ನಿಜವಾದ ನಾಯಕ ಸರಿ, ಆದರೆ ನಾಯಕ ಯಾರಿಗೂ ತನ್ನನ್ನು ಅರ್ಪಿಸಿಕೊಳ್ಳಬಾರದು.
ಕರ್ಣ ತನ್ನ ಗೆಳೆಯನ ಗೆಳೆತನಕ್ಕೆ ದ್ರೋಹ ಮಾಡದೆ ಇದ್ದ ಸರಿ.
ಆದರೆ ಇಡೀ ಸಮಾಜಕ್ಕೆ ದ್ರೋಹ ಮಾಡಿದ.
ಕರ್ಣ ಒಬ್ಬ ಶ್ರೇಷ್ಠ ಬಿಲ್ಲುಗಾರ ಸರಿ, ಆದರೆ ಆ ವಿದ್ಯೆಯನ್ನು ಅಧರ್ಮದ ಮಾರ್ಗದಿಂದ ಪಡೆದ.
ಕರ್ಣನಿಗೆ ತುಂಬಾ ಅನ್ಯಾಯ ಆಗಿದೆ ಸರಿ, ಆದರೆ ದುರ್ಯೋಧನ ಅವನಿಗೆ ಎಷ್ಟು ನ್ಯಾಯ ಕೊಡಿಸಿದ.
ಕರ್ಣ ಕ್ಷತ್ರಿಯನಾಗಿದ್ದರೂ ಸೂತನಾಗಿ ಬದುಕಬೇಕಾಯಿತು ಸರಿ, ಆದರೆ ಸೂತ ಅನ್ನೋದು ಕೀಳು ಜಾತಿ ಎಂದು ತಾನು ಯಾಕೆ ನೋವು ಅನುಭವಿಸಬೇಕು. ತನ್ನಲಿರೋ ಜ್ಞಾನ, ಬಲದಿಂದ ಸೂತರನ್ನು ಉತ್ತಮ ಮಾಡೋ ಯಾವ ಪ್ರಯತ್ನವನ್ನೂ ಮಾಡಲಿಲ್ಲ.
ಕರ್ಣನಿಗೆ ಕೃಷ್ಣ ಜನ್ಮ ರಹಸ್ಯವನ್ನು ಕೊನೆ ಕಾಲಕ್ಕೆ ಹೇಳಿದ ಸರಿ,
ಆದರೆ ಮೊದಲೇ ಹೇಳಿದ್ದರೆ ಕರ್ಣ ಏನು ಮಾಡುತ್ತಿದ್ದ? ತನ್ನ ಸ್ನೇಹಿತನನ್ನು ಬಿಟ್ಟು ಬರುತ್ತಿದ್ದನೇ? ಇಲ್ಲ.....
ನನ್ನ ಕಲ್ಪನೆಯಲ್ಲಿ ಮಹಾಭಾರತದಲ್ಲಿ ಕರ್ಣನ ಪಾತ್ರದಲ್ಲಿ ಕಂಡುಬಂದ ಚಿಕ್ಕ ತಪ್ಪುಗಳು.
ತಪ್ಪು ಏನೋ ಚಿಕ್ಕದೆ, ಆದರೆ ಅದರ ಪರಿಣಾಮ ತುಂಬಾ ದೊಡ್ಡದು.
ಈ ತಪ್ಪುಗಳ ಹೊರತಾಗಿ ನೋಡಿದರೆ, ಕರ್ಣ ಮಹಾನ್ ಯೋಧ.
ಅರ್ಜುನ ಕರ್ಣನನ್ನು ಸೋಲಿಸೋದು ಅಸಾಧ್ಯ.
ಕರ್ಣನಿಂದ ಅರ್ಜುನ ಸಾಯುವನು ಎನ್ನೋ ಭಯ ಸ್ವತಃ ಕೃಷ್ಣನಿಗೂ ಇತ್ತು. ಆದ್ದರಿಂದ ಕರ್ಣನನ್ನು ಸಾಯಿಸಲು ಕೃಷ್ಣ ಅಧರ್ಮದ ಮೂಲಕ ಪ್ರಯತ್ನಿಸಿದ್ದು.
ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಸಂಚಿಕೆ - ೦೧
ನವಿಲು ಗರಿ
ಗೌರಿ ಏಳನೇ ಕ್ಲಾಸ್ನಲ್ಲಿ ಕಲಿಯುತ್ತಿದ್ದ ಹುಡುಗಿ. ಆಕೆ ಶಾಲೆಗೆ ಯಾವಾಗಲೂ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಳು. ಗೌರಿ ಹೋಗುತ್ತಿದ್ದ ದಾರಿಯಲ್ಲಿ ನವಿಲುಗಳ ಹಿಂಡು ಯಾವಾಗಲೂ ಅವಳಿಗೆ ಸಿಗುತ್ತಿತ್ತು. ಆ ನವಿಲುಗಳ ಹಿಂಡು ಕಂಡಾಗ ಸಂತೋಷ ಕೂಡ, ಅದೇ ರೀತಿ ಬೇಸರವಾಗುತ್ತಿತ್ತು. ಯಾಕೆಂದರೆ ನವಿಲುಗಳ ಬಳಿ ಅಷ್ಟೊಂದು ಗರಿಗಳು ಇದ್ದರೂ ಕೂಡ ಒಂದು ನವಿಲು ಗರಿಯನ್ನು ಉದುರಿಸಿಕೊಂಡು ಹೋಗುತ್ತಿರಲಿಲ್ಲ ಅದು ಆಕೆಗೆ ತುಂಬಾ ಬೇಸರ ಉಂಟುಮಾಡಿತು. ಗೌರಿ ಶಾಂತಿಯಿಂದ ಮನೆಗೆ ಬಂದ ತಕ್ಷಣ ಆ ಬೇಸರವನ್ನು ಆಕೆಯ ಅಮ್ಮನಲ್ಲಿ ವ್ಯಕ್ತಪಡಿಸುತ್ತಿದ್ದಳು.
ದಿನಾಲೂ ಶಾಲೆಗೆ ಹೊರಡ ಹೊರಡಿಕೊಂಡು ಗೌರಿ ಶಾಲೆಗೆ ಹೊರಟಳು. ಆಕೆ ಯಾವಾಗಲೂ ಹೋಗುವ ದಾರಿಯಲ್ಲಿ ಮತ್ತೆ ನವಿಲುಗಳ ಹಿಂಡು ಸಿಕ್ಕಿತ್ತು. ಆಕೆ ಮನಸ್ಸಿನಲ್ಲೇ ನನಗೆ ಇವುಗಳನ್ನು ನೋಡಿ ಬೇಸರ ಪಡುವ ಕೆಲಸ ಎಂದುಕೊಂಡು. ತನ್ನ ಪಥವನ್ನು ನೋಡಿಕೊಂಡು ಚಲಿಸಿದಳು. ಹೀಗೆ ಮುಂದೆ ಹೋಗುವಾಗ ಆಕೆಗೆ ಒಂದು ನವಿಲು ಗರಿ ಸಿಕ್ಕಿತು. ಆಕೆ ಆ ಗರಿಯನ್ನು ಕಂಡು ಸಂತೋಷದಿಂದ ಕುಣಿದಾಡಿದಳು. ಅದು ಅಲ್ಲದೆ ಅದನ್ನು ಎತ್ತಿಕೊಂಡು ಶಾಲೆಗೆ ಹೋಗಿ ತನ್ನ ಸಂತೋಷವನ್ನು ಸ್ನೇಹಿತರಿಗೆ ಹಾಗೂ ಟೀಚರ್ ಎಲ್ಲರಿಗೂ ತನ್ನ ಸಂತೋಷವನ್ನು ವ್ಯಕ್ತಪಡಿಸಿದಳು. ಸಂಜೆ ಮನೆಗೆ ಬಂದ ತಕ್ಷಣ ಅಮ್ಮನ ಬಳಿ ಓಡಿಕೊಂಡು ಹೋಗಿ ತನ್ನ ಸಂತೋಷವನ್ನು ವ್ಯಕ್ತಪಡಿಸಿದಳು.
ಗೌರಿ ಆ ನವಿಲು ಗರಿಯನ್ನು ಗೋಡೆಗೆ ಅಂಟಿಸಬೇಕೆಂದು ಯೋಚಿಸಿ ಅದಕ್ಕೆ ಅಂಟಿಸಲು ಅಂಟಿಸುವ ಪದಾರ್ಥವನ್ನು ತಂದು ಗರಿಗೆ ಹಚ್ಚಿಸಿ ಗೋಡೆಗೆ ಅಂಟಿಸಿಯೇ ಬಿಟ್ಟಳು. ಆಕೆಗೆ ದಿನಾಲೂ ಬೆಳಿಗ್ಗೆ ಶಾಲೆಗೆ ಹೊರಡುವಾಗ ಅದನ್ನು ನೋಡಿಕೊಂಡು ಹೊರಡುವುದು ಆಕೆಯ ದಿನನಿತ್ಯದ ಕಾರ್ಯವಾಯಿತು. ಅದನ್ನು ನೋಡುವಾಗ ಆಕೆಗೆ ಸಂತೋಷವಾಗುತ್ತಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಉದ್ದವಾಗಿದ್ದ ಆ ನವಿಲು ಗರಿಯು ಇಂದು ಸಣ್ಣದಾಗಿ ಕಾಣುತ್ತಿತ್ತು. ಅದನ್ನು ಗಮನಿಸಿದ ಗೌರಿ ಇದು ಹೇಗೆ ಸಾಧ್ಯ? ಗರಿ ಸಣ್ಣದಾಗುತ್ತಿದೆಯಲ್ಲ ಎಂದು ಯೋಚಿಸುವಾಗ ಇದು ನಮ್ಮ ವಠಾರದ ಮಕ್ಕಳ ಕೆಲಸ ಇರಬೇಕು. ಆ ನವಿಲು ಗರಿಯನ್ನು ಕತ್ತರಿಸಿ ಇಡಬೇಕೆಂದು ಯೋಚಿಸಿದಳು. ಅದನ್ನೇ ಎನ್ನಿಸಿಕೊಂಡು ಶಾಲೆಗೆ ಹೊರಟಳು.
ಮರುದಿನ ಶಾಲೆಗೆ ರಜೆ ಹಾಕಿ ಇದು ಮಕ್ಕಳ ಕೆಲಸವೇ, ಬೇರೆ ಯಾರದೆಂದು ಹುಡುಕಬೇಕು ಎಂದು ಯೋಚನೆ ಮಾಡಿ ಶಾಲೆ ರಜೆ ಹಾಕಿದಳು. ಆ ನವಿಲು ಗರಿಯ ಪಕ್ಕದ ಮೂಲೆಯಲ್ಲಿ ಕುಳಿತುಕೊಂಡು ಗಮನಿಸುತ್ತಿದ್ದಳು. ಆದರೆ ಸಂಜೆ ತನಕ ಯಾವ ಮಕ್ಕಳು ಬರಲೇ ಇಲ್ಲ. ಗೌರಿ ಇದು ಯಾರ ಕೆಲಸ ಇರಬೇಕೆಂದು ಚಿಂತಿಸಿದ್ದಳು ಮತ್ತೆ ಮರುದಿನ ಶಾಲೆಗೆ ಹೊರಡುವಾಗ ನವಿಲು ಗರಿಯನ್ನು ಜೇಡ ತಿನ್ನುತ್ತಿತ್ತು. ಇದನ್ನು ನೋಡಿದ ಆಕೆಗೆ ಆಶ್ಚರ್ಯವಾಯಿತು.
ಈ ಜೇಡ ಗರಿಯನ್ನು ತಿನ್ನುತ್ತದೆ ಎಂದು ಅದನ್ನು ತೆಗೆದು ಒಳಗೆ ಇಡುವ ಎಂದು ಗರಿಯನ್ನು ಎಳೆದಳು. ಆದರೆ ಆಕೆ ಎಳೆದ ರಭಸದಲ್ಲಿ ಗರಿ ಎರಡು ಭಾಗವಾಗಿ ಒಂದು ಭಾಗವು ಗೌರಿಯ ಕೈಯಲ್ಲಿ ಮತ್ತೊಂದು ಭಾಗ ಗೋಡೆಯಲ್ಲೇ ಉಳಿಯಿತು. ಗೌರಿಗೆ ತುಂಬಾ ಬೇಸರವಾಗಿ ಕೂಗಿಯೇ ಬಿಟ್ಟಳು.
ಗೋಡೆಯಲ್ಲಿ ಉಳಿದಂತಹ ಗರಿಯನ್ನು ಜೇಡ ತಿಂದು ತಿಂದು ಖಾಲಿ ಮಾಡಿತ್ತು. ಗೌರಿಗೆ ತಾನು ಇಷ್ಟಪಟ್ಟು ತಂದ ಗರಿಯು ಇಲ್ಲದಂತಾಯಿತು. ನನಗೆ ಗರಿಯು ಸಿಗುವುದಿಲ್ಲ. ಆದ್ದರಿಂದ ನಾನು ನವಿಲುಗಳ ಹಿಂಡು ಕಂಡು ಖುಷಿಪಡುತ್ತೇನೆಂದು ಯೋಚಿಸಿ ಸಂತೋಷವಾಗಿದ್ದಳು.
ಪಲ್ಲವಿ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಸಂಚಿಕೆ - ೦೧
ಮೌನ
ಸಮಯದ ಅರಿವಿಲ್ಲದೆ
ಹೊತ್ತಿಗೆ ಗುರಿಯಿಲ್ಲದೆ
ಕಾಡುತಿಹ ಕಹಿನೆನಪು
ಆವರಿಸಿದೆ ಸ್ಮಶಾನ ಮೌನ
ಹಳೆಯ ಮಾಯದ ನೆನಪು
ಹಸಿಯಾಗಿದೆ ಇಂದು
ಕೊನೆಯಿಲ್ಲದ ಆ ನೋವಿಗೆ
ಮೌನವೆ ಸಾಟಿ ಎಂದು
ಮನಸ್ಸಿನ ಹಿಡಿತ ತಪ್ಪಿದೆ
ಪ್ರೀತಿಯ ಪರಡಳಿ ಸತ್ತಿದೆ
ಬತ್ತಿಹೋದ ಕಣ್ಣ ನೀರೆ
ಮೌನವಾಗಿ ಜನ್ಮತಾಳಿದೆ
ತಾಳ ತಪ್ಪಿರುವ ಆ ಜೀವಕೆ
ಆಸರೆಯಾಗಲಿಲ್ಲ ಯಾರು
ಸಮಾಧಾನದ ಮಾತಿನ ಬದಲು
ಮೌನವೆ ಉಳಿದಿದೆ ಕೊನೆಗೂ
ಬಂಧುಗಳು ಎಂಬ ಪಟ್ಟ ಏರಿ
ಚುಚ್ಚು ಮಾತುಗಳನ್ನು ಸಾರಿ
ಮಾತಿನ ಪುಟಕ್ಕೆ ಬೀಗವ ಹಾಕಿ
ಮೌನವೇ ಮಾತಾಗಿದೆ.
ತಸ್ರೀನ.ಎ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಪರಿಚಯ
ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...
-
ಸಂಪಾದಕೀಯ “ವಿದ್ಯಾರ್ಥಿಗಳು ತಪ್ಪಿಲ್ಲದೆ ಬರವಣಿಗೆ - ಇಂದಿನ ಅಗತ್ಯ, ನಾಳೆಯ ಸಾಮರ್ಥ್ಯ" ಬರವಣಿಗೆ ಎಂದರೆ ಕೇವಲ ಅಕ್ಷರಗಳನ್ನು ಸರಿಸುಮಾರು ಜೋಡಿಸುವ ಕೌಶಲವ...
-
ಬಿತ್ತಿ ಗೋಡೆ ಬರಹ ಪತ್ರಿಕೆ ಸಂಪುಟ - ೩೫ 2025-26ನೇಯ ಸಾಲಿನ "ಬಿತ್ತಿ" ಪತ್ರಿಕೆಯ ಸಂಪಾದಕ ಮಂಡಳಿ ಪ್ರಧಾನ ಸಂಪಾದಕರು ಪ್ರೊ. ನಾಗಪ್ಪ ಗೌಡ ಆರ್. ಅಧ್...


