ಸೋಮವಾರ, ನವೆಂಬರ್ 17, 2025

ಸಂಚಿಕೆ - ೦೪

ಚರಗದ ದಿನ

      ಚರಗ ಎನ್ನುವ ಪದವನ್ನು ಕೇಳಿದರೆ ಇದೇನು ವಿಚಿತ್ರ ಪದ ಎನಿಸಬಹುದು. ಆದರೆ ಇದು ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಕಂಡುಬರುವ ಒಂದು ವಿಶೇಷ ಆಚರಣೆ.

      ಚರಗದ ದಿನ ಅಂದರೆ ಸೀಗೆ ಹುಣ್ಣಿಮೆಯ ದಿನ ಮತ್ತು ಮಹರ್ಷಿ ವಾಲ್ಮೀಕಿಯ ಜಯಂತಿಯ ದಿನವಾಗಿದೆ. ಈ ಭಾಗಗಳಲ್ಲಿ ಇದೊಂದು ಹಬ್ಬ, ಹಿಂದಿನ ದಿನದಿಂದಲೇ ತಯಾರಿ ಪ್ರಾರಂಭಿಸುತ್ತಾರೆ. ಚರಗದ ದಿನವು ಈ ಭಾಗದ ರೈತರು ತಾವು ಬೆಳೆದ ಬೆಳೆಗೆ ವಿಧವಿಧವಾದ ಅಡುಗೆ ಮಾಡಿ ನೈವೇದ್ಯ ನೀಡುವ ದಿನವಾಗಿದೆ. ಹಿಂದಿನ ದಿನದಿಂದ ಪ್ರಾರಂಭಿಸಿ ಮನೆಯ ಹೆಣ್ಣುಮಕ್ಕಳು ಪೂರ್ತಿ ರಾತ್ರಿ ವಿಧವಿಧವಾದ ಅಡುಗೆ ಮಾಡುತ್ತಾರೆ. ಕರ್ಚಿಕಾಯಿ, ಎಣ್ಣೆಹೊಳಿಗೆ, ಕಡಬು, ವಡೆ, ಜೋಳದ ಕಡಬು, ಪುಂಡಿಪಲ್ಯ, ಐದು ವಿಧದ ತರಕಾರಿ ಪಲ್ಯ ಅದರಲ್ಲೂ ಮುಖ್ಯವಾಗಿ ಕುಂಬಳಕಾಯಿ ಪಲ್ಯ ಸೇರಿಸುತ್ತಾರೆ (ಏಕೆಂದರೆ ಕುಂಬಳಕಾಯಿ ದೃಷ್ಟಿ ತೆಗೆಯುವ ಸಂಕೇತವಾಗಿದೆ) ಮತ್ತು ಅನ್ನ ಇಷ್ಟು ವಿಧದ ಅಡುಗೆಯನ್ನು ಸೂರ್ಯೋದಯ ಆಗುವಷ್ಟರಲ್ಲಿ ಮಾಡಿರುತ್ತಾರೆ. ಸೂರ್ಯೋದಯದ ನಂತರ ಎಲ್ಲರೂ ಸಡಗರದಿಂದ ತಯಾರಾಗಿ ಎಲ್ಲಾ ಅಡುಗೆಗಳನ್ನು ಬುತ್ತಿಯಲ್ಲಿ ಕಟ್ಟಿಕೊಂಡು ಊರಿನ ಎಲ್ಲಾ ದೇವಸ್ಥಾನಗಳಿಗೂ ನೈವೇದ್ಯ ನೀಡಿ ಹೊಲಕ್ಕೆ (ಗದ್ದೆ) ಹೋಗುತ್ತಾರೆ.

      ಹೊಲದಲ್ಲಿ ಐದು ವಿಧದ ಕಲ್ಲನ್ನು ಹುಡುಕಿ ರೈತರು ತಾವು ಬೆಳೆದ ಬೆಳೆಯ ಮಧ್ಯದ ಭಾಗದಲ್ಲಿ ಅವುಗಳನ್ನು ಇಟ್ಟು ಸುಣ್ಣ, ಕ್ಯಾಮೆ, ಕುಂಕುಮ, ಭಂಡಾರದಿಂದ ಪೂಜಿಸಿ ನೈವೇದ್ಯ ಮಾಡುತ್ತಾರೆ. ಅದನ್ನು ತೆಗೆದುಕೊಂಡು ಪ್ರತಿಯೊಂದು ದಿಕ್ಕಿಗೂ ಹೋಗಿ 'ಸೂರಗೋ. ಸೂಲಾಂಭರಗೋ ಸೂರಗೋ, ಸೂಲಾಂಭರಗೋ" ಎಂದು ಕೂಗುತ್ತಾ ಎಲ್ಲ ದೇವತೆಗಳಿಗೂ ನೈವೇದ ಅರ್ಪಿಸುತ್ತಾರೆ. ತಾವು ಬೆಳೆದ ಬೆಳೆ ಒಳ್ಳೆಯ ಫಸಲು ಕೊಡಲಿ ಎಂದು ಬೇಡುತ್ತಾರೆ. ತಾವು ಬೆಳೆದ ಬೆಳೆಗೂ ಮತ್ತು ತಮ್ಮ ಕೃಷಿ ಭೂಮಿಗೂ ಈ ಭಾಗದ ರೈತರು ಹಿಂದಿನಿಂದಲೂ ಮಾಡಿಕೊಂಡು ಬಂದಿರುವ ವಿಶೇಷ ಆಚರಣೆಯಾಗಿದೆ. ಇದನ್ನು ನಾವು ಉತ್ತರ ಕರ್ನಾಟಕ ಭಾಗಗಳಲ್ಲಿ "ಚರಗದ ದಿನ" ಎಂದು ಕರೆಯುತ್ತೇವೆ.

ಸುಜಾತಾ, ಗಿ, ಪೂಜೇರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...