ಸೋಮವಾರ, ಮೇ 25, 2026

ಸಂಚಿಕೆ - ೨೧

 ಸಂಪಾದಕೀಯ


ಶಿಕ್ಷಣದ ಹೆಸರಿನಲ್ಲಿ ವಿದ್ಯಾರ್ಥಿಗಳ ಶೋಷಣೆ ಇದು ಯಾವ ನ್ಯಾಯ?

      ಶಿಕ್ಷಣವೆಂದರೆ ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಶಕ್ತಿ. ಒಂದು ಮಧ್ಯಮ ವರ್ಗದ ಕುಟುಂಬ ತನ್ನ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಎಷ್ಟೋ ಕಷ್ಟಪಟ್ಟು ಹಣ ಸಂಗ್ರಹಿಸುತ್ತಾರೆ. ಕೂಲಿ ಕೆಲಸ ಮಾಡಿ, ಸಾಲ ಮಾಡಿ, ಬೆವರು ಸುರಿಸಿ ಕಟ್ಟಿದ ಶುಲ್ಕದ ಹಿಂದೆ ಪೋಷಕರ ಕನಸುಗಳಿರುತ್ತವೆ. ಆದರೆ ಇಂದಿನ ಕೆಲವು ವಿಶ್ವವಿದ್ಯಾಲಯಗಳ ನಿರ್ಲಕ್ಷ್ಯ ಮತ್ತು ಭ್ರಷ್ಟ ಆಡಳಿತ ವ್ಯವಸ್ಥೆ ಆ ಕನಸುಗಳನ್ನೇ ತುಳಿಯುತ್ತಿರುವುದು ನೋವಿನ ಸಂಗತಿ.

      ಕಾನ್ವೆಕೇಶನ್ ಸರ್ಟಿಫಿಕೇಟ್, ಮಾರ್ಕ್ಸ್ ಕಾರ್ಡ್, ಪಾಸಿಂಗ್ ಸರ್ಟಿಫಿಕೇಟ್ ಇವು ವಿದ್ಯಾರ್ಥಿಗಳ ಹಕ್ಕು. ಆದರೆ ಇಂದು ಅವು "ಹಣ ಕೊಟ್ಟರೆ ಸಿಗುವ ವಸ್ತು"ಗಳಂತೆ ಮಾರ್ಪಟ್ಟಿವೆ ಎಂಬ ಆರೋಪಗಳು ರಾಜ್ಯದ ಅನೇಕ ವಿಶ್ವವಿದ್ಯಾಲಯಗಳ ವಿರುದ್ಧ ಕೇಳಿಬರುತ್ತಿವೆ. ಸಾವಿರಾರು ರೂಪಾಯಿ ಹಣ ಕಟ್ಟಿದರೂ ವರ್ಷಗಳ ಕಾಲ ಪ್ರಮಾಣಪತ್ರ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಡಿಗ್ರಿ ಮುಗಿದು ೨ ವರ್ಷ, ೩ ವರ್ಷ, ೫ ವರ್ಷ, ಅಷ್ಟೇ ಅಲ್ಲ ೯ ವರ್ಷವಾದರೂ ಇನ್ನೂ ಸರ್ಟಿಫಿಕೇಟ್ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದು ಕೇವಲ ಆಡಳಿತದ ನಿಧಾನಗತಿ ಸಮಸ್ಯೆಯಲ್ಲ; ಇದು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ನಡೆಯುತ್ತಿರುವ ಆಟ. ಉದ್ಯೋಗಕ್ಕೆ ಅರ್ಜಿ ಹಾಕಲು, ಉನ್ನತ ಶಿಕ್ಷಣ ಪಡೆಯಲು, ವಿದೇಶಕ್ಕೆ ಹೋಗಲು ಎಲ್ಲಕ್ಕೂ ಸರ್ಟಿಫಿಕೇಟ್ ಅಗತ್ಯ ಆದರೆ ಸರಿಯಾದ ಸಮಯಕ್ಕೆ ದಾಖಲೆ ಸಿಗದ ಕಾರಣ ಅನೇಕ ವಿದ್ಯಾರ್ಥಿಗಳು ಉದ್ಯೋಗಾವಕಾಶ ಕಳೆದುಕೊಂಡಿದ್ದಾರೆ. ಕೆಲವರು "ಸರ್ಟಿಫಿಕೇಟ್ ಬೇಕಾದರೆ ದೊಡ್ಡವರನ್ನು ಕರೆತರುವುದು", "ಹಣ ಕೊಡಿ", "ಪೆನಾಲ್ಟಿ ಕಟ್ಟಿರಿ" ಎಂಬ ಅವಮಾನಕರ ಮಾತುಗಳನ್ನು ಕೇಳಬೇಕಾದ ಸ್ಥಿತಿಗೆ ತಲುಪಿದ್ದಾರೆ.

      ಇನ್ನೂ ದುಃಖದ ಸಂಗತಿ ಏನೆಂದರೆ, ಶಿಕ್ಷಣ ಸಂಸ್ಥೆಗಳು ಸೇವಾ ಮನೋಭಾವದಿಂದ ನಡೆದುಕೊಳ್ಳಬೇಕಾದರೆ, ಕೆಲವು ಕಡೆಗಳಲ್ಲಿ ಅದು ಹಣ ವಸೂಲಿಯ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಒಂದು ವರ್ಷ ತಡವಾದರೆ ಶುಲ್ಕ ದ್ವಿಗುಣ, ಮೂರು ಪಟ್ಟು ಎನ್ನುವ ನಿಯಮಗಳು ವಿದ್ಯಾರ್ಥಿಗಳ ಆರ್ಥಿಕ ಸಂಕಷ್ಟವನ್ನು ಲೆಕ್ಕಿಸದೇ ಮಾಡಲ್ಪಟ್ಟಂತಿವೆ. "ಬಡ ವಿದ್ಯಾರ್ಥಿಯ ಬೆವರಿನ ಹಣಕ್ಕೆ ಬೆಲೆ ಇಲ್ಲವೇ?" ಎಂಬ ಪ್ರಶ್ನೆ ಇಂದು ಪ್ರತಿಯೊಬ್ಬ ವಿದ್ಯಾರ್ಥಿಯ ಮನದಲ್ಲಿ ಮೂಡುತ್ತಿದೆ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಹೋದಾಗ ಸರಿಯಾದ ಪ್ರತಿಕ್ರಿಯೆಯೂ ಸಿಗುವುದಿಲ್ಲ ಎನ್ನುವ ಆರೋಪಗಳು ಮತ್ತಷ್ಟು ಆತಂಕಕಾರಿ. "ನಿಮಗೆ ನಾವು ಸಂಬಂಧವೇ ಇಲ್ಲ" ಎನ್ನುವ ರೀತಿಯ ವರ್ತನೆ ಶಿಕ್ಷಣ ಕ್ಷೇತ್ರದ ಮಾನವೀಯತೆಯೇ ಕುಸಿಯುತ್ತಿರುವುದನ್ನು ತೋರಿಸುತ್ತದೆ.

      ಶಿಕ್ಷಣ ಸಂಸ್ಥೆ ಎಂದರೆ ಕೇವಲ ಕಟ್ಟಡವಲ್ಲ; ಅದು ವಿಶ್ವಾಸದ ಕೇಂದ್ರ, ಆ ವಿಶ್ವಾಸವೇ ಇಂದು ಕುಸಿಯುತ್ತಿದೆ. ಇದರಲ್ಲಿ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ. ಪ್ರಮಾಣಪತ್ರ ವಿತರಣೆಯಲ್ಲಿ ವಿಳಂಬ ಯಾಕೆ? ವಿದ್ಯಾರ್ಥಿಗಳಿಂದ ವಸೂಲಿಯಾಗುತ್ತಿರುವ ಹೆಚ್ಚುವರಿ ಹಣದ ಲೆಕ್ಕವೇನು? ಅಧಿಕಾರಿಗಳ ವಿರುದ್ಧ ಬಂದಿರುವ ಆರೋಪಗಳ ಸತ್ಯಾಸತ್ಯತೆ ಏನು? ಇವೆಲ್ಲದರ ಕುರಿತು ಪಾರದರ್ಶಕ ತನಿಖೆ ನಡೆಯಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

      ಒಬ್ಬ ವಿದ್ಯಾರ್ಥಿಗೆ ಸರ್ಟಿಫಿಕೇಟ್ ಕೇವಲ ಒಂದು ಕಾಗದವಲ್ಲ; ಅದು ಅವನ ಪರಿಶ್ರಮದ ಫಲ, ಪೋಷಕರ ತ್ಯಾಗದ ಸಂಕೇತ, ಭವಿಷ್ಯದ ಬಾಗಿಲು. ಆ ಬಾಗಿಲನ್ನು ಹಣದ ಹೆಸರಿನಲ್ಲಿ ಮುಚ್ಚುವ ಹಕ್ಕು ಯಾರಿಗೂ ಇಲ್ಲ. ಶಿಕ್ಷಣವು ವ್ಯಾಪಾರವಾಗಬಾರದು. ವಿದ್ಯಾರ್ಥಿಗಳ ಕನಸುಗಳ ಮೇಲೆ ಲಾಭದ ಕಟ್ಟಡ ನಿರ್ಮಿಸುವ ವ್ಯವಸ್ಥೆ ಯಾವುದೇ ಸಮಾಜಕ್ಕೂ ಶಾಪವೇ ಸರಿ.

ಉಪಸಂಪಾದಕ, ಬಿತ್ತಿ ಸಂಪಾದಕ ಮಂಡಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...