ಸೋಮವಾರ, ನವೆಂಬರ್ 17, 2025

ಸಂಚಿಕೆ - ೦೪

ಪುಸ್ತಕ ವಿಮರ್ಶೆ

ಪುಸ್ತಕದ ಹೆಸರು : ಗೌರ್ಮೆಂಟ್ ಬ್ರಾಹ್ಮಣ

ಲೇಖಕರು : ಅರವಿಂದ ಮಾಲಗತ್ತಿ 

      ಕನ್ನಡ ಸಾಹಿತ್ಯ ಲೋಕದ ಒಂದು ಗಮನಾರ್ಹವಾದ ಹೆಸರೆಂದರೆ ಡಾ. ಅರವಿಂದ ಮಾಲಗತ್ತಿಯವರದ್ದು, ಅವರ ಬದುಕು ಮತ್ತು ಸಾಹಿತ್ಯ ಸ್ವರೂಪ ವಿಶಿಷ್ಟವಾದದ್ದು. ಗ್ರಾಮೀಣ ಪರಿಸರದ ಮಾಲಗತ್ತಿ ಅವರ ಬದುಕು ಗ್ರಾಮೀಣ ಸೊಗಡಿನ ಆಟ - ಕಲಿಕೆಗಳಿಂದಲೂ ಬೆರೆತಿದೆ. ಇವರು ಬದುಕಿ ಬಾಳಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಗತಿಗಳು ಅವರೊಳಗೆ ಸೇರಿಸುವ ಎಲ್ಲಾ ಮೌಲ್ಯಗಳನ್ನು ಹೊರ ಹಾಕುತ್ತದೆ ಎನ್ನಬಹುದು. "ಗೌರ್ಮೆಂಟ್ ಬ್ರಾಹ್ಮಣ" ಅರವಿಂದ ಮಾಲಗತ್ತಿಯವರ ಆತ್ಮಚರಿತ್ರಾತ್ಮಕ ಕೃತಿಯಾಗಿದೆ. ಶತಶತಮಾನಗಳಿಂದ ಚತುವರ್ಣದ ಸಂಕೋಲೆಯ ಕಾರಣಕ್ಕಾಗಿ ಮೇಲ್ವರ್ಗದವರು ನಡೆಸುವ ದರ್ಪಕ್ಕೆ ಸಿಲುಕಿದ ದಲಿತ ಜೀವನದ ಕಥೆಯನ್ನು ಈ ಕೃತಿಯಲ್ಲಿ ನೋಡಬಹುದು. ದಲಿತ ಜನಾಂಗದ ಹಸಿವು ಬಡತನ ಅಸ್ಪೃಶ್ಯತೆ, ಸಂಪ್ರದಾಯ, ಆಚರಣೆಯು ವಿಶ್ಲೇಷಣೆ ಆತ್ಮಕಥೆಯಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಇಂತಹ ಆತ್ಮಕಥೆಗಳ ಮೂಲಕ ದಲಿತ ಸಮುದಾಯದ ಜೀವನದ ಸಾರವನ್ನು ಭಟ್ಟಿ ಇಳಿಸಿದ ಪ್ರಮುಖ ಲೇಖಕರಲ್ಲಿ ಮಾಲಗತ್ತಿ ಅವರ ಬರಹ ಉತ್ತಮ ಮೌಲ್ಯಯುತವಾದದ್ದು. ಇವರು ತಮ್ಮ ಆತ್ಮ ಕಥನದಲ್ಲಿ ದಲಿತ ಜನಾಂಗದವರ ಸಂಪೂರ್ಣ ಚಿತ್ರಣವನ್ನು ನೀಡಿದ್ದಾರೆ. ದಲಿತರು ಮೇಲ್ವರ್ಗದವರಿಂದ ತುಳಿತಕ್ಕೆ ಒಳಗಾದ ಬಗ್ಗೆ ಮತ್ತು ಅವರಿಗಾದ ನೋವು ಕಷ್ಟಗಳನ್ನು ಹಂಚಿಕೊಳ್ಳುತ್ತಾರೆ.

      ಆ ಕಾಲದಲ್ಲಿ ದಲಿತರ ಜೀವನ, ಬದುಕು, ಹಸಿವು ಒಂದು ಹೊತ್ತಿನ ಉಟಕ್ಕೂ ಅವರು ಅನುಭವಿಸಿದ ಕಷ್ಟಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಒದಗಿಸುತ್ತಾರೆ. ದಲಿತ ಜಗತ್ತಿಗೆ ಅವಮಾನವೇನು ಅಪರಿಚಿತವಲ್ಲ. ಅವಮಾನದ ಪಟ್ಟಿಯನ್ನು ಮಾಡುತ್ತಾ ಹೋದರೆ ಬಹುಶಃ ಪ್ರತಿಯೊಬ್ಬ ದಲಿತನ ಆತ್ಮಕಥೆಯೂ ವ್ಯಥೆಯ ಕಥೆಯೇ ಆದೀತು. ಈ ಕೃತಿಯು ಇಂತಹ ಅಪಮಾನಗಳ ಸರಣಿಯನ್ನು ಒಂದೊಂದಾಗಿ ಪೋಣಿಸಿ ಕೊಟ್ಟಂತೆ ಮಾನದಂಡಗಳು ನಮ್ಮೆದುರಿಗೆ ಕಾಣುತ್ತೇವೆ. ಯಾವುದೇ ರೀತಿಯಲ್ಲಿ ಮುಜುಗರ ಇಲ್ಲದೆ ತಾವು ಕಂಡಂತಹ ಮತ್ತು ಅನುಭವಿಸಿದ ಸಂಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಇದು ಒಬ್ಬ ವ್ಯಕ್ತಿಯ ಚರಿತ್ರೆಯಲ್ಲ. ಮನುಷ್ಯನ ಹಸಿವನ್ನು, ಹಸಿವೆಂದರಿಯದ ಅವರ ಭಾವನೆಗಳನ್ನು, ಭಾವನೆಗಳೆಂದು ಗುರಿತಿಸಲಾಗದ ಅವರ ಪ್ರೇಮವನ್ನು, ಪ್ರೇಮವೆಂದು ಒಪ್ಪಿಕೊಳ್ಳಲಾಗದ ಸಮಾಜವೊಂದರ ನಂಬಿಕೆ, ಆಚರಣೆಗಳ ಚರಿತ್ರೆಯಾಗಿದೆ.

      ಈ ಕೃತಿಯು ಮುಖ್ಯವಾಗಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಸಾಕಷ್ಟು ಯಶಸ್ಸು ಸಾಧಿಸಿ ಇದು ಹಣ, ರಕ್ತಪಾತ, ಕಾನೂನು, ಸಾಹಿತ್ಯದ ಮೂಲ. ತಾನು ಅನುಭವಿಸಿದಂತಹ ದುಃಖ, ದುಮ್ಮಾನ, ಅಪಮಾನ ಎಲ್ಲವನ್ನು ಬಿಚ್ಚಿಟ್ಟು, ಮನಸ್ಸಿಂದ ಆತ್ಮಚರಿತ್ರೆ ಬರೆಯುವ ಮೂಲಕ ಸಮಾಜದಲ್ಲಿ ಎಲ್ಲಾ ವರ್ಗದ ಜನರ ಮನವನ್ನು ಪರಿವರ್ತನೆಗೊಳಿಸುವುದು ಉತ್ತಮ ಎಂದು ಈ ಕೃತಿ ಸಾರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಈ ಪುಸ್ತಕವು ನನ್ನ ನೆಚ್ಚಿನ ಕೃತಿಯಾಗಿದೆ.

ಪೂಜಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...