ಸೋಮವಾರ, ನವೆಂಬರ್ 10, 2025

ಸಂಚಿಕೆ - ೦೩

ಬಿಸಿ ಕಾವು

ಬೊಗಸೆ ನೀರಿಗೆ ಗೆರಟೆ 

ಕಳೆದು ಹೋಗಿತ್ತು ಎಷ್ಟೋ ಹಿಂದೆ 

ಆದರೇನು, ಬಾಳೆ ಎಲೆ-ಹಾಳೆ ತಟ್ಟೆ 

ಮಾಸಲೂ ಇಲ್ಲ ಹರಿಯಲೂ ಇಲ್ಲ 

ಈಗಲೂ ನಮ್ಮ ಮನೆಯಲ್ಲಿ 

ಉಣ್ಣುವಳು ಅವಳು ಕೊಟ್ಟಿಗೆ ಮೂಲೆಯಲ್ಲಿ


ತಂಗಳೂಟ ಕಳೆದು ಹೋಗಿರಬಹುದು 

ಆದರೇನು, ಈಗಲೂ ಬರುವಳು ಅವಳು 

ಮುಂಜಾನೆ ಹಬ್ಬ ಕಳೆದ ಮೇಲೆ


ಕಾಲೆರಳ ಸಂಧಿಯಲಿ ಕೊಳೆಯಿದೆ

ಉಗುರುಗಳ ಕತೆ ಕೇಳಬೇಕೆಂದೇ ಇಲ್ಲ 

ನಮ್ಮ ಗದ್ದೆಯಲಿ ಕೆಸರಾದ ಕೈಗಳ 

ನೆನಪೂ ಹಲವರಿಗೆ ಈಗಿಲ್ಲ


ದಣಿದೊಡಲ ಧ್ವನಿಯು ಕೇಳಿಸಿತೇ? 

ಊರ ಬೇಸರಕೆ ದನಿಯಾಗುವಳು ಅವಳು 

ಸಂಧಿ ಪಾಡ್ಡನಗಳ ಜೊತೆ ಹೊಲದಲ್ಲಿ 

ಮುಟ್ಟಿಹುದೇ ಅದು ಬದುವಿನಾಚೆಗೂ!?


ಮಳೆಗೆ ನೆನೆದ ಹೆಂಟೆಯೊಂದು 

ದೂರದಲ್ಲಿ ಮೂಲೆಯಲ್ಲಿ ಮುದುಡಿದಂತೆ 

ದಿನಾ ಮೂಲೆ ಸೇರುವಳು 

ಅವಳೇ ಸೇರಿದಳೋ... ನಾವು ಸೇರಿಸಿದೆವೋ...!?


ಮುದುಡಿದ ದೇಹಕ್ಕೆ ಬಿಸಿ ಕಾವು 

ಉಣಿಸಬೇಕಿದೆ ನಾವು-ನೀವು 

ಮನೆ ಹೊಸಿಲು ದಾಟಿಸಬೇಕು

ಅವಳಾಗಿ ಒಳ ಕಾಲಿಡಬೇಕು 

ನಮ್ಮೊಳಗೆ ಅವಳೂ ಒಳಗೊಳ್ಳಬೇಕು


ರೇಷ್ಮಾ ಎನ್ ಬಾರಿಗ, ಎಂ.ಎ. ದ್ವಿತೀಯ ವರ್ಷ ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...