ಸೋಮವಾರ, ಮಾರ್ಚ್ 23, 2026

ಸಂಚಿಕೆ - ೧೩

ನಿವ್ಯಾರೋ? ನಾವ್ಯಾರೋ?

      ಬಿಟ್ಟಿರಲಾರದ ಬಂಧ, ಖುಷಿ, ನೋವು, ಮಾತುಗಳು ಮೌನಗಳು ಎಲ್ಲಾ ತುಂಬಿದ ಈ ಎರಡು ವರ್ಷಗಳಲ್ಲಿ ಒಟ್ಟಿಗಿದ್ದ ನಾವೆಲ್ಲ. ತಮ್ಮ ದಾರಿಯನ್ನು ಒಬ್ಬಂಟಿಯಾಗಿ ಸಾಗಿಸಲು ಕೆಲವೇ ತಿಂಗಳುಗಳು ಬಾಕಿ. ಹಾಸ್ಟೆಲ್ ಜೀವನ, ಪ್ರಾಧ್ಯಾಪಕರು, ಸಂಶೋದನಾರ್ಥಿಗಳು, ವಿಭಾಗದ ಕಾರ್ಯಕ್ರಮಗಳು, ಹೀಗೆ ಎಲ್ಲವೂ ಒಟ್ಟಿಗಿದ್ದ ಜೀವಕ್ಕೆ ಒಮ್ಮೆಲೆ ಏಕಾಂತವು ವೈರಾಗ್ಯ, ಮೂಡಿಸುವುದಂತು ನಿಜ. ಅನೇಕರಿಗೆ ವಿದ್ಯಾಭ್ಯಾಸದ ಕೊನೆಯ ಹಂತವೂ ಹೌದು. ಕಲಿಕೆಯು ನಿರಂತರ ಪ್ರಕ್ರಿಯೆ ಆದರೆ, ಅದರಲ್ಲಿ ಸಹಪಾಠಿಗಳು, ಪ್ರಾಧ್ಯಾಪಕರು ಇದ್ದರಷ್ಟೆ ಒಂದು ಸಂಪೂರ್ಣ ಕಲಿಕೆ ಎನ್ನಬಹುದು.

      ದಿನಗಳು ಉರುಳುತ್ತಾ ಉರುಳುತ್ತಾ ಹೋದಂತೆ ನಮ್ಮವರಿಂದ ದೂರ ಹೋದ ಅನುಭವ, ಎಲ್ಲರೊಂದಿಗೆ ಪ್ರೀತಿಯ ಕ್ಷಣವನ್ನು ಆಸ್ವಾದಿಸುವ ಆಸೆ, ಆದರೆ ನಾನೇ ಯಾಕೋ ಎಲ್ಲರಿಂದ ದೂರ ಉಳಿಯುತ್ತಿದೇನೆ. ಬಿಡಿಬಿಡಿಯಾದ ನಮ್ಮ ಚಿತ್ರಗಳು ಸಿಕ್ಕರೆ. ಎಲ್ಲರೂ ಒಟ್ಟಾಗಿರುವ ಚಿತ್ರವ ನಾನು ಕಾಣೆ! ಸಮಯ ಇದ್ದಾಗ ಎಲ್ಲರಿಗೂ ಬೆನ್ನು ತೋರಿಸಿ ಹೋದವರು ನಾವು ಕೊನೆಯ ದಿನದಲ್ಲಿ ಕರೆದರೆ ಗೆಳೆತನದ ಸಾಂತ್ವನ ನೀಡುವರೆ? ಪ್ರವಾಸದ ನೆಪ ಹೇಳಿ ಎಲ್ಲರನ್ನು ಒಗ್ಗೂಡಿಸುವ ಯತ್ನದಲ್ಲಿ ಆಯತಪ್ಪಿ ಬಿದ್ದು ಹೋದವನು ನಾನು.

      ಮಾತುಗಳು ಮೌನಕ್ಕೆ ತಿರುಗಿ, ಮುಗುಳ್ಳಗೆಯು ಭಾರವಾಗಿ ಹೋದಾಗ ಎಲ್ಲಿಯ ಸ್ನೇಹ ಪರತೆ ಹುಟ್ಟುವುದು? ಲವಲವಿಕೆ ಇಲ್ಲದ ಮೇಲೆ ತರಗತಿಯನ್ನು ಆಸ್ವಾದಿಸುವುದಾದರೂ ಹೇಗೆ? ಮನದಲ್ಲಿ ಹಲವಾರು ಗೊಂದಲಗಳು! ಆಂತರಿಕವಾಗಿ ಎಲ್ಲವೂ ಸರಿ ಇದೆ ಎಂದುಕೊಂಡರೂ, ಬಾಹ್ಯದಿಂದ ನಮ್ಮವರನ್ನೇ ಕಾಣದಷ್ಟು ಕುರುಡರಾಗಿ ಹೋಗಿರುವೆವು ನಾವು. ಬಿಟ್ಟಮಂಡೆಯನ್ನು ಬಿಟ್ಟ ಹಾಗೆ ಓಡಿದ ಉತ್ತರಕುಮಾರನಂತೆ ಓಡಿಹೋಗುವವರು ನಾವು. ತರಗತಿಯು ತುಂಬಿದ್ದರು. ನಮ್ಮೊಳಗೆ ಗೆಳೆತನದ ಭಾವ ತುಂಬಿದ್ದೆ ಇಲ್ಲಾ. ಯಾರಿಗೆ ಹೋಗಿ ನಾ ಕೇಳಲಿ, ಯಾರಿಗೆ ನಾ ಬೈಯಲಿ. ಈ ಮನಸ್ತಾಪಕ್ಕೆ ಅಡಿಗಲ್ಲು ಹಾಕಿದವರು ಯಾರೆಂದು?

      ಬೇರೆ ಬೇರೆ ವಿಭಾಗದ ಗೆಳೆತನದ ಬಂಧವನ್ನು ನೋಡಿ ಒಳಗೊಳಗೆ ಮರುಕ ಪಟ್ಟವನು ನಾನು. ನಮ್ಮ ಗೆಳೆತನದ ಬಂಧಕ್ಕೆ ಹೇಳಿತು ಮನ, ಇನ್ನು ಕೆಲವೇ ತಿಂಗಳು ನಿವ್ಯಾರೋ? ನಾವ್ಯಾರೋ?

ಶ್ರೇಯಸ್ ಬನ್ನಡ್ಕ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ


“ನಿವ್ಯಾರೋ? ನಾವ್ಯಾರೋ?” ಈ ಲೇಖನಕ್ಕೆ - ಓದುಗನ ಅಭಿಪ್ರಾಯ

      ಹೌದು ಗೆಳೆಯ ನಿನ್ನ ಮಾತು ಸತ್ಯ ನೀವ್ಯಾರೋ? ನಾವ್ಯಾರೋ? ತರಗತಿಯಲ್ಲಿ ಇರುವವರೆಗೂ ನಾವು ನೀವು ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ. ಇಲ್ಲಿ ಯಾರು ಸಹ ಒಡಹುಟ್ಟಿದವರಲ್ಲ. ಯಾರು ಒಡನಾಡಿಗಳಲ್ಲ. ಆದರೂ ಮಚ್ಚಿ, ಮಾಮ, ಅಣ್ಣ, ಗೆಳೆಯ, ಬಾಮೈದ ಇನ್ನೂ ಎನೇನೋ ಹೆಸರುಗಳಿಂದ ಕರೆಯುತ್ತೇವೆ. ಅದೇ ಕಾಲೇಜು ಮುಗಿದ ಮೇಲೆ ನೀವ್ಯಾರೋ? ನಾವ್ಯಾರೋ?.

      ಹೌದು ಈ ಬಂಧ ಬಿಡಿಸಲಾಗದು, ಖುಷಿ, ನೋವು, ಪಿಸುಮಾತಿನ ಮೌನಗಳು ಎಲ್ಲವನ್ನೂ ಒಟ್ಟುಗೂಡಿಸಿದ ಈ ಬಂಧ ಇನ್ನೂ ಕೆಲವೇ ತಿಂಗಳಲ್ಲಿ ಎಲ್ಲವನ್ನೂ ಮರೆಸುತ್ತದೆ. ಬಾಹ್ಯವಾಗಿ ನೋಡಲು ನೀನು ಒಬ್ಬಂಟಿಯೇ. ಆಂತರಿಕವಾಗಿ ನೋಡು ಗೆಳೆಯ, ನಾವು ಸದಾ ನಿನ್ನಲ್ಲಿ, ನಿನ್ನ ಸ್ಮೃತಿಯಲ್ಲಿ ನೆಲೆಸಿರುತ್ತೇವೆ. ನಿನಗೆ ಒಂಟಿತನ ಕಾಡಿದರೆ, ನಾವು ನಿನ್ನ ಎದುರು ಇಲ್ಲದಿದ್ದರೂ, ನಿನ್ನ ದೂರವಾಣಿಗೆ ನಿಲುಕದಿದ್ದರೂ ಸಹ, ನಾವೆಲ್ಲರೂ ನಿನ್ನ ಮಸ್ತಕದ ಮಂದಿರದಲ್ಲಿ ಹಚ್ಚಳಿಯದೇ ನೆಲೆಸಿರುತ್ತೇವೆ.

      ನಾವೆಲ್ಲ ಎಸ್.ವಿ.ಪಿ ಕನ್ನಡ ವಿಭಾಗ ಎಂಬ ಕುಟುಂಬದ ಸದಸ್ಯರು, ಒಂದೇ ಕುಟುಂಬದವರು. ಒಂದೇ ಪ್ರದೇಶದಲ್ಲಿ, ಕುಟುಂಬದಲ್ಲಿ ಬೆಳೆದವರಲ್ಲೇ ಭಿನ್ನಾಭಿಪ್ರಾಯ ಕಂಡಿದ್ದೇವೆ. ಇಂತ ಸ್ಥಿತಿಯಲ್ಲಿ ಭಿನ್ನ ಭಿನ್ನ ಪ್ರದೇಶಗಳಿಂದ, ಭಿನ್ನ ಭಿನ್ನ ಮನಸ್ಥಿತಿಯಿಂದ ಬಂದಿರುವ ನಮ್ಮಲ್ಲಿ ಮನಸ್ತಾಪ, ಭಿನ್ನಾಭಿಪ್ರಾಯ, ವೈರತ್ವ ಬರುವುದು ಸಹಜ ಅಲ್ಲವೇ?. ಹಾಗೆಯೇ ಇಂತ ವೈಮನಸ್ಸುಗಳನೆಲ್ಲ ಕಳಚಿಕೊಂಡು ನಮ್ಮತನವನ್ನು ಇಂದಾದರೂ ಬಿಟ್ಟು ಎಲ್ಲರೊಟ್ಟಿಗೆ ಖುಷಿಯಿಂದ ಇರೋಣ ಎಂದು ಎಷ್ಟೋ ಬಾರಿ ಅನಿಸುತ್ತದೆ. ಆದರೆ ಮತ್ತೆ ಮತ್ತೆ ಅದೇ ನೆನಪುಗಳು ಕಣ್ಣ ಮುಂದೆ ಬರುತ್ತದೆ. ಈ ನೆನಪುಗಳನ್ನು ಎದುರಿಸಲು ಇರುವ ಪ್ರಬಲವಾದ ಶಕ್ತಿಯೇ ಮರೆವು, ಸೌಮ್ಯ ಟಿ. ಎಸ್. ಅವರು 'ಮರೆವು' ಬಗ್ಗೆ ಒಂದು ಲೇಖನ ಬರೆದಿದ್ದರು. ಅದರಲ್ಲಿ ತಿಳಿಸಿರುವ ಹಾಗೆ, ಕಹಿ ನೆನಪುಗಳು ಮರೆಯಗುವಂತೆ ಇದ್ದರೆ ಎಷ್ಟೋ ಚೆಂದ ಅನಿಸುತ್ತದೆ. ಹಾಗಲಾದರೂ ಎಲ್ಲರೂ ಕಹಿ ಘಟನೆಗಳನ್ನು ಮರೆತು, ನಿನ್ನ ಇಚ್ಛೆಯಂತೆ ಲವಲವಿಕೆಯಿಂದ ತರಗತಿಯನ್ನು ಆಸ್ವಾದಿಸಬಹುದು. ಇಲ್ಲಿ ಬಿತ್ತರಿಸಿದ ಸ್ನೇಹ, ಗೆಳೆತನದಂತಹ ಲೇಖನ-ಕವನಗಳ ಮೂಲಕವಾದರೂ ಸ್ಫೂರ್ತಿ ಪಡೆಯೋಣ.

ಅನಾಮಿಕ, ಎಸ್.ವಿ.ಪಿ. ಕುಟುಂಬ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...