ಕಲ್ಲು ಬಂಗಾರ ಕೊಡುತ್ತಿತ್ತು!
ಮಂಗಳೂರಿನಿಂದ ಕಾಲೇಜು ಮುಗಿಸಿ ಸಂಜೆ ವೇಳೆಗೆ ೬೦ ಕಿ.ಮೀ ದೂರದಲ್ಲಿರುವ ಮನೆಗೆ ಹೋಗುವುದೆಂದರೆ ಅದೊಂದು ಹರಸಾಹಸವೇ ಸರಿ. ಆ ಸರ್ಕಾರಿ ಬಸ್ಸುಗಳೋ! ಚೆನ್ನಾಗಿಯೇನೋ ಇವೆ. ಆದರೆ ಎಲ್ಲರೂ ತಮ್ಮ ಗೂಡು ಸೇರುವ ಧಾವಂತದಲ್ಲಿರುವಾಗ ಆ ಬಸ್ಸುಗಳಲ್ಲಿ ಮೆಟ್ಟಿಲ ಮೇಲೆ ನಿಂತು ನೇತಾಡುವುದಕ್ಕಾದ್ರು ಜಾಗ ಸಿಕ್ಕಿದ್ರೆ ಯಾವುದೋ ಜನ್ಮದ ಪುಣ್ಯ ಎಂದೇ ಭಾವಿಸಬೇಕಾಗುತ್ತದೆ.
ಅದೇ ಬಸ್ಸಿನಲ್ಲಿ ಬೆಳಗಿನ ಘಮಲು ಒಂದು ರೀತಿಯಾದರೆ, ಸಂಜೆ ಹೇಳಬೇಕೆಂದೇ ಇಲ್ಲ. ಬೆಳಗ್ಗೆ ಹಾಕಿದ ಪರ್ಪ್ಯೂಮ್, ಪೌಡರ್, ಅತ್ತಾರ್ ಹೀಗೆ ಯಾವ್ಯಾವುದೋ ಸುವಾಸನೆಗಳು. ಅದರ ಜೊತೆ ಮಂಗಳೂರಿನ ಸೆಖೆಗೆ ತೊಟ್ಟಿರುವ ಬಟ್ಟೆ ಪೂರ್ತಿ ಚಂಡಿಯಾಗುವಷ್ಟು ಹರಿದ ಬೆವರಿನ ವಾಸನೆ ಸೇರಿಕೊಂಡರೆ ಕೈಯಲ್ಲಿದ್ದ ಟುವ್ವಾಲು ನೇರ ಮೂಗಿನ ಮೇಲೆ ಕೂತುಬಿಡುತ್ತದೆ. ಹೀಗೆ ಕಾಲಿಡಲೂ ಜಾಗವಿಲ್ಲದ ಬಸ್ಸುಗಳಲ್ಲಿ ಅದು ಹೇಗೆ ಎಲ್ಲರ ದುರ್ನಾತ ಕಂಡಕ್ಷರ್ನ ಬೈಗುಳ ಸಹಿಸಿಕೊಂಡು ಅಷ್ಟು ಒತ್ತುತ್ತಾಗಿ ನಿಲ್ಲುತ್ತೇವೆಯೋ ಆ ಶಿವನೇ ಬಲ್ಲ.!
ಓಲಾಡುವ ಬಸ್ಸುಗಳಲ್ಲಿ ನೇತಾಡುತ್ತ ನಿಂತವರ ಕಥೆ ಒಂದೆಡೆಯಾದರೆ, ಇನ್ನು ಹೇಗೋ ಕಷ್ಟ ಪಟ್ಟು ಗಲಾಟೆ ಮಾಡಿ ಸೀಟು ಪಡೆದುಕೊಂಡು ಕೂತವರ ಗೋಳು ಹೇಳುತಿರದು. ಪಾಪ ಅವರಿಗೋ ನೆಮ್ಮದಿಯಾಗಿ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಹಾಡು ಕೇಳೋಣ ಅಥವಾ ಮೊಬೈಲ್ ಆದರೂ ನೋಡೋಣವೆಂದರೆ ನಿಂತವರು ಬಿಡಬೇಕಲ್ಲ. ಕೂತ ಒಬ್ಬೊಬ್ಬರ ಮೇಲು ಲೋಡುಗಟ್ಟಲೆ ಬಾರ ಹೊತ್ತ ನಾಲ್ಕದು ಬ್ಯಾಗುಗಳನ್ನು ಹಾಕದೆ ಇದ್ದರೆ ನಿಂತು ಓಲಾಡುವವರಿಗೆ ನೆಮ್ಮದಿಯಲ್ಲಿದೆ.!?
ಹೀಗೆ ಪೂರ್ತಿ ಲೋಡಾಗಿರುವ ಬಸ್ಸಿನಲ್ಲಿ ಅಪರೂಪಕ್ಕೊಮ್ಮೆ ಮಡಂತ್ಯಾರ್ ಅಥವಾ ಗುರುವಾಯನಕೆರೆಯಲ್ಲ ಸೀಟು ಸಿಗುವುದಿದೆ. ಅಂದರೆ ಸುಮಾರು ಒಂದು ೪೫ ಕಿ.ಮೀ ದಾಟಿದ ಮೇಲೆ! ನಿಂತು ನಿಂತು ಕಾಲು ನೋವು ಬಂದ ನೆಪಕ್ಕೆ ಸೀಟು ಸಿಕ್ಕಾಗೊಮ್ಮೆ ನಿದ್ದೆ ಜೋರಾಗಿ ಎಳೆದುಬಿಡುತ್ತದೆ. ಅವತ್ತೂ ಹಾಗೆಯೇ ತಣ್ಣಗೆ ಗಾಳಿ ಬೇರೆ ಬೀಸ್ತಾ ಇತ್ತು. ಕೂತ ಸ್ವಲ್ಪ ಹೊತ್ತಲ್ಲೇ ಮಂಪರು ಆವರಿಸಿ ಬಿಟ್ಟಿತ್ತು. ಆ ಸುಖ ನಿದ್ರೆಗೆ ಭಂಗ ತರಲೆಂತೋ ಏನೋ, ನಾಲ್ಕು ಹನಿ ಮಳೆ ಸುರಿದೇ ಬಿಟ್ಟಿತು ನೋಡಿ. ಕಿಟಕಿ ಬದಿ ಸೀಟು, ಆ ಹನಿ ಹನಿ ಮಳೆ ಆನಂದಿಸಿದ್ರೆ ಸ್ವರ್ಗಕ್ಕೆ ಇನ್ನೇನು ಬೇಕು!? ಹಾಗಂತ ಕಿಟಕಿ ಹಾಗೆಯೇ ತೆರೆದಿಟ್ಟು ಕೂರೋಕು ಆಗೋದಿಲ್ಲ ಅಲ್ವೇ? ಒಲ್ಲದ ಮನಸ್ಸಿನಿಂದ ಕಣ್ಣೆರೆದು ಇನ್ನೇನು ಕಿಟಕಿ ಗಾಜು ಸರಿಸಬೇಕು ಅನ್ನುವಷ್ಟರಲ್ಲಿ ದೈತ್ಯ ಗಾತ್ರದಲ್ಲಿ ಬೆಳೆದು ನಿಂತ ಗಡಾಯಿಕಲ್ಲು (ಜಮಲಾಬಾದ್ ಕೋಟೆ) ಕಾಣಿಸಿತು. ಅಬ್ಬಾ!! ಏನು ಆ ರಮಣೀಯತೆ. ಪಶ್ಚಿಮ ಘಟ್ಟಗಳ ಹಸಿರ ಚಾದರದಿಂದ ಸುತ್ತುವರಿದು ಸುಮಾರು ೧೭೮೮ ಅಡಿಯಷ್ಟು ಇರುವ ಬಂಡೆಯದು. ಟಿಪ್ಪು ಸುಲ್ತಾನ್ ಕಾಲದಲ್ಲಿ ನಿರ್ಮಾಣವಾಯಿತು ಎನ್ನುವ ಇತಿಹಾಸ ಈ ಕಲ್ಲಿನ ಕೋಟೆಗಿದೆ. ಇತಿಹಾಸ ಪುರಾಣ ಏನೇ ಇದ್ದರೂ ನನಗೆ ಈ ಗಡಾಯಿಕಲ್ಲನ್ನು ನೋಡಿದಾಗ ತಕ್ಷಣ ನೆನಪಾಗುವುದು ನನ್ನ ಅಜ್ಜಿ ಹೇಳುತ್ತಿದ್ದ ಕಥೆಗಳು.
ನನ್ನಜ್ಜಿ ಬಹುಶಃ ಗಡಾಯಿಕಲ್ಲಿನ ಊಹಾಪೂಹ ಕಥೆಗಳೊಂದಿಗೆ ಬೆಳೆದವಳು. ಅವಳ ಸಂಬಂಧಿಕರು ಕೆಲವರು ಅದೇ ಕಲ್ಲಿನ ಸುತ್ತಮುತ್ತಲಿನ ಭಾಗಗಳಲ್ಲಿ ಈಗಲೂ ವಾಸಿಸ್ತಾ ಇದ್ದಾರಂತೆ. ಈ ಕಥೆಗಳೆಲ್ಲ ಅವಳು ಕಂಡಿದ್ದೋ ಅಥವಾ ಅವಳು ಕೇಳಿದ್ದು ನನಗೆ ಗೊತ್ತಿಲ್ಲ. ಹಿಂದೆಲ್ಲಾ ಅರಸರ ಕಾಲದಲ್ಲಿ ಸುತ್ತಮುತ್ತಲಿನ ಯಾರ ಮನೆಯಲ್ಲಾದರೂ ಮದುವೆ ಮುಂಜಿ ಕಾರ್ಯಕ್ರಮಗಳು ನಡೆದರೆ ಅದೇ ಗಡಾಯಿಕಲ್ಲಿನ ಬಳಿ ಹೋಗಿ ವೀಳ್ಯ ತಾಂಬೂಲವಿಟ್ಟು "ನಾಳೆ ನನ್ನ ಮಗಳದು ಮದುವೆ ಇದೆ" ಅಂತ ಪ್ರಾರ್ಥಿಸಿದರೆ ಮರುದಿವಸ ಬೆಳಗ್ಗೆ ಅಲ್ಲಿ ಮದುವೆಗೆ ಬೇಕಾದ ಒಡವೆ ಎಲ್ಲಾ ಸಿದ್ದವಾಗಿ ಇರುತ್ತಿತ್ತಂತೆ. ಮದುವೆ ಮುಗಿದ ಬಳಿಕ ಅದನ್ನು ಹಿಂದಿರುಗಿಸಬೇಕಾಗಿತ್ತು. ಇದು ಅಲ್ಲಿಯ ನಿಯಮವಂತೆ. ನಾವು ಕುತೂಹಲದಿಂದ "ಎಷ್ಟು ಚಂದ ಅಲ್ಲ ಈಗಲೂ ಹಾಗಿದ್ದಿದ್ದರೆ ಒಳ್ಳೆಯದಿತ್ತು!!" ಅಂತ ಮತ್ತೆ ಪ್ರಶ್ನೆ ಹಾಕಿದರೆ ಅದಕ್ಕೆ ಅವಳ ಸಮರ್ಥನೆಯೂ ತಯಾರಾಗಿರುತ್ತಿತ್ತು. ಹೀಗೊಮ್ಮೆ ಹಿಂದಿನ ದಿನ ಪ್ರಾರ್ಥಿಸಿ ಪಡೆದ ಬಂಗಾರ ಒಡವೆಗಳನ್ನು ಮರು ದಿವಸ ಹಿಂದಿರುಗಿಸಬೇಕಾದರೆ ಯಾರೋ ಅದನ್ನು ಅದಲು ಬದಲು ಮಾಡಿ ಅಂದರೆ, ಬಂಗಾರದ ಜಾಗದಲ್ಲಿ ರೋಲ್ಡ್ ಗೋಲ್ಡ್ ಇಟ್ಟು ಪರಾರಿಯಾಗಿದ್ದರಂತೆ. ಆ ಬಳಿಕ ಯಥಾವತ್ತು ಈ ಬಂಗಾರ ಕೊಡುವ ಅಕ್ಷಯಪಾತ್ರೆ ನಿಂತು ಹೋಯ್ತು. ಇದು ಅವಳು ಹೇಳುವ ಕಥೆ. ಇದರಲ್ಲಿ ಎಷ್ಟು ನಿಜವೋ ಎಷ್ಟು ಕಲ್ಪನೆ ಇದೆಯೋ ಗೊತ್ತಿಲ್ಲ. ಅದಕ್ಕಾಗಿಯೇ ಇಂತಹ ಅಜ್ಜಿ ಕಥೆಗಳನ್ನೆಲ್ಲಾ ನಮ್ಮ ಈಗಿನ ತತ್ವ ಸಿದ್ಧಾಂತಗಳಿಗೆ ಒರಗೆ ಹಚ್ಚಿ ನೋಡುವ ಕೆಲಸಕ್ಕೆ ಕೈ ಹಾಕಬಾರದು. ಕೆಲವು ಕಥೆಗಳು ಕಥೆಗಳಾಗಿದ್ದರೇನೆ ಚಂದ ಅಲ್ವಾ!
ಕಳೆದ ಒಂದೆರಡು ಮೂರು ವರ್ಷದ ಹಿಂದೆ ಯಾವುದೋ ಒಂದು ಪ್ರಸಿದ್ದ ಜ್ಯುವೆಲರಿ ಕಂಪನಿ ಈ ಗಡಾಯಿಕಲ್ಲಿಗೆ ಆಭರಣ ಹಾಕುವ ಮೂಲಕ ತನ್ನ ಜಾಹೀರಾತು ಪ್ರದರ್ಶನ ಮಾಡಿತ್ತು. ಆಗೆಲ್ಲಾ ಈ ಅಜ್ಜಿಯ ಕಥೆಗಳೇ ನೆನಪಾಗುವುದು. ಕರಿದಾದ, ದೈತ್ಯ ಗಾತ್ರದ. ಯಾರಿಗೂ ಭಯ ಹುಟ್ಟಿಸುವ ಮತ್ತು ಈಗ ಟ್ರಕ್ಕಿಂಗ್ಗೆ ಹೇಳಿ ಮಾಡಿಸಿದ ಗಡಾಯಿಕಲ್ಲಿನ ಸುತ್ತ ಹೆಣೆದ ಊಹಾಪೋಹದ ಕಥೆಗಳು ಸಾವಿರಾರಿವೆ. ಆ ಕಲ್ಲು ಬಂಗಾರ ಕೊಡುತ್ತಿತ್ತೋ, ಬೆಳ್ಳಿ ಕೊಡುತ್ತಿತ್ತೋ, ಬಟ್ಟೆ ಬರೆ ಕೊಡುತ್ತಿತ್ತೋ ಅದೇನೇ ಇರಲಿ. ಒಮ್ಮೆ ಆ ಕಿರಿದಾದ ಮೆಟ್ಟಿಲುಗಳಲ್ಲಿ ಹತ್ತಿಳಿದು ಬನ್ನಿ. ಕಲ್ಲಿನ ತುತ್ತತುದಿ ಏರಿದಾಗ ಯಾಕಿಷ್ಟು ಕಥೆ ಪುರಾಣ ಊಹಾಪೋಹಗಳು ಹೆಣೆದುಕೊಂಡಿವೆ ಎನ್ನುವ ವಾಸ್ತವ ಕಾಣಬಹುದು.
ರೇಷ್ಮಾ ಎನ್ ಬಾರಿಗ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ