ಸೋಮವಾರ, ಮೇ 25, 2026

ಸಂಚಿಕೆ - ೨೧

 ಸಂಪಾದಕೀಯ


ಶಿಕ್ಷಣದ ಹೆಸರಿನಲ್ಲಿ ವಿದ್ಯಾರ್ಥಿಗಳ ಶೋಷಣೆ ಇದು ಯಾವ ನ್ಯಾಯ?

      ಶಿಕ್ಷಣವೆಂದರೆ ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಶಕ್ತಿ. ಒಂದು ಮಧ್ಯಮ ವರ್ಗದ ಕುಟುಂಬ ತನ್ನ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಎಷ್ಟೋ ಕಷ್ಟಪಟ್ಟು ಹಣ ಸಂಗ್ರಹಿಸುತ್ತಾರೆ. ಕೂಲಿ ಕೆಲಸ ಮಾಡಿ, ಸಾಲ ಮಾಡಿ, ಬೆವರು ಸುರಿಸಿ ಕಟ್ಟಿದ ಶುಲ್ಕದ ಹಿಂದೆ ಪೋಷಕರ ಕನಸುಗಳಿರುತ್ತವೆ. ಆದರೆ ಇಂದಿನ ಕೆಲವು ವಿಶ್ವವಿದ್ಯಾಲಯಗಳ ನಿರ್ಲಕ್ಷ್ಯ ಮತ್ತು ಭ್ರಷ್ಟ ಆಡಳಿತ ವ್ಯವಸ್ಥೆ ಆ ಕನಸುಗಳನ್ನೇ ತುಳಿಯುತ್ತಿರುವುದು ನೋವಿನ ಸಂಗತಿ.

      ಕಾನ್ವೆಕೇಶನ್ ಸರ್ಟಿಫಿಕೇಟ್, ಮಾರ್ಕ್ಸ್ ಕಾರ್ಡ್, ಪಾಸಿಂಗ್ ಸರ್ಟಿಫಿಕೇಟ್ ಇವು ವಿದ್ಯಾರ್ಥಿಗಳ ಹಕ್ಕು. ಆದರೆ ಇಂದು ಅವು "ಹಣ ಕೊಟ್ಟರೆ ಸಿಗುವ ವಸ್ತು"ಗಳಂತೆ ಮಾರ್ಪಟ್ಟಿವೆ ಎಂಬ ಆರೋಪಗಳು ರಾಜ್ಯದ ಅನೇಕ ವಿಶ್ವವಿದ್ಯಾಲಯಗಳ ವಿರುದ್ಧ ಕೇಳಿಬರುತ್ತಿವೆ. ಸಾವಿರಾರು ರೂಪಾಯಿ ಹಣ ಕಟ್ಟಿದರೂ ವರ್ಷಗಳ ಕಾಲ ಪ್ರಮಾಣಪತ್ರ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಡಿಗ್ರಿ ಮುಗಿದು ೨ ವರ್ಷ, ೩ ವರ್ಷ, ೫ ವರ್ಷ, ಅಷ್ಟೇ ಅಲ್ಲ ೯ ವರ್ಷವಾದರೂ ಇನ್ನೂ ಸರ್ಟಿಫಿಕೇಟ್ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದು ಕೇವಲ ಆಡಳಿತದ ನಿಧಾನಗತಿ ಸಮಸ್ಯೆಯಲ್ಲ; ಇದು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ನಡೆಯುತ್ತಿರುವ ಆಟ. ಉದ್ಯೋಗಕ್ಕೆ ಅರ್ಜಿ ಹಾಕಲು, ಉನ್ನತ ಶಿಕ್ಷಣ ಪಡೆಯಲು, ವಿದೇಶಕ್ಕೆ ಹೋಗಲು ಎಲ್ಲಕ್ಕೂ ಸರ್ಟಿಫಿಕೇಟ್ ಅಗತ್ಯ ಆದರೆ ಸರಿಯಾದ ಸಮಯಕ್ಕೆ ದಾಖಲೆ ಸಿಗದ ಕಾರಣ ಅನೇಕ ವಿದ್ಯಾರ್ಥಿಗಳು ಉದ್ಯೋಗಾವಕಾಶ ಕಳೆದುಕೊಂಡಿದ್ದಾರೆ. ಕೆಲವರು "ಸರ್ಟಿಫಿಕೇಟ್ ಬೇಕಾದರೆ ದೊಡ್ಡವರನ್ನು ಕರೆತರುವುದು", "ಹಣ ಕೊಡಿ", "ಪೆನಾಲ್ಟಿ ಕಟ್ಟಿರಿ" ಎಂಬ ಅವಮಾನಕರ ಮಾತುಗಳನ್ನು ಕೇಳಬೇಕಾದ ಸ್ಥಿತಿಗೆ ತಲುಪಿದ್ದಾರೆ.

      ಇನ್ನೂ ದುಃಖದ ಸಂಗತಿ ಏನೆಂದರೆ, ಶಿಕ್ಷಣ ಸಂಸ್ಥೆಗಳು ಸೇವಾ ಮನೋಭಾವದಿಂದ ನಡೆದುಕೊಳ್ಳಬೇಕಾದರೆ, ಕೆಲವು ಕಡೆಗಳಲ್ಲಿ ಅದು ಹಣ ವಸೂಲಿಯ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಒಂದು ವರ್ಷ ತಡವಾದರೆ ಶುಲ್ಕ ದ್ವಿಗುಣ, ಮೂರು ಪಟ್ಟು ಎನ್ನುವ ನಿಯಮಗಳು ವಿದ್ಯಾರ್ಥಿಗಳ ಆರ್ಥಿಕ ಸಂಕಷ್ಟವನ್ನು ಲೆಕ್ಕಿಸದೇ ಮಾಡಲ್ಪಟ್ಟಂತಿವೆ. "ಬಡ ವಿದ್ಯಾರ್ಥಿಯ ಬೆವರಿನ ಹಣಕ್ಕೆ ಬೆಲೆ ಇಲ್ಲವೇ?" ಎಂಬ ಪ್ರಶ್ನೆ ಇಂದು ಪ್ರತಿಯೊಬ್ಬ ವಿದ್ಯಾರ್ಥಿಯ ಮನದಲ್ಲಿ ಮೂಡುತ್ತಿದೆ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಹೋದಾಗ ಸರಿಯಾದ ಪ್ರತಿಕ್ರಿಯೆಯೂ ಸಿಗುವುದಿಲ್ಲ ಎನ್ನುವ ಆರೋಪಗಳು ಮತ್ತಷ್ಟು ಆತಂಕಕಾರಿ. "ನಿಮಗೆ ನಾವು ಸಂಬಂಧವೇ ಇಲ್ಲ" ಎನ್ನುವ ರೀತಿಯ ವರ್ತನೆ ಶಿಕ್ಷಣ ಕ್ಷೇತ್ರದ ಮಾನವೀಯತೆಯೇ ಕುಸಿಯುತ್ತಿರುವುದನ್ನು ತೋರಿಸುತ್ತದೆ.

      ಶಿಕ್ಷಣ ಸಂಸ್ಥೆ ಎಂದರೆ ಕೇವಲ ಕಟ್ಟಡವಲ್ಲ; ಅದು ವಿಶ್ವಾಸದ ಕೇಂದ್ರ, ಆ ವಿಶ್ವಾಸವೇ ಇಂದು ಕುಸಿಯುತ್ತಿದೆ. ಇದರಲ್ಲಿ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ. ಪ್ರಮಾಣಪತ್ರ ವಿತರಣೆಯಲ್ಲಿ ವಿಳಂಬ ಯಾಕೆ? ವಿದ್ಯಾರ್ಥಿಗಳಿಂದ ವಸೂಲಿಯಾಗುತ್ತಿರುವ ಹೆಚ್ಚುವರಿ ಹಣದ ಲೆಕ್ಕವೇನು? ಅಧಿಕಾರಿಗಳ ವಿರುದ್ಧ ಬಂದಿರುವ ಆರೋಪಗಳ ಸತ್ಯಾಸತ್ಯತೆ ಏನು? ಇವೆಲ್ಲದರ ಕುರಿತು ಪಾರದರ್ಶಕ ತನಿಖೆ ನಡೆಯಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

      ಒಬ್ಬ ವಿದ್ಯಾರ್ಥಿಗೆ ಸರ್ಟಿಫಿಕೇಟ್ ಕೇವಲ ಒಂದು ಕಾಗದವಲ್ಲ; ಅದು ಅವನ ಪರಿಶ್ರಮದ ಫಲ, ಪೋಷಕರ ತ್ಯಾಗದ ಸಂಕೇತ, ಭವಿಷ್ಯದ ಬಾಗಿಲು. ಆ ಬಾಗಿಲನ್ನು ಹಣದ ಹೆಸರಿನಲ್ಲಿ ಮುಚ್ಚುವ ಹಕ್ಕು ಯಾರಿಗೂ ಇಲ್ಲ. ಶಿಕ್ಷಣವು ವ್ಯಾಪಾರವಾಗಬಾರದು. ವಿದ್ಯಾರ್ಥಿಗಳ ಕನಸುಗಳ ಮೇಲೆ ಲಾಭದ ಕಟ್ಟಡ ನಿರ್ಮಿಸುವ ವ್ಯವಸ್ಥೆ ಯಾವುದೇ ಸಮಾಜಕ್ಕೂ ಶಾಪವೇ ಸರಿ.

ಉಪಸಂಪಾದಕ, ಬಿತ್ತಿ ಸಂಪಾದಕ ಮಂಡಳಿ

ಸಂಚಿಕೆ - ೨೧

ಅಮ್ಮನ ಪ್ರೀತಿ

ಅಮ್ಮನ ಪ್ರೀತಿ ಎಂದರೆ ಸಮುದ್ರದಷ್ಟು ಆಳ ಮತ್ತು ವಿಶಾಲವಾದದ್ದು 

ಅವಳ ನೆರಳು ಇದ್ದರೆ ಸಾಕು ಬದುಕು ಸುಂದರವಾಗುತ್ತದೆ 

ಅವಳ ಆಶೀರ್ವಾದ ಇದ್ದರೆ ಹೆಜ್ಜೆಯೇ ಸುಂದರವಾಗುತ್ತದೆ 

ನನ್ನ ನಗುವನ್ನು ನೋಡಿ ಅವಳ ಕಷ್ಟವನ್ನು ಮರೆಯುವವಳು


ನನ್ನ ಕನಸಿಗಾಗಿ ರಾತ್ರಿ ನಿದ್ದೆಯನ್ನು ತ್ಯಜಿಸುವವಳು 

ನನ್ನ ಸಂತೋಷವೇ ಅವಳಿಗೆ ಖುಷಿಯನ್ನು ಕೊಡುತ್ತದೆ 

ನನ್ನ ತಪ್ಪುಗಳನ್ನು ಮನ್ನಿಸುವ ಮಮತೆ ಅವಳು


ಅಮ್ಮನ ಹೆಸರು ಕೇಳಿದರೆ ಮನಸ್ಸು ಶಾಂತವಾಗುತ್ತದೆ 

ನಿನ್ನ ನೆನಪೇ ಪ್ರತಿದಿನ ಶಕ್ತಿ ಕೊಡುತ್ತದೆ 

ನಿನ್ನ ಋಣ ತೀರಿಸಲು ಸಾಧ್ಯವಿಲ್ಲದಿದ್ದರೂ 

ನಿನ್ನ ಪ್ರೀತಿಯನ್ನು ಜೀವನಪೂರ್ತಿ ಹೊತ್ತು ಕೊಳ್ಳುತ್ತೇನೆ


ಪ್ರೇಮಾವತಿ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೨೧

ಕೆಚ್ಚೆದೆಯ ವೀರ

ಢವ ಢವ ಸದ್ದಿನ ಆ ಸ್ಥಳದಲ್ಲಿ 

ಬಿಸಿ ರಕ್ತದ ಧೀರ ಎದೆಯೊಡ್ಡಿರುವನು 

ದೇಶ ರಕ್ಷಣೆಯ ದಿಟ್ಟ ನಿಲುವಿನಲ್ಲಿ 

ಹಗಲು-ರಾತ್ರಿ ಶ್ರಮಿಸುತಿರುವನು


ತನ್ನ ಹಿತವ ತ್ಯಾಗ ಮಾಡಿ 

ಪರರ ಹಿತವ ಕಾಯುವ 

ದೇಶವೇ ಸರ್ವಸ್ವ ಎನುವ 

ವೀರನಿಗಿದೋ ಕೋಟಿ ಕೋಟಿ ನಮನ


ಬಟ್ಟ ಬಯಲಿನಲ್ಲಿ ಬಿಸಿಲ ಬೇಗೆಗೆ 

ಹಿಮ ಪ್ರದೇಶದಲ್ಲಿ ಕೊರೆವ ಚಳಿಗೆ 

ಹಸಿದ ಹೊಟ್ಟೆಯ ಕಟ್ಟಿಕೊಂಡು 

ಕಾಯುವನು ದೇಶವ ತನ್ನ ಕಾಯಕವೆಂದು


ಯುದ್ದ ಕರೆಗೆ ಓಗೊಟ್ಟು 

ತನ್ನ ಸಂಸಾರವನ್ನು ಬಿಟ್ಟು 

ಮರಳುವ ಕೆಚ್ಚೆದೆಯ ಧೀರ 

ಸದೆಬಡಿವನು ಅರಿಯನ್ನು ತನ್ನ ರಾಷ್ಟ್ರಕ್ಕಾಗಿ


ಮದ್ದು ಗುಂಡುಗಳ ಆರ್ಭಟವಿರಲಿ 

ಕೆಂಡ ಬೆಂಕಿಯ ಮಳೆಯಿರಲಿ 

ಬಯಸುವನೀತ ಸುಖ-ಶಾಂತಿಯನು 

ಭಾರತಾಂಬೆಯ ಭವ್ಯ ಮಡಿಲನ್ನು


ಬಿಂದ್ಯಾ ಕೆ.ಎಂ., ಎಂ.ಎಸ್.ಸಿ. ದ್ವಿತೀಯ ವರ್ಷ

ಸಂಚಿಕೆ - ೨೧

ಹೆಣ್ಣು

ದೈವಿಕ ಶಕ್ತಿಯಿರುವವಳು ಎಂಬುವವರು ಒಮ್ಮೆ 

ಸಬಲೆಯಲ್ಲ ಅಬಲೆ ಎಂಬುವವರು ಮತ್ತೊಮ್ಮೆ 

ಅರ್ಧನಾರೀಶ್ವರಿ ಎಂದು ಪೂಜಿಸುವರು ಒಮ್ಮೆ 

ಸಮಾನತೆಯನ್ನು ಒಪ್ಪಲು ನಿರಾಕರಿಸುವವರು ಮತ್ತೊಮ್ಮೆ


ಹೆಣ್ಣಿಗೆ ಜೀವ ಸೃಷ್ಟಿಸುವ ಶಕ್ತಿಯಿದೆ ಎಂಬರು 

ಆದರೂ ಅಶಕ್ತಿಯನ್ನು ಹೊಂದಿರುವವಳು ಎಂಬರು 

ಸನ್ಮಾನಿಸುವ ಮಾತುಗಳನ್ನು ಹೇಳುವವರು ಅವರೆ 

ಆಗೌರವದಿಂದ ಹೆಣ್ಣನ್ನು ನೋಡುವವರು ಅವರೆ


ಸಂಪ್ರದಾಯದ ಚೌಕಟ್ಟಿನಲ್ಲಿ ಬೆಳೆಸುವವರು ಅವರೆ 

ಸಂಪ್ರದಾಯವನ್ನು ಪಾಲಿಸದವಳು ಎನ್ನುವವರು ಅವರೆ 

ತನ್ನ ಕನಸನ್ನು ನನಸಾಗಿಸದವಳು ಅವಳೆ 

ಇತರರ ಕನಸನ್ನು ತನ್ನ ಕನಸೆಂದು ಬದುಕಿರುವವಳು ಅವಳೆ


ಸೌಮ್ಯ ಟಿ.ಎಸ್., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೨೧

ಕಣ್ಣೀರ ಧಾರೆ

ಹೆತ್ತು ಹೊತ್ತು ಪ್ರೀತಿಯಿಂದ ಸಾಕಿ ಸಲುಹಿದ ಮಕ್ಕಳು 

ಇಂದು ನಮಗೆ ನೀಡಿದ್ದಾರೆ ಅನಾಥಶ್ರಮದ ಬಾಗಿಲು 

ನಮ್ಮ ರಕ್ತ ಹರಿಸಿ ನಿಮಗೊಂದು ರೂಪವ ನೀಡಿದೆವು 

ನೀವು ನೀಡಿದ ಈ ಒಂಟಿತನವ ನಗುತಾ ಸ್ವೀಕರಿಸಿದೆವು


ಮುತ್ತಿಟ್ಟು ತುತ್ತು ನೀಡಿ ಬೆಳಸಿದ ಕೈಗಳು ನಡುಗುತ್ತಿದೆ 

ಕರುಳ ಬಳ್ಳಿಗಳ ನೋಡಲು ಕಣ್ಣುಗಳು ತಣಿಯುತ್ತಿದೆ 

ಅರಮನೆಯಂತಹ ಸುಂದರ ಮನೆಯ ಕಟ್ಟಿಸಿದೆವು 

ಕೊನೆಯಲ್ಲಿ ಈ ನಾಲ್ಕು ಗೋಡೆಗಳ ಮಧ್ಯದಲಿ ಉಳಿದೆವು


ಆಸ್ತಿ ಪಾಸ್ತಿ ಅಂತಸ್ತುಗಳನ್ನೆಲ್ಲ ಪಾಲು ಮಾಡಿ ಕೊಟ್ಟೆವು 

ಹೆತ್ತವರ ಪಾಲು ಬಂದಾಗ ಅನಾಥಶ್ರಮಕ್ಕೆ ತಲುಪಿದೆವು 

ಜೊತೆಗಿದ್ದಾಗ ಸುಡದ ಬಿಸಿಲು ಇಂದು ಎದೆ ಸುಡುತ್ತಿದೆ 

ಮಕ್ಕಳ ಪ್ರೀತಿಯ ಒಂದು ಕರೆಗಾಗಿ ಪ್ರಾಣ ಹಂಬಲಿಸುತ್ತಿದೆ


ವೃದ್ದಾಪ್ಯದ ಈ ಕತ್ತಲ ಬಾಳಲ್ಲಿ ನಗು ಮರೆಯಾಯಿತು 

ಕಂದಮ್ಮಗಳ ಸುಖವ ಬೇಡುತ ಮಾತು ಮೌನವಾಯಿತು 

ಹೆತ್ತವರ ನೋವು ಕಣ್ಣೀರಾಗಿ ಹರಿದು ಶಾಪವಾಗಿದಿರಲಿ 

ದೂರ ಮಾಡದಿರಿ ಎಂದು ಹೆತ್ತವರ ನಿಮ್ಮ ಬಾಳಲಿ


ಶಿಲ್ಪ ಕೆ. ಎನ್., ಎಂ.ಎ. ದ್ವಿತೀಯ ವರ್ಷ, ಇತಿಹಾಸ ವಿಭಾಗ

ಸಂಚಿಕೆ - ೨೧

ಚಲನಚಿತ್ರ ವಿಮರ್ಶೆ

ಚಲನಚಿತ್ರ : ಮೇಡಂ ಗೀತಾರಾಣಿ

      ಮೇಡಂ ಗೀತಾರಾಣಿ ಚಿತ್ರದ ಕಥಾವಸ್ತು, ಎಂದರೆ ಕಳಪೆಯಾಗಿ ನಡೆಸಲ್ಪಡುವ ಶಾಲೆಯನ್ನು ರಾಜ್ಯದ ಅತ್ಯುತ್ತಮ ಶಾಲೆಗಳಲ್ಲಿ ಒಂದನ್ನಾಗಿ ಪರಿವರ್ತಿಸುವ ಮುಖ್ಯೋಪಾಧ್ಯಾಯಿನಿ ಗೀತಾರಾಣಿಯ ಕುರಿತಾಗಿ ತಿಳಿಸಿದ್ದಾರೆ. ಗೀತಾರಾಣಿ ಈ ಕಥೆಯ ಕಥಾನಾಯಕಿ, ಲೆಫ್ಟಿನೆಂಟ್ ಕರ್ನಲ್ ಗೀತಾರಾಣಿ ಭಾರತೀಯ ಸೇನೆಯಲ್ಲಿ ಹೊಸ ನೇಮಕಾತಿಗೆ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಕಳಪೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಶಾಲೆಯ ಬಗ್ಗೆ ತಿಳಿದು ಗೀತಾರಾಣಿ ಶಾಲೆಯ ಸ್ಥಿತಿಯನ್ನು ಸುಧಾರಿಸಲು ಶಾಲೆಯ ಮುಖ್ಯೋಪಾಧ್ಯಾಯಿನಿ ಸ್ಥಾನವನ್ನು ತೆಗೆದುಕೊಳ್ಳಲು ನಿರ್ಧರಿಸುತ್ತಾರೆ.

      ಹಳ್ಳಿಗೆ ಬಂದ ಗೀತಾರಾಣಿ ಶಾಲೆಯ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ಕೇಳುತ್ತಾಳೆ. ಆದ್ದರಿಂದ ಅವಳು ಕ್ರಮೇಣ ಶಾಲೆಯಲ್ಲಿ ಹೊಸ ಸಕರಾತ್ಮಕ ಬದಲಾವಣೆಗಳನ್ನು ಮಾಡುತ್ತಾಳೆ. ಈ ಪ್ರಕ್ರಿಯೆಯಲ್ಲಿ ಗೀತಾರಾಣಿ ಅವಳ ಸ್ನೇಹಿತರು ಮತ್ತು ಹಳ್ಳಿಯ ಸ್ಥಳೀಯ ಶಾಸಕರನ್ನು ಸೇರಿದಂತೆ ಹಲವರನ್ನು ಶತ್ರುಗಳನ್ನಾಗಿ ಮಾಡಿಕೊಳ್ಳುತ್ತಾರೆ. ಈ ಚಿತ್ರದ ಬಹುಪಾಲು ಸನ್ನಿವೇಶದಲ್ಲಿ ಶಾಲೆಯ ಪರಿಸ್ಥಿತಿಯ ಸುಧಾರಣೆ, ಶಾಲಾ ಕಟ್ಟಡದ ದುರಸ್ತಿ ಹಾಗೂ ವಿದ್ಯಾರ್ಥಿಗಳನ್ನು ಪತ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಗೀತಾರಾಣಿಯು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಇದರಿಂದ ಶಾಲೆಯ ವಾತಾವರಣ ಹೇಗೆ ಬದಲಾಗುತ್ತದೆ ಮತ್ತು ಅದನ್ನು ರಾಜ್ಯದ ಅತ್ಯುತ್ತಮ ಶಾಲೆಗಳಲ್ಲಿ ಒಂದನ್ನಾಗಿ ಮಾಡುವುದರ ಮೇಲೆ ಕೇಂದ್ರೀಕರಿಸುತ್ತದೆ.

      ಮೇಡಂ ಗೀತಾರಾಣಿ ಇದು ಉತ್ತಮವಾದ ಚಿತ್ರ. ಇದು ಸ್ಫೂರ್ತಿದಾಯಕ ಮತ್ತು ಉತ್ಸಾಹಭರಿತವಾದ ಚಿತ್ರವಾಗಿದೆ. ಈ ಚಿತ್ರ ಸಂಪೂರ್ಣವಾಗಿ ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ಆಧರಿಸಿದೆ. ಈ ಚಿತ್ರವನ್ನು ಶಿಕ್ಷಣದ ಶಕ್ತಿಯಿಂದಾಗಿ ಸಮಾಜವನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ಈ ಚಿತ್ರದ ಮೂಲಕ ನೋಡಬಹುದು.

ಪೂಜಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೨೧

ಕೆಲಸದ ಬದಲು ಕಲಿಕೆ (ಭಾಗ – ೧)


ದೃಶ್ಯ - ೧

(ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತರಬೇತಿಗೆ ಹಾಜಾರಾಗಿರುತ್ತಾರೆ. ಶಿಕ್ಷಕಿಯು ಹಾಜರಾತಿಯನ್ನು ಹಾಕುತ್ತಾರೆ.)


ಶಿಕ್ಷಕಿ :- ಚೈತ್ರ, ಲಾವಣ್ಯ, ಗೀತಾ, ನಾಗಾವೇಣಿ, ಅಶೋಕ, ಸಂದೀಪ, ಹುಚ್ಚಿರಪ್ಪ, ಮೌನಿ, ಕಾಡಸಿದ್ದ, ಶಿವು, ಗೀರಿಮಲ್ಲ, ಗೀರಿಶ, (ವಿದ್ಯಾರ್ಥಿಗಳು ಹಾಜಾರಾತಿಗೆ ಪ್ರತಿಕ್ರಿಯಿಸುವರು. ಗೀರಿಶ ಎಂಬ ವಿದ್ಯಾರ್ಥಿ ಬಹು ದಿನದಿಂದ ಶಾಲೆಗೆ ಬಂದಿರುವುದಿಲ್ಲ. ಶಿಕ್ಷಕಿಯು ಮಕ್ಕಳನ್ನು ವಿಚಾರಿಸುತ್ತಾರೆ)

ಒಬ್ಬ ವಿದ್ಯಾರ್ಥಿ :- ಮೇಡಂ, ಗೀರಿಶ ಅವರ ಮನೆಯಲ್ಲಿ ಅವನನ್ನು ಶಾಲೆಗೆ ಕಲಿಸದೆ ಗೌಡರ ಹತ್ತಿರ ಕೆಲಸಕ್ಕೆ ಕಲುಯಿಸುತ್ತಾರೆ. ಮೇಡಂ.

ಶಿಕ್ಷಕಿ :- ಇವರಿಗೆಲ್ಲ ಅದು ಏನಾಗಿದೆ ಏನೋ! ಸರ್ವ ಶಿಕ್ಷಣ ಅಭಿಯಾನ ಬಂದು ಎಷ್ಟೆಲ್ಲಾ ಸೌಲಭ್ಯ ಕೊಟ್ಟರೂ ಮಕ್ಕಳನ್ನು ಕೆಲಸಕ್ಕೆ ಕಳಿಸುವುದನ್ನು ಮಾತ್ರ ಬಿಡುವುದಿಲ್ಲ. ಸರಿ.. ಅವರ ತಂದೆಯ ಹತ್ತಿರ ಮಾತಡೋಣ. ಇವಾಗ ಪಾಠವನ್ನು ಪ್ರಾರಂಬಿಸೋಣ. ಹಿಂದಿನ ತರಗತಿಯಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಲೇಖನ ಬರೆದುಕೊಂಡು ಬನ್ನಿ ಅಂತ ಹೇಳಿದ್ದೆ ಅಲ್ವಾ? ಈಗ ಒಬ್ಬೊಬ್ಬರಾಗಿ ಬಂದು ಓದಿ. (ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಬಂದು ಓದುತ್ತಾರೆ).


ದೃಶ್ಯ - ೨

(ರಾಮಪ್ಪನು ದಾರಿಯಲ್ಲಿ ಸೇಂದಿ ಕುಡಿಯುತ್ತ ಮೆನೆಗೆ ಬರುವಾಗ ದಾರಿಯಲ್ಲಿ ಒಬ್ಬ ದಾರಿಯೋಕನಿಗೆ ಹಾಯುವನು.)


ದಾರಿಯೋಕ :- 'ಲೇ' ನೋಡಿಕೊಂಡು ಹೋಗಲೇ ಕುಡುಕ,

ರಾಮಪ್ಪ :- ಇವನು ದೊಡ್ಡ ಚೆಲುವ ಇವನನ್ನು ನೋಡಿಕೊಂಡು ಹೋಗಬೇಕಂತೆ. ಹೋಗಲೇ ನಿಮ್ಮಂತವರನ್ನು ಎಷ್ಟು ಜನ ನೋಡಿನಿ. ನಡ್...ನಡಿ... (ರಾಮಪ್ಪ ಕುಡಿದು ತೂರಾಡುತ್ತ ಮನೆಗೆ ಬಂದು ಬಾಗಿಲು ಬಡಿಯುವನು.)

ರಾಮಪ್ಪ :- ಲೇ ಇವಳೆ ಬಾಗಿಲು ತೆಗೀಲೇ.. ಈ ಮನೆ ಯಜಮಾನ ಬಂದಿದ್ದಿನಿ ಬಾಗಿಲು ತೆಗಿ (ಕೂಗುವನು ರಾ. ಹೆಂಡತಿ ಯು ಬಾಗಿಲು ತೆರೆಯದೆ ಇದ್ದಿದ್ದನ್ನು, ರಾಮಪ್ಪನು ಜೋರಾಗಿ ತಳ್ಳುವನು ಬಾಗಿಲು ತೆರೆಯುವುದು)

ರಾಮಪ್ಪ :- ಈ ಮನೆಯಲ್ಲಿ ಒಂದು ಚೂರು ಭಯ ಭಕ್ತಿ ಅನ್ನೋದೆ ಇಲ್ಲ. ಲೇ ಇವಳೆ ಎಲ್ಲಿದಿಯೆ ಬೇಗ ಬಾರೆ. ಚೂರು ಕಾಮಾನ್ ಸೆನ್ಸೆ ಇಲ್ಲ. ಪಕ್ಕದ ಮನೆ ಸರೋಜನ ನೋಡಿ ಕಲಿಯೇ. ಗಂಡ ಬಂದಾಗ ನೀರು ಕೊಟ್ಟು ಕಾಲು ತೊಳೆದು ಊಟ ಹಾಕುತ್ತಾಳೆ. ನೀನು ಇದ್ದಿಯ ದಂಡಪಿಂಡ. ಗಂಡ ಬಂದಾಗ ಬಾಗಿಲು ತೆಗಿಯೋಕೆ ಬಂದಿಲ್ಲ.

ರಾ. ಹೆಂಡತಿ :- ಅಯೋ.... ಆಯೋ.... ಎಷ್ಟು ಹರಿಚುತ್ತೀಯ. ಕಂಠ ಪೂರ್ತಿ ಕುಡಿದು ಹಾದಿಬೀದಿಯಲ್ಲೆಲ್ಲಾ ಬೈಕೊಂಡು ಬಂದಿದ್ದು ಸಾಲದೆ. ಏನು.. ಪಕ್ಕದ ಮನೆ ಸರೋಜನ ನೋಡಿ ನಾನು ಕಲಿಬೇಕೆ. ಮೊದಲು ಅವರ ಗಂಡನ ನೋಡಿ ನೀವು ಕಲಿರಿ ಬೆಳಿಗ್ಗೆ ಅಷ್ಟೊತ್ತಿಗೆ ಎದ್ದು ಕೆಲಸಕ್ಕೆ ಹೋಗಿ ಸಂಪಾದನೆ ಮಾಡಿಕೊಂಡು ಬರ್ತಾರೆ. ನೀವು ಹೋಗುತ್ತೀರ ಅಷ್ಟೊತ್ತಿಗೆ ಎಲ್ಲಿಗೆ? ಸೇಂದಿ ಅಂಗಡಿಗೆ, ಒಂದು ರೂಪಾಯಿ ದುಡಿಯೋ ಯೋಗ್ಯತೆ ಇಲ್ಲದಿದ್ದರು.

ರಾಮಪ್ಪ :- ಏನೇ ನಾನು ದುಡಿಯೋಕೆ ಹೋಗಬೇಕಾ. ಲೇ ನಮ್ಮ ಮನೆತನದಲ್ಲಿ ಮದುವೆಯಾದ ಮೇಲೆ ದುಡಿಯೋದು ನಮ್ಮ ವಂಶದಲ್ಲಿ ಇಲ್ಲ. ಅಂತದಲ್ಲಿ ಇಟ್ಟು ಎತ್ತರ ಮಗನ ಬೆಳೆಸಿದ್ದೀನಿ. ನಾನು ಕೆಲಸಕ್ಕೆ ಹೋಗಬೇಕೇನು.

ರಾ. ಹೆಂಡತಿ :- ಹಾ.... ಅದಕ್ಕೋಸ್ಕರ ಶಾಲೆ-ಗೀಲೆಯಲ್ಲಿ ಬಿಡಿಸಿ ಮಗನ ತಗೊಂಡು ಹೋಗಿ ಗೌಡರ ಹತ್ತಿರ ಕೆಲಸಕ್ಕೆ ಹಚ್ಚಿಯಲ್ಲ.

ರಾಮಪ್ಪ :- ಹೂ.. ಕಣೇ ಅವನು ನನ್ನ ಮಗ. ಇನ್ನೂ ಮೇಲೆ ಅವನು ದುಡಿತಿರುತ್ತಾನೆ. ನಾನು ಏನಿದ್ರು ಕಾಲು ಮೇಲೆ ಕಾಲು ಹಾಕಿ ಸೇಂದಿ ಕುಡುಕೊಂಡು ಇರೋದೆಯ. (ರಾಮಪ್ಪ ನಿಂತಲ್ಲೆ ಕಾಲು ಮೇಲೆ ಕಾಲು ಹಾಕುವುದಕ್ಕೆ ಹೋಗಿ ಬೀಳುವನು)

ರಾ. ಹೆಂಡತಿ :- ಹಾ ಹಾ ಸ್ವಂತ ಎರಡು ಕಾಲು ಮೇಲೆ ನಿಂತುಕೊಳ್ಳೋಕೆ ಬರಲ್ಲ. ಇನ್ನೂ ಕಾಲು ಮೇಲೆ ಕಾಲು ಹಾಕಿ ಕುಂತುಕೊಲ್ಲುತ್ತಾನಂತೆ.

ರಾಮಪ್ಪ :- ಅದೇಲ್ಲ ಕಥೆ ಪುರಣ ಬೀಡು. ಮೋದಲು ಹೋಗಿ ಊಟ ತಗೊಂಡು ಬಾ.

ರಾ. ಹೆಂಡತಿ :- ಓ.... ದುಡಿದು ಕೊಟ್ಟಿಯಲ್ಲಪ್ಪ ಗಂಡಸು ಊಟ ತಗಂಡು ಬರ್ತರ. ಮೊದಲು ನಾಲ್ಕು ಕಾಸು ಸಂಪಾದನೆ ಮಾಡಿಕೊಂಡು ಬಾ. ಮನೆಗಾ ಒಂದಿಷ್ಟು ಕಾಳುಕಡಿ ಇಲ್ಲ ಊಟಕ್ಕೆ ಕೇಳ್ತಾನ.

ರಾಮಪ್ಪ :- ಹೇ.... ಹೋಗಿ ಹೋಗಿ ನಿನ್ನ ಕೇಳುತಿನಲ್ಲ. ಹೊರಗಡೆ ಏನಾದರು ತಿನ್ನೊತಿನಿ ಒಸಿ ಕಾಸು ಆದ್ರೂ ಕೋಡು.

ರಾ. ಹೆಂಡತಿ :- ಮನೆಗೆ ಕಾಳಿಗೆ ಗತಿ ಇಲ್ಲ. ಇನ್ನೂ ಕಾಸು ಕೊಡುತ್ತಾರೆ ಅಂತೆ ಹೋಗ್ ಹೋಗು.

ರಾಮಪ್ಪ :- ಈ ಮನೆಗ ದಿನ ತಾಯಿ ಮಗ ಗೇಮೆ ಮಾಡಿದ್ರು, ಒಂದು ಇಷ್ಟು ಕಾಸು ಕೇಳಿದ್ರೆ ಕೊಡಕಗಲ್ಲ. ಅದಕ್ಕೆ ಹೇಳೋದು ಯಜಮಾನಿಕೆ ಗಂಡಸರ ಕೈಯಲ್ಲಿ ಇರಬೇಕಂತ. ಹೆಂಗಸರ ಕೈಯಲ್ಲಿ ಕೋಟ್ರೆ ಹೀಗೆ ಹಾಗೋದು. ನಾನು ನನ್ನ ಮಗನ ಕೇಳುತ್ತಿನಿ ಹೋಗು.

ಮುಂದುವರೆಯುವುದು.......


ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೨೧

ಪಂಜರದ ಗಿಳಿ.......

      ನನಗೆ ಇನ್ನು ಹಾರಲು ಆಗುತ್ತಿಲ್ಲ ಪಂಜರದೊಳಗೆ ನಾನು ಸಿಕ್ಕಿ ಬಿದ್ದಿದ್ದೇನೆ ಭಯದ ನೆರಳಿನಲ್ಲಿ ನನ್ನ ಇಡೀ ಜೀವನವನ್ನು ಬಲವಂತವಾಗಿ ಕಳೆಯುತ್ತಿದ್ದೇನೆ ತಪ್ಪಿಸಿಕೊಳ್ಳುವುದು ಹೇಗೆ ಎಂದು ತಿಳಿಯದೆ ಪಂಜರದೊಳಗೆ ಬಂದಿಯಾಗಿದ್ದೇನೆ. ಮುರಿದ ಪ್ರೀತಿಯಿಂದ ಭಾರವಾದ ಹೃದಯದೊಂದಿಗೆ ನಾನು ಬದುಕುತ್ತಿದ್ದೇನೆ ನನ್ನ ಎಲ್ಲ ಬಂಧುಗಳನ್ನು ಕಳೆದುಕೊಂಡು ಬಡ ಜೀವಿಯಾಗಿ ಬಳಲುತ್ತಿದ್ದೇನೆ ನನ್ನ ಸಂಗಾತಿ ಇಲ್ಲದೆ, ನನಗೆ ಇನ್ನು ಹಾರಲು ಆಗುತ್ತಿಲ್ಲ ನಾನು ಈಗ ಪಂಜರದ ಗಿಳಿಯಾಗಿದ್ದೇನೆ.

ಮಹೇಶ ಜಿ.ಕೆ., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೨೧

ಹಿಂದಿ ಬೇಡವೆ?

      ನಿಮಗೆ ಯಾವಾಗಲಾದರೂ ಅನ್ನಿಸಿದೆಯೆ ಹಿಂದಿ ಭಾಷೆಯಿಂದ ಕನ್ನಡಕ್ಕೆ ಬಹಳಷ್ಟು ಅಪಾಯವಾಗಿದೆ ಎಂದು ಅಥವಾ ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಕಲಿಯುತ್ತಿರುವ ಹಿಂದಿ ಭಾಷೆಯಿಂದ ಕನ್ನಡದ ಮಾನ್ಯತೆ ಮತ್ತು ಬಳಕೆ ಕಡಿಮೆಯಾಗುತ್ತಿದೆ ಎಂದು. ಅಥವಾ ಹಿಂದಿ ಭಾಷೆಯಿಂದ ಶಾಲಾ ಮಕ್ಕಳು ಭಯಭೀತರಾಗಿ ಎಷ್ಟೋ ಮಕ್ಕಳು ಶಾಲೆ ತೊರೆದಿದ್ದಾರೆಂದು?. ಇರಿ ಇರಿ ಈಗಲೆ ಹೌದು ಇಲ್ಲ ಎಂದು ಹೇಳಬೇಡಿ. ನಿಜವಾಗಿಯೂ ಮಕ್ಕಳಲ್ಲಿ ಹಿಂದಿ ಶಿಕ್ಷಣ ಹೊರೆಯಾಗಿದೆಯೆ? ನಿಜವಾಗಿಯೂ ಹೊರೆಯಾದ ಭಾಷೆಗಳಾವು? ಮಕ್ಕಳನ್ನು ಕುಗ್ಗಿಸುತ್ತಿರುವ ಭಾಷೆಗಳಾವು? ಕನ್ನಡದ ಬಳಕೆಗೆ ಅಡ್ಡಿಯಾದ ಭಾಷೆಗಳಾವು? ಕನ್ನಡ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವುದಾವ ಭಾಷೆಯಿಂದ?. ನಿಜ ಕನ್ನಡ ಭಾಷಾ ಕಲಿಕೆ ಮತ್ತು ಬಳಕೆಯ ವಿಚಾರವಾಗಿ ನೋಡಿದರೆ ಹಿಂದಿಯೂ ಒಂದು ಕಾರಣವೆ ಹೌದು ಆದರೆ ಹಿಂದಿಗಿಂತಲೂ ಮುಖ್ಯ ಕಾರಣವಾದವುಗಳು ಬೇರೆಯೆ ಇದ್ದಾವೆ. ಅವುಗಳಿಂದ ಎಷ್ಟೋ ವಿದ್ಯಾರ್ಥಿಗಳು ಶಿಕ್ಷಣವನ್ನೆ ತೊರೆದಿದ್ದಾರೆ. ಆದರೆ ಪ್ರಸ್ತುತ ರಾಜ್ಯ ಸರ್ಕಾರಗಳು ಯಾಕೆ ಹಿಂದಿಯನ್ನೆ ಮುಖ್ಯವಾಗಿಸುತ್ತಿವೆಯೊ ನಾ ಕಾಣೆ. ನಾವು ಕಲಿತಂದಿನಿಂದ ಇಂದಿನವರೆಗೂ ಹಿಂದಿ ಭಾಷಾ ವಿಷಯವು ಬಹುಪಾಲು ಮಕ್ಕಳಿಗೆ ಹೊರೆಯಾದುದಲ್ಲ ಅದನ್ನು ತುಂಬಾ ಸಂತೋಷದಿಂದಲೆ ಕಲಿಯುತಿರುವುದು ನಾ ಬಲ್ಲೆ, ಬಹುಪಾಲು ಮಕ್ಕಳಿಗೆ ಹೊರೆಯಾದ ವಿಷಯಗಳ ಬೇರಿವೆ. ಆದರೆ ಅದರ ಕುರಿತು ಯಾರು ಮಾತನಾಡರ್ಯಾಕೆ?.

      ಕರ್ನಾಟಕದಲ್ಲಿರುವ ಬಹು ಜನರು ಈ ನೆಲದವರೆಂದು ಹೇಳಿಕೊಳ್ಳುವ ಇಲ್ಲೆ ಹುಟ್ಟಿ ಬೆಳೆದ ಎಷ್ಟೋ ಜನರಿಗೆ ಅವರ ಮಕ್ಕಳಿಗೆ ಕನ್ನಡವೇ ಬರುವುದಿಲ್ಲ. ಇಲ್ಲ ಇಲ್ಲ ಕಲಿಯುವುದಿಲ್ಲ ಮತ್ತು ಕಲಿಸುವುದಿಲ್ಲ. ಅಂತಹ ವಿಚಾರಗಳು ಈ ಸರ್ಕಾರಗಳಿಗೆ ಬೇಕಾಗಿಯೂ ಇಲ್ಲ, ಇವರಿಗೆ ಕಾಣುವುದು ಹಿಂದಿ ಭಾಷೆಯೊಂದೆ ಏಕೆ? ಹಾಗೆ ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲದಿದ್ದರೂ ರಾಷ್ಟ್ರದ ಜನರನ್ನು ಒಗ್ಗೂಡಿಸುವಂತದ್ದು ಭಾರತೀಯರು ಪರದೇಶಗಳಿಗೆ ಹೋದಾಗ ನಮ್ಮ ನಾಡಿನವರೆಂಬ ಭಾವನೆ ಮೂಡಿಸುತ್ತದೆ. ಬೇರೆ ರಾಜ್ಯಗಳಲ್ಲಿ ಕನ್ನಡಿಗರು ಹೋದರೆ ಅವರಿಗೆ ಕನ್ನಡ ಬರದು ನಮಗೆ ಆ ರಾಜ್ಯ ಭಾಷೆ ಬರದು, ಯಾವ ಭಾಷೆಯಲ್ಲಿ ಮಾತನಾಡಬೇಕು?, ಹಿಂದಿ ಭಾಷೆ ಭಾರತೀಯರನ್ನು ಒಂದು ಮಾಡುತ್ತದೆ. ಹಿಂದಿ ಭಾಷೆಯನ್ನು ತೆಗೆದು ಹಾಕುವುದು ಕೇವಲ ಒಂದು ರಾಜಕೀಯವೆ ಹೊರತು ಮತ್ತೇನು ಅಲ್ಲ. ಅಷ್ಟು ಕನ್ನಡದ ಪ್ರೇಮವುಳ್ಳ ಸರ್ಕಾರಗಳು ರಾಜ್ಯದ ಪ್ರಮುಖ ಭಾಷೆಯಾದ ಕನ್ನಡದಲ್ಲಿ ಎಲ್ಲವನ್ನು ಕಲಿಸಲಿ!, ಕರ್ಮ ಮರೆತೇ ಹೋದೆ ನೋಡಿ ನಾನು. ಕನ್ನಡ ಕಲಿಸುವುದಕ್ಕೆಯೆ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಇನ್ನು ಕನ್ನಡದಲ್ಲಿ ಎಲ್ಲವನ್ನು ಹೇಗೆ ಕಲಿಸಿಯಾರು? ಪ್ರಸ್ತುತ ನಮ್ಮ ದೇಶದ ಚಿಂತನೆ ಹೇಗಿದೆ ಎಂದರೆ ಬೇರೆ ದೇಶಗಳ ಭಾಷೆ ಇಲ್ಲಿ ರಾರಾಜಿಸುತ್ತ ಪ್ರಾಂತೀಯ ಭಾಷೆಗಳನ್ನು ನುಂಗಿದರೂ ಅದು ಅಪ್ರಸ್ತುತವೆ. ಆದರೆ ಭಾರತೀಯರ ಕೊಡುಕೊಳ್ಳುವಿಕೆಗೆ ಉಪಯುಕ್ತವಾಗುವ ಭಾಷೆ ಬೇಡ ಎನ್ನುವರು. ಇದು ಕೇವಲ ನಮ್ಮ ರಾಜ್ಯದ ಆಲೋಚನೆಯಲ್ಲ, ದೇಶದ ಪ್ರತಿಯೊಂದು ರಾಜ್ಯದ ಸಿದ್ಧಾಂತವಿದು. ಅದೇ ಈ ಸರ್ಕಾರಗಳಿಗೆ ಪರಮಾನಂದ. ಅದಕ್ಕೆ ಅಲ್ಲವೇ ನಮ್ಮ ಜನಪದರು ಹೇಳಿದ್ದು "ಬೇವೂರು ದೆವ್ವ ಬಂದು ಇದ್ದೂರು ದೇವನ್ನೊಡಿಸಿತ್ತಂತೆ".

ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೨೧

ನನ್ನೆದೆಯ ಪುಸ್ತಕ

      ಅದು ಆ ಪುಸ್ತಕ ಯಾವ ಪುಸ್ತಕ? ಅದೇ ಆ ಪುಸ್ತಕ ಅದೇ ಯಾವ ಪುಸ್ತಕ ಅಂತ. ಅದು ನನ್ನ ಅಂತರಂಗವ ಮುಟ್ಟಿದ ಪುಸ್ತಕ. ನನ್ನ ಹಳೆಯ ಪ್ರಿಯತಮೆಯನ್ನು ನೆನಪಿಸಿದ ಪುಸ್ತಕ. ಪುಟ ಪುಟಗಳಲ್ಲಿಯು ಪ್ರೀತಿಯನ್ನು ಹೂತ ಪುಸ್ತಕ. ಅದು ನನ್ನವಳ ಸೌಂದರ್ಯ, ದೃಢನಿರ್ಧಾರ, ತಿಳಿಸಿದ ಪುಸ್ತಕ. ಅದೇ ಯಾವ ಪುಸ್ತಕ? ನನ್ನಂತರಾಳದಲ್ಲಿರುವ ಕಾಣದ ಬಳ್ಳಿಗೆ ನೀರೆರದ ಪುಸ್ತಕ. ನನ್ನ ಮನ ತಣಿಸಿದ ಪುಸ್ತಕ. ನನ್ನಂತರಾಳದಲ್ಲಿರುವುದು ಪ್ರೇಮವೆ. ವಾಂಭೆಯೆ ಎಂದು ತಿಳಿಸಿದ ಪುಸ್ತಕ. ಅದು ನನ್ನವಳ ಅಂತರಾಳವ ಅರಿತ ಪುಸ್ತಕ. ಅದೇ ಯಾವ ಪುಸ್ತಕ? ಸುಂದರ ಮುಖಪುಟ ಹೊಂದಿ ವಿರಹದ ನೋವಿನ ಹಣೆಪಟ್ಟಿ ಹೊಂದಿದ ಪುಸ್ತಕ. ಅದರಡಿ ಬರಹ ರಾಕ್ಷಸನ ನಾಮ ಹೊಂದಿದ್ದ ಪುಸ್ತಕ. ಪೀಠಿಕೆಯಲ್ಲಿ ಪ್ರೀತಿಯ ಹಂತ ಹಂತವನ್ನು ಒಳಗೊಂಡ ಪುಸ್ತಕ ಓದದೆಯೆ ಅದರ ಅಂತರಾಳವ ಕೇವಲ ಹಣೆಪಟ್ಟಿಯಿಂದ ಹೇಳಹೊರಟಿರುವ ಪುಸ್ತಕ. ಅದು ನನ್ನ ದೇವರಿಗೂ ಮೋಸ ಎಂಬ ಮಾತನ್ನು ಆರಂಭದಲ್ಲಿ ಹೇಳಿಸಿದ ಪುಸ್ತಕ. ಪ್ರೀತಿಯಲ್ಲಿ ಪ್ರೇಮದಲ್ಲಿ ವಾಂಭೆಯಿಲ್ಲ ಎಂದು ಮೊದಲ ಬಾರಿಗೆ ಒಬ್ಬ ಗಂಡಸಿನಿಂದ ಹೇಳಿಸಿದ ಪುಸ್ತಕ. ಸಣ್ಣ ಗುಡಿಸಲಿನಿಂದ ಆರಂಭವಾಗಿ ದೊಡ್ಡ ಬಂಗಲೆಯಲ್ಲಿ ಪ್ರೀತಿಯನ್ನು ಸಮಾದಿ ಮಾಡಿದ ಪುಸ್ತಕ, ದುರದೃಷ್ಟದಿಂದ ಪ್ರೀತಿಯಲ್ಲಿ ಆಗುವ ಮೋಸ ಹೇಳಹೊರಟಿರುವ ಪುಸ್ತಕ. ಅದು ಬಡವನಿಗೆ ಕಾರಣ ಹೇಳದೆ ದೂರಾದ ಪ್ರಿಯತಮೆಯನ್ನು ಹೊಂದಿದ ಪುಸ್ತಕ. ಅದೆ ಯಾವ ಪುಸ್ತಕ? ಬಡ ಹುಡುಗನ ಮನಸಲ್ಲಿ ಅರಳಿದ ಪ್ರೀತಿ ಎಂಬ ಹೂ ಶ್ರೀಮಂತನ ಸೊತ್ತಾದ ಪುಸ್ತಕ. ಅದು ಆಸ್ಪತ್ರೆ ನಿರ್ಮಾಣದ ಕನಸು ಹೊಂದಿದವನಿಗೆ ಅದೆ ಆಸ್ಪತ್ರೆಯ ಪಾಯದಲ್ಲಿ ಗುಂಡಿ ತೋಡಿದ ಪುಸ್ತಕ. ಅದೆ ಯಾವ ಪುಸ್ತಕ? ಪ್ರಿಯತಮೆಯು ಬೇರೊಬ್ಬನೊಂದಿಗೆ ಸೇರಿ ಪ್ರಿಯತಮನಿಗೆ ಕಾರಣವಿಲ್ಲದೆ ಮೋಸ ಮಾಡಿದ ಪುಸ್ತಕ, ಕಾಲ್ನಡಿಗೆಯಿಂದ ಆರಂಭ ಹೊಂದಿ ಕೊನೆಗೆ ಐಷಾರಾಮಿ ಕಾರಲ್ಲಿ ಒಡಾಡಿದ ಪುಸ್ತಕ. ಅದೆ ಹೇಳಿ ಹೋಗು ಕಾರಣ ಎಂಬ ರವಿ ಬೆಳಗೆರೆಯವರ ಪುಸ್ತಕ.

ರವಿ ಅ. ಮ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೨೧

'ಸಂಭ್ರಮ'ದಲ್ಲಿ ಸ್ತ್ರೀಯರ ಪಾತ್ರ

      ಮಂಗಳೂರು ವಿಶ್ವವಿದ್ಯಾನಿಲಯದ ಅಕಾಡೆಮಿಯ ಕೊನೆಯಲ್ಲಿ ನಡೆಯುವ ೩ ದಿನಗಳ 'ಸಂಭ್ರಮ'ದಲ್ಲಿ ಇಡೀ ವಿದ್ಯಾರ್ಥಿ ವೃಂದವೇ ಮಿಂದೆದಿತ್ತು. ಈ ಬಾರಿಯ ಸಂಭ್ರಮದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕಡಿಮೆ ಇದ್ದರೂ, ಸಂಭ್ರಮ ಎಲ್ಲರ ಮೊಗದಲ್ಲೂ ಮನೆ ಮಾಡಿತ್ತು. ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಆಕರ್ಷಣೆಯ ಕೇಂದ್ರವೆಂದರೆ ಅದು ಹುಡುಗಿಯರು, ವಿಭಾಗದ ಹುಡುಗಿಯರನ್ನ ನೋಡಿ ಬೇಸತ್ತ ಹುಡುಗರಿಗೆ ಇದು ನಿಜಕ್ಕೂ ಸಂಭ್ರಮವೆ! ಕೆಲವರಿಗೆ ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವ, ಇನ್ನು ಕೆಲವರಿಗೆ ಮೌನ ಮಾತಿಗೆ ತಿರುಗಿದ ಕ್ಷಣವೂ ಹೌದು.

      ಮಂಗಳ ಸಭಾಂಗಣದಲ್ಲಿ ಹುಡುಗಿಯರ ಉಪಸ್ಥಿತಿ ಹೇಗಿತ್ತೆಂದರೆ, ಅದು ಮಂಗಳದ ವೇದಿಕೆಯಿಂದ ಹಿಡಿದು ನೃತ್ಯ, ಅಭಿನಯಗಳಲ್ಲಾಗಲಿ, ಹೊರಗಿನ ಫುಡ್ ಸ್ಟಾಲ್‌ಗಳಲ್ಲಿ ಸ್ತ್ರೀಯರ ಪಾತ್ರ ಎದ್ದು ಕಾಣುತ್ತಿತ್ತು. ತಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ತಮಟೆ ಬಡಿಯುವುದೇನು, ದೇವರ ಭಾರವಾದ ಮೂರ್ತಿಯನ್ನು ಹಿಡಿದು ಕುಣಿಯುವುದೇನು, ಸೀರೆಯುಟ್ಟು ಹಾಡಿಗೆ ಕುಣಿಯುವುದೇನು ಒಟ್ಟಾರೆ ಹುಡುಗರನ್ನೇ ಮೀರಿಸುವ ಮಟ್ಟಿಗೆ ಅವರ ಪಾಲ್ಗೊಳ್ಳುವಿಕೆ ಅಲ್ಲಿ ವ್ಯಕ್ತವಾಗಿತ್ತು.

      ಬೇರೆ ಬೇರೆ ವಿಭಾಗದ ಹುಡುಗಿಯರು ಸೀರೆಯುಟ್ಟು ಫೋಟೋಗೆ ಫೋಸ್ ಕೊಡುವ ದೃಶ್ಯ ಕಣ್ಣು ಕುಕ್ಕುತ್ತಿತ್ತು. ಫೋಟೋ ಕ್ಲಿಕ್ಕಿಸುವಾಗ ಯಾರು ನನ್ನನ್ನು ನೋಡುತ್ತಿದ್ದಾರೆಯೇ ಎಂದು ಕಣ್ಣು ಆಚೆ-ಈಚೆ ಹೊರಳಿಸಿ ಕಿರುನಗೆಯ ನೋಟವು ಕಂಡುಬಂತು. ಸೆರಗನ್ನು ಸರಿಮಾಡಿ, ನೆರಿಗೆ ಸರಿ ಇದೆಯೆ ಎಂದು ನೋಡುವಷ್ಟರಲ್ಲಿ ಮೊಬೈಲ್ ಹಿಡಿದವನಿಗೆ ತಾಳ್ಮೆಯ ಪರೀಕ್ಷೆ ಆಗಿದ್ದಂತು ನಿಜ. ಅಲ್ಲದೇ ಮೂರನೇ ದಿನದ ಕೊನೆಯಲ್ಲಿ ಡಿ.ಜೆ. ಸದ್ದಿಗೆ ನಾರಿಮಣಿಗಳು ಹುಚ್ಚೆದ್ದು ಕುಣಿದರು. ಜಗಮಗಿಸುವ ಬೆಳಕಿನ ವೇಗದಂತೆ ಹುಡುಗಿಯರ ಡ್ಯಾನ್ಸ್ ಬಿರುಸಾಗಿತ್ತು. ಉಳಿದ ದಿನಗಳಲ್ಲಿ ನಿಗದಿತ ಗಂಟೆಯೊಳಗೆ ಹಾಸ್ಟೆಲ್ ಸೇರುತ್ತಿದ್ದ ಇವರು ಇಂದು ಬಿಡುಗಡೆಯ ಭಾಗ್ಯ ದೊರತಂತೆ ಸಾಕಾಗುವಷ್ಟು, ಮನಸ್ಸಿಗೆ ಖುಷಿ ನೀಡುವಷ್ಟು ಕುಣಿದು ಕುಪ್ಪಳಿಸಿದರು.

      ಒಟ್ಟಾರೆಯಾಗಿ ಈ ಮೂರು ದಿನಗಳ ಸಂಭ್ರಮದಲ್ಲಿ ಹುಡುಗಿಯರು ತಮ್ಮ ಶ್ರಮ, ಸಮಯ ಹಾಗೂ ನಗುವಿನೊಂದಿಗೆ ಈ ಕಾರ್ಯಕ್ರಮದಲ್ಲಿ ಇರುವಿಕೆಯನ್ನು ಸಾಬೀತು ಪಡಿಸಿದರು. ಬೇರೆ ವಿಭಾಗದ ಹುಡುಗಿಯರೊಂದಿಗೆ ಪೈಪೋಟಿ ಮಾಡುತ್ತ ತಮ್ಮ ನೃತ್ಯ, ಅಭಿನಯ ಹಾಗೂ ಹಾಡುಗಾರಿಕೆಯಲ್ಲಿ ಶಕ್ತಿ ಪ್ರದರ್ಶನ ನಡೆದಿದ್ದಂತು ನಿಜ.

ಶ್ರೇಯಸ್ ಬನ್ನಡ್ಕ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೨೧

ಇಳಿಸಂಜೆಯ ಭಾವ

ನಿತ್ಯ ನೀರಸ ಇಳಿಸಂಜೆಯ ಭಾವ 

ಕಾರ್ಮೋಡ ಕಾದಿದೆ ಹಾತೊರೆದು ಒಲವ 

ಕೆನೆಯರಾಗದಿ ಧರೆಯು ಮೌನವ ಗುನುಗಿ 

ಹೇಳತೀರದ ಹರೆಯ ನೆನಪು ಜಿನುಗಿ


ಬೆಳಕ ಹಾಸಿ ಚಂದಿರನು ಮೋಡಿಯ ಮಾಡಿ 

ಕೋಟಿಕಂಠಗಳು ಸೇರಿ, ಪಕ್ಷಿಸಂಕುಲ ಹಾಡಿ 

ಕೇಳುತ ಹೂಗಳು, ಚಿರನಿದ್ರೆಗೆ ಸಾಗಿ 

ಮುಸ್ಸಂಜೆಯ ಮುತ್ತಿಗೆ, ಮನುಜನು ಮಾಗಿ....


ಪರಶುರಾಮ್, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೨೧




ಚಿತ್ರಗಳು 

ಸಂಚಿಕೆ - ೨೧

ಚಿತ್ರಗಳು 



ಆಕೆ : ಯಾವ ಬಿರುಗಾಳಿಗೆ ಯಾವ ಮಾಮರ ಬಾಗುವುದೋ ಯಾರು ಬಲ್ಲರು ಹೇಳು !?

ಆತ : ಬಾಗಿದರೆ ತೂಗಿದರೆ
ಚಿಂತೆಯಿಲ್ಲ ಸಖಿ!
ನನಗಿಲ್ಲಿ ಬಿರುಗಾಳಿಗಿಂತಲೂ
ಒಳಗಿನ ಗೆದ್ದಲಿನದೇ ಚಿಂತೆ
ಯಾವಾಗ ಈ ಜಗತ್ತಿನ ಯಾವ್ಯಾವುದನ್ನು ಉರುಳಿಸುವುದೋ !?


ರೇಷ್ಮಾ ಬಾರಿಗ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ



ಸಂಚಿಕೆ - ೨೧

ಚಿತ್ರಗಳು 

ಚಿತ್ರ ರಚನೆ :- ಚೈತ್ರಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸೋಮವಾರ, ಮೇ 18, 2026

ಸಂಚಿಕೆ - ೨೦

 ಸಂಪಾದಕೀಯ


ರಾಜಕೀಯದ ಅಸ್ತವಾಗುತ್ತಿರುವ ಶಿಕ್ಷಣ

      ಇಂದಿನ ಸಮಾಜದಲ್ಲಿ ಶಿಕ್ಷಣವೆಂದರೆ ಕೇವಲ ಅಕ್ಷರಜ್ಞಾನವಲ್ಲ; ಅದು ಒಂದು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಶಕ್ತಿ, ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವ ವೇದಿಕೆ. ಆದರೆ ಇಂತಹ ಪವಿತ್ರ ಕ್ಷೇತ್ರವಾದ ಶಿಕ್ಷಣ ವ್ಯವಸ್ಥೆಯೊಳಗೆ ರಾಜಕೀಯದ ಹಸ್ತಕ್ಷೇಪದ ಪ್ರಭಾವ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಸ್ವ-ಆಲೋಚನೆ, ಸ್ವ-ಚಿಂತನೆ, ಸ್ವ-ಜ್ಞಾನ, ಸ್ವ-ವ್ಯಕ್ತಿತ್ವ, ಸ್ವ-ಸಾಮರ್ಥ್ಯ ರೂಪಿಸಿಕೊಳ್ಳುವ ಕೇಂದ್ರವಾಗಬೇಕು. ಶಿಕ್ಷಣದಲ್ಲಿ ರಾಜಕೀಯ ಪ್ರಭಾವದಿಂದ ವಿದ್ಯಾರ್ಥಿಗಳಲ್ಲಿ ಹಲವು ಸಂಘಟನೆಗಳು ಹುಟ್ಟಿಕೊಂಡಿವೆ. ಹಲವು ಹೋರಾಟಗಳು ತಮ್ಮ ಧೈಯೋದ್ದೇಶಕ್ಕಾಗಿ ವಿದ್ಯಾರ್ಥಿಗಳನ್ನು ಪಣವಾಗಿ ಬಳಸುತ್ತಿರುವುದು ಕಂಡುಬರುತ್ತಿದೆ. ಶಿಕ್ಷಣದ ಮೂಲ ಉದ್ದೇಶವನ್ನೇ ತಿರುಚುವಂತ ಕಾರ್ಯಗಳು ಇಂದಿನ ವಿಶ್ವವಿದ್ಯಾನಿಲಯಗಳಲ್ಲಿ, ಶಿಕ್ಷಣ ಕೇಂದ್ರಗಳಲ್ಲಿ ನಡೆಯುವುದು ಸರ್ವೇಸಾಮಾನ್ಯವಾಗಿದೆ. ಇಂದು ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯವು ಕೆಲವು ಮಟ್ಟಿಗೆ ಅಗತ್ಯವೂ ಹೌದು. ಸರ್ಕಾರಗಳು ಶಿಕ್ಷಣ ನೀತಿಗಳನ್ನು ರೂಪಿಸುವುದು, ಶಾಲೆ-ಕಾಲೇಜುಗಳನ್ನು ಸ್ಥಾಪಿಸುವುದು, ಬಡ ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಒದಗಿಸುವುದು-ಹಲವು ರಾಜಕೀಯ ನಿರ್ಧಾರಗಳ ಭಾಗವೇ, ಆದರೆ ಸಮಸ್ಯೆ ಶುರುವಾಗುವುದು ಶಿಕ್ಷಣವನ್ನು ಸಮಾಜದ ಅಭಿವೃದ್ಧಿಗಿಂತ ರಾಜಕೀಯ ಲಾಭಕ್ಕಾಗಿ ಬಳಸಿದಾಗ,

      ಪಠ್ಯಪುಸ್ತಕಗಳಲ್ಲಿ ಪಕ್ಷಪಾತದ ವಿಚಾರಗಳನ್ನು ಸೇರಿಸುವುದು, ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯ ಪ್ರಭಾವದ ಆಧಾರದ ಮೇಲೆ ನೇಮಕಾತಿ ಮಾಡುವುದು ಮತ್ತು ವಿಶೇಷ ಸೌಲಭ್ಯ ಒದಗಿಸುವುದು, ವಿದ್ಯಾರ್ಥಿ ಸಂಘಟನೆಗಳನ್ನು ರಾಜಕೀಯ ಸಾಧನಗಳಾಗಿ ಬಳಸುವುದು-ಇವೆಲ್ಲವೂ ಶಿಕ್ಷಣದ ಗುಣಮಟ್ಟಕ್ಕೆ ಹೊಡೆತ ನೀಡುತ್ತವೆ. ಶಿಕ್ಷಣ ಸಂಸ್ಥೆಗಳು ಇಂದಿಗೆ ಕೆಲವೆಡೆ ಜ್ಞಾನ ಮಂದಿರಗಳಿಗಿಂತ ರಾಜಕೀಯ ಬೀಜ ಬಿತ್ತುವ ಕೃಷಿ ಭೂಮಿಯಂತೆ ಕಾಣುತ್ತಿವೆ. ವಿದ್ಯಾರ್ಥಿಗಳ ಪ್ರತಿಭೆ, ಕೌಶಲ್ಯ, ಸೃಜನಶೀಲತೆಯ ಪರಿಶ್ರಮಕ್ಕಿಂತ ಅವರ ರಾಜಕೀಯ ನಿಲುವುಗಳಿಗೆ ಹೆಚ್ಚು ಮಹತ್ವ ಸಿಗುವ ಪರಿಸ್ಥಿತಿ ಉಂಟಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಏಕಾಗ್ರತೆ ಕುಗ್ಗಿ, ಅವರ ಸೃಜನಶೀಲತೆ ನಶಿಸಿಹೋಗಿ ಅವರ ಭವಿಷ್ಯ ರಾಜಕೀಯ ಗೊಂದಲಗಳಲ್ಲಿ ಸಿಲುಕುವ ಅಪಾಯ ಇದೆ.

      ಪಠ್ಯಕ್ರಮಗಳ ಬದಲಾವಣೆಗಳಲ್ಲಿಯೂ ರಾಜಕೀಯದ ಪ್ರಭಾವ ಕಂಡುಬರುತ್ತದೆ. ಒಂದು ಸರ್ಕಾರ ಬಂದಾಗ ಒಂದು ರೀತಿಯ ಇತಿಹಾಸ, ಮತ್ತೊಂದು ಸರ್ಕಾರ ಬಂದಾಗ ಬೇರೆ ರೀತಿಯ ಇತಿಹಾಸ. ಇತಿಹಾಸದ ಅರ್ಥವನ್ನೇ ತಿರುಚಲಾಗುತ್ತಿದೆ. ವಿದ್ಯಾರ್ಥಿಗಳು ನಿಜವಾದ ಜ್ಞಾನಕ್ಕಿಂತ ಗೊಂದಲವನ್ನೇ ಪಡೆಯುತ್ತಾರೆ. ಶಿಕ್ಷಣವು ಸತ್ಯ, ಸಮಾನತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಬೇಕಾದರೆ, ಅದು ರಾಜಕೀಯ ಹಿತಾಸಕ್ತಿಗಳಿಗೆ ಒಳಗಾಗಬಾರದು. ಇದರ ಜೊತೆಗೆ ಶಿಕ್ಷಣದ ವ್ಯಾಪಾರೀಕರಣಕ್ಕೂ ರಾಜಕೀಯ ಬೆಂಬಲ ಸಿಗುತ್ತಿರುವುದು ಮತ್ತೊಂದು ಸಮಸ್ಯೆಯಾಗಿದೆ. ಶಿಕ್ಷಣ ಸೇವೆಯ ಬದಲು ವ್ಯಾಪಾರವಾಗುತ್ತಿರುವಾಗ, ಸಾಮಾನ್ಯ ಕುಟುಂಬದ ಮಕ್ಕಳಿಗೆ ಉತ್ತಮ ಶಿಕ್ಷಣ ಕನಸಾಗಿಬಿಡುತ್ತದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಂವಿಧಾನಾತ್ಮಕವಾಗಿ ಸೌಲಭ್ಯ ಕೇಳಿದರೆ 'ಜಾತಿಯ ಹೆಸರಿನಲ್ಲಿ ಒಡೆದು ಆಳುವ ನೀತಿ' ಎಂಬ ಆರೋಪಗಳು ಕೇಳಿಬರುತ್ತಿವೆ. ಸಮಾನತೆ ಪ್ರತಿಯೊಬ್ಬ ನಾಗರಿಕನ ಕನಸಾಗಿದೆ. ಅದನ್ನು ಜಾರಿಗೊಳಿಸುವ ಮೊದಲು ಭಾರತದ ಪ್ರತಿಯೊಬ್ಬ ನಾಗರಿಕನೂ ಆರ್ಥಿಕವಾಗಿ ಸದೃಢನಾಗಬೇಕು. ನಂತರ ಸಮಾನತೆಯ ಹೆಸರಿನಲ್ಲಿ ರಾಜಕೀಯ ಶಕ್ತಿಯ ಮೂಲಕ ಜಾತಿ ನಿರ್ಮೂಲನೆ ಕಾರ್ಯ ಯಶಸ್ಸಿನ ದಾರಿಯಲ್ಲಿ ಸಾಗಬಹುದು.

      ರಾಜಕೀಯ ಮತ್ತು ಹಣದ ಪ್ರಭಾವದಿಂದ ಶಿಕ್ಷಣ ಸಮಾನತೆಯ ಹಾದಿಯಿಂದ ದೂರ ಸಾಗುತ್ತಿದೆ. ನಮ್ಮ ರಾಜಕೀಯ ಚಿಂತನೆ ಶಿಕ್ಷಣದಲ್ಲಿ ರಾಜಕೀಯ, ಜಾತಿಯತೆ, ಧರ್ಮ ಸಂಘರ್ಷ ಹಲವು ಕಾರಣಗಳಿಂದ ಒಡೆದು ಆಳುವ ನೀತಿ ನಡೆಯುತ್ತಲೇ ಇದೆ. ಈ ಕುತಂತ್ರ ಶಿಕ್ಷಣದಲ್ಲಿನ ಸಂಘಟನೆಗಳದ್ದೋ, ಅಥವಾ ಅವುಗಳಿಗೆ ಬೆಂಬಲ ನೀಡುವ ರಾಜಕೀಯದೋ? ಸಂಘಟನೆಗಳು ರಾಜಕೀಯವನ್ನು ಅವಲಂಬಿಸಿ, ರಾಜಕೀಯವು ಸಂಘಟನೆಗಳನ್ನು ಅವಲಂಬಿಸಿ, ಶಿಕ್ಷಣ ವ್ಯವಸ್ಥೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಆದ್ದರಿಂದ ಶಿಕ್ಷಣ ವ್ಯವಸ್ಥೆಯನ್ನು ರಾಜಕೀಯದ ಅತಿಯಾದ ಪ್ರಭಾವದಿಂದ ದೂರವಿಡುವುದು ಅತ್ಯಂತ ಅಗತ್ಯ ಶಿಕ್ಷಣ ಸಂಸ್ಥೆಗಳು ರಾಜಕೀಯ ಪ್ರಚಾರದ ವೇದಿಕೆಗಳಾಗದೆ, ಜ್ಞಾನ ಮತ್ತು ಮಾನವೀಯ ಮೌಲ್ಯಗಳ ಬೆಳವಣಿಗೆಯ ಕೇಂದ್ರಗಳಾಗಬೇಕು. ಸರ್ಕಾರವು ಶಿಕ್ಷಣವನ್ನು ಅಧಿಕಾರದ ಸಾಧನವಾಗಿ ನೋಡದೆ. ರಾಷ್ಟ್ರ ನಿರ್ಮಾಣದ ಶಕ್ತಿಯಾಗಿ ಪರಿಗಣಿಸಬೇಕು. ಯಾಕೆಂದರೆ ಇಂದಿನ ವಿದ್ಯಾರ್ಥಿಗಳೇ ನಾಳಿನ ದೇಶದ ಭವಿಷ್ಯ. ಇಂದು ಉತ್ತಮ ಶಿಕ್ಷಣ ನೀಡಿದರೆ, ನಾಳೆ ಉತ್ತಮ ರಾಷ್ಟ್ರ ನಿರ್ಮಾಣ ಮಾಡಬಹುದು.

ಉಪಸಂಪಾದಕ, ಬಿತ್ತಿ ಸಂಪಾದಕ ಮಂಡಳಿ

ಸಂಚಿಕೆ - ೨೦

ಸೊಳ್ಳೆಲು ತುಳುನಾಡ್

ಈ ತುಳುನಾಡ್ ಪರಶುರಾಮನ ಸೃಷ್ಟಿ 

ಆ ಪೊರ್ಲುಗು ತಾಗಾಂದೆ ಇಪ್ಪಂದ್ ಏರನಲಾ ದೃಷ್ಟಿ 

ಪದಕುಲೆ ತಿಕ್ಕಂದ್ ವರ್ಣನೆ ಕೊರ್‍ಯರೆ  

ಮೋಕೆ ಉಂಡು ಈ ಭೂಮಿಡ್ ನೂದ್ ವರುಷ ಬದ್ಕ್ಯರೆ


ಮೂಲು ತುಳುವೆರೆನ ಬಾಸೆನೆ ಪೊರ್ಲು 

ಮೀನು ಪತ್ತುನ ಬಾರಿ ಮಲ್ಲ ಮರ್ಲ್ 

ಜನಕುಲು ಬದುಕುವೆರ್ ಜೀವನ ಒರಿಪಯೆರೆ 

ದೈವ-ದೇವೆರ್ ಕಾಪುವೆರ್ ಈ ನಾಡ್ ನೊರಿಪಾಯರೆ 

ವೈಕ್ಲಾ ಕಮ್ಮಿ ಇಜ್ಜೆರ್ ನಮ್ಮ ತುಳುವೆರ್ 

ಜನ್ಮತಾಳಿಯೆರ್ ಈ ನಾಡ್ ಕೋಟಿ ಚೆನ್ನಯೆರ್

 ತೂವರೆ ಪೊರ್ಲು ಮುಲ್ಪ ದೈವೋಲೆನ ಕೋಲ


ಯಕ್ಷಗಾನದ ಮೇಳ, ನಾಗಾಲೆನ ತಂಬಿಲ 

ತುಳುನಾಡ್ಡ ಜನಕುಲೆನ ಮನಸ್ ಮುಗ್ಧ 

ಕಪಟನೆ ತೆರಿಯಂದಿನ ಪಾಪದ ಜೀವಗೆ 

ಅಂಚ ಪಂಡ್ಸ್ ಮೋಸೊಗು ಜಾರಯೆರ್ 

ತಪ್ಪುನು ತೂದು ಮನಿಪಂದೆ ಕುಲ್ಲಯೆರ್ 

ಗೊತ್ತು ಉಂಡು ಎಂಕು ತುಳುನಾಡ್ಡ ಬಾಲೆ ಎನ್ನಿಯೆರೆ 

ಅಪ್ಪೆ ಬಾಸೆ ತುಳು ಪಂಡ್‌ದ್ ಪನಿಯರೆ ಖುಷಿ ಅಪುಂಡು 

ಸೊಲ್ಮೆ ಸಂದಾವೆ ತುಳುನಾಡ ಅಪ್ಪೆಗ್ 

ಅಂಚನೆ ಎನ್ನ ಪೆದಿಯಪ್ಪೆಗ್


ರಚನೆ : ತಳು ಭಾಷೆ, ಅನೂಪ್ ಕುಮಾರ್, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೨೦

ತುಳು ನಾಡಿಗೆ ನಮನಗಳು

 

ಈ ತುಳುನಾಡು ಪರಶುರಾಮನ ಸೃಷ್ಟಿ 

ಆ ಸೊಬಗಿಗೆ ತಾಕದಿರಲಿ ಯಾರ ದೃಷ್ಟಿ 

ಪದಗಳಲಿ ವರ್ಣಿಸಲಾಗದು ಇವಳ ರೂಪ 

ಈ ನಾಡಿನಲ್ಲಿ ಶತವರ್ಷ ಬದುಕುವುದೆನಗಿಚ್ಚೆ


ಈ ತುಳುವರ ನಾಡ್ ನುಡಿಯೇ ಚೆಂದ 

ಹುಚ್ಚುಮನಸೆನೆಗೆ ಮೀನು ಹಿಡಿಯಲು 

ಜನರ ಜೀವನಕ್ಕೆ ಒಂದಾಗಿ ಬದುಕುವರು 

ಈ ನಾಡ ಸಮೃದ್ಧಿಗೆ ದೈವ ರಕ್ಷಣೆ ಕಾವಲು 

ಯಾವುದಕ್ಕೂ ಹಿಂಜರಿಯರು ತುಳುವ‌ರ್ 

ಕೋಟಿ ಚೆನ್ನಯ್ಯ ಹುಟ್ಟಿದ ಈ ನಾಡಲ್ಲಿ 

ದೈವಗಳ ಕೋಲದ ಮುನ್ನೋಟವೇ ಚೆಂದ


ಯಕ್ಷಗಾನದ ಮೇಳ, ನಾಗದ ತಂಬಿಲದ ಹಬ್ಬ 

ತುಳುನಾಡಿನ ಜನರ ಮನಸ್ಸೇ ಮುಗ್ಧ 

ಕಪಟವೇ ತಿಳಿಯದ ಮುಗ್ಧ ಜೀವಗಳು 

ಹಾಗಂತ ಮೋಸಕ್ಕೆ ಒಳಗಾಗುವರಲ್ಲ 

ತಪ್ಪನು ನೋಡಿ ಮೌನವರಿಸುವವರಲ್ಲ 

ಗೊತ್ತೇನಗೆ ತುಳುನಾಡಡ್ ಪುಟ್ಟಿದ್ ಹೆಮ್ಮೆನಗೆ 

ತಾನ್ನುಡಿ ತುಳುವೆಂದು ಪೇಳಲ್ ಖುಷಿ 

ಕೃತಜ್ಞತೆಯ ಅರ್ಪಿಸುವೆ ತುಳುನಾಡ ತಾಯಿಗೆ 

ಹಾಗೆಯೇ ನನ್ನ ಹೆತ್ತತಾಯಿಗೆ


ಅನುವಾದ : ಕನ್ನಡ ಭಾಷೆ, ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೨೦

ತುಳುನೇಲಕಿ ನಮಸ್ಕಾರಂ

ಈ ತುಳುನೇಲ ಪರಶುರಾಮುನಿ ಸೃಷ್ಟಿ 

ಈ ನೇಲಕಿ ಪಡಗೂಡದು ಏವ್ವರಿ ದೃಷ್ಟಿ 

ಮಾಟಲ್ಲೋ ಚಪ್ಪಲೇನಿ ರೂಪಮಿದಿ 

ಈ ನೇಲಲ್ಲೊ ವಂದ ಸಂವತ್ಸರಂ ಬ್ರತಿಕೆ ಆಶನಾದಿ


ಈ ತುಳುನೇಲ ಭಾಷ ಸುಂದರಂ 

ಚಾಪಲು ಪಟ್ಟೆದಂಟೆ ಚಾಲ ಇಷ್ಟಂ 

ಮನುಷುಲು ಜೀವಿತಂಲೊ ವಕಟ್ಟೆ ಬತುಕುತು 

ಈ ನೇಲ ಸಂಮೃದ್ಧಿಕಿ ದೈವಾಲೆ ಕಾಪುಲಂ 

ದೇನಿಕಿ ವೆನಕ ಜರಗನಿ ತುಳುವೊಳ್ಳು 

ಕೋಟಿ ಚೆನ್ನಯ್ಯುಲು ಪುಟ್ಟಿನ ಈ ನೇಲಲೊ 

ದೈವ ಕೋಲಾಲ ಚೂಸೆದೆ ಆನಂದಂ


ಯಕ್ಷಗಾನಾಲ ಮೇಳಂ ನಾಗದೇವುನಿ ಆರಾಧನಂ 

ತುಳುನೇಲ ಮನುಷ್ಯುಲ ಮಂಚಿತನಂ 

ಚೆಡು ತೆಲಿಯನಿ ಮಂಚಿ ಜೀವಮುಲುಗಾನಿ 

ಮೋಸಾನಿಕಿ ಗುರೈಯೆವ್ವಾಳ್ಳು ಕಾರು 

ತಪ್ಪುನಿ ಚೂಸಿ ಊಕೆ ಉಂಡೆವಾಳ್ಳು ಕಾರು 

ತೆಲುಸು ನಾಕು ಈ ನೇಲಲೊ ಪುಟ್ಟಿನ ಪುಣ್ಯಂ ನಾದಿ

ತಲ್ಲಿನೇಲ ತುಳುವನಿ ಚಪ್ಪೇದಿ ಆನಂದಂ 

ಕೃತಜ್ಞತುಲು ಚಬುತುನ್ನ ತುಳುನೇಲ ತಲ್ಲಿಕಿ 

ಅಲಾಗೆ ನನು ಕನ್ನ ತಲ್ಲಿಕಿ


ಅನುವಾದ : ತೆಲುಗು ಭಾಷೆ, ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ


ತುಳು ಭೂಮಿಲ ನಮನ್

ಎ ತುಳುಭೂಮಿ ಅಯ್ ಪರಶುರಾಮಾಂಚ ಸೃಷ್ಟಿ 

ಹಿ ಭೂಮಿಲ ಲಾಗುಣಕು ಕುಣಾಚ ದೃಷ್ಟಿ 

ಗೋಟಿನಿ ಭೋಲುನಾರ್ ನೈ ಹಿಜ ರೂಪ್ ಮಿ 

ಹಿ ಭೂಮಿನಿ ಶಂಭರ್ ವರ್ಷ್ ವಾಚಣಾರ್ ಪ್ರೇಮಿ


ಹಿ ತುಳುವಾಂಚೆ ಗೋಟೆ ಕಿತಿ ಚಂದ್ಗೊ

ಜ್ವರೆ ದರಾಲ ಲೈ ಲೈ ಅವಾಡ್ಲಿಗೊ 

ಏಕ್ ಹೋಣ್ ವಾಂಚಣರ್ ಹಿ ಮಾನೂಸ 

ಎ ಭೂಮಿಂಚ ಸಂಮೃದ್ದಿಲ ದೈವ ರಾಕ್ಟಾರ್ ಹೈಸ 

ಮಾಗ ಜಾಣಾರ್ ನೈ ತುಳು ಮಾಣಸ 

ಕೋಟಿ ಚೆನ್ನಯ ತೆನಿ ಉಬುಜುಲ ಭೂಮಿಂದ್ 

ದೈವಕೋಲ ಬಗತೇಲ ಲೈ ಚಾಂದ್


ಯಕ್ಷಗಾನಾಂಚ ಮೇಳ ನಾಗದೇವಾಂಚ ಸನ್ನಾಲ 

ತುಳುಮಾನ್ಸಾಂಚ ಹೃದಯ್ ಚಾಂಗ್ಲಸ್ 

ವಾಯಬೂದ್ ನಸ್ಥೆ ಚಂಗ್ಲಿ ಮಾಣುಸ್ 

ಭಗ ಚೂಕಾಣಿ ಜಾಣರ್ ನೈ 

ಚೂಕ್ ಬಗುನ್ ಗಪ್ಪಸುಣರ್‌ ನೈ 

ತುಳುಭೂಮಿನಿ ಉಬುಜುಲೆತೆಲ ಲೈ ಆನಂದ್ ಮನ 

ಮಾಯ್ ಭೂಮಿ ತುಳುಮನು ಲೈ ಖುಷಿಮನ 

ವಂದನ್ ಸಾಂಗುತೊ ಮಾಯಿ ತುಳುಭೂಮಿಲ 

ತಸಿಚ್ ಮಾಜಿ ಅಳುಜುಲ ಮಾಯಿಲ.


ಅನುವಾದ : ಮರಾಠಿ ಭಾಷೆ, ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೨೦

ಹುಟ್ಟಿಗೊಂದೇ ಬದುಕು

ಹುಟ್ಟಿಗೊಂದೇ ಬದುಕು, ಈ ಬದುಕು 

ಏನು ಲೀಲಾಜಾಲ ಈ ಜಾಲ


ಹಳೆಯ ಸೇತುವೆ, ಬಿದ್ದಿವೆ ಬಿಳಿಯ ಹೂವು 

ಮರುಕ ಪಟ್ಟಿವೆ ಒಂದಕೊಂದು, ಏನು ಕಾರಣ


ಹುಡುಕಲು ಏನಿಲ್ಲ, ನಮ್ಮೊಳಗೆ ನೂರೆಂಟು 

ಬಿತ್ತದೇ ಬೀಜ, ಕತೆಯಾಗಿ ಬೆಳೆವುದೆಲ್ಲಿ?


ನಗುವ ಹಣ್ಣಿಗೆ, ಬೇರು ದೂರ ಗಾವುದು ದೂರ 

ದಿಕ್ಕು ನೋಡದ ಬೆಂಕಿ, ಹೊತ್ತುವುದು ಹೆಚ್ಚೇನು?


ಪರಶುರಾಮ್, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೨೦

ಕವನಗಳು

ಮರೆಯಲಾಗದ ಅವಳ ಸೌಂದರ್ಯ 

ಮರೆತರು ಕಾಡುವ ಅವಳ ನೋಟ 

ಉಸಿರು ಇರುವ ತನಕ ಕಾಡುವ ಅವಳು 

ಕಲಿಸಿ ಹೋದ ಪ್ರೇಮದ ಪಾಠ......


ಸಿಗಲಾರದ ಗೆಳತಿ 

ಮರೆಯಲಾಗದ ಪ್ರೀತಿ 

ಆ ನನ್ನ ಒಡತಿ ಬಂಗಾರಿ......


ಬದುಕೆಂಬ ಸಮುದ್ರದಲ್ಲಿ 

ಅವಳ ನೆನಪಿನ ದೋಣಿಯಲ್ಲಿ 

ತೀರವಿಲ್ಲದ ಕಡೆ ಈ ನನ್ನ 

ಪ್ರೀತಿಯ ಪಯಣ......


ಅವಿನಾಶ ಎನ್., ಎಂ.ಪಿ.ಇಡಿ. ಪ್ರಥಮ ವರ್ಷ, ದೈಹಿಕ ಶಿಕ್ಷಣ ವಿಭಾಗ

ಸಂಚಿಕೆ - ೨೦

ಸರಪಳಿಯ ಪ್ರಜಾಪ್ರಭುತ್ವ

ಕಣ್ಣು ತೆರೆದರೆ, ಮುಚ್ಚಿದಂತೆ, 

ಆಡುವೆವು ಈ ನಾಟಕ ರಂಗಭೂಮಿಯಲಿ 

ನೀರು ಹಾಕುವವರಾರು ಈ ಬರಡು ಭೂಮಿಗೆ, 

ಹೂದೋಟ ಬಾಡುತಿದೆ, ಕಳ್ಳಿ ಗಿಡಗಳಲ್ಲ; 

ಆದೆವು ನಾವು ಸರಪಳಿ ಬಳಿದ ಗುಲಾಮನಂತೆ


ಪ್ರಶ್ನೆಯ ಕೇಳಿದರೆ ರಾಷ್ಟ್ರ ವಿರೋಧಿ 

ಮೌನ ಒಳಿತರೆ ರಾಷ್ಟ್ರಾಭಿಮಾನಿ 

ತುಂಡಾಗಿದೆ ಈ ಮಣ್ಣು, ಇದರ ಹೊಲಿಯುವವನಾರು 

ಜಾತಿ,ಧರ್ಮ,ವರ್ಣ,ಲಿಂಗ ಬೇಧ ನುಡಿವವರು; 

ಆದೆವು ನಾವು ಸರಪಳಿ ಬಳಿದ ಗುಲಾಮನಂತೆ


ಸಾರ್ವಭೌಮತ್ವ ಎಂದು ಪುಸ್ತಕದಲ್ಲಿ 

ಬೊಂಬೆಯಾಟ ತೆರೆಯುವ ಪುಟಗಳಲ್ಲಿ 

ಶಬ್ದಗಳಿಗೆ ಬಣ್ಣವ ಎರಚುವೆವು 

ಕಹಿ ಶಬ್ದಗಳ ಮುಚ್ಚುವೆವು 

ಇದೇ ನನ್ನ ಪ್ರಜಾಪ್ರಭುತ್ವ, ಇದೇ ನನ್ನ ವಿಕಸಿತ ದೇಶ....


ಎಂ.ಚರಾಂತಿಯಾ(ಕಾವ್ಯನಾಮ)

ಸಂಚಿಕೆ - ೨೦

ಅಮ್ಮ

ಮನೆ ಒಳಹೊಕ್ಕು 'ಉಮ್ಮಾ' ಎಂದರೆ 

ಓ ಎನ್ನುವಳು ಅಲ್ಲಿಂದಲೇ 

ಕೈ ಚಾಚಿ ಬಾ ಮಗು ಎಂದರೆ 

ನಾ ಸೇರುವೆ ಮಡಿಲನ್ನು ಬಹುಬೇಗನೇ


ಒಳ ಸೇರಿ 'ಉಪ್ಪಾ' ಎಂದರೆ 

ಬಾ ಮಗು ಎನ್ನುವರು ಅಲ್ಲಿಂದಲೇ 

ಬಳಿ ಹೋಗಿ ತೋಳಲ್ಲಿ ಕೂತರೆ 

ಮುದ್ದಾಡಿ ಪ್ರೀತಿಸುವರು ಆಗಿಂದಲೇ


ಮನೆ ಸೇರಿ ಉಪ್ಪಾ, ಉಮ್ಮಾ ಎಂದರೆ 

ಓಡೋಡಿ ಬರುವರು ಒಳಗಿಂದಲೇ 

'ಈ ಮನೆ ಬೆಳಕು' ನೀನೆಂದು ಹೇಳಿ 

ಖುಷಿಯಾಗುವರು ಒಳಗಿಂದಲೇ.


ಟಿ.ಎ. ಸುಮನ್ ಜಬೀನಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೨೦

ಪಯಣದ ದಾರಿಯಲ್ಲಿನ ಘಟನೆ

      ಒಂದು ದಿನ ದೂರದ ಪಯಣಕ್ಕೆ ಹೊರಟಿದ್ದೆ. ಎಂದಿನಂತೆ ಸರ್ಕಾರಿ ಬಸ್‌ನಲ್ಲೇ ಪ್ರಯಾಣ. ಬಸ್ ತುಂಬಾ ಜನಜಂಗುಳಿಯಿಂದ ಕಿಕ್ಕಿರಿದು ತುಂಬಿತ್ತು. ಹೇಗೋ ನಮಗೆ ಉಚಿತ ಟಿಕೆಟ್ ಇರುವುದರಿಂದ ಹಣದ ಚಿಂತೆ ಇರಲಿಲ್ಲ. ನಾನು ಯಾವಾಗಲೂ ಮಾಡುವಂತೆ ಎಲ್ಲರೂ ಹತ್ತಿದ ನಂತರವೇ ಬಸ್ಸಿಗೆ ಹತ್ತಿದೆ. ಸಾಕಷ್ಟು ಕಷ್ಟಪಟ್ಟು ಒಂದು ಸ್ಥಳ ಸಿಕ್ಕಿತು. ಬೇಸಿಗೆಯ ಬಿಸಿಲು ಹೆಚ್ಚಾಗಿದ್ದರಿಂದ ಬಸ್ಸಿನೊಳಗೆ ಸೆಕೆ ಸಹ ಜಾಸ್ತಿಯೇ ಇತ್ತು. ಹೀಗೆ ಪಯಣ ಸಾಗುತ್ತಾ ಇದ್ದಾಗ ನನಗೆ ನಿದ್ದೆ ಬಂತು.

      ಸ್ವಲ್ಪ ಸಮಯದ ನಂತರ ಒಂದು ಸ್ಥಳದಲ್ಲಿ ಬಸ್ ನಿಂತಿತು. ಅಲ್ಲಿ ಒಂದು ಕುಟುಂಬ ಬಸ್ಸಿಗೆ ಹತ್ತಿತು. ಒಬ್ಬ ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು. ಅವರಲ್ಲಿ ಒಬ್ಬಳು ವಯಸ್ಸಿನಲ್ಲಿ ದೊಡ್ಡವಳಾಗಿದ್ದರೂ ಅವಳ ವರ್ತನೆ ನೋಡಿದಾಗ ಮಾನಸಿಕವಾಗಿ ಅನಾರೋಗ್ಯವನ್ನು ಎದುರಿಸುತ್ತಿದ್ದಾಳೆ ಎನ್ನಿಸಿತು. ದೈಹಿಕವಾಗಿ ಚೆನ್ನಾಗಿದ್ದರೂ ಅವಳ ವರ್ತನೆ ಚಿಕ್ಕ ಮಗುವಿನಂತಿತ್ತು. ಕಿಟಕಿಯಿಂದ ಕಾಣುವ ಪ್ರತಿಯೊಂದು ವಸ್ತುವನ್ನೂ ತಾಯಿಗೆ ತೋರಿಸುತ್ತಾ ಸಂತೋಷಪಡುತ್ತಿದ್ದಳು. ತಾಯಿ ಸಹ ಶಾಂತವಾಗಿ ಅವಳ ಮಾತುಗಳಿಗೆ ಉತ್ತರಿಸುತ್ತಿದ್ದರು. ಮತ್ತೊಬ್ಬಳು ಆಧುನಿಕ ಶೈಲಿಯ ಉಡುಪಿನಲ್ಲಿ ಇದ್ದಳು. ಅವಳಿಗೆ ಆ ಹುಡುಗಿ ತನ್ನ ಅಕ್ಕ ಎನ್ನಿಸಿಕೊಳ್ಳಲು ಮುಜುಗರವಿತ್ತೇನೋ ಎನ್ನಿಸಿತು. ಇಬ್ಬರೂ ಬೇರೆ ಬೇರೆ ಕಡೆ ಕುಳಿತರು. ಅವರ ಪಕ್ಕದಲ್ಲಿ ಒಬ್ಬ ಯುವಕ ಕುಳಿತಿದ್ದನು. ಮೊದಲಿಗೆ ಅವನಿಗೆ ಆ ಹುಡುಗಿಯ ಸ್ಥಿತಿ ಅರ್ಥವಾಗಿರಲಿಲ್ಲ. ಆದರೆ ಬಸ್ ಸಾಗುತ್ತಿದ್ದಂತೆ ಅವಳು ಸರಿಯಾಗಿ ಕುಳಿತುಕೊಳ್ಳಲು ಕಷ್ಟಪಡುತ್ತಿದ್ದಳು. ಅವನು ಪದೇ ಪದೇ “ಸರಿ ಕುಳಿತುಕೊಳ್ಳಿ" ಎಂದು ಹೇಳುತ್ತಿದ್ದ. ನಂತರ ತಾಯಿಯು ಅವಳಿಗೆ ಆರೋಗ್ಯ ಸರಿ ಇಲ್ಲ ಎಂದು ತಿಳಿಸಿದರು. ಆದರೆ ಎಲ್ಲವನ್ನೂ ಒಬ್ಬ ತಾಯಿ ಸಹಿಸಿಕೊಳ್ಳುತ್ತಾಳೆ ವಿನಃ ಇತರರು ಅಷ್ಟೇ ಸಹನೆಯಿಂದ ವರ್ತಿಸುವುದು ಕಷ್ಟ. ಹೀಗೆ ಪಯಣ ಮುಂದುವರಿಯಿತು.

      ಫಾಟ್ ಪ್ರದೇಶ ಆರಂಭವಾಯಿತು. ಘಾಟ್ ದಾರಿಯಲ್ಲಿ ಬಸ್ ಒಂದೆಡೆ ವಾಲುವುದು ಸಹಜ. ಕಿಟಕಿಯ ಬಳಿ ಕುಳಿತಿದ್ದ ಯುವಕನಿಗೂ, ಮಧ್ಯದಲ್ಲಿ ಕುಳಿತಿದ್ದ ಆ ಹುಡುಗಿಗೂ ತೊಂದರೆ ಆಗುತ್ತಿತ್ತು. ಅವಳಿಗೆ ಸರಿಯಾಗಿ ಕುಳಿತುಕೊಳ್ಳಲು ಆಗದೆ ಅವನ ಮೇಲೂ ವಾಲುತ್ತಿದ್ದರು. ಅವನು ಪದೇ ಪದೇ “ಸರಿ ಕುಳಿತುಕೊಳ್ಳಿ" ಎಂದು ಹೇಳುತ್ತಿದ್ದ. ಇದನ್ನು ಗಮನಿಸುತ್ತಿದ್ದ ತಾಯಿಗೆ ಕೋಪ ಬಂತು. "ಅವಳಿಗೆ ಆರೋಗ್ಯ ಸರಿ ಇಲ್ಲ ಎಂದು ಹೇಳಿದ ಮೇಲೂ ಯಾಕೆ ಪದೇ ಪದೇ ಸರಿ ಕುಳಿತುಕೊಳ್ಳಿ ಎಂದು ಹೇಳುತ್ತೀರಿ?" ಎಂದು ಯುವಕನೊಂದಿಗೆ ವಾಗ್ವಾದಕ್ಕೆ ಇಳಿದರು. ಬಸ್ಸಿನಲ್ಲಿದ್ದ ಎಲ್ಲರಿಗೂ ಅದು ಜಗಳದಂತೆ ಕಾಣಿಸಿತು. ಕೆಲವರು “ಸುಮ್ಮನಿರಿ" ಎಂದರು. ಇನ್ನೂ ಕೆಲವರು "ಇಂತಹವರನ್ನು ಸಾರ್ವಜನಿಕ ಬಸ್ಸಿನಲ್ಲಿ ಕರೆದುಕೊಂಡು ಬರಬಾರದು. ಬಾಡಿಗೆ ವಾಹನ ಮಾಡಿಕೊಳ್ಳಬೇಕು" ಎಂದರು.

      ಆದರೆ ಆ ತಾಯಿಯ ಮಾತುಗಳಲ್ಲಿ ಕೋಪಕ್ಕಿಂತ ಹೆಚ್ಚು ಮಗಳ ಮೇಲಿನ ಕಾಳಜಿ ಕಾಣುತ್ತಿತ್ತು. ಕೊನೆಗೆ ಆ ಯುವಕನನ್ನು ಬೇರೆ ಸ್ಥಳದಲ್ಲಿ ಕೂರಿಸಲಾಯಿತು. ಅವನಿಗೂ ಸಮಾಧಾನವಾಯಿತು. ತಾಯಿಯೂ ತನ್ನ ಮಗಳಿಗೆ ಆಗುತ್ತಿರುವ ಕಷ್ಟದ ಬಗ್ಗೆ ಹೇಳುತ್ತಲೇ ಇದ್ದಳು. ಕೊನೆಗೆ ಸಕಲೇಶಪುರ ಬಂದಿತು. ಅವರು ಇಳಿದರು. ನಾನು ಸಹ ಇಳಿದೆ. ಬಸ್ಸಿನಲ್ಲಿದ್ದ ಹಲವರು ಆ ತಾಯಿಯನ್ನು ಬೈಯುತ್ತಿದ್ದರು. ಆ ಸಮಯದಲ್ಲಿ ನನಗೂ ಸಹ ಸಿಟ್ಟು ಬಂದಿತ್ತು. "ಇಷ್ಟು ಸಣ್ಣ ವಿಷಯಕ್ಕೆ ಯಾಕೆ ಇಷ್ಟೊಂದು ಜಗಳ?" ಎಂದು ಅನ್ನಿಸಿತ್ತು. ನನ್ನ ನಿದ್ದೆಯೂ ಹಾಳಾಗಿತ್ತು. ಆದರೆ ನಂತರ ಯೋಚಿಸಿದಾಗ ಒಂದು ಸತ್ಯ ಮನಸ್ಸಿಗೆ ಬಂತು. ಜಗತ್ತಿಗೆ ಅವಳು ಜಗಳಗಂಟಿ ಅನ್ನಿಸಿರಬಹುದು. ಆದರೆ ಒಬ್ಬ ತಾಯಿಯಾಗಿ ಅವಳು ತನ್ನ ಮಗಳ ಪರವಾಗಿಯೇ ನಿಂತಿದ್ದಳು. ಯಾವ ಪರಿಸ್ಥಿತಿಯಲ್ಲೂ ತನ್ನ ಮಗುವಿನ ನೋವಿಗೆ ತಾಯಿ ಮಾತ್ರ ಅಷ್ಟು ತೀವ್ರವಾಗಿ ಪ್ರತಿಕ್ರಿಯಿಸುತ್ತಾಳೆ.

      ಕೊನೆಗೆ ನನಗೆ ಅನ್ನಿಸಿತು - ತಾಯಿ ಹೃದಯದ ಪ್ರೀತಿ ಕೆಲವೊಮ್ಮೆ ಕೋಪವಾಗಿ ಕಾಣಬಹುದು. ಆದರೆ ಅದರೊಳಗೆ ಇರುವುದೇ ಮಮತೆ ಮತ್ತು ಕಾಳಜಿ,

ಸೌಮ್ಯ ಟಿ. ಎಸ್., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೨೦

ನೆಹರೂಜಿಯನ್ನು ಕಾಡಿದ ಫೋಸ್ಟಿನ ಕವಿತೆ

      ೧೯೬೪ ರಲ್ಲಾಗಿತ್ತು ಜವಾಹರಲಾಲ್ ನೆಹರೂ ಅವರ ಮರಣ. ಮರಣ ಹೊಂದುವ ವೇಳೆ ಅಮೇರಿಕನ್ ಮಹಾಕವಿ ರಾಬರ್ಟ್ ಫೋಸ್ಟ್ ಅವರ ಕಾವ್ಯ ಸಮಾಹಾರವೊಂದು ಬಳಿಯಿರಿಸಿದ್ದರು. ಫೋಸ್ಟಿನ ವಿಶ್ವ ವಿಖ್ಯಾತ 'Stopping by woods on a snowy Evening' ಎಂಬ ಕಾವ್ಯವಾಗಿತ್ತದು. ಆ ಕವಿತೆಯ ಕೊನೆಯ ನಾಲ್ಕು ಗೆರೆಗೆ ಅಡಿಗೆರೆಯಿಟ್ಟಿದ್ದರು ನೆಹರೂಜಿ:

"The woods are lovely, dark and deep,

But I have promises to keep, 

And miles to go before I sleep."

And miles to go before I sleep,

      ನೆಹರೂಜಿ ಕೊನೆಯ ಎರಡು ಗೆರೆಯನ್ನು ದಪ್ಪಕ್ಷರದಿಂದ ಬರೆದು ಮೇಜಿನ ಮೇಲಿಟ್ಟಿದ್ದರು. ಈ ಕವಿತೆಯಲ್ಲಿ ಉತ್ತಮ ಪಾಠವೊಂದಿದೆ. ನಿದ್ದೆಗೂ ಮುಂಚೆ, ನಿತ್ಯ ನಿದ್ದೆಗೂ ಮುಂಚೆ ಮಾಡಿ ಮುಗಿಸಬೇಕಾದ ಕನಸಿನ ಕುರಿತಾಗಿರಬಹುದು ಪ್ರೋಸ್ಪಿನ ಗೆರೆಗಳು ನೆಹರೂಜಿಯವರನ್ನು ಬಹುವಾಗಿ ಕಾಡುತ್ತಿದ್ದದ್ದು.

      ಒಂದು ಸಂಧ್ಯಾ ಸಮಯ, ಮಂಜುಗವಿದ ವಾತಾವರಣದಲ್ಲಿ ಕಾವ್ಯ ಪುರುಷ ಕುದುರೆ ಸವಾರಿ ನಡೆಸಲು ಹೊರಟಿದ್ದ. ಮರಗಳ ನಡುವೆಯಿಂದ ಮಂಜು ಸುರಿಯುವುದನ್ನು ಕಂಡು, ಒಂದು ಮರದಡಿಯಲ್ಲಿ ಕುದುರೆಗೆ ಗೂಟ ಹಾಕಿದರು. ಯಾಕೆ ಇಲ್ಲಿ ನಿಲ್ಲಿಸಿದ್ದೀರಿ ಎಂಬ ಕುದುರೆಯ ಪ್ರಶ್ನೆಗೆ ಕೊರಳಘಂಟೆ ಮತ್ತು ಮಂಜು ಬೀಳುವ ಶಬ್ದ ಕೇಳಿಸಿದ್ದಲ್ಲದೆ ಪ್ರತ್ಯುತ್ತರ ಏನೂ ಬರಲಿಲ್ಲ. ಫೋಸ್ಸಿನ ಕವಿತೆಗೆ ಮುಟ್ಟಿ ನೋಡಬಹುದಾದಷ್ಟು ಧನ್ಯಾತ್ಮಕತೆ ಇದೆ. ಈ ಕವಿತೆಯಲ್ಲಿನ ಕಾಡು ಒಂಥರಾ 'ಡ್ರಿಲ್' ಹುಟ್ಟಿಸುವಂತದ್ದು, ಕಾಡಿನ ಕಗ್ಗತ್ತಲು ಅದಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತದೆ. ನೆಹರೂಜಿ ಈ ಕವಿತೆಯಿಂದ ತಾನು ಕ್ರಮಿಸಬೇಕಾದ ದೂರದ ಕುರಿತು, ಗುರಿಯ ಕುರಿತು ಚಿಂತನೆಗೀಡಾಗುತ್ತಾರೆ. ನೆಹರೂಜಿಯವರು ಮರಣ ಹೊಂದುವ ಒಂದು ವರ್ಷ ಮುಂಚೆ ಫೋಸ್ಟ್ ವಿದಾಯ ಹೇಳುತ್ತಾರೆ. ಅಂದು ಅವರಿಗೆ ವಯಸ್ಸು ೮೮; ನೆಹರೂಜಿಗೆ ೭೫. ರಾತ್ರಿ ಒಂದೇ ಏಟಿಗೆ ಈ ಕವಿತೆಯನ್ನು ಬರೆದು ಮುಗಿಸುತ್ತಾರೆ ಫೋಸ್ಟ್ ೧೯೨೨ ಬರೆದ ಈ ಕವಿತೆ ೧೯೨೩ಕ್ಕೆ ಪ್ರಕಾಶನವಾಗುತ್ತದೆ. ನಿದ್ದೆಗೂ ಮೊದಲು ಓಡಿ ಮುಗಿಸಬೇಕಾದ ದೂರದ ಬಗ್ಗೆ ಓದುಗನನ್ನು ನೆನಪಿಸುತ್ತಾ ಹೋಗುತ್ತೆ.

      ಕವಿ ರಾಬರ್ಟ್ ಫೋಸ್ಟ್ ಅವರಿಗೆ ನಾಲ್ಕು ಬಾರಿ ಪುಲಿಟ್ಟರ್ ಪ್ರಶಸ್ತಿ ಸಿಕ್ಕಿದೆ: ಜಗತ್ತಿನಲ್ಲಿ ನಾಲ್ಕು ಬಾರಿ ಈ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ ಇವರು. ಇಡೀ ಲೋಕವೇ ಅಂಗೀಕಾರ ನೀಡಿದಂತೆ ಆಮೇರಿಕನ್ ಅಧ್ಯಕ್ಷ ಜೋನ್ ಎಫ್.ಕೆನ್ನಾಡಿಯವರಿಗೂ ಪ್ರಿಯ ಕವಿಯಾಗಿದ್ದರು ಫೋಸ್ಟ್ ೧೯೨೧ ಜನವರಿ ೨೦ ಕೆನಾಡಿ ಅಧ್ಯಕ್ಷರಾಗಿ ಸ್ಥಾನಲಂಕರಿಸುವ ಕಾರ್ಯಕ್ರಮದಲ್ಲಿ ಕವಿತೆ ವಾಚಿಸಲು ಎಂಬತ್ತಾರು ವರ್ಷ ಪ್ರಾಯವಿರುವ ಫೋಸ್ಸಿಗೆ ಆಹ್ವಾನ ಲಭಿಸಿತು. ಫೋಸ್ಟ್ ಆ ಕಾರ್ಯಕ್ರಮಕ್ಕಾಗಿ 'Dedication' ಕವಿತೆಯೊಂದನ್ನ ಬರೆದಿಟ್ಟರು. ಆದರೆ ಕಾಗದದ ಮೇಲೆ ಹರಡಿದ ತೀವ್ರ ಬಿಸಿಲಿನ ಕಾರಣದಿಂದ ವಾಚಿಸಲು ಸಾಧ್ಯವಾಗಲಿಲ್ಲ. ಬದಲಿಗೆ ನೆನಪಿನಲ್ಲಿರುವ ಕವಿತೆಯೊಂದನ್ನು ವಾಚಿಸಿದರು. ಈ ಕವಿತೆ ಸಾಕೆಂದು ಕೆನಾಡಿ ಮೊದಲೇ ಹೇಳಿದ್ದರೂ ಪದಗ್ರಹಣದ ಮೊದಲನೇ ದಿನ ಡೆಡಿಕೇಷನ್ ಬರೆದಿಟ್ಟಿದ್ದರು ಫೋಸ್ಟ್, ಆದರೆ ಸೂರ್ಯ ಕಿರಣಗಳು ನೇರವಾಗಿ ಹಾಳೆಯನ್ನಾಕ್ರಮಿಸಿದ ಕಾರಣದಿಂದ ಕವಿತೆ ಬದಲಿಸಬೇಕಾಗಿ ಬಂತು. ಅಮೇರಿಕನ್ ಪ್ರೆಸಿಡೆಂಟ್ ಪದಗ್ರಹಣದ ವೇಳೆ ಕವಿತೆ ವಾಚನ ಇದು ಮೊದಲ ಸಲವಾಗಿತ್ತು. ನಂತರ ಅದು ಮುಂದುವರಿಯಿತು. ಪ್ರೆಸಿಡೆಂಟ್ ಕೆನಾಡಿಗೆ ಫೋಸ್ಟಿನ ಕವಿತೆ ಇಷ್ಟವಾದರೂ ಅವನ ಇಷ್ಟದ ಕವಿತೆ ಫೋಸ್ಟ್ ಬರೆದದ್ದಾಗಿರಲಿಲ್ಲ. ಅಲ್ಪಡ್ ಡೈನಿಸನ್ ಬರೆದ 'ಯೂಲಸೀಸ್' ಕವಿತೆಯಾಗಿತ್ತದು. ಕೆನಾಡಿಯ ಸೆಕ್ರೆಟರಿಯಾಗಿದ್ದ ಎವಲಿನ್ ಲಿಂಗನ್ ತನ್ನ ಬಳಿಯಿರಿಸಿದ್ದ ಫೈಲಿನಿಂದಾಗಿತ್ತು ಈ ಡೈನಿಸನ್ನ ಕವಿತೆ ಹೊರ ಜಗತ್ತು ಕಾಣುವುದು.

      ಇಪ್ಪತ್ತು ವರ್ಷದ ಹಿಂದೆ ಬರೆದ 'The Gift Outright' ಎಂಬ ಕವಿತೆಯಲ್ಲಿ ಹೀಗೆ ಹೇಳುತ್ತಾರೆ: "ನಾವು ಈ ಊರಿನವರಾಗುವುದಕ್ಕಿಂತ ಮುಂಚೆ ಈ ಊರು ನಮ್ಮದಾಗಿತ್ತು. ಚರಿತ್ರೆಯೊಂದಿಗಿರುವ ಕಾವ್ಯ ಸಂಚಾರ ಹಾಗು ದೇಶಪ್ರೇಮದ ಕುರಿತು ಪಾಠ ಕಲಿಸುತ್ತದೆ ಫೋಸ್ಸಿನ ಈ ಕವಿತೆ. ಫೋಸ್ಟ್ ವಿದಾಯ ಹೇಳಿ ೬೦ ವರ್ಷವಾಯಿತು; ೧೯೬೩ ಜನವರಿ ೨೯ ರಂದಾಗಿತ್ತು ಮರಣ. ಫೋಸ್ಟಿನ ಗೋರಿಯ ಮೇಲೆ 'The Lessons for Today' ಎಂಬ ಕವಿತೆಯ ಗೆರೆಯೊಂದನ್ನು ಬರೆದಿಡಲಾಗಿದೆ: I had a lovers quarrel with the world. ಎಷ್ಟು ಅರ್ಥಗರ್ಭಿತವಲ್ಲವೇ ಈ ಗೆರೆ..!


ಮೂಲ : ಮಲಯಾಳಂ, Form Magazine

ಅನುವಾದ : ಸಲೀಂ ಸುಳ್ಯ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೨೦

ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು

      ಸುಂದರ ಪ್ರಕೃತಿಯ ಸೌಂದರ್ಯದ ಸೊಬಗನ್ನು ಹೊಂದಿರುವ ತಾಣ, ಒಂದರಲ್ಲಿ ದಿವ್ಯ ಜ್ಞಾನವನ್ನು ಭವ್ಯವಾಗಿ ಸಾರುವ ಜ್ಞಾನ ದೇಗುಲವು ಒಂದು. ಆ ದೇಗುಲದ ಮುಂಭಾಗದ ಆವರಣದಲ್ಲಿ ಗತಕಾಲದ ಸಾಹಿತ್ಯವನ್ನು ಸೆಳೆಯುವ ಶಾಸನಗಳು ಹಾಗೂ ಆ ದೇಗುಲದ ಎರಡು ಬದಿಯಲ್ಲಿ ಎಲ್ಲರನ್ನು ಕೈ ಬೀಸಿ ಕರೆಯುವಂತಹ ಸುಂದರ ಹೂ ಗಿಡ ಮರ ಬಳ್ಳಿಗಳು ಮತ್ತೊಂದು ಎಡ ಬದಿಯಲ್ಲಿ ವಾಹನ ನಿಲುಗಡೆಯ ತಾಣ ಇನ್ನೊಂದೆಡೆಗೆ ಜ್ಞಾನ ಮಂದಿರ ಕತೆಗೆ ಸೂಚಿಸುವ ಮಾರ್ಗ. ಇಂತಹ ಪ್ರಕೃತಿಯ ಆವರಣದಲ್ಲಿ ನಿರ್ಮಾಣಗೊಂಡ ಆ ಜ್ಞಾನ ದೇಗುಲವೆ ಕನ್ನಡದ ಕಂಪನ್ನು ಕರುನಾಡಿಗೆ ಅರ್ಪಿಸುವ ಮಂಗಳೂರು ವಿಶ್ವವಿದ್ಯಾನಿಲಯದ ಹೃದಯ ಭಾಗ. ಆ ಹೃದಯವೇ ನಮ್ಮ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು.

      ಈ ಸಂಸ್ಥೆಯ ಒಳನೋಟದ ಆರಂಭದ ಮೊದಲ ಹೆಜ್ಜೆಯ ಕಣೋಟಕ್ಕೆ ಕಾಣುವುವು... ಅರ್ಥ ಕೊಡುವ ಸಾವಿರ ಸಾಲುಗಳ ಪುಟಗಳನ್ನು ಒತ್ತುನಿಂತ ಪುಸ್ತಕಗಳ ಮುಖಪುಟಗಳ ಮೊನವಾಗಿಯೇ ನಮಗೆ ಅರಿವು ಮೂಡಿಸುವ ಸುಂದರ ಮೂರ್ತಿಗಳು ಹಾಗೆಯೆ ಜ್ಞಾನದ ಭಂಡಾರವನ್ನು ಒತ್ತು ನಿಂತ ಮತ್ತೊಂದು ಆಲಯ ಆದುವೇ ಕಾಲಿಕಾರ್ಥಿಗಳಿಗೇ ಅದ್ಭುತ ಗ್ರಂಥಾಲಯ ಅಧ್ಯಯನದ ಹಲವು ಮಜಲುಗಳಿಗೆ ಮೆರಗು ತಂದು ಕೊಡುವಂತಹ ನಾನಾ ಬಗೆಯ ಅಧ್ಯಯನ ಪೀಠಗಳು ಮತ್ತು ಸಂಶೋಧನಾರ್ಥಿಗಳ ಕೊಠಡಿಗಳು ಹಾಗೇ ನಮ್ಮ ನಿರಂತರ ಕಲಿಕೆಗೆ ಅನುಭವ ಕಲಿಕೆಯನ್ನು ಉಂಟುಮಾಡುವ ಅಧ್ಯಾಪಕರ ಕೊಠಡಿ. ಸಾವಿರ ನೆನಪುಗಳನ್ನು ಒತ್ತು ನಿಂತಿರುವ ತರಗತಿಯ ಕೊಠಡಿಗಳು ನಮ್ಮೆಲ್ಲರ ಕಾಲ ಪ್ರತಿಭೆಗೆ ಪೂರಕವಾದ ಸುಂದರ ವಿಚಾರ ವೇದಿಕೆ ಇಂತಹ ಹಲವು ಮಜಲುಗಳನ್ನು ಹೊಂದಿರುವ ಸಂಸ್ಥೆಯೇ ನಮ್ಮ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು.

ಮಹೇಶ್ ಜಿ.ಕೆ., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೨೦

ಚಿತ್ರಗಳು 

ಚಿತ್ರ ರಚನೆ : - ಚೈತ್ರಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ



ಸಂಚಿಕೆ - ೨೦

ಚಿತ್ರಗಳು 


ಚಿತ್ರ ರಚನೆ :- ಪ್ರೇಮಾವತಿ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ






ಸಂಚಿಕೆ - ೨೦

 ಚಿತ್ರಗಳು 

ಸೋಮವಾರ, ಮೇ 11, 2026

ಸಂಚಿಕೆ - ೧೯

 ಸಂಪಾದಕೀಯ


ಸಮಾನತೆ : ಹೋರಾಟದ ಗುರಿಯೇ, ಅಥವಾ ಹೊಸ ಅಸಮತೋಲನದ ಆರಂಭವೇ?

      ಇಂದಿನ ಸಮಾಜದಲ್ಲಿ "ಸಮಾನತೆ" ಎಂಬ ಪದವು ಕೇವಲ ಒಂದು ಶಬ್ದವಲ್ಲ; ಅದು ಚಳುವಳಿ, ಘೋಷಣೆ. ಹೋರಾಟ ಮತ್ತು ಚರ್ಚೆಗಳ ಕೇಂದ್ರವಾಗಿದೆ. ಮಹಿಳಾ ಹಕ್ಕುಗಳು, ಸ್ತ್ರೀವಾದ, ಮೀಸಲಾತಿ, ಸಾಮಾಜಿಕ ನ್ಯಾಯ, ಕಾನೂನು ರಕ್ಷಣೆ ಇವೆಲ್ಲವೂ ಸಮಾನತೆಯ ಹೆಸರಿನಲ್ಲಿ ನಡೆಯುತ್ತಿರುವ ಪ್ರಯತ್ನಗಳೇ. ಆದರೆ ಈ ಎಲ್ಲಾ ಚರ್ಚೆಗಳ ಮಧ್ಯೆ ಸಮಾಜವು ತನ್ನನ್ನೇ ಪ್ರಶ್ನಿಸಬೇಕಾದ ಒಂದು ಗಂಭೀರ ಸಂಗತಿ ಇದೆ. ನಾವು ನಿಜವಾಗಿಯೂ ಸಮಾನತೆಯತ್ತ ಸಾಗುತ್ತಿದ್ದೇವೆಯೇ? ಅಥವಾ ಕೆಲವೊಮ್ಮೆ ಸಮಾನತೆಯ ಹೆಸರಿನಲ್ಲಿ ಮತ್ತೊಂದು ಅಸಮತೋಲನವನ್ನು ಸೃಷ್ಟಿಸುತ್ತಿದ್ದೇವೆಯೇ? ಇತಿಹಾಸವನ್ನು ನೋಡಿದರೆ ಮಹಿಳೆಯರು ಅನೇಕ ಶತಮಾನಗಳ ಕಾಲ ಶಿಕ್ಷಣದಿಂದ, ಆರ್ಥಿಕ ಸ್ವಾತಂತ್ರದಿಂದ, ರಾಜಕೀಯ ಹಕ್ಕುಗಳಿಂದ ಮತ್ತು ಸಾಮಾಜಿಕ ಗೌರವದಿಂದ ವಂಚಿತರಾಗಿದ್ದರು. ಮನೆಯ ಅಂತರಾಳದಲ್ಲೇ ಸೀಮಿತವಾಗಿದ್ದ ಮಹಿಳೆಯರ ಧ್ವನಿ ಬಹಳ ಸಮಯ ಸಮಾಜದ ಹೊರಗೆ ಕೇಳಿಸಲೇ ಇಲ್ಲ. ಈ ಅನ್ಯಾಯವನ್ನು ತಿದ್ದಬೇಕೆಂಬ ಉದ್ದೇಶದಿಂದ ಮಹಿಳಾ ಚಳುವಳಿಗಳು ಹುಟ್ಟಿಕೊಂಡವು. ಮಹಿಳಾ ರಕ್ಷಣಾ ಕಾನೂನುಗಳು, ಮೀಸಲಾತಿಗಳು, ಜಾಗೃತಿ ಕಾರ್ಯಕ್ರಮಗಳು ರೂಪುಗೊಂಡವು. ಇವೆಲ್ಲವೂ ಸಮಾಜದ ಪ್ರಗತಿಗೆ ಅಗತ್ಯವಾಗಿದ್ದವು ಎಂಬುದರಲ್ಲಿ ಸಂಶಯವಿಲ್ಲ.

      ಆದರೆ ಕಾಲ ಬದಲಾಗುತ್ತಿದ್ದಂತೆ ಸಮಾನತೆಯ ಚರ್ಚೆಗಳ ಸ್ವರೂಪವೂ ಬದಲಾಗತೊಡಗಿದೆ. ಸಮಾನತೆ ಎಂದರೆ ಒಂದು ವರ್ಗಕ್ಕೆ ಹೆಚ್ಚು ಬೆಂಬಲ ನೀಡುವುದೇ? ಅಥವಾ ಎಲ್ಲರಿಗೂ ಸಮಾನ ನ್ಯಾಯ ಮತ್ತು ಸಮಾನ ಗೌರವ ಒದಗಿಸುವ ಸಮತೋಲನದ ವ್ಯವಸ್ಥೆಯೇ? ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಈ ಪ್ರಶ್ನೆಗಳು ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುತ್ತಿವೆ. ಕೆಲ ವಿವಾದಗಳಲ್ಲಿ ಮಹಿಳೆಯರ ಗುರುತನ್ನು ಗೌಪ್ಯತೆಯ ಹೆಸರಿನಲ್ಲಿ ಮರೆಮಾಚಿ, ಪುರುಷರ ಗುರುತನ್ನು ಮಾತ್ರ ಬಹಿರಂಗಪಡಿಸಲಾಗುತ್ತದೆ ಎಂಬ ವಿಷಯವನ್ನು ಗಮನಿಸಬಹುದಾಗಿದೆ. ಗೌಪ್ಯತೆ ಎಂಬ ಹಕ್ಕು ಇದ್ದರೆ ಅದು ಇಬ್ಬರಿಗೂ ಸಮಾನವಾಗಿರಬೇಕಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇದೇ ವೇಳೆ ಮಹಿಳೆಯರ ಸಾಧನೆಗಳಿಗೆ ವಿಶೇಷ ಪ್ರೋತ್ಸಾಹ ದೊರೆಯುತ್ತಿರುವುದು ಒಂದು ಸಾಮಾಜಿಕ ಆಗತ್ಯವೂ ಆಗಿದೆ. ಹಿಂದೆ ಅವಕಾಶಗಳಿಂದ ದೂರವಿದ್ದ ವರ್ಗದ ಸಾಧನೆಯನ್ನು ಸಮಾಜ ಮುಂದಿಟ್ಟುಕೊಳ್ಳುವುದು ಬದಲಾವಣೆಯ ಸಂಕೇತ. ಆದರೆ ಅದೇ ಸಮಯದಲ್ಲಿ ಪುರುಷರ ಪರಿಶ್ರಮ ಮತ್ತು ಸಾಧನೆಗಳನ್ನು "ಅದು ಸಾಮಾನ್ಯ" ಎಂದು ನಿರ್ಲಕ್ಷಿಸುವ ಮನೋಭಾವ ಬೆಳೆದುಬಂದರೆ ಅದು ಕೂಡ ಸಮಾನತೆಯ ಆತ್ಮಕ್ಕೆ ವಿರುದ್ಧವೇ ಆಗುತ್ತದೆ. ಸಮಾನತೆ ಎಂದರೆ ಒಬ್ಬರನ್ನು ಎತ್ತಿಹಿಡಿಯಲು ಮತ್ತೊಬ್ಬರನ್ನು ಕುಗ್ಗಿಸುವುದಲ್ಲ; ಇಬ್ಬರನ್ನೂ ಸಮಾನ ಗೌರವದಿಂದ ನೋಡುವ ಮನೋಭಾವ,

      ಸಾಮಾಜಿಕ ಮಾಧ್ಯಮಗಳನ್ನು ಗಮನಿಸಿದರೆ. ಭಾವನೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ. ಇಂದು ಮಹಿಳೆಯರು ತಮ್ಮ ಅನುಭವಗಳು, ಆರೋಗ್ಯ, ಸಂಬಂಧಗಳು ಮತ್ತು ವೈಯಕ್ತಿಕ ಭಾವನೆಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಇದು ಆರೋಗ್ಯಕರ ಬದಲಾವಣೆ, ಆದರೆ ಪುರುಷರು ಇದೇ ವಿಷಯಗಳ ಕುರಿತು ಮಾತನಾಡಿದಾಗ ಅವರಿಗೆ ಹಾಸ್ಯ, ಅನುಮಾನ ಅಥವಾ ತಿರಸ್ಕಾರದ ಪ್ರತಿಕ್ರಿಯೆಗಳು ಸಿಗುತ್ತವೆ. "ಗಂಡಸು ಅಂದ್ರೆ ಗಟ್ಟಿಯಾಗಿರಬೇಕು" ಎಂಬ ಹಳೆಯ ಕಲ್ಪನೆ ಇನ್ನೂ ಅನೇಕ ಮನಸ್ಸುಗಳಲ್ಲಿ ಜೀವಂತವಾಗಿದೆ. ಪರಿಣಾಮವಾಗಿ ಅನೇಕ ಪುರುಷರು ತಮ್ಮ ನೋವುಗಳನ್ನು ಮೌನದಲ್ಲೇ ಹೂತುಬಿಡುತ್ತಿದ್ದಾರೆ. ಕಾನೂನು ವ್ಯವಸ್ಥೆಯಲ್ಲಿಯೂ ಇದೇ ರೀತಿಯ ಚರ್ಚೆಗಳು ಮುಂದುವರಿಯುತ್ತಿವೆ. ಮಹಿಳೆಯರ ಸುರಕ್ಷತೆಗಾಗಿ ರೂಪುಗೊಂಡ ಕಾನೂನುಗಳು ಅತ್ಯಂತ ಅಗತ್ಯವಾಗಿದ್ದವು. ಏಕೆಂದರೆ ಇತಿಹಾಸದಲ್ಲಿ ಮಹಿಳೆಯರು ಗೃಹಹಿಂಸೆ, ಲೈಂಗಿಕ ಕಿರುಕುಳ ಮತ್ತು ಸಾಮಾಜಿಕ ಅಸುರಕ್ಷತೆಯನ್ನು ಹೆಚ್ಚು ಅನುಭವಿಸಿದ್ದರು. ಆದರೆ ಇದೇ ಸಮಯದಲ್ಲಿ ಪುರುಷರೂ ಮಾನಸಿಕ ಹಿಂಸೆ, ಸುಳ್ಳು ಆರೋಪಗಳು, ಕುಟುಂಬದ ಒತ್ತಡಗಳು ಮತ್ತು ಸಂಬಂಧಗಳ ಗೊಂದಲಗಳನ್ನು ಎದುರಿಸುತ್ತಾರೆ ಎಂಬ ವಾದವೂ ಸತ್ಯವೇ ಆಗಿದೆ. ಕಾನೂನುಗಳು ರಕ್ಷಣೆಯ ಸಾಧನವಾಗಬೇಕು: ಪ್ರತೀಕಾರದ ಸಾಧನವಾಗಬಾರದು ಎಂಬ ಎಚ್ಚರಿಕೆ ಇಲ್ಲಿ ಬಹಳ ಮುಖ್ಯ.

      ಇಂತಹ ಪ್ರಶ್ನೆಗಳನ್ನು ವಿರೋಧದ ಧ್ವನಿಯಾಗಿ ನೋಡುವುದಕ್ಕಿಂತ, ಸಮತೋಲನದ ದೃಷ್ಟಿಯಿಂದ ಚರ್ಚಿಸುವುದು ಪ್ರಜಾಸತ್ತಾತ್ಮಕ ಸಮಾಜದ ಲಕ್ಷಣ. ಯಾವುದೇ ಚಳುವಳಿ ಒಂದು ಲಿಂಗದ ನೋವನ್ನು ಮಾತ್ರ ಒತ್ತಿ ಹೇಳಿ, ಮತ್ತೊಂದು ಲಿಂಗದ ಅನುಭವಗಳನ್ನು ಸಂಪೂರ್ಣ ನಿರ್ಲಕ್ಷಿಸಲು ಆರಂಭಿಸಿದರೆ, ಅದರ ವಿರುದ್ಧ ಪ್ರತಿಕ್ರಿಯಾತ್ಮಕ ಚಿಂತನೆಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಸ್ತ್ರೀವಾದದ ಮೂಲ ಉದ್ದೇಶ ಮಹಿಳೆಯರ ಹಕ್ಕು ಮತ್ತು ಗೌರವವನ್ನು ಸ್ಥಾಪಿಸುವುದೇ ಹೊರತು ಪುರುಷರನ್ನು ವಿರೋಧಿಸುವುದಲ್ಲ. ಆದರೆ ಸಮತೋಲನ ಕಳೆದುಹೋದರೆ ಅತಿರೇಕದ ಪ್ರತಿಕ್ರಿಯೆಗಳು ಸಮಾಜವನ್ನು ಮತ್ತಷ್ಟು ವಿಭಜಿಸುವ ಅಪಾಯವಿದೆ.

      ಕೊನೆಯಲ್ಲಿ ಒಂದು ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕು ನಿಜವಾದ ಸಮಾನತೆ ಎಂದರೆ ಕೇವಲ ಹಕ್ಕುಗಳ ಸಮಾನತೆ ಅಲ್ಲ; ಗೌರವದಲ್ಲೂ, ಹೊಣೆಗಾರಿಕೆಯಲ್ಲಿ, ಕಾನೂನಿನ ಮುಂದೆ ಮತ್ತು ಅವಕಾಶಗಳಲ್ಲಿ ಸಮಾನತೆ. ಮಹಿಳೆಯರ ಮೇಲಿನ ಅನ್ಯಾಯವನ್ನು ತಿದ್ದುವುದು ಎಷ್ಟು ಮುಖ್ಯವೋ, ಪುರುಷರ ಮೇಲಿನ ಪೂರ್ವಗ್ರಹಗಳನ್ನು ದೂರಿಸುವುದೂ ಅಷ್ಟೇ ಮುಖ್ಯ. ಇಂದು ಸಮಾಜಕ್ಕೆ ಬೇಕಾಗಿರುವುದು "ಪುರುಷ ಪರ" ಅಥವಾ "ಮಹಿಳಾ ಪರ" ಮನೋಭಾವವಲ್ಲ. ಬದಲಾಗಿ, ವ್ಯಕ್ತಿಯ ಲಿಂಗಕ್ಕಿಂತ ಮಾನವೀಯತೆಯನ್ನು ದೊಡ್ಡದಾಗಿ ನೋಡುವ ಪರಿಪಕ್ವ ಚಿಂತನೆ. "ಸಮಾನತೆ" ಎಂಬ ಪದವು ಘೋಷಣೆಗಳಲ್ಲಿ ಮಾತ್ರ ಉಳಿಯದೆ. ಕಾನೂನುಗಳಲ್ಲಿ ಸಾಮಾಜಿಕ ನಡವಳಿಕೆಯಲ್ಲಿ ಮತ್ತು ಪರಸ್ಪರ ಗೌರವದಲ್ಲಿ ಜೀವಂತವಾಗಬೇಕು. ಆಗಲೇ ಸಮಾನತೆ ಒಂದು ಘೋಷಣೆಯಲ್ಲ, ಸಮಾಜದ ನಿಜವಾದ ಮೌಲ್ಯವಾಗುತ್ತದೆ.

ಉಪಸಂಪಾದಕ, ಬಿತ್ತಿ ಸಂಪಾದಕ ಮಂಡಳಿ

ಸಂಚಿಕೆ - ೧೯

ನಾ ಬಯಸುವೆ ನವಜೀವನ

 

ಹಿಂದಿನ ತಪ್ಪುಗಳ ಅರಿವಿನಲ್ಲಿ 

ಮುಂದಿನ ನೂತನ ಬದಲಾವಣೆಗೆ 

ಇಂದಿನ ಕರ್ಮದ ಯೋಜನೆಯಲ್ಲಿ 

ಬಂದೆನು ಈ ನವ ಜೀವನದೆಡೆಗೆ


ಚೆಂದದ ಕಾವ್ಯ ಕಟ್ಟುವೆನು 

ಅಂದದ ಬಿಂಬ ತೋರುವೆನು 

ಕುಂದಿಲ್ಲದೆ ಮುಂದೆ ನಡೆಯುವೆನು 

ಕಂದಿಗೆ ಬಡಿದು ಮುಚ್ಚುವೆನು


ನಂದನ ಗುಡಿಯ ಒಳಗೆ ನಿನ್ನ 

ಗಂಧದ ಪಾಶದಿ ಬಂಧಿಸಿ 

ದುಂದು ನಾದವ ಕೇಳಿಸಿ 

ನಿಂದನೆಯನೆಲ್ಲ ತೊಲಗಿಸುವೆ


ಚಂದದ ಕನಸ ಕಾಣುವೆ 

ಬಂಧನದಾಸೆಯ ಪಟ್ಟಿರುವೆ 

ಬೆಂದಿರುವ ಈ ಮನಸ 

ಕೊಂದು ಏನಾ ಪಡೆದಿರುವೆ


ಮಂದಿರ ಕಟ್ಟಿರುವೆ ಮನದಲಿ 

ನಿಂದಿರುವ ಪುಷ್ಪವ ಹಿಡಿದು 

ಬಂದೆಯಾ ನಿನ್ನ ಹೆಜ್ಜೆಯನಿಡಲು 

ನೊಂದಿಸದೇ ಸೇರೆನ್ನ ಮನವ


ಕುಂದಿರುವೆ ನಿನ್ನಯ ವಿರಹದಲಿ 

ನೊಂದಿರುವೆ ನಿನ್ನ ಅಗಲಿಕೆಯಲಿ 

ಸ್ಪಂದಿಸಿ ಕೋರಿಕೆಯನು ಮನ್ನಿಸು 

ಬಂಧಿಸಿ ಪ್ರೀತಿಯ ಉಣ ಬಡಿಸು


ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೯

ಮಳೆ ಸುರಿವ ಪರಿ ಈ ಪ್ರೀತಿಯೊಳ್

ನೀಡಬೇಕಿಲ್ಲ ನೀನಗಾರು ಆಮಂತ್ರಣದ ಕರೆವೂಲೆಯ 

ಅರ್ಜುನನರ್ಧಾಂಗಿಯ ಪ್ರೇಮಾಂಕುರದಂತೆಯೋ 

ವೃಷಾಲಿಯ ಪ್ರೇಮಿಸುವ ಕರ್ಣನಂತೆಯೋ 

ಅಂತರಾಳದ ಕಣ್ಮರೆಯಲ್ಲಿ ಪ್ರೀತಿಸುವ ರಾಧಾಕೃಷ್ಣರಂತೆಯೋ 

ತನ್ನರಸಿಯ ಕಳೆದುಕೊಂಡು ರೌದ್ರತೆಯ ತಾಳುವ ಹರನಂತೆಯೋ 

ತನ್ನೊಡಲಾ ಪ್ರೀತಿ ಸುಧೆಯ ಪ್ರಸ್ತಾಪಿಸಲು ಮಳೆಯಾಗಿ ಸುರಿದೆಯೊ ಈ ಧರೆಗೆ 

ನೀಡಬೇಕಿಲ್ಲ ನಿನಗಾರು ಆಮಂತ್ರಣದ ಕರೆವೊಲೆಯ


ಮನದರಸಿ ಮುನಿದಿರುವಳೋ ಎಂಬಂತೆ ಈ ಧರೆಯ 

ಜಗವೆಲ್ಲಾ ವಿಶ್ರಮಿಸುವ ಈ ನಿಶೂಯೊಳು ಮೌನವ ಕದಡಿ 

ಒಮ್ಮೆ ಕವಿದ ಮೋಡದೊಳ್ ಚಂದ್ರನ ಕಿರುದೀಪವ ಪಿಡಿದಂತೆ 

ಮತ್ತೊಮ್ಮೆ ಕವಿದ ಮೋಡಗಳೊಂದಿಗೆ ಕಣ್ಣಾಮುಚ್ಚಾಲೆಯಾಡುವ ಚಂದ್ರನಂತೆ 

ಒಂದೊಂಮ್ಮೆ ಅವಿತುಕೊಳ್ಳುವ, ಮುಖ ತೋರಿಸುವ ಚಂದ್ರನ ಬಂದಿಸಿ 

ತಂಪೆಲರ ತಂಗಾಳಿಯ ತರಂಗದೂಳ್ ತನ್ನಿಳೆಯ ಸ್ಪರ್ಶಿಸಿ 

ಮುದ್ದಾಗಿ ಗದರಿಸುವ ನಡುಗಿನೊಳು ತನ್ನ ರಸಿಯ ಮುದ್ದಿಸಿ 

ಹನಿಮಳೆಯಾಗಿಳಿದೀ ಧರೆಯ ಆದರತೆಯಿಂದ ಆಲಂಗಿಸಿ 

ನೀ ತೋರುವ ಈ ಪ್ರೀತಿಯ ಮನದರಸಿ ಮನಿಸಿರುವಳೋ ಎಂಬಂತೆ ಈ ಧರೆಯ


ಪವಿತ್ರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೯

ಅಮ್ಮ

ನಾ ಬೆಳಕಾ ಕಾಣಲು ನೀ... ನೋವಾ ಉಂಡೆ... 

ನಾ ಅಳುವಾಗ ನೀ... ಸಂತಸಗೊಂಡೆ...


ನೀ ತೋರಿದ ವಾತ್ಸಲ್ಯ ನನಗೆ ಸ್ಫೂರ್ತಿ 

ನಾ ಎಲ್ಲಡೆ ಪಸರಿಸುವೆ ನಿನ್ನ ಕೀರ್ತಿ


ನನ್ನ ಪೋಷಿಸಿದೆ ನೀನು ತುತ್ತನಿಟ್ಟು 

ನನ್ನ ಪ್ರೀತಿಸಿದೆ ನೀನು ಮುತ್ತನಿಟ್ಟು


ಯಾರನ್ನಾದರೂ ಎದುರಿಸುವೆನೆಂಬ ಧೈರ್ಯ 

ಅಮ್ಮಾ... ಇದೇ ನೀ ನನಗೇ ನೀಡಿದ ಅಭಯ


ನನಗಾಗಿ ನೀ ಮಾಡದ ತ್ಯಾಗವಿಲ್ಲ 

ಆದರೇ, ನಾನು ನಿನಗಾಗಿ ಏನೂ ಮಾಡಲೇ ಇಲ್ಲಾ


ಜನುಮ ಪೂರ್ತಿ ಇರು ನನ್ನ ನೆರಳಾಗಿ 

ನಾನಿರುವೇ ನಿನ್ನ ಜೊತೆಗೆ ಪ್ರೀತಿಯ ಮಗುವಾಗಿ,


ವನ್ಯ ಶ್ರೀ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೯

ಕೊನೆಯ ಗಿರಾಕಿ

ಆಳುವವರ ಕಾಲವದು 

ಬಲಿಯಾದ ಬಡವರದು 

ಹೆಚ್ಚುವರಿ ಗೇಣಿಗಾಗಿ ಶುರುವಾದ ಕಥೆಯಿದು 

ಆಸರೆಯಾಗದ ಗಂಡು ಮಕ್ಕಳು 

ಹರೆಯದ ಹೆಣ್ಣುಮಗಳು 

ಹಸಿವಿಗಾಗಿ ಬೀದಿಗಿಳಿದ ಕುಟುಂಬವದು


ಅರಿಯದ ವಯಸ್ಸದು 

ದೊರೆತ ಒಲವದು 

ಆಸರೆಯಾಗಬಹುದೆಂಬ ಆಲಿಂಘನವದು 

ತೊರೆದು ತನ್ನವರನು 

ನಂಬಿ ಹೊರಟಳು 

ಅರಿಯದ ಊರಲಿ ತಬ್ಬಲಿಯಾದಳು


ಹಸಿವಿನ ಬೇಗೆಗೆ 

ಕೆಂಗಣ್ಣು ಬಿದ್ದಿತೆ 

ಅವಳ ಬದುಕಾಯ್ತು ಮಾರುಕಟ್ಟೆ 

ಪುರುಷರ ಕಾಮವೊ 

ಅವಳ ಕಷ್ಟವೊ 

ಯಾರು ಅರಿಯದ ಅವಳ ಒಡಲ ಬೆಗೆಯೋ


ಮಾತುಗಳು ಮೌನ 

ಪರಿಸ್ಥಿತಿಯು ಕ್ರೂರ 

ಸಮಾಜದ ತುಳಿತಕ್ಕೆ ಸಿಕ್ಕು ಒದ್ದಾಡಿತು ಜೀವ 

ದೇಹ ತಿನ್ನಲು ಕಿತ್ತು 

ಹದ್ದೊಂದು ಕಾದಿತ್ತು 

ಹೊಂಚು ಹಾಕಿ ಅದುವೇ ಕೊನೆಯ ಗಿರಾಕಿ


(ನಿರಂಜನ ಅವರ 'ಕೊನೆಯ ಗಿರಾಕಿ' ಎಂಬ ಸಣ್ಣ ಕಥೆಯನ್ನು ಆದರಿಸಿ ಇದನ್ನು ಬರೆದಿದ್ದೇನೆ.)


ಸುಜಾತಾ ಗಿ ಪೂಜೇರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೯

ನಾನ್ಯಾಕ ಬಲಿಯಾದೆ?

ಯಾಕ ಹಂಗ ನೋಡುತ್ತಿ 

ನಾ ಯಾರಂತ ಕೇಳುತ್ತಿ 

ನಾ ಕೆರೆಗೆ ಹಾರಿದ ಭಾಗೀರಥಿ 

ಹಿಂಗ ನಾನ್ಯಾಕ ಬಲಿಯಾದೆ


ತವರಿಗೆ ಹೊತ್ತು ತಂದೀನಿ ನೋವ 

ಕರುಳಬಳ್ಳಿಯ ಅರಿಯದೆ ಹೋದಿ ಹಡೆದವ್ವ 

ಅಪ್ಪಯ್ಯ ನೋಡೋ ಹೊಂಟೈತಿ ಈ ಜೀವ 

ಹಿಂಗ ನಾನ್ಯಾಕ ಬಲಿಯಾದೆ


ದೊಡ್ಡಾಕಿ ಕೇಳಿಲ್ಲ ಈ ಸಣ್ಣಾಕಿ ಗೋಳ 

ಇಟ್ಟಾಂಗ ಇರ್ಬೇಕು ಅಂದ್ಯಲ್ಲಾ ನೀ ಗೆಳತಿ 

ಅತ್ತಿಯು ಅತ್ತಿಲ್ಲ, ಮಾವನೂ ಮಿಸುಕಿಲ್ಲ 

ಹಿಂಗ ನಾನ್ಯಾಕ ಬಲಿಯಾದೆ


ಅವತ್ತು ಅಂಜಿಕಿ ಎಷ್ಟಿತ್ತೋ ಮನದೊಳಗ 

ಗಂಡನ ನೆನೆಸಿ ಅತ್ತಿನಿ ಒಳಗೊಳಗ 

ನಾ ಕಟ್ಟಿದ ಕೆರೆಯಾಗ ನೀರಾದೆ 

ಹಿಂಗ ನಾನ್ಯಾಕ ಬಲಿಯಾದೆ


ಪರಶುರಾಮ್, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೯

ಗಿಳಿಗಳ ಕಲರವ ಈ ಗಿಳಿವಿಂಡು ಕಾರ್ಯಕ್ರಮ

      ಗಿಳಿವಿಂಡು ೪ನೇ ಮಹಾ ಸಮಾವೇಶ ಕಾರ್ಯಕ್ರಮವು ನಮ್ಮ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಹಿರಿಯ ವಿದ್ಯಾರ್ಥಿ, ಅಧ್ಯಾಪಕ, ಸಿಬ್ಬಂಧಿಗಳ ಒಕ್ಕೂಟ ಮಂಗಳ ಗಂಗೊತ್ರಿ ವತಿಯಿಂದ ನಡೆದ ಒಂದು ಕಾರ್ಯಕ್ರಮ ತುಂಬಾ ಸುಂಧರವಾಗಿತ್ತು. ನನಗೆ ಹೇಗೆ ಅನ್ನಿಸಿತು ಎಂದರೆ ಎಲ್ಲಾ ಕಾರ್ಯಕ್ರಮಕ್ಕಿಂತ ಇದೊಂದು ತುಂಭಾ ವಿಭಿನ್ನಾದ ಕಾರ್ಯಕ್ರಮ. ಎಷ್ಟೋ ವರುಷಗಳ ನಂತರ ತನ್ನ ಸ್ನೇಹಿತರ ಬೇಟಿ ಮತ್ತೆ ಮರುಕಳಿಸುವ ಸ್ನಾತಕೋತರದ ಆ ನೆನಪುಗಳು ಹಾಗೆಯೆ ಸ್ನೇಹಿತರೊಂದಿಗೆ ಜೊತೆಗಿನ ಮಾತು. ನನಗೆ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿದ ನಂತರ ವಿದ್ವಾಂಸರಾದ ವಿವೇಕ್ ರೈ ಸರ್ ಅವರು ತಮ್ಮ ಸ್ನೇಹಿತರನ್ನು ಕಂಡು ತುಂಬಾ ಸಂತೋಷವಾಯಿತು ಎಂದರು. ಹಾಗೆಯೇ ಜೀವನದ ಎಲ್ಲಾ ಜಂಜಾಟಗಳಿಂದ ಸ್ವಲ್ಪ ದೂರ ಸರಿದು ಅವರು ಮತ್ತೆ ವಿದ್ಯಾರ್ಥಿಯಾಗಿದ್ದ ಕಾಲಕ್ಕೆ ತಮ್ಮ ಸವಿನೆನಪುಗಳ ಮೆಲುಕು ಹಾಕುವಿಕೆ ನಡೆಯಿತು. ನಮ್ಮ ಆರೋಗ್ಯವು ಸಂತೋಷಗೊಂಡಷ್ಟು ಮಾನಸಿಕವಾಗಿ ನೆಮ್ಮದಿಯಾಗಿರುತ್ತೇವೆ. ಅನಾರೋಗ್ಯ ಏನೆ ಇದ್ದರು ಅವುಗಳನ್ನೆಲ್ಲ ಬದಿಗಿರಿಸಿ, ಕೆಲಸವನ್ನು ಒಂದು ದಿನಕ್ಕೆ ಬಿಟ್ಟು ಸ್ನೇಹಿತರೊಂದಿಗೆ ಕಳೆಯುತ್ತಿದ್ದಾ ಆ ಕ್ಷಣವನ್ನು ನಾನು ಮೆಲುಕು ಹಾಕುತ್ತ ಕುಳಿತುಕೊಂಡೆ ಅವರು ಮತ್ತೆ ಸ್ನಾತಕೊತ್ತರ ವಿದ್ಯಾರ್ಥಿಗಳಾಗಿದ್ದರು. ಜೊತೆಗೆ ಅವರು ಗುರುಗಳನ್ನು ನೋಡಿ ನಮಸ್ಕರಿಸಿ ಅವರೊಂದಿಗೆ ಸಂಭ್ರಮದಿಂದ ಭಾವಚಿತ್ರವನ್ನು ತೆಗೆಸಿಕೊಳ್ಳುತ್ತಿದ್ದರು. ಹಾಗೆಯೇ ಅವರು ಕುಳಿತುಕೊಳ್ಳುವ ಆಸನವನ್ನು ಕೂಡ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದರು. ಎಷ್ಟು ಖುಷಿಯಿಂದ ಇದ್ದರೆಂದರೆ ಅವರನ್ನು ನಾವು ನೋಡಿ ಸಂತೋಷಗೊಂಡೆವು. ಎಲ್ಲರು ಒಂದಲ್ಲ ಒಂದು ರೀತಿಯಲ್ಲಿ ಉತ್ತಮವಾದ ಉದ್ಯೋಗದಲ್ಲಿದ್ದವರೇ ಆಗಿದ್ದರು ಹಾಗೂ ಕೃಷಿ ಇನ್ನಿತರ ಚಟುವಟಿಕೆಯನ್ನು ನಡೆಸುವವರು ಇದ್ದರು ಎಂದೆನಿಸುತ್ತದೆ. ಅದೇನೇ ಇದ್ದರು ಒಂದಲ್ಲ ಒಂದು ರೀತಿಯ ಕೆಲಸವನ್ನು ಮಾಡುತ್ತಾ ಇದ್ದವರು.

      ಈ ಗಿಳಿವಿಂಡು ಕಾರ್ಯಕ್ರಮದಲ್ಲಿ ಗಿಳಿಗಳು ಹೇಗೆ ಒಂದು ಗೂಡಿ ತಮ್ಮದೆ ಆದ ವಿಶಿಷ್ಟ ಭಾಷೆಯ ಮೂಲಕ ಚಿಲಿಪಿಲಿ ಕಲರವ ಮಾಡುತ್ತವೆಯೋ ಹಾಗೆಯೇ, ಮಂಗಳ ಸಭಾಂಗಣದಲ್ಲಿ ಗಿಳಿಗಳ ಕಲರವದಂತೆ ಬಾಸವಾಯಿತು. ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಇಂತಹ ವಿಭಿನ್ನವಾದ ಕಾರ್ಯಕ್ರಮ ನಡೆಸಿಕೊಟ್ಟಿದು. ನನಗೆ ತುಂಬಾ ಉತ್ತಮವೆನಿಸಿತು. ಈ ಕಾರ್ಯಾಕ್ರಮದಲ್ಲಿ ನಾವು ವಿದ್ಯಾರ್ಥಿಗಳಾಗಿದ್ದು ತಾವು ಅವರಿಗೆ ಕರೆಯನ್ನು ಮಾಡಿ ಆಮಂತ್ರಣ ನೀಡಿದ್ದೇವೆ. ಈ ಪ್ರೀತಿಗೆ, ಅವರು ನನ್ನನ್ನು ಹುಡುಕಿಕೊಂಡು ಬಂದು ಮಾತಾನಾಡಿದ ಕ್ಷಣ ನನಗಂತು ಮತ್ತಷ್ಟು ಸಂತೋಷವಾಯಿತು. ಎಷ್ಟು ಉನ್ನತ ಹುದ್ದೆಯಲ್ಲಿದ್ದಾರೆ ಎಂಬುದಕ್ಕಿಂತ ಅವರು ವ್ಯಕ್ತಿತ್ವ ಎಷ್ಟು ಉನ್ನತವಾಗಿದೆ ಎನ್ನುವುದು ಮುಖ್ಯ ಅಲ್ಲವೆ? ಹೀಗೊಂದು ಅನುಭವವಾಗಿ ವ್ಯಕ್ತಿತ್ವವು ಮನುಷ್ಯನಿಗೆ ತುಂಬಾ ಮುಖ್ಯವೆಂದು ನನಗರಿವಾಯಿತು. ನಮ್ಮೆಲ್ಲ ಪ್ರೀತಿಯ ಗುರುಗಳು ಎಲ್ಲಾರು ಸದಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅವರು ತಮ್ಮೆಲ್ಲರ ಸ್ನೇಹಿತರೊಂದಿಗೆ ತಮಗೆ ಸಿಕ್ಕ ಸ್ವಲ್ಪ ಸಮಯದಲ್ಲಿ ಮಾತಾನಾಡುತ್ತಾ ಮತ್ತೆ ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದರು. ಹಾಗೆಯೆ ಕೆಲವರು ಅಧ್ಯಾಪಕರು ತಮ್ಮದೇ ವಿಶಿಷ್ಟ ಪ್ರತಿಭೆಯಿಂದ ತ್ರಿಪದಿಗಳು ಹಾಗೆಯೆ ಹಳೆಗನ್ನಡ ಕಾವ್ಯಗಳನ್ನು ಸುಮಧುರವಾಗಿ ಹಾಡಿದರು. ನನಗೆ ಮತ್ತೊಂದು ವಿಶಿಷ್ಟ ಪ್ರತಿಭೆ ಎನಿಸಿದೇನೆಂದರೆ, ಕಾಳಿದಾಸನ ಶಾಕುಂತಲೆ ನಾಟಕವನ್ನು ಏಕಪಾತ್ರಾಭಿನಯ ಮಾಡಿದ ಒಬ್ಬ ಹಿರಿಯ ಕಲಾವಿದೆ. ಅಂದರೆ ವಯಸ್ಸು ಕೇವಲ ದೇಹಕ್ಕೆ. ಆದರೆ ಪ್ರತಿಭೆಗೆ ಅಲ್ಲ ಎಂದೆನಿಸಿತ್ತು. ಅಷ್ಟು ಅದ್ಭುತವಾಗಿ ಮಾಡಿದರು. ನಾನು ನನ್ನ ವಿದ್ಯಭ್ಯಾಸ ಮಾಡಿದ ಹಲವಾರು ಸಂಸ್ಥೆಗಳಲ್ಲಿ ಕಾಲೇಜುಗಳಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದರೆ, ಇದೊಂದು ವಿಶಿಷ್ಟ ವಿಭಿನ್ನ ಕಾರ್ಯಕ್ರಮ ಎಂದೆನಿಸಿತು. ಕೊನೆಗೆ ಈ ಕಾರ್ಯಕ್ರಮದಲ್ಲಿ ಕೊನೆಯ ಘಟ್ಟ ತಲುಪಿದೆವು. ಸಂಜೆಯ ಸಮಯ ಮತ್ತೆ ಎಲ್ಲ ಗಿಳಿಗಳು ತಮ್ಮ ತಮ್ಮ ಗೂಡಿಗೆ ಸಂತೋಷದಿಂದ ಮರಳಿ ವಿದಾಯ ಹೇಳಿ ಹೊರಟವು. ಇದೆ ಗಿಳಿವಿಂಡು ಕಾರ್ಯಕ್ರಮದ ಕೊನೆಯ ಘಟ್ಟ. ನಾವು ಸಂತೋಷದಿಂದ ಮರಳಿ ಹಾಸ್ಟೇಲಿಗೆ ಹೋದೆವು.

ಸೌಮ್ಯ ಟಿ.ಎಸ್, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೯

ಎಲ್ಲಿರುವಳೊ ಅವಳು...

ಓ ನನ್ನಾಸೆಯ ಹೂವೆ. ನೀ ಎಲ್ಲಿ ಅರಳಿ ನಿಂತಿರುವೆ 

ಯಾವ ಬಳ್ಳಿಯಲ್ಲಿ ಬಳುಕುತ್ತಿರುವೆ.

ಯಾರ ಕಣ್ಣಾವಲಲ್ಲಿ ನಗುತ್ತಿರುವೆ, 

ನಿನ್ನನ್ನೆ ನೋಡಲು ಕಾಯುತ್ತಿವೆ ನನ್ನ ಕಣ್ಣಳು 

ನಿನ್ನ ಜೊತೆಗೂಡಿ ನಡೆಯಲು ಹಾತೊರೆಯುತ್ತಿವೆ 

ನನ್ನ ಪಾದಗಳು 

ನಿನ್ನೊಡನೆ ಮಾತಾಡಲು ಚಟಪಡಿಸುತ್ತಿವೆ 

ನನ್ನ ಮನಸಿ ಪುಟಗಳು 

ನಿನಗಾಗಿಯೇ ತೆರೆದು ನಿಂತಿದೆ 

ನನ್ನ ಹೃದಯದ ಬಾಗಿಲು 

ಒಮ್ಮೆ ನೀ ಬರಬಾರದೆ ನನ್ನ ಎದುರು.


ಓ ನನ್ನ ಒಲವೆ... 

ನಾ ಹೇಗೆ ನೋಡಲಿ ನಿನ್ನ 

ಸೂರ್ಯನ ಕಿರಣವಾಗಿ ಬಂದು ನೋಡಲ 

ಇಲ್ಲ ಚಂದ್ರನ ಬೆಳದಿಂಗಳ ತಾರೆಯಾಗಿ ಬಂದು ನೋಡಲ 

ಹೇಗೆ ನೋಡಲಿ ನಿನ್ನ, ನಾ ಹೇಗೆ ಸೇರಲಿ ನಿನ್ನ 

ಹರಿಯೋ ನದಿಯಾಗಿ ಬಂದು ಸೇರಲ 

ಇಲ್ಲ ಬೀಸೊ ಗಾಳಿಯಾಗಿ ಬಂದು ಸೇರಲ 

ನಾ ಹೇಗೆ ಸೇರಲಿ ನೀ ಹೇಳು ಒಲವೆ 

ಎಲ್ಲಿರುವೆ ನನ್ನಾಸೆಯ ಹೂವೆ


ಓ ದುಂಬಿಯೇ ನೀ ಒಮ್ಮೆ ನೋಡಿಬರುವೆಯ 

ನನ್ನವಳ ರೂಪವನ್ನು 

ಹೇಗಿರುವಳೋ ನನ್ನ ಪಟ್ಟದರಸಿ ಮುಖವು 

ಹೇ... ಗಿಳಿಮರಿಯೆ ನಿನ್ನಷ್ಟು ಮುದ್ದಾಗಿರುವಳ ನನ್ನವಳು 

ನವಿಲೇ ನೀ ಹೇಳು ನಿನ್ನಂಗೆಯೇ ನಲಿಯುತಿರುವಳ ಅವಳು 

ಓ ಕಾಗೆಯೇ ನಿನ್ನ ಕಲೆಯ ಕೇಶವ ಹೊಂದಿರುವಳ ಅವಳು 

ನಾ ಹೇಗೆ ತಿಳಿಯಲಿ, ನಾ ಹೇಗೆ ವರ್ಣಿಸಲಿ ಅವಳನ್ನು. 

ಓ ಇರುವೆಯೇ ನೀ ತಿಳಿದು ಬರುವೆಯ ಅವಳಿರುವ ನೆಲೆಯನ್ನ 

ನಾ ನೋಡುತ ಕುಳಿತಿರುವ ಅವಳು ಬರುವ ದಾರಿಯನ್ನ... 

ಎಲ್ಲಿರುವಳೊ.... ಎಗಿರುವಳೋ....


ಹಲೋ.. ಗುಬ್ಬಿಮರಿಗಳೇ ನೀವೇಳಿ 

ನಿಮ್ಮಂತೆಯೇ ಅವಳು ನಗುತಿರುವಳ 

ಇಲ್ಲ ಕೋಗಿಲೆಯ ಧ್ವನಿಯಂತೆ ಹಾಡುತಿರುವಳ 

ಹೇಳಿ ನನ್ನ ಒಡನಾಡಿನ ಮರಗಿಡಬಳ್ಳಿಗಳೆ 

ಯಾರು ಹೇಳುವಿರ ನನ್ನವಳ ಚೆಲುವು ಒಲವುಗಳನ್ನ


ಹೇ ಜಿಂಕೆಮರಿಯೆ ನೀ ಹೇಳು ನಿನ್ನಷ್ಟು ಸಿಂಗಾರದವಳ ಅವಳು 

ಹಂಸದಷ್ಟು ಶುದ್ಧದವಳ ಇಲ್ಲ ನರಿಯಂತೆ ಬುದ್ದಿವಂತಳ 

ಎಂತವಳು ನನ್ನವಳು...


ಓ ಪಕ್ಷಿ ಸಂಕುಲವೆ, ಪ್ರಾಣಿ ಸಂಕುಲವೆ 

ನೀವು ತಿಳಿದಿರುವಿರ ನನ್ನವಳ ಪರಿಯನ್ನ ಯಾರು ಹೇಳುವಿರಿ 

ಹೇ ದುಂಬಿಯೇ ನೀನೆ ಹೇಳು ಹೇಗಿರುವಳು ಅವಳು... 

"ನಿನ್ನವಳು ಅ ಚಂದ್ರನಂತೆ ಸುಂದರಿ ಅವಳು. 

ಮಲ್ಲಿಗೆಯಂತೆ ಅರಳಿ ನಗುತಿಹಳು 

ನಿನ್ನ ಗಿಳಿಯಂತೆ ಮುದ್ದಿನವಳು, 

ಕೋಗಿಲೆಯ ಕಂಠದವಳು, ಇರುವೆಯ ಗುಣದವಳು 

ನರಿಯಂತೆ ಬುದ್ದಿವಂತಳು 

ಒಟ್ಟಿನಲ್ಲಿ ಹೇಳುವುದಾದರೆ ಅವಳು 

ಅಂಧದ ಅರಮನೆಯಲ್ಲಿ ಅರಳಿ ನಿಂತಿರುವ 

ಸಿಂಗಾರದ ದೇವತೆ ನಿನ್ನವಳು" 

ಹೇ ದುಂಬಿಹೆ ಅಷ್ಟು ಅದ್ಭುತ ನಾ ಅವಳು,


ಹೇ ಇರುವೇ ಗೊತ್ತಾಯಿತ ಅವಳಿರುವ ನೆಲೆಯು 

"ಗೊತ್ತಾಯಿತು - ನಿನ್ನವಳು ಇರುವುದು ಶ್ರೀಗಂಧದ ನಾಡಿನಲಿ 

ಅಂಧದ ಅರಮನೆಗಳ ಊರಿನಲಿ, 

ತಾಯಿ ಚಾಮುಂಡೇಶ್ವರಿಯು ನೆಲೆಸಿರುವ ತಾಣದಲ್ಲಿ 

ತಾವರೆ ಹೂವಿನಂತೆ ಅರಳಿ ನಿಂತಿರುವಳು ನಿನ್ನವಳು" 

ಆಹಾ! ತಿಳಿದಾಯಿತು ನನ್ನವಳ ನೆಲೆಯೂರು ಮೈಸೂರು


ಓ ಪಾರಿವಾಳವೆ ತಿಳಿಯಿತ 

ನೀ ಈಗಲೇ ಹೋಗಿ ಹೇಳು 

ಈ ಧರಣಿಯಲ್ಲಿ ದೊರೆಯಂತೆ ಆಳುತ್ತಿರುವ 

ಪಾಳೇಗಾರರ ನಾಯಕ 

ನಿನ್ನ ಪಟ್ಟದರಸಿಯನ್ನಾಗಿ ಮಾಡಿಕೊಳ್ಳಲು 

ನಿನ್ನ ಒಪ್ಪಿಗೆಯನ್ನು ಪಡೆಯಲು 

ನಾಳೆ ಮುಂಜಾನೆಯ ವೇಳೆಯಲ್ಲಿ 

ಕುದುರೆಯನೇರಿ ಬರುತಿಹನು ತನ್ನ ಬಳಗವ ಕಟ್ಟಿಕೊಂಡು 

ನಿನ್ನ ನೋಡಲು ಬರುತಿರುವನೆಂದು ಹೇಳು 

ನಮ್ಮ ಪರಿವಾರದವರಿಗೆ ವಿಷಯ ತಿಳಿಸಿ 

ನಾಳೆ ಸೂರ್ಯೋದಯದ ವೇಳೆಯಲ್ಲಿ 

ಬೆಳ್ಳಕ್ಕಿಗಳ ಬಳಗದಂತೆ. ಇರುವೆಗಳ ದಂಡಿನಂತೆ 

ಸಾಲಾಗಿ ಸಾಗಬೇಕು ನಮ್ಮ ಪಯಣ


ಓ ನನ್ನ ಪ್ರಾಣಿ ಸಂಕುಲವೇ, ಪಕ್ಷಿ ಸಂಕುಲವೇ 

ಒಗ್ಗೂಡಿ ಬನ್ನಿ ಆ ಚಾಮುಂಡೇಶ್ವರಿಯ ಗೂಡಿಗೆ 

ಅಂಧದ ಅರಮನೆಯ ಊರಿಗೆ 

ಕೈ ಹಿಡಿದು ಕರೆತರೋಣ ನಮ್ಮ ಪಟ್ಟದ ಅರಸಿಯನ್ನು 

ಈ ಕೋಟೆನಾಡಿನ ಗೂಡಿಗೆ ಚಿತ್ರದುರ್ಗದ ಬೀಡಿಗೆ.


ಮಹೇಶ್ ಜಿ. ಕೆ., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೯

ಊಹೆ

ಮಾಯೆಯ ಛಾಯೆ 

ಅದೋ ಆಧುನಿಕ ಊಹೆ 

ಸುಂದರವಾದ ಮನೆಯೊಂದಿತ್ತು 

ಆಳು-ಕಾಳು ಎಲ್ಲ ಅಲ್ಲಿತ್ತು 

ಎದ್ದು ನೋಡಿದರೆ ಅದು ಕನಸಾಗಿತ್ತು


ನಕ್ಕು ನಡೆಯುವ ಹಾಗಿಲ್ಲ 

ಅತ್ತು ಅಳಲು ತೋಡಿಕೊಳ್ಳುವಂತಿಲ್ಲ 

ಕಾರಣ ನಾನು ಅವನಲ್ಲ-ಅವಳು 

ನನಗಾಗಿಯೇ ಒಂದು ಊಹೆ


ಜನರ ಕಣ್ಣಿಗೆ ಕೇವಲ ಅಭಿಪ್ರಾಯ ನನ್ನ ಜೀವನ 

ಆದರೆ ನನಗೊ! ಅದೊಂದು ಯುದ್ಧ 

ಎಡಲು ಬಿದ್ದರೆ, ಚುಚ್ಚು ಮಾತಿನ ಪ್ರಹಾರ 

ಮಾತಿಗೆ ಮಾನ್ಯತೆ ದೂರ, ಕನಿಷ್ಠ ಬೇಲೆಯೂ ಇಲ್ಲ.


ಹೆಚ್ಚಾಗಿ ತುಳಿದ ಚಪ್ಪಲಿಯ ಸವೆತ ಅರಿಯುವ ಸಮಾಜ 

ತುಳಿತಕ್ಕೊಳಗಾದ ಹೆಣ್ಣಿನ ಕುಸಿತ ಕಾಣದಾಯಿತು 

ಯಾರದ್ದೋ ತಾಯಿ ಯಾರದ್ದೋ ಅಕ್ಕ-ತಂಗಿ 

ಇನ್ಯಾರದ್ದೂ ಮಗಳಲ್ಲವೇ, ಅನ್ನುವ ಸಮಾಜಕ್ಕೆ 

ಕೇವಲ ಹೆಣ್ಣಲ್ಲವೇ ಅವಳಾದ ನಾನು


ಕಲ್ಪನೆಯೋ ಅದ್ಭುತ 

ಭಾರವಾದಳೇ ಅಲ್ಲವೇ ಸಮಾಜಕ್ಕೆ 

ನಕಾರಾತ್ಮಕ ಊಹೆಯ ಕಿರೀಟ ಹೊತ್ತವಳು 

ಹೆಣ್ಣಿನ ಜೀವನದಲ್ಲಿ ಸಕಾರಾತ್ಮಕ ಊಹೆಗಳಲ್ಲವಲ್ಲ


ಅವಳು ಚಿಂತನೆ ಅಡುಗೆ ಮನೆಯ ಮೂಲೆ ಸೇರಿದೆ 

ಆದರ್ಶವಾಗುವ ಕನಸು ಕನಸಾಗಿಯೇ ಉಳಿದಿದೆ 

ಸಮಾಜದ ತಪ್ಪಾದ ಊಹೆಯ ಒಪ್ಪಿ ಬಾಳಬೇಕಿದೆ

ಇದೇ ಊಹೆ.....

ಹೆಣ್ಣಿನ ಜೀವನ


ಗಾಯತ್ರಿ ಜ ನಾಯ್ಕ‌ರ್, ಎಂ.ಎಸ್.ಸಿ. ಪ್ರಥಮ ವರ್ಷ, ಭೂಗೋಳಶಾಸ್ತ್ರ ವಿಭಾಗ

ಸಂಚಿಕೆ - ೧೯

ಕನಕ ತಿದ್ದಿದ ಮನಸ್ಸು

ಕನಕನೆಂಬುದು ಮೌನದ 

ಕನಸ್ಸಿನಲ್ಲಿ ತೇಲಿಬಂದ ಪದಗಳಾಗಿವೆ 

ಅವರ ನುಡಿಗಳಲ್ಲಿ 

ಅವರ ಮನದ ದೈವದ ಆದಿಕೇಶವನ ಭಕ್ತನಾಗಿ 

ಎಲ್ಲರ ಮನಸ್ಸಿನಲ್ಲಿ ಧ್ರುವತಾರೆಯಾಗಿ 

ಕೃಷ್ಣನನ್ನೇ ಮನವಲ್ಲಿಸಿದ ಕುರುಬನಂತೆ 

ತತ್ವಪದಗಳು ಏನು ನೀಡಿವೆ 

ಎಂಬುದನ್ನ ತಿಳಿಸದೆ ನೀನಲ್ಲದೆ 

ತತ್ವಪದಗಳಿಲ್ಲ ಕನಕ ನೀನು 

ವ್ಯಾಸರಾಯರ ಮೆಚ್ಚಿನ ಶಿಷ್ಯ 

ಬಾಡದಲ್ಲಿ ಜನಿಸಿ ಬೀರಪ್ಪ ಭಚ್ಚಮ್ಮರ 

ಮಗನಾಗಿ ಕುಲಕುಲ ವೆಂದು ಹೊಡೆದಾಡದಿರಿ 

ಈ ಕುಲದ ನೆಲೆಯನ್ನು ನಾನಿನ್ನು ಕಂಡಿಲ್ಲ 

ಕಂಡವರಾರು ಮಾತೆ ಮುನಿಸಿದರು 

ಹೇಳಲಾರದ ತುಸು ಹುಚ್ಚು ಮನಸ್ಸುಗಳಿಗೆ 

ಕನಕರು ಕೊಟ್ಟ ಕಾಣಿಕೆ.....!


ಮಲ್ಲಿಕಾರ್ಜುನ ಹ ಕೆರೂಡಿ, ಭೂಗೋಳ ಶಾಸ್ತ್ರ ವಿಭಾಗ

ಸಂಚಿಕೆ - ೧೯

ಎಲ್ಲಿ ಹೋದರು..?

ಮರಳಿ ಮಣ್ಣಿಗೆ ಸೇರಿದ ದಿನದಂದು 

ನೂಕುನುಗ್ಗಲು ಮಾಡಿ 

ದರ್ಶನಕ್ಕೆ ಬಂದವರೆಲ್ಲ 

ಎಲ್ಲಿ ಹೋದರು..? ಮರೆತುಬಿಟ್ಟರು..!


'ಮೀಝಾನ್' ಕಲ್ಲು ಎತ್ತಿಟ್ಟು 

ಗಿಡವ ನೆಟ್ಟು, ನೀರು ಸುರಿದು 

ಕರ್ಮ ಮಾಡಿದವರೆಲ್ಲ 

ಎಲ್ಲಿ ಹೋದರು..? ಮರೆತುಬಿಟ್ಟರು..!


ತುಂತುರು ಮಳೆಗೂ ಛತ್ರಿ ಹಿಡಿದು 

ನೀರಾಗದಂತೆ ನೋಡಿ 

ಕಾಳಜಿವಹಿಸಿದವರೆಲ್ಲ 

ಎಲ್ಲಿ ಹೋದರು..? ಮರೆತು ಬಿಟ್ಟರು..!


ಬಿಳಿಬಟ್ಟೆಯಲಿ 

ಕಪ್ಪು ಚುಕ್ಕಿಯೊಂದು ಮೂಡಿದಾಗ 

ನೀರೆರೆದು ತೊಳೆದುಕೊಟ್ಟವರೆಲ್ಲ 

ಎಲ್ಲಿ ಹೋದರು..? ಮರೆತು ಬಿಟ್ಟರು..!


ಮೂರು, ಏಳು, ನಲ್ವತ್ತರ 

ದಿನದಂದು ಬಂದು 

ಸಾಂತ್ವನ ಮಾಡಿದವರೆಲ್ಲ 

ಎಲ್ಲಿ ಹೋದರು..? ಮರೆತು ಬಿಟ್ಟರು..!


ನೀನೇ ಸರ್ವಸ್ವವೆಂದು 

ಮಾತು ಮಾತಿಗೂ ಭಾಷೆ ಕೊಟ್ಟು 

ಬಣ್ಣಬಣ್ಣದಿ ಮಾತಾಡಿದವರೆಲ್ಲ 

ಎಲ್ಲಿ ಹೋದರು..? ಮರೆತು ಬಿಟ್ಟರು..!


ಒಂದೆರಡು ವಾರ ಅಗರಬತ್ತಿ ಹಚ್ಚಿ 

ಸಮಾಧಿಯ ಬಳಿ ಬಂದ 

ಬಂಧು-ಬಳಗ-ಗೆಳಯರೆಲ್ಲ 

ಎಲ್ಲಿ ಹೋದರು..? 

ಹೆಸರೇ ಗೊತ್ತಿಲ್ಲದಂತೆ ಮರೆತು ಬಿಟ್ಟರು..!


ಸಲೀಂ ಸುಳ್ಯ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೯

ಕೌದಿ 

      ಕೌದಿ ಅಂದ್ರೆ ಬರಿ ಹಾಸಿಗೆಯಲ್ಲ. ಬಂಧನಗಳನ್ನು ಬೆಸೆಯುವ ಭಾವನೆಗಳ ಬಲೆಯದು. ಸಿಳ್ಳೆಕ್ಯಾತ್ತು ಕೌದಿ ಹಳ್ಳಳ್ಳಿಗೆ ಹೆಸ್ತು, ಎಂಬ ಮಾತು ಐತೆ. ಕೌದಿ ಇದು ಪ್ರತಿ ಮನೆಯಲ್ಲೂ ಕಾಣುವಂತದ್ದು. ಮೊದಲೆಲ್ಲ ಹಳ್ಳಿಗಳಲ್ಲಿ ಯಾರದ್ದೆ ಮನೆಯಲ್ಲಿ ಮದುವೆಯಾಗಲಿ, ಬಾಣಂತನವಾಗಲಿ ಇಂತಹ ಸಮಾರಂಭದ ಆರಂಭವಾಗುವುದೆ ಕೌದಿ ಹೊಲಿಸುವ ಕಾರ್ಯದಿಂದ.

      ಮೊದಲೆಲ್ಲ ಮದುವೆ ಆರಂಭದ ಮುನ್ನ ತಾಯಿಯಾದವಳು ತನ್ನ ಮಗಳಿಗೆ ತೌರಿನ ನೆನಪುಗಳನ್ನು ಕೌದಿಯೊಂದಿಗೆ ಕಳಿಸುವ ಪದ್ಧತಿ ಇತ್ತು. ಇದು ಕೇವಲ ಹಾಸಿಗೆ ಮಾತ್ರವಲ್ಲ ತೌರಿನ ಪ್ರತೀ ಸಂಬಂಧಗಳ ನೆನಪಾಗಿದೆ. ಹೊಸದಾಗಿ ಮದುವೆಯಾದ ಹೆಣ್ಣು ಗಂಡನ ಮನೆಯಲ್ಲಿ ತೌರಿನ ಸ್ಥಾನ ಮತ್ತು ತೌರಿನವರ ಸ್ಥಾನ ತುಂಬಿ. ಸದಾ ಪ್ರೀತಿ, ಪ್ರೇಮ, ಸಹನೆ, ದೈರ್ಯ, ಮಮತೆ, ನೀಡಿ ತೌರಿನ ಪ್ರತಿಯೊಬ್ಬರೂ ಜೊತೆಗಿದ್ದಾರೆಂಬ ಭರವಸೆಯ ಬುತ್ತಿ ಈ ಕೌದಿ. ಅಮ್ಮ ಅಜ್ಜಿಯ ಸೀರೆಗಳು. ಅಪ್ಪ ಅಜ್ಜನ ಪಂಜೆ. ಅಕ್ಕಾ ತಂಗಿಯರ ಲಂಗ ದಾವಣಿ, ಅಣ್ಣ ತಮ್ಮರ ಅಂಗಿಗಳು. ಮುಂತಾದಂತೆ ಪ್ರತಿಯೋಬ್ಬರನ್ನೂ ಮೆಲುಕು ಹಾಕುವಂತೆ ಮಾಡುತ್ತದೆ. ಹಾಗೆಯೇ ಆ ಕೌದಿ ಹರಿಯುವುದರೋಳಗೆ ಮಗಳ ಸಂತಾನ ಬೆಳೆಯಲಿ ಎಂಬುದು ತೌರಿನ ಹಾರೈಕೆಯಾಗಿತ್ತು.

      ಜೀವನವೆಂಬ ದೊಡ್ಡ ಬಟ್ಟೆಯ ಒಳಗೆ, ನಿಚ್ಚಲವಾದ ಸಂಬಂಧಗಳ ಬಟ್ಟೆಗಳು ಹಾಕಿ. ತಾಳ್ಮೆ ಎಂಬ ಹೊಲಿಗೆಯಿಂದ ನೋವು ನಲಿವುಗಳ ತ್ಯಾಪೆ ಹಚ್ಚಿ, ಅಂದಕೆಂದು ಗೊಂಡೆ ಹಚ್ಚುತ್ತಾ ಜೀವನವನ್ನು ಅಳೆಯುವುದರ ಪರಿ ಈ ಕೌದಿ ಈಗಲೂ ಕೂಡ ಎಷ್ಟೋ ಜನರಿಗೆ ಯಾವುದೇ ಹೊಸ ಆಧುನಿಕ ಹಾಸಿಗೆಯಲ್ಲಿ ನೆಮ್ಮದಿಯ ನಿದ್ದೆ ಬರುವುದಿಲ್ಲ ಹಳೆಯದಾದರೂ ಸರಿಯೆ ಕೌದಿಯೆ ನೆಮ್ಮದಿಯ ಸುಖ ನಿದ್ದೆಗೆ ಮೂಲ ಮಂತ್ರವಾಗಿದೆ.

ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೯

ಚಿತ್ರಗಳು 

ಚಿತ್ರ ರಚನೆ : - ಭವ್ಯ ಎಸ್., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ




ಚಿತ್ರ ರಚನೆ :- ರಮ್ಯಶ್ರೀ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ



ಚಿತ್ರ ರಚನೆ :- ಚೈತ್ರಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ





ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...