ಸೋಮವಾರ, ನವೆಂಬರ್ 17, 2025

ಸಂಚಿಕೆ - ೦೪

 ಸಂಪಾದಕೀಯ


“ವಿದ್ಯಾರ್ಥಿಗಳು ತಪ್ಪಿಲ್ಲದೆ ಬರವಣಿಗೆ - ಇಂದಿನ ಅಗತ್ಯ, ನಾಳೆಯ ಸಾಮರ್ಥ್ಯ"

     ಬರವಣಿಗೆ ಎಂದರೆ ಕೇವಲ ಅಕ್ಷರಗಳನ್ನು ಸರಿಸುಮಾರು ಜೋಡಿಸುವ ಕೌಶಲವಲ್ಲ. ಅದು ವ್ಯಕ್ತಿಯ ಚಿಂತನೆಗೆ. ಸಂವಹನಕ್ಕೆ ಮತ್ತು ವ್ಯಕ್ತಿತ್ವಕ್ಕೆ ರೂಪ ನೀಡುವ ಅತ್ಯಂತ ಮುಖ್ಯ ಸಾಧನ. ವಿಶೇಷವಾಗಿ ವಿದ್ಯಾರ್ಥಿ ಜೀವನದಲ್ಲಿ ತಪ್ಪಿಲ್ಲದ ಬರವಣಿಗೆ ಒಂದು ಶಿಸ್ತಿನಂತೆ, ಒಂದು ಅಭ್ಯಾಸದಂತೆ ಬೆಳೆಸಿಕೊಳ್ಳಬೇಕಾದ ನೈಪುಣ್ಯ

     ಇಂದಿನ ಯುಗದಲ್ಲಿ ಶಿಕ್ಷಕರು, ಸ್ನೇಹಿತರು ಅಥವಾ ಪೋಷಕರು ನಮಗೆ ಮನವರಿಕೆ ಮಾಡಿಕೊಳ್ಳುವ ಅನೇಕ ವಿಚಾರಗಳ ಮೂಲ ಬರವಣಿಗೆ. ತರಗತಿಯಲ್ಲಿ ತೆಗೆದುಕೊಳ್ಳುವ ನೋಟ್ಸ್, ಪರೀಕ್ಷೆಯಲ್ಲಿ ಉತ್ತರ ಪತ್ರಿಕೆ. ಯೋಜನೆ ವರದಿ, ಅಥವಾ ಭವಿಷ್ಯದಲ್ಲಿ ಬರೆಯಬೇಕಾದ ಅರ್ಜಿ-ಎಲ್ಲವೂ ನಿಖರತೆಯನ್ನು ಬೇಡುವ ಕೆಲಸಗಳೇ. ಒಂದು ಅಕ್ಷರದ ತಪ್ಪು ಅರ್ಥ ಬದಲಾಗಿಸಬಲ್ಲದು. ಒಂದು ವ್ಯಾಕರಣದ ದೋಷವೂ ಆತ್ಮವಿಶ್ವಾಸ ಕುಗ್ಗಿಸಬಲ್ಲದು. ಆದ್ದರಿಂದ ತಪ್ಪಿಲ್ಲದೆ ಬರೆಯುವ ಅಭ್ಯಾಸ, ವಿದ್ಯಾರ್ಥಿಯ ಬೌದ್ಧಿಕ ಬೆಳವಣಿಗೆಯಷ್ಟೇ ಅಲ್ಲ, ಅವನ ಪ್ರತಿಷ್ಠೆಯ ಪ್ರತಿಯೂ ಆಗುತ್ತದೆ.

      ತಪ್ಪಿಲ್ಲದ ಬರವಣಿಗೆ ಮನಸ್ಸನ್ನು ಕೇಂದ್ರೀಕೃತಗೊಳಿಸಲು ಸಹಾಯ ಮಾಡುತ್ತದೆ. ಅಕ್ಷರದ ಸರಿಯಾದ ರೂಪ, ಪದದ ನಿಖರ ಅರ್ಥ, ವಾಕ್ಯದ ಸರಾಗ ಹರಿವು ಇವೆಲ್ಲವೂ ವಿದ್ಯಾರ್ಥಿಯನ್ನು ತಾಳ್ಮೆಯತ್ತ, ಶಿಸ್ತಿನತ್ತ, ಅಧ್ಯಯನದತ್ತ ನಡುಗಿಸುವುದಿಲ್ಲ; ಬದಲಿಗೆ ಆಕರ್ಷಿಸುತ್ತವೆ. ಬರವಣಿಗೆಯ ಶುದ್ಧತೆ, ಅವನ ಚಿಂತನೆಯ ಶುದ್ಧತೆಯನ್ನೂ ಪ್ರತಿಬಿಂಬಿಸುತ್ತದೆ. ಇನ್ನುಮುಂದೆ. ಡಿಜಿಟಲ್ ಕಾಲದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಕೀಬೋರ್ಡ್‌ಗಳ ಮೇಲೆ ಅವಲಂಬಿತವಾಗುತ್ತಿರುವಾಗ, ತಪ್ಪಿಲ್ಲದ ಪಾಠಗಳು, ಬರಹಗಳು ಮತ್ತಷ್ಟು ಅನಿವಾರ್ಯ, Auto correct ಗೆ ತಲೆಕೆಡಿಸದೇ, ಸ್ವತಃ ಸರಿಯಾಗಿ ಬರೆಯುವ ಸಾಮರ್ಥ್ಯವೇ ಭವಿಷ್ಯದ ವೃತ್ತಿ ಜೀವನದಲ್ಲಿ ಗೌರವ ತಂದುಕೊಡುತ್ತದೆ.

      ವಿದ್ಯಾರ್ಥಿಗಳೇ, ತಪ್ಪಿಲ್ಲದೆ ಬರೆಯುವುದು ಹೊಣೆಗಾರಿಕೆ ಮಾತ್ರವಲ್ಲ ಅದು ನಿಮ್ಮ ಪ್ರತಿಭೆಯ ಚಿಹ್ನೆ, ನಿಮ್ಮ ಚಿಂತನೆಗಳು ಎಷ್ಟು ಆಳವಾದರೂ, ಅವನ್ನು ಶುದ್ಧವಾಗಿ, ಸರಿಯಾಗಿ, ಚಂದವಾಗಿ ಬರೆಯದೇ ಹೋಗಿದರೆ ಆ ಚಿಂತನೆಗಳು ತಮ್ಮ ಮೌಲ್ಯ ಕಳೆದುಕೊಳ್ಳುತ್ತವೆ. ಆದ್ದರಿಂದ ಪ್ರತಿದಿನ ಒಂದು ಸಣ್ಣ ಪ್ಯಾರಾಗ್ರಾಫ್ ಬರೆಯಿರಿ. ಹೊಸ ಪದಗಳನ್ನು ಹುಡುಕುವ ಪ್ರಯತ್ನ ಮಾಡಿರಿ. ವ್ಯಾಕರಣದ ಅಲ್ಪವಿರಾಮಕ್ಕೂ ಗೌರವ ಕೊಡಿ. ಇಂದಿನ ಈ ಅಭ್ಯಾಸ. ನಾಳೆ ನಿಮ್ಮ ವ್ಯಕ್ತಿತ್ವವನ್ನು ಕಟ್ಟುವ ಕಂಬವಾಗುತ್ತದೆ.

ಉಪ ಸಂಪಾದಕ, ಬಿತ್ತಿ ಸಂಪಾದನ ಮಂಡಳಿ

ಸಂಚಿಕೆ - ೦೪

ಚರಗದ ದಿನ

      ಚರಗ ಎನ್ನುವ ಪದವನ್ನು ಕೇಳಿದರೆ ಇದೇನು ವಿಚಿತ್ರ ಪದ ಎನಿಸಬಹುದು. ಆದರೆ ಇದು ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಕಂಡುಬರುವ ಒಂದು ವಿಶೇಷ ಆಚರಣೆ.

      ಚರಗದ ದಿನ ಅಂದರೆ ಸೀಗೆ ಹುಣ್ಣಿಮೆಯ ದಿನ ಮತ್ತು ಮಹರ್ಷಿ ವಾಲ್ಮೀಕಿಯ ಜಯಂತಿಯ ದಿನವಾಗಿದೆ. ಈ ಭಾಗಗಳಲ್ಲಿ ಇದೊಂದು ಹಬ್ಬ, ಹಿಂದಿನ ದಿನದಿಂದಲೇ ತಯಾರಿ ಪ್ರಾರಂಭಿಸುತ್ತಾರೆ. ಚರಗದ ದಿನವು ಈ ಭಾಗದ ರೈತರು ತಾವು ಬೆಳೆದ ಬೆಳೆಗೆ ವಿಧವಿಧವಾದ ಅಡುಗೆ ಮಾಡಿ ನೈವೇದ್ಯ ನೀಡುವ ದಿನವಾಗಿದೆ. ಹಿಂದಿನ ದಿನದಿಂದ ಪ್ರಾರಂಭಿಸಿ ಮನೆಯ ಹೆಣ್ಣುಮಕ್ಕಳು ಪೂರ್ತಿ ರಾತ್ರಿ ವಿಧವಿಧವಾದ ಅಡುಗೆ ಮಾಡುತ್ತಾರೆ. ಕರ್ಚಿಕಾಯಿ, ಎಣ್ಣೆಹೊಳಿಗೆ, ಕಡಬು, ವಡೆ, ಜೋಳದ ಕಡಬು, ಪುಂಡಿಪಲ್ಯ, ಐದು ವಿಧದ ತರಕಾರಿ ಪಲ್ಯ ಅದರಲ್ಲೂ ಮುಖ್ಯವಾಗಿ ಕುಂಬಳಕಾಯಿ ಪಲ್ಯ ಸೇರಿಸುತ್ತಾರೆ (ಏಕೆಂದರೆ ಕುಂಬಳಕಾಯಿ ದೃಷ್ಟಿ ತೆಗೆಯುವ ಸಂಕೇತವಾಗಿದೆ) ಮತ್ತು ಅನ್ನ ಇಷ್ಟು ವಿಧದ ಅಡುಗೆಯನ್ನು ಸೂರ್ಯೋದಯ ಆಗುವಷ್ಟರಲ್ಲಿ ಮಾಡಿರುತ್ತಾರೆ. ಸೂರ್ಯೋದಯದ ನಂತರ ಎಲ್ಲರೂ ಸಡಗರದಿಂದ ತಯಾರಾಗಿ ಎಲ್ಲಾ ಅಡುಗೆಗಳನ್ನು ಬುತ್ತಿಯಲ್ಲಿ ಕಟ್ಟಿಕೊಂಡು ಊರಿನ ಎಲ್ಲಾ ದೇವಸ್ಥಾನಗಳಿಗೂ ನೈವೇದ್ಯ ನೀಡಿ ಹೊಲಕ್ಕೆ (ಗದ್ದೆ) ಹೋಗುತ್ತಾರೆ.

      ಹೊಲದಲ್ಲಿ ಐದು ವಿಧದ ಕಲ್ಲನ್ನು ಹುಡುಕಿ ರೈತರು ತಾವು ಬೆಳೆದ ಬೆಳೆಯ ಮಧ್ಯದ ಭಾಗದಲ್ಲಿ ಅವುಗಳನ್ನು ಇಟ್ಟು ಸುಣ್ಣ, ಕ್ಯಾಮೆ, ಕುಂಕುಮ, ಭಂಡಾರದಿಂದ ಪೂಜಿಸಿ ನೈವೇದ್ಯ ಮಾಡುತ್ತಾರೆ. ಅದನ್ನು ತೆಗೆದುಕೊಂಡು ಪ್ರತಿಯೊಂದು ದಿಕ್ಕಿಗೂ ಹೋಗಿ 'ಸೂರಗೋ. ಸೂಲಾಂಭರಗೋ ಸೂರಗೋ, ಸೂಲಾಂಭರಗೋ" ಎಂದು ಕೂಗುತ್ತಾ ಎಲ್ಲ ದೇವತೆಗಳಿಗೂ ನೈವೇದ ಅರ್ಪಿಸುತ್ತಾರೆ. ತಾವು ಬೆಳೆದ ಬೆಳೆ ಒಳ್ಳೆಯ ಫಸಲು ಕೊಡಲಿ ಎಂದು ಬೇಡುತ್ತಾರೆ. ತಾವು ಬೆಳೆದ ಬೆಳೆಗೂ ಮತ್ತು ತಮ್ಮ ಕೃಷಿ ಭೂಮಿಗೂ ಈ ಭಾಗದ ರೈತರು ಹಿಂದಿನಿಂದಲೂ ಮಾಡಿಕೊಂಡು ಬಂದಿರುವ ವಿಶೇಷ ಆಚರಣೆಯಾಗಿದೆ. ಇದನ್ನು ನಾವು ಉತ್ತರ ಕರ್ನಾಟಕ ಭಾಗಗಳಲ್ಲಿ "ಚರಗದ ದಿನ" ಎಂದು ಕರೆಯುತ್ತೇವೆ.

ಸುಜಾತಾ, ಗಿ, ಪೂಜೇರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೪

ಪುಸ್ತಕ ವಿಮರ್ಶೆ

ಪುಸ್ತಕದ ಹೆಸರು : ಗೌರ್ಮೆಂಟ್ ಬ್ರಾಹ್ಮಣ

ಲೇಖಕರು : ಅರವಿಂದ ಮಾಲಗತ್ತಿ 

      ಕನ್ನಡ ಸಾಹಿತ್ಯ ಲೋಕದ ಒಂದು ಗಮನಾರ್ಹವಾದ ಹೆಸರೆಂದರೆ ಡಾ. ಅರವಿಂದ ಮಾಲಗತ್ತಿಯವರದ್ದು, ಅವರ ಬದುಕು ಮತ್ತು ಸಾಹಿತ್ಯ ಸ್ವರೂಪ ವಿಶಿಷ್ಟವಾದದ್ದು. ಗ್ರಾಮೀಣ ಪರಿಸರದ ಮಾಲಗತ್ತಿ ಅವರ ಬದುಕು ಗ್ರಾಮೀಣ ಸೊಗಡಿನ ಆಟ - ಕಲಿಕೆಗಳಿಂದಲೂ ಬೆರೆತಿದೆ. ಇವರು ಬದುಕಿ ಬಾಳಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಗತಿಗಳು ಅವರೊಳಗೆ ಸೇರಿಸುವ ಎಲ್ಲಾ ಮೌಲ್ಯಗಳನ್ನು ಹೊರ ಹಾಕುತ್ತದೆ ಎನ್ನಬಹುದು. "ಗೌರ್ಮೆಂಟ್ ಬ್ರಾಹ್ಮಣ" ಅರವಿಂದ ಮಾಲಗತ್ತಿಯವರ ಆತ್ಮಚರಿತ್ರಾತ್ಮಕ ಕೃತಿಯಾಗಿದೆ. ಶತಶತಮಾನಗಳಿಂದ ಚತುವರ್ಣದ ಸಂಕೋಲೆಯ ಕಾರಣಕ್ಕಾಗಿ ಮೇಲ್ವರ್ಗದವರು ನಡೆಸುವ ದರ್ಪಕ್ಕೆ ಸಿಲುಕಿದ ದಲಿತ ಜೀವನದ ಕಥೆಯನ್ನು ಈ ಕೃತಿಯಲ್ಲಿ ನೋಡಬಹುದು. ದಲಿತ ಜನಾಂಗದ ಹಸಿವು ಬಡತನ ಅಸ್ಪೃಶ್ಯತೆ, ಸಂಪ್ರದಾಯ, ಆಚರಣೆಯು ವಿಶ್ಲೇಷಣೆ ಆತ್ಮಕಥೆಯಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಇಂತಹ ಆತ್ಮಕಥೆಗಳ ಮೂಲಕ ದಲಿತ ಸಮುದಾಯದ ಜೀವನದ ಸಾರವನ್ನು ಭಟ್ಟಿ ಇಳಿಸಿದ ಪ್ರಮುಖ ಲೇಖಕರಲ್ಲಿ ಮಾಲಗತ್ತಿ ಅವರ ಬರಹ ಉತ್ತಮ ಮೌಲ್ಯಯುತವಾದದ್ದು. ಇವರು ತಮ್ಮ ಆತ್ಮ ಕಥನದಲ್ಲಿ ದಲಿತ ಜನಾಂಗದವರ ಸಂಪೂರ್ಣ ಚಿತ್ರಣವನ್ನು ನೀಡಿದ್ದಾರೆ. ದಲಿತರು ಮೇಲ್ವರ್ಗದವರಿಂದ ತುಳಿತಕ್ಕೆ ಒಳಗಾದ ಬಗ್ಗೆ ಮತ್ತು ಅವರಿಗಾದ ನೋವು ಕಷ್ಟಗಳನ್ನು ಹಂಚಿಕೊಳ್ಳುತ್ತಾರೆ.

      ಆ ಕಾಲದಲ್ಲಿ ದಲಿತರ ಜೀವನ, ಬದುಕು, ಹಸಿವು ಒಂದು ಹೊತ್ತಿನ ಉಟಕ್ಕೂ ಅವರು ಅನುಭವಿಸಿದ ಕಷ್ಟಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಒದಗಿಸುತ್ತಾರೆ. ದಲಿತ ಜಗತ್ತಿಗೆ ಅವಮಾನವೇನು ಅಪರಿಚಿತವಲ್ಲ. ಅವಮಾನದ ಪಟ್ಟಿಯನ್ನು ಮಾಡುತ್ತಾ ಹೋದರೆ ಬಹುಶಃ ಪ್ರತಿಯೊಬ್ಬ ದಲಿತನ ಆತ್ಮಕಥೆಯೂ ವ್ಯಥೆಯ ಕಥೆಯೇ ಆದೀತು. ಈ ಕೃತಿಯು ಇಂತಹ ಅಪಮಾನಗಳ ಸರಣಿಯನ್ನು ಒಂದೊಂದಾಗಿ ಪೋಣಿಸಿ ಕೊಟ್ಟಂತೆ ಮಾನದಂಡಗಳು ನಮ್ಮೆದುರಿಗೆ ಕಾಣುತ್ತೇವೆ. ಯಾವುದೇ ರೀತಿಯಲ್ಲಿ ಮುಜುಗರ ಇಲ್ಲದೆ ತಾವು ಕಂಡಂತಹ ಮತ್ತು ಅನುಭವಿಸಿದ ಸಂಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಇದು ಒಬ್ಬ ವ್ಯಕ್ತಿಯ ಚರಿತ್ರೆಯಲ್ಲ. ಮನುಷ್ಯನ ಹಸಿವನ್ನು, ಹಸಿವೆಂದರಿಯದ ಅವರ ಭಾವನೆಗಳನ್ನು, ಭಾವನೆಗಳೆಂದು ಗುರಿತಿಸಲಾಗದ ಅವರ ಪ್ರೇಮವನ್ನು, ಪ್ರೇಮವೆಂದು ಒಪ್ಪಿಕೊಳ್ಳಲಾಗದ ಸಮಾಜವೊಂದರ ನಂಬಿಕೆ, ಆಚರಣೆಗಳ ಚರಿತ್ರೆಯಾಗಿದೆ.

      ಈ ಕೃತಿಯು ಮುಖ್ಯವಾಗಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಸಾಕಷ್ಟು ಯಶಸ್ಸು ಸಾಧಿಸಿ ಇದು ಹಣ, ರಕ್ತಪಾತ, ಕಾನೂನು, ಸಾಹಿತ್ಯದ ಮೂಲ. ತಾನು ಅನುಭವಿಸಿದಂತಹ ದುಃಖ, ದುಮ್ಮಾನ, ಅಪಮಾನ ಎಲ್ಲವನ್ನು ಬಿಚ್ಚಿಟ್ಟು, ಮನಸ್ಸಿಂದ ಆತ್ಮಚರಿತ್ರೆ ಬರೆಯುವ ಮೂಲಕ ಸಮಾಜದಲ್ಲಿ ಎಲ್ಲಾ ವರ್ಗದ ಜನರ ಮನವನ್ನು ಪರಿವರ್ತನೆಗೊಳಿಸುವುದು ಉತ್ತಮ ಎಂದು ಈ ಕೃತಿ ಸಾರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಈ ಪುಸ್ತಕವು ನನ್ನ ನೆಚ್ಚಿನ ಕೃತಿಯಾಗಿದೆ.

ಪೂಜಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೪

ಭಕ್ತಿ ಪ್ರೇಮದ ನೋಟ

ಅಂಶ ಷಟ್ಟದಿ

ಕುಡಿಯದು ತಿನ್ನದು 

ಜಡಫಣಿ ಶಿವಲಿಂಗ 

ಇಡುವರು ಭಕ್ಷ್ಯ ಭೋಜನ ಹಾಲನ್ನು 

ಕುಡಿಯುವ ತಿನ್ನುವ 

ಬಡಗೂಸು ಮಗುವಿಗೆ 

ಹೊಡೆದು ಬಡೆದು ಅನ್ನಿಕ್ಕದೆ ತಳ್ಳುವರ್ ॥೧॥


ಚಾಡಿಯ ಹೇಳುವೆ 

ಮಾಡುವೆ ಮೋಸವ 

ಬೇಡುವೆ ದೇವರ ಬಳಿ ಪುಣ್ಯವ 

ನುಡಿಯುವೆ ಕಪಟವ 

ನಡೆದೆ ಕುಟಿಲದಲಿ 

ಕೊಡುವೆ ದೇವರ ಮಹಾನೈವೇದ್ಯವ ॥೨॥


ಪ್ರೇಮ ಚಂದ್ರನ ಹಾಗೆ 

ಧರ್ಮ ಸೂರ್ಯನ ಹಾಗೆ 

ಕಾಮ ಗ್ರಹಣದ ಹಾಗೆ ಇರುವುದು 

ಪ್ರೇಮ ಕೋಮತೆಯನ್ನು 

ಧರ್ಮ ಕಾಂತತೆಯನ್ನು 

ಕಾಮಾಂಧದ ಅತೀತಂ ಕೆಡಿಸುವುದು ॥೩॥


ಸಾಂಗತ್ಯ

ಗುಡಿಯನ ಲಿಂಗವು ಜಡಫಣಿ ಬಯಸದೆ 

ನೀಡುವೆ ಹಾಲಂ ಭೋಜನವಂ 

ಕುಡಿಯುವ ತಿನ್ನುವ ಬಡತನದ ಮಗುವು 

ಬೇಡಿದರೂ ಕೊಡ್ಲಿಲ್ಲ ಯರೂಂ ॥೧॥


ಚಾಡಿಯ ಹೇಳುವೆ ನುಡಿಯುವೆ ಕಪಟವ 

ಬೇಡುವೆ ಪುಣ್ಯಂ ದೇವರಲೀ 

ಮಾಡುವೆ ಮೋಸವ ನಡೆದೆ ಕುಟಿಲದಲಿ 

ನೀಡುವೆ ಆಶೀರ್ವಾದವನಂ ॥೨॥


ಪ್ರೇಮ ಚಂದ್ರನ ಹಾಗೆ ಧರ್ಮ ಸೂರ್ಯನ ಹಾಗೆ 

ಕಾಮ ಗ್ರಹಣದಂಗೆ ನೋಡಂ 

ಪ್ರೇಮ ಕೋಮತೆಯನ್ನು ಧರ್ಮ ಕಾಂತತೆಯನ್ನು 

ಕಾಮಾಂಧ ಕೆಡಿಸಿತ್ತು ನೋಡಂ ॥೩॥


ಪ್ರೀತಿ ಪಾಶದಲಿ ಬಂದಿಸಿರುವೆ ನಲ್ಲೆಯ 

ಸೋತಿರುವೆ ಅಹಮ್ಮಿನಲ್ಲಿ 

ನೀತಿ ಮಾರ್ಗದಲ್ಲಿ ನಡೆಯಲು ಪೋಗಿ ಮನದ 

ಭೀತಿಯ ಹೊತ್ತು ನಿಂತಿರುವೆ ॥೪॥


ಅಕ್ಷರಸಮವೃತ್ತ

೨೪ ॥ ಗುಡಿಯನ ಲಿಂಗವು ಜಡಫಣಿ ಬಯಸದೆ ನೀಡುವೆ ಹಾಲಂ ಭೋಜನವಂ | 

         ಕುಡಿಯುವ ತಿನ್ನುವ ಬಡತನದ ಮಗುವು ಬೇಡಿದರೂ ಕೊಡ್ಲಿಲ್ಲ ಯರೂಂ ॥೧॥


೨೩ ॥ ಚಾಡಿಯ ಹೇಳುವೆ ನುಡಿಯುವೆ ಕಪಟವ ಬೇಡುವೆ ಪುಣ್ಯಂ ದೇವರಲೀ | 

         ಮಾಡುವೆ ಮೋಸವ ನಡೆದ ಕುಟಿಲದಲಿ ನೀಡುವೆ ಆಶೀರ್ವಾದವನಂ ॥೨॥


೨೩ ॥ ಪ್ರೇಮ ಚಂದ್ರನ ಹಾಗೆ ಧರ್ಮ ಸೂರ್ಯನ ಹಾಗೆ ಕಾಮ ಗ್ರಹಣದಂಗೆ ನೋಡಂ | 

         ಪ್ರೇಮ ಕೋಮತೆಯನ್ನು ಧರ್ಮ ಕಾಂತತೆಯನ್ನು ಕಾಮಾಂಧ ಕೆಡಿಸಿತ್ತು ನೋಡಂ ॥೩॥


ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೪

ನಾನೆಂದರೆ ಇಷ್ಟೇ

ನೀಲ ಮಾಯೆಯ ನಿತ್ಯರ್ಥ 

ನಿರ್ವಾತ ಮೇಘ ಸಂಘರ್ಷಗಳ ಸಮ್ಮಿಲನದಲಿ 

ಶುದ್ಧತೆಗಳ ಪ್ರಥಮದಲಿ ಪೃಥ್ವಿಯ ಸ್ಪರ್ಶಿಸುವೆ 

ನಾನೆಂದರೆ ಇಷ್ಟೇ


ರೆಂಬೆ ಕೊಂಬೆಯಂತೆ ಪ್ರೀತಿ ಪ್ರೇಮಗಳು 

ಎಂದೂ, ಹೇಗೆ ಮುರಿದು ಬೀಳುವೆವೋ?

ಈ ಸಂಬಂಧಗಳ ವಿಮುಕ್ತ ನಾ, ಹಚ್ಚ ಹಸಿರ ವಿಸ್ತಾರ 

ನಾ ನಾನೆಂದರೆ ಇಷ್ಟೇ


ಹುಡುಕಿ ಹುಡುಕಿ ಸ್ಥಾನ ಪಲ್ಲಟಗಳಿಗೆ ಸೂರ್ತಿ ನಾ. 

ಕೊನೆಯಿರದ ರಸ್ತೆ, ಬೋರ್ಡಿರದ ಬಸ್ಸು 

ಜನಗಳಿರದ ವಸತಿ, ಆತ್ಮವಲೋಕನವೇ ಕಸೂತಿ 

ನಾನೆಂದರೆ ಇಷ್ಟೇ


ನಿತ್ಯ ಪಥದಲಿ ನೀ ನಿನಗೆ ನೂರು ಕವಲುದಾರಿ 

ಮಿಥ್ಯ ವರ್ಣದಲಿ ನಾ ನನಗೆ ಪ್ರೇಮಧಾರಿ 

ಬದುಕ ಭಯವು ಯುಗದ ಯುದ್ಧಕಾಂಡ 

ನಾನೆಂದರೆ ಇಷ್ಟೇ


ಪರಶುರಾಮ್, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೪

ಮುಸ್ಸಂಜೆಯ ಪಯಣ

ಮುಸ್ಸಂಜೆಯ ವೇಳೆಯಲಿ 

ಸುಮ್ಮನೆ ನಾ ಸುತ್ತಾಡಲೆಂದು.

ಹಾದಿಯಲಿ ಕಾಲಿಟ್ಟು 

ಚಲಿಸುತ್ತಿದ್ದೆ ನಾನಂದು..


ಸೂರ್ಯನ ಕಿರಣಗಳು 

ಸ್ಪರ್ಶಿಸಿತು ನನ್ನ ದೇಹವನು. 

ಸಂಜೆಯ ಹೊತ್ತಿನ ಹೂ ಬಿಸಿಲು 

ನಡೆವ ಹಾದಿಗೆ ಕೊಡುತಿತ್ತು ಶೋಭೆಯನು..


ಹೆಜ್ಜೆ ಹಾಕಿದೆ ಮೆಲ್ಲ – ಮೆಲ್ಲನೆ 

ಮನ ಸೆಳೆಯುವ ಬೆಟ್ಟದ ಸಾಲುಗಳು.

ಸೂಕ್ಷ್ಮವಾಗಿ ಗಮನಿಸಿದಾಗ 

ಕಾಣಿಸಿತು ಹಚ್ಚ ಹಸುರಿನ ಅರಣ್ಯಗಳು..


ಗೂಡನು ಸೇರುವ ಸಮಯದಲಿ 

ಹಕ್ಕಿಗಳ ಚಿಲಿಪಿಲಿ ನಾದ ಕೇಳುತ್ತಾ. 

ಬೀಸುವ ತಂಪಾದ ಗಾಳಿಯಲಿ

ಸ್ವಚ್ಚ ಪರಿಸರವ ಆನಂದಿಸುತ್ತಾ..


ಸುತ್ತಲೂ ತುಸು ಹೊತ್ತು ವೀಕ್ಷಿಸಿದೆ 

ರವಿಯು ಮುಳುಗಿ ಆಗಿತ್ತು 

ಕತ್ತಲೆಯು ಇದೆಲ್ಲದರ ಉತ್ತಮ ಅನುಭವದೊಡನೆ ಕಳೆಯಿತು 

ಆ ಸೊಗಸಾದ ಮುಸ್ಸಂಜೆಯು...


ನೇತ್ರಾವತಿ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೪

ಅರ್ಥಪೂರ್ಣ ಸಾಲುಗಳು

ಮುಂದಿನ ಜಗತ್ತು ಯುದ್ಧದ ಜ್ವಾಲೆಯಲ್ಲಿ ಸುಡುತ್ತಿದೆ. 

ನಾವು ಅಸ್ತ್ರಗಳಿಂದಲ್ಲ ಅಕ್ಷರಗಳಿಂದ ಬದುಕನ್ನ ಗೆಲ್ಲಬಹುದು. 

ಹಗೆಗಳಿಂದಲ್ಲ ಪ್ರೀತಿಯಿಂದ ಬದುಕನ್ನ ಅರಳಿಸಬಹುದು.


ಈ ನೆಲದ ಪರಂಪರೆ ನಮಗೆ ಹೇಳುತ್ತೆ.

ಇದು ಸರ್ವಜನಾಂಗದ ಶಾಂತಿಯ ತೋಟವೆಂದು.

ಈ ತೋಟದಲ್ಲಿ ಪ್ರತಿ ಹೂವು 

ತನ್ನ ಬಣ್ಣದಲ್ಲೇ ಅರಳಲಿ 

ತನ್ನ ಸುಗಂಧವನ್ನೇ ಬೀರಲಿ ಪ್ರತಿ ಹಕ್ಕಿ ತನ್ನ ರಾಗದಲ್ಲೇ ಹಾಡಲಿ 

ಆದರೆ ಒಟ್ಟಿಗೆ ಸೇರಿದಾಗ ಅದು 

ಸೌಹಾರ್ದದ ಮೇಳವಾಗಲಿ ಐಕ್ಯತೆಯಾಗಲಿ.


ಪ್ರಜಾಪ್ರಭುತ್ವ ಎನ್ನುವುದು ಒಂದು ವ್ಯವಸ್ಥೆಯಲ್ಲ ಅದೊಂದು ಮೌಲ್ಯ 

ಅದು ಪ್ರತಿಯೊಬ್ಬರ ಧ್ವನಿಯನ್ನು ಗೌರವಿಸುವ ಮನೋಭಾವ 

ಅದು ಬೇರೆಯವರ ಬದುಕಿನಲ್ಲಿ ಅರ್ಥಪೂರ್ಣವಾಗಿ ನಡೆದುಕೊಳ್ಳುವ ಜವಾಬ್ದಾರಿ 

ಅದನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ.


ನಾವೆಲ್ಲರೂ ಒಂದೇ ಗಗನದ ಅಡಿಯ ಪಯಣಿಗರು 

ಆಕಾಶ ಯಾರನ್ನೂ ಬೇರ್ಪಡಿಸುವುದಿಲ್ಲ 

ಭೂಮಿ ಯಾರನ್ನೂ ಹೊರ ತಳ್ಳುವುದಿಲ್ಲ 

ಮನುಷ್ಯ ಮಾತ್ರ ಗಡಿಗಳನ್ನು ಹಾಕುತ್ತಾನೆ 

ಈ ಗಡಿಗಳನ್ನು ನಾವೇ ಅಳಿಸಬೇಕಿದೆ.


ರಚನೆ - ದಸರಾ ೨೦೨೫ ಉದ್ಘಾಟನಾ ಸಂದರ್ಭದಲ್ಲಿ ಬಾನು ಮುಸ್ತಕ್ ಭಾಷಣದಿಂದ ಸಂಗ್ರಹಿಸಲಾದ ಸಾಲುಗಳು


ಸಂಗ್ರಹ - ಅಭಿಷೇಕ್ ವಾಲ್ಮೀಕಿ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೪

ನಿರ್ಧಾರ ತೆಗೆದುಕೊಳ್ಳುವ ಸಿದ್ದಾಂತ

      ರಾಜ್ಯಶಾಸ್ತ್ರ ವಿದ್ಯಾರ್ಥಿಯಾದ ನನಗೆ, ನಿರ್ಧಾರ ತೆಗೆದುಕೊಳ್ಳುವ ಸಿದ್ದಾಂತದ ಬಗ್ಗೆ ವಿವರಿಸುವ ಆಸಕ್ತಿ ನನಗಿಲ್ಲ. ಆದರೂ ನಡೆದ ಕೆಲ ಘಟನೆಗಳು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಬಗ್ಗೆ ನಾಲ್ಕು ಸಾಲು ಬರೆಯುವಂತೆ ಪ್ರೇರೇಪಿಸಿತು. ಪ್ರತಿಯೊಂದು ನಿರ್ಧಾರವನ್ನು ಕೈಗೊಳ್ಳುವ ಮೊದಲು ಸ್ವಲ್ಪ ಯೋಚನೆ ಮಾಡುವುದು ಉತ್ತಮ ಎಂದು ಅನಿಸಿದರೂ, ಕೆಲವೊಮ್ಮೆ ಆಗುವುದೆಲ್ಲವೂ ಒಳ್ಳೆಯದಕ್ಕೆ ಎಂದು ಕಳೆದ ಘಟನೆಗಳ ಬಗ್ಗೆ ಚಿಂತೆ ಮಾಡದೇ ಭವಿಷ್ಯದ ಬಗ್ಗೆ ಯೋಚಿಸಿದರೆ ಉತ್ತಮ ಎಂದು ನನ್ನ ಮನಸು ಒತ್ತಿ ಒತ್ತಿ ಹೇಳುತ್ತಿದೆ. ನಮ್ಮ ಜೀವನದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ನಾವು ಹಲವು ಸಲ ಏಕೆ ಯೋಚನೆ ಮಾಡಬೇಕು? ನಮ್ಮ ಜೀವನದ ನಿರ್ಧಾರ ಇನ್ನೊಬ್ಬರು ಏಕೆ ತೆಗೆದುಕೊಳ್ಳಬೇಕು? ಸಲಹೆಗಳು ಜೀವನಕ್ಕೆ ಬೇಕು ನಿಜ, ಆದರೆ ಸಲಹೆಗಳೇ ಜೀವನ ಆದರೆ ಹೇಗೆ..?

      ಇಷ್ಟು ಪ್ರಶ್ನೆಗಳಿಗೆ ಉತ್ತರ ನಾನು ಬರೆಯುವ ಅವಶ್ಯಕತೆ ಇಲ್ಲಾ, ನೀವು ಯೋಚಿಸಲು ಶುರುಮಾಡಿ, ಉತ್ತರ ನಿಮ್ಮಲ್ಲಿಯೇ ಸಿಗುತ್ತದೆ. ಏನೇ ಇರಲಿ... ಬೇಡ ಎಂದು ಗಟ್ಟಿ ನಿರ್ಧಾರ ಕೈಗೊಳ್ಳುವ ಮುಂಚೆ ಅದೆಷ್ಟೋ ಬಾರಿ ಯೋಚಿಸಬೇಕಾಗುತ್ತದೆ. ಆಗಲೂ ಹೃದಯ ಹಾಗೂ ಅದಕ್ಕೆ ಬುದ್ದಿ ಹೇಳುವ ಮನಸು ಎರಡು ಒಂದೇ ಮಾತು ಹೇಳಿದರೆ. ನನಗೆ ಅದೇ ನಿಜವಾದ ನಿರ್ಧಾರ ತೆಗೆದುಕೊಳ್ಳುವ ಸಿದ್ಧಾಂತ.

ಬಿ. ವಿಖ್ಯಾತ್, ಎಂ.ಎ. ಪ್ರಥಮ ವರ್ಷ, ರಾಜ್ಯಶಾಸ್ತ್ರ ವಿಭಾಗ

ಸಂಚಿಕೆ - ೦೪

ಒಣ ಎಲೆ

ಒಂಟಿ ಭಾವನೆ

ಮೂಡುವಾಗೆಲ್ಲ

ಕಾಡುದಾರಿಯಾಗಿ ಒಮ್ಮೆ

ಸುಮ್ಮನೆ ನಡೆದಾಡಿ ಬಿಡಿ

ಹಸಿರು ಮರದಿಂದ ಒಣಗಿ

ನೆಲದಾಗೆ ಬಿದ್ದು ಕಾಣುವ

ಎಲೆಯೊಂದನ್ನು

ಕೈಯಾರೆ ಹಿಡಿದು

ಮುತ್ತಿಕ್ಕಿ ಬಿಡಿ

ವಸಂತ ಬೇರುಗಳು

ಭೂಮಿಯಡಿ ತಲುಪಿ

ಎಲೆಗಳ ಕಥೆಯನ್ನು

ಹೇಳುವುದು ಕೇಳಿಸಿ ನೋಡಿ 

ಆಗ ಸುರಿಯುವ

ಜಡಿಮಳೆಗೆ ಒದ್ದೆಯಾಗಿ ಮತ್ತೆ

ಯಾತ್ರೆ ಆರಂಭಿಸಿ ನೋಡಿ

ದಾರಿ ಬದಿಯ

ಹೂವಿನ ಗಿಡಗಳ ಪ್ರತಿ ಹೂವು

ಒಂದೊಂದು ಕಥೆಯ

ನಿನ್ನ ಬಳಿ ಹೇಳುತ್ತಾ

ಸಾಗುವುದನ್ನು ನೋಡಿ


ಸಲೀಂ ಸುಳ್ಯ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೪

ಕನಸು

ಕನಸುಗಳು ನಿದ್ದೆಯಲಿ ಕಾಣುವವಲ್ಲ 

ನಿದ್ದೆಯನೇ ಮರೆಸುವವು


ಇಲ್ಲೊಂದು ಪುಟ್ಟ ಹಕ್ಕಿ 

ಮರಿ ರೆಕ್ಕೆಗಳ ಬಿಚ್ಚಿ 

ಹೊರಟಿತ್ತು ಕನಸುಗಳ ಬೆನ್ನೇರಿ


ಸ್ವಚ್ಛಂದ ನೀಲಿ ಆಗಸದಿ ಹಾರಿ 

ಪರ್ವತ ಶಿಖರಗಳೆತ್ತರ ಮೀರಿ 

ಬಾನಂಚಿನ ಮೋಡಗಳ ನಡುವೆ 

ಸಾಗಿತ್ತು ಗುರಿಯೆಡೆಗೆ ಪಯಣ


ಕಣ್ಣುಂಬ ಕನಸುಗಳು 

ಕಣೋಟ ಕೋಲ್ಕಿಂಚು 

ಗಿರಿ ಸಾಗರಗಳ ದಾಟಿ 

ತನಗೆ ತಾನೇ ಸರಿಸಾಟಿ 

ಸಾಗಿತ್ತು ಗುರಿಯೆಡೆಗೆ ಪಯಣ


ಕಾದಿಹರು ಹೊಂಚು ಹಾಕುವ ಜನ 

ಸಂಚು ರೂಪಿಸಿ 

ಬಂಧಿಸಲು ಹಕ್ಕಿಯನು ಪಂಜರದಿ 

ಹಾರುವ ಹಕ್ಕಿಗೆ ಮಾತ್ರ ಕಲಿಸಲು 

ಹಾರುವುದನ್ನೇ ಮರೆಸಲು..


ದಿವ್ಯಶ್ರೀ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೪

 ವೃಕ್ಷಮಾತೆ

ವೃಕ್ಷ ಮಾತೆಯೆ ನಿನಗಿದೊ ಶರಣವ್ವ 

ಅಕ್ಷರ ಕಲಿಯದಿದ್ದರೂ ಅಂಬರಕ್ಕೇರಿದವ್ವ 

ಮೊಕ್ಷವೇ ನಿನ್ನುಡಿಕಿ ಬಂದಿತವ್ವ 

ಶಿಕ್ಷೆಯಾಯಿತು ನಾಡಿನ ಜನಕವ್ವ


ಮಕ್ಕಳು ಇಲ್ಲಾ ಎಂದು ಮರುಗಲಿಲ್ಲ 

ಅಕ್ಕರೆಯಿಂದ ಮರವ ಬೆಳಸಿದಲ್ಲ 

ಹಕ್ಕುದಾರರ ನೀನು ಬಯಸಲಿಲ್ಲ 

ಹೊಕ್ಕಳಿನ ಮಕ್ಕಳವ್ವ ನಾಡು ಎಲ್ಲ


ಕಾಣದಾ ಗಾಳಿಯಲಿ ಯಮದೂತರು ಬಂದು 

ಓಣಿಯಲಿ ಹುಡುಕಿದರು ನಿನ್ನನಿಂದು 

ಆಣೆಯಾ ಕೇಳಿದರು ನೀ ಬರಲೆ ಬೇಕು ಎಂದು 

ಕಾಣದೆ ಅಗಲಿದೆವು ನಿಮ್ಮನಿಂದು


ಕಾಯಿಸದೆ ನಡೆದೆಯವ್ವ 

ತಾಯಿನಾಡಿನ ಉಸಿರವ್ವ 

ತಾಯಿಯರ ತಾಯಿಯವ್ವ 

ತಾಯಿಯು ನೀನು ತಿಮ್ಮವ್ವ


ಮರಿಸಿದ್ದಪ್ಪ ಎಂ.ಎ. ದ್ವಿತೀಯ ವರ್ಷ ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೪

ಮಂಗಳೂರು ವಿವಿ ಕನಕ ಕೀರ್ತನ ಗಂಗೋತ್ರಿ ಉದ್ಘಾಟನೆ

'ಅಹಂ ಬಿಟ್ಟು ಸಾಹಿತ್ಯ ಕೃಷಿ ಮಾಡೋಣ' – ಕೆ. ಎಸ್. ಪವಿತ್ರ

ಮುಡಿಪು : 'ಸಂಗೀತ, ನೃತ್ಯ, ಸಾಹಿತ್ಯ ಇವುಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯ ಸಾಧ್ಯ. ಸಾಹಿತ್ಯ ಕ್ಷೇತ್ರ ಮತ್ತು ಸಮಾಜದಲ್ಲಿ ಪರಸ್ಪರ ಕೊಡು ಕೊಳ್ಳುವಿಕೆ ನಡೆಯದೇ ಇದ್ದರೆ ಅದು ಅಪಾಯಕಾರಿ ಸಂಗತಿ' ಎಂದು ಹೆಸರಾಂತ ಕಲಾವಿದೆ ಡಾ. ಕೆ.ಎಸ್. ಪವಿತ್ರ ಹೇಳಿದರು.

      ಅವರು ಮಂಗಳೂರು ವಿಶ್ವವಿದ್ಯಾನಿಲಯ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ವಿವೇಕ ರೈ ವಿಚಾರ ವೇದಿಕೆಯಲ್ಲಿ ಕನಕ ಜಯಂತಿ ಪ್ರಯುಕ್ತ ನಡೆದ 'ಕನಕ ಕೀರ್ತನ ಗಂಗೋತ್ರಿ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 'ಕನಕದಾಸರ ಕೀರ್ತನೆಗಳಲ್ಲಿ ವೈಚಾರಿಕತೆ, ಭಾವನಾತೀವ್ರತೆ ಇದೆ. ನಾವು ಅಹಂ ಬಿಟ್ಟು ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಕೆಲಸ ಮಾಡದೇ ಇದ್ದರೆ ಸಮಾಜದಲ್ಲಿ ಎಲ್ಲಾ ಬಗೆಯ ಅಸಮಾನತೆ ಸೃಷ್ಟಿಯಾಗುವ ಅಪಾಯವಿದೆ' ಎಂದರು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೊ. ನಾಗಪ್ಪ ಗೌಡ ಆರ್ ಮಾತಾಡಿ, ಕರ್ನಾಟಕ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಬಸವಣ್ಣನಂತೆ ಕನಕದಾಸರು ಪ್ರಮುಖರು, ಇಂದಿನ ಯುವ ಜನಾಂಗವು ಕನಕದಾಸರನ್ನು ಕೇವಲ ಭಕ್ತಿಯ ನೆಲೆಯಲ್ಲಿ ನೋಡದೆ ವೈಚಾರಿಕ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.

      ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಎಚ್. ದೇವೇಂದ್ರಪ್ಪ, ಡಾ. ಶಿವರಾಮ ಶೆಟ್ಟಿ, ಪ್ರೊ. ಸೋಮಣ್ಣ ಹೊಂಗಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

      ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ್ ಕುಂಬ್ಳೆ ಸ್ವಾಗತಿಸಿ, ವಿದ್ಯಾರ್ಥಿನಿ ಆಶ್ರಿತಾ ವಂದಿಸಿದರು. ವಿದ್ಯಾರ್ಥಿ ಅಭಿಷೇಕ್ ವಾಲ್ಮೀಕಿ ಕಾರ್ಯಕ್ರಮ ನಿರೂಪಿಸಿದರು.

ವರದಿಗಾರ :- ರೇಷ್ಮಾ ಎನ್ ಬಾರಿಗ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೪

ಸಂಪ್ರದಾಯದ ಪಾಲನೆಯಲ್ಲಿ ಸ್ತ್ರೀ ಪಾತ್ರ

      ಸಂಪ್ರದಾಯ ಎಂದರೆ ನಮ್ಮ ಪೂರ್ವಜರು ಅವರ ಪೂರ್ವಜರಿಂದ ಕೆಲವು ಪದ್ಧತಿ ಆಚಾರ ವಿಚಾರಗಳು ಎಂಬುದು ಸಹಜ ಅಲ್ಲವೆ? ಹೌದು ಈ ಪದ್ಧತಿಗಳನ್ನು ನಮ್ಮ ಅಜ್ಜ, ಅಜ್ಜಿ, ತಾಯಿ ಎಲ್ಲರು ಪಾಲಿಸಲು ಹೇಳುತಿದ್ದರು. "ನಾವು ಯಾಕೆ? ಹಾಗೆ ಮಾಡಬೇಕು" ಎಂದರೆ "ಹಾಗೆಲ್ಲಾ ಪ್ರಶ್ನೆಯನ್ನು ಕೇಳಬಾರದು" ಎನ್ನುತ್ತಿದ್ದರು. ನಾನು ಚಿಕ್ಕವಳಿದ್ದಾಗ ನಮ್ಮೆಲ್ಲ ಮನೆಗಳನ್ನು ದಾಟಿದ ನಂತರ ಇನ್ನೊಂದು ಸಮುದಾಯದ ಜನರ ಮನೆಗಳಿದ್ದವು ಅಲ್ಲಿಗೆ ನಾವೆಲ್ಲ ಮಕ್ಕಳು ಸೇರಿ ಆಟವಾಡಲು ಹೋಗುತ್ತಿದೇವು. ಆ ಬೀದಿಯಲ್ಲಿನ ಮನೆಗಳ ಮಕ್ಕಳು ಆಟವಾಡುತ್ತಾ ಇದ್ದಾಗ ಕಣ್ಣಾ ಮುಚ್ಚಾಲೆಯನ್ನು ಆಡುತ್ತಾ ಮನಗೆ ಹೋಗಿ ಅವಿತು ಕುಳಿತುಕೊಂಡೆವು. ಆ ಮನೆಯಲ್ಲಿ ಒಬ್ಬರ ಕಣ್ಣು ಅಷ್ಟೊಂದಾಗಿ ಕಾಣಿಸದೆ ಇರುವ ಅಜ್ಜಿ ಇದ್ದರು. ಅವರು ನಾವು ಒಳಗೆ ಬಂದುದ್ದನ್ನು ನೋಡಿ ನನ್ನ ಗೆಳತಿ ಅಂದರೆ ಆ ಅಜ್ಜಿಯ ಮೊಮ್ಮಗಳ ಜೊತೆ "ಬೇರೆ ಜಾತಿಯವರು ಒಳಗೆ ಬರಬಾರದು. ಅವರೊಂದಿಗೆ ನೀನು ಬೆರೆಯಬಾರದು" ಎಂದು ಹೇಳಿದರು. ನನಗೆ ಆಗ ಸಿಟ್ಟು ಬಂತು ಬೇರೆ ಜಾತಿ ಎಂದೆಲ್ಲ ನಮಗೆ ಆಟವಾಡಲು ಅಡ್ಡಿಪಡಿಸಿದರು. ಆದರೆ ಸಮಾಜದೊಂದಿಗೆ ಬೆಳೆಯುತ್ತಾ ನಿಧಾನವಾಗಿ ಸಂಪ್ರದಾಯದ ಹೆಸರಿನೊಂದಿಗೆ ಈ ಆಚರಣೆಯು ಬೆರೆತು ಹೋಗಿದೆ. ಹಾಗೆಯೇ ವಿಶೇಷವಾಗಿ ಸ್ತ್ರೀಯು ಸ್ತ್ರೀಗಾಗಿಯೆ ಹೆಚ್ಚಿನ ಕಟ್ಟುಪಾಡು. ನೀತಿ ನಿಯಮಗಳನ್ನು ನೀಡುತ್ತಾ ಪಾಲಿಸುತ್ತಿದ್ದಾರೆ. ಹಾಗೆಯೆ ಇದು ಪುರುಷರಿಗೆ ಸ್ವಲ್ಪ ನಿಯಮಗಳು ಕಡಿಮೆಯೆ ಅಲ್ಲವೇ. ಆದರೇ ಸ್ತ್ರೀ ಯಾಕೆ ಯೋಚಿಸಲಿಲ್ಲ. ನಮಗೆ ಮಾತ್ರ ಈ ಕಟ್ಟುಪಾಡುಗಳು ಏಕೆ ಎಂದು.

      ಈಗ ಜಗತ್ತು ಎಷ್ಟೇ ಮುಂದುವರೆದು ಬೆಳೆದರು ಎಷ್ಟೆಲ್ಲಾ ಆಚರಣೆಗಳು ಈಗಲೂ ಜೀವಂತವಾಗಿ ಉಳಿದಿದೆ. ನಮ್ಮ ಕವಿಗಳು ತಮ್ಮ ಪ್ರಸಿದ್ಧವಾದ ಕಾದಂಬರಿ ಕಥೆಗಳಲ್ಲಿ ಇವುಗಳನ್ನು ತಲುಪಿಸಿದ್ದಾರೆ. ಸಮಾಜಕ್ಕೆ ಚೋಮನದುಡಿ, ಮಲೆಗಳಲ್ಲಿ ಮದುಮಗಳು, ಸರಸಮ್ಮನ ಸಮಾದಿ ಇತ್ಯಾದಿ. ಇವೆಲ್ಲದರಲ್ಲಿ ಜಾತಿ, ಸಾಂಪ್ರದಾಯ ಮತ್ತು ಆಚರಣೆ ಹೇಗಿದೆ. ಅದರಲ್ಲಿ ಪುರುಷನಿಗಿಂತಲು ಸ್ತ್ರೀಯು ಈ ಸಂಪ್ರದಾಯಗಳನ್ನು ಚಾಚು ತಪ್ಪದೆ ಪಾಲಿಸುತ್ತಾಳೆ. ಚೋಮನದುಡಿ ಕಾದಂಬರಿಯಲ್ಲಿ ಚೋಮನಿಗೆ ಭೂಮಿಯನ್ನು ಕೊಡುವ ಒಂದು ಮನಸ್ಸು ಒಬ್ಬ ಪುರುಷ ಮಾಡಿದರು ಅವನ ತಾಯಿ ಸಂಪ್ರದಾಯ ಪದ್ಧತಿಯಾಗಿ ಬಂದಂತಹ ಆಚರಣೆಯನ್ನು ಕೈ ಬಿಡಲು ಮುಂದಾಗುವುದಿಲ್ಲ. ಅಂದರೆ ಶಿವರಾಮ ಕಾರಂತರು ಸಮಾಜದಲ್ಲಿನ ನಿಜಾಂಶಗಳನ್ನ ತಿಳಿಸಿದ್ದಾರೆ. ಜಗತ್ತು ತುಂಬಾ ಮುನ್ನಲೆಗೆ ಬಂದಿದ್ದರು ಸ್ತ್ರೀ ಎಂದು ತೆಗೆದುಕೊಂಡರೆ ಅವಳು ಒಂದಲ್ಲ ಒಂದು ರೀತಿಯಲ್ಲಿ ಸಂಪ್ರದಾಯಕ್ಕೆ ಕಟ್ಟುಪಾಡುಗಳಿಗೆ ತಾನೆ ಹೊಂದಿಕೊಂಡು ಜೀವಿಸುತ್ತಿದ್ದಾಳೆ. ಈ ಕಟ್ಟುಪಾಡು ಸಂಪ್ರದಾಯ ಮೀರಿದರೆ ಅವಳಿಗೆ ಬೇರೆಯೇ ಪಟ್ಟ, ಜೊತೆಗೆ ಅವಳು ಹೆಣ್ಣು ಅಲ್ಲವೇ ಅಲ್ಲ ಎನ್ನುವವರು ಕೂಡ ಹೆಣ್ಣೆ. ಇದು ಎಂತಹ ವಿಪರ್ಯಾಸ! ಅಲ್ಲವೆ. ಒಂದು ಕಡೆ ಲಿಂಗ ಸಮಾನತೆಯನ್ನು ಬಯಸುವ ಸಮಾಜ, ಇನ್ನೊಂದು ಕಡೆ ಸಂಪ್ರದಾಯಗಳನ್ನು ಗಟ್ಟಿಗೊಳಿಸುತ್ತಾ ಬರುವ ಸಮಾಜ. ಸ್ತ್ರೀ ಯಾವಾಗ ಒಂದು ಉತ್ತಮ ಆಲೋಚನೆಯ ಜೊತೆಗೆ ತನ್ನ ಸಂಪೂರ್ಣ ಸ್ವತಂತ್ರ್ಯತೆಯಿಂದ ನಿರ್ಧಾರ ತೆಗೆದುಕೊಂಡು ಉನ್ನತ ಮಟ್ಟದಲ್ಲಿ ಯೋಚಿಸಬೇಕಾಗುತ್ತದೆ. ಆಗ ಮಾತ್ರ ಅವಳು ಈ ಸಾಂಪ್ರದಾಯಕ್ಕೆ ತದ್ವಿರುದ್ದವಾಗಿ ಇರುತ್ತಾಳೆ. ಆಗ ತಾನು ಅಂದುಕೊಂಡ ಹಾಗೆ ಉತ್ತಮ ಜೀವನ ಕಂಡುಕೊಳ್ಳಲು ಸಾದ್ಯವಾಗುತ್ತದೆ.

ಸೌಮ್ಯ ಟಿ.ಎಸ್, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೪

ಚಿತ್ರಗಳು 

ಚಿತ್ರ ರಚನೆ - ಲಿಖಿತ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ




ಸೋಮವಾರ, ನವೆಂಬರ್ 10, 2025

ಸಂಚಿಕೆ - ೦೩

 ಸಂಪಾದಕೀಯ


      ೧೯೯೧ ರಲ್ಲಿ ಶುರುವಾದ ಈ ಬಿತ್ತಿ ಗೋಡೆ ಬರಹವು ಇಂದಿಗೆ ೩೫ ನೇ ಸಂಪುಟದಲ್ಲಿ ಹೆಜ್ಜೆ ಇಡುತ್ತ ಬಂದಿವೆ. ಈ ಬರಹವು ಕೇವಲ ಗೋಡೆಗಳಿಗೆ ಮಾತ್ರ ಸೀಮಿತವಾಗಿರದೇ ಸೃಜನಶೀಲತೆ ನಿರಂತರವಾದ ಹೆಚ್ಚಿಸುವುದಾಗಿದೆ. ಜ್ಞಾನ, ವಿದ್ಯಾರ್ಥಿಗಳ ಬರವಣಿಗೆಯನ್ನು

      ಈ ಬಿತ್ತಿ ಬರಹವು ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿನ ಬರವಣಿಗೆಯ ಶೈಲಿಯನ್ನು ರೂಪಿಸುವಲ್ಲಿ ಸಹಾಯಕಾರಿ ಆಗುತ್ತದೆ. ಇದೇ ರೀತಿಯ ಬರವಣಿಗೆಯು ನಿರಂತರವಾಗಿ ಮುಂದುವರಿದರೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿ ಮುಂದೇ ಒಂದು ದಿನ ಸಾಹಿತ್ಯಕಾರನನ್ನೂ, ವಿಮರ್ಶಕಾರನನ್ನೂ, ಕಥೆಗಾರನನ್ನೂ ನೋಡಬಹುದು.

      ಇಂದಿನ ಶಿಕ್ಷಣ ಕೇವಲ ಪುಸ್ತಕ ಪಾಠಕ್ಕೆ ಸೀಮಿತವಾಗದೆ. ಜೀವನದ ಸತ್ಯವನ್ನು ಅರಿಯುವ ಪ್ರಕ್ರಿಯೆಯಾಗಿದೆ. ಬಿತ್ತಿ ಬರಹವು ವಿದ್ಯರ್ಥಿಗಳಿಗೆ ತಮ್ಮ ಆಲೋಚನೆ, ಕಲೆ, ಸಂವೇದನೆಗಳನ್ನು ವ್ಯಕ್ತ ಪಡಿಸಲು ಅವಕಾಶ ನೀಡುತ್ತದೆ. ಇದು ಒಂದು ಅಭಿವ್ಯಕ್ತಿಯ ವೇದಿಕೆ ಆಗಿದೆ. ಇಲ್ಲಿ ಮೂಡಿ ಬಂದಿರುವಂತಹ ಬರಹಗಳು ವಿದ್ಯಾರ್ಥಿಗಳಿಗೆ ಹೊಸ ರೀತಿಯ ಶಕ್ತಿಯನ್ನು ತುಂಬುವಂತಾಗಲಿ.

ಸಂಪಾದಕಿ ಬಿತ್ತಿ ಸಂಪಾದಕ ಮಂಡಳಿ

ಸಂಚಿಕೆ - ೦೩

ಅಮ್ಮ

ಭುವಿಯಲೆಲ್ಲಾ ಹುಡುಕಿದೆ ಸಿಗಲಿಲ್ಲ ನೀನು 

ಒಮ್ಮೆಯಾದರೂ ಎನ್ನ ಬಳಿ ಸುಳಿದಿಲ್ಲ ನೀನು 

ಕ್ಷಣ ಕ್ಷಣಕ್ಕೂ ನಿನ್ನ ನೆನಪು ಈ ಮನದಲಿ 

ನೀ ಹೀಗೇಕೆ ತೊರೆದು ಮಾಡಿದೆ ಒಬ್ಬಂಟಿ ಈ ಜಗದಲ್ಲಿ


ಅಮ್ಮ ಎಂಬೆರಡಕ್ಷರ ಬರಲು ನನ್ನ ಬಾಯಲ್ಲಿ 

ನಿನ್ನ ಬಿಂಬವು ನಿನ್ನ ಎರಡೂ ಕಂಗಳಲ್ಲಿ 

ತಂಗಾಳಿಯು ತಾಕಲು ನಿನ್ನ ಸ್ಪರ್ಶದ ಅನುಭವವಾಯಿತು 

ಹಕ್ಕಿಗಳ ಕಲರವದ ಧ್ವನಿಯಲ್ಲಿ ನಿನ್ನ ಜೋಗುಳವಾಯಿತು


ಎಲ್ಲಿ ಹುಡುಕಲಿ ನಿನ್ನ ಈ ಲೋಕದಲ್ಲಿ 

ಎಷ್ಟು ಕಾಯಲಿ ನಿನ್ನ ಆ ಅಪ್ಪುಗೆಗಿಲ್ಲಿ 

ಹೇಗೆ ಮರೆಯಲಿ ನಿನ್ನ ಮಮತೆಯ ಈ ನೆಲದಲ್ಲಿ 

ಪ್ರತಿಕ್ಷಣವೂ ನಿನಗಾಗಿ ಮಿಡಿಯುತ್ತಿದೆ ಕಂಬನಿಯಲ್ಲಿ


ನಾ ಕರೆಯಲು ನೀ ಮೌನವಾಗಿಹ ಇಂದು 

ಅದನ್ನರಿಯದೆ ಪರಿತಪಿಸುತಿಹುದು ಮನವಿಂದು 

ಅರಿವಾಯಿತಾಗ ನೀ ನನ್ನ ತೊರೆದು ವರ್ಷಗಳೇ ಉರುಳಿವೆ ಎಂದು 

ಭಾರವಾದ ಹೃದಯದಿ ಧಿಕ್ಕರಿಸುವೆ ನಾ ಈ ವಿಧಿಗಿಂದು


ಆದರೂ ಮರುಕಳಿಸಿ ನಿನ್ನ ನೆನಪು ಕಾಡಲು 

ದೊರಕುವೆ ಎಂಬ ಹುಸಿ ಭರವಸೆಯಿಂದ ನಾ ಹುಡುಕಲು 

ನೀ ಸಿಗದಿರುವ ಇಲ್ಲದಿರುವ ನನ್ನ ಬದುಕಲ್ಲಿ 

ಅರೆ ಹುಚ್ಚನಂತೆ ಕಾಯುವೆ ಸಂದಿಸಲು ನಾನಿಲ್ಲಿ


ಪವಿತ್ರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೩

 ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ

      ಕಾಡಲ್ಲಿ ನಡೆಯುತ್ತಿರುವಾಗ ಬೇರೆ ಪ್ರಾಣಿಗಳು "ಓ ರಾಕ್ಷಸ ಓಡಿ ಓಡಿ" ಎಂದು ನರಿಯನ್ನ ನೋಡಿ ಹೆದರಿದವು. ಯಾಕೆ ಅಂತ ನರಿಗೆ ಗೊತ್ತಾಗಲ್ಲಿಲ್ಲ. ನರಿ ನೀರು ಕುಡಿಯಲೆಂದು ಕೊಳದ ಬಳಿ ಬಂದಾಗ, ಪ್ರತಿಬಿಂಬದಲ್ಲಿ ನೀಲಿಯಾಗಿರುವ ತನ್ನ ಶರೀರ ಕಂಡು ಎಲ್ಲ ಅದಕ್ಕೆ ಅರ್ಥವಾಯಿತು. ನರಿ ಉಪಾಯ ಮಾಡಿ ಎಲ್ಲಾ ಪ್ರಾಣಿಗಳನ್ನು ಕರೆದು ಹೇಳಿತು "ನಾನು ದೇವರ ಧೂತ, ಇನ್ನು ಮುಂದೆ ನಾನೇ ನಿಮ್ಮ ರಾಜ. ಹೆದರಬೇಡಿ", ಪ್ರಾಣಿಗಳು ಅದನ್ನು ನಂಬಿ ಸ್ವೀಕರಿಸಿದವು. ನರಿ ಕಾಡಿನ ರಾಜನಾಗಿ ಸುಖವಾಗಿತ್ತು.

      ಒಂದು ದಿನ ಬೇರೆ ನರಿಗಳು ಗೀಳಿಡೋದು ಕೇಳಿ ತಡೆಯಾಲಾಗದೆ ನರಿ ಗೀಳಿಟ್ಟಿತು. ಗೀಳನ್ನ ಕೇಳಿ ಬೇರೆ ಪ್ರಾಣಿಗಳಿಗೆ ಈ ವಿಚಿತ್ರ ಪ್ರಾಣಿ ಯಾರು ಎಂದು ತಿಳಿಯಿತು. ನರಿಯನ್ನು ಕಾಡಿಂದ ಒದ್ದು ಓಡಿಸಿದವು.

ಸಂಗ್ರಹ - ಸೌಮ್ಯ ಟಿ.ಎಸ್, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೩

ಕೈ ಗೊಂಬೆ ನಾವು

ಕೈಲಿ ಮೊಬೈಲ್ ಕಣ್ಣು ಅದರಲ್ಲೇ ಸ್ಥಿರ, 

ಬೆಳಕು ಹೋದರೆ ನಮಗೆಲ್ಲ ಭಯ, ಅಂಧಕಾರ, 

ಸಣ್ಣ ಪೆಟ್ಟಿಗೆಯಲ್ಲಿ ಇಡೀ ಜಗತ್ತು ಅಡಗಿದೆ, 

ನಾವು ಅದರೊಳಗೆ ಬಂಧಿಯಾದ ಕೈಗೊಂಬೆ.


ನಮ್ಮದೇ ಬೆರಳುಗಳು ನಮ್ಮನ್ನೇ ತಿರುಗಿಸುತ್ತಿದೆ, 

ರಿಯಲ್ ಲೈಫ್‌ ಗಿಂತ ರೀಲ್ಸ್‌ನಲ್ಲಿ ಖುಷಿ ಸಿಕ್ಕಿದೆ.

ಪಕ್ಕದವರ ಮಾತಿಗಿಲ್ಲ ಬೆಲೆ ಸ್ಟೇಟಸ್ ಅಪ್‌ಡೇಟ್ ಮುಖ್ಯ, 

ಮನಸ್ಸಿನ ನೆಮ್ಮದಿಯೆಲ್ಲ ಅಲ್ಲಿ ಬರೀ ಕೃತಕ ಸತ್ಯ.


ಸಾಮಾಜಿಕ ಜಾಲತಾಣದಲಿ ನಮ್ಮ ದಿನಚರಿ 

ಒಳಗೆ ನೋವಿದ್ದರೂ ಹೊರಗೆ ನಗುವ ಪರಿ 

ಲೈಕ್ ಶೇರ್‌ಗಳಿಗಾಗಿ ನಾವು ಕಾಯುವೆವು 

ಅದೇ ನಮ್ಮ ಘನತೆ ಅದೇ ನಮ್ಮ ಜೀವನ ಎನ್ನುವೆವು.


ಪ್ರೀತಿ, ಸ್ನೇಹ, ಸಂಬಂಧ ಎಲ್ಲ ಆನ್‌ಲೈನ್ನಲ್ಲಿ 

ಹತ್ತಿರವಿದ್ದರೂ ಮೌನ ಮೊಬೈಲ್‌ನಲ್ಲಿ ಎಲ್ಲರೊಂದಿಗೆ ಗೆಳೆತನ 

ಮುಖ ಎತ್ತಿ ನೋಡಲು ನಮಗಿಲ್ಲ ಸಮಯ 

ಸತ್ಯದ ಬದುಕಿನಲಿ ಇಂಟರ್ನೆಟ್ನದೇ ಮಾಯೆ.


ಮರೆತಿದ್ದೇವೆ ನಾವು ಪ್ರಕೃತಿಯ ಸೌಂದರ್ಯ 

ಮರೆತಿದ್ದೇವೆ ನಾವು ಹೃದಯ ಸೌಹಾರ್ದ 

ಪರದೆ ಹಿಂದಿನ ಲೋಕದಲಿ ನಾವು ನಾವಲ್ಲ 

ನಾವು ಬರೀ ವೈರಲ್ ಆಗುವ ಒಂದು ಕಣ್ಣಟ್ಟು


ಎಚ್ಚರವಾಗಲಿ ಮನಕ್ಕೆ ಬಿಡೋಣ ಈ ಬಂಧನ,

ಬದುಕೋಣ ಮುಖಾಮುಖಿ ಬಿಡೋಣ ಈ ತಂತ್ರಜ್ಞಾನ 

ಮೊಬೈಲ್ ಇರಲಿ ಸಾಧನ ಗುರಿಯಲ್ಲ ಎಂದಿಗೂ, 

ಕೈಗೊಂಬೆಯಾಗದೆ, ನಮ್ಮ ಬದುಕಿಗೆ ನಾವೇ 

ಯಜಮಾನರಾಗೋಣ!


ಸಂಗ್ರಹ - ಪುನೀತ್, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೩

 ಘಟ್ಟದ ದಿನ

      'ಘಟ್ಟದ ದಿನ' ಎಂದು ಕೇಳಿದ ತಕ್ಷಣ ನಿಮಗೆಲ್ಲ ತಿಳಿಯುವುದು 'ಘಟ್ಟ ಪ್ರದೇಶಗಳಲ್ಲಿ' ಕಳೆದ ದಿನ ಅನಿಸುತ್ತದೆ. ಆದರೆ ಇಲ್ಲಿ ನಾನು ಹೇಳುತ್ತಿರುವ 'ಘಟ್ಟದ ದಿನ' ಎಂದರೆ ನಮ್ಮ ಉತ್ತರ ಕರ್ನಾಟಕದ ಭಾಗಗಳಲ್ಲಿ "ಮಹಾನವಮಿ ಪ್ರಾರಂಭದ ಹಿಂದಿನ ದಿನ" ವಾಗಿದೆ. ಇದು ಈ ಭಾಗದಲ್ಲಿ ಹಿಂದಿನಿಂದಲೂ ಊರಿನ ಗ್ರಾಮದೇವ ದೇವಸ್ಥಾನದಲ್ಲಿ, ಆಚರಿಸಿಕೊಂಡು ಬಂದಿರುವ ಒಂದು ಆಚರಣೆಯಾಗಿದೆ.

      ಈ ದಿನದಂದು ಊರಿನ ಎಲ್ಲಾ ಹಿರಿಯರು ಡೊಳ್ಳಿನ ಮೇಳದೊಂದಿಗೆ 'ಐದು' ಪ್ರಮುಖ ಮನೆಗಳಿಗೆ ಹೋಗಿ ಐದು ಜನ 'ಮುತ್ತದೆ' ಯರನ್ನು ನೇಮಿಸಿ, 'ಆಯ್ಯನವರ' (ವೈದಿಕರ) ಮನೆಗೆ ಹೋಗಿ ಐದು ತರಹದ ಕಾಳುಗಳನ್ನು ಪೂಜಿಸಿ (ಫಲಕಾಳು) ತರುತ್ತಾರೆ(ಜೋಳ, ಸಜ್ಜೆ, ತೊಗರಿ, ಹುರುಳಿ, ಮೆಕ್ಕೆಜೋಳ), ಒಂದು ಮಡಿಕೆಯಲ್ಲಿ ಜೋಳದ ಹಿಟ್ಟಿನ ಹುಳಿ ಅಂಬಲಿ ಮಾಡಿ ತುಂಬಿರುತ್ತಾರೆ. 'ಫಲಕಾಳು'ಗಳನ್ನು ದೇವಸ್ಥಾನದ 'ಪಾದುಗಟ್ಟಿ'ಯಲ್ಲಿ ಹಾಕಿ, ಅದರ ಮೇಲೆ ಅಂಬಲಿಯ ಮಡಿಕೆಯನ್ನು ಇಟ್ಟು ಗಾಳಿಯು ಸೋಕದಂತೆ ಸುತ್ತಲೂ ಒಂದು ತಾಡಪತ್ರೆಯಿಂದ ಮುಚ್ಚಿಡುತ್ತಾರೆ. ಮಹಾನವಮಿ ಮುಗಿದ ನಂತರ ಅದನ್ನು ತೆರೆಯುತ್ತಾರೆ. 'ಫಲಕಾಳು' ಮೊದಲ ದಿನ ಇಟ್ಟಿರುವಂತೆ ಹಾಳಾಗದೆ ಇದ್ದರೆ, ಆ ವರ್ಷದ ಎಲ್ಲ ಬೆಳೆಗಳು ಸಮೃದ್ಧವಾಗಿ ಬೆಳೆದು ರೈತನಿಗೆ ಲಾಭವಾಗುವುದು ಎಂದರ್ಥವಾಗಿದೆ. ಆ 'ಫಲಕಾಳು'ಗಳನ್ನು ಊರಿನ ಎಲ್ಲ ಮನೆಗಳಿಗೂ ಹಂಚುತ್ತಾರೆ. ಆ 'ಫಲಕಾಳು'ಗಳು ಹಾಳಾಗಿದ್ದರೆ ಆ ವರ್ಷದ ಬೆಳೆಗಳು ನಷ್ಟ ಕಾಣುತ್ತದೆ ಎಂಬುದು ಈ ಭಾಗದ ಜನರಲ್ಲಿ ಹಿಂದಿನಿಂದಲೂ ಉಳಿದುಕೊಂಡು ಬಂದಿರುವ ಗಾಢವಾದ ನಂಬಿಕೆಯಾಗಿದೆ.

      ಇದಿಷ್ಟು ನಮ್ಮ 'ಉತ್ತರ ಕರ್ನಾಟಕ' ಭಾಗದಲ್ಲಿ ಮಹಾನವಮಿ ಹಿಂದಿನ ದಿನ ಅಂದರೆ 'ಘಟ್ಟದ ದಿನ'ದ ವಿಶೇಷತೆಯ ಸಂಕ್ಷಿಪ್ತ ವಿವರಣೆಯಾಗಿದೆ.

ಸುಜಾತಾ. ಗಿ. ಪೂಜೇರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೩

ಓ ಕನ್ನಡಿಯೇ ನೀನೆಷ್ಟು ಕ್ರೂರಿ

ಸೂರದ್ರೂಪಿಯಾದ ಸುಂದರ ಸ್ತ್ರೀಯನ್ನು 

ನಿನ್ನ ಮುಂದೆ ಗಂಟೆಗಟ್ಟಲೆ ಕೂಡುವ ಹಾಗೆ 

ಮಾಡಿಕೊಂಡೆಯಲ್ಲ 

ನನ್ನ ಮುಂದೆ ಸ್ವಲ್ಪ ಸಮಯ ನಿಲ್ಲದ ಹಾಗೆ 

ಮಾಡಿಬಿಟ್ಟಿಯಲ್ಲ 

ಓ ಕನ್ನಡಿಯೇ ನೀನೆಷ್ಟು ಕ್ರೂರಿ


ಕಾರಲ್ಲೂ ಇರುವೆ ಬೈಕ್ ಅಲ್ಲೂ ಇರುವೆ ಕೊನೆಗೆ 

ಸೈಕಲ್ ನಲ್ಲು ಇರುವೆ 

ಅಪಘಾತವಾದಗ ಕೊನೆಗೆ ನನ್ನದೇನು ತಪ್ಪಿಲ್ಲ 

ಎನ್ನುವಂತೆ ನೀ ಮುರಿದು ಬೀಳುವೆ 

ಓ ಕನ್ನಡಿಯೇ ನೀನೆಷ್ಟು ಕ್ರೂರಿ


ಇಂದೇ ಬಯಲಾಗಲಿ ನಿನ್ನ ಕ್ರೂರತನ 

ಹೇಳು ಹೀಗೇಕೆ ಮಾಡುವೆ 

ಗಂಟೆಗಟ್ಟಲೆ ಸ್ತ್ರೀಯರು ನಿನ್ನ ಮುಂದೆ ಕೂರುವ ಹಾಗೆ 

ಮಾಡಿಕೊಂಡೆಯಲ್ಲ

ನೀನು ಗಂಡಸೆ ಆಗಿರಬಹುದು ಅವಳ ಮುಖದ 

ಸೌಂದರ್ಯ ನೋಡಲು ಹಂಬಲಿಪನಾಗಿರುವೆ ಅಲ್ಲವೇ

ಓ ಕನ್ನಡಿಯೇ ನೀನೆಷ್ಟು ಕ್ರೂರಿ


ರವಿ ಅ.ಮ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೩

ಶಾಸ್ತ್ರಗುಳು (ಜನಪದರ ನುಡಿಗಳು)

  1. ಮಾರಿಮ್ಯಾಗಳ ಬಣ್ಣ ಊರಿಗಿ ಮೂಲ.
  2. ಗಣಗಣ ಅಂದೋರು ಘಂಟೆ ನುಂಗಿದ್ರಂತೆ, ಗುನುಗುನು ಅಂದೋರು ಗುಮ್ಮಿ ನುಂಗಿದ್ರಂತೆ.
  3. ಮಾಡ್ಕಂಡು ತಿಂದ್ರೆ ಮಂದಿ ಕಾಟ, ಬೇಡ್ಕೊಂಡು ತಿಂದ್ರೆ ನಾಯಿ ಕಾಟ.
  4. ಹಿರೆಕ್ಕನ್ ಚಾಳೆ ಮನೆ ಮಂದಿಗೆಲ್ಲಂತೆ
  5. ಒಂದು ಕೊಣ್ಣು ಕೊಣ್ಣಲ್ಲಾ, ಒಬ್ಬ ಮಗ ಮಗನಲ್ಲ.
  6. ಮೂರ್ಗಂಟೆ ಮ್ಯಾಗ ಉಂಬ ಊಟಲ್ಲ, ಮುವತ್ರ ಮ್ಯಾಗಾಗೊ ಮದಿವಲ್ಲಂತೆ.
  7. ಮಾತ್ ಕಲ್ತೊಳು ಮನೆ ಹಾಳು, ತುಂಬ ಬಿತ್ತೊನ್ ವಲ ಹಾಳು.
  8. ಕರ್ಸಿ ಕಟ್ಟೋರಿಲ್ಲ ತುರ್ಸಿ ಮೇವಾಕೊರಿಲ್ಲ.
  9. ಆಸತ್ ಬ್ಯಾಸತ್ ಅಕ್ಯುನ್ ಮನಿಗಿ ಬಂದ್ರೆ, ಅಕ್ಕುನ್ ಗಂಡ ಬಂದು ತೆಕ್ಕಿಗಿ ಬಡ್ಕಂಡ್ನಂತೆ.
  10. ಹಗಲೆಲ್ಲ ಹರಗ್ಯಾಡಿ ಗಂಡ ಬರುವಾಗ, ಬಿರಿ ಬದು ಮಾಡ್ತಿದ್ದಂತೆ.
  11. ಮೆಚ್ಚಿದೋಳ್ಗಿ ಮರಣಸುಖವಾದ್ರೆ ಹುರ್ಚ್ಚ, ನಾಯ್ಗಿ ಆರ್ಯಾಣ ಸುಖವಂತೆ.
  12. ತುಟಿಗಿ ತುಪ್ಪ ಹಚ್ಚಿ, ಮರ ಹೋಳ್ಗಿ ಉಂಡ್ರಂದ್ಲಂತೆ.
  13. ಕರ್ದು ಮಗ್ಳಿಗೆ ಕೊಟ್ರೆ, ಅಳಿಯಾಗ ಮಳ್ ರೋಗ ಬಂದಿತ್ತಂತೆ.
  14. ವಾದ್ಯೊಳ್ ಕುಡ ವಾದಿ ಮಾಡ್ಲಾಸಲ್ಲ, ಗೂದ್ಯೊಳ್ ಕುಡ ಹಾದಿ ನೆಡ್ಲಾಸಲ್ಲ.
  15. ಗೂಳಿ ಗುದ್ಯಾಟ ಬೆಳೆಗಿ ಮೂಲಾತಂತೆ.
  16. ಕಾಲಿಡ್ದಾಂಗ ಮಾಡಿ ಕಾಲುಂಗ್ರ ಕೇಳಿದ್ರಂತೆ.
  17. ಕೆಂಡ ಸೆರ್ಗಿಗೆ ಕಟಿಗೆಂಡು, ಕೌಡಶಾಸ್ತ್ರ ಕೇಳಕೋದ್ಲಂತೆ.
  18. ಅವ್ವಗೆ ಬೀಪಿ ಚಿಂತೆ ಆದ್ರ, ಮಗ್ಳಿಗೆ ಕಾಪಿ ಚಿಂತ್ಯಂತೆ

ಜನಪದ ಸಂಗ್ರಹ :- ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೩

ಹೇಳಿ ಹೋಗು ಕಾರಣ

ತೊರೆದ ಗಳಿಗೆಯ ನೆನೆದು ಬರೆಯಲೇನು ನಾನು 

ಕಾಲನಿಕ ಬದುಕಿನ ಕನಸಾಗಿ ಉಳಿದವಳು 

ಸುಮ್ಮನಿರದೇ ನೀ ಕೋಟಿ ನೆನಪ ಧಾರೆ ಎರೆದೆ 

ಪೊರೆದವಳೇ ತೊರೆದರೆ ನಿಲುವೆಲ್ಲಿ ನನಗೆ 

ಸುತ್ತ ಸಂಭ್ರಮ, ಮನಸ್ಸು ಸೂತಕ


ಉತ್ತರಗಳ ನೀಡದೆ ಪ್ರಶ್ನೆಯಾಗಿಯೇ ನಿಂತವಳು 

ನಿತ್ಯ ಹುಡುಕುವೆ ನನ್ನನ್ನು ನಾನು 

ಕಳೆದು ಹೋಗಲು ಕಾರಣಗಳು ನೀನು 

ಈ ಬಾಳ ಪುಸ್ತಕದಿ ನೀ ಮುನ್ನುಡಿಯ ಕಾವ್ಯಾಗ್ನಿ 

ಕಾಣದಿರು ಮತ್ತೆಂದೂ ಹೊತ್ತುವುದು ಪ್ರೇಮಾಗ್ನಿ


ಪರಶುರಾಮ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೩

ಬಿಸಿ ಕಾವು

ಬೊಗಸೆ ನೀರಿಗೆ ಗೆರಟೆ 

ಕಳೆದು ಹೋಗಿತ್ತು ಎಷ್ಟೋ ಹಿಂದೆ 

ಆದರೇನು, ಬಾಳೆ ಎಲೆ-ಹಾಳೆ ತಟ್ಟೆ 

ಮಾಸಲೂ ಇಲ್ಲ ಹರಿಯಲೂ ಇಲ್ಲ 

ಈಗಲೂ ನಮ್ಮ ಮನೆಯಲ್ಲಿ 

ಉಣ್ಣುವಳು ಅವಳು ಕೊಟ್ಟಿಗೆ ಮೂಲೆಯಲ್ಲಿ


ತಂಗಳೂಟ ಕಳೆದು ಹೋಗಿರಬಹುದು 

ಆದರೇನು, ಈಗಲೂ ಬರುವಳು ಅವಳು 

ಮುಂಜಾನೆ ಹಬ್ಬ ಕಳೆದ ಮೇಲೆ


ಕಾಲೆರಳ ಸಂಧಿಯಲಿ ಕೊಳೆಯಿದೆ

ಉಗುರುಗಳ ಕತೆ ಕೇಳಬೇಕೆಂದೇ ಇಲ್ಲ 

ನಮ್ಮ ಗದ್ದೆಯಲಿ ಕೆಸರಾದ ಕೈಗಳ 

ನೆನಪೂ ಹಲವರಿಗೆ ಈಗಿಲ್ಲ


ದಣಿದೊಡಲ ಧ್ವನಿಯು ಕೇಳಿಸಿತೇ? 

ಊರ ಬೇಸರಕೆ ದನಿಯಾಗುವಳು ಅವಳು 

ಸಂಧಿ ಪಾಡ್ಡನಗಳ ಜೊತೆ ಹೊಲದಲ್ಲಿ 

ಮುಟ್ಟಿಹುದೇ ಅದು ಬದುವಿನಾಚೆಗೂ!?


ಮಳೆಗೆ ನೆನೆದ ಹೆಂಟೆಯೊಂದು 

ದೂರದಲ್ಲಿ ಮೂಲೆಯಲ್ಲಿ ಮುದುಡಿದಂತೆ 

ದಿನಾ ಮೂಲೆ ಸೇರುವಳು 

ಅವಳೇ ಸೇರಿದಳೋ... ನಾವು ಸೇರಿಸಿದೆವೋ...!?


ಮುದುಡಿದ ದೇಹಕ್ಕೆ ಬಿಸಿ ಕಾವು 

ಉಣಿಸಬೇಕಿದೆ ನಾವು-ನೀವು 

ಮನೆ ಹೊಸಿಲು ದಾಟಿಸಬೇಕು

ಅವಳಾಗಿ ಒಳ ಕಾಲಿಡಬೇಕು 

ನಮ್ಮೊಳಗೆ ಅವಳೂ ಒಳಗೊಳ್ಳಬೇಕು


ರೇಷ್ಮಾ ಎನ್ ಬಾರಿಗ, ಎಂ.ಎ. ದ್ವಿತೀಯ ವರ್ಷ ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೩

ಮನೆಯಿಂದ ಮಂಗಳೂರಿಗೆ

ಮರವೇರಿದ ಮರ್ಕಟನಂತೆ

ಮಂಗಳೂರಿಗೆ ನಾ ಬಂದೆ ನನ್ನ ಮನೆಯ ಅಂಗಳ ಬಿಟ್ಟು

ಗಂಗಳದ ಗಂಜಿಯೇ ಗತಿಯಿತ್ತು ನನಗೆ ಅಂದು

ಕಂಗಳಲಿ ಕನಸುಗಳನ್ನು ಹೊತ್ತು ಮಂಗಳಮ್ಮನ ಮಡಿಲಲ್ಲಿ ನಾ ಅತ್ತು

ಬೆಳದಿಂಗಳ ಬೆಳಕಲ್ಲಿ ಬದುಕಿನ ಭರವಸೆ ಹೊತ್ತು

ಹಸಿವಿನ ಹಂಬಲವ ತೊರೆದು

ತಂಗಳನ್ನವ ತನ್ನ ಹೊಟ್ಟೆಯಲ್ಲಿ ತುಂಬಿಕೊಂಡು

ಅಂಗಳವ ಬಿಟ್ಟು ಮಂಗಳೂರಿನ ಕಡೆಗೆ ಬಂದೆನು

ಮರವೇರಿದ ಮರ್ಕಟನಂತೆ 

ಬಡವನ ಗುಡಿಸಲಲ್ಲಿ ನಗುತ ನಲಿಯುತ 

ಬಾಳುತಿದ್ದೆವು ಒಂದೇ ಗೂಡಿನ ಹಕ್ಕಿಗಳಂತೆ.

ಅಂಬಲಿಯೋ ಗಂಜಿಯೋ ಎಂಬ ಎಲ್ಲ ದುಃಖವ ಮರೆತು 

ಮನದಲ್ಲಿ ಮಲ್ಲಿಗೆಯ ನಗೆಯಂತೆ ಬೆಳೆದೆವು ಒಂದೇ ತೋಟದ ಹೂವುಗಳಂತೆ..

ಬೆಳಕಾದರೆ ಹಸಿವಿನ ಹಂಬಲ ಕಾಡುತಿತ್ತು

ಬದುಕಿನ ಬಂಡಿಗೆ ಹೆಗಲಾಗ ಬೇಕೆಂದು

ರಕ್ಷಣೆಯನ್ನು ಹುಡುಕುತ ಶಿಕ್ಷಣದ ಹಾದಿಯನ್ನು ಹಿಡಿದು

ನಡೆಯುವ ದಾರಿಯಲ್ಲಿ ಹೂವುಮುಳ್ಳು ಎನ್ನದೆ

ಅಂಬರನ ಒಡನಾಡಿಯಾಗಿ, ಚಂದಿರನ ಜೊತೆಗಾರನಾಗಿ

ಹಗಲು ಇರುಳು ಎನ್ನದೆ ಹಾರುತ ಬಂದೆನು

ಗೂಡು ಬಿಟ್ಟ ಹಕ್ಕಿಯಂತೆ.

ಹಾಡುತ ಹಾರುತ ಬಂದೆನು

ಈ ಮಲೆನಾಡಿನ ಸ್ವರ್ಗದ ಸೀಮೆಗೆಂಬ

ಮಂಗಳೂರಿನ ಕನ್ನಡ ಧರಣಿಗೆ .


ಮಹೇಶ್ ಜಿ.ಕೆ., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೩

ಮನಸ್ಸಿನ ಮನಿಷಾ....

ನನ್ನ ಮನಸ್ಸಿನ ಮನವೇ 

ನೀ ಇಲ್ಲದ ದಿನಗಳು 

ನನಗೆ ಉತ್ಸಾಹದ ಹಾದಿಯನ್ನು 

ಮರೆತಿವೆ ನೀ ಸಿಕ್ಕರೆ ಹಾಗೆ 

ನಿನ್ನಲ್ಲಿ ನಾ ನೋಡುವೆ....


ಸೂರ್ಯನು ಕೂಡ 

ನಿನ್ನನ್ನು ಭೇಟಿಯಾಗಿ 

ನನ್ನನ್ನು ಸೇರಲು ನಾ ಇನ್ನು 

ದೂರದ ಪ್ರಯಾಣಿಕನಾಗಿ 

ಬೇಗ ಭೇಟಿಯಾಗಲು 

ನಿನ್ನ ನಗುವ ನೋಡುವೆ


ಹೂಗಳ ಕೂಡ ನಿನ್ನ 

ಸೌಂದರ್ಯವನ್ನು ಸುವಾಸನೆಯ 

ಮೂಲಕ ಸವಿದು ಮತ್ತೆ 

ನಿನ್ನಯ ನೆನಪಿನ ಲೋಕದಲ್ಲಿ 

ನೀನಿರುವ ಊರಲ್ಲಿ 

ನಿನ್ನ ಮುಖವನ್ನು ನೋಡುವೆ....


ಚಂದ್ರನ ತವರಿನ ಸಿರಿವಂತಿಕೆಯ 

ಉಡುಗೊರೆಯೂ ಹೊಂಬೆಳಕು ನಿನ್ನಂತ ಅಂದದ 

ರೂಪವತಿಗೆ ತುಂಬಾ ಚಿಕ್ಕ ಕೊಡುಗೆಯಾಗಿದೆ.....


ಮಲ್ಲಿಕಾರ್ಜುನ ಹ ಕೆರೂಡಿ, ಎಂ.ಎಸ್.ಸಿ. ಭೂಗೋಳ ಶಾಸ್ತ್ರ

ಸಂಚಿಕೆ - ೦೩

ಸಣ್ಣ ಪಯಣ

ಮುಗಿಯಿತು ಪದವಿ ಎಂಬ ಸಣ್ಣ ಪಯಣ 

ಹೇಗೆ ತೀರಿಸುವುದು ಕಾಲೇಜಿನ ಋಣ ? 

ಮುಂದೆ ಏನು ಮಾಡೋಣ 

ಮೊದಲೇ ಯಾರಿಗೂ ಹೇಳಬೇಡ ಎನ್ನುವ ಮನ.


ನನಗೂ ತಿಳಿದಿಲ್ಲ ನಾನೇಕೆ ಈಗ ಮೌನ 

ಯೋಚನೆಯಲ್ಲಿಯೇ ಹೆಚ್ಚು ಕಾಲ ಹರಣ. 

ಇನ್ನಷ್ಟೇ ಶುರುವಾಗಲಿದೇ ಹೊಸ ಯಾನ 

ಯಾವಾಗ ಮುಟ್ಟುವುದೋ ಗುರಿ ಎಂಬ ಗಗನ.


ಈಗಲೇ ಮಂಜಾಯಿತು ಎರಡು ನಯನ 

ಚಿಂತಿಸಿ ಕುಳಿತರೆ ಹೇಗೆ ಮುಂದಿನ ಜೀವನ ? 

ದೊಡ್ಡ ದೊಡ್ಡ ಕನಸುಗಳು ಜೋಪಾನ 

ಹೇಗಿದೆ ನನ್ನ ಪುಟ್ಟ ಕವನ.


ಬಿ ವಿಖ್ಯಾತ್, ಎಂ.ಎ. ಪ್ರಥಮ ವರ್ಷ, ರಾಜ್ಯಶಾಸ್ತ್ರ ವಿಭಾಗ

ಸಂಚಿಕೆ - ೦೩

ಬಿತ್ತಿ ಮತ್ತು ಅವಳು

ಸೋಮವಾರದ ಬಿತ್ತಿಗೆ ವಸ್ತುವಿರಲಿಲ್ಲ 

ಅವಳ ಮೇಲೊಂದು ಕವಿತೆ ಬರೆದೆ 

ಗೋಡೆ ಪತ್ರಿಕೆಯ ಗಾಜನ್ನುಜ್ಜುವಾಗ 

ಅವಳು ತನ್ನ ಅಚ್ಚಾದ ಹೆಸರನ್ನು ಕಂಡಳು 

ಮರುದಿನದಿಂದ ಅವಳು ನನ್ನವಳಾದಳು


ಈಗೀಗ ನಮ್ಮಿಬ್ಬರ ಮಧ್ಯೆ 

ಮಾತು ಬೆಳೆದು ನಿಂತಿದೆ 

ನಡುಬಗ್ಗಿಸಲಾಗದೆ ಕಾಯಕ ನಿರತಳಾದ 

ಅವಳ ಬಳಿ ಪ್ರಶ್ನೆಯಿಟ್ಟೆ 

'ಅಮ್ಮಾ ಯಾಕಾದರೂ ಬೇಕು ಈ ಕೆಲಸ' 

ಹೊರಾಂಡ ಸಾರಿಸುವಾಗ ಕೇಳಿದ 

ಕೀರ್ತನೆಯಲ್ಲೇ ಹಾಡುತ್ತಾ ಹೀಗೆಂದು ಉತ್ತರಿಸಿದಳು 

'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ"


ನನಗೀಗ ಅವಳ ಮೇಲೆ ಎಲ್ಲಿಲ್ಲದ ಕನಿಕರ 

ಈಗಷ್ಟೇ ಉಜ್ಜಿ ಬೆಳ್ಳಗಾಗಿಸಿದ ನೆಲದ ಮೇಲೆ 

ನನ್ನ ಚಪ್ಪಲಿಯಡಿಯ ಕೆಸರು 

ಅವಳ ಕಣ್ಣಿಗೆ ಬಿದ್ದು 

ಎಲ್ಲಿ ಬೇಸರವಾಗುವುದೋ ಏನೋ..!


ಕೊನೆಗೊಂದು ದಿನ ನಾನು 

ಬರೆಯುವುದನ್ನ ನಿಲ್ಲಿಸಿದೆ 

ಅವಳು ನನ್ನ ಜೊತೆ ಮಾತು ಬಿಟ್ಟಳು 

ಸಲಾಂ ಹೇಳುವುದನ್ನೂ ಬಿಟ್ಟಳು


ಮೆಟ್ಟಿಲೇರುತ್ತಾ ಬಂದ ನನ್ನನ್ನು ತಡೆದು 

ಪ್ರಶ್ನೆಯಿಟ್ಟಳು 

"ನನ್ನ ಹೆಸರೇಕೆ ಈಗ ಬಿತ್ತಿಯಲ್ಲಿಲ್ಲ" 

ನಾನಂದೆ 

"ಕವಿತೆ ಹುಟ್ಟಬೇಕೇ ಹೊರತು ಹುಟ್ಟಿಸಲಾಗಲ್ಲ"


ಈಗ ಅವಳು ದಿನವೂ ಬಿತ್ತಿ ಓದುವಳು 

ಅಕ್ಷರಗಳ ಮಧ್ಯೆ ತನ್ನ ಹೆಸರನ್ನು ಹುಡುಕಾಡುವಳು 

ತನ್ನ ಹೆಸರಿಲ್ಲದ ಬಿತ್ತಿಯ ನೋಡಿ 

ಒಳಗೊಳಗೆಯೇ ಮರುಗುವಳು 

ಅವಳೀಗ ಬಿತ್ತಿಯ ಗಂಭೀರ ವಿಮರ್ಶಕಿ


ಸಹೃದಯರೇ... 

ನಾಳೆ ಅವಳು ನಿನ್ನೆದುರುಗೊಂಡರೆ 

ಸಲಾಂ ಹೇಳಿ, ಚಹಾ ಆಯ್ತಾ ಅಂತ ವಿಚಾರಿಸಿ, 

ಕೊನೆಪಕ್ಷ ಮುಗುಳ್ಳಗುತ್ತಾದರೂ ಮುಂದಡಿಯಿಡಿ... 

ಕಾರಣ ಅವಳು ನಮ್ಮಮ್ಮಳ ವಯಸ್ಸಿನವಳು 

ನಮ್ಮಮ್ಮಳ ಮನಸ್ಸಿನವಳು.


ಸಲೀಂ ಸುಳ್ಯ ಎಂ.ಎ. ದ್ವಿತೀಯ ವರ್ಷ ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೩

 ಭಿಕ್ಷಾಟನೆ ವಿರುದ್ಧ ಸಮುದಾಯದ ಜವಾಬ್ದಾರಿ

      ಪ್ರತಿಯೊಬ್ಬ ಭಿಕ್ಷುಕನ ಹಿಂದೆ ಅವರದ್ದೇ ಆದ ಒಂದು ನಿರ್ಧಿಷ್ಟ ಕಾರಣಗಳಿರುತ್ತವೆ. ಯಾರು ಕೂಡ ಸ್ವತಃ ತಾವೇ ಭಿಕ್ಷಾಟನೆಗೆ ಒಳಗಾಗುವುದಿಲ್ಲ. ಸಮಾಜದಲ್ಲಿನ ಕೆಲವು ವ್ಯವಸ್ಥೆಗಳು, ಅವರ ಆರ್ಥಿಕ ಸ್ಥಿತಿ - ಗತಿಗಳು ಅವರನ್ನು ಈ ದಾರಿಯಲ್ಲಿ ಸಾಗುವಂತೆ ಮಾಡುತ್ತವೆ. ಇದು ಒಂದು ರೀತಿಯ ಕಾರಣವಾದರೆ, ಕೆಲವರು ಇಂತಹ ಸಂಕಷ್ಟಕ್ಕೆ ಒಳಗಾದವರನ್ನು ಸರಿದಾರಿಗೆ ತರುವ ಆಸೆಯನ್ನು ಹುಟ್ಟಿಸಿ ಅವರನ್ನೇ ಕೇಂದ್ರವಾಗಿಟ್ಟುಕೊಂಡು ವ್ಯವಹಾರದ ರೀತಿಯಲ್ಲಿ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಏನನ್ನೂ ಅರಿಯದ ಅಮಾಯಕ ಮನಸ್ಸುಗಳು ಈ ಜಾಲದೊಳಗೆ ಸಿಲುಕಿಕೊಂಡು ಅದರಿಂದ ಹೊರಬರಲಾಗದೆ ಜೀವವಿದ್ದು ಅಜೀವರಾಗಿದ್ದಾರೆ. ದುಡಿದು ತಿನ್ನದೆ, ಸಹಾಯವಿಲ್ಲದೆ ಹಣಕ್ಕಾಗಿ ಬೇಡಿಕೆ ಮಾಡುವುದುನ್ನು ಬಿಟ್ಟು ಬೇರೆಯೇನು ದಾರಿ ಅವರಿಗೆ ಕಾಣುತ್ತಿಲ್ಲ ಮತ್ತು ಅದಕ್ಕೆ ಇಂದಿನ ಸಮಾಜವು ಕೂಡ ಅವಕಾಶ ಕಲ್ಪಿಸಿಕೊಡಲಿಲ್ಲ. ದಾರಿದ್ರ, ನಿರುದ್ಯೋಗ, ಅನಕ್ಷರತೆ, ದೌರ್ಬಲ್ಯ, ಮಾನಸಿಕ ಅಸ್ವಸ್ಥತೆ, ಸಂಘಟಿತ ಭಿಕ್ಷಾಟನಾ ಮಾಫಿಯಾವಾಗಿ ಪರಿವರ್ತನೆಗೂಳ್ಳುತ್ತಿವೆ. ನಗರ ಸೌಂದರ್ಯ ಹಾನಿ, ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ, ಮಕ್ಕಳ ಶೋಷಣೆ, ಅಪರಾಧದ ಆಡಗು ಮುಖ. ಸಮಾಜದ ಮೇಲೆ ಈ ರೀತಿಯಲ್ಲಿ ಪರಿಣಾಮ ಉಂಟುಮಾಡುತ್ತಿದೆ.

      ಭಿಕ್ಷೆ ನೀಡುವುದನ್ನು ನಿಲ್ಲಿಸಬೇಕು. ಅವಶ್ಯಕತೆ ಇರುವವರಿಗೆ ಪುನರ್ವಸತಿ ಕಲ್ಪಿಸಬೇಕು. ಶಿಕ್ಷಣ ಮತ್ತು ಉದ್ಯೋಗದ ಅವಕಾಶ ಒದಗಿಸಬೇಕು. ಎಡವಟ್ಟಾದ ಸಹಾಯಕ್ಕೆ ಬದಲಾಗಿ ಶಿಸ್ತುಮಯ ಸಹಾಯ. ಭಿಕ್ಷೆ ಕೊಡಬೇಡಿ - ಬದಲಿಗೆ ಸರಕಾರ ಅಥವಾ NGO ಗಳನ್ನು ಸಂಪರ್ಕಿಸಿ, ಪುನರ್ ಶಿಕ್ಷಣ ಕೇಂದ್ರಗಳು, ಆಶ್ರಯ ಗೃಹಗಳು, ಉಚಿತ ಆರೋಗ್ಯ ಸೇವೆಗಳು. ಸ್ವಯಂಸೇವಕರಾಗಿ ಜಾಗೃತಿ ಅಭಿಯಾನಗಳಲ್ಲಿ ಭಾಗವಹಿಸಿ. ಸರ್ಕಾರಿ ಯೋಜನೆಗಳನ್ನು ಪ್ರೋತ್ಸಾಹಿಸಿ, ಜನಜಾಗೃತಿ ಮೂಡಿಸಬೇಕು. ಈ ಮೂಲಕವಾಗಿ ಭಿಕ್ಷಾಟನೆಯನ್ನು ತಡೆಯಲು ನಾವು - ನೀವು ಕೈಜೋಡಿಸಬೇಕು. ಭಿಕ್ಷಾಟನೆ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿ ನಾಗರಿಕನು ಹೊಣೆಗಾರ, ಸಹಾನುಭೂತಿಯ ಜೊತೆಗೆ ಜವಾಬ್ದಾರಿಯು ಕೂಡ ಇರಬೇಕು .

ಪೂಜಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೩

ಚಿತ್ರಗಳು

ಚಿತ್ರ ರಚನೆ :- ಚೈತ್ರ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ 

ಸಂಚಿಕೆ - ೦೩

ಚಿತ್ರಗಳು

ಚಿತ್ರ ರಚನೆ :- ಪ್ರೇಮಾವತಿ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸೋಮವಾರ, ನವೆಂಬರ್ 3, 2025

ಸಂಚಿಕೆ - ೦೨

 ಸಂಪಾದಕೀಯ


ವಿದ್ಯಾರ್ಥಿಗಳ ಬರವಣಿಗೆಯ ಮಹತ್ವ

      ಬರವಣಿಗೆಯು ಕೇವಲ ಶಬ್ದಗಳ ಜೋಡಣೆಯಲ್ಲ, ಅದು ಭಾವನೆಗಳ, ಚಿಂತನೆಯ ಅಭಿವ್ಯಕ್ತಿಯ ಮಾರ್ಗವಾಗಿ ಪರಿಣಮಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಬರವಣಿಗೆ ಒಂದು ಕಲೆಯಷ್ಟೇ ಅಲ್ಲ - ಅದು ವ್ಯಕ್ತಿತ್ವವನ್ನು ರೂಪಗೊಳಿಸುವ ಪ್ರಕ್ರಿಯೆಯಾಗಿದೆ.

      ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಗಳ ಹಿಂದೆ ಓಡುವ ಓಟದ ಸ್ಪರ್ಧೆಯಲ್ಲಿ ಆನೇಕ ವಿದ್ಯಾರ್ಥಿಗಳು ತಮ್ಮ ಒಳಗಿರುವ ಸೃಜನಾತ್ಮಕ ಚಿಂತನೆಗಳನ್ನು ಮರೆತುಬಿಟ್ಟಿದ್ದಾರೆ. ಆದರೆ ಬರವಣಿಗೆಯ ಕ್ರಿಯೆಯಲ್ಲಿ ಭಾಗವಹಿಸುವವರು ತಮ್ಮ ಆತ್ಮ ವಿಶ್ವಾಸ, ಭಾವನಾತ್ಮಕ ಚಿಂತನೆ ಮತ್ತು ತರ್ಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಒಂದು ಕವನ, ಕಥೆ, ಲೇಖನ ಮತ್ತು ಗೀತೆ ಕೇವಲ ಸಾಹಿತ್ಯದ ಬರಹವಲ್ಲ ಬದಲಾಗಿ ವಿದ್ಯಾರ್ಥಿಗಳ ಮನಸ್ಸನ್ನು ಪ್ರತಿ ಬಿಂಬಿಸುವ ಕನ್ನಡಿಯಾಗಿದೆ.

      ಕಾಲೇಜು ಮಟ್ಟದ 'ಬತ್ತಿ' ಗೋಡೆ ಬರಹಗಳು ಇಂತಹ ಪ್ರತಿಭೆಗಳಿಗೆ ಜೀವ ತುಂಬುವ ವೇದಿಕೆಗಳಾಗಿವೆ. ಇವು ವಿದ್ಯಾರ್ಥಿಗಳ ಮನಸ್ಸಿನ ಅಭಿರುಚಿಯನ್ನು ಸಹೃದಯರಿಗೆ ಉಣಬಡಿಸುತ್ತದೆ ಹಾಗೂ ರುಚಿಸುತ್ತದೆ. ಇದು ವಿದ್ಯಾರ್ಥಿಗಳ ಭಾವನೆಯನ್ನು ಹಂಚಿಕೊಳ್ಳುವ 'ಅನುಭವ ಮಂಟಪ'ವಾಗಿದೆ. ಇದರ ಸದುಪಯೋಗದಿಂದ ವಿದ್ಯಾರ್ಥಿಗಳು ಭಾಷೆಯ ಮೇಲೆ, ಬರವಣಿಗೆಯ ಕೌಶಲ್ಯದ ಮೇಲೆ ಒಂದು ಬಿಗಿ ಹಿಡಿತವನ್ನು ಸಂಪಾದಿಸಿಕೊಳ್ಳಲು ಸಹಾಯಕವಾಗಿದೆ. ಬರವಣಿಗೆಯ ಮೂಲಕ ವಿದ್ಯಾರ್ಥಿಗಳು ಸಮಾಜದ ನಾನಾ ವಿಷಯಗಳ ಚಿಂತನೆ, ವಿಶ್ಲೇಷಣೆ ಮತ್ತು ತಮ್ಮದೇ ದೃಷ್ಟಿಕೋನವನ್ನು ರೂಪಿಸಲು ಕಲಿಯುತ್ತಾರೆ.

      ಆದುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಚಿಂತನೆಗಳನ್ನು ಕಾಗದದ ಮೇಲೆ ಸಹೃದಯರಿಗೆ ಉಣಬಡಿಸಲಿ, ಏಕೆಂದರೆ ಒಂದು ಸಣ್ಣ ವಾಕ್ಯವೂ ಪ್ರೇರಣೆಯ ಬೆಳಕಾಗಿ ಮತ್ತೊಬ್ಬರ ಮನಸ್ಸಿನಲ್ಲಿ ಬದಲಾವಣೆಯ ಬೀಜ ಬಿತ್ತಬಲ್ಲದು. ಬರೆಯೋಣ ಅಭಿವ್ಯಕ್ತಿಯಾಗೋಣ ಆಗಲೆ ನಮ್ಮ ತನವನ್ನು, ನಮ್ಮ ವ್ಯಕ್ತಿತ್ವವನ್ನು ದೃಡವಾಗಿಸಲು ಸಹಾಯಕವಾಗುತ್ತದೆ.

ಉಪಸಂಪಾದಕ, ಬಿತ್ತಿ ಸಂಪಾದಕ ಮಂಡಳಿ

ಸಂಚಿಕೆ - ೦೨

 ನಿಸರ್ಗದ ಜೊತೆ ಕಳೆದ ಕೆಲವು ಕ್ಷಣಗಳು

ಅದೇನೋ ಅರಿಯದ ಭಾವ

ನಿನ್ನಲ್ಲಿ ಅರಿವು ಹುಡುಕಲು 

ನನ್ನನ್ನೆ ನಾ ನಿನ್ನಲ್ಲಿ ಮರೆಯಾಗಿ 

ಮೈ ಮರೆತ ಆ ಸುಮಧುರವಾದ ಭಾವದಲ್ಲಿ 

ನಾನೆಲ್ಲಿ ಆರಸಲಿ ಈ ಕ್ಷಣಿಕ ಉಸಿರ ಮನುಜರಲ್ಲಿ

ಎಲ್ಲಿಹುದು ಆ ನಿನ್ನ ನಿಸ್ವಾರ್ಥ ಭಾವ 

ಎಲ್ಲೆಡೆಯು ತುಂಬಿದೆ ಬರಿ ಆಗತ್ಯತೆ 

ಹಾಗೂ ಸ್ವಾರ್ಥದ ಮೇಲೆ ನಕಲು ಹೆಸರುಗಳ ಹೊತ್ತಿದೆ 

ಸ್ನೇಹ ಹಾಗೂ ಪ್ರೀತಿ ಅಂತ 

ನೈಜತೆ ಇಲ್ಲದ ಈ ಭಾವಗಳು 

ನಿಜಕ್ಕೂ ನಿನ್ನ ಸರಿಸಾಟಿಯೇ 

ಈ ಗೊಂದಲಗಳ ಬಂಧ ಬೇಡವೆಂದು

ನಾ ನಿನ್ನಲ್ಲಿ ಅರಸಿ ಬಂದಾಗ 

ಕಂಡಿದ್ದು ನಿಜಕ್ಕೂ

ನೈಜ ಹಾಗೂ ನಿಸ್ವಾರ್ಥ ಪ್ರೀತಿ ಹಾಗೂ ಸ್ನೇಹ 

ನಿಜಕ್ಕೂ ಇದೊಂಥರ ಸುಂದರ 

ಹಾಗೂ ಸುಮಧುರ ಭಾಂದವ್ಯವೇ ಸರಿ


ಪವಿತ್ರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೨

 ಚಿಂತನೆ


ಕಳೆದು ಹೋದ ಘಟನೆಯು 

ಮರಳಿಬರುವುದೇ ?

ಮುಗಿದು ಹೋದ ಸಮಯವು 

ಮತ್ತೆ ಬರುವುದೆ ?

ಆಡಿ ಹೋದ ಮಾತುಗಳು 

ಹಿಂಪಡಿಯಲಾಗುವುದೆ ?

ಭೂತಕಾಲದ ಪಾಶದಲ್ಲಿ ಸಿಲುಕಿ 

ವರ್ತಮಾನದ ಸುಖವ ಮರೆತು 

ನಿರಾಶವಾದಿಗಳಾಗುವರೆ ? 

ಭವಿಷ್ಯದ ಚಿಂತನೆಯೊಂದಿಗೆ ಬೆಳೆದು 

ಮಾದರಿಯಾಗುವಿರೇ ?


ತ್ರಿವೇಣಿ.ವಿ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೨

 ನಮ್ಮ ಕ್ಲಾಸೇ ಚೆಂದ

ಟೇಬಲ್ ಎಲ್ಲ ಅಟ್ಟಿ ಕಟ್ಟಿ

ತಲೆ ಆಧಾರರ್ಕ್ಕ ಕೈ ಇಟ್ಟು

ಕೂದಲ್ ಎಲ್ಲ ತುರಿಸಿ ತುರಿಸಿ

ಪಾಠ ಕೇಳೋ ನಮ್ ಕ್ಲಾಸೇ ಚೆಂದಣ್ಣ


ಅಂಕು ಡೊಂಕು ಬಾಗಿದ್ ದೇಹ

ಟೇಬಲ್, ಚೇರು ಎಳಿಯೋ ಸದ್ದು 

ಕಣ್ಣಿನ್ ಮೇಲೆ ರೆಪ್ಪೆ ಬಿದ್ದು 

ಪಾಠ ಮಧ್ಯೆ ಬೇರೆ ಓದೋ ನಮ್ ಕ್ಲಾಸೇ ಚೆಂದಣ್ಣ


ಲಾಲಿ ಹಾಡೋ ಫ್ಯಾನು ಸದ್ದು

ಭಂಗ ಮಾಡೋ ಮಾಸ್ಟ್‌ರು ಮಾತು

ನಿಮಿಷಕ್ಕೊಮ್ಮೆ ವಾಜ್ ನೋಡೋ 

ಒಳ್ಳೆ ಮಕ್ಕಳಿರುವ ನಮ್ ಕ್ಲಾಸೇ ಚೆಂದಣ್ಣ


ಶ್ರೇಯಸ್ ಬನ್ನಡ್ಕ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೨

 ನನ್ನ ಭಾರತ

ಭಾರತ ಖಂಡದ ನಾಡಿನೊಳಗೆ 

ಬ್ರಿಟಿಷರ ಆಸೆಪಟ್ಟು ಬಂದ 

ದೇಶದೊಳಗೆ ನೀತಿಗಳ ಸಾರಿ 

ಸಾಧನೆಯ ಸಾಧಕರ ಪರಿಚಯಿಸಿದ ನಾಡು 

ನನ್ನ ಭಾರತ


ಕಲೆಶಿಲ್ಪಗಳ ಭವ್ಯ ನಾಡಿನಲ್ಲಿ 

ಕಲಾ ವೈಶಲ್ಯ ತೋರಿದ 

ಚಿಂತಕರ ಚಿಂತನೆಯೊಳಗೆ ಮಾಡಿ 

ತೋರಿದ ಅಭಿವೃದ್ಧಿಯ ದೇಶದಲ್ಲಿ 

ಬೇರೆ ನಾಡಿಗೆ ಬೆಳಕಾದ 

ನನ್ನ ಭಾರತ


ಎಲ್ಲಿ ನೋಡಿರದ ಸೌಂದರ್ಯದ 

ಬೀಡಿನ ಪ್ರಕೃತಿಯ ಮನಮೋಹಕ ನೆಲೆಗಳನ್ನು 

ತೋರುವ ಪರದೇಶಿಯ ಬರವಣಿಗೆ 

ಸಾಹಿತ್ಯದ ಕಲೆಯೊಳಗೆ ನುಡಿಮುತ್ತುಗಳಾಗಿ 

ವರ್ಣಿಸಿದ ಅಕ್ಷರಗಳು ಸಾಟಿ ಇಲ್ಲದಂತಾಗಿದೆ 

ನನ್ನ ಭಾರತ


ಎಲ್ಲರೂ ಒಂದಾಗಿರುವ ಜೇನಿನ ಹಾಗೆ 

ಭಾರತಾಂಬೆಯ ಮಡಿಲಲ್ಲಿ ಬೆಳೆದ 

ದೊಡ್ಡ ಮನಸ್ಸಿನ ಹೃದಯವಂತರ ಕಂಡ 

ಕವಿಗಳ ಬರವಣಿಗೆಯನ್ನು ಸಾಹಿತ್ಯಕ್ಕೆ 

ಭೂಷಣವಾಗಿಸಿ ಸಾಧನೆಗೈದ ದೇಶವದು 

ನನ್ನ ಭಾರತ


ಈ ಸಾಧನೆಯ ಸಾಧಕರ ಕೊಟ್ಟ 

ನನ್ನ ಭಾರತಕ್ಕೆ ನಾನು ಕೂಡ 

ಸಾಧನೆ ಕೊಟ್ಟರೆ ಸಾಧಕನೊಳಗಾಗುವೆ


ಮಲ್ಲಿಕಾರ್ಜುನ ಹ ಕೆರೂಡಿ, ಎಂ. ಎಸ್ ಸಿ, ಭೂಗೋಳ ಶಾಸ್ತ್ರ

ಸಂಚಿಕೆ - ೦೨

 ನಿಸರ್ಗದ ಮೌನ ಗೀತೆ

ಆಕಾಶದಲಿ ತೇಲಾಡುವ ನೀಲಿಮೆಯು,

ಅನಂತದ ಕರೆ ನೀಡ:

ಭೂಮಿಯ ಮಡಿಲಲಿ ಅರಳುವ ಹಸಿರು.

ಜೀವನದ ಗುಟ್ಟು ಹೇಳುವೆ.

ಗುಡ್ಡಗಳೆಬ್ಬಿಸುವ ಮೌನ ಭಾಷೆಯು,

ಯುಗಗಳ ಕಥೆ ಹೇಳಿದೆ:

ಅಲ್ಲಿ ಸುಳಿದಾಡುವ ತಂಪೆಂಬ ತಂಗಾಳಿಯು, 

ಮನದ ತಳಮಳವ ತೀಡಿದೆ.

ಝುಳುಝುಳು ಹರಿಯುವ ನದಿಯ ನುಡಿಗಳು, 

ಕಾಲದ ಲಯವ ಹಾಡಿದೆ:

ಕಲ್ಲುಗಳ ಸವೆಸಿ, ಬಂಡೆಯ ಸರಿಸಿ, 

ತನಗೆ ದಾರ ಮಾಡಿಕೊಂಡಿದೆ.

ಸೂರ್ಯನ ಕಿರಣದ ಮೊದಲ ಸ್ಪರ್ಶಕೆ, 

ಹೂವೊಂದು ಕಣ್ಣು ತೆರೆಯುತ್ತಿದೆ:

ರಾತ್ರಿಯ ಮೌನವ ಮರೆಸಿದ ನಕ್ಷತ್ರಗಳು.

ದೂರದ ಕನಸ ಹೊತ್ತು ತರುತ್ತಿವೆ.

ಚಕನ ಕೂಜನದಿ, ಕೋಗಿಲೆಯ ಸ್ವರದಿ, 

ಪ್ರತಿಧ್ವನಿಸುವ ನಾ ಒಂದು;

ಮರದ ಬೇರಿನಲಿ, ಎಲೆಯ ತಿರುಳಿನಲಿ, 

ನನ್ನನ್ನೇ ನಾನು ಕಾಣುವೆ.

ಭೂಮಿಯ ಈ ಗರ್ಭದಲ್ಲಿ, ಜೀವಜಾಲದ ಜಾಲದಲ್ಲಿ, 

ನಾನು ಕೇವಲ ಒಂದು ಸೂಕ್ಷ್ಮಕಣ:

ಆದರೂ ಈ ವಿಶ್ವದ ಪ್ರತಿ ಅಣುವಿನಲ್ಲಿ, 

ನನ್ನದೆ ಆಳದ ಸ್ಪಂದನ.

ಪ್ರಕೃತಿಯೇ ನೀನು ದೈವದ ರೂಪವು.

ಸತ್ಯದ ಸಾರವು ನೀನೆ, 

ನಿನ್ನಲಿ ಲೀನವಾಗುವದೇ ಪರಮ ಸುಖವು, 

ನಿಸರ್ಗದ ಮೌನವೇ ನನ್ನ ತತ್ವವೇ.


ನೇತ್ರಾವತಿ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೨

 ಮಹಾತಾಯಿ

ಮರಗಳಿಗೂ ಸಹ ಮಹಾತಾಯಿ 

ಗುಣ ಹರಿಯುವ ನದಿ ಮಹಾದಾಯಿ 

ಅನಕ್ಷರನ್ನೇ ಆದಳು ತಾಯ್ತನಕೆ ತಾಯಿ 

ಅಗಣಿತ ಸ್ವಭಾವದ ಕರುಣಾಮಯಿ 

ಅಕ್ಕ - ತಿಮ್ಮಕ್ಕ ಪರಿಚಯಿಸಿದರು ಹೆಣ್ಣು ಬರಿ 

ತಾಯಿಯಲ್ಲ ಮಹಾತಾಯಿ


ಪೋಷಿಸಿದಳಂತೆ ಸಸಿಗಳನ್ನು ಮಕ್ಕಳೆಂದು 

ಚಿರಪರಿಚಿತಳಾದಂತೆ ಸಾಲುಮರದ ತಿಮ್ಮಕ್ಕ ಎಂದು 

ಪಡೆದಳಂತೆ ಪದಶ್ರೀ ಪಡೆಯದೆನೆ ಪದವಿಯೊಂದು 

ನೆರಳದಳಂತೆ ನಾಡಿಗೆ, ಹಸಿರನೇ ಉಸಿರೆಂದು 

ಹೆಣ್ಣು ಅಬಲೆಯಲ್ಲ ಸಬಲೆ ಎಂದ ಮಹಾತಾಯಿ


ತೊಟ್ಟಿಲು ತೂಗುವ ಕೈ ಜಗತ್ತನ್ನಾಳ ಬಲ್ಲದು 

ಎಂಬ ಉಕ್ತಿ ನಿಜವಾಗ ಬಲ್ಲದು 

ಆದುನಿಕತೆ ವ್ಯಕ್ತಿತ್ವಕ್ಕೆ ಸೀಮಿತವಾಗಿರಲಿ ವೇಷಭೂಷಣಕ್ಕಲ್ಲ 

ನಗರೀಕರಣ ಅಭಿವೃದ್ಧಿಗೆ ಸೀಮಿತವಾಗಿರಲಿ 

ಪರಿಸರ ನಾಶಕ್ಕಲ್ಲ 

ನಿತ್ಯ ಹರಿದ್ವರ್ಣಗಳಿಂದ ನಿತ್ಯೋತ್ಸವ ನೆರವೆರಲಿ 

ಮಹಾತಾಯಿ ಕನ್ನಡಾಂಬೆಯ ಪಾದಕಮಲಕ್ಕೆ,


ಶ್ರೀಷ್ಮ ಎಂ. ಬಿ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೨

 ಅಪ್ಪ

      ಬಾಲ್ಯದಲ್ಲಿ ಹೆಗಲೇರಿ ಊರೆಲ್ಲ ಕಂಡದ್ದೊಂದೆ ನನಗೆ ನೆನಪು ಮತ್ತೆ ಆ ಅವಕಾಶ ಸಿಗದಂತೆ ಬಹುದೂರ ಹೋಗಿ ಮಿಂಚಿ ಮರೆಯಾಯ್ತು, ತಾನು ಕಂಡದ್ದಕಿಂತ ಹೆಚ್ಚು ತನ್ನ ಮಕ್ಕಳು ಕಾಣಲಿ. ತನಗಿಂತ ಉತ್ತಮವಾದ ಬದುಕು ಬದುಕಲಿ ಎಂದು ಬಯಸುವಂತ ಜೀವ ಅಂದ್ರೆ ಅದು ಅಪ್ಪ.

      ಆಕಾಶದಂತೆ ಅಪ್ಪ ಭೂತಾಯಿಯಂತೆ ಅಮ್ಮ ಎನ್ನುವ ಮಾತಿದೆ.ಹಾಗೆ ಅಪ್ಪನಂತೆ ಉತ್ತಮ ಗುರು ಭವಿಶಃ ಯಾರು ಇರಲಾರರು. ಅಪ್ಪ ಅಂದರೆ ಧೈರ್ಯ, ವಾತ್ಸಲ್ಯ ಮನೆಯವರ ಮನಗಳು ಅರಿತ ಮನೋಜ್ಞಾನಿಯವನು. ದಂಡನಾಯಕ, ಕಾವಲುಗಾರ ಮತ್ತು ಮನೆಗೆ ರಾಜನು ಅವನೆ, ಕಬ್ಬಿನಂತೆ ಕಾಣುವನು ನೋಡಲು ಓರಟಾದದರರೂ ಒಳಗೆ ಸವಿಯ ಸತ್ವವಿಹುದು.

      ಅಪ್ಪ ಸದಾ ಸಂಸಾರಕ್ಕಾಗಿಯೇ ದುಡಿದು ಸವಿಯುವನು. ಪ್ರತಿಯೊಬ್ಬರ ಬಯಕೆಗಳನ್ನು ತಣಿಸಲೆತ್ನಿಸುವಂತಹ ಜೀವನದು. ಇಡೀ ಜೀವನ ಪೂರ್ತಿ ಬದ್ದು ಬಂದು ಬನ್ನಿರುವರ್ಗು ಬದುಕಿದ್ದು ಅಪ್ಪ, ಈ ಬದ್ದಿಗಾಗಿಯೇ ಆದರೆ ಆ ಬದು ಅಪನೇಗೆ ಬನ್ನಿಸ್ತು. ಬದಲ್ಲಿ ಬದ್ಯಾಗಿ ಬದ್ಭಗಕಾಗ್ಲೆ ಬದುಕಲ್ಲೇ ಬಂಧಿಯಾಗಿ ಕೊನೆಗೆ ಬಿಡಿಸಿಕೊಂಡು ಕಾಣದೆ ದೂರ ಹೋದವ ಅಪ್ಪ, ಕಾಲ ಸರಿದರರೂ ಕೂಡ ಅಪ್ಪನ ನೆನಪು ಅಮರವಾದುದು. ಅವನ ಕೋರೆ ಮೀಸೆ ಹಿಡಿದು ಎಳೆದಾಡಿದ ನೆನಪಿದೆ, ನನ್ನೆಳೆಯ ಕಾಲಿನಿಂದ ಅಪ್ಪನ ಎದೆಗೆ ಒದೆವಾಗ, ತೊದಲ ನುಡಿಯಿಂದ ಅಪ್ಪಾ ಎಂದಾಗ ಅವನ ಮುಖದಲ್ಲಿ ಮುಸುನಗುವಿನೊಡನೆ ಚಂದ್ರನ ಕಾಂತಿ ಬೀರುತಿತ್ತು.

      ಅಪ್ಪನೆದೆಗೆ ಅಪ್ಪಿ ಅಳುವಾಸೆ ಅವನ ಸುಖ ದುಖಃಗಳನ್ನು ಕೇಳುವಾಸೆ. ಯಾರದ್ದೋ ತಂದೆ ಮಗನಿಗೆ ಜವಬ್ದಾರಿಯ ಪಾಠ ಹೇಳುತ್ತಿದ್ದರೆ ಈ ಜೀವಕ್ಕೆ ತಿಳಿಯದೆ ಕಣ್ಣೀರು ಬರುವವು. ಯಾರದ್ದೋ ಅಪ್ಪ ಮಕ್ಕಳಿಗೆ ಬೈದಾಗ ಹೊಗಳಿದಾಗ ಮನಸ್ಸು ಭಾರವಾಗುವುದು.

      ಶಿಶುಚವಾಗಿದ್ದಾಗ ಮುದ್ದಿಸುವನು. ಬಾಲ್ಯದೊಳಗೆ ಕೈ ಹಿಡಿದು ನಡೆಸಿ ತಾರುಣ್ಯದಲ್ಲಿ ತಿದ್ದಿ ತೀಡಿ ಬೆಳೆಸಿ ಯೌವನದ್ದಲ್ಲಿ ಜವಬ್ದಾರಿಗಳ ಗುಡ್ಡು ತಿಳಿಸಿ, ಹೆಜ್ಜೆ ಹೆಜ್ಜೆಗೂ ತನ್ನ ಬದುಕಿನ ಅನುಭವಗಳನ್ನು ಹಂಚುತ್ತ, ಸದಾ ಜೊತೆಯಾಗಿದ್ದು ಮಾರ್ಗದರ್ಶನ ನೀಡುವವನು, ದಂಡಿಸುವನು. ಹೊಗಳುತ್ತ ತೆಗಳುತ್ತ ತಿದ್ದಿ ತೀಡುವವನು. ಅಮ್ಮ ಎಷ್ಟೇ ಪ್ರೀತಿ ಕೊಟ್ಟರೂ ಮಕ್ಕಳಿಗೆ ತಂದೆಯ ಸ್ಥಾನವನ್ನು ತುಂಬಲಾರಳು. ಹಾಗೆಯೆ ಉಪ್ಪು ಇಲ್ಲದ ಊಟ, ಅಪ್ಪನಿಲ್ಲದ ಮನೆ ಎರಡೂ ಒಂದೆ. ಯಾವುದು ಸಂಪೂರ್ಣ ಸವಿ ನೀಡದು.

ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೨

 ಪುಸ್ತಕ ಪರಿಚಯ


ಪುಸ್ತಕದ ಹೆಸರು : ಪೈಗಂಬರರನ್ನು ತಿಳಿಯಿರಿ

ಸಂಪಾದಕರು : ಮೈನುದ್ದೀನ್ ಮುಈನೀ, ಇನೋಳಿ


      ಪೈಗಂಬರ್ ಇಲ್ಲಲಾಹು ಆಲೈಹಿವಸಲ್ಲಮರ ಸಂದೇಶಗಳು ಸಾರ್ವಕಾಲಿಕ. ಸಮೃದ್ಧ ಸಮಾಜ ನಿರ್ಮಾಣಕ್ಕೆ ಪೈಗಂಬರರ ತತ್ವಗಳು ಹೇಗೆ ಪರಿಣಾಮಕಾರಿಯಾಗಿದೆ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳನ್ನು ಜಗತ್ತು ಕಂಡಿದೆ. ಜಗತ್ತಿನಾದ್ಯಂತ ಅವರ ಬಗೆಗಿನ ಅಧ್ಯಯನಗಳು ನಡೆಯುತ್ತಿವೆ. ಪೈಗಂಬರರ ಸಾಮಾಜಿಕ ಚಿಂತನೆಗಳು, ಆರ್ಥಿಕ ನಿಯಮಗಳು, ಶಾಂತಿಯ ಸಂದೇಶಗಳನ್ನು ಪರಿಚಯಿಸಿಕೊಡಬೇಕಾದ ಅನಿವಾರ್ಯತೆ ಇದೆ. ಆರೇಬಿಕ್, ಇಂಗ್ಲೀಷ್, ಉರ್ದು ಸೇರಿದ ಭಾಷೆಗಳಲ್ಲಿ ಪೈಗಂಬರರ ಬಗ್ಗೆ ಸಾವಿರಾರು ಗ್ರಂಥಗಳು ಲಭ್ಯ. ಆದರೆ, ಕನ್ನಡದ ಮಟ್ಟಿಗೆ ಪೈಗಂಬರರ ಬಗೆಗಿನ ಗ್ರಂಥಗಳು ಇನ್ನೂ ಹೆಚ್ಚು ಬರಬೇಕಿದೆ.

      ಗೆಳೆಯ ಝನುದ್ದೀನ್ ಮುಈನಿ ಸಂಪಾದಕತ್ವದಲ್ಲಿ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಬಗೆಗಿನ ಪುಟ್ಟ ಕೃತಿ ಬಿಡುಗಡೆಗೊಂಡಿದೆ. ಗೆಳೆಯ ಸಂಪಾದಿಸಿದ ಈ ಕೃತಿಯಲ್ಲಿ ಒಟ್ಟು ಐದು ಲೇಖನದಲ್ಲಿ ಪೈಗಂಬರರ ಜನನದಿಂದ ಮರಣದವರೆಗಿನ ಜೀವನ ವೃತ್ತಾಂತದ ಹೃಸ್ವ ಪರಿಚಯವಿದೆ. ಲೇಖನದ ಪ್ರತಿ ವಾಕ್ಯಗಳನ್ನು ಅಧ್ಯಯನಕ್ಕೆ ಎತ್ತಿಕೊಂಡರೆ ಸಾವಿರಾರು ಪುಟಗಳ ವಿಶ್ಲೇಷಣೆ ಬರೆಯಬಹುದು. ಪೈಗಂಬರರನ್ನು 'ಝೀರೋ'ದಿಂದ ಓದಲು ಕೂತವರಿಗೆ ಅವರ ಜೀವನ ಯಾತ್ರೆಯನ್ನು ಒಂದೇ ಓದಿಗೆ ತಿಳಿದುಕೊಳ್ಳಬಹುದು. ಇಸ್ಮಾಈಲ್ ಸಅದಿ ಅವರು ಬರೆದ ಲೇಖನವು ಪೈಗಂಬರರ ವಿಶೇಷತೆಯನ್ನು ಎತ್ತಿ ಹಿಡಿದು ಹಲವು ನಾಮಗಳಲ್ಲಿ ಅನುಯಾಯಿಗಳು ಅವರನ್ನು ಕರೆದುಕೊಳ್ಳುತ್ತಾರೆ. ಒಬ್ಬರಿಗೆ ಒಂದಕ್ಕಿಂತ ಹೆಚ್ಚು ಹೆಸರುಗಳಿದ್ದರೆ ಅದು ಅವನ ಗೌರವವನ್ನು ಸೂಚಿಸುತ್ತದೆಂದು ಗ್ರಂಥಗಳು ಚರ್ಚಿಸುತ್ತದೆ. ಜಗತ್ತು ಪೈಗಂಬರರನ್ನು ಪ್ರೀತಿಸಿದ ಬಗ್ಗೆ ಮತ್ತು ಅವರ ಪ್ರೀತಿಸಬೇಕಾದ ಅನಿವಾರ್ಯತೆಯ ಬಗ್ಗೆ ಆನ್ಸಾರ್ ಸಅದಿ ತಂಬಿನಮಕ್ಕಿ ಅವರು ಬರೆದಿದ್ದಾರೆ.

      ಇಸ್ಮಾಈಲ್ ನಈಮಿ ಬರೆದ ಲೇಖನವು ಪೈಗಂಬರರ ಸರಳ ಬದುಕನ್ನು ಕಟ್ಟಿಕೊಡುತ್ತದೆ. 'Muhammad : His life based on the earliest sources' ಎಂಬ ಆಂಗ್ಲ ಕೃತಿಯ ಆಯ್ದ ಭಾಗದ ಅನುವಾದ ಕೂಡಾ ಈ ಕೃತಿಯಲ್ಲಿ ಸೇರಿಸಲಾಗಿದೆ. "ಯುದ್ಧ ಖೈದಿಗಳು' ಎಂಬ ಶೀರ್ಷಿಕೆಯಲ್ಲಿ ಸ್ವಾಲಿಹ್ ತೋಡಾರ್ ಅನುವಾದಿಸಿದ್ದಾರೆ.

      ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಬದುಕು ಮತ್ತು ಸಂದೇಶಗಳನ್ನು ಸರಳವಾಗಿ ತಿಳಿಸಿಕೊಡುವ 'ಪೈಗಂಬರರನ್ನು ತಿಳಿಯಿರಿ' ಎಲ್ಲರೂ ಓದಬೇಕಾದ ಕೃತಿ. ಇಂತಹ ಇನ್ನಷ್ಟು ಕೃತಿಗಳು ಪ್ರಕಟವಾಗಲಿ.

ಸಲೀಂ, ಸುಳ್ಯ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೨

 ಕನ್ನಡಿಗನ ಕರುಳ್ಳುಡಿ

ಕರುನಾಡ ಮಡಿಲಲ್ಲಿ ಕಾವೇರಿ ತೀರದಲ್ಲಿ

ಕನ್ನಡ ಪದವನ್ನು ನಾ ಕಲಿತು

ಕಲಿಯುಗದ ಕಲಿಕೆಗೆ ಮುನ್ನುಡಿಯಾಗಿ 

ಕವಿಯಂತೆ ನಾ ಕಾವ್ಯವನ್ನು ಕಟ್ಟಿ

ಕವಲು ಹೊಡೆಯುವ ದಾರಿಯಲ್ಲಿ ನನ್ನ ಕನ್ನಡ ಪದಗಳನ್ನು ಭಿತ್ತಿ

ಕನಕನ ಕಲ್ಪನೆಯಂತೆ ಕಾವ್ಯಕ್ಕೆ ಕಳಶವ ನಿಟ್ಟು

ಕಂಗೊಳಿಸುವ ಕಾಮನ ಬಿಲ್ಲಿನಂತೆ

ಕನ್ನಡಾಂಬೆಗೆ ಹೊನ್ನ ಕಿರಣವ ಸುರಿಸಿ

ಕಣಕಣದಲ್ಲೂ ನನ್ನ ಕನ್ನಡವನ್ನು ಬಿಗಿದಪ್ಪಿಕೊಂಡು

ಕನ್ನಡದ ಬಾವುಟವನ್ನು ಕೈಲಾಸವನ್ನು ಶಿಲೆಯನ್ನಾಗಿ ಕೆತ್ತಿಸಿ

ಕವಿ ಕಾಳಿದಾಸನ ಕಲ್ಪನೆಯಂತೆ ಆ ಶಿಲ್ಪಾಕಲೆಯನ್ನು ವರ್ಣಿಸಿ

ಕಂಠಾಭರಣದಿಂದ ಕೋಗಿಲೆಯ ಧ್ವನಿಯಾಗಿ ಕನ್ನಡ ಪದವನ್ನು ಹಾಡಿದೆ.

ಕಲಿಯುಗದ ಉದ್ದಕ್ಕೂ ಕನ್ನಡವನ್ನು ಕಲಿಕೆಯ ಭಾಗವನ್ನಾಗಿ ಮಂಡಿಸಿ 

ಕನ್ನಡಮ್ಮನ ಕರದಲ್ಲಿ ಕಣ್ಣೆರೆಯುವ ಕಂದನಾಗಿ 

ಕರುನಾಡ ಮಡಿಲಲ್ಲಿ ಕಾವೇರಿ ತೀರದಲಿ 

ಕನ್ನಡಿಗನಾಗಿ ನಾ ಬಾಳ್ವೆ 

ಕರ್ನಾಡಕವು ಎಲ್ಲ ಧೃವತಾರೆಗಳಿಗೂ ಎಂದಿಗೂ ಒಂದು ಆಲಯ 

ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ


ಮಹೇಶ ಜಿ.ಕೆ., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೨

 ತಾಯಿ 

ನನ್ನ ತಾಯಿಯವಳು.

ಜನ್ಮ ನೀಡಿದವಳು.

ನೋವ ಉಂಡವಳು.

ನನ್ನ ಉಸಿರವಳು.

ಪ್ರೀತಿ ಹಂಚಿದವಳು.

ಮಮತೆ ತೋರಿದವಳು.

ಹೃದಯ ಮಿಡಿತ ಅವಳು.

ನನಗೆ ಪಾಠ ಶಾಲೆಯವಳು.

ನನ್ನ ಜೀವ ಅವಳು.

ನನ್ನ ತಾಯಿಯವಳು.

ಸಹನೆ ಕಲ್ಪಿಸಿದವಳು.


ಅನೂಪ್ ಕುಮಾರ್, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ


ಸಂಚಿಕೆ - ೦೨

 ಅರಿವು

ನಿನ್ನ ನೀ ಉಳಿಸಿಕೊ 

ಧರ್ಮ ತಾನಾಗಿಯೇ ಉಳಿಯುವುದು 

ನಿನ್ನ ನೀ ಗೌರವಿಸಿಕೊ 

ಗೌರವ ತಾನಾಗಿಯೇ ಉಳಿಯುವುದು


ನಾನು ನನ್ನದೆಂಬುದನು ಆಳಿಸಿಕೊ 

ಜಾತಿ ಧರ್ಮವೆಂಬುದೇ ಆಳಿವುದು 

ಆಸೆ ಸ್ವಾರ್ಥವೆಂಬುದನು ಅಳಿಸಿಕೊ 

ದ್ವೇಷ ಸಂಘರ್ಷವೆಂಬುದೇ ಅಳಿವುದು


ಹುಟ್ಟಿಗೆ ಜಾತಿ ಕಾರಣವಲ್ಲ 

ಜಾತಿಗೆ ಹುಟ್ಟು ಕಾರಣವಲ್ಲ 

ಹುಟ್ಟು ಜಾತಿಗಳಿಗೆ ನಾವೇ ಕಾರಣ


ದುಶ್ಯಂತ್, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೦೨

ಚಿತ್ರಗಳು 


ಸಂಚಿಕೆ - ೦೨

ಚಿತ್ರಗಳು


 

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...