ಸೋಮವಾರ, ಮಾರ್ಚ್ 30, 2026

ಸಂಚಿಕೆ - ೧೪

ಬ್ರಹ್ಮಗಲ್ಲು

      ತ್ರಿಮೂರ್ತಿಗಳಲ್ಲಿ ಒಬ್ಬರಾದ ಬ್ರಹ್ಮ ದೇವರಿಗೆ ಎಲ್ಲೂ ಕೂಡ ಪೂಜೆ ಇಲ್ಲ ಎನ್ನುವುದನ್ನು ನಾವು ಸಾಕಷ್ಟು ಕಡೆಗಳಲ್ಲಿ ಕೇಳಿರುತ್ತೇವೆ. ಆದರೆ ಬ್ರಹ್ಮನೆ ಊರಲ್ಲಿ ಮೊದಲು ಪೂಜೆಗೊಳ್ಳುವ ಪರಿ ನಮ್ಮ ಸೀಮೆಯಲ್ಲಿದೆ. ಹೌದು ಹಲವಾರು ಕಡೆಗಳಲ್ಲಿ ಹಲವಾರು ಹೆಸರು ಮತ್ತು ಹಲವು ರೂಪಗಳಲ್ಲಿ ಬ್ರಹ್ಮ ದೇವ ಪೂಜೆಗೊಳ್ಳುತ್ತಾನೆ. ಯಾವುದೇ ಒಂದು ಊರು ತನ್ನ ಅಸ್ತಿತ್ವವನ್ನು ಪಡೆಯುವುದು ಅವನಿಂದಲೇ.

      ನಮ್ಮ ಸೀಮೆಯಲ್ಲಿ ಪ್ರತೀ ಊರುಗಳಲ್ಲಿ ಪೂಜಿಸಲ್ಪಡುವ ಬ್ರಹ್ಮನಿಗೆ ಬುಡ್ಡೆಕಲ್ಲು, ಬ್ರಹ್ಮಗಲ್ಲು. ಆಗಸೆಗಲ್ಲು. ಮುಂತಾದ ಹೆಸರುಗಳಿಂದ ಕರೆಯುವರು. ಒಂದು ಊರಿನ ಉಗಮದೊಂದಿಗೆ ಪ್ರತಿಷ್ಠಾಪಿಸಲ್ಪಡುವ ಈ ಬ್ರಹ್ಮಗಲ್ಲು ಊರಿನ ಮುಖ್ಯ ಬಾಗಿಲಾದ ಅಗಸೆ ಕಟ್ಟೆಯತ್ತಿರ ಇರುತ್ತದೆ ಇದು ಊರಿನ ಕಾಲವನ್ನು ತಿಳಿಸುವ ಒಂದು ಆಧಾರವೂ ಆಗಿದೆ. "ಊರೆಲ್ಲ ತಿರುಗಿ ಊರ್ ಬುಡ್ಡೆಕಲ್ಲು ನೋಡಿಲ್ಲಂದ್ರಂತ" ಎನ್ನುವ ಮಾತಿದೆ ಅಂದ್ರೆ ಬ್ರಹ್ಮಗಲ್ಲು ನೋಡದೆ ಇಡಿ ಊರು ತಿರುಗಿ ನೋಡಿದರೂ ಕೂಡ ಅದು ವ್ಯರ್ಥ ಎಂದರ್ಥ. ಯಾವುದೇ ಊರು ನೋಡುವ ಮೊದಲು ಆ ಊರಿನ ಬ್ರಹ್ಮಗಲ್ಲನ್ನು ಮೊದಲು ನೋಡಬೇಕೆಂಬ ವಾಡಿಕೆ ಇದೆ.

      ಬ್ರಹ್ಮಗಲ್ಲು ಪ್ರತಿಷ್ಠಾಪಿಸಲು ಕಾರಣ ಸೃಷ್ಟಿಕರ್ತನಾದ ಬ್ರಹ್ಮನು ಊರನ್ನು ರೋಗಗಳಿಂದ ಮುಕ್ತ ಮಾಡುವನು. ಊರಿಗೆ ಶಾಂತಿ ನೆಮ್ಮದಿಯನ್ನು ನೀಡುತ್ತಾ ಊರಿನ ಬೆಳೆಗಳನ್ನು ರಕ್ಷಿಸುವನು ಎಂಬ ನಂಬಿಕೆಗಳಿವೆ. ಹಾಗೆಯೆ ಊರಿನ ಹೆಣ್ಣು ಮಕ್ಕಳು ಉಡಿಯಕ್ಕಿಯ ಒಂದು ಹಿಡಿ ಬ್ರಹ್ಮ ಗಲ್ಲಿಗೆ ಹಾಕುವ ಪದ್ಧತಿ ಇದೆ, ಮುಂದುವರಿದು ಬ್ರಹ್ಮ ಗಲ್ಲಿಗೆ ದೀಪದೆಣ್ಣೆಯನ್ನು ಹಾಕುವ ಪದ್ದತಿ ಇದೆ. ಇದು ಬ್ರಹ್ಮನನ್ನು ಶಾಂತಿಯಿಂದಿರಿಸಿ ಅವನೂ ಊರನ್ನು ಶಾಂತಿಯಿಂದಿರಿಸುವನು ಮತ್ತು ತನ್ನ ತಲೆ ತಂಪಾಗಿದ್ದರೆ ಊರು ತಂಪಾಗಿರುವುದು, ಮತ್ತು ಬಿಸಿಲಿನ ಬೇಗೆಯಿಂದ ಕಾಯುವನೆಂಬ ನಂಬಿಕೆ ಇದೆ. ಒಟ್ಟಾರೆಯಾಗಿ ಈ ಬ್ರಹ್ಮಗಲ್ಲು (ಬುಡ್ಡೆಕಲ್ಲು) ಇಲ್ಲದ ಊರು ಊರೆ ಅಲ್ಲ ಅದು ಅಪೂರ್ಣವಾದ ಊರು. ಯಾವುದೆ ಒಂದು ಊರು ಅಸ್ತಿತ್ವವನ್ನು ಪಡೆದು ಪರಿಪೂರ್ಣ ಊರಾಗಲು ಬ್ರಹ್ಮಗಲ್ಲು ಬಹು ಮುಖ್ಯ ಮತ್ತು ಇತರೆ ದೇವತೆಗಳಂತೆ ಇವನಿಗೆ ಗುಡಿ ಗೋಪುರಗಳಿಲ್ಲ ಇಡೀ ಊರು ಜನರು ಓಡಾಡುವ ಮುಖ್ಯರಸ್ತೆಯ ನಡುವೆ ಇರುತ್ತಾನೆ ಸಣ್ಣ ಒಂದು ಕಟ್ಟೆಯೂ ಕೂಡ ಇವನಿಗೆ ಇರುವುದಿಲ್ಲ ಮುಖ್ಯವಾದ ನಡು ರಸ್ತೆಯೆ ಇವನ ಆಲಯವಾಗಿರುತ್ತದೆ ಒಟ್ಟಿನಲ್ಲಿ ಈ ಬ್ರಹ್ಮಗಲ್ಲಿಂದಲೇ ಊರಿನ ಪರಿಪೂರ್ಣತೆ ಸಾಧ್ಯವೆಂಬ ಗಾಢವಾದ ನಂಬಿಕೆಗಳುಂಟು.

ಮರಿಸಿದ್ದಪ್ಪ, ಎಂ.ಎ. ದ್ವೀತಿಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...