ಸೋಮವಾರ, ಮಾರ್ಚ್ 30, 2026

ಸಂಚಿಕೆ - ೧೪

ಪ್ರಶ್ನೆ

ಗೆಜ್ಜೆ ಕಟ್ಟಿ ಕುಣಿಯುವ ಬದುಕಿಗೆ 

ನಾಳೆಯ ಅಸ್ತಿತ್ವದ ಯೋಚನೆಯಲ್ಲಿದೆ? 

ಹೆಜ್ಜೆ ಹೆಜ್ಜೆಗೂ ಬಣ್ಣ ಉಗುಳುವ ಖಯಾಲಿಗೆ 

ರಂಗುರಂಗಿನ ಕುಂಚಗಳ ಮಿತಿಯಲ್ಲಿದೆ?


ಬದುಕು ರಂಗಸ್ಥಳದ ತೋರಿಕೆಯೇ ಬೇರೆ, 

ಮನದ ನೇಪಥ್ಯದ ದುಗುಡತೆಯೇ ಬೇರೆ. 

ನಾಳೆಗಳ ಸಮ್ಮೋಹಿಸುವ ಮರಣಮೃದಂಗಕೆ 

ವಾದ್ಯ ಓಲಗಗಳ ಒಡೋಲಗ ವೇತಕೆ?


ಬೂದಿಯಾಗುವ ವರ್ಣಗಳ ನಿರ್ಲಿಪ್ತತೆಗೆ 

ಕನಸುಗಳ ಹೆಣೆಯುವ ಆಸೆಯೇತಕೆ? 

ರಂಗಸಜ್ಜಿಕೆಯ ವೇಷ ಕಳಚುವ ಆತ್ಮಕೆ, 

ಆದರ್ಶ ಮುಖವಾಡಗಳ ಸೋಗೇತಕೆ!


ಅನೂಪ್ ಕುಮಾರ್, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೪

ಯುದ್ಧ

ಯುದ್ಧವೆಂದರೆ ಗೆಲುವಲ್ಲ, 

ಅದು ಮಾನವೀಯತೆಯ ಸೋಲು.

ಬಾಂಬ್‌ಗಳ ಸದ್ದಿನ ನಡುವೆ 

ಮಕ್ಕಳ ನಗು ನಿಶ್ಯಬ್ದವಾಗುತ್ತದೆ.


ತಾಯಿಯ ಮಡಿಲು ಖಾಲಿಯಾಗುತ್ತದೆ, 

ತಂದೆಯ ಕನಸುಗಳು ಮುರಿಯುತ್ತವೆ.

ರಕ್ತದ ಹಾದಿಯಲ್ಲಿ ನಡೆದು 

ಮಾನವನು ತನ್ನದೇ ನೆರಳಿಗೆ ಭಯಪಡುವನು.


ಸೀಮೆಗಳಿಗಾಗಿ ಹೋರಾಡಿ 

ಹೃದಯಗಳೇ ದೂರವಾಗುತ್ತವೆ, 

ಒಂದು ಗೆಲುವಿನ ಹಿಂದೆ 

ಸಾವಿರ ಕಣ್ಣೀರ ಕಥೆಗಳು ಅಡಗಿವೆ.


ಯುದ್ಧದ ಅಂತ್ಯದಲ್ಲಿ 

ಯಾರಿಗೂ ಜಯವಿಲ್ಲ, 

ಉಳಿಯುವುದು ಮಾತ್ರ 

ನೋವು, ನೆನಪು, ಮತ್ತು ಮೌನವೇ


ನೇತ್ರಾವತಿ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ ಕನ್ನಡ ವಿಭಾಗ

ಸಂಚಿಕೆ ೧೪

ಹಸಿವು

      ಹಸಿವು ಎಂದರೇ ಈಗ ಒಂದು ಹೊತ್ತಿನ ಮಧ್ಯಾಹ್ನದ ಭೋಜನವಾಗಿದೆ. ಮಾನವನು ತನಗೆ ಹಸಿವಾಗಿದೆ ಎಂದು ತಿನ್ನುವ ಬದಲಾಗಿ ತಾನು ತಿನ್ನುವ ಸಮಯವಾಯಿತೆಂದು ತಿನ್ನುತ್ತಾನೆ. ಅದು ಅಲ್ಲದೇ ಆಹಾರವನ್ನು ಮನಸೋ ಇಚ್ಛೆ ಬಂದಂತೆ ವ್ಯರ್ಥಮಾಡುತ್ತಾನೆ. ಈಗಿನ ಕಾಲದಲ್ಲಿ ಆಹಾರವು ಸಮಾರಂಭಗಳಲ್ಲಿ ರುಚಿಯ ಸಂಕೇತವಾಗಿದೆ ಹಾಗೂ ವ್ಯಾಪಾರವಾಗಿದೆ. ಇದರಿಂದಾಗಿ ಆಹಾರವು ತನ್ನ ತನವನ್ನು ಕಳೆದುಕೊಳ್ಳುತ್ತಿದೆ. ಅದೇ ಆಹಾರವನ್ನು ಬೆಳೆಸಲು ಕಷ್ಟಪಡುವ ರೈತನಿಗೆ ತಿಳಿದಿದೆ ಹಸಿವಿನ ಮೌಲ್ಯ. ಅದನ್ನು ಬೆಳೆಸಿದ ಮಣ್ಣಿಗೂ ತಿಳಿದಿದೆ ಆತನ ಶ್ರಮ ಎಂತದ್ದು ಎಂದು. ರೈತನು ಪಡುವ ಶ್ರಮವು ಅವನಿಗೆ ಆಹಾರವನ್ನು ವ್ಯರ್ಥ ಮಾಡಲು ಬಿಡುವುದಿಲ್ಲ. ಆದ್ದರಿಂದ ಹಸಿವೆಂದರೆ ಬರೀ ಹಸಿವಲ್ಲ. ಅದು ರೈತನ ಶ್ರಮದ ಫಲವಾಗಿದೆ.

ಪುನೀತ್, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ ಕನ್ನಡ ವಿಭಾಗ

ಸಂಚಿಕೆ - ೧೪

ನಿಷ್ಕಳಂಕ ಪ್ರೀತಿ

ನಿಷ್ಕಳಂಕ ಪ್ರೀತಿ ಅಂದರೆ 

ಕೇಳದೆ ಕೊಡುವ ಮನಸ್ಸು.

ಕಾಣದೆ ಕಾಪಾಡುವ ಕರುಣೆ.

ಸ್ವಾರ್ಥ ಬಂದಲ್ಲಿ 

ಪ್ರೀತಿ ವಿಲೀನವಾಗುತ್ತದೆ; 

ತ್ಯಾಗ ಬಂದಲ್ಲಿ 

ಪ್ರೀತಿ ದೇವರಾಗುತ್ತದೆ.

ಹೆಸರು ಬೇಡ, ಹಕ್ಕು ಬೇಡ, 

ಹೆಮ್ಮೆಯಾದ ಭಾವವೇ ಪ್ರೀತಿ.

ಕೊಟ್ಟು ನಿಂತವನೇ ಪ್ರೇಮಿ, 

ಕೊಂಡು ಕೇಳಿದವನು ವ್ಯಾಪಾರಿ.

ಮನವೇ ದೇವಾಲಯ,

ಭಾವವೇ ಪೂಜೆ;

ಅಲ್ಲಿ ನಿಷ್ಕಳಂಕ ಪ್ರೀತಿ ನೆಲಸಿದರೆ 

ಅದೇ ಕೈಲಾಸ.


ಪವಿತ್ರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೪

ಹೆಪ್ಪುಗಟ್ಟಿದ ರಕ್ತ

ಇಂದು ನಿನ್ನೆಯದೇನೋ ಮರಿ ಈ ಆಟ 

ಕೆಂಪು ರಕ್ತ, ಕಣ್ಣೀರ ಮಳೆ ಬಿಡದ ಚಟ 

ದೊರೆಯ ಎದುರು ನಿಲ್ಲುವನು ಪ್ರಜೆ 

ಹೂಡುವನು ದೊರೆ ಯುದ್ಧವೆಂಬ ಸಜೆ


ಕ್ಲಾಸಿನೊಳಗೆ, ಸದನದೊಳಗೆ 

ಕೀರ್ತಿ, ಕುರ್ಚಿಗಾಗಿ, ಮರ್ಜಿಗಾಗಿ 

ನಿತ್ಯದ ಯುದ್ಧ, ಮುಗಿಯದ ಯುದ್ಧ 

ಕದಣಾಂಗಣಕ್ಕೆ ಕೆಣಕಿ ಕರೆಯುವರಯ್ಯ


ಅಲ್ಲೊಬ್ಬನ - ಇಲ್ಲೊಬ್ಬನ ಹೊಡೆದಾಟ 

ನನ್ನನೂ ಸೇರೆಸಿಕೊಳ್ಳಿ ಮತ್ತೊಬ್ಬನ ಹಠ 

ಎಲ್ಲಾ ಇದ್ದು ಎಲ್ ಪಿ ಜಿ ಗಾಗಿ ನಮ್ಮ ಪರದಾಟ 

ಕೊನೆಗೆ ಏನೂ ಪಡೆದಿರಯ್ಯ 

ಏನು ಕಲಿತಿರಯ್ಯ ಯುದ್ಧದಿಂದ ಪಾಠ


ಪರಶುರಾಮ್, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ ಕನ್ನಡ ವಿಭಾಗ

ಸಂಚಿಕೆ - ೧೪

 ವಿಶ್ವ ಸಂಚಾರಿ ಕಬಾಬಿನ ಕಥೆ

      ಬಹುಶಃ ನಿಮಗೆ 'ತೀಶ್ ಕಬಾಬ್' ಅಂದರೆ ಏನೆಂದು ಗೊತ್ತಿರಬಹುದು. ಆದರೆ ಹೆಚ್ಚಿನ ಜನರಿಗೆ ಅದರ ಅರ್ಥವೇನೆಂದು ಗೊತ್ತಿರುವ ಸಂಭಾವ್ಯ ಕಡಿಮೆ. ತುರ್ಕಿ ಭಾಷೆಯಲ್ಲಿ 'ಸೀಸ್' ಅಂದರೆ ಖಡ್ಗ ಎಂದೂ, ಕಬಾಬ್ ಅಂದರೆ ಮಾಂಸ (ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಆಡಿನ ಮಾಂಸ ಮತ್ತು ಕುರಿಯ ಮಾಂಸ) ಎಂಬ ಅರ್ಥವನ್ನು ನೀಡುತ್ತದೆ. ನಾವು ಅರಿತ ಮಟ್ಟಿಗೆ ಕಬಾಬ್ ಅಂದರೆ ಮೇಡಿಟರಿಯನ್ ರಾಷ್ಟ್ರದಿಂದ ಮಿಡಲ್ ಈಸ್ಟ್, ಉತ್ತರ ಆಫ್ರಿಕಾ, ಗ್ರೀಸ್ ದೇಶದವರೆಗೆ ಮಾಂಸದ ಆಮದು-ರಫ್ತು ನಡೆಸಿದ್ದ ತುರ್ಕಿ ಆಟಮನ್ ಸಾಮ್ರಾಜ್ಯದಲ್ಲಿ (೧೩೦೧-೧೯೨೨) ಆದಿಯಿಂದಲೂ ಇದ್ದ ಪ್ರಕ್ರಿಯೆ.

      ಇದು ಆರಂಭವಾದದ್ದು 'ಪರ್ಷಿಯನ್'(ಈಗಿನ ಇರಾನ್) ದೇಶದಿಂದ ಎಂಬುವುದು ಕೆಲವರ ಅಭಿಪ್ರಾಯ. ಮಧ್ಯಕಾಲದಲ್ಲಿ ಜನರು ಒಂದು ಲೋಟ ವೈನಿನೊಂದಿಗೆ ಸಣ್ಣ ಮಾಂಸ ತುಂಡನ್ನು ಸಿಕ್ಕಿಸುವ 'ಲೋಹದ ಕಂಬಿ'ಗೆ (Skewer) ಸಮಾನವಾದ ಪದವನ್ನು ಬಳಕೆ ಮಾಡಿದ್ದಾಗಿ ಚರಿತ್ರೆಗಳಲ್ಲಿ ಕಾಣಬಹುದು. ಯಾಕೆ ಮಾಂಸವನ್ನು ಇಷ್ಟು ಸಣ್ಣದಾಗಿ ಕತ್ತರಿಸಿಡುತ್ತಾರೆ ಎಂದರೆ ಬೆರಳುಗಳೆಡೆಯಲ್ಲಿ ಹಿಡಿಯಲು ಸುಲಭ ಸಾಧ್ಯ ಕೆಲಸವಿದು. ಅಲ್ಲದೆ ಮಾಂಸ ಸೇವಿಸುವಾಗ ಕೈಬೆರಳುಗಳ ಮಧ್ಯೆ ಹಾಗೂ ವೈನ್ ಕುಡಿಯುವಾಗ ಭಕ್ಷದ ಅವಶಿಷ್ಟ ಗ್ಲಾಸಿನಲ್ಲಿ ಬಾಕಿಯುಳಿದರೆ ಶುಚಿಯಾಗಿಸಲು ಸ್ವಸ್ಥವೂ ಹೌದು. ಅಲ್ಲದೆ, ಕಡಿಮೆ ವನ ಪ್ರದೇಶಗಳುಳ್ಳ ದೇಶಗಳಲ್ಲಿ ಸಣ್ಣ ಮಾಂಸ ತುಂಡನ್ನು ಪಾಕ ಮಾಡಲು ಅಲ್ಪ ಸಮಯ ಮತ್ತು ಕಡಿಮೆ ಪ್ರಮಾಣದ ಇಂಧನವೂ ಸಾಕು.

      ಒಟ್ಟಿನಲ್ಲಿ ಕಬಾಬ್ ಬಾಣಸಿಗರಿಗೆ ಪಾಕಕ್ರಾಂತಿಯಲ್ಲಿ ಇಷ್ಟ ಪ್ರಿಯ ವಸ್ತು. ತುರ್ಕಿಯನ್ನರ ಮೂಲಕ ಕಬಾಬ್ ಗ್ರೀಕ್ ತಲುಪಿದಾಗ ಹಲವು ಬದಲಾವಣಿಗಳಾಯಿತು. ಮಾಂಸದ ಗಾತ್ರ ಸಣ್ಣದಾಗಿದ್ದರೂ ಅದರ ನಡುವೆ ಟೊಮ್ಯಾಟೊ, ಈರುಳ್ಳಿ, ಹಸಿರು ಮೆಣಸನ್ನು ಸೇರಿಸಿ, ಮಾಂಸವನ್ನು ಸಲಾಡ್ ರೂಪವಾಗಿಸಿಡುವ ಶೈಲಿ ಹೊಸತಾಗಿ ಆರಂಭವಾಯಿತು.

      ಈ ಪಾಕ ಶೈಲಿಯಲ್ಲಿರುವ ಕಬಾಬ್ ನಂತರ ಅಮೇರಿಕಾದಲ್ಲಿ ಪ್ರಸಿದ್ದಿ ಪಡೆಯಲಾರಂಭಿಸಿತು. ಆಡಿನ ಮಾಂಸದ ಬದಲಿಗೆ ಅಮೇರಿಕನ್ನರು ಬೀಫ್ ಮತ್ತು ಕೋಳಿಯನ್ನು ಉಪಯೋಗಿಸ ತೊಡಗಿದರು. ಅಮೇರಿಕನ್ನರು ಉಪಯೋಗಿಸುವ ಮಾಂಸದ ಗಾತ್ರ ದೊಡ್ಡದಾದ ಕಾರಣ ಬಾಣಸಿಗರಿಗೆ ಹೆಚ್ಚು ಸಮಯ, ಕಠಿಣ ಶ್ರಮ ವ್ಯಯಿಸಬೇಕಾಯಿತು. ಮನೆಯ ಹಿಂಭಾಗದಲ್ಲಿ ಕೆಂಡವನ್ನು ರಾಶಿ ಹಾಕಿ ಅಡುಗೆ ಮಾಡುತ್ತಿದ್ದರು. ಮಾಂಸಖಂಡದ ಒಂದು ಭಾಗ ಬೆಂದು ಪಕ್ವವಾದರೆ ಅದನ್ನು ತಿರುಗಿಸುತ್ತಾ, ಪೂರ್ತಿ ಬೇಯುವವರೆಗೂ ಉರಿವ ಬೆಂಕಿಯ ಮೇಲಿಟ್ಟು 'ಬೇಯುವಿಕೆಯ ಪ್ರಕ್ರಿಯೆ'ಯನ್ನು ಕೊನೆಗೊಳಿಸುತ್ತಿದ್ದರು. ೧೯೬೦ರ ಕಾಲಾವಧಿಯಲ್ಲಿ ಗ್ರೀಕ್ ಸಿನಿಮಾಗಳಲ್ಲಿ ಕಬಾಬ್ ಅಚ್ಚಳಿಯದೇ ಅವಶೇಷವಾಗಿ ಉಳಿಯಿತು. ತರುವಾಯ ಕಬಾಬ್ ಪಾಕ ಮಾಡುವ ಸ್ಥಳಗಳು ಅಮೇರಿಕನ್ ವಿದೇಶಿಗರ ನಿರಂತರ ಸಂಚಾರಿ ಕೇಂದ್ರವಾಯಿತು. ಕಬಾಬ್ ಇತರ ದೇಶಗಳಲ್ಲಿಯೂ ಸಂಚಾರ ಆರಂಭಿಸಿತು. ಸಿಲ್ಕ್ ರೋಡಿನಲ್ಲಿ ಪಶ್ಚಿಮಕ್ಕೆ ಸಂಚರಿಸುವ ವ್ಯಾಪಾರಸ್ಥರು, ಕೋಲಿಗೆ (Stick) ಮಾಂಸ ತುಂಡನ್ನು ತುರುಕಿಸಿ ಕಡಿಮೆ ಸಮಯ ಮತ್ತು ಸುಲಭವಾಗಿ ಪಾಕ ಮಾಡುವ ವಿಧಾನವನ್ನು ಕಂಡ ವ್ಯಾಪಾರಸ್ಥರು ತಮ್ಮ ಊರಿಗೆ ಕೊಂಡೊಯ್ದರು. ಕೋಕಸ್ ಪರ್ವತದಲ್ಲಿರುವ ಜೋರ್ಜಿಯಾ ರಾಷ್ಟ್ರದಲ್ಲೂ ಕಬಾಬ್ ನಿತ್ಯ ಉಪಯೋಗಿಕ ಆಹಾರ ವಸ್ತುವಾಯಿತು. ಇಲ್ಲಿ ಕಬಾಬನ್ನು 'ಷೇಷ್‌ಲಿಸ್' ಎಂಬ ಹೆಸರಿನಿಂದ ಕರೆಯುತ್ತಾರೆ. ಅಲ್ಲಿಂದ ರಷ್ಯಾ, ಸೋವಿಯತ್ ರಿಪಬ್ಲಿಕಿನ ಪ್ರಧಾನ ಭಕ್ತ ವಸ್ತುವಾಗಿ ಕಬಾಬ್ ಗಮನ ಸೆಳೆಯಿತು.

      ಭಾರತ, ಪಾಕಿಸ್ತಾನ ದೇಶದಲ್ಲಿ ಮಾಂಸ ಬೆರೆಸುವ ಸಾಮಗ್ರಿಗಳ ಪ್ರಕ್ರಿಯೆಯಲ್ಲಿ ಹಲವು ಬದಲಾವಣೆಗಳು ಕಂಡು ಬಂತು, ಆಡು, ಕೋಳಿ ಮಾಂಸವನ್ನು ಈ ಎರಡು ದೇಶಗಳಲ್ಲಿ ಉಪಯೋಗಿಸಲಾಯಿತು. ಮಿಡಲ್ ಈಸ್ಟ್ ರಾಷ್ಟ್ರಗಳಲ್ಲಿಯೂ ಇದೇ ಶೈಲಿಯನ್ನು ಸ್ವೀಕರಿಸಿದರು. ಕೆಲವೊಮ್ಮೆ ಕಡ್ಡಿಯ ಸಹಾಯವಿಲ್ಲದೆ ಪಾತ್ರದಲ್ಲಿಯೋ, ಅವಿಯಲ್ಲೋ ಬೇಯಿಸಿ ಚೆನ್ನಾಗಿ ಬಿಸುಪು ಮಾಡಿ ಕಾಯಿಸಿ ತಿನ್ನುತ್ತಿದ್ದರು. ಜನರು ಕಬಾಬನ್ನು ಸತಾಯ್ (sataay) ಎಂಬ ಹೆಸರಿನಿಂದ ಗುರುತಿಸುವರು. ಚಿಕನ್ ಅಥವಾ ಬೀಫ್ ಉಪಯೋಗಿಸಿ ತಯಾರಿಸಿದ ನಂತರ ಸುತ್ತಲೂ ಇರುವ ನೆಲಗಡಲೆ ಸೋಸಿನೊಂದಿಗೆ (Peanut Sauce) ಬಡಿಸಿ ತಿನ್ನುವುದು ಅವರ ಶೈಲಿ.

      ಇಂದು ಕಬಾಬ್ ಜಪಾನ್ ರಾಷ್ಟ್ರದವರೆಗೂ ವ್ಯಾಪಿಸಿದೆ. ಅದಕ್ಕಾಗಿ ಯಕಿಟೋರಿ ಮಾದರಿಯ ಪಾಕ ಶೈಲಿಯನ್ನು ಉಪಯೋಗಿಸಿ. ಮಾಂಸ ತುಂಡಿನೊಂದಿಗೆ ತರಕಾರಿಯನ್ನೂ ಕೋಲಿಗೆ ಸಿಕ್ಕಿಸಿ ತಿನ್ನುವುದನ್ನೂ ಶುರುವಿಟ್ಟಿದ್ದಾರೆ. ಸದ್ಯ ಎಲ್ಲರೂ ಸಣ್ಣ ಕೋಲಿನ ಕಡ್ಡಿಯಲ್ಲಿ ಮಾಂಸವನ್ನು ಸಿಕ್ಕಿಸಿ ತಿನ್ನುವುದು ಮಾಮೂಲಿ ದೃಶ್ಯ, ಕಬಾಬ್ ಬಹುತೇಕ ರಾಷ್ಟ್ರಗಳ ಬೀದಿಬದಿಯ ತಿನಿಸಾಗಿ (Street food) ಮಾರ್ಪಾಡಾಗಿದೆ. ನ್ಯೂಯಾರ್ಕ್ ಸಿಟಿಯಯಲ್ಲಿ ಕಬಾಬ್ ಪ್ರತಿದಿನದ ವ್ಯಾಪಾರ ವಸ್ತು. ಯೂನಿಯನ್ ಉತ್ತರ ಭಾಗದಲ್ಲಿ ಕೆಂಡವನ್ನು ಬಳಸಿ ಅಡುಗೆ ಮಾಡುವ ತಳ್ಳುಗಾಡಿ ಇಂದಿಗೂ ಕಾಣಲು ಸಾಧ್ಯ.


ಮೂಲ : ಮುಹಮ್ಮದ್ ನಿನ್ನಿಲ್ ನಾಸಿರ್.

ಭಾವಾನುವಾದ : ಸಲೀಂ ಸುಳ್ಯ, ಎಂ.ಎ. ದ್ವೀತಿಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೪

ಯುದ್ಧವೆಂದರೆ?

      ಈ ಯುದ್ಧ ಎಂಬ ಪದವನ್ನು ಕೇಳಿದರೆ ಸಾಕು ಎಲ್ಲರಲ್ಲೂ ಒಂದು ರೀತಿಯ ತಮ್ಮದೇ ಆದ ಕಲ್ಪನೆ ರೋಮಾಂಚನಕಾರಿ ಸಂಗತಿಗಳು ನೆನಪಾಗುತ್ತವೆ. ಈ ಯುದ್ಧ ಎಂಬುದು ತನ್ನದೇ ಆದ ಸ್ವರೂಪ ಹೊಂದಿದೆ. ಇದನ್ನು ನಾವು ಅನೇಕ ದೃಷ್ಟಿಕೋನಗಳಿಂದ ನೋಡಬಹುದು. ಇತಿಹಾಸದ ದೃಷ್ಟಿಯಿಂದ ನೋಡಿದರೆ, ರಾಜ-ರಾಜರುಗಳ ನಡುವೆ ನಡೆದ ಯುದ್ಧಗಳು ಸಾಮ್ರಾಜ್ಯ ವಿಸ್ತಾರಕ್ಕಾಗಿ, ದೇಶದ ಒಳಿತಿಗಾಗಿ ಇತ್ಯಾದಿಗಳಿಗಾಗಿ ನಡೆದವು. ಇನ್ನೂ ಕೆಲವು ಯಾವುದೋ ರೀತಿಯ ಕಾರಣಗಳಿಂದಾಗಿ ನಡೆಯುತ್ತವೆ. ಇನ್ನೊಂದು ರೀತಿಯ ಯುದ್ಧವೆಂದರೆ ಅದು ನಮ್ಮ ನಮ್ಮ ಅಂತರಂಗದಲ್ಲಿ ನಡೆಯುವಂತದು. ಈ ರೀತಿಯ ಯುದ್ಧ ಎಂಬುದು ವಿಭಿನ್ನ ಸ್ವರೂಪ ಹೊಂದಿರುವಂಥದ್ದು ಆದರೆ ಕೊನೆಯಲ್ಲಿ ಇದರಿಂದ ಉಂಟಾಗುವುದು ಅನೇಕ ರೀತಿಯ ಪರಿಣಾಮಗಳಾದರು ಅವುಗಳಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವುದು ನೋವು. ಇದು ದಿನ ಕಳೆದಂತೆ ಮರೆತರು ಮರೆಯದಂತ ಒಂದು ನೆನಪಾಗಿ ಶಾಶ್ವತವಾಗಿ ಉಳಿಯುತ್ತದೆ.

      ಈ ಯುದ್ಧದಿಂದ ನಾವು ಅನೇಕ ರೀತಿಯ ಸವಾಲುಗಳನ್ನು ಸಮಸ್ಯೆಗಳನ್ನು ನೋವುಗಳನ್ನು ಕಷ್ಟ ನಷ್ಟಗಳನ್ನು ಅನುಭವಿಸುತ್ತೇವೆ. ಇವು ಒಂದು ರೀತಿಯ ಬೇಸರ ಉಂಟುಮಾಡುವ ವಿಚಾರಗಳಾದರೆ ಇನ್ನೊಂದು ಕಡೆ ನಾವು ಈ ಯುದ್ಧದಿಂದ ನಮ್ಮ ವಾಸ್ತವಿಕತೆ ಅರಿಯಲು ಪ್ರಯತ್ನಿಸುತ್ತೇವೆ. ಎಲ್ಲಿಯೋ ಇರೋರು ನಮ್ಮವರು ಎಂಬ ಬಂಧಗಳನ್ನು ಜಾಗೃತಿಗೊಳಿಸುತ್ತೇವೆ. ಎದುರಾದ ಆನೇಕ ನಷ್ಟ ಕಷ್ಟಗಳಿಂದಾಗಿ ಕೆಲವು ವಿಚಾರಗಳಲ್ಲಿ ನಾವು ನಮ್ಮ ಪ್ರಾಚೀನತೆಯ ಉತ್ತಮ ಜೀವನದ ಅನುಭವವನ್ನು ಪಡೆಯುತ್ತೇವೆ. ಉದಾ :- ಪ್ರಸ್ತುತ ಈಗ ನಡೆಯುತ್ತಿರುವ ಇಸ್ರೇಲ್ ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ಅನಿಲ ಇಂಧನ ದೊರಕದೆ ನಾವು ನಮ್ಮ ಪ್ರಾಚೀನ ಕಾಲದ ಉತ್ತಮ ಅಡುಗೆ ಮಾಡುವ ಸೌದೆ ಒಲೆ ಮೊರೆ ಹೋಗಿದ್ದೇವೆ. ಇದರಲ್ಲಿ ಅಡುಗೆ ಬೇಯಿಸಿ ಊಟ ಮಾಡಿದಾಗ ಸಿಗುವ ರುಚಿ ಯಾವ ಅನಿಲದಿಂದ ಬೇಯಿಸಿ ಮಾಡಿದ ಅಡುಗೆಯಲ್ಲೂ ಸಿಗದು. ಹೀಗೆ ಇಂತಹ ಯುದ್ಧದಿಂದ ಕಳೆದುಕೊಳ್ಳುವುದಕ್ಕೂ ಪಡೆದುಕೊಳ್ಳುವುದಕ್ಕೂ ಲೆಕ್ಕವಿಲ್ಲ. ಆದರೆ ಅವುಗಳ ಕೊನೆಯಲಿ ಶಾಶ್ವತ ಪರಿಣಾಮ ನೋವು.

      ಇನ್ನೊಂದು ರೀತಿಯ ಈ ಯುದ್ಧ ನಮ್ಮ ನಮ್ಮ ಅಂತರಂಗದಲ್ಲಿ ನಡೆಯುತ್ತದೆ. ಇದು ಯಾವುದೋ ಕೋಪ, ಮನಸ್ತಾಪ, ಅನ್ಯಾಯ, ಇಕ್ಕಟ್ಟು ಅಗಲಿಕೆ ಇತ್ಯಾದಿ ಕಾರಣಗಳಿಂದ ನಮ್ಮಲ್ಲಿ ನಡೆಯುತ್ತದೆ. ಆದ್ದರಿಂದ ನಾವು ಕೆಲವನ್ನು ಪಡೆಯುತ್ತೇವೆ ಇನ್ನು ಕೆಲವನ್ನು ಕಳೆದುಕೊಳ್ಳುತ್ತೇವೆ. ಆದರೂ ಇಲ್ಲಿಯೂ ಕೂಡ ನಾವು ಯಾವುದಾದರೂ ಒಂದು ರೀತಿಯಲ್ಲಿ ನೋವನ್ನು ಅನುಭವಿಸುತ್ತೇವೆ. ಹೀಗೆ ಈ ಯುದ್ಧ ಎಂಬುದರಿಂದ ಕಷ್ಟನಷ್ಟ ಸುಖ ದುಃಖ ಇತ್ಯಾದಿಗಳೆಲ್ಲ ಎದುರಾಗುತ್ತವೆ. ಆದರೆ ಒಡೆದ ರಾಷ್ಟ್ರಗಳನ್ನಾಗಲಿ, ಒಡೆದ ಮನಸ್ಸುಗಳನ್ನಾಗಲಿ ಮರಳಿ ಕಟ್ಟಲು ಈ ಎಲ್ಲವನ್ನು ಸಮಚಿತ್ತದಿಂದ ಎದುರಿಸಿ ಮನುಷ್ಯತ್ವದ ಅರಿವನ್ನು ಅರಿತು ಮುಂದೆ ಸಾಗುವುದೇ ಉತ್ತಮ ಮಾರ್ಗವಾಗಿದೆ. ಒಡೆದ ರಾಷ್ಟ್ರಗಳನ್ನಾಗಲಿ, ಒಡೆದ ಮನಸ್ಸುಗಳನ್ನಾಗಲಿ ಮರಳಿ ಕಟ್ಟಲು.

ಸುಜಾತ ಗಿ, ಪೂಜೇರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೪

ಯುದ್ಧ

ಯುದ್ಧವೆಂದರೆ ಬೆಂಕಿಯ ನದಿ 

ಮಾನವನ ಮನದಲ್ಲಿ ಮೂಡುವ ಕ್ರೋಧದ ಗಡಿ!

ಕತ್ತಿಗಳ ಘರ್ಷಣೆ ಗುಂಡಿನ ಸದ್ದು, 

ಶಾಂತಿಯ ಹೃದಯಕ್ಕೆ ಹೊಡೆಯುವ ಕದ್ದು


ನಿನ್ನೆ ನಗುತ್ತಿದ್ದ ಮುಖಗಳು ಇಂದು ಮೌನ 

ಕಣ್ಣೀರಿನಲ್ಲಿ ಮುಳುಗಿದ ಜೀವನದ ಗಾನ 

ಅಮ್ಮನ ಮಡಿಲಲ್ಲಿ ಖಾಲಿ ಕನಸು 

ಮಗನಿಗಾಗಿ ಕಾಯುವ ನೋವಿನ ನಸು ನಸು


ಭೂಮಿಯ ಮೇಲೆ ರಕ್ತದ ಗುರುತು, 

ಮಾನವತೆಯ ಮೌಲ್ಯವನ್ನೇ ಮಾಡುತ್ತದೆ ಮರುತು 

ವಿಜಯವೆಂದರೂ ನೋವೇ ಹೆಚ್ಚು 

ಯುದ್ಧದ ದಾರಿ ಕತ್ತಲೆಯೇ ಸತ್ಯ


ಬನ್ನಿ ನಾವೆಲ್ಲ ಶಾಂತಿಯನ್ನು ಆರಿಸೋಣ 

ಪ್ರೀತಿಯ ಬೆಳಕಿನಲ್ಲಿ ಬದುಕು ಸಾಗಿಸೋಣ 

ಯುದ್ಧವಿಲ್ಲದ ಲೋಕದ ಕನಸು ಕಟ್ಟೋಣ 

ಸೌಹಾರ್ದದಿಂದ ಭವಿಷ್ಯವನ್ನು ರೂಪಿಸೋಣ


ಶ್ರೀಷ್ಮ ಎಂ. ಬಿ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ ಕನ್ನಡ ವಿಭಾಗ

ಸಂಚಿಕೆ - ೧೪

ಪ್ರಕೃತಿ ಮಾತೆಯ ಕೂಗು

ಇತ್ತೊಂದು ಕಾಲದಲ್ಲಿ ಸುತ್ತಲೂ ಹಸಿರು 

ಬೇಕಾಗಿರಲಿಲ್ಲ ಅಂದು ಸ್ವಾರ್ಥದ ಹೆಸರು 

ಬೆಳೆಸುತ್ತಿದ್ದರು ಸ್ವಚ್ಛಂದದ ಉಸಿರು 

ಕೈ ಕೆಸರಾದರೆ ಬಾಯಿಗೆ ಸಿಗುತ್ತಿತ್ತು ಮೊಸರು


ಬದಲಾಯಿತು ನೋಡು ನೋಡುತ್ತ ಕಾಲ 

ಆವರಿಸಿತು ಮನುಷ್ಯನಿಗೆ ಹಣವೆಂಬ ಜಾಲ 

ಆಸೆಯಿಂದ ಕೂಡಿದೆ ಮನದ ಬೆಂಬಲ 

ಭ್ರೂಣದಲ್ಲೇ ಹಸಿರು ಹತ್ಯೆ ಮಾಡುವ ಕಾಲ


ಕೇಳುವವರಿಲ್ಲ ಪ್ರಕೃತಿ ಮಾತೆಯ ಗೋಳನ್ನು 

ಅವಳ ರೋಧನವು ಮುಟ್ಟಿತು ಮುಗಿಲನು 

ಭವಿಷ್ಯದ ಚಿಂತನೆಯಿಲ್ಲದ ಕಪಟಿ ಮಾನವರು 

ಸ್ವಾರ್ಥಕ್ಕಾಗಿ ಎಲ್ಲವನ್ನು ಹಾಳು ಮಾಡಿಹರು


ಅರಿತು ನಡೆದರೆ ಈ ಬದುಕು ಬಂಗಾರ 

ಹಸಿರಿನ ಜೊತೆಗೆ ಬದುಕೇ ಸುಂದರ 

ಮತ್ತೆ ಹರಡುವ ಎಲ್ಲೆಲ್ಲೂ ಹಸಿರು ಹಂದರ 

ಸುತ್ತ ಹಸಿರು ಇರಲು ಬೇಡ ಬೇರೆ ಸಿಂಗಾರ


ದಿವ್ಯಶ್ರೀ ಎ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ ಕನ್ನಡ ವಿಭಾಗ

ಸಂಚಿಕೆ - ೧೪

ಜಾಗತಿಕ ಯುದ್ಧ

      ಇಂದಿನ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳು ಮಾನವ ಕುಲಕ್ಕೆ ದೊಡ್ಡ ಸವಾಲುಗಳಾಗಿವೆ. ಯುದ್ಧಗಳು ನಡೆಯುವ ಪ್ರದೇಶಗಳಲ್ಲಿ ಜೀವಹಾನಿ, ಆರ್ಥಿಕ ನಷ್ಟ, ಪರಿಸರ ಹಾನಿ ಮತ್ತು ನಿರಾಶ್ರಿತರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಯುದ್ಧ ಹೊಗೆ ಕೇವಲ ಗಡಿಯೊಳಗೆ ಮಾತ್ರ ಉಳಿಯದೆ. ಜಗತ್ತಿನ ಎಲ್ಲಾ ಭಾಗಗಳನ್ನು ತಲುಪುತ್ತದೆ. ಆರ್ಥಿಕವಾಗಿ, ಇಂದನ ಬೆಲೆ ಏರಿಕೆ, ಆಹಾರ ಕೊರತೆ, ಉದ್ಯೋಗದ ಅನಿಶ್ಚಿತತೆ ಇವುಗಳು ಸಾಮಾನ್ಯ ಜನರ ಬದುಕನ್ನು ಕಷ್ಟಕರವಾಗಿಸುತ್ತದೆ. ಪರಿಸರದ ದೃಷ್ಟಿಯಿಂದ ಸ್ಪೋಟಗಳು ಮತ್ತು ಹಾನಿಗಳು ಪ್ರಕೃತಿಯ ಸಮತೋಲನವನ್ನು ಕೆಡಿಸುತ್ತದೆ.


ಸಮಾಜದ ಮೇಲೆ ಯುದ್ಧಗಳ ಪ್ರಭಾವ :-

      ಯುದ್ಧಗಳು ಸಮಾಜದ ಮೇಲೆ ಆಳವಾದ ಗಾಯಗಳನ್ನು ಬೀರುತ್ತವೆ. ಅನೇಕ ಕುಟುಂಬಗಳು ಭಿನ್ನವಾಗುತ್ತದೆ ಮಕ್ಕಳ ಶಿಕ್ಷಣ ಅಸ್ತವ್ಯಸ್ತವಾಗುತ್ತದೆ ಮತ್ತು ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಮಾನವ ಸಂಬಂಧಗಳಲ್ಲಿ ಅವಿಶ್ವಾಸ ಹೆಚ್ಚಾಗುತ್ತದೆ. ಸಾಮಾಜಿಕ ಮೌಲ್ಯಗಳ ಕುಗ್ಗುವ ಸಾದ್ಯತೆ ಇದೆ.


ಯುದ್ಧಗಳ ಮೇಲೆ ನನ್ನ ಅಭಿಪ್ರಾಯ :-

      ನನ್ನ ದೃಷ್ಟಿಯಲ್ಲಿ ಯುದ್ಧ ಯಾವತ್ತೂ ಸಮಸ್ಯೆಗಳ ಪರಿಹಾರವಲ್ಲ. ಅದು ಕೇವಲ ನಾಶವನ್ನು ಉಂಟುಮಾಡುತ್ತದೆ. ನಿಜವಾದ ಜಯ ಎಂದರೇ ಶಾಂತಿ, ಸಹಾನುಭೂತಿ ಮತ್ತು ಪರಸ್ಪರ ಗೌರವ, ಮಾನವ ಕುಲವು ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದರೂ ಮನಸ್ಸಿನಲ್ಲಿ ಶಾಂತಿ ಇಲ್ಲದಿದ್ದರೆ ಅದು ಅರ್ಥಹೀನ. ಆದ್ದರಿಂದ ನಾವು ಮೊದಲಿಗೆ ನಮ್ಮೊಳಗಿನ ಯುದ್ಧಗಳನ್ನು ಗೆಲ್ಲಬೇಕು. ಆಗ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ.

ತ್ರಿವೇಣಿ ವಿ ಎಂ.ಎ. ಪ್ರಥಮ ವರ್ಷ ಎಸ್.ವಿ.ಪಿ ಕನ್ನಡ ವಿಭಾಗ

ಸಂಚಿಕೆ - ೧೪

“ಯುದ್ಧ ಅಲ್ಲಿ.... ಪರಿಣಾಮ ಇಲ್ಲಿ”

      ನನ್ನ ಹೆಸರು ಜಗದೀಶ್ ನನ್ನ ಗೆಳೆಯರಾದ ಮಹೇಶ್ ಮತ್ತು ಮರಿಸಿದ್ದಪ್ಪ, ನಾವು ಮೂವರು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು. ನಾವು ಬಳ್ಳಾರಿ ಕಡೆಯಿಂದ ಬಂದವರು. ಈಗ ಎಂ.ಎ. ಅಂತಿಮ ಹಂತದಲ್ಲಿ ಇದ್ದು ಹಾಸ್ಟೆಲ್‌ನಲ್ಲಿ ನೆಲೆಸಿದ್ದೇವೆ. ಹಾಸ್ಟೆಲ್‌ನಲ್ಲಿ ನಮ್ಮ ಕೊಠಡಿಗಳು ಬೇರೆ ಬೇರೆ ಇದ್ದರು ನಮ್ಮಲ್ಲಿ ಒಟ್ಟಾಗಿ ಮಾತುಕತೆಗಳು ನಡೆಯುವುದು ಸರ್ವೇಸಾಮಾನ್ಯವಾಗಿದೆ. ಇಂದು ಬೆಳಿಗ್ಗೆ ಊಟಕ್ಕೆ ಎಂದು ಮಹೇಶ್ ನನ್ನನ್ನು ಕರೆಯಲು ಬಂದಾಗ. ಈ ಪ್ರಸ್ತುತ ದಿನಮಾನಗಳಲ್ಲಿ ನಡೆಯುವ ಯುದ್ಧದ ಕುರಿತು ನಮ್ಮ ಸಂಭಾಷಣೆ ಈ ಮುಂದಿನಂತೆ ನಡೆಯಿತು.

ಮಹೇಶ್ : ಏನು ಅಣ್ಣ ಏನು ಮಾಡುತ್ತಿದ್ದೀಯ.

ಜಗದೀಶ್: ಏನು ಇಲ್ಲ ಇವತ್ತು ಭಾನುವಾರ ರಜೆ ಅಲ್ವಾ ಅದಕ್ಕೆ ಬಟ್ಟೆ ಒಗೆಯಲು ಸಿದ್ಧತೆ ಮಾಡುತ್ತಿದ್ದೀನಿ.

ಮಹೇಶ್ : ಸರಿ, ಅದು ಇರಲಿ ಟಿಫಿನ್ ಆಯಿತಾ.

ಜಗದೀಶ್: ಇಲ್ಲ ಹೋಗಬೇಕು ಕಣೋ.

ಮಹೇಶ್ : ಬಾ ಮತ್ತೆ ಹೋಗೋಣ. ನಾನು ಇನ್ನೂ ಮಾಡಿಲ್ಲ. (ಅವನು ನನ್ನನ್ನು ಕರೆಯಲು ತಟ್ಟೆ ಸಮೇತಾ ಬಂದಿದ್ದನು.)

ಜಗದೀಶ್: ಇವತ್ತು ಏನು ಸ್ಪೆಷಲ್. ಇವತ್ತು ಭಾನುವಾರ ಅಂದರೆ ದೋಸೆ ಇರಬಹುದು ಅಲ್ವಾ.

ಮಹೇಶ್ : ಅಲ್ಲಿ ಎಲ್ಲಿ ದೋಸೆ ಪಾ.....

ಜಗದೀಶ್: ಯಾಕೆ ಇವತ್ತು ದೋಸೆ ಮಾಡಿಲ್ವಾ?

ಮಹೇಶ್ : ಹೋಗಾ ನಿನ್ ಆಳೆ ನಾಡ, ಯಾವ್ ದೋಸೆ, ಯಾವ್ ಇಡ್ಲಿ, ಅವ್ನೌನ್ನ,

ಜಗದೀಶ್: ಯಾಕ್ಲಾ ಬೆಳೆ ಬೆಳಿಗ್ಗೆ ಮೆಣಸಿನಕಾಯಿ ತರ ಉರಿಯುತ್ತಿದ್ದೀಯ ಅಂಥದು ಏನಾಯಿತ್ಲಾ.

ಮಹೇಶ್ : ಗೊತ್ತಿಲ್ವೆನ್ಹಾ ನಿಂಗೆ ಅಲ್ಲಿ ಯಾವನ್ಯವನೋ ಬಡೆದಾಡಿಕೊಂಡು ಸಾಯಕತ್ತರಂತೆ. ಅದಕ್ಕೆ ಆ ಸೊಳೆಮಕ್ಕಳು ಸಾಯೋದ್ ಅಲ್ದೆ ಇಲ್ಲಿ ನಮ್ಮನ್ ಕುಡಾ ಸಾಯಿಸುತ್ತಿದ್ದಾರೆ.

ಜಗದೀಶ್: ಎದುಕ್ಲಾ ನಿಮ್ ಊರಾಗ ಅಂಥದು ಏನಾಯಿತು.

ಮಹೇಶ್ : ನಮ್ಮೂರಗಲ್ಲೋ ಮಾರಾಯ. ನಮ್ಮೂರಾಗ ಬರೆ ಕೊತ್ತುಂಬರಿ ಜಗಳಗಳು, ಅದೇನ್ ದೊಡ್ಡ ಸಮಸ್ಯೆ ಅಲ್ಲ. ನಮ್ಮೂರಾಗ ಯಾವನಾದ್ರು ಸಾಯಲಿ ನಮ್ಮೊರ್ದು ಇದ್ದಿದ್ದೆ.

ಜಗದೀಶ್: ಮತ್ತೆ ಎಲ್ಲಿ ಸಾಯಕತ್ತರ್ಲೆ ಬಿಡಿಸಿ ಹೇಳು ಲೇ.

ಮಹೇಶ್ : ಇಡೀ ಪ್ರಪಂಚಕ್ಕೆ ಗೊತ್ತಿದೆ ನಿಂಗೆ ಗೊತ್ತಿಲ್ಲ.

ಜಗದೀಶ್: ಹೋ ಆ ಯುದ್ಧನ ಅಲ್ಲಿ ಯಾವನನ್ನ ಬಡಿದುಕೊಂಡು ಸಾಯಲಿ ಅದಕ್ಕೂ ನಮಗೂ ಎಂತ ಸಂಬಂಧ ಲೇ.

ಮಹೇಶ್ : ಸಂಬಂಧ ಇದೆ ಲೇ ಸಂಬಂಧ ಇದೆ. ಅಲ್ಲಿಂದ ಕಣಪ್ಪ ಗ್ಯಾಸ್ ಸಿಲಿಂಡರ್ ಬರೋದು. ನಿಮ್ ಪಕ್ಕದ ಮನೆ ಆಂಟಿ ಮನೆಯಿಂದಲ್ಲ.

ಜಗದೀಶ್: ಯಾಕೆ ನಮ್ ಕಡೆಯಲ್ಲಿ ಸಿಗಲ್ವ, ಅಷ್ಟು ದೂರದಿಂದ ತರೋ ಅವಶ್ಯಕತೆ ಏನಿದೆ.

ಮಹೇಶ್ : ನಮ್ ಕಡೆ ಎಲ್ಲಿ ಸಿಗುತ್ತೆ ಲೇ, ಗ್ಯಾಸ್ ಏನು ಸಿದ್ದರಾಮಯ್ಯ ಗ್ಯಾರಂಟಿ ಕೊಡುತಿನಿ ಅಂತ ಹೇಳಿದ್ದಾನ.

ಜಗದೀಶ್: ಅಲ್ಲ ಲೇ ಐದು ಗ್ಯಾರಂಟಿಗಳನ್ನು ಕೊಟ್ಟನಾ ಒಂದು ಗ್ಯಾಸ್ ಕೊಡೋಕೆ ಆಗೋಲ್ವ

ಮಹೇಶ್: ಗ್ಯಾಸ್ ಕೊಡೋಲ್ಲ ಅಣ್ಣ. ಅವರು ಗ್ಯಾಸ್ ಕೊಡೋಲ್ಲ. ಬೇಕಿದ್ರೆ ತಿಂದು ಗ್ಯಾಸ್ ಬಿಡುತ್ತಾನೆ ನೋಡು ತುಂಬಿಕೊಂಡು ಹೋಗುತಿಯ ನೋಡು.

ಜಗದೀಶ್: (ನಗುತ್ತಾ) ಬೇಡ ಪಾ ಬೇಡಾ. ಅವನ ಗ್ಯಾಸ್ ಬೇಡ, ಅವನ ಗ್ಯಾರಂಟಿನು ಬೇಡಾ. ಇವಾಗ ನಿಂಗೆ ಏನು ಸಮಸ್ಯೆ

ಮಹೇಶ್ : ನನಗೆ ದೇಶದಲ್ಲಿ ನಡೆಯೋ ಯುದ್ಧಗಳೇ ದೊಡ್ಡ ಸಮಸ್ಯೆ ಆಗಿಬಿಟ್ಟಿದೆ.

ಜಗದೀಶ್: ಹೋ ಇದೊಂಥರಾ ಬಟ್ಟರ್ ಪ್ರೈ ಎಫೆಕ್ಸ್ ನಾ.

ಮಹೇಶ್ : ಹೂ ಅದೇ ರೀತಿ ನೋಡು ಅಲ್ಲಿ ಯುದ್ಧ ಮಾಡಿ ಸಾಯಕತ್ತಾರ. ಅದರ ಪ್ರಭಾವ ಇಲ್ಲಿ ನಮಗೆ ಆಗುತ್ತಿದೆ.

ಜಗದೀಶ್: ಇದಕ್ಕೆ ತಕ್ಕಂತೆ ನಮ್ ಕಡೆ ಒಂದು ಗಾದೆ ಮಾತು ಇದೆ ಹೇಳಾ.

ಮಹೇಶ್ : ಇಲ್ಲಿ ನಮಗೆ ಹೊಟ್ಟೆಗೆ ಹಿಟ್ಟು ಇಲ್ಲ ಅಂದ್ರೆ, ನಿಂದೊಂದು ಗಾಳಿಗೊಗೋ ಗಾದೆ ಮಾತು ಅಂತೆ. ಹೇಳಪ್ಪ ಅದು ಎಂಥದು.

ಜಗದೀಶ್: ಗಂಡ ಹೆಂಡತಿ ಜಗಳದಾಗ ಕೂಸು ಬಡವಾಯಿತು ಅಂತೆ ಹಾಗೆ ಆಯಿತು ನೋಡು ನಮ್ ಪರಿಸ್ಥಿತಿ.

ಮಹೇಶ್ : ಕೂಸು ಬಡವಾಯಿತೋ ಗೊತ್ತಿಲ್ಲ. ಆದರೆ ನಾನು ಅಂತು ಬಡಕಲು ಅದೇ ನೋಡು.

ಜಗದೀಶ್: ಮತ್ತೆ ಇವಾಗ ಅಡುಗೆ ಹೇಗೆ ಮಾಡುತ್ತಿದ್ದಾರೆ.

ಮಹೇಶ್‌ : ಇದೇ ಅಲ್ಲ ಪಾ ಹಳೆ ಕಾಲದ ಪದ್ಧತಿ ಸೌದೆ ಹೊಲೆಯಲ್ಲಿ ಮಾಡುತ್ತಿದ್ದಾರೆ.

ಜಗದೀಶ್: ಹಳೆ ಕಾಲದ ಪದ್ದತಿ ಮತ್ತೆ ಬಂತ ಹಾಗಿದ್ರೆ, ಊಟ ರುಚಿ ಇರಬೇಕು ಅಲ್ವಾ, ಸೌದೆ ಅಡುಗೆಯಲ್ಲಿ ಮಡಿದ್ದು ಬಲು ರುಚಿನೆ ತಾನೆ.

ಮಹೇಶ್ : ರುಚಿ ಅಂತಾರೆ ಅಷ್ಟೇ ಅದು ಆಗಿನ ಕಾಲಕ್ಕೆ ಮಾತ್ರ. ಈ ಹಾಸ್ಟೆಲ್ ಊಟದಲ್ಲಿ ಅಲ್ಲ.

ಜಗದೀಶ್: ಆಗಿದ್ರೆ ಇವಗ ಹಾಸ್ಟೆಲ್‌ನಲ್ಲಿ ಏನೇನು ಅಡುಗೆ ಮಾಡುತ್ತಿದ್ದಾರೆ.

ಮಹೇಶ್ : ಅನ್ನ, ಸಾಂಬಾರ್ ಬಿಟ್ಟು ಏನು ಇಲ್ಲ. ನೀನು ಆಸೆ ಪಟ್ಟಂತೆ ಇಡ್ಲಿ, ದೋಸೆ, ಚಪಾತಿ ಇವೆಲ್ಲ ತೆಗೆದು ಬಿಟ್ಟರೆ ನೋಡು.

ಜಗದೀಶ್: ಅಯ್ಯೋ! ಊರಲ್ಲಿ ರುಚಿ ರುಚಿ ಊಟ ಮಾಡಿ ಬಂದವರು ಇಲ್ಲಿ ಸಪ್ಪೆ ತಿಂದು ಸಾಕಾಗಿತ್ತು. ಏನೋ ಪ್ರತಿ ದಿನ ಬೆಳಿಗ್ಗೆ ವಿಭಿನ್ನ ವಿಭಿನ್ನ ಉಪಾಹಾರ ಸಿಗುತ್ತದೆ ಎಂದು ಕುಷಿ ಪಡುತ್ತಿದ್ದೆ. ಇವಾಗ ಅದಕ್ಕೂ ಕಡಿವಾಣ ಹಾಕಿದ್ದಾರೆ ನಾ. ಈ ಸಮಯದಲ್ಲಿ ಮರಿಸಿದ್ದ ಊರಿಗೆ ಹೋಗಿದ್ದೆ ಒಳ್ಳೆಯದಾಯಿತು ಬಿಡು. ಇಷ್ಟೇನಾ ಇನ್ನೇನಾದರೂ ತೆಗೆದಿದ್ದಾರಾ.

ಮಹೇಶ್ : ಅಷ್ಟೇ ಅಲ್ಲ ಪಾ! ವಡೆ, ಮಿರ್ಚಿ, ಹಪ್ಪಳ, ಸೊಂಡಿಗೆಯಂತಹ ಎಣ್ಣೆಯಲ್ಲಿ ಕರೆದು ಮಾಡೋದೆಲ್ಲಾ ತೆಗೆದುಬಿಟ್ಟಿದ್ದಾರೆ.

ಜಗದೀಶ್: ಒಳ್ಳೆಯದೇ ಆಯಿತು ಬೀಡು. ಈ ಹಾಳು ಎಣ್ಣೆ ಊಟ ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು. ಇರೋದ್ರಲ್ಲಿ ಹಾಲು, ಮೊಸರು, ಅನ್ನ ಊಟ ಮಾಡಿ ನೆಮ್ಮದಿಯಾಗಿ ಇರೋಣ.

ಮಹೇಶ್ : ಎಷ್ಟು ದಿನ ಅಂತ ತಿನ್ನಬೇಕು ಲೇ. ಇಂತ ಊಟ ನಾ.

ಜಗದೀಶ್ : ಆಗಾದ್ರೆ ಸಿಲಿಂಡರ್ ಬರುವವರೆಗೂ ನಮಗೆ ಇದೇ ಗತಿ ನಾ. ಅಲ್ಲಲೇ ನಮ್ ಊರ್ ಕಡೆ ಕಟ್ಟಿಗೆ ಸಿಗುತ್ತೆ ಅದರಲ್ಲೇ ಅಡುಗೆ ಮಾಡಿಕೊಂಡು ಬದುಕುತ್ತಾರೆ. ಈ ನಗರ ಪ್ರದೇಶದಲ್ಲಿ ಹೇಗೆ ಆಡುಗೆ ಮಾಡುತ್ತಾರೆ.

ಮಹೇಶ್ : ಇದೆ ಅಲ್ಲ ಕರೆಂಟ್‌ನಲ್ಲಿ ಅಡುಗೆ ಮಾಡೋ ಮಿಷನ್ ಅದರಲ್ಲಿ ಮಾಡಿಕೊಳ್ಳುತ್ತಾರೆ.

ಜಗದೀಶ್: ಅದಕ್ಕೂ ಕರೆಂಟ್ ಬಿಲ್ ಅಂತ ಇದೆ ಅಲ್ವಾ. ಅದೂ ಇರಲಿ ಸಿಲಿಂಡರ್ ಇಲ್ಲದೆ ಏನೇನು ಸಮಸ್ಯೆ ಆಗಿದೆ.

ಮಹೇಶ್ : ಅಣ್ಣ... ಒಂದೊಂದು ಅಲ್ಲಣ್ಣಾ. ಈ ನನ್ ಮಕ್ಕಳು ಮಾಡೋ ಅಲ್ಕಾ ಕೆಲಸಕ್ಕೆ ನಮ್ ಬುಡಕ್ಕೆ ಬಂತು. ಎಷ್ಟೋ ಜನರ ಊಟಕ್ಕೆ ಗ್ಯಾಸ್ ಇಲ್ಲದೆ ಪರದಾಡುತ್ತಿದ್ದಾರೆ. ಈಗಾಗಲೇ ಸಾರ್ವಜನಿಕ ಹೋಟೆಲ್‌ಗಳು ಮುಚ್ಚೊಗಿವೆ. ಹಾಸ್ಟೆಲ್ ಊಟ ಸೀಮಿತಗೊಂಡಿದೆ. ಬೀದಿ ಬದಿಯಲ್ಲಿ ವ್ಯಾಪಾರ ಮಾಡುವಂಥ (ಹುಡುಗಿಯರಿಗೆ ಪ್ರಿಯವಾದ) ಗೋಲ್ಗೊಪ್ಪ, ಗೋಬಿ ಮಂಚೂರಿ, ಎಗ್ ರೈಸ್ ಅಂಗಡಿಯಲ್ಲ ಮುಚ್ಚೊಗಿವೆ. ಅದರಿಂದ ಬೀದಿಗೆ ಬರೋ ಹುಡುಗಿಯರು ಕೂಡ ಕಾಣಿಸ್ತಿಲ್ಲ. ನಮ್ ಹುಡುಗಿ ಮೀಟ್ ಮಾಡಿ ಎಷ್ಟೋ ದಿನಗಳು ಆಯಿತು. ಈ ನನ್ ಮಕ್ಳು ಬಡ್ಡಾಡಿಕೊಂಡು ಸಾಯೋದ್ರಿಂದ.

ಜಗದೀಶ್: ಅಲ್ಲೋ ಇವಗಾ ನಿನ್ನ ಕಾಳಜಿ ಎಗ್ ರೈಸ್ ಅಂಗಡಿಯವರ ಮೇಲೋ, ಇಲ್ಲ ಹಾಸ್ಟೆಲ್ ಹುಡುಗಿಯರ ಮೇಲೋ.

ಮಹೇಶ್ : ಅಲ್ಲೋ ಅಣ್ಣಾ ಬೀದಿ ಅಂಗಡಿಯವರು ಬದುಕಬೇಕು ಅಂತ ಕಣೋ ನನ್ ಕಾಳಜಿ, ಅದಕ್ಕಾಗಿ ದಿನ ನಮ್ ಹುಡುಗಿ ಕೂಡ ವ್ಯಾಪಾರ ಮಾಡಿಸುತಿದ್ದೆ. ಅವರು ಬದುಕಬೇಕು ನಾವು ಬದುಕಬೇಕು.

ಜಗದೀಶ್: ಗೊತ್ತು ಬಿಡೋ ನಿಂದು ಅನೂಪ್‌ದು ರೆಗ್ಯುಲರ್ ಡ್ಯೂಟಿ ಜಿ.ಟಿ. ಹತ್ತಿರ ಅಂತ.

ಮಹೇಶ್ : ಅವಗ ಇತ್ತು ಡ್ಯೂಟಿ ಬ್ಯೂಟಿ ಇವಾಗ ಅದಕ್ಕೂ ಬಿತ್ತಲ್ಲಪ್ಪ ಚಾಟಿ.

ಜಗದೀಶ್: ಆಗದೇ ಇನ್ಮುಂದೆ ಎಂಗ್ಲಾ ನಿಮ್ ಬ್ಯೂಟಿ ಜೊತೆ ಡ್ಯೂಟಿ.?

ಮಹೇಶ್ : ನಮ್ ಪಾಟ್ನಾರ್ ಅನೂಪ್ ಪರಾರಿಯಾದ. ಇನ್ನೂ ನಮ್ ಅಧ್ಯಕ್ಷ(ಶ್ರೇಯಸ್)ರಂತೂ "ಪುಷ್ಪಾ ಜೀವನದಲ್ಲಿ ಮುಂದೆ ಬಾ, ಸಂಪಾದನೆ ಮಾಡು. ಇಂತ ಹುಡುಗಿಯರು ನಿನ್ ಹಿಂದೆ ಕ್ಯೂ ಕ್ಯೂ ನಿಂತುಕೊಳ್ಳುತ್ತಾರೆ" ಅಂತ ಹೇಳಿ ಹೇಳಿ ಸಯಾಕತ್ತಾನೆ. ಈಗಂತೂ ನಮ್ಮಾ ಮುಸಿಕೂಡ ನೋಡ್ತಾಯಿಲ್ಲ. ನಾನೊಬ್ನೆ ಇಲ್ಲಿ ಪರದೇಶಿಯಾಗಿದ್ದೇನೆ. ಯುದ್ಧ ನಿಂತೇನೆ ಅಣ್ಣಾ ನಮ್ ಬ್ಯೂಟಿ ಜೊತೆ ಡ್ಯುಟಿ ಸ್ಟಾರ್ಟ್ ಆಗೋದು.

ಜಗದೀಶ್: ಅಲ್ಲ ಈ ಯುದ್ಧ ಎಲ್ಲಾ ಯಾಕೆ ಬೇಕು ಇವರಿಗೆ. ಜಗಳ ಮಾಡೋದ್ರಿಂದ ಪಡೆದುಕೊಳ್ಳುವುದಕಿಂತ ಕಳೆದುಕೊಳ್ಳುವುದೇ ಹೆಚ್ಚು. ಇಂತ ಯುದ್ಧ ಯಾಕೇ ಬೇಕು. ಇತಿಹಾಸ ಗೊತ್ತಿಲ್ವ ಆ ಅಶೋಕ ಚಕ್ರವರ್ತಿನೆ ಕಳಿಂಗ ಯುದ್ಧದ ಪರಿಣಾಮದಿಂದ ಧರ್ಮ ಮಾರ್ಗವಿಡಿದು ತನ್ನ ಶ್ರೇಷ್ಠತೆ ಹೆಚ್ಚಿಸಿಕೊಂಡ.

ಮಹೇಶ್ : ಇತಿಹಾಸನು ಗೊತ್ತು ಇಡ್ಲಿ ದೋಸೆನು ಗೊತ್ತು. ನಿನ್ನದು ಭಾರತೀಯ ಸಂಸ್ಕೃತಿ ಅದಕ್ಕೆ ನೀನು ಅಶೋಕ ಯುದ್ಧ ಬಿಟ್ಟು ಬುದ್ಧನಾದ ಅಂತ ಹೇಳುತ್ತೀಯ. ಆದರೆ ಅವರ ದೇಶ ಸಂಸ್ಕೃತಿನೇ ಬೇರೆ ಅದಕ್ಕೆ ಅವರು ಹಿಟ್ಲರ್. ಮೋಸೋಲಿನಿ, ಅಲೆಕ್ಸಾಂಡರ್, ನೆಪೋಲಿಯನ್, ಘಜ್ಜಿಯಂತವರ ಆಲೋಚನೆಗಳನ್ನೇ ಪಾಲಿಸುತ್ತಿರೋದ್ರಿಂದಲೇ ಈ ರಾಷ್ಟ್ರ ರಾಷ್ಟ್ರಗಳ ಮಧ್ಯೆ ಯುದ್ಧ ನಡೆಯುತ್ತಿರೋದು.

ಜಗದೀಶ್: ಹೂ ಹೌದು ಇವೆಲ್ಲ ಯೋಚನೆ ಮಾಡೋ ವಿಚಾರಗಳೇ, ಒಬ್ಬ ವ್ಯಕ್ತಿಯ ಆಲೋಚನೆಗಳು ಚೆನ್ನಾಗಿ ಇದ್ರೆ ಒಂದು ರಾಷ್ಟ್ರವೇ ಚೆನ್ನಾಗಿ ಇರುತ್ತೆ ಅದಕ್ಕೆ ನಮ್ ದೊಡ್ಡವರು ಹೇಳಿಲ್ವ "ನಾಲಿಗೆ ಚೆನ್ನಾಗಿ ಇದ್ದರೆ ನಾಡು ಚೆಂದ” ಅಂತ. ಮೊದಲು ನಾವು ಚೆನ್ನಾಗಿ ಇರಬೇಕು ಅಮೇಲೆ ನಮ್ಮವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಯುದ್ಧ ಮಾಡಿದವರೆಲ್ಲ ಮಣ್ಣಲ್ಲಿ ಮಣ್ಣಾಗಿ ಹೋದರು ಇವರಿಗೆ ಇನ್ನೂ ಬುದ್ದಿ ಬಂದಿಲ್ಲ. ಅಕ್ಷರಸ್ಥರೆ ಅನಕ್ಷರಸ್ಥರಂತೆ ವರ್ತಿಸುತ್ತಿದ್ದಾರೆ. ಅನಕ್ಷರಸ್ಥರೇ ಬುದ್ಧಿ ಜೀವಿಗಳಗಿದ್ದಾರೆ.

ಮಹೇಶ್‌ : ಅಕ್ಷರಸ್ಥರೆ ಆಯುಧ ಹಿಡಿದರೆ. ಇನ್ನೂ ಅನಕ್ಷರಸ್ಥರ ಗತಿ ಏನಣ್ಣ. ಇನ್ನೂ ಏನೇನೋ ನೋಡೋಕು ಈ ಕಣ್ಣಿಂದ. ನನಗಂತು ಇವಾಗಿವಾಗ ಸರಿಯಾಗಿ ನಿದ್ದೆನೆ ಬರ್ತಿಲ್ಲ ಭಯದ ವಾತಾವರಣದಲ್ಲಿ ಬದುಕುತ್ತಿದ್ದೇನೆ. ತಲೆ ಮೇಲೆ ವಿಮಾನ ಹಾರಿದರು ಭಯ ಆಗುತ್ತೆ. ಪಕ್ಕದಲ್ಲಿ ಪಟಾಕಿ ಬಿಟ್ಟರು ನಡುಕ ಉಂಟಾಗುತ್ತೆ. ಆದ್ರೂ ಜಟ್ಟಿ ಜಾರಿ ಬಿದ್ದರು ಮೀಸೆ ಮಣ್ಣಾಗಿಲ್ಲ ಅನ್ನೋ ರೀತಿಲೀ ಬದುಕುತ್ತಿದ್ದೀನಿ. ನಮ್ ನೋವು ನೂರೆಂಟು ಸ್ವಾಮಿ ಯಾರಿಗೆಳೋದು. ಊಟಕ್ಕೆ ಅಂತ ಬಂದು ದೊಡ್ಡ ಪುರಾಣ ಬಿಟ್ಟೆ,

ಜಗದೀಶ್ : ಅಯ್ಯೋ ನಿಜ ಕಣ್ಲಾ ಇದು ಮುಗಿಯದ ಕತೆ. ನಂಗೂ ಹೊಟ್ಟೆ ಹಸಿತಿದೆ ನಡಿಲಾ ಸ್ವಲ್ಪದ್ರು ತಿಂಡ್ಕೊಂಡು ಬರೋಣ.


ಜಗದೀಶ್ ಮತ್ತು ಮಹೇಶ್, ಎಂ.ಎ. ದ್ವೀತಿಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೪

ಬ್ರಹ್ಮಗಲ್ಲು

      ತ್ರಿಮೂರ್ತಿಗಳಲ್ಲಿ ಒಬ್ಬರಾದ ಬ್ರಹ್ಮ ದೇವರಿಗೆ ಎಲ್ಲೂ ಕೂಡ ಪೂಜೆ ಇಲ್ಲ ಎನ್ನುವುದನ್ನು ನಾವು ಸಾಕಷ್ಟು ಕಡೆಗಳಲ್ಲಿ ಕೇಳಿರುತ್ತೇವೆ. ಆದರೆ ಬ್ರಹ್ಮನೆ ಊರಲ್ಲಿ ಮೊದಲು ಪೂಜೆಗೊಳ್ಳುವ ಪರಿ ನಮ್ಮ ಸೀಮೆಯಲ್ಲಿದೆ. ಹೌದು ಹಲವಾರು ಕಡೆಗಳಲ್ಲಿ ಹಲವಾರು ಹೆಸರು ಮತ್ತು ಹಲವು ರೂಪಗಳಲ್ಲಿ ಬ್ರಹ್ಮ ದೇವ ಪೂಜೆಗೊಳ್ಳುತ್ತಾನೆ. ಯಾವುದೇ ಒಂದು ಊರು ತನ್ನ ಅಸ್ತಿತ್ವವನ್ನು ಪಡೆಯುವುದು ಅವನಿಂದಲೇ.

      ನಮ್ಮ ಸೀಮೆಯಲ್ಲಿ ಪ್ರತೀ ಊರುಗಳಲ್ಲಿ ಪೂಜಿಸಲ್ಪಡುವ ಬ್ರಹ್ಮನಿಗೆ ಬುಡ್ಡೆಕಲ್ಲು, ಬ್ರಹ್ಮಗಲ್ಲು. ಆಗಸೆಗಲ್ಲು. ಮುಂತಾದ ಹೆಸರುಗಳಿಂದ ಕರೆಯುವರು. ಒಂದು ಊರಿನ ಉಗಮದೊಂದಿಗೆ ಪ್ರತಿಷ್ಠಾಪಿಸಲ್ಪಡುವ ಈ ಬ್ರಹ್ಮಗಲ್ಲು ಊರಿನ ಮುಖ್ಯ ಬಾಗಿಲಾದ ಅಗಸೆ ಕಟ್ಟೆಯತ್ತಿರ ಇರುತ್ತದೆ ಇದು ಊರಿನ ಕಾಲವನ್ನು ತಿಳಿಸುವ ಒಂದು ಆಧಾರವೂ ಆಗಿದೆ. "ಊರೆಲ್ಲ ತಿರುಗಿ ಊರ್ ಬುಡ್ಡೆಕಲ್ಲು ನೋಡಿಲ್ಲಂದ್ರಂತ" ಎನ್ನುವ ಮಾತಿದೆ ಅಂದ್ರೆ ಬ್ರಹ್ಮಗಲ್ಲು ನೋಡದೆ ಇಡಿ ಊರು ತಿರುಗಿ ನೋಡಿದರೂ ಕೂಡ ಅದು ವ್ಯರ್ಥ ಎಂದರ್ಥ. ಯಾವುದೇ ಊರು ನೋಡುವ ಮೊದಲು ಆ ಊರಿನ ಬ್ರಹ್ಮಗಲ್ಲನ್ನು ಮೊದಲು ನೋಡಬೇಕೆಂಬ ವಾಡಿಕೆ ಇದೆ.

      ಬ್ರಹ್ಮಗಲ್ಲು ಪ್ರತಿಷ್ಠಾಪಿಸಲು ಕಾರಣ ಸೃಷ್ಟಿಕರ್ತನಾದ ಬ್ರಹ್ಮನು ಊರನ್ನು ರೋಗಗಳಿಂದ ಮುಕ್ತ ಮಾಡುವನು. ಊರಿಗೆ ಶಾಂತಿ ನೆಮ್ಮದಿಯನ್ನು ನೀಡುತ್ತಾ ಊರಿನ ಬೆಳೆಗಳನ್ನು ರಕ್ಷಿಸುವನು ಎಂಬ ನಂಬಿಕೆಗಳಿವೆ. ಹಾಗೆಯೆ ಊರಿನ ಹೆಣ್ಣು ಮಕ್ಕಳು ಉಡಿಯಕ್ಕಿಯ ಒಂದು ಹಿಡಿ ಬ್ರಹ್ಮ ಗಲ್ಲಿಗೆ ಹಾಕುವ ಪದ್ಧತಿ ಇದೆ, ಮುಂದುವರಿದು ಬ್ರಹ್ಮ ಗಲ್ಲಿಗೆ ದೀಪದೆಣ್ಣೆಯನ್ನು ಹಾಕುವ ಪದ್ದತಿ ಇದೆ. ಇದು ಬ್ರಹ್ಮನನ್ನು ಶಾಂತಿಯಿಂದಿರಿಸಿ ಅವನೂ ಊರನ್ನು ಶಾಂತಿಯಿಂದಿರಿಸುವನು ಮತ್ತು ತನ್ನ ತಲೆ ತಂಪಾಗಿದ್ದರೆ ಊರು ತಂಪಾಗಿರುವುದು, ಮತ್ತು ಬಿಸಿಲಿನ ಬೇಗೆಯಿಂದ ಕಾಯುವನೆಂಬ ನಂಬಿಕೆ ಇದೆ. ಒಟ್ಟಾರೆಯಾಗಿ ಈ ಬ್ರಹ್ಮಗಲ್ಲು (ಬುಡ್ಡೆಕಲ್ಲು) ಇಲ್ಲದ ಊರು ಊರೆ ಅಲ್ಲ ಅದು ಅಪೂರ್ಣವಾದ ಊರು. ಯಾವುದೆ ಒಂದು ಊರು ಅಸ್ತಿತ್ವವನ್ನು ಪಡೆದು ಪರಿಪೂರ್ಣ ಊರಾಗಲು ಬ್ರಹ್ಮಗಲ್ಲು ಬಹು ಮುಖ್ಯ ಮತ್ತು ಇತರೆ ದೇವತೆಗಳಂತೆ ಇವನಿಗೆ ಗುಡಿ ಗೋಪುರಗಳಿಲ್ಲ ಇಡೀ ಊರು ಜನರು ಓಡಾಡುವ ಮುಖ್ಯರಸ್ತೆಯ ನಡುವೆ ಇರುತ್ತಾನೆ ಸಣ್ಣ ಒಂದು ಕಟ್ಟೆಯೂ ಕೂಡ ಇವನಿಗೆ ಇರುವುದಿಲ್ಲ ಮುಖ್ಯವಾದ ನಡು ರಸ್ತೆಯೆ ಇವನ ಆಲಯವಾಗಿರುತ್ತದೆ ಒಟ್ಟಿನಲ್ಲಿ ಈ ಬ್ರಹ್ಮಗಲ್ಲಿಂದಲೇ ಊರಿನ ಪರಿಪೂರ್ಣತೆ ಸಾಧ್ಯವೆಂಬ ಗಾಢವಾದ ನಂಬಿಕೆಗಳುಂಟು.

ಮರಿಸಿದ್ದಪ್ಪ, ಎಂ.ಎ. ದ್ವೀತಿಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೪

ನನ್ನ ಹೆಮ್ಮೆ

ನದಿಗಳೆಲ್ಲವೂ ಸೇರುವ ಊರು 

ಭೂತಾರಾಧನೆಯ ತವರೂರು 

ಒಂದು ರೀತಿಯ ಇಂದ್ರನ ಊರು 

ನೀ ಒಮ್ಮೆ ಬಂದು ಇಲ್ಲಿ ಬೇರೂರು


ಕಡಲಲೆಗಳ ಕಂಡು ಮೈ, ನಿಮಿರುವುದು 

ಸುಡು ಬಿಸಿಲ ತಾಪಕ್ಕೆ ಬೆವರರೆಯುವುದು 

ವಿವಿಧ ಭಾಷೆಯ ಇಲ್ಲಿ ಕಲಿಯಲೂಬಹುದು 

ವಿವಿಧ ರುಚಿ ರುಚಿ ಖಾದ್ಯ ಸವಿಯಲುಬಹುದು


ಯಕ್ಷಗಾನಗಳ ಕಲೆ ನೋಡು 

ಹಲವು ಸಂಸ್ಕೃತಿಯ ನೆಲೆಬೀಡು 

ಸಿರಿ ಪಾಡ್ಡನಗಳೇ ಇಲ್ಲಿ ಮೂಲ ಹಾಡು 

ಇದು ನನ್ನ ಹೆಮ್ಮೆಯ ತುಳುನಾಡು


ದುಶ್ಯಂತ್, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೪

ಅವನಿ


ನೀಲಿ ಬಾನ ನೀಲ ಕೇದರ 

ಹಚ್ಚ ಹಸಿರ ಹರಿವ ಧಾರೆ 

ಬೆಂದು ನೊಂದ ಧರೆಯ ತಾರೆ


ಆಳ ತೀರ ಮನದ ತೊರೆ 

ಇಳಿದ ಘಳಿಗೆ ಕಾಣ ತೀರ 

ಬಣ್ಣ ಬಣ್ಣ ಮುಸುಕು ಮೋಡ


ಸುರಿವ ಮೇಘ ಆನಂದ ಧಾರೆ 

ಜಗದ ತುಂಬ ಸುರಿದು ಹರಿದು 

ರೈತ ಜನಕೆ ಅಮೃತ ಧಾರೆ


ಭೂಮಿ ತಾಯ ಒಡಲ ತುಂಬಿ 

ಪಚ್ಚೆ ಪಚ್ಚೆ ಧರೆಯ ಹಬ್ಬಿ 

ಸುಗ್ಗಿ ರಾಶಿ ಜಗವ ತುಂಬಾ


ಪೂಜಾ, ಎಂ.ಎ. ದ್ವೀತಿಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೪

ಚಿತ್ರಗಳು 

ಚಿತ್ರ ರಚನೆ : ದಿವ್ಯಶ್ರೀ ಎ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ



ಸೋಮವಾರ, ಮಾರ್ಚ್ 23, 2026

ಸಂಚಿಕೆ - ೧೩

 ಸಂಪಾದಕೀಯ


ಹೊಸ ವರುಷದ ಆರಂಭದ ಹಬ್ಬ ಯುಗಾದಿ 

      ಯುಗಾದಿ ಹಬ್ಬ ಎಂದರೆ ಯಾರಿಗೇ ತಾನೇ ಇಷ್ಟವಿರುವುದಿಲ್ಲ? ಅದರಲ್ಲೂ ಬೇರೆ ಹೊಸ ವರುಷದ ಆರಂಭದ ಹಬ್ಬವೇ ಯುಗಾದಿ ಆಗಿದೆ. ಈ ಹಬ್ಬದಲ್ಲಿ ಮುಖ್ಯವಾಗಿ ಕಂಡುಬರುವ ವಿಶೇಷವೇ ಬೇವು ಮತ್ತೆ ಬೆಲ್ಲ. ಹಾಗಿದ್ದರೆ ಏನಿದು? ಬೇವು ಬೆಲ್ಲ, ಬೇವು ಎಂದರೆ ಕಹಿ ಬೆಲ್ಲ ಎಂದರೆ ಸಿಹಿ. ಬೆಲ್ಲ ತಿನ್ನುವುದರಿಂದ ಬೇವಿನ ಕಹಿ ಸ್ವಾದವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಬೆವನ್ನು ತಿನ್ನುವುದರಿಂದ ಬೆಲ್ಲದ ಸತ್ವದ ಪ್ರಾಮುಖ್ಯತೆಯನ್ನ ಹೆಚ್ಚಿಸುತ್ತದೆ. ಇದರ ಅರ್ಥ ಜೀವನದಲ್ಲೂ ಅಳವಡಿಕೆ ಆಗುತ್ತದೆ. ಹಾಗೆಯೇ ಜೀವನದಲ್ಲೂ ಸುಖ -ದುಃಖ ಇವೆರಡು ಕೂಡ ಸಮಾನ ಪಾತ್ರದಾರಿಗಳು ಒಂದನ್ನ ಬಿಟ್ಟು ಇನ್ನೊಂದು ಇರುವುದಿಲ್ಲ. ಈ ಎರಡು ಅಂಶ ಜೀವನದಲ್ಲಿ ಇದ್ದರೆ ಮಾತ್ರ ಸರಿಯಾದ ದಾರಿ ತಲುಪಲು ಸಾಧ್ಯವಾಗುವುದು. 'ಯುಗಾದಿ' ಯುಗ ಎಂದರೆ ಹೊಸದು, ಆದಿ ಎಂದರೆ ಪ್ರಾರಂಭ. ಯುಗಾದಿ ಎಂದರೆ ನಮ್ಮ ಜೀವನದಲ್ಲಿ ಹೊಸ ರೀತಿಯ ಬದಲಾವಣಿಗಳು ಆರಂಭವಾಗುವ ದಿನ. ಬ್ರಹ್ಮ ಯುಗಾದಿ ದಿನದಂದು ಹೊಸ ಭವಿಷ್ಯವನ್ನು ಬರೆಯುತ್ತಾನೆ ಎನ್ನುವ ಪ್ರತಿತಿ ಇದೆ. ಅಷ್ಟೇ ಅಲ್ಲದೆ ನಮ್ಮ ಜೀವನದಲ್ಲಿ ಹೊಸ ಆಲೋಚನೆ, ವಿಚಾರಧಾರೆ ಮೊಳಕೆಯೊಡೆಯಲು ಪ್ರಾರಂಭವಾಗುತ್ತದೆ.

      ಯುಗಾದಿ ಎಂದರೆ ಸಾಕು ಖುಷಿಯೋ ಖುಷಿ. ಹಬ್ಬದ ದಿನದಂದು ಹೊಸ ವಸ್ತ್ರಭಾರಣ ಧರಿಸಿ ಅಲಂಕರಿಸಿಕೊಂಡು ಸುಂದರಮಯವಾಗಿ ಕಾಣಿಸುವುದು ಹೆಣ್ಣುಮಕ್ಕಳಿಗೆ ಖುಷಿ. ಇನ್ನೂ ದೇವರ ದರ್ಶನವನ್ನು ಮಾಡಿ ಮನೆಯಲ್ಲಿ ವಿಶೇಷ ರೀತಿಯ ತಿಂಡಿ ತಿನಿಸುಗಳನ್ನು ಮಾಡುವುದು ಇನ್ನೊಂದು ರೀತಿಯ ಖುಷಿ, ಒಬ್ಬಟ್ಟು, ಪಾಯಸ, ಕರ್ಜಿಕಾಯಿ ಇನ್ನೂ ನಾನಾ ರೀತಿಯ ಖಾದ್ಯಗಳನ್ನು ಮಾಡುವುದಾಗಿದೆ. ಬೇವು - ಬೆಲ್ಲ ಇವೆರಡನ್ನು ಸಮ ಪ್ರಮಾಣದಲ್ಲಿ ಬೆರೆಸಿ ಮನೆಯಲ್ಲಿ ಹಂಚಿ ಹಾಗೆ ಅಕ್ಕ ಪಕ್ಕದ ಮನೆಗಳಿಗೆ ಹೋಗಿ ಬೇವು - ಬೆಲ್ಲವನ್ನು ನೀಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದಾಗಿದೆ.

      ಈ ಹಬ್ಬವನ್ನು ಕೇವಲ ಮನುಷ್ಯ ಜೀವನಕ್ಕೆ ಅಷ್ಟೇ ಸಂಬಂಧಪಡುವುದಿಲ್ಲ ಜೊತೆಗೆ ಪ್ರಕೃತಿಯಲ್ಲೂ ಸಹ ಬದಲಾವಣೆಗಳು ಆಗುತ್ತಾವೆ. ವಸಂತ ಮಾಸದ ಆರಂಭಿಕ ಕ್ಷಣದಲ್ಲಿ ಪ್ರಕೃತಿಯಲ್ಲಿ ಗಿಡಗಳು ಹೊಸ ಚಿಗುರೊಡೆದು ಫಲ ನೀಡುವ ಸಮಯ ಇದಾಗಿದೆ. ಅಷ್ಟೇ ಅಲ್ಲದೆ ಮಳೆಯ ಆರಂಭಿಕ ಹಂತ ಕೂಡ ಆಗಿದೆ. ಪ್ರಕೃತಿಯಲ್ಲಿನ ವಿಸ್ಮಯ ಬದಲಾವಣೆಗೆ ಕಾರಣವಾಗುವ ಮೊದಲ ಹಬ್ಬ ಇದಾಗಿದೆ. ಜೊತೆಗೆ ಹಿಂದೂ ಪಂಚಾಂಗದ ವರ್ಷದ ಮೊದಲ ಹಬ್ಬ ಇದಾಗಿದೆ.

      ಇಂದಿನ ಆಧುನಿಕ ಯುಗದಲ್ಲಿ ಹಬ್ಬದ ನೈತಿಕ ಮೌಲ್ಯಗಳನ್ನು ತಿಳಿಯುವುದು ಬಿಟ್ಟು ಹಬ್ಬವನ್ನು ಪ್ರದರ್ಶನವಾಗಿ ಮಾಡುವುದಕ್ಕೋಸ್ಕರ ಆಚರಿಸುವಂತಾಗಿದೆ. ಯಾವುದೇ ಹಬ್ಬವನ್ನೇ ಆದರೂ ಅದರ ಆಚರಣೆಗೆ ಅನುಸರಿಸಿ ಆಚರಿಸುವುದು ಒಳಿತು. ಅದನ್ನು ಬಿಟ್ಟು ಅತಿರೇಖ ಖರ್ಚು, ಪ್ರದರ್ಶನಕ್ಕೋಸ್ಕರ ಹಬ್ಬವನ್ನು ಆಚರಿಸಿದರೆ. ಇಂದಿನ ಹಬ್ಬವು ತನ್ನ ಮೌಲ್ಯಗಳನ್ನು ಕಳೆದುಕೊಳ್ಳುವುದರ ಜೊತೆಗೆ ಇಂದಿನ ಪೀಳಿಗೆಗೆ ಹಬ್ಬವನ್ನು ಆಚರಿಸುವ ಉದ್ದೇಶ ಅದರಲ್ಲಿನ ಮೌಲ್ಯ ಏನು ಎಂದು ಅರಿಯುವುದು ಕಾಲಕ್ರಮೇಣ ಕುಂಟಿತಗೊಳ್ಳುತ್ತಾ ಬಂದಿದೆ. ಒಟ್ಟಾರೆಯಾಗಿ ಯುಗಾದಿಯು ಎಲ್ಲರ ಜೀವನದಲ್ಲೂ ಸುಖ ಸಂತೋಷ ತುಂಬಿ ಜೀವನವು ಸುಖಮಯವಾಗಿ ಸಾಗಲಿ.

ಸಂಪಾದಕಿ, ಬಿತ್ತಿ ಸಂಪಾದಕ ಮಂಡಳಿ

ಸಂಚಿಕೆ - ೧೩

ಕಲ್ಲು ಬಂಗಾರ ಕೊಡುತ್ತಿತ್ತು!

      ಮಂಗಳೂರಿನಿಂದ ಕಾಲೇಜು ಮುಗಿಸಿ ಸಂಜೆ ವೇಳೆಗೆ ೬೦ ಕಿ.ಮೀ ದೂರದಲ್ಲಿರುವ ಮನೆಗೆ ಹೋಗುವುದೆಂದರೆ ಅದೊಂದು ಹರಸಾಹಸವೇ ಸರಿ. ಆ ಸರ್ಕಾರಿ ಬಸ್ಸುಗಳೋ! ಚೆನ್ನಾಗಿಯೇನೋ ಇವೆ. ಆದರೆ ಎಲ್ಲರೂ ತಮ್ಮ ಗೂಡು ಸೇರುವ ಧಾವಂತದಲ್ಲಿರುವಾಗ ಆ ಬಸ್ಸುಗಳಲ್ಲಿ ಮೆಟ್ಟಿಲ ಮೇಲೆ ನಿಂತು ನೇತಾಡುವುದಕ್ಕಾದ್ರು ಜಾಗ ಸಿಕ್ಕಿದ್ರೆ ಯಾವುದೋ ಜನ್ಮದ ಪುಣ್ಯ ಎಂದೇ ಭಾವಿಸಬೇಕಾಗುತ್ತದೆ.

      ಅದೇ ಬಸ್ಸಿನಲ್ಲಿ ಬೆಳಗಿನ ಘಮಲು ಒಂದು ರೀತಿಯಾದರೆ, ಸಂಜೆ ಹೇಳಬೇಕೆಂದೇ ಇಲ್ಲ. ಬೆಳಗ್ಗೆ ಹಾಕಿದ ಪರ್ಪ್ಯೂಮ್, ಪೌಡರ್, ಅತ್ತಾರ್ ಹೀಗೆ ಯಾವ್ಯಾವುದೋ ಸುವಾಸನೆಗಳು. ಅದರ ಜೊತೆ ಮಂಗಳೂರಿನ ಸೆಖೆಗೆ ತೊಟ್ಟಿರುವ ಬಟ್ಟೆ ಪೂರ್ತಿ ಚಂಡಿಯಾಗುವಷ್ಟು ಹರಿದ ಬೆವರಿನ ವಾಸನೆ ಸೇರಿಕೊಂಡರೆ ಕೈಯಲ್ಲಿದ್ದ ಟುವ್ವಾಲು ನೇರ ಮೂಗಿನ ಮೇಲೆ ಕೂತುಬಿಡುತ್ತದೆ. ಹೀಗೆ ಕಾಲಿಡಲೂ ಜಾಗವಿಲ್ಲದ ಬಸ್ಸುಗಳಲ್ಲಿ ಅದು ಹೇಗೆ ಎಲ್ಲರ ದುರ್ನಾತ ಕಂಡಕ್ಷರ್ನ ಬೈಗುಳ ಸಹಿಸಿಕೊಂಡು ಅಷ್ಟು ಒತ್ತುತ್ತಾಗಿ ನಿಲ್ಲುತ್ತೇವೆಯೋ ಆ ಶಿವನೇ ಬಲ್ಲ.!

      ಓಲಾಡುವ ಬಸ್ಸುಗಳಲ್ಲಿ ನೇತಾಡುತ್ತ ನಿಂತವರ ಕಥೆ ಒಂದೆಡೆಯಾದರೆ, ಇನ್ನು ಹೇಗೋ ಕಷ್ಟ ಪಟ್ಟು ಗಲಾಟೆ ಮಾಡಿ ಸೀಟು ಪಡೆದುಕೊಂಡು ಕೂತವರ ಗೋಳು ಹೇಳುತಿರದು. ಪಾಪ ಅವರಿಗೋ ನೆಮ್ಮದಿಯಾಗಿ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಹಾಡು ಕೇಳೋಣ ಅಥವಾ ಮೊಬೈಲ್ ಆದರೂ ನೋಡೋಣವೆಂದರೆ ನಿಂತವರು ಬಿಡಬೇಕಲ್ಲ. ಕೂತ ಒಬ್ಬೊಬ್ಬರ ಮೇಲು ಲೋಡುಗಟ್ಟಲೆ ಬಾರ ಹೊತ್ತ ನಾಲ್ಕದು ಬ್ಯಾಗುಗಳನ್ನು ಹಾಕದೆ ಇದ್ದರೆ ನಿಂತು ಓಲಾಡುವವರಿಗೆ ನೆಮ್ಮದಿಯಲ್ಲಿದೆ.!?

      ಹೀಗೆ ಪೂರ್ತಿ ಲೋಡಾಗಿರುವ ಬಸ್ಸಿನಲ್ಲಿ ಅಪರೂಪಕ್ಕೊಮ್ಮೆ ಮಡಂತ್ಯಾರ್ ಅಥವಾ ಗುರುವಾಯನಕೆರೆಯಲ್ಲ ಸೀಟು ಸಿಗುವುದಿದೆ. ಅಂದರೆ ಸುಮಾರು ಒಂದು ೪೫ ಕಿ.ಮೀ ದಾಟಿದ ಮೇಲೆ! ನಿಂತು ನಿಂತು ಕಾಲು ನೋವು ಬಂದ ನೆಪಕ್ಕೆ ಸೀಟು ಸಿಕ್ಕಾಗೊಮ್ಮೆ ನಿದ್ದೆ ಜೋರಾಗಿ ಎಳೆದುಬಿಡುತ್ತದೆ. ಅವತ್ತೂ ಹಾಗೆಯೇ ತಣ್ಣಗೆ ಗಾಳಿ ಬೇರೆ ಬೀಸ್ತಾ ಇತ್ತು. ಕೂತ ಸ್ವಲ್ಪ ಹೊತ್ತಲ್ಲೇ ಮಂಪರು ಆವರಿಸಿ ಬಿಟ್ಟಿತ್ತು. ಆ ಸುಖ ನಿದ್ರೆಗೆ ಭಂಗ ತರಲೆಂತೋ ಏನೋ, ನಾಲ್ಕು ಹನಿ ಮಳೆ ಸುರಿದೇ ಬಿಟ್ಟಿತು ನೋಡಿ. ಕಿಟಕಿ ಬದಿ ಸೀಟು, ಆ ಹನಿ ಹನಿ ಮಳೆ ಆನಂದಿಸಿದ್ರೆ ಸ್ವರ್ಗಕ್ಕೆ ಇನ್ನೇನು ಬೇಕು!? ಹಾಗಂತ ಕಿಟಕಿ ಹಾಗೆಯೇ ತೆರೆದಿಟ್ಟು ಕೂರೋಕು ಆಗೋದಿಲ್ಲ ಅಲ್ವೇ? ಒಲ್ಲದ ಮನಸ್ಸಿನಿಂದ ಕಣ್ಣೆರೆದು ಇನ್ನೇನು ಕಿಟಕಿ ಗಾಜು ಸರಿಸಬೇಕು ಅನ್ನುವಷ್ಟರಲ್ಲಿ ದೈತ್ಯ ಗಾತ್ರದಲ್ಲಿ ಬೆಳೆದು ನಿಂತ ಗಡಾಯಿಕಲ್ಲು (ಜಮಲಾಬಾದ್ ಕೋಟೆ) ಕಾಣಿಸಿತು. ಅಬ್ಬಾ!! ಏನು ಆ ರಮಣೀಯತೆ. ಪಶ್ಚಿಮ ಘಟ್ಟಗಳ ಹಸಿರ ಚಾದರದಿಂದ ಸುತ್ತುವರಿದು ಸುಮಾರು ೧೭೮೮ ಅಡಿಯಷ್ಟು ಇರುವ ಬಂಡೆಯದು. ಟಿಪ್ಪು ಸುಲ್ತಾನ್ ಕಾಲದಲ್ಲಿ ನಿರ್ಮಾಣವಾಯಿತು ಎನ್ನುವ ಇತಿಹಾಸ ಈ ಕಲ್ಲಿನ ಕೋಟೆಗಿದೆ. ಇತಿಹಾಸ ಪುರಾಣ ಏನೇ ಇದ್ದರೂ ನನಗೆ ಈ ಗಡಾಯಿಕಲ್ಲನ್ನು ನೋಡಿದಾಗ ತಕ್ಷಣ ನೆನಪಾಗುವುದು ನನ್ನ ಅಜ್ಜಿ ಹೇಳುತ್ತಿದ್ದ ಕಥೆಗಳು.

      ನನ್ನಜ್ಜಿ ಬಹುಶಃ ಗಡಾಯಿಕಲ್ಲಿನ ಊಹಾಪೂಹ ಕಥೆಗಳೊಂದಿಗೆ ಬೆಳೆದವಳು. ಅವಳ ಸಂಬಂಧಿಕರು ಕೆಲವರು ಅದೇ ಕಲ್ಲಿನ ಸುತ್ತಮುತ್ತಲಿನ ಭಾಗಗಳಲ್ಲಿ ಈಗಲೂ ವಾಸಿಸ್ತಾ ಇದ್ದಾರಂತೆ. ಈ ಕಥೆಗಳೆಲ್ಲ ಅವಳು ಕಂಡಿದ್ದೋ ಅಥವಾ ಅವಳು ಕೇಳಿದ್ದು ನನಗೆ ಗೊತ್ತಿಲ್ಲ. ಹಿಂದೆಲ್ಲಾ ಅರಸರ ಕಾಲದಲ್ಲಿ ಸುತ್ತಮುತ್ತಲಿನ ಯಾರ ಮನೆಯಲ್ಲಾದರೂ ಮದುವೆ ಮುಂಜಿ ಕಾರ್ಯಕ್ರಮಗಳು ನಡೆದರೆ ಅದೇ ಗಡಾಯಿಕಲ್ಲಿನ ಬಳಿ ಹೋಗಿ ವೀಳ್ಯ ತಾಂಬೂಲವಿಟ್ಟು "ನಾಳೆ ನನ್ನ ಮಗಳದು ಮದುವೆ ಇದೆ" ಅಂತ ಪ್ರಾರ್ಥಿಸಿದರೆ ಮರುದಿವಸ ಬೆಳಗ್ಗೆ ಅಲ್ಲಿ ಮದುವೆಗೆ ಬೇಕಾದ ಒಡವೆ ಎಲ್ಲಾ ಸಿದ್ದವಾಗಿ ಇರುತ್ತಿತ್ತಂತೆ. ಮದುವೆ ಮುಗಿದ ಬಳಿಕ ಅದನ್ನು ಹಿಂದಿರುಗಿಸಬೇಕಾಗಿತ್ತು. ಇದು ಅಲ್ಲಿಯ ನಿಯಮವಂತೆ. ನಾವು ಕುತೂಹಲದಿಂದ "ಎಷ್ಟು ಚಂದ ಅಲ್ಲ ಈಗಲೂ ಹಾಗಿದ್ದಿದ್ದರೆ ಒಳ್ಳೆಯದಿತ್ತು!!" ಅಂತ ಮತ್ತೆ ಪ್ರಶ್ನೆ ಹಾಕಿದರೆ ಅದಕ್ಕೆ ಅವಳ ಸಮರ್ಥನೆಯೂ ತಯಾರಾಗಿರುತ್ತಿತ್ತು. ಹೀಗೊಮ್ಮೆ ಹಿಂದಿನ ದಿನ ಪ್ರಾರ್ಥಿಸಿ ಪಡೆದ ಬಂಗಾರ ಒಡವೆಗಳನ್ನು ಮರು ದಿವಸ ಹಿಂದಿರುಗಿಸಬೇಕಾದರೆ ಯಾರೋ ಅದನ್ನು ಅದಲು ಬದಲು ಮಾಡಿ ಅಂದರೆ, ಬಂಗಾರದ ಜಾಗದಲ್ಲಿ ರೋಲ್ಡ್ ಗೋಲ್ಡ್ ಇಟ್ಟು ಪರಾರಿಯಾಗಿದ್ದರಂತೆ. ಆ ಬಳಿಕ ಯಥಾವತ್ತು ಈ ಬಂಗಾರ ಕೊಡುವ ಅಕ್ಷಯಪಾತ್ರೆ ನಿಂತು ಹೋಯ್ತು. ಇದು ಅವಳು ಹೇಳುವ ಕಥೆ. ಇದರಲ್ಲಿ ಎಷ್ಟು ನಿಜವೋ ಎಷ್ಟು ಕಲ್ಪನೆ ಇದೆಯೋ ಗೊತ್ತಿಲ್ಲ. ಅದಕ್ಕಾಗಿಯೇ ಇಂತಹ ಅಜ್ಜಿ ಕಥೆಗಳನ್ನೆಲ್ಲಾ ನಮ್ಮ ಈಗಿನ ತತ್ವ ಸಿದ್ಧಾಂತಗಳಿಗೆ ಒರಗೆ ಹಚ್ಚಿ ನೋಡುವ ಕೆಲಸಕ್ಕೆ ಕೈ ಹಾಕಬಾರದು. ಕೆಲವು ಕಥೆಗಳು ಕಥೆಗಳಾಗಿದ್ದರೇನೆ ಚಂದ ಅಲ್ವಾ!

      ಕಳೆದ ಒಂದೆರಡು ಮೂರು ವರ್ಷದ ಹಿಂದೆ ಯಾವುದೋ ಒಂದು ಪ್ರಸಿದ್ದ ಜ್ಯುವೆಲರಿ ಕಂಪನಿ ಈ ಗಡಾಯಿಕಲ್ಲಿಗೆ ಆಭರಣ ಹಾಕುವ ಮೂಲಕ ತನ್ನ ಜಾಹೀರಾತು ಪ್ರದರ್ಶನ ಮಾಡಿತ್ತು. ಆಗೆಲ್ಲಾ ಈ ಅಜ್ಜಿಯ ಕಥೆಗಳೇ ನೆನಪಾಗುವುದು. ಕರಿದಾದ, ದೈತ್ಯ ಗಾತ್ರದ. ಯಾರಿಗೂ ಭಯ ಹುಟ್ಟಿಸುವ ಮತ್ತು ಈಗ ಟ್ರಕ್ಕಿಂಗ್‌ಗೆ ಹೇಳಿ ಮಾಡಿಸಿದ ಗಡಾಯಿಕಲ್ಲಿನ ಸುತ್ತ ಹೆಣೆದ ಊಹಾಪೋಹದ ಕಥೆಗಳು ಸಾವಿರಾರಿವೆ. ಆ ಕಲ್ಲು ಬಂಗಾರ ಕೊಡುತ್ತಿತ್ತೋ, ಬೆಳ್ಳಿ ಕೊಡುತ್ತಿತ್ತೋ, ಬಟ್ಟೆ ಬರೆ ಕೊಡುತ್ತಿತ್ತೋ ಅದೇನೇ ಇರಲಿ. ಒಮ್ಮೆ ಆ ಕಿರಿದಾದ ಮೆಟ್ಟಿಲುಗಳಲ್ಲಿ ಹತ್ತಿಳಿದು ಬನ್ನಿ. ಕಲ್ಲಿನ ತುತ್ತತುದಿ ಏರಿದಾಗ ಯಾಕಿಷ್ಟು ಕಥೆ ಪುರಾಣ ಊಹಾಪೋಹಗಳು ಹೆಣೆದುಕೊಂಡಿವೆ ಎನ್ನುವ ವಾಸ್ತವ ಕಾಣಬಹುದು.

ರೇಷ್ಮಾ ಎನ್ ಬಾರಿಗ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೩

ಶಾಸ್ತ್ರಗುಳು [ಜನಪದ ನುಡಿಗಳು]

  1. ಉಳ್ಳಕ್ಕಿ ತಗೊಳಂದ್ರೆ, ಬೆಳ್ಳಕ್ಕಿ ಬೇಕಂದ್ಲಂತೆ.
  2. ಅತ್ತೆಗೆ ಆರೆ ಚಿಂತೆ ಆದ್ರೆ, ಸೊಸೆಗೆ ದಾರಿ ಚಿಂತೆ ಅಂತೆ.
  3. ನೀಡಾಕಿ ನೆಲುವುದ್ದ ಆದ್ರೆ, ಬೇಡಾಕಿ ಭಾನುದ್ದವಂತೆ.
  4. ಅತ್ತೆ ಕುರುಪಿಯಾದ್ರೆ, ಅಳಿಯ ಅಪರೂಪವಾದ್ದಂತೆ.
  5. ಅಕ್ಕ ಇಂಗು ಕೇಳಿದ್ರೆ, ತಂಗಿ ತೆಂಗು ಕೊಟ್ಟಂತೆ.
  6. ಗೊಬ್ಬೊಳ್ಳಿ ಹಬ್ಬ ಮಾಡಕ್ಷಿಟ್ರ, ಉಬ್ಬಿದೋಳ್ಳಿಗಿ ಉಪ್ಪಾಕಿದ್ದಂತೆ.
  7. ಉಂಡಿಗಿ ಉಪ್ಪಾಕಿ, ಗಂಡಗ ತಿನ್ನಿದ್ದಂತೆ.
  8. ತೊಗ್ಲುಗೊಂಬೆ ಬಗ್ಲಾಗ ಕೊಟ್ರೆ, ಹಗ್ಗತ್ತಾಗ ಆಟ ಆಡ್ತಿದ್ರಂತೆ.
  9. ಮಳ್ಳಿ ಸೊಸೆನ ಮನ್ಯಾಗ ಬುಟ್ರೆ, ಹಳ್ಳಿನೆಲ್ಲ ಹರ್ಗ್ಯಾಡ್ಕಂಡು ಬಂದಂತೆ.
  10. ಮನಿಗಿ ಸುಣ್ಣ ಬಳಿಯವ್ವ ಅಂದ್ರೆ, ಮುಖಕ್ಕ ಬಣ್ಣ ಬಳ್ಳಂಡ್ಲಂತೆ.
  11. ಕತ್ತಾಗ ಕಾಕೋಗಿ, ಹಿತ್ತಾಗ ಜಾರಿ ಬಿದ್ದಂತೆ.
  12. ಹಸುದೊನಿಗೆ ಅನ್ನ ಕೊಟ್ರೆ, ತಿಳಿತುಪ್ಪ ಹುಳಿಗಾಯಿ ಕೇಳಿದ್ದಂತೆ.
  13. ಮಗ್ಗಂತ ಮನ್ಯಾಗಿಟ್ಕಂಡ್ರ, ಬೊಗುಳೊ ನಾಯಿನಿ ಸುಮ್ಮಿರು ಅಂದ್ಲಂತೆ.
  14. ಹಲ್ಲಿಲ್ಲೋರಿಗೆ ಬೆಲ್ಲ ಕೊಟ್ರೆ, ಕಲ್ಕಡ್ಡೆ ಅಂದ್ರಂತೆ.
  15. ಉಪ್ಪು ಕೇಳಾಕ ಬಂದೊಳ್ಳಿ, ತುಪ್ಪ ಕೊಟ್ಟು ಕಲ್ಲಿದ್ದಂತೆ.
  16.  ಗೆಳ್ತಿ ಬಂದಾಗ ಹರ್ಟೆ ಹೇಳಿ, ಗಂಡ ಬಂದಾಗ ಗಡಿಬಿಡಿ ಮಾಡ್ತಿದ್ದಂತೆ.
  17. ಚಂದ್ರನ್ನ ನೊಡವ್ವ ಅಂದ್ರೆ, ಇದ್ರಾನೇ ಬೇಕಂದ್ದಂತೆ.
  18. ಸುದ್ದಿಗಿ ಸೂರವ್ವ ಆದ್ರೆ, ಬದ್ದಿಗಿ ಬ್ಯಾನವ್ವ ಆದ್ದಂತೆ.


ಜನಪದ ಸಂಗ್ರಹ :- ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೩

ಕತ್ತಲ ಕನ್ನಡಿ

ಜಗತ್ತು ಕಣ್ಣು ಮುಚ್ಚಿದಾಗ 

ಮನಸ್ಸು ಕಣ್ಣು ಬಿಡುತ್ತದೆ 

ಹಗಲಿನ ಅಬ್ಬರಕ್ಕೆ ಅಡಗಿದ್ದ ನೋವು 

ನಡುರಾತ್ರಿ ಮೆಲ್ಲಗೆ ಮೈಮುರಿಯುತ್ತದೆ


ಬೀದಿ ದೀಪದ ಮಂದ ಬೆಳಕಲಿ 

ನೆರಳು ಕೂಡ ಸಾಥ್ ನೀಡುವುದು 

ಒಂಟಿ ಪಯಣದ ಹಾದಿಯಲಿ, 

ಮೌನಕ್ಕಿಂತ ದೊಡ್ಡ ಮಾತಿಲ್ಲವದು


ಕನಸುಗಳ ಸಂತೆ ಮುಗಿದ ಮೇಲೆ 

ವಾಸ್ತವದ ಮುಖ ದರ್ಶನ 

ನಕ್ಷತ್ರಗಳ ಸಾಕ್ಷಿಯಲಿ ನಡೆಯುವುದು 

ನಮ್ಮೊಳಗಿನ ನಮ್ಮವೇ ದರ್ಶನ


ನಿದ್ರೆಯ ಕದ ತಟ್ಟುವ ಮುನ್ನ 

ಭಾವನೆಗಳ ಅಲೆಗೆ ಮಣಿಯಲೇಬೇಕು 

ನಡುರಾತ್ರಿಯ ಈ ಏಕಾಂತದಲಿ 

ನಮ್ಮನ್ನು ನಾವೇ ಅಪ್ಪಿಕೊಳ್ಳಬೇಕು..


ಮರಿಯಮತ್ ಮಿಸ್ಬಾ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೩

ನಿನ್ನ ಸಾರ್ವಭೌಮ

ನಿನ್ನ ಸಾರ್ವಭೌಮತ್ವಕ್ಕೆ ತಲೆಬಾಗಿ 

ನಿನ್ನ ಲೋಕದಲಿ ಬೇರು ಬಿಟ್ಟಿರುವ ನಮಗೆ 

ನಿನ್ನ ನೀತಿ ನಿಯಮಗಳ ಪರಿಜ್ಞಾನ ನೀಡು 

ಎಲ್ಲಿ, ಏನು, ಹೇಗೆಂದು 

ಯಾಕೆ, ಇದು, ಹೀಗೆಂದು 

ನಮಗೆ ನಿನ್ನನ್ನು ಬಿಟ್ಟು ಹೇಳುವವರು ಯಾರು? 

ಏರು ತಗ್ಗುಗಳಲ್ಲಿ ಏರಿಳಿಸಿ ನಡೆಸುವವರು ಯಾರು?


ಭೂತ ಭವಿಷ್ಯ ವರ್ತಮಾನವ ಮರೆತವರು ನಾವು 

ನಮಗೆ ನಮ್ಮದೆ ರೀತಿ, ನೀತಿ ನಿಯಮ 

ಅದರಿಂದಲೇ ಅನ್ಯಾಯ, ನಿರಾಶೆ, ಮೋಸ 

ನಿನ್ನನ್ನು ನಿನ್ನದಾರಿ, ನಿರೀಕ್ಷೆಯನರಿತರೆ ಮಾತ್ರ 

ನಮಗೆ ಮೋಕ್ಷ


ಕೆಟ್ಟದೊಳ್ಳೆಯದು, ಮೇಲೆಕೇಳಗೆನ್ನುವುದು 

ನಮಗೆ ನಾವೇ ವಿಧಿಸಿದ ರೇಖೆಗಳು 

ನಾವು ನಿರ್ಮಿಸಿದ ಬಲೆಯಲ್ಲಿ 

ನಾವೇ ಸಿಕ್ಕಿ ಅನುಭವಿಸುತ್ತಿರುವೆವು ನೋವು 

ನೀನು ಮುಂದೆ ನಡೆಸಿದ, ನಮಗೆ ಈ ಗತಿ ತಪ್ಪಿದಲ್ಲ


ನಿನ್ನ ತೋಟದ ಬೇಲಿಯಲ್ಲಿ ನಮ್ಮ 

ಹೂವು ಅರಳುವಂತೆ ಹರಸು 

ಆಗಲೇ ತೃಪ್ತಿ, ಶಾಂತಿ, ಸಮಾಧಾನ 

ಈ ಲೋಕಕ್ಕೆ ನಾವು ನಮಗಾಗಿ 

ಈ ಲೋಕವೆಂಬ ನಂಬಿಕೆ..


ದಿವ್ಯಶ್ರೀ, ಎ. ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೩

ವಸಂತದ ಸ್ಪರ್ಶ

ಮರಗಳ ತುದಿಯಲ್ಲಿ ಮೂಡುತ್ತದೆ 

ಹೊಸ ಬದುಕಿನ ಪುಟ್ಟ ಹಸಿರು ನಗು, 

ಬೆಳಗಿನ ಗಾಳಿಯಲ್ಲಿ ಹರಡುತ್ತದೆ 

ವಸಂತದ ಮೃದುವಾದ ಮೋಗ್ಗಿನ ಸುಗು.


ಹೂವಿನ ಬಣ್ಣಗಳಲ್ಲಿ ಉದುರುತ್ತವೆ 

ಹೃದಯದ ಎಲ್ಲಾ ಬೇಸರಗಳ ತಂಪು, 

ಮಾತಿಲ್ಲದ ಗಾಳಿಯೂ ಹಾಡುತ್ತದೆ 

“ಹೊಸ ಆರಂಭಕ್ಕೆ ಬಂದಿದೆ ಸಮಯ ಪುನಃ!”


ಚಿಗುರುವ ಪ್ರತಿಯೊಂದು ಎಲೆಯೂ 

ಆಶೆಯ ಹೊಸ ಅಧ್ಯಾಯದಂತೆ, 

ವಸಂತ ಬಂದಾಗ ಮನವೂ ಅರಳುತ್ತದೆ 

ನಾವೆಲ್ಲಾ ಹೂವಿನ ಹಿಂದೆ ಮುಂದೆ.


ಪವಿತ್ರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೩

ಗೆಳತಿ

ಅವಳೆಂದರೆ ನೋವನು ಕೂಡ 

ಮರೆಮಾಚುವ ಶಕ್ತಿಯನ್ನು ಹೊಂದಿದವಳು.


ಕಷ್ಟ-ಸುಖ ಎಂಬ ಬದುಕಿನ ದಾರಿಯಲ್ಲಿ 

ಜೊತೆ-ಜೊತೆ ನಿಲ್ಲುವ ಸ್ನೇಹಿತೆ ನನ್ನವಳು.


ಅವಳ ಮಾತುಗಳೇ ಸುಮಧುರ ಸಂಗೀತ 

ಜೊತೆಗಿದ್ದರೆ ಸಾಕು ಎನಗಿಲ್ಲ ಯಾವುದೇ ಕೊರತೆ 

ಮುಗ್ಧ ಮನಸ್ಸಿನ ಮಗುವು ಅವಳು 

ಮುತ್ತಿನಂತೆ ಹೊಳೆಯುವಂತಹ ನಗುವು 

ಸುಂದರ ಪ್ರಪಂಚದಲ್ಲಿ ಶ್ರೇಷ್ಠ ಇವಳು 

ಕಾಣುವ ಪ್ರಕೃತಿ ಸೊಬಗು ಇವಳು 

ಮುಗಿಲು ಮೀರಿದ ಬಣ್ಣದವಳು 

ಚಂದನಕ್ಕಿಂತ ಚಂದ ನನ್ನವಳು, ಅವಳೆ ನನ್ನವಳು


ಭವ್ಯ ಎಸ್., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೩

ಮುದ್ದಾಗಿರುವಳು ಮುಟ್ಟುವಾಂಗ

ನೋಡುವಂಗ ಇರುವಳು 

ಆದರೆ ನೋಡದೆ ನಗುವಳು 

ಕಣ್ಣಿನ ಸನ್ನೆ ಚಲಿಸುವಂಗಿರುವಳು 

ಆದರೆ ಕಣೋಳಗಿನ ರೆಪ್ಪೆ ಯಾಗಿರುವಳು 

ಆದರೆ ಮತ್ತೇ ಮುದ್ದಾಗಿರುವಳು ಮುಟ್ಟವಾಂಗಿರುವಳು


ಕೇಳುವಂಗ ಇರುವಳು 

ಆದರೆ ಕೇಳದೆ ಕಳೆದು ಹೋಗಿರುವಳು 

ಮಾತಾಡುವಾಂಗ ಇರುವಳು 

ಆದರೆ ಮಾತೇ ಮರೆಸುವಂಗಿರುವಳು 

ಆದರೂ ಮತ್ತೆ ಮುದ್ದಾಗಿರುವಳು ಮುಟ್ಟವಾಂಗಿರುವಳು


ನಾಚಿಸುವಾಂಗ ಇರುವಳು 

ನಾಚಿಕೆ ನಡವಳಿಕೆಯನ್ನು ತೀರಿಸಲಾಗುದು 

ಸುಂದರವಾಗಿರುವಳು, ಆದರೆ ಸುಮ್ಮನೆ ನಗುತಿಹಳು 

ಅವಳು ಮತ್ತೆ ಮುದ್ದಾಗಿರುವಳು ಮುಟ್ಟವಾಂಗ ಇರುವಳು


ಕಲೆಯಾಗಿರುವಳು, ಕಲ್ಪನೆಯಾಗಿ 

ಸವಿಯಾಗಿರುವಳು, ಸಂಪನ್ನೆಯಾಗಿ 

ಮಧುರವಾರುವಳು, ಮೃದುವಾಗಿ 

ಆದರೆ ಮತ್ತೆ ಮುದ್ದಾಗಿರುವಳು 

ಮುಟ್ಟುವಾಂಗ ಇರುವಳು


ಮಲ್ಲಿಕಾರ್ಜುನ ಹ ಕೆರೂಡಿ, ಎಂ.ಎಸ್.ಸಿ. ಭೂಗೋಳ ಶಾಸ್ತ್ರ

ಸಂಚಿಕೆ - ೧೩

ಎಲ್ಲಮ್ಮನ ಜಾತ್ರೆ

      ಉತ್ತರ ಕರ್ನಾಟಕದ ಆದಿದೇವತೆಯಾದ ಶ್ರೀ ರೇಣುಕಾ ಎಲ್ಲಮ್ಮನ ಜಾತ್ರೆಯು ಲೋಕ ಪ್ರಸಿದ್ಧ. ವರ್ಷ ಪೂರ್ತಿ ಇಲ್ಲಿ ಜಾತ್ರೆ ನಡೆಯುತ್ತಲೇ ಇರುತ್ತದೆ. ಆದರೆ 'ಭರತ ಹುಣ್ಣಿಮೆ' ತಿಂಗಳಲ್ಲಿ ಈ ಜಾತ್ರೆ ಹೆಚ್ಚು ಅದ್ದೂರಿಯಾಗಿ ನಡೆಯುತ್ತದೆ.

      ಎಲ್ಲಮ್ಮನ ಜಾತ್ರೆ ಎಂದರೆ ನಮಗೆಲ್ಲ ಸಡಗರ. ಜಾತ್ರೆಗೆ ಹೋಗುವ ತಯಾರಿಯನ್ನು ಒಂದು ವಾರ ಮೊದಲೇ ಆರಂಭಿಸುತ್ತಾರೆ. ಅನೇಕ ವಿಧದ ತಿಂಡಿ ತಿನಿಸುಗಳನ್ನು (ಚುರಮರಿ, ಕರ್ಚಿಕಾಯಿ, ರವೆ ಉಂಡೆ, ಹಲ್ವ, ರೊಟ್ಟಿ) ತಯಾರಿಸಿಕೊಂಡು ಭರತ ಹುಣ್ಣಿಮೆಯ ಹಿಂದಿನ ದಿನ ರಾತ್ರಿಯೇ ಎಲ್ಲರೂ ಎತ್ತಿನ ಬಂಡಿ, ಕುದುರೆ ಬಂಡಿ ಮತ್ತು ಟ್ರಾಕ್ಟರ್ ಇತ್ಯಾದಿ ವಾಹನಗಳಲ್ಲಿ ಹೋಗುತ್ತಾರೆ. ನಂತರ ಅನ್ನ ವಿಧವಿಧವಾದ ಪಲ್ಯ, ವಡೆ, ಬಜ್ಜಿ, ಚಪಾತಿ ಇತ್ಯಾದಿ ಅಡುಗೆ ತಯಾರಿಸಿ ಮುಂಜಾನೆಯ ನಸುಕಿನಲ್ಲಿ ಎಣ್ಣೆ ಹೊಂಡದಲ್ಲಿ ಸ್ನಾನ ಮಾಡಿ ಪೂಜೆಗೆ ಬೇಕಾದ ಎಲ್ಲವನ್ನು ತೆಗೆದುಕೊಂಡು ದರ್ಶನ ಮಾಡುತ್ತಾರೆ. ನಂತರ ಎಲ್ಲರು ಒಟ್ಟಾಗಿ ಊಟ ಮಾಡಿ ಜಾತ್ರೆಯ ಸೊಬಗನ್ನು ಕಣ್ಣುಂಬಿಕೊಳ್ಳಲು ಹೋಗುತ್ತಾರೆ. ಪೂರ್ತಿ ಗುಡ್ಡವೆಲ್ಲ (ಬೆಟ್ಟ) ಭಂಡಾರದಿಂದ ವರ್ಣಮಯವಾಗಿರುತ್ತದೆ. ವಿಧವಿಧವಾದ ವಸ್ತುಗಳು, ತೊಟ್ಟಿಲು ಜೋಕಾಲಿ ಆಡುವುದೇ ಒಂದು ಸಡಗರ ಅದರಲ್ಲೂ ರಾತ್ರಿ ಸಮಯದ ಜಾತ್ರೆಯ ಸೊಬಗನ್ನು ಅಲ್ಲಿ ಹೋಗಿ ನೋಡಿದರೆ ಮಾತ್ರ ಸವಿಯಲು ಸಾಧ್ಯ ಅಷ್ಟೊಂದು ಅದ್ಭುತವಾಗಿ ಜಾತ್ರೆ ನಡೆಯುತ್ತದೆ.

      ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಈ ಎಲ್ಲಮ್ಮನ ಗುಡ್ಡವು ತನ್ನದೇಯಾದ ಇತಿಹಾಸವನ್ನು ಹೊಂದಿದೆ. ಇದು ಮಲಪ್ರಭಾ ನದಿಯ ದಡದಲ್ಲಿದೆ. ಇದಲ್ಲದೆ ಇಲ್ಲಿ ಬರುವ ಎಣ್ಣೆ ಹೊಂಡ, ಏಳು ಕೊಳ್ಳ, ಸವದತ್ತಿ ಕೋಟೆ, ಜೋಗುಳ ಬಾವಿ ಇತ್ಯಾದಿ ಸ್ಥಳಗಳು ತಮ್ಮದೇಯಾದ ಒಂದೊಂದು ಇತಿಹಾಸ ಪ್ರಸಿದ್ಧ ಕಥೆಗಳನ್ನು ಒಳಗೊಂಡು ಇಂದಿಗೂ ಲೋಕ ಪ್ರಸಿದ್ಧಿಯಾಗಿವೆ.

ಸುಜಾತಾ ಗಿ. ಪೂಜೇರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೩

ನಿವ್ಯಾರೋ? ನಾವ್ಯಾರೋ?

      ಬಿಟ್ಟಿರಲಾರದ ಬಂಧ, ಖುಷಿ, ನೋವು, ಮಾತುಗಳು ಮೌನಗಳು ಎಲ್ಲಾ ತುಂಬಿದ ಈ ಎರಡು ವರ್ಷಗಳಲ್ಲಿ ಒಟ್ಟಿಗಿದ್ದ ನಾವೆಲ್ಲ. ತಮ್ಮ ದಾರಿಯನ್ನು ಒಬ್ಬಂಟಿಯಾಗಿ ಸಾಗಿಸಲು ಕೆಲವೇ ತಿಂಗಳುಗಳು ಬಾಕಿ. ಹಾಸ್ಟೆಲ್ ಜೀವನ, ಪ್ರಾಧ್ಯಾಪಕರು, ಸಂಶೋದನಾರ್ಥಿಗಳು, ವಿಭಾಗದ ಕಾರ್ಯಕ್ರಮಗಳು, ಹೀಗೆ ಎಲ್ಲವೂ ಒಟ್ಟಿಗಿದ್ದ ಜೀವಕ್ಕೆ ಒಮ್ಮೆಲೆ ಏಕಾಂತವು ವೈರಾಗ್ಯ, ಮೂಡಿಸುವುದಂತು ನಿಜ. ಅನೇಕರಿಗೆ ವಿದ್ಯಾಭ್ಯಾಸದ ಕೊನೆಯ ಹಂತವೂ ಹೌದು. ಕಲಿಕೆಯು ನಿರಂತರ ಪ್ರಕ್ರಿಯೆ ಆದರೆ, ಅದರಲ್ಲಿ ಸಹಪಾಠಿಗಳು, ಪ್ರಾಧ್ಯಾಪಕರು ಇದ್ದರಷ್ಟೆ ಒಂದು ಸಂಪೂರ್ಣ ಕಲಿಕೆ ಎನ್ನಬಹುದು.

      ದಿನಗಳು ಉರುಳುತ್ತಾ ಉರುಳುತ್ತಾ ಹೋದಂತೆ ನಮ್ಮವರಿಂದ ದೂರ ಹೋದ ಅನುಭವ, ಎಲ್ಲರೊಂದಿಗೆ ಪ್ರೀತಿಯ ಕ್ಷಣವನ್ನು ಆಸ್ವಾದಿಸುವ ಆಸೆ, ಆದರೆ ನಾನೇ ಯಾಕೋ ಎಲ್ಲರಿಂದ ದೂರ ಉಳಿಯುತ್ತಿದೇನೆ. ಬಿಡಿಬಿಡಿಯಾದ ನಮ್ಮ ಚಿತ್ರಗಳು ಸಿಕ್ಕರೆ. ಎಲ್ಲರೂ ಒಟ್ಟಾಗಿರುವ ಚಿತ್ರವ ನಾನು ಕಾಣೆ! ಸಮಯ ಇದ್ದಾಗ ಎಲ್ಲರಿಗೂ ಬೆನ್ನು ತೋರಿಸಿ ಹೋದವರು ನಾವು ಕೊನೆಯ ದಿನದಲ್ಲಿ ಕರೆದರೆ ಗೆಳೆತನದ ಸಾಂತ್ವನ ನೀಡುವರೆ? ಪ್ರವಾಸದ ನೆಪ ಹೇಳಿ ಎಲ್ಲರನ್ನು ಒಗ್ಗೂಡಿಸುವ ಯತ್ನದಲ್ಲಿ ಆಯತಪ್ಪಿ ಬಿದ್ದು ಹೋದವನು ನಾನು.

      ಮಾತುಗಳು ಮೌನಕ್ಕೆ ತಿರುಗಿ, ಮುಗುಳ್ಳಗೆಯು ಭಾರವಾಗಿ ಹೋದಾಗ ಎಲ್ಲಿಯ ಸ್ನೇಹ ಪರತೆ ಹುಟ್ಟುವುದು? ಲವಲವಿಕೆ ಇಲ್ಲದ ಮೇಲೆ ತರಗತಿಯನ್ನು ಆಸ್ವಾದಿಸುವುದಾದರೂ ಹೇಗೆ? ಮನದಲ್ಲಿ ಹಲವಾರು ಗೊಂದಲಗಳು! ಆಂತರಿಕವಾಗಿ ಎಲ್ಲವೂ ಸರಿ ಇದೆ ಎಂದುಕೊಂಡರೂ, ಬಾಹ್ಯದಿಂದ ನಮ್ಮವರನ್ನೇ ಕಾಣದಷ್ಟು ಕುರುಡರಾಗಿ ಹೋಗಿರುವೆವು ನಾವು. ಬಿಟ್ಟಮಂಡೆಯನ್ನು ಬಿಟ್ಟ ಹಾಗೆ ಓಡಿದ ಉತ್ತರಕುಮಾರನಂತೆ ಓಡಿಹೋಗುವವರು ನಾವು. ತರಗತಿಯು ತುಂಬಿದ್ದರು. ನಮ್ಮೊಳಗೆ ಗೆಳೆತನದ ಭಾವ ತುಂಬಿದ್ದೆ ಇಲ್ಲಾ. ಯಾರಿಗೆ ಹೋಗಿ ನಾ ಕೇಳಲಿ, ಯಾರಿಗೆ ನಾ ಬೈಯಲಿ. ಈ ಮನಸ್ತಾಪಕ್ಕೆ ಅಡಿಗಲ್ಲು ಹಾಕಿದವರು ಯಾರೆಂದು?

      ಬೇರೆ ಬೇರೆ ವಿಭಾಗದ ಗೆಳೆತನದ ಬಂಧವನ್ನು ನೋಡಿ ಒಳಗೊಳಗೆ ಮರುಕ ಪಟ್ಟವನು ನಾನು. ನಮ್ಮ ಗೆಳೆತನದ ಬಂಧಕ್ಕೆ ಹೇಳಿತು ಮನ, ಇನ್ನು ಕೆಲವೇ ತಿಂಗಳು ನಿವ್ಯಾರೋ? ನಾವ್ಯಾರೋ?

ಶ್ರೇಯಸ್ ಬನ್ನಡ್ಕ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ


“ನಿವ್ಯಾರೋ? ನಾವ್ಯಾರೋ?” ಈ ಲೇಖನಕ್ಕೆ - ಓದುಗನ ಅಭಿಪ್ರಾಯ

      ಹೌದು ಗೆಳೆಯ ನಿನ್ನ ಮಾತು ಸತ್ಯ ನೀವ್ಯಾರೋ? ನಾವ್ಯಾರೋ? ತರಗತಿಯಲ್ಲಿ ಇರುವವರೆಗೂ ನಾವು ನೀವು ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ. ಇಲ್ಲಿ ಯಾರು ಸಹ ಒಡಹುಟ್ಟಿದವರಲ್ಲ. ಯಾರು ಒಡನಾಡಿಗಳಲ್ಲ. ಆದರೂ ಮಚ್ಚಿ, ಮಾಮ, ಅಣ್ಣ, ಗೆಳೆಯ, ಬಾಮೈದ ಇನ್ನೂ ಎನೇನೋ ಹೆಸರುಗಳಿಂದ ಕರೆಯುತ್ತೇವೆ. ಅದೇ ಕಾಲೇಜು ಮುಗಿದ ಮೇಲೆ ನೀವ್ಯಾರೋ? ನಾವ್ಯಾರೋ?.

      ಹೌದು ಈ ಬಂಧ ಬಿಡಿಸಲಾಗದು, ಖುಷಿ, ನೋವು, ಪಿಸುಮಾತಿನ ಮೌನಗಳು ಎಲ್ಲವನ್ನೂ ಒಟ್ಟುಗೂಡಿಸಿದ ಈ ಬಂಧ ಇನ್ನೂ ಕೆಲವೇ ತಿಂಗಳಲ್ಲಿ ಎಲ್ಲವನ್ನೂ ಮರೆಸುತ್ತದೆ. ಬಾಹ್ಯವಾಗಿ ನೋಡಲು ನೀನು ಒಬ್ಬಂಟಿಯೇ. ಆಂತರಿಕವಾಗಿ ನೋಡು ಗೆಳೆಯ, ನಾವು ಸದಾ ನಿನ್ನಲ್ಲಿ, ನಿನ್ನ ಸ್ಮೃತಿಯಲ್ಲಿ ನೆಲೆಸಿರುತ್ತೇವೆ. ನಿನಗೆ ಒಂಟಿತನ ಕಾಡಿದರೆ, ನಾವು ನಿನ್ನ ಎದುರು ಇಲ್ಲದಿದ್ದರೂ, ನಿನ್ನ ದೂರವಾಣಿಗೆ ನಿಲುಕದಿದ್ದರೂ ಸಹ, ನಾವೆಲ್ಲರೂ ನಿನ್ನ ಮಸ್ತಕದ ಮಂದಿರದಲ್ಲಿ ಹಚ್ಚಳಿಯದೇ ನೆಲೆಸಿರುತ್ತೇವೆ.

      ನಾವೆಲ್ಲ ಎಸ್.ವಿ.ಪಿ ಕನ್ನಡ ವಿಭಾಗ ಎಂಬ ಕುಟುಂಬದ ಸದಸ್ಯರು, ಒಂದೇ ಕುಟುಂಬದವರು. ಒಂದೇ ಪ್ರದೇಶದಲ್ಲಿ, ಕುಟುಂಬದಲ್ಲಿ ಬೆಳೆದವರಲ್ಲೇ ಭಿನ್ನಾಭಿಪ್ರಾಯ ಕಂಡಿದ್ದೇವೆ. ಇಂತ ಸ್ಥಿತಿಯಲ್ಲಿ ಭಿನ್ನ ಭಿನ್ನ ಪ್ರದೇಶಗಳಿಂದ, ಭಿನ್ನ ಭಿನ್ನ ಮನಸ್ಥಿತಿಯಿಂದ ಬಂದಿರುವ ನಮ್ಮಲ್ಲಿ ಮನಸ್ತಾಪ, ಭಿನ್ನಾಭಿಪ್ರಾಯ, ವೈರತ್ವ ಬರುವುದು ಸಹಜ ಅಲ್ಲವೇ?. ಹಾಗೆಯೇ ಇಂತ ವೈಮನಸ್ಸುಗಳನೆಲ್ಲ ಕಳಚಿಕೊಂಡು ನಮ್ಮತನವನ್ನು ಇಂದಾದರೂ ಬಿಟ್ಟು ಎಲ್ಲರೊಟ್ಟಿಗೆ ಖುಷಿಯಿಂದ ಇರೋಣ ಎಂದು ಎಷ್ಟೋ ಬಾರಿ ಅನಿಸುತ್ತದೆ. ಆದರೆ ಮತ್ತೆ ಮತ್ತೆ ಅದೇ ನೆನಪುಗಳು ಕಣ್ಣ ಮುಂದೆ ಬರುತ್ತದೆ. ಈ ನೆನಪುಗಳನ್ನು ಎದುರಿಸಲು ಇರುವ ಪ್ರಬಲವಾದ ಶಕ್ತಿಯೇ ಮರೆವು, ಸೌಮ್ಯ ಟಿ. ಎಸ್. ಅವರು 'ಮರೆವು' ಬಗ್ಗೆ ಒಂದು ಲೇಖನ ಬರೆದಿದ್ದರು. ಅದರಲ್ಲಿ ತಿಳಿಸಿರುವ ಹಾಗೆ, ಕಹಿ ನೆನಪುಗಳು ಮರೆಯಗುವಂತೆ ಇದ್ದರೆ ಎಷ್ಟೋ ಚೆಂದ ಅನಿಸುತ್ತದೆ. ಹಾಗಲಾದರೂ ಎಲ್ಲರೂ ಕಹಿ ಘಟನೆಗಳನ್ನು ಮರೆತು, ನಿನ್ನ ಇಚ್ಛೆಯಂತೆ ಲವಲವಿಕೆಯಿಂದ ತರಗತಿಯನ್ನು ಆಸ್ವಾದಿಸಬಹುದು. ಇಲ್ಲಿ ಬಿತ್ತರಿಸಿದ ಸ್ನೇಹ, ಗೆಳೆತನದಂತಹ ಲೇಖನ-ಕವನಗಳ ಮೂಲಕವಾದರೂ ಸ್ಫೂರ್ತಿ ಪಡೆಯೋಣ.

ಅನಾಮಿಕ, ಎಸ್.ವಿ.ಪಿ. ಕುಟುಂಬ

ಸಂಚಿಕೆ - ೧೩

ಬದುಕು

     ಬದುಕು ಎಂದರೆ ಒಂದು ಸುಂದರವಾದ ಅಥವಾ ಅರ್ಥಪೂರ್ಣವಾದ ಪ್ರಯಾಣ. ನಮ್ಮ ಜೀವನದಲ್ಲಿ ಆಗುಹೋಗುಗಳನ್ನು ಎದುರಿಸಿಕೊಂಡು ಹೋಗುವುದೇ ಬದುಕು. ಪ್ರತಿಯೊಬ್ಬರಿಗೆ ಒಂದೇ ತರಹದ ಬದುಕು ಇರುವುದಿಲ್ಲ. ಗೆಲುವು ಇರಬಹುದು ಸೋಲು ಕೂಡ ಇರಬಹುದು. ಅದನ್ನು ಧೈರ್ಯದಿಂದ ಎದುರಿಸಿ ಬದುಕಬೇಕು. ನಮ್ಮ ಬದುಕಿನಲ್ಲಿ ನಾವು ಗೆದ್ದು ಇನ್ನೊಬ್ಬರು ಬದುಕುವುದು ಹೇಗೆ ಎನ್ನುವುದನ್ನು ತಿಳಿಸುವುದೇ ಬದುಕು. ಬದುಕಿನಲ್ಲಿ ಪ್ರತಿ ದಿನ, ಪ್ರತಿ ಗಂಟೆ, ಪ್ರತಿ ನಿಮಿಷ ಕೂಡ ಇಲ್ಲಿ ಅಮೂಲ್ಯವಾದದ್ದು. ಇಲ್ಲಿ ಯಾವುದೂ ಕೂಡ ಹಿಂತಿರುಗಿ ಬರುವುದಿಲ್ಲ. ಒಮ್ಮೆ ಕಳೆದರೆ ಹೋಯಿತು. ಆದ್ದರಿಂದ ಪ್ರತಿಕ್ಷಣದ ಬದುಕು ಅಮೂಲ್ಯವಾದದ್ದು. ಹೀಗೆ ನಮ್ಮ ಬದುಕು ಅನಿಶ್ಚಿತ ಕೂಡ. ಮುಂದಿನ ಬದುಕು ಏನೆಂದು ಯಾರಿಗೂ ತಿಳಿಯದು, ಬದುಕಿನಲ್ಲಿ ಎಲ್ಲಾ ತರಹದ ಕಷ್ಟ, ನೋವು, ನಲಿವು ಎಲ್ಲವೂ ಕೂಡ ಎಲ್ಲರಿಗೂ ಇದೆ. ಆದರೆ ಅವುಗಳ ಮಧ್ಯೆ ಸಂತೋಷದಿಂದ ಬದುಕಬೇಕು.

ಪ್ರೇಮಾವತಿ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೩

ನಿನದೇ ನೆನಪು ದಿನವೂ ಮನದಲ್ಲಿ....


ನಿನದೇ ನೆನಪು ದಿನವೂ ಮನದಲ್ಲಿ 

ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲೀ ॥ ಪ ॥



ಹೂವಿಂದ ರಸವನೀರಿ, 

ಗೂಡಲ್ಲಿ ಅದವನೀಟ್ಟು, 

ಹೂವಿಂದ ರಸವನೀರಿ, 

ಗೂಡಲ್ಲಿ ಅದವನೀಟ್ಟು, 

ಸಿಹಿ ಸಿಹಿ ಸವಿಯ ಕೊಡುವುದು. 

ಸವಿ ಸವಿ ಜೇನಾ ಕೊಡುವುದು. 

ನಮ್ಮೀ ಪ್ರೀತಿಯಾ ಸವಿಯಿದು.... ॥ ೦೧ ॥



ಪ್ರೇಮದ ಲೋಕದಲ್ಲಿ, 

ಕವನದ ಸಾಲಿನಲ್ಲಿ. 

ಪ್ರೇಮದ ಲೋಕದಲ್ಲಿ, 

ಕವನದ ಸಾಲಿನಲ್ಲಿ. 

ಬರೆದೆನು ಪ್ರೇಮಾ ಓಲೆಯ, 

ಪಡೆದೆನು ಅವಳಾ ಹೃದಯ. 

ಅವಳೀ ಮನಸಿನಾ ಆಲಯ.... ॥ ೦೨ ॥



ಸೂರ್ಯನ ಕಿರಣದಂಗೆ, 

ನಲ್ಲೆಯ ಮೈಯಕಾಂತಿ. 

ಸೂರ್ಯನ ಕಿರಣದಂಗೆ, 

ನಲ್ಲೆಯ ಮೈಯಕಾಂತಿ. 

ಸೆಳೆದಳು ನನ್ನ ಮನವನು, 

ಮರೆತೇನು ನನ್ನ ದಿನವನು. 

ಕಳೆದಿರುವೆನೀ ಕ್ಷಣವನು.... ॥ ೦೩ ॥



ಭಕ್ತನ ಶಾಪದಲ್ಲಿ. 

ರಾಧೆಯ ವಿರಹದಲ್ಲಿ. 

ಭಕ್ತನ ಶಾಪದಲ್ಲಿ. 

ರಾಧೆಯ ವಿರಹದಲ್ಲಿ. 

ಕೃಷ್ಣನು ಸೊರಗಿ ಕೊರಗಿದ. 

ರಾಧೆಯ ಪ್ರೀತಿ ಬಯಸಿದ. 

ಜಗದೀ ಪ್ರೀತಿಯಾ ಗುರುತಿಗೆ.... ॥ ೦೪ ॥











ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ


ಸಂಚಿಕೆ - ೧೩

ಯಾನ

ನಾನೊರ್ವ ಯಾತ್ರಿಕ ಹೊಂಬನು 

ಎಳೆಬಿಸಿಲಿಗೆ ಮೈಯೊಡ್ಡಿ, ತೇಲುವೆನು 

ಹಚ್ಚ ಹಸಿರ ದಾರಿ ಸ್ವಾಗತವ ಕೋರಿ 

ಯಾರ ಹಂಗು ಇಲ್ಲದೆ ಸುಮ್ಮನೆ ಸುತ್ತುವೆನು


ಶಾಲೆಯ ಮಕ್ಕಳ ಸೈಕಲ್ ಸವಾರಿ 

ಮೊಗದಲಿ ಕಾಣುವೆನು ನಿತ್ಯನೂತನ ಚೈತನ್ಯ 

ಸಾಲೊಂದು ಬರೆದಿಹನು ಆ ಆಟೋ ಚಾಲಕನು 

ಕಂಡೆ ನಾ ಸಾಲಿನಲಿ ಜೀವಂತಿಕೆಯ ಆತ್ಮವನು


ಸರಳ ಬದುಕಿನಲಿ ಸಂಭ್ರಮಕೆ ಬರುವೇನು? 

ಓದುವ ಪುಸ್ತಕದಿ ನನ್ನೆ ನಾ ಕಳೆದೇನು! 

ಯಾವುದಕೂ ಅಂಟಿಕೊಳ್ಳದ ನಾ ಆಕಾಶಕಾಯವೇನು.. 

ಸಾಹಿತ್ಯದ ಮಣ್ಣಿನಲಿ ನಿತ್ಯ ಪುನರಪಿಸುವೆನು...


ಪರಶುರಾಮ್, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೩

ನನ್ನ ಅಮ್ಮ

ಕಡಲ ಆಳದಷ್ಟು ವಿಶಾಲ ಹೃದಯವುಳ್ಳವಳು 

ನನ್ನ ನಲೆಯ ಅಮ್ಮ 

ವರ್ಣಿಸಲಾರೆ ಇನ್ಯಾರನು ಅವಳಿಗೆ - ಅವಳೇ ಸರಿಸಮಾನ 

ಆಗದು ಎಂದು ಕೈಕಟ್ಟಿ ಕುಳಿತವಳಲ್ಲ 

ಸಾಕು ಎಂದು ಸುಮ್ಮನೆ ಮಲಗಿದವಳಲ್ಲ


ತನಗೆಂದು ಏನನ್ನು ಬಯಸದೆ 

ಸಕಲವನ್ನು ಧಾರೆ ಎರೆದು 

ಸಾಕಿ ಸಲುಹಿದಳು ನನ್ನ ಅಮ್ಮ 

ಹೇಳತೀರದು ಅವಳ ತ್ಯಾಗವ 

ತೀರಿಸಲಾಗದಷ್ಟು ಋಣಭಾರ ಆಕೆಯದು 

ತೀರಿಸಿದರು ಸರಿಸಮನವಾಗದು 

ಆಕೆಯ ಪರಿತ್ಯಾಗವು 

ಅವಳ ಆಸೆಯನ್ನು ನನ್ನಲ್ಲಿಯೇ ಕಂಡು 

ಅವಳ ಆಸೆಯನ್ನು ಮರೆಮಾಡುತ್ತಾ ಬಂದವಳು 

ಹೃದಯ ಶ್ರೀಮಂತಿಕೆಯುಳ್ಳ "ಶ್ರೀಮತಿ" ನನ್ನ ಅಮ್ಮ


ಪೂಜಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೩

ಧರಣಿ

ಯಾರು ಈ ಸ್ವಪ್ನ ಸುಂದರಿ 

ಎಷ್ಟು ಚಂದ ಹಾಡುವಳು ಕುವರಿ 

ಯಾರು ಹೇಳಿಕೊಟ್ಟರು ಇವಳಿಗೆ ವಿಧ್ಯಾದ ಪರಿ

ನನ್ನ ಮನಸನ್ನೇ ಗೆದ್ದಳು ಪೋರಿ 

ಮಾತನಾಡಿದರೆ ಹೊರಬರುವವು ಸಪ್ತ ಸ್ವರಗಳ ಲಹರಿ

ಮೌನದಲ್ಲಿಯು ಹೊಳೆಯುವಳು ಈ ಕಲಾದರಿ

ಇವಳು ಯಾವ ನಾಟ್ಯಗಾರನ ಕುಮಾರಿ

ನಾಟ್ಯದಲ್ಲೇ ನವಿಲಾದಳು ನಾರಿ 

ನಲ್ಲ ನಲ್ಲೆಯರ ನಾಟ್ಯರಾಗಕ್ಕೆ ಕಂಠವಾದಳು ಕುವರಿ

ಕೈ ತಟ್ಟಿ ಕೈ ಮುಗಿಯುವರ ಕಣ್ಣಿಗೆ, 

ಇವಳೊಂದು ಅದ್ಭುತ ಕಲಾದರಿ

ಕಿವಿಕೊಟ್ಟು ಕೇಳುವವರ ಮನಸಿಗೆ ಕಾವ್ಯವಾದಳು ಕಸ್ತೂರಿ 

ಈ ಕಲಾರಂಗಕ್ಕೆ ತನ್ನ ಕಲೆಯ ತೋರಿಸಿ, 

ಕವಿಯ ಕಣ್ಣಿಗೆ ಕವನವಾದಳು ಕಿನ್ನರಿ


ನಾ ಏನೆಂದು ವರ್ಣಿಸಲಿ ಧಣಿ 

ಅವಳೊಂದು ಪದಗಳ ರಾಣಿ 

ಎಷ್ಟು ಚಂದ ಹಾಡುವಳೋ ಆ ತರುಣಿ 

ಅಷ್ಟು ಅದ್ಭುತವಾಗಿ ನುಡಿಸುವಳು ವೀಣೆ

ಪದಕಟ್ಟುವಲ್ಲಿ ಅವಳು ಬಲು ಜಾಣೆ 

ಪದ ಹಾಡುವಾಗ ಪದ್ಮಜದಂತೆ,

ಹೊಳೆಯುತ್ತಿದ್ದವು ಅವಳ ಮಣಿ

ಅವಳು ಮೊದಲೇ ಸೌಂದರ್ಯದ ಗಣಿ 

ಆ ಸೌಂದರ್ಯಕ್ಕೆ ಇಟ್ಟ ಹೆಸರೆ ಧರಣಿ.


ಮಹೇಶ ಜಿ. ಕೆ., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸೋಮವಾರ, ಮಾರ್ಚ್ 16, 2026

ಸಂಚಿಕೆ - ೧೨

 ಸಂಪಾದಕೀಯ

      ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಸೃಜನಾತ್ಮಕತೆಯನ್ನು ವ್ಯಕ್ತಪಡಿಸುವುದರಲ್ಲಿ ಈ ಬಿತ್ತಿಬರಹವು ಒಂದಾಗಿದೆ. ಶಿಕ್ಷಣ ಸಂಸ್ಥೆಗಳು ಕೇವಲ ಪಾಠ ಪುಸ್ತಕಗಳ ಜ್ಞಾನ ನೀಡುವ ಸ್ಥಳವಲ್ಲ. ಬದಲಿಗೆ ವಿದ್ಯಾರ್ಥಿಗಳ ವ್ಯಕ್ತಿತ್ವ, ಚಿಂತನೆಗಳನ್ನು ಪ್ರತಿಬಿಂಬಿಸುವ ಕೇಂದ್ರಗಳಾಗಿವೆ. ಈ ಒಂದು ಬಿತ್ತಿಗೋಡೆ ಬರಹದಲ್ಲಿ ವಿದ್ಯಾರ್ಥಿಗಳು ಲೇಖನ, ಕಥೆ, ಕವನ, ತಮ್ಮ ಚಿಂತನೆಗಳನ್ನು ರೂಪಿಸುವುದರ ಮೂಲಕ ತಮ್ಮ ಪ್ರತಿಭೆಯನ್ನು ಇನ್ನಷ್ಟು ಪ್ರದರ್ಶಿಸಬಹುದಾಗಿದೆ. ಈಗಿನ ಆಧುನಿಕ ಯುಗದಲ್ಲಿ ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯಾರ್ಥಿ ಹಾಗೂ ಸಮಾಜ ಅನೇಕ ಮಾಹಿತಿಗಳನ್ನು ತಿಳಿದುಕೊಳ್ಳುತ್ತದೆ. ಆದರೂ ಶಿಕ್ಷಣ ಕೇಂದ್ರದಲ್ಲಿ ನಡೆಸಿದ ಈ ಬಿತ್ತಿ ಬರಹದಲ್ಲಿ ವಿದ್ಯಾರ್ಥಿಗಳಲ್ಲಿ ತಮಗೆ ಅರಿವಿಲ್ಲದೇ ಹೊಸದಾದ ಚಿಂತನೆಗಳು ಹುಟ್ಟಿಕೊಳ್ಳುತ್ತದೆ. ವಿವಿಧ ರೀತಿಯ ಚರ್ಚೆಗೆ ಆಸ್ಪದವನ್ನು ಮಾಡಿಕೊಡುತ್ತದೆ. ಇನ್ನೂ ಹೆಚ್ಚಾಗಿ ಬರೆಯುವ ಕತೆಯನ್ನು ಹಾಗೂ ಓದುವ ಪ್ರೇರಣೆಯನ್ನು ಒದಗಿಸುತ್ತದೆ. ಈ ಸಂಚಿಕೆಯಲ್ಲಿ ವಿಭಿನ್ನ ರೀತಿಯಲ್ಲಿ ಕೂಡ ಬರಹ, ಲೇಖನ ಮತ್ತು ಕಲಾತ್ಮಕತೆಯಿಂದ ಕೂಡಿದ ಚಿತ್ರಗಳನ್ನು ಕಾಣಬಹುದಾಗಿದೆ. ಒಂದು ಸಂಸ್ಕೃತಿಯ ವಿಶೇಷತೆ, ಪರಿಸರ ಸಂಬಂಧಿತ ವಿಚಾರಗಳನ್ನು ಒಳಗೊಂಡಿರುವ ಬರಹಗಳನ್ನು ಕಾಣಬಹುದಾಗಿದೆ.

      ಸಾಹಿತ್ಯದ ಆಸಕ್ತಿ ಮತ್ತು ಸೃಜನಶೀಲ ಬರವಣಿಗೆಯತ್ತ ವಿದ್ಯಾರ್ಥಿಗಳನ್ನು ಕೊಂಡೊಯ್ಯುವುದು ಈ ಪತ್ರಿಕೆಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲಿ ಮೂಡಿದ ಹೊಸ ರೀತಿಯ ವಿಚಾರಧಾರೆಗಳನ್ನು ಬರವಣಿಗೆಯ ಮೂಲಕ ರೂಪಿಸಿ ಆ ಬರವಣಿಗೆಗೆ ಇನ್ನಷ್ಟು ಮೆರಗನ್ನು ನೀಡುವುದು ಈ ಬಿತ್ತಿಗೋಡೆ ಬರಹವಾಗಿದೆ. ಇದರಿಂದಾಗಿ ಇನ್ನಷ್ಟು ವಿದ್ಯಾರ್ಥಿಗಳಲ್ಲಿ ಬರವಣಿಗೆಯಲ್ಲಿ ಆಸಕ್ತಿ ಮೂಡುವಂತಾಗಲಿ ಎನ್ನುವುದು ಆಶಯವಾಗಿದೆ.

ಸಂಪಾದಕಿ, ಬಿತ್ತಿ ಸಂಪಾದಕ ಮಂಡಳಿ



ಸಂಚಿಕೆ - ೧೨

ಪ್ರಾಮಾಣಿಕತೆಗೆ ಸಿಕ್ಕ ಫಲ

      ಇಸ್ತಾನ್‌ಬುಲ್ ಎಂಬುದು ಒಂದು ಸುಂದರವಾದ ನಗರ. ಇಂತಹ ಸುಂದರ ನಗರಕ್ಕೆ ಬೇರೆ-ಬೇರೆ ಕಡೆಗಳಿಂದ ಜನರು ಕೆಲಸಕ್ಕಾಗಿ ವಲಸೆ ಬರುತ್ತಿದ್ದರು. 'ಎಲಿಸಾ' ಎಂಬ ಹುಡುಗಿಯೂ ಕೂಡ ಕೆಲಸವನ್ನು ಹುಡುಕಿಕೊಂಡು ಈ ನಗರಕ್ಕೆ ಬಂದಿರುತ್ತಾಳೆ. ಆಕೆ ಹುಟ್ಟಿನಿಂದಲೇ ತನ್ನ ತಂದೆ ತಾಯಿಯನ್ನು ಕಳೆದುಕೊಂಡು ಅನಾಥೆಯಾಗಿರುತ್ತಾಳೆ. ಆಕೆ ಈ ನಗರದಲ್ಲಿದ್ದ ಶ್ರೀಮಂತ ಮನೆತನ ಎಂದರೆ 'ಹಿಡ್ಯಾಗೋ' ಮನೆತನವಾಗಿತ್ತು. ಪ್ರತಿಯೊಬ್ಬರ ಕಣ್ಣು ಈ 'ಹಿಡ್ಯಾಗೋ' ಮನೆತನದ ಶ್ರೀಮಂತಿಕೆಯ ಮೇಲೆ ಬಿದ್ದಿತು. ಹೀಗೆ ಎಲಿಸಾ ಊರು-ಊರು ಅಲೆದು, ಸುತ್ತಾಡಿ 'ಹಿಡ್ಯಾಗೋ' ಮನೆತನದಲ್ಲಿ ಮನೆಕೆಲಸಕ್ಕೆ. ಜನರು ಬೇಕಾಗಿದ್ದಾರೆ. ಎಂಬ ವಿಷಯ ತಿಳಿದು ಆಕೆ ಅಲ್ಲಿಗೆ ಬರುತ್ತಾಳೆ. ಕೊನೆಗೆ ಆಕೆಗೆ ಮನೆತನದಲ್ಲಿ ಕೆಲಸ ದೊರೆಯುತ್ತದೆ. ಆಕೆ ಬಹಳ ನಿಷ್ಟೆಯಿಂದ ಕೆಲಸವನ್ನು ಮಾಡುತ್ತಿರುತ್ತಾಳೆ. 'ಹಿಡ್ಯಾಗೋ' ಮನೆತನದಲ್ಲಿ ಜೆಮ್ಸ್ ಎಂಬ ಶ್ರೀಮಂತ ವ್ಯಕ್ತಿ ಇರುತ್ತಾನೆ. ಆತನಿಗೆ ಅನಾರೋಗ್ಯ ಇರುವುದರಿಂದ ಆತನ ಕುಟುಂಬಸ್ತರು ಆತನನ್ನು ತೊರೆದು ಬೇರೆ ದೇಶಗಳಲ್ಲಿ ನೆಲೆಸುತ್ತಾರೆ. ಏಲಿಸಾಗೆ ಮನೆಕೆಲಸದ ಜೊತೆಗೆ ಆ ಶ್ರೀಮಂತ ವ್ಯಕ್ತಿಯನ್ನ ನೋಡಿಕೊಳ್ಳುವ ಕೆಲಸ ಒದಗಿಬರುತ್ತದೆ. ಆಕೆಯು ತನ್ನ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಆ ವ್ಯಕ್ತಿಯ ಆರೈಕೆಯನ್ನು ಮಾಡಿರುತ್ತಾಳೆ. ಒಮ್ಮೆ ಆಕೆ ಆತನಿಗೆ ಊಟ ನೀಡಲು ಬಂದಾಗ ಆತ ಆಕೆಯನ್ನು ಉದ್ದೇಶಿಸಿ ಹೀಗೆ ಹೇಳುತ್ತಾನೆ. "ನನ್ನ ಎಲ್ಲಾ ಮಕ್ಕಳು ನನ್ನನ್ನು ನೋಡಿಕೊಳ್ಳಲು ಆಗದೆ ನನ್ನನ್ನು ಬಿಟ್ಟು ಬೇರೊಂದು ದೇಶದಲ್ಲಿ ನೆಲೆಸಿದ್ದಾರೆ. ನಾನು ಅಗಲಿದ ಬಳಿಕ ಈ ಮನೆತನವನ್ನು ಮುಂದೆ ನಡೆಸಿಕೊಂಡು ಹೋಗಲು ಯಾರು ಕೂಡ ಉತ್ತಮರಿಲ್ಲ" ಎಂದು ಆಕೆಯ ಬಳಿ ಹೇಳುತ್ತಾನೆ. ಅದಕ್ಕೆ ಆಕೆ "ಈ ರೀತಿಯ ಅಪನುಡಿಯನ್ನು ನೀವು ಹೇಳಬೇಡಿ ಸರ್" ಎಂದು ಆಕೆ ಆತನನ್ನು ಸಮಧಾನ ಪಡಿಸುತ್ತಾಳೆ. ಹೀಗೆ ಹಲವು ದಿನಗಳು ಉರುಳಿದವು. ಹೀಗಿರಲು ಒಂದು ದಿನ ಅವರ ಆರೋಗ್ಯ ಎಂದಿಗಿಂತಲೂ ಇನ್ನೂ ಹೆಚ್ಚು ಹದಗೆಟ್ಟಿ ಹೋಗಲು, ವೈದ್ಯರು ಆತ ಇನ್ನು ಒಂದು ವಾರದವರೆಗೆ ಜೀವವಿರಲು ಸಾದ್ಯ ಎಂದು ಹೇಳಿಬಿಡುತ್ತಾರೆ. ಈತ ಎಲಿಸಾ ಆತನ ಕುಟುಂಬಸ್ಥರಿಗೆ ಈ ವಿಷಯವನ್ನು ತಿಳಿಸುತ್ತಾಳೆ. ಆದರೆ ಅವರು ಯಾರು ಆತನನ್ನು ನೋಡಲು ಬರುವುದಿಲ್ಲ. ಸ್ವಲ್ಪ ದಿನ ಕಳೆದ ಬಳಿಕ ತನ್ನ ತಂದೆಯ ಆಸ್ತಿಯನ್ನು ಪಡೆಯಲು ಬರುತ್ತಾರೆ. ಜೆಮ್ಸ್ ಸಾಯುವಾಗ ಎಲಿಸಾನ ಕೈ ಹಿಡಿದುಕೊಡು "ನೀನು ನನ್ನ ಮಗಳಿದ್ದಂತೆ. ನನ್ನ ಮನೆತನವನ್ನು ಇನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳುವೆಯಾ?" ಎಂದು ಪ್ರಶ್ನೆ ಕೇಳಿ ಅಸುನೀಗಿದಾಗ ಏಲಿಸಾ ಬಹಳ ದುಃಖಕ್ಕೆ ಒಳಪಟ್ಟು ಮೌನಕ್ಕೆ ಒಳಗಾಗುತ್ತಾಳೆ. ಹೀಗೆ ಹಲವು ದಿನಗಳು ಉರುಳಿದ ಬಳಿಕ ಜೆಮ್ಸ್‌ನ ಮಕ್ಕಳು ತಮ್ಮ ತಂದೆಯ ಆಸ್ತಿಯನ್ನು ಪಡೆಯಲು ಇಸ್ತಾನ್‌ಬುಲ್‌ಗೆ ಬರುತ್ತಾರೆ. ಅವರು ಆಸ್ತಿ ಹಂಚಿಕೆ ಮಾಡಲು ಲಾಯರ್‌ನನ್ನು ಕರೆದುಕೊಂಡು ಬರುತ್ತಾರೆ. ಆಗ ಲಾಯರ್ ಆಸ್ತಿ ನಿಮಗೆ ಸಿಗುವುದಿಲ್ಲ ಎಂದು ತಿಳಿಸುತ್ತಾರೆ. ಯಾಕೆಂದರೆ ಜೇಮ್ಸ್ ಸಾಯುವ ಮುನ್ನ ಆ ಆಸ್ತಿ ಎಲ್ಲವನ್ನು ಏಲಿಸಾಳ ಹೆಸರಿಗೆ ಬರೆದು ಹೋಗಿರುತ್ತಾನೆ. ಆಗ ಏಲಿಸಾಗೆ ಜೇಮ್ಸ್ ಸಾಯುವಾಗ ಹೇಳಿದ ಮಾತು ಅವಳಿಗೆ ನೆನಪಾಗುತ್ತದೆ. ಹೀಗೆ ಏಲಿಸಾ 'ಹಿಡ್ಯಾಗೋ' ಮನೆತನವನ್ನು ನಡೆಸಿಕೊಂಡು ಹೋಗುವ ವಾರಸುದಾರಳಾಗುತ್ತಾಳೆ.

ರಮ್ಯಶ್ರೀ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೨

ಮರಳಿ ಮಣ್ಣಿಗೆಯ ಸ್ತ್ರೀ ಪಾತ್ರಗಳು

      ಕಾದಂಬರಿಯು ಸ್ವಾತಂತ್ರ್ಯ ಪೂರ್ವದ ದಕ್ಷಿಣ ಕನ್ನಡ ಕಡಲ ತೀರದ ಒಂದು ಕೃಷಿಕ ಮತ್ತು ಪುರೋಹಿತ ಕುಟುಂಬದ ಮೂರು ತಲೆಮಾರುಗಳ ಕಾದಂಬರಿಯಾಗಿದೆ. ರಾಮ ಐತಾಳರಿಂದ ಪ್ರಾರಂಭವಾದ ಕಾದಂಬರಿ ಅವರ ಮೊಮ್ಮಗನಾದ ರಾಮನಿಂದ ಕೊನೆಗೊಳ್ಳುತ್ತದೆ. ಈ ಕೃತಿಯು ೩೦ ಅಧ್ಯಯನಗಳನ್ನು ಒಳಗೊಂಡ ದೀರ್ಘವಾದಂತಹ ಕಾದಂಬರಿಯಾಗಿದೆ. ಈ ಕೃತಿಯಲ್ಲಿ ಜಾತಿ ಪದ್ಧತಿ, ಬಡತನ, ಸಂಸಾರದ ಏಳು ಬೀಳು, ಸ್ವಾತಂತ್ರ್ಯ ಚಳುವಳಿ ಇವೆಲ್ಲವು ಈ ಕೃತಿಯಲ್ಲಿ ವ್ಯಕ್ತವಾಗಿದೆ.

      ಮರಳಿ ಮಣ್ಣಿಗೆ ಕೃತಿಯಲ್ಲಿ ಹೆಣ್ಣಿನ ತಾಳ್ಮೆ, ಅನ್ನೋನ್ಯತೆ, ಸ್ವಾಭಿಮಾನ ಮತ್ತು ಹೆಣ್ಣಿನ ಹೋರಾಟ ಈ ಎಲ್ಲಾ ಅಂಶಗಳನ್ನು ಒಳಗೊಂಡ ಕೃತಿಯಾಗಿದೆ. ಈ ಕಾದಂಬರಿಯಲ್ಲಿ ಇವೆಲ್ಲ ಸಂಗತಿಗಳು ವಿಶೇಷವಾದ ಅಂಶಗಳು ಎಂದು ಹೇಳಬಹುದು. ಇಲ್ಲಿ ಬರುವ ಪಾತ್ರಗಳು ನೂರಾರು ಬಂದರು ಅದರಲ್ಲಿ ರಾಮ ಐತಾಳರು ಅವರ ಪತ್ನಿಯರಾದ ಪಾರೋತಿ (ಪಾರ್ವತಿ) ಸತ್ಯಭಾಮ, ಇವರ ಮಕ್ಕಳು ಲಕ್ಷ್ಮಿನಾರಾಯಣ (ಲಚ್ಚ) ಮತ್ತು ಸುಬ್ಬ, ಲಚ್ಚನ ಪತ್ನಿ ನಾಗವೇಣಿ ಇವರಿಬ್ಬರ ಮಗ ರಾಮ ಹಾಗೂ ಸರಸ್ವತಿ ರಾಮ ಐತಾಳರ ತಂಗಿ ಇಷ್ಟು ಪಾತ್ರಗಳು ಪ್ರಮುಖವಾಗುತ್ತದೆ.

      ಕಡಲ ತೀರದ ಸುಂದರ ದೃಶ್ಯದಿಂದ ಪ್ರಾರಂಭವಾಗುವ ಕಾದಂಬರಿ ಸ್ತ್ರೀಯನ್ನು ಪ್ರತಿನಿಧಿಸುತ್ತಿದೆಂದು ಅನ್ನಿಸುತ್ತದೆ. ಕಡಲಿನ ಶಾಂತಿ, ಕೋಪ, ಸಂಕಷ್ಟ ಬಂದಾಗ ಅದನ್ನು ಪರಿಹರಿಸುವ ಚತುರತೆ ಇವೆಲ್ಲವು ಕಾದಂಬರಿಯಲ್ಲಿ ಬರುವ ಸ್ತ್ರೀಯ ಪ್ರತಿ ರೂಪದಂತೆ ಕಾರಂತರು ತಂದಿದ್ದಾರೆ.

      ಸರಸ್ವತಿ ವಿಧವೆಯಾಗಿದ್ದರು ಕೂಡ ವಿಧವೆಯರು ಪಾಲಿಸುವಂತಹ ಕಟ್ಟುಪಾಡುಗಳನ್ನು ಅಷ್ಟೊಂದು ಪಾಲಿಸುತ್ತಿರಲಿಲ್ಲ. ಪಾತ್ರ ಕಂಡಾಗ ಆಧುನಿಕರಣದ ಪ್ರಭಾವ ಆಗಿನ ಕಾಲದಲ್ಲಿ ಆಗಿದೆಂದು ತಿಳಿಯಬಹುದು. ಪಾರೋತಿ ಮತ್ತು ಸತ್ಯಭಾಮ ಸವತಿಗಳು ಆಗಿದ್ದರೂ ಕೂಡ ಅವರು ಅನ್ನೋನ್ಯತೆ ಮತ್ತು ಪಾರೋತಿ ಸಿಗದೆ ಸಂತಾನ ಭಾಗ್ಯ ಸತ್ಯಭಾಮೆಗೆ ಸಿಕ್ಕಿತು ಎಂದು ಯಾವತ್ತು ಅಸೂಯೆ ಪಟ್ಟವಳು ಅಲ್ಲ. ತನ್ನ ಸವತಿಯಾದಂತಹ ಸತ್ಯಭಾಮೆಯ ಮಕ್ಕಳನ್ನು ತನ್ನ ಮಕ್ಕಳಂತೆ ಸಾಕಿದ್ದಳು.

      ನಾಗವೇಣಿ ಲಚ್ಚನ ಪತ್ನಿ ಇಷ್ಟು ಸ್ತ್ರೀಯರಲ್ಲಿ ವಿಶೇಷವಾದ ಪಾತ್ರವೆಂದು ಅನಿಸಿತ್ತು. ಯಾಕೆಂದರೆ ಅಸಾಧಾರಣ ಸಹನೆ ಮತ್ತು ಧೈರ್ಯ ಹಾಗೂ ಸ್ವಾಭಿಮಾನದ ಪ್ರತೀಕ ಎನ್ನಬಹುದು. ಪತಿಯ ಕೆಟ್ಟ ಅಭ್ಯಾಸಗಳು ಮತ್ತು ಕಷ್ಟಗಳನ್ನು ಎದುರಿಸಿ ಮಗ ರಾಮನೊಂದಿಗೆ ಜೀವನದಲ್ಲಿ ಹೋರಾಡುತ್ತಾಳೆ,

      ರಾಮ ಐತಾಳರು ತಮ್ಮ ಕುಲ ಕಸುಬು ಮಾಡುತ್ತಾ ತನ್ನ ಮಗ ನನ್ನಂತೆ ಆಗಬಾರದೆಂದು ಓದಿಸುತ್ತಾರೆ. ಆದರೆ ಲಚ್ಚ ಮಾತ್ರ ತನ್ನ ಕೆಟ್ಟ ಚಟಗಳಿಂದ ಕಲಿತ ವಿದ್ಯೆ ಮತ್ತು ಮನೆಯ ನಡೆಸಬೇಕಾದವ ಮನೆಯಿಂದ ಹೊರಟುಹೋಗುತ್ತಾನೆ. ಆಗ ರಾಮ ಐತಾಳರು ತಮ್ಮ ಆಸ್ತಿಯನ್ನು ನಾಗವೇಣಿಗೆ ಬರೆಯುತ್ತಾರೆ. ತಾಯಿಯೊಂದಿಗೆ ಇದ್ದ ರಾಮ ಬೆಳೆದು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಶಿಕ್ಷಣವನ್ನು ಅಂತ್ಯಗೊಳಿಸುತ್ತಾನೆ. ತಾಯಿಯ ನೋವನ್ನು ಅರಿತುಕೊಂಡ ರಾಮ ಐತಾಳರು ಕೊಟ್ಟ ಆಸ್ತಿಯಿಂದ ಮನೆಗೆ ಮರಳಿ ಕುಟುಂಬವನ್ನು ಮುನ್ನಡೆಸುತ್ತಾನೆ.

      ಒಟ್ಟಾರೆ ಆ ಕಾಲದ ಸಾಮಾಜಿಕ ಚಿತ್ರಣ, ಹೆಣ್ಣಿನ ಸಂಬಂಧ ಕಾಣಬಹುದು. ಈ ಕಾದಂಬರಿಯಲ್ಲಿ ಸ್ತ್ರೀವಾದ ಹಿನ್ನೆಲೆ ಹೊರತುಪಡಿಸಿ ಜಾತಿ ಪದ್ಧತಿ ಇವುಗಳ ನೆಲೆಯಿಂದ ನೋಡಬಹುದು.ಈ ಕಾದಂಬರಿ ಹೆಣ್ಣು ಮಕ್ಕಳ ಗುಣ ಮತ್ತು ಶಕ್ತಿಗಳ ಪ್ರತೀಕವಾಗಿದೆ ಈ ಕಾದಂಬರಿ.

ಪಲ್ಲವಿ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೨

ಯಶು ಸರ್.....

ಎದ್ದೋ ಬಿದ್ಯೋ ಅಂತ ಬರ್ತಾರೆ 

ಎದೆ ತುಂಬ ನಗಿಸ್ತಾರೆ 

ಕಲ್ಮಶವಿಲ್ಲದೆ ಕಲಿಸ್ತಾರೆ 

ನಮ್ಮ ಕಲುಷಿತವನೆಲ್ಲಾ ಕಳಿತಾರೆ 

ಕಟ್ಟಿದ ಗಡಿಯಾರವ ತೆಗಿತಾರೆ 

ಕನ್ನಡ ಪದಗಳನ್ನು ಬರಿತಾರೆ 

ಭಾಷಾ ವಿಜ್ಞಾನ ಅಂತಾರೆ 

ಬದುಕಿನ ಮಾರ್ಗವ ಹೇಳ್ತಾರೆ 

ಮಹಿಳೆಯು ಮಮತೆಯು ಅಂತಾರೆ 

ಮಾತಿನ ಮೌಲ್ಯವ ಕೇಳ್ತಾರೆ 

ನಾನು ಗುರುವಿನ ಶಿಷ್ಯ ಅಂತಾರೆ 

ಗುರುವಿನ ಬೋಧನೆ ಮಾಡ್ತಾರೆ 

ಎಲ್ಲರ ಹೆಸರನ್ನು ಹೇಳ್ತಾರೆ 

ಪದಗಳ ಉಚ್ಚಾರಣಿಯ ಸ್ಥಾನವ ಕೇಳ್ತಾರೆ 

ಕ್ಲಾಸು ಮುಗಿಯಲ್ಲ ಅಂತಾರೆ 

ಕ್ಲಾಸಿಗೆ ಮತ್ತೆ ಬರ್ತಾರೆ 

ನೀವು ಕಲಿತಾ ಇರಿ ಅಂತಾರೆ 

ನಾಳೆ ಕಾರ್ಯಕ್ರಮ ಅಂತಾರೆ 

ಎಲ್ಲರು ಬನ್ನಿ ಅಂತಾರೆ 

ಎಲ್ಲವನ್ನೂ ಕಲಿಯೋಣ ಅಂತಾರೆ 

ಕಾಲವು ನಿಲ್ಲದು ಅಂತಾರೆ 

ಕ್ಲಾಸು ಮುಗಿಸಿ ಹೋಗ್ತಾರೆ.


ಮಹೇಶ ಜಿ.ಕೆ., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೨

ಮರೆವು

      ಮರೆವು ಎಂಬ ಪದವು ಮನುಷ್ಯನ ಜೀವನದಲ್ಲಿ ಅವಶ್ಯಕವಾಗಿ ಬೇಕೆ ಬೇಡವೇ ಎಂದಾಗ ತಕ್ಷಣಕ್ಕೆ ಅನ್ನಿಸುವುದು ಬೇಡ ಎಂದು. ಅದರಲ್ಲೂ ವಿದ್ಯಾರ್ಥಿಗಳಂತು ಪರೀಕ್ಷೆಗೆ ಮೊದಲು ನಾನು ಓದಿದ ಎಲ್ಲಾ ವಿಷಯಗಳು ಮರೆಯದೆ ನೆನಪಿಗೆ ಬರಲಿ ಎಂದು ಕೈ ಮುಗಿದು ಹೋಗುವವರು ಹೆಚ್ಚು. ಅದರಲ್ಲೂ ನಾನಂತು ಕೆಲವೊಂದು ವಿಷಯಗಳನ್ನು ಹೆಚ್ಚಾಗಿ ಮರೆಯುತ್ತೇನೆ. ಹಾಗಂತ ಎಲ್ಲ ಸನ್ನಿವೇಶದಲ್ಲೂ ಮರೆಯುತ್ತೇನೆ ಎಂದಲ್ಲ. ನಾನು ಎಷ್ಟೋ ಸಲ ವಸ್ತುವನ್ನು ಸರಿಯಾಗಿ ಒಂದು ಸ್ಥಳದಲ್ಲಿಡಬೇಕು ಎಂದು ಯೋಚಿಸಿ ಇಟ್ಟಿರುತ್ತೇನೆ. ಆದರೆ ಅದನ್ನು ಇನ್ನೆಲ್ಲೊ ಇಟ್ಟು ಹುಡುಕುವುದು. ಇದು ನಿಮ್ಮ ಜೀವನದಲ್ಲೂ ನಡೆದಿರಬಹುದೇನೊ ಅಲ್ಲವೆ?

      ನನ್ನ ಗೆಳತಿಯೊಬ್ಬಳು ಹೇಳಿದಳು "ನಾವು ಒಂದು ವಿಷಯವಾಗಲಿ ವಸ್ತುವಾಗಲಿ ಇದ್ದಾಗ ಅದರ ಕುರಿತು ನೆನಪಿನಲ್ಲಿಟ್ಟುಕೊಂಡಾಗ ಅದು ಮರೆಯುವುದಿಲ್ಲ" ಎಂದು. ಪರೀಕ್ಷೆಯ ವಿಚಾರ ಬಂದಾಗ ಮರೆವು ಬೇಡ ಎಂದಾಗುತ್ತದೆ. ಆದರೆ ತರಗತಿಯ ಎಲ್ಲಾ ವಿದ್ಯಾರ್ಥಿಗಳು, ಓದಿದೆಲ್ಲವನ್ನು ನೆನಪಿಟ್ಟುಕೊಂಡು ಪರೀಕ್ಷೆ ಬರೆದು, ಎಲ್ಲರೂ ಬ್ಯಾಂಕ್‌ಗಳಿಸಿದರೆ ಆಗ ಬ್ಯಾಂಕ್ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕಾದಗ ಸಮಸ್ಯೆ ಉಂಟಾಗುತ್ತದೆ. ಎಲ್ಲರೂ ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಯಾರಿಗೆ ಕೆಲಸವನ್ನು ಕೊಡುವುದು? ಎಲ್ಲರೂ ಉನ್ನತ ಶ್ರೇಣಿ ಬಂದಾಗ ಹಿಗೆಲ್ಲ ಸಮಸ್ಯೆಗಳು ಉಂಟಾಗುತ್ತದೆ.

      ಹಾಗೆಯೇ ಜೀವನದಲ್ಲಿ ನೆನಪಿನ ಜೋತೆ ಮರೆವು ಅವಶ್ಯಕ. ಏಕೆಂದರೆ ಕೆಲವು ಕಹಿ ನೆನಪು ಮರೆತು ಹೋದರೆ ಮುಂದೆ ಒಳ್ಳೆಯ ಜೀವನ ಮಾಡಲು ಸಾಧ್ಯ. ನಮ್ಮ ಇವುಗಳನ್ನೆಲ್ಲ మిరి ಬದುಕಿ ತಂದೆ - ತಾಯಿಗೆ ಆಶ್ರಯವಾಗಬೇಕು. ಜೀವನದಲ್ಲಿ ಕಹಿ ಘಟನೆಯು ನಡೆದು ಹೋಗಿದ್ದಾಗ ನಮಗೆ ಮರು ಹುಟ್ಟು ಪಡಿಯಬೇಕೆಂದರೆ ಅದಕ್ಕೆ ಮುಖ್ಯವಾಗಿ ಮರೆವು ಎನ್ನುವುದು ತೀರ ಅವಶ್ಯಕ. ನಮ್ಮ ಮೆದುಳು ಎಷ್ಟೊಂದು ಸೂಕ್ಷ್ಮವಾದ ಅಂಗ ಅಲ್ಲವೇ. ಅದಕ್ಕೆ ಕೆಲಸ ಕೊಟ್ಟಗ ಅದು ಇನ್ನಷ್ಟು ಚುರುಕಾಗುತ್ತದೆ. ನನ್ನ ಆಪ್ತ ಸಂಗಾತಿ ಯಾರು ಎಂದರೆ ಅದು ಮರೆವು. ನೆನಪು ಹೇಗೆ ಮುಖ್ಯವೊ ಹಾಗೆ ಮರೆವು ಮುಖ್ಯ. ಕಹಿ ಘಟನೆಗಳನ್ನು ಮರೆತು ಎಲ್ಲಾರು ಸಂತೋಷ ಜೀವನ ಸಾಗಿಸಬೇಕು.

ಸೌಮ್ಯ ಟಿ.ಎಸ್, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೨

ಬುದ್ಧನಾದರೇನು!?

ಮನ ಕದಡಿದಾಗ 

ಬುದ್ಧನೆದುರು ಕೂತು ಮೌನವಾಗುತ್ತೇನೆ 

ಅವನ ಕಣ್ಣುಗಳನ್ನು ದಿಟ್ಟಿಸುತ್ತೇನೆ 

ಆ ಮಂದಹಾಸದ ಮುಗುಳ್ಳಗೆಯನ್ನ 

ಆಸ್ವಾದಿಸುತ್ತೇನೆ 

ಅದೇ..!?

ಬುದ್ಧನಾದರೇನು 

ಯಶೋಧರೆಯ ನೆನಪೂ 

ಆ ತಕ್ಷಣ ಮರುಕಳಿಸುತ್ತದೆ 

ಮತ್ತೆ ಮೌನವಾಗುತ್ತೇನೆ 

ಮತ್ತೆ ಮತ್ತೆ ಕಾಡುತ್ತಾಳೆ ಅವಳು 

ಮತ್ತೆ ಮತ್ತೆ... 

ಬುದ್ಧನಾದರೇನು ಹ್ಮಂ...!?


ರೇಷ್ಮಾ ಎನ್ ಬಾರಿಗ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೨

 ಸ್ನೇಹ

     ಸ್ನೇಹ ಎಂಬುದು ಒಂದು ಪದವಲ್ಲ. ಅದು ಮನಸ್ಸಿಗೆ ಹಿಡಿಸಿದ ಬಂಧ. ನಂಬಿಕೆ, ವಿಶ್ವಾಸ, ಬೆಟ್ಟದಷ್ಟು ಪ್ರೀತಿಯೆಂಬುದು ಇದರಲ್ಲಿ ಇರುತ್ತದೆ. ನಮ್ಮ ಮನಸ್ಸಿನಲ್ಲಿ ದುಃಖಗಳನ್ನು ಖುಷಿಯನ್ನು ಹೀಗೆ ಎಲ್ಲಾ ವಿಷಯಗಳನ್ನು ಸ್ನೇಹಿತೆಯೊಬ್ಬಳಲ್ಲಿ ಹಂಚಿಕೊಳ್ಳುತ್ತೇವೆ. ಅವಳು ನಮ್ಮ ಎಲ್ಲಾ ವಿಷಯಗಳನ್ನು ಸ್ಪಂದಿಸುತ್ತಾಳೆ. ಸ್ನೇಹಿತೆಯೆಂದರೆ ಒಂದೆ ಜೀವದ ಎರಡು ದೇಹವಿದ್ದಂತೆ ಎನ್ನಬಹುದು. ಕೆಲವೊಂದು ವಿಷಯಗಳನ್ನು ನಾವು ಹೇಳದೆ ನಮ್ಮ ಮುಖದ ಭಾವವನ್ನು ನೋಡಿ ತಿಳಿದುಕೊಳ್ಳುವವಳು ನನ್ನ ಸ್ನೇಹಿತೆ. ಸೋತಾಗ ಸಾಂತ್ವನ ಹೇಳಿ ಗೆದ್ದಾಗ ಖುಷಿಯನ್ನು ಪಡುವವಳು ಇಂತಹ ಸ್ನೇಹಕ್ಕೆ ನಾನು ಎಂದಿಗು ಚಿರರುಣಿ. ಸ್ನೇಹವನ್ನು ನಾವು ಅವಕಾಶಗಳಿಗಾಗಿ ಬಳಸಿಕೊಳ್ಳುವವರ ಜೊತೆಗೆ ಮಾಡಬಾರದು, ಬದಲಾಗಿ ನಮ್ಮ ಕಷ್ಟಗಳಿಗೆ ಸಮಯಕ್ಕೆ ಸರಿಯಾಗಿ ಜೊತೆಗೆ ನಿಲ್ಲುವವರ ಜೊತೆ ಸ್ನೇಹ ಮಾಡಬೇಕು. ಇಂತಹ ಒಂದು ಸ್ನೇಹವನ್ನು ನಾನು ನನ್ನ ಮುದ್ದು ಗೆಳತಿಯಲ್ಲಿ ನೋಡಿದ್ದೇನೆ. ಅವಳು ನನಗೆ ಸ್ನೇಹಿತೆಯಾಗಿ ಅಲ್ಲದೆ ತಾಯಿ, ಸೋದರಿ ಇವರೆಲ್ಲರ ಪ್ರೀತಿಯನ್ನು ನೀಡಿರುವ ದೇವತೆ ಎಂದರು ತಪ್ಪೆನಿಲ್ಲಾ.

ಚೈತ್ರ ಎಂ.ಎ. ದ್ವಿತೀಯ ವರ್ಷ ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೨

ಸೋಲು ಗೆಲುವಿನ ಜ್ಞಾನದ ಅರಿವು


೨೦ ॥ ಜೀವನದಲ್ಲಿ ಸೋಲನ್ನು ಪಡುವುದು ನಿಶ್ಚಿತ ।

ಹಾಗೆಯೇ ಗೆಲುವನ್ನು ಪಡೆವುದೂ ಸಹ ಖಚಿತ ।

ಇವು ಯಾರೊಂದಿಗಾಗಿದೆ ಎನ್ನುವುದೇ ರಚಿತ ।

ಬಗೆದಾಗ ಈ ಜಗತ್ತು ತಿಳಿಸುವುದೇ ಚರಿತ ॥ ೦೧ ॥


೧೭ ॥ ನೀನು ಚರಿತ್ರೆ ಸೃಷ್ಟಿಸಲು ಬಯಸಿದರೆ  ।

ನಿನಗಿಂತ ಎದುರಾಳಿ ಬಲಾಡ್ಯಾನಿರಲಿ ।

ಅನ್ತಹ ವ್ಯಕ್ತಿಯೊಂದಿಗಿನ ಯುದ್ಧವು । 

ನಿನ್ನೆಸರು ಅಮರಂ ಗೆಲುವಂ ಸೋಲಂ ॥ ೦೨ ॥


೮, ೮, ೧೩ ॥  ಸ್ವಬುದ್ಧಿಯ ಜ್ಞಾನದಿಂದ ।

ಸೋತರೂ ಪರವಾಗಿಲ್ಲ ।

ಪರರ ಕಪಟ ನುಡಿಯ ಶ್ರಮದಿಂದ ॥ 

ಜಯ ಸಾಧಿಸುವ ಹೀನ । 

ಮನುಸತ್ವ ತೋರಬೇಡ ।

ಅಂತಹ ಬದುಕು ಲೋಕಕ್ಕೆ ನಾಶಕರ ॥ ೦೩ ॥


(ಸೂಚನೆ : ಒಂದು ಮತ್ತು ಎರಡನೇ ಪದ್ಯವು ಮಾತ್ರಸಮ ವೃತ್ತದಲ್ಲಿ ಇದ್ದು. ಮೊದಲನೇ ಪದ್ಯವು ಪ್ರತಿ ಚರಣ ೨೦ ಮಾತ್ರೆ. ಎರಡನೇ ಪದ್ಯವು ಪ್ರತಿ ಚರಣ ೧೭ ಮಾತ್ರೆಯನ್ನು ಹೊಂದಿದೆ. ಮೂರನೇ ಪದ್ಯವು ಅಕ್ಷರ ಗಣದ ಷಟ್ಟದಿಯಲ್ಲಿ ಇದ್ದು. ೧,೨ & ೪,೫ ಚರಣ ೮ ಅಕ್ಷರವನ್ನು ಹೊಂದಿದೆ ಹಾಗೂ ೩ & ೬ ಚರಣವು ೧೩ ಅಕ್ಷರವನ್ನು ಹೊಂದಿದೆ.)

ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೨

ತರಗತಿಯಲಿ ತೂಗಡಿಕೆ.

ನಿದ್ದೆಗೆ ಬುದ್ದಿಯೇ ಇಲ್ಲ 

ಕದ್ದು ಕದ್ದು ಬಂದೊಗುವುದು 

ಒದ್ದೆ ಮುಖ ಮಾಡಿದರೂ 

ಇದ್ದಲ್ಲಿಯೆ ಬಂದು ಕರೆಯುವುದು


ಬಿದ್ದೇ ಬಿಟ್ಟೆ ಬೆಂಚಿನ ಮೇಲೆ ಎಲ್ಲಾರೂ ಹೀಗೆಯೆ ಎಂದು 

ಸುತ್ತ ನೋಡಿದರೆ ಸಾಹಸದಿ ತೆರೆಯುವರೆಲ್ಲರೂ ಕಣ್ಣು 

ತರಗತಿಗೆ ಪ್ರಾಧ್ಯಾಪಕರು ಬಂದುದೊಂದೆ ನೆನಪು 

ಮತ್ತವರು ಹೋಗುವಾಗಲೇ ಎಚ್ಚರವಾಗಿ ಕಾಣುವ ಬೆಳಕು


ತಿರುಗುವ ಪ್ಯಾನು ಮಲಗೊ ಮಲಗೆಂದು ಜೊ ಹಾಡುತಿವೆ 

ಕಿಟಕಿಯ ತಂಗಾಳಿಗೆ ಹಾರಾಡೊ ಕ್ಯಾಲೆಂಡರಿನಂತೆಯೆ 

ತೂಗಡಿಕೆಯಲ್ಲಿ ಎಲ್ಲಾರೂ ತೇಲಾಡುತಿರುವರಾದರೂ 

ಆ ಹಲಗೆಯು ಯಕೋ ನನ್ನೊಡಿಯೆ ನಗುವಂತಿದೆ


ತಿಳಿಯದ ಛಂದಸ್ಸು ಪಿರಾಮಿಡ್ಡಿನಂತೆ ಕಂಡರೆ 

ಬರೆಯದಾ ವರದಿಯು ಬರೀ ಬೈಸುತ್ತಲೇ ಇದೆ 

ಗಾರ್ಗಿ ಕಾತ್ಯಾಯಿನಿ ಸಿದ್ದಾಂತಗಳು ನಿಲ್ಲದೆ ಸಾಗಿ 

ಎಲ್ಲವೂ ಗದೆ ಹಿಡಿದು ನಿಂತಂತೆ ಸಾಹಸ ಭೀಮನ ಹಾಗೆ


ಬಿಸಿಲಿತ್ತು ಮಳೆಯಾಯ್ತು ಚಳಿಯಿತ್ತು ಶಖೆಯಾಯ್ತು 

ಹಸಿರಿದೆ ಉಸಿರಿದೆ ಗೆಳೆತನದ ಸವಿ ನೆನಪಿದೆ 

ಮುನಿಸಿದೆ ಮನಸಿದೆ ಮನಸಲ್ಲೆ ಸ್ನೇಹದ ಪ್ರೀತಿ ಇದೆ 

ಮರಳವೀ ದಿನ ಮುಂದೆ ಎಂದೆನಗೆ ತಿಳಿದೂ ಇದೆ


ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೨

ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ 'ಬಣ್ಣದ ವೇಷ'ದ ರಂಗೋಲಿ ವೈಭವ

      ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ೨೦೨೫-೨೬ನೇ ಸಾಲಿನ 'ಯಕ್ಷಮಂಗಳ ಪ್ರಶಸ್ತಿ ಮತ್ತು 'ಯಕ್ಷಮಂಗಳ ಕೃತಿ' ಪ್ರಶಸ್ತಿ ಪ್ರದಾನ ಸಮಾರಂಭವು ೨೦೨೬ರ ಮಾರ್ಚ್ ೭ ರಂದು ಕೇಂದ್ರದ ಸಭಾಂಗಣದಲ್ಲಿ ನಡೆಯಿತು. ಸಂದರ್ಭದಲ್ಲಿ ಕಲಾಮಂದಿರದ ಪ್ರವೇಶ ದ್ವಾರದಲ್ಲಿದ್ದ ಅದ್ಭುತ ಕಲಾಕೃತಿಯೊಂದು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಪ್ರತಿಭಾವಂತ ಕಲಾವಿದರೊಬ್ಬರು ಬಿಡಿಸಿದ ಯಕ್ಷಗಾನದ ಪ್ರಸಿದ್ದ 'ಬಣ್ಣದ ವೇಷ'ದ ರಂಗೋಲಿ ಎಲ್ಲರ ಗಮನ ಸೆಳೆಯಿತು.

      ಈ ರಂಗೋಲಿ ಎಷ್ಟು ನೈಜವಾಗಿತ್ತೆಂದರೆ, ಸಾಕ್ಷಾತ್ ಯಕ್ಷಗಾನ ಕಲಾವಿದನೇ ಅಲ್ಲಿ ನಿಂತು ಅತಿಥಿಗಳನ್ನು ಸ್ವಾಗತಿಸುತ್ತಿದ್ದಾನೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಸಭಾಂಗಣದ ಒಳಗೆ ಪ್ರಶಸ್ತಿ ಪ್ರದಾನ, ಅತಿಥಿ ಗಣ್ಯರ ವಿದ್ವಪೂರ್ಣ ಮತ್ತು ಪ್ರಶಸ್ತಿ ವಿಜೇತರ ಹರ್ಷದ ಭಾಷಣಗಳು ಹಾಗೂ ಯಕ್ಷಗಾನ ಛಾಯಚಿತ್ರಗಳು ಮತ್ತು ಪತ್ರಿಕಾ ವರದಿಗಳ ಪ್ರದರ್ಶನ ನಡೆಯುತ್ತಿದ್ದರೂ, ಪ್ರವೇಶ ದ್ವಾರದಲ್ಲಿದ್ದ ಈ ವರ್ಣರಂಜಿತ ರಂಗೋಲಿ ಮಾತ್ರ ಕಾರ್ಯಕ್ರಮದ ಒಂದು ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

      ಯಕ್ಷಗಾನದಲ್ಲಿ ವೇಷಭೂಷಣ ಮತ್ತು ಮುಖವರ್ಣಿಕೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ಪುರಾಣದ ಕಥೆಗಳನ್ನು ರಂಗದ ಮೇಲೆ ಜೀವಂತಗೊಳಿಸುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿ 'ಬಣ್ಣದ ವೇಷ' ಅತ್ಯಂತ ಆಕರ್ಷಕ ಮತ್ತು ಪ್ರಭಾವಶಾಲಿ ವೇಷ ಪ್ರಕಾರ, 'ಬಣ್ಣದ' ಹೆಸರೇ ಸೂಚಿಸುವಂತೆ ಬಣ್ಣಗಳಿಂದ ತುಂಬಿರುವುದು. ಈ ವೇಷವು ತನ್ನ ಗಾಢವಾದ ಮುಖವರ್ಣಿಕೆ, ಬೃಹತ್ ಕಿರೀಟ ಮತ್ತು ವಿಶಿಷ್ಟ ಆಭರಣಗಳಿಂದ ಗುರುತಿಸಲ್ಪಡುತ್ತದೆ. ಸಾಮಾನ್ಯವಾಗಿ ಶಕ್ತಿಶಾಲಿ ರಾಜರು, ಅಪ್ರತಿಮ ವೀರರು ಅಥವಾ ರಕ್ಕಸ (ರಾಕ್ಷಸ) ಪಾತ್ರಗಳನ್ನು ಬಿಂಬಿಸಲು ಈ ವೇಷವನ್ನು ಬಳಸಲಾಗುತ್ತದೆ. ತೆಂಕು ತಿಟ್ಟು ಮತ್ತು ಬಡಗು ತಿಟ್ಟು ಎರಡರಲ್ಲಿಯೂ ಯಕ್ಷಗಾನ ಪ್ರದರ್ಶನದಲ್ಲಿ ಬಣ್ಣದ ವೇಷಕ್ಕೆ ವಿಶೇಷ ಮೆರುಗು ಇದೆ. ಮುಖದ ಮೇಲಿನ ಗಾಢ ಬಣ್ಣಗಳು ಮತ್ತು ರೇಖೆಗಳು ಕೇವಲ ಅಲಂಕಾರವಲ್ಲ: ಅವು ಆ ಪಾತ್ರದ ಸ್ವಭಾವ, ಭಾವನೆ ಮತ್ತು ಶಕ್ತಿಯನ್ನು ಪ್ರೇಕ್ಷಕರಿಗೆ ಸಂವಹನ ಮಾಡುವ ದೃಶ್ಯ ಮಾಧ್ಯಮಗಳಾಗಿವೆ.

      ಬಣ್ಣದ ವೇಷದ ಮುಖವರ್ಣಿಕೆಯ ಪ್ರತಿಯೊಂದು ಸೂಕ್ಷತೆಯನ್ನು ಅತ್ಯಂತ ತಾಳ್ಮೆ ಮತ್ತು ಸಮರ್ಪಣಾ ಮನೋಭಾವದಿಂದ ಮರುಸೃಷ್ಟಿಸಿದ ಆ ಕಲಾವಿದನಿಗೆ ಹ್ಯಾಟ್ಸ್ ಆಫ್. ರಂಗೋಲಿಯ ಪ್ರತಿ ಬಣ್ಣ, ರೇಖೆ ಮತ್ತು ವಿವರಗಳು ಎಷ್ಟು ನೈಜವಾಗಿ ಮೂಡಿಬಂದಿವೆ ಎಂದರೆ, ಅದು ಯಕ್ಷಗಾನದ ಭವ್ಯತೆ ಮತ್ತು ಸೌಂದರ್ಯವನ್ನು ಅಕ್ಷರಶಃ ಪ್ರತಿಬಿಂಬಿಸುವಂತಿತ್ತು.

      ಭಾರತೀಯ ಪರಂಪರೆಯಲ್ಲಿ ರಂಗೋಲಿ ಎಂಬುದು ಕೇವಲ ಅಲಂಕಾರಿಕ ವಿನ್ಯಾಸವಲ್ಲ. ಅದು ಆತಿಥ್ಯ, ಶುಭಸೂಚಕ ಮತ್ತು ಸಂಭ್ರಮದ ಸಂಕೇತ. ಮನೆಗಳ ಅಥವಾ ಸಾಂಸ್ಕೃತಿಕ ವೇದಿಕೆಗಳ ಮುಂಭಾಗದಲ್ಲಿ ರಂಗೋಲಿ ಬಿಡಿಸುವುದು ಅತಿಥಿಗಳನ್ನು ಗೌರವಿಸುವ ಒಂದು ಸುಂದರ ಸಂಪ್ರದಾಯ. ಈ ಕಾರ್ಯಕ್ರಮದಲ್ಲಿ 'ಬಣ್ಣದ ವೇಷ'ದ ರಂಗೋಲಿಯು ಅದೇ ಸಾಂಸ್ಕೃತಿಕ ರಾಯಭಾರಿಯ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿತು.

      ವಿಶೇಷವೆಂದರೆ, ಈ ಕಾರ್ಯಕ್ರಮವು ಬಣ್ಣಗಳ ಹಬ್ಬವಾದ ಹೋಳಿಯ ಸಂಭ್ರಮದ ನಡುವೆಯೇ ನಡೆಯಿತು. ಈ ವೈವಿಧ್ಯಮಯ ರಂಗೋಲಿಯು ಹೋಳಿಯ ಸಡಗರಕ್ಕೆ ಪೂರಕವಾಗಿತ್ತು. ಭಾರತೀಯ ಸಂಸ್ಕೃತಿಯಲ್ಲಿ ಬಣ್ಣಗಳು ಹಬ್ಬಗಳಿಂದ ಹಿಡಿದು ಪ್ರದರ್ಶಕ ಕಲೆಗಳವರೆಗೆ ಹೇಗೆ ಹಾಸುಹೊಕ್ಕಾಗಿವೆ ಎಂಬುದಕ್ಕೆ ಇದೊಂದು ಸುಂದರ ನಿದರ್ಶನವಾಗಿತ್ತು.

      ಯಕ್ಷಗಾನ ಮತ್ತು ರಂಗೋಲಿ ಎರಡೂ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗಗಳು. ಯಕ್ಷಗಾನವು ಪುರಾಣ, ಸಂಗೀತ ಮತ್ತು ನೃತ್ಯದ ಮೂಲಕ ಕಥೆಗಳನ್ನು ಸಂರಕ್ಷಿಸಿದರೆ, ರಂಗೋಲಿಯು ಜನಪದರ ಕಲಾತ್ಮಕ ಅಭಿವ್ಯಕ್ತಿಯನ್ನು ಪ್ರತಿನಿಧಿಸುತ್ತದೆ. ಇವೆರಡೂ ಕಲೆಗಳು ಸಮಾಗಮಗೊಂಡಾಗ ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತಷ್ಟು ಕಳೆಗಟ್ಟುತ್ತದೆ.

      ಒಟ್ಟಾರೆಯಾಗಿ, ಕಲಾಮಂದಿರದ ಪ್ರವೇಶ ದ್ವಾರದಲ್ಲಿದ್ದ ಆ ರಂಗೋಲಿ ಕೇವಲ ಒಂದು ಚಿತ್ರವಾಗಿರಲಿಲ್ಲ; ಅದು ಜೀವಂತ ಪರಂಪರೆಯಾದ ಯಕ್ಷಗಾನಕ್ಕೆ ಸಲ್ಲಿಸಿದ ಒಂದು ಸುಂದರ ಕಲಾತ್ಮಕ ಗೌರವವಾಗಿತ್ತು.

ಪ್ರೊ. ಪ್ರಶಾಂತ್ ನಾಯ್ಕ್, ಪ್ರಾಧ್ಯಾಪಕರು, ಜೀವಶಾಸ್ತ್ರ ವಿಭಾಗ, ಮಂಗಳೂರು ವಿ.ವಿ.

ಸಂಚಿಕೆ - ೧೨

ರಥ

      ನಾನು ಒಂದು ದಿನ ಮನೆಯಲ್ಲಿ ಸುಮ್ಮನೆ ಕುಳಿತಿದ್ದಾಗ ಕಿವಿಗೆ ಏನೋ ಒಂದು ಶಬ್ದ ವೇಗವಾಗಿ ಬಂದು ಅಪ್ಪಳಿಸಿತು. ಏನೆಂದು ತಿಳಿಯುವ ಕುತೂಹಲದಿಂದ ಮೇಲೆದ್ದು ಮನೆಯಿಂದ ಕಾಲನ್ನು ಹೊರಗೆ ಹಾಕಿದೆ ಮತ್ತೆ ಸ್ವಲ್ಪ ಮುಂದುವರೆದೆ. ಮುಂದೆ ಒಂದು ಮನುಷ್ಯ ಆಕೃತಿ ಮುಂದೆ ಬಂತು ಅವನನ್ನು ಕೇಳಿದೆ.

ನಾನು : ಏನದು?

ಮನುಷ್ಯ ಆಕೃತಿ : ಯಾರೋ ಸ್ವಾಮಿಗಳು ನಮ್ಮೂರಿಗೆ ಪ್ರವಚನ ಕೊಡಲು ಬಂದಿದ್ದಾರೆ. ಅವರು ಐದು ದಿನ ಪ್ರವಚನ ಮಾಡಿ ಮನೆಮನೆಗೆ ಹಣವನ್ನು ಕೇಳಲು ಬರುತ್ತಾರಂತೆ. ಅವರ ಮಠದಲ್ಲಿ ಒಂದು ನೂತನ ರಥ ಮಾಡುತ್ತಿದ್ದಾರಂತೆ.

ನಾನು : ನಾನು.. ಓ, ಹೌದಾ? ಒಳ್ಳೆಯ ಕೆಲಸ ಮಾಡಲಿ. ಜನರು ಟಿವಿ ಮೊಬೈಲ್ ನಂತಹ ಮಾಧ್ಯಯಮಗಳಿಗೆ ಮೊರೆ ಹೋಗಿ ಆಧ್ಯಾತ್ಮದ ಕಡೆಗೆ ಹೋಗುವುದನ್ನು ಬಿಟ್ಟಿದ್ದಾರೆ. (ಹಾಗೆ ನಾನು ಸ್ವಲ್ಪ ಕೇಳುವ ಎಂದು ಮುಂದೆ ಹೋದೆ. ನಮ್ಮೂರಿನಲ್ಲಿ ಹೊಸದೊಂದು ಆನೆಯಾಕಾರದ ಒಂದು ದೊಡ್ಡ ಕಾರು ಖಂಡಿತು. ಅದು ಯಾರದ್ದು ಎಂದು ನೋಡುತ್ತಿದ್ದಾಗ ನನ್ನ ಸಹಪಾಠಿ ರಾಕೇಶ್ ಆಗಮಿಸಿದ. ಅವನ ಮುಂದೆ ಹೇಳಿದೆ ಇದು ಸ್ವಾಮಿಗಳ ಕಾರಂತೆ.)

ರಾಕೇಶ್ : ಹೌದು

ನಾನು : ಇದರ ಬೆಲೆ ಎಷ್ಟಿರಬಹುದು (ಎಂದು ಕೇಳಿದೆ).

ರಾಕೇಶ್ : (ಮೊಬೈಲ್ ನೋಡಿ) ೨೧ ಲಕ್ಷ (ನನಗೆ ಆಶ್ಚರ್ಯವಾಯಿತು. ಸ್ವಲ್ಪ ಮುಂದೆ ಬಂದಾಗ ಅಲ್ಲಿದ್ದ ಕೆಲ ಜನರು ಮಾತನಾಡುತ್ತಿದ್ದರು. ಒಂದು ರಥ ಮಾಡಲಿಕ್ಕೆ ಹದಿನೈದು ಲಕ್ಷ ಬೇಕಂತೆ ಅದಕ್ಕೆ ಊರೂರು ತಿರುಗಿ ಕಷ್ಟಪಡುತ್ತಿದ್ದಾರೆ ಸ್ವಾಮಿಗಳು ಎಂದರು. )

ನಾನು : ಅವರೇಕೆ ಕಷ್ಟಪಡಬೇಕು.

ಜನರು : ರಥ ಮಾಡಬೇಕಲ್ಲ ಅದಕ್ಕೆ ದುಡ್ಡು ಕೊಡಿಸಬೇಕಲ್ಲ.

ನಾನು : ಅವರು ಊರೂರು ತಿರುಗಬೇಕಾಗಿಲ್ಲ. ಕಷ್ಟಪಡಲುಬೇಕಾಗಿಲ್ಲ.

ಜನರು : ಮತ್ತೆ ಹೇಗೆ ರಥ ಮಾಡಬೇಕು.

ನಾನು : ಅವರ ಹತ್ತಿರ ಇರುವ ಕಾರು ಎಷ್ಟು ಬೆಲೆಯದ್ದು ಎಂದು ಗೊತ್ತಾ ನಿಮಗೆ

ಜನರು : ಗೊತ್ತಿಲ್ಲ.

ನಾನು : ೨೧ ಲಕ್ಷ,

ಜನರು : ಅದಕ್ಕೆ ಏನಾಯಿತು.

ನಾನು : ರಥ ಮಾಡಿಸಲಿಕ್ಕೆ ಎಷ್ಟು ಹಣ ಬೇಕು

ಜನರು : ೧೫ ಲಕ್ಷ

ನಾನು : ಅವರ ಕಾರು ೨೦ ಲಕ್ಷ ಬೆಲೆ ಇದೆ. ಅದನ್ನ ಈಗ ಮಾರಿದರೂ ೧೮ ಲಕ್ಷಕ್ಕೆ ಹೋಗಬಹುದಾದಂತ ಕಾರು. ಅದನ್ನು ಮಾರಿ ರಥ ಮಾಡಿಸಿದರೆ ಆದಿತಲ್ಲ. ನಂತರ ಹಣವಿದ್ದರೆ ಅಥವಾ ಯಾರಾದರೂ ಭಕ್ತರು ಕೊಡಿಸಿದರೆ ತೆಗೆದುಕೊಳ್ಳಬಹುದು ಕಾರನ್ನು

ಜನರು : ಅವರಿಗೆ ಓಡಾಡಲು ಬೇಡವೇ ಕಾರು.

ನಾನು : ಅಷ್ಟು ದೊಡ್ಡ ಕಾರೆ ಆಗಬೇಕೆ? ೨ ಲಕ್ಷ ಕಾರು ಆದರೆ ಸಾಲದೇ,

ಜನರು : ಅವರಿಗೂ ಆಸೆ. ದೊಡ್ಡ ಕಾರಿನಲ್ಲಿ ಓಡಾಡಬೇಕು ಎಂದು.

ನಾನು : ಒಬ್ಬ ಸನ್ಯಾಸಿ ಆಗಬೇಕಾದರೆ ಮೊದಲು ಆಸೆ ಬಿಡಬೇಕು. ನಂತರ ಅರಿಷಡ್ ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ತರ್ಯಾದಿಗಳನ್ನು ಮೀರಬೇಕು. ಆಗ ಸ್ವಾಮಿಯಾಗಲು ಸಾಧ್ಯ.

ಜನರು : ನೀನು ಏನೇನೋ ಹೇಳುತ್ತೀಯಾ, ಸ್ವಲ್ಪ ಓದಿಕೊಂಡಿದ್ದೇನೆ ಎಂಬ ಹಮ್ಮು ನಿನಗೆ.

ನಾನು : ಹಾಗಲ್ಲ ಸ್ವಲ್ಪ ವಿಚಾರ ಮಾಡಿ ನೋಡಿ. ಸ್ವಾಮಿಯಾಗುವುದು ದೊಡ್ಡ ಕಾರಿನಲ್ಲಿ ಓಡಾಡುವುದಕಲ್ಲ, ಸಮಾಜ ಸುಧಾರಿಸಲು. ಅದಕ್ಕೆ...

ಜನರು : ಅಂದ್ರೆ

ನಾನು : ಅಷ್ಟು ದೊಡ್ಡ ಕಾರನ್ನು ಇಟ್ಟುಕೊಂಡು, ರಥಕ್ಕೆ ೧೫ ಲಕ್ಷಕ್ಕೆ ಓಡಾಡಿದರೆ ಕಾಲಿನಲ್ಲಿ ಬಂಗಾರದ ಚಪ್ಪಲಿ ಹಾಕಿಕೊಂಡು ಮೈ ಮೇಲೆ ಹೊದ್ದುಕೊಳ್ಳಲು ಬಟ್ಟೆಗೆ ಭಿಕ್ಷೆ ಬೇಡಿದಂತೆ. ಸನ್ಯಾಸಿಯಾದವನಿಗೆ ಆಸೆ ಇರಕೂಡದು. ಹಾಗಿದ್ದರೆ ಈ ಹಿಂದೆ ಆಗಿ ಹೋದಂತಹ ಪವಾಡ ಪುರುಷರು, ಶಿವಶರಣರುಗಳೆಲ್ಲ. ಬಸವಣ್ಣಾದಿಗಳೆಲ್ಲ. ಉಪ್ಪರಗಿಯಲ್ಲಿ ಚಿನ್ನದ ರಥದಲ್ಲಿ ಓಡಾಡಬೇಕಾಗಿತ್ತು. ಬರಿ ಕಾಲಲ್ಲಿ ಸಂಚಾರ ಮಾಡುವ ಹಾಗೆ ಇರುತ್ತಿರಲಿಲ್ಲ. ಶಿಶುನಾಳ ಶರೀಫರು. ಗುರು ಗೋವಿಂದ ಭಟ್ಟರು, ಗರಗದ ಮಡಿವಾಳಪ್ಪನವರು, ಬೇಕಾದ ಹಾಗೆ ಜೀವನ ನಡೆಸಬಹುದಿತ್ತು. ಕಣ್ಣಿನಿಂದ ಮನಸ್ಸು ಸೋತಿತು ಎಂದು ತನ್ನ ಕಣ್ಣನ್ನು ತಾನೇ ಕೈಯಾರ ಕಳೆದುಕೊಳ್ಳುತ್ತಿರಲಿಲ್ಲ. ಬದಲಾಗಿ ಹೀಗೆ ಆಸೆ ಇದ್ದರೆ ಅವರು ಕುದುರೆಯ ಸಾರೋಟದಲ್ಲಿ ಓಡಾಡುತ್ತಿದ್ದರು. (ಎಂದೇ ಅದಕ್ಕೆ ಅವರು ಬೆಪ್ಪಾದರೂ ನಾನು ಸುಮ್ಮನೆ ಮುಂದೆ ಹೋದೆ.)

ರವಿ ಆ. ಮ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...