'ಸಂಭ್ರಮ'ದಲ್ಲಿ ಸ್ತ್ರೀಯರ ಪಾತ್ರ
ಮಂಗಳೂರು ವಿಶ್ವವಿದ್ಯಾನಿಲಯದ ಅಕಾಡೆಮಿಯ ಕೊನೆಯಲ್ಲಿ ನಡೆಯುವ ೩ ದಿನಗಳ 'ಸಂಭ್ರಮ'ದಲ್ಲಿ ಇಡೀ ವಿದ್ಯಾರ್ಥಿ ವೃಂದವೇ ಮಿಂದೆದಿತ್ತು. ಈ ಬಾರಿಯ ಸಂಭ್ರಮದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕಡಿಮೆ ಇದ್ದರೂ, ಸಂಭ್ರಮ ಎಲ್ಲರ ಮೊಗದಲ್ಲೂ ಮನೆ ಮಾಡಿತ್ತು. ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಆಕರ್ಷಣೆಯ ಕೇಂದ್ರವೆಂದರೆ ಅದು ಹುಡುಗಿಯರು, ವಿಭಾಗದ ಹುಡುಗಿಯರನ್ನ ನೋಡಿ ಬೇಸತ್ತ ಹುಡುಗರಿಗೆ ಇದು ನಿಜಕ್ಕೂ ಸಂಭ್ರಮವೆ! ಕೆಲವರಿಗೆ ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವ, ಇನ್ನು ಕೆಲವರಿಗೆ ಮೌನ ಮಾತಿಗೆ ತಿರುಗಿದ ಕ್ಷಣವೂ ಹೌದು.
ಮಂಗಳ ಸಭಾಂಗಣದಲ್ಲಿ ಹುಡುಗಿಯರ ಉಪಸ್ಥಿತಿ ಹೇಗಿತ್ತೆಂದರೆ, ಅದು ಮಂಗಳದ ವೇದಿಕೆಯಿಂದ ಹಿಡಿದು ನೃತ್ಯ, ಅಭಿನಯಗಳಲ್ಲಾಗಲಿ, ಹೊರಗಿನ ಫುಡ್ ಸ್ಟಾಲ್ಗಳಲ್ಲಿ ಸ್ತ್ರೀಯರ ಪಾತ್ರ ಎದ್ದು ಕಾಣುತ್ತಿತ್ತು. ತಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ತಮಟೆ ಬಡಿಯುವುದೇನು, ದೇವರ ಭಾರವಾದ ಮೂರ್ತಿಯನ್ನು ಹಿಡಿದು ಕುಣಿಯುವುದೇನು, ಸೀರೆಯುಟ್ಟು ಹಾಡಿಗೆ ಕುಣಿಯುವುದೇನು ಒಟ್ಟಾರೆ ಹುಡುಗರನ್ನೇ ಮೀರಿಸುವ ಮಟ್ಟಿಗೆ ಅವರ ಪಾಲ್ಗೊಳ್ಳುವಿಕೆ ಅಲ್ಲಿ ವ್ಯಕ್ತವಾಗಿತ್ತು.
ಬೇರೆ ಬೇರೆ ವಿಭಾಗದ ಹುಡುಗಿಯರು ಸೀರೆಯುಟ್ಟು ಫೋಟೋಗೆ ಫೋಸ್ ಕೊಡುವ ದೃಶ್ಯ ಕಣ್ಣು ಕುಕ್ಕುತ್ತಿತ್ತು. ಫೋಟೋ ಕ್ಲಿಕ್ಕಿಸುವಾಗ ಯಾರು ನನ್ನನ್ನು ನೋಡುತ್ತಿದ್ದಾರೆಯೇ ಎಂದು ಕಣ್ಣು ಆಚೆ-ಈಚೆ ಹೊರಳಿಸಿ ಕಿರುನಗೆಯ ನೋಟವು ಕಂಡುಬಂತು. ಸೆರಗನ್ನು ಸರಿಮಾಡಿ, ನೆರಿಗೆ ಸರಿ ಇದೆಯೆ ಎಂದು ನೋಡುವಷ್ಟರಲ್ಲಿ ಮೊಬೈಲ್ ಹಿಡಿದವನಿಗೆ ತಾಳ್ಮೆಯ ಪರೀಕ್ಷೆ ಆಗಿದ್ದಂತು ನಿಜ. ಅಲ್ಲದೇ ಮೂರನೇ ದಿನದ ಕೊನೆಯಲ್ಲಿ ಡಿ.ಜೆ. ಸದ್ದಿಗೆ ನಾರಿಮಣಿಗಳು ಹುಚ್ಚೆದ್ದು ಕುಣಿದರು. ಜಗಮಗಿಸುವ ಬೆಳಕಿನ ವೇಗದಂತೆ ಹುಡುಗಿಯರ ಡ್ಯಾನ್ಸ್ ಬಿರುಸಾಗಿತ್ತು. ಉಳಿದ ದಿನಗಳಲ್ಲಿ ನಿಗದಿತ ಗಂಟೆಯೊಳಗೆ ಹಾಸ್ಟೆಲ್ ಸೇರುತ್ತಿದ್ದ ಇವರು ಇಂದು ಬಿಡುಗಡೆಯ ಭಾಗ್ಯ ದೊರತಂತೆ ಸಾಕಾಗುವಷ್ಟು, ಮನಸ್ಸಿಗೆ ಖುಷಿ ನೀಡುವಷ್ಟು ಕುಣಿದು ಕುಪ್ಪಳಿಸಿದರು.
ಒಟ್ಟಾರೆಯಾಗಿ ಈ ಮೂರು ದಿನಗಳ ಸಂಭ್ರಮದಲ್ಲಿ ಹುಡುಗಿಯರು ತಮ್ಮ ಶ್ರಮ, ಸಮಯ ಹಾಗೂ ನಗುವಿನೊಂದಿಗೆ ಈ ಕಾರ್ಯಕ್ರಮದಲ್ಲಿ ಇರುವಿಕೆಯನ್ನು ಸಾಬೀತು ಪಡಿಸಿದರು. ಬೇರೆ ವಿಭಾಗದ ಹುಡುಗಿಯರೊಂದಿಗೆ ಪೈಪೋಟಿ ಮಾಡುತ್ತ ತಮ್ಮ ನೃತ್ಯ, ಅಭಿನಯ ಹಾಗೂ ಹಾಡುಗಾರಿಕೆಯಲ್ಲಿ ಶಕ್ತಿ ಪ್ರದರ್ಶನ ನಡೆದಿದ್ದಂತು ನಿಜ.
ಶ್ರೇಯಸ್ ಬನ್ನಡ್ಕ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ