ಸೋಮವಾರ, ನವೆಂಬರ್ 10, 2025

ಸಂಚಿಕೆ - ೦೩

ಬಿತ್ತಿ ಮತ್ತು ಅವಳು

ಸೋಮವಾರದ ಬಿತ್ತಿಗೆ ವಸ್ತುವಿರಲಿಲ್ಲ 

ಅವಳ ಮೇಲೊಂದು ಕವಿತೆ ಬರೆದೆ 

ಗೋಡೆ ಪತ್ರಿಕೆಯ ಗಾಜನ್ನುಜ್ಜುವಾಗ 

ಅವಳು ತನ್ನ ಅಚ್ಚಾದ ಹೆಸರನ್ನು ಕಂಡಳು 

ಮರುದಿನದಿಂದ ಅವಳು ನನ್ನವಳಾದಳು


ಈಗೀಗ ನಮ್ಮಿಬ್ಬರ ಮಧ್ಯೆ 

ಮಾತು ಬೆಳೆದು ನಿಂತಿದೆ 

ನಡುಬಗ್ಗಿಸಲಾಗದೆ ಕಾಯಕ ನಿರತಳಾದ 

ಅವಳ ಬಳಿ ಪ್ರಶ್ನೆಯಿಟ್ಟೆ 

'ಅಮ್ಮಾ ಯಾಕಾದರೂ ಬೇಕು ಈ ಕೆಲಸ' 

ಹೊರಾಂಡ ಸಾರಿಸುವಾಗ ಕೇಳಿದ 

ಕೀರ್ತನೆಯಲ್ಲೇ ಹಾಡುತ್ತಾ ಹೀಗೆಂದು ಉತ್ತರಿಸಿದಳು 

'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ"


ನನಗೀಗ ಅವಳ ಮೇಲೆ ಎಲ್ಲಿಲ್ಲದ ಕನಿಕರ 

ಈಗಷ್ಟೇ ಉಜ್ಜಿ ಬೆಳ್ಳಗಾಗಿಸಿದ ನೆಲದ ಮೇಲೆ 

ನನ್ನ ಚಪ್ಪಲಿಯಡಿಯ ಕೆಸರು 

ಅವಳ ಕಣ್ಣಿಗೆ ಬಿದ್ದು 

ಎಲ್ಲಿ ಬೇಸರವಾಗುವುದೋ ಏನೋ..!


ಕೊನೆಗೊಂದು ದಿನ ನಾನು 

ಬರೆಯುವುದನ್ನ ನಿಲ್ಲಿಸಿದೆ 

ಅವಳು ನನ್ನ ಜೊತೆ ಮಾತು ಬಿಟ್ಟಳು 

ಸಲಾಂ ಹೇಳುವುದನ್ನೂ ಬಿಟ್ಟಳು


ಮೆಟ್ಟಿಲೇರುತ್ತಾ ಬಂದ ನನ್ನನ್ನು ತಡೆದು 

ಪ್ರಶ್ನೆಯಿಟ್ಟಳು 

"ನನ್ನ ಹೆಸರೇಕೆ ಈಗ ಬಿತ್ತಿಯಲ್ಲಿಲ್ಲ" 

ನಾನಂದೆ 

"ಕವಿತೆ ಹುಟ್ಟಬೇಕೇ ಹೊರತು ಹುಟ್ಟಿಸಲಾಗಲ್ಲ"


ಈಗ ಅವಳು ದಿನವೂ ಬಿತ್ತಿ ಓದುವಳು 

ಅಕ್ಷರಗಳ ಮಧ್ಯೆ ತನ್ನ ಹೆಸರನ್ನು ಹುಡುಕಾಡುವಳು 

ತನ್ನ ಹೆಸರಿಲ್ಲದ ಬಿತ್ತಿಯ ನೋಡಿ 

ಒಳಗೊಳಗೆಯೇ ಮರುಗುವಳು 

ಅವಳೀಗ ಬಿತ್ತಿಯ ಗಂಭೀರ ವಿಮರ್ಶಕಿ


ಸಹೃದಯರೇ... 

ನಾಳೆ ಅವಳು ನಿನ್ನೆದುರುಗೊಂಡರೆ 

ಸಲಾಂ ಹೇಳಿ, ಚಹಾ ಆಯ್ತಾ ಅಂತ ವಿಚಾರಿಸಿ, 

ಕೊನೆಪಕ್ಷ ಮುಗುಳ್ಳಗುತ್ತಾದರೂ ಮುಂದಡಿಯಿಡಿ... 

ಕಾರಣ ಅವಳು ನಮ್ಮಮ್ಮಳ ವಯಸ್ಸಿನವಳು 

ನಮ್ಮಮ್ಮಳ ಮನಸ್ಸಿನವಳು.


ಸಲೀಂ ಸುಳ್ಯ ಎಂ.ಎ. ದ್ವಿತೀಯ ವರ್ಷ ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...