ಸೋಮವಾರ, ನವೆಂಬರ್ 10, 2025

ಸಂಚಿಕೆ - ೦೩

 ಘಟ್ಟದ ದಿನ

      'ಘಟ್ಟದ ದಿನ' ಎಂದು ಕೇಳಿದ ತಕ್ಷಣ ನಿಮಗೆಲ್ಲ ತಿಳಿಯುವುದು 'ಘಟ್ಟ ಪ್ರದೇಶಗಳಲ್ಲಿ' ಕಳೆದ ದಿನ ಅನಿಸುತ್ತದೆ. ಆದರೆ ಇಲ್ಲಿ ನಾನು ಹೇಳುತ್ತಿರುವ 'ಘಟ್ಟದ ದಿನ' ಎಂದರೆ ನಮ್ಮ ಉತ್ತರ ಕರ್ನಾಟಕದ ಭಾಗಗಳಲ್ಲಿ "ಮಹಾನವಮಿ ಪ್ರಾರಂಭದ ಹಿಂದಿನ ದಿನ" ವಾಗಿದೆ. ಇದು ಈ ಭಾಗದಲ್ಲಿ ಹಿಂದಿನಿಂದಲೂ ಊರಿನ ಗ್ರಾಮದೇವ ದೇವಸ್ಥಾನದಲ್ಲಿ, ಆಚರಿಸಿಕೊಂಡು ಬಂದಿರುವ ಒಂದು ಆಚರಣೆಯಾಗಿದೆ.

      ಈ ದಿನದಂದು ಊರಿನ ಎಲ್ಲಾ ಹಿರಿಯರು ಡೊಳ್ಳಿನ ಮೇಳದೊಂದಿಗೆ 'ಐದು' ಪ್ರಮುಖ ಮನೆಗಳಿಗೆ ಹೋಗಿ ಐದು ಜನ 'ಮುತ್ತದೆ' ಯರನ್ನು ನೇಮಿಸಿ, 'ಆಯ್ಯನವರ' (ವೈದಿಕರ) ಮನೆಗೆ ಹೋಗಿ ಐದು ತರಹದ ಕಾಳುಗಳನ್ನು ಪೂಜಿಸಿ (ಫಲಕಾಳು) ತರುತ್ತಾರೆ(ಜೋಳ, ಸಜ್ಜೆ, ತೊಗರಿ, ಹುರುಳಿ, ಮೆಕ್ಕೆಜೋಳ), ಒಂದು ಮಡಿಕೆಯಲ್ಲಿ ಜೋಳದ ಹಿಟ್ಟಿನ ಹುಳಿ ಅಂಬಲಿ ಮಾಡಿ ತುಂಬಿರುತ್ತಾರೆ. 'ಫಲಕಾಳು'ಗಳನ್ನು ದೇವಸ್ಥಾನದ 'ಪಾದುಗಟ್ಟಿ'ಯಲ್ಲಿ ಹಾಕಿ, ಅದರ ಮೇಲೆ ಅಂಬಲಿಯ ಮಡಿಕೆಯನ್ನು ಇಟ್ಟು ಗಾಳಿಯು ಸೋಕದಂತೆ ಸುತ್ತಲೂ ಒಂದು ತಾಡಪತ್ರೆಯಿಂದ ಮುಚ್ಚಿಡುತ್ತಾರೆ. ಮಹಾನವಮಿ ಮುಗಿದ ನಂತರ ಅದನ್ನು ತೆರೆಯುತ್ತಾರೆ. 'ಫಲಕಾಳು' ಮೊದಲ ದಿನ ಇಟ್ಟಿರುವಂತೆ ಹಾಳಾಗದೆ ಇದ್ದರೆ, ಆ ವರ್ಷದ ಎಲ್ಲ ಬೆಳೆಗಳು ಸಮೃದ್ಧವಾಗಿ ಬೆಳೆದು ರೈತನಿಗೆ ಲಾಭವಾಗುವುದು ಎಂದರ್ಥವಾಗಿದೆ. ಆ 'ಫಲಕಾಳು'ಗಳನ್ನು ಊರಿನ ಎಲ್ಲ ಮನೆಗಳಿಗೂ ಹಂಚುತ್ತಾರೆ. ಆ 'ಫಲಕಾಳು'ಗಳು ಹಾಳಾಗಿದ್ದರೆ ಆ ವರ್ಷದ ಬೆಳೆಗಳು ನಷ್ಟ ಕಾಣುತ್ತದೆ ಎಂಬುದು ಈ ಭಾಗದ ಜನರಲ್ಲಿ ಹಿಂದಿನಿಂದಲೂ ಉಳಿದುಕೊಂಡು ಬಂದಿರುವ ಗಾಢವಾದ ನಂಬಿಕೆಯಾಗಿದೆ.

      ಇದಿಷ್ಟು ನಮ್ಮ 'ಉತ್ತರ ಕರ್ನಾಟಕ' ಭಾಗದಲ್ಲಿ ಮಹಾನವಮಿ ಹಿಂದಿನ ದಿನ ಅಂದರೆ 'ಘಟ್ಟದ ದಿನ'ದ ವಿಶೇಷತೆಯ ಸಂಕ್ಷಿಪ್ತ ವಿವರಣೆಯಾಗಿದೆ.

ಸುಜಾತಾ. ಗಿ. ಪೂಜೇರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...