ಸೋಮವಾರ, ಮೇ 18, 2026

ಸಂಚಿಕೆ - ೨೦

 ಸಂಪಾದಕೀಯ


ರಾಜಕೀಯದ ಅಸ್ತವಾಗುತ್ತಿರುವ ಶಿಕ್ಷಣ

      ಇಂದಿನ ಸಮಾಜದಲ್ಲಿ ಶಿಕ್ಷಣವೆಂದರೆ ಕೇವಲ ಅಕ್ಷರಜ್ಞಾನವಲ್ಲ; ಅದು ಒಂದು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಶಕ್ತಿ, ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವ ವೇದಿಕೆ. ಆದರೆ ಇಂತಹ ಪವಿತ್ರ ಕ್ಷೇತ್ರವಾದ ಶಿಕ್ಷಣ ವ್ಯವಸ್ಥೆಯೊಳಗೆ ರಾಜಕೀಯದ ಹಸ್ತಕ್ಷೇಪದ ಪ್ರಭಾವ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಸ್ವ-ಆಲೋಚನೆ, ಸ್ವ-ಚಿಂತನೆ, ಸ್ವ-ಜ್ಞಾನ, ಸ್ವ-ವ್ಯಕ್ತಿತ್ವ, ಸ್ವ-ಸಾಮರ್ಥ್ಯ ರೂಪಿಸಿಕೊಳ್ಳುವ ಕೇಂದ್ರವಾಗಬೇಕು. ಶಿಕ್ಷಣದಲ್ಲಿ ರಾಜಕೀಯ ಪ್ರಭಾವದಿಂದ ವಿದ್ಯಾರ್ಥಿಗಳಲ್ಲಿ ಹಲವು ಸಂಘಟನೆಗಳು ಹುಟ್ಟಿಕೊಂಡಿವೆ. ಹಲವು ಹೋರಾಟಗಳು ತಮ್ಮ ಧೈಯೋದ್ದೇಶಕ್ಕಾಗಿ ವಿದ್ಯಾರ್ಥಿಗಳನ್ನು ಪಣವಾಗಿ ಬಳಸುತ್ತಿರುವುದು ಕಂಡುಬರುತ್ತಿದೆ. ಶಿಕ್ಷಣದ ಮೂಲ ಉದ್ದೇಶವನ್ನೇ ತಿರುಚುವಂತ ಕಾರ್ಯಗಳು ಇಂದಿನ ವಿಶ್ವವಿದ್ಯಾನಿಲಯಗಳಲ್ಲಿ, ಶಿಕ್ಷಣ ಕೇಂದ್ರಗಳಲ್ಲಿ ನಡೆಯುವುದು ಸರ್ವೇಸಾಮಾನ್ಯವಾಗಿದೆ. ಇಂದು ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯವು ಕೆಲವು ಮಟ್ಟಿಗೆ ಅಗತ್ಯವೂ ಹೌದು. ಸರ್ಕಾರಗಳು ಶಿಕ್ಷಣ ನೀತಿಗಳನ್ನು ರೂಪಿಸುವುದು, ಶಾಲೆ-ಕಾಲೇಜುಗಳನ್ನು ಸ್ಥಾಪಿಸುವುದು, ಬಡ ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಒದಗಿಸುವುದು-ಹಲವು ರಾಜಕೀಯ ನಿರ್ಧಾರಗಳ ಭಾಗವೇ, ಆದರೆ ಸಮಸ್ಯೆ ಶುರುವಾಗುವುದು ಶಿಕ್ಷಣವನ್ನು ಸಮಾಜದ ಅಭಿವೃದ್ಧಿಗಿಂತ ರಾಜಕೀಯ ಲಾಭಕ್ಕಾಗಿ ಬಳಸಿದಾಗ,

      ಪಠ್ಯಪುಸ್ತಕಗಳಲ್ಲಿ ಪಕ್ಷಪಾತದ ವಿಚಾರಗಳನ್ನು ಸೇರಿಸುವುದು, ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯ ಪ್ರಭಾವದ ಆಧಾರದ ಮೇಲೆ ನೇಮಕಾತಿ ಮಾಡುವುದು ಮತ್ತು ವಿಶೇಷ ಸೌಲಭ್ಯ ಒದಗಿಸುವುದು, ವಿದ್ಯಾರ್ಥಿ ಸಂಘಟನೆಗಳನ್ನು ರಾಜಕೀಯ ಸಾಧನಗಳಾಗಿ ಬಳಸುವುದು-ಇವೆಲ್ಲವೂ ಶಿಕ್ಷಣದ ಗುಣಮಟ್ಟಕ್ಕೆ ಹೊಡೆತ ನೀಡುತ್ತವೆ. ಶಿಕ್ಷಣ ಸಂಸ್ಥೆಗಳು ಇಂದಿಗೆ ಕೆಲವೆಡೆ ಜ್ಞಾನ ಮಂದಿರಗಳಿಗಿಂತ ರಾಜಕೀಯ ಬೀಜ ಬಿತ್ತುವ ಕೃಷಿ ಭೂಮಿಯಂತೆ ಕಾಣುತ್ತಿವೆ. ವಿದ್ಯಾರ್ಥಿಗಳ ಪ್ರತಿಭೆ, ಕೌಶಲ್ಯ, ಸೃಜನಶೀಲತೆಯ ಪರಿಶ್ರಮಕ್ಕಿಂತ ಅವರ ರಾಜಕೀಯ ನಿಲುವುಗಳಿಗೆ ಹೆಚ್ಚು ಮಹತ್ವ ಸಿಗುವ ಪರಿಸ್ಥಿತಿ ಉಂಟಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಏಕಾಗ್ರತೆ ಕುಗ್ಗಿ, ಅವರ ಸೃಜನಶೀಲತೆ ನಶಿಸಿಹೋಗಿ ಅವರ ಭವಿಷ್ಯ ರಾಜಕೀಯ ಗೊಂದಲಗಳಲ್ಲಿ ಸಿಲುಕುವ ಅಪಾಯ ಇದೆ.

      ಪಠ್ಯಕ್ರಮಗಳ ಬದಲಾವಣೆಗಳಲ್ಲಿಯೂ ರಾಜಕೀಯದ ಪ್ರಭಾವ ಕಂಡುಬರುತ್ತದೆ. ಒಂದು ಸರ್ಕಾರ ಬಂದಾಗ ಒಂದು ರೀತಿಯ ಇತಿಹಾಸ, ಮತ್ತೊಂದು ಸರ್ಕಾರ ಬಂದಾಗ ಬೇರೆ ರೀತಿಯ ಇತಿಹಾಸ. ಇತಿಹಾಸದ ಅರ್ಥವನ್ನೇ ತಿರುಚಲಾಗುತ್ತಿದೆ. ವಿದ್ಯಾರ್ಥಿಗಳು ನಿಜವಾದ ಜ್ಞಾನಕ್ಕಿಂತ ಗೊಂದಲವನ್ನೇ ಪಡೆಯುತ್ತಾರೆ. ಶಿಕ್ಷಣವು ಸತ್ಯ, ಸಮಾನತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಬೇಕಾದರೆ, ಅದು ರಾಜಕೀಯ ಹಿತಾಸಕ್ತಿಗಳಿಗೆ ಒಳಗಾಗಬಾರದು. ಇದರ ಜೊತೆಗೆ ಶಿಕ್ಷಣದ ವ್ಯಾಪಾರೀಕರಣಕ್ಕೂ ರಾಜಕೀಯ ಬೆಂಬಲ ಸಿಗುತ್ತಿರುವುದು ಮತ್ತೊಂದು ಸಮಸ್ಯೆಯಾಗಿದೆ. ಶಿಕ್ಷಣ ಸೇವೆಯ ಬದಲು ವ್ಯಾಪಾರವಾಗುತ್ತಿರುವಾಗ, ಸಾಮಾನ್ಯ ಕುಟುಂಬದ ಮಕ್ಕಳಿಗೆ ಉತ್ತಮ ಶಿಕ್ಷಣ ಕನಸಾಗಿಬಿಡುತ್ತದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಂವಿಧಾನಾತ್ಮಕವಾಗಿ ಸೌಲಭ್ಯ ಕೇಳಿದರೆ 'ಜಾತಿಯ ಹೆಸರಿನಲ್ಲಿ ಒಡೆದು ಆಳುವ ನೀತಿ' ಎಂಬ ಆರೋಪಗಳು ಕೇಳಿಬರುತ್ತಿವೆ. ಸಮಾನತೆ ಪ್ರತಿಯೊಬ್ಬ ನಾಗರಿಕನ ಕನಸಾಗಿದೆ. ಅದನ್ನು ಜಾರಿಗೊಳಿಸುವ ಮೊದಲು ಭಾರತದ ಪ್ರತಿಯೊಬ್ಬ ನಾಗರಿಕನೂ ಆರ್ಥಿಕವಾಗಿ ಸದೃಢನಾಗಬೇಕು. ನಂತರ ಸಮಾನತೆಯ ಹೆಸರಿನಲ್ಲಿ ರಾಜಕೀಯ ಶಕ್ತಿಯ ಮೂಲಕ ಜಾತಿ ನಿರ್ಮೂಲನೆ ಕಾರ್ಯ ಯಶಸ್ಸಿನ ದಾರಿಯಲ್ಲಿ ಸಾಗಬಹುದು.

      ರಾಜಕೀಯ ಮತ್ತು ಹಣದ ಪ್ರಭಾವದಿಂದ ಶಿಕ್ಷಣ ಸಮಾನತೆಯ ಹಾದಿಯಿಂದ ದೂರ ಸಾಗುತ್ತಿದೆ. ನಮ್ಮ ರಾಜಕೀಯ ಚಿಂತನೆ ಶಿಕ್ಷಣದಲ್ಲಿ ರಾಜಕೀಯ, ಜಾತಿಯತೆ, ಧರ್ಮ ಸಂಘರ್ಷ ಹಲವು ಕಾರಣಗಳಿಂದ ಒಡೆದು ಆಳುವ ನೀತಿ ನಡೆಯುತ್ತಲೇ ಇದೆ. ಈ ಕುತಂತ್ರ ಶಿಕ್ಷಣದಲ್ಲಿನ ಸಂಘಟನೆಗಳದ್ದೋ, ಅಥವಾ ಅವುಗಳಿಗೆ ಬೆಂಬಲ ನೀಡುವ ರಾಜಕೀಯದೋ? ಸಂಘಟನೆಗಳು ರಾಜಕೀಯವನ್ನು ಅವಲಂಬಿಸಿ, ರಾಜಕೀಯವು ಸಂಘಟನೆಗಳನ್ನು ಅವಲಂಬಿಸಿ, ಶಿಕ್ಷಣ ವ್ಯವಸ್ಥೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಆದ್ದರಿಂದ ಶಿಕ್ಷಣ ವ್ಯವಸ್ಥೆಯನ್ನು ರಾಜಕೀಯದ ಅತಿಯಾದ ಪ್ರಭಾವದಿಂದ ದೂರವಿಡುವುದು ಅತ್ಯಂತ ಅಗತ್ಯ ಶಿಕ್ಷಣ ಸಂಸ್ಥೆಗಳು ರಾಜಕೀಯ ಪ್ರಚಾರದ ವೇದಿಕೆಗಳಾಗದೆ, ಜ್ಞಾನ ಮತ್ತು ಮಾನವೀಯ ಮೌಲ್ಯಗಳ ಬೆಳವಣಿಗೆಯ ಕೇಂದ್ರಗಳಾಗಬೇಕು. ಸರ್ಕಾರವು ಶಿಕ್ಷಣವನ್ನು ಅಧಿಕಾರದ ಸಾಧನವಾಗಿ ನೋಡದೆ. ರಾಷ್ಟ್ರ ನಿರ್ಮಾಣದ ಶಕ್ತಿಯಾಗಿ ಪರಿಗಣಿಸಬೇಕು. ಯಾಕೆಂದರೆ ಇಂದಿನ ವಿದ್ಯಾರ್ಥಿಗಳೇ ನಾಳಿನ ದೇಶದ ಭವಿಷ್ಯ. ಇಂದು ಉತ್ತಮ ಶಿಕ್ಷಣ ನೀಡಿದರೆ, ನಾಳೆ ಉತ್ತಮ ರಾಷ್ಟ್ರ ನಿರ್ಮಾಣ ಮಾಡಬಹುದು.

ಉಪಸಂಪಾದಕ, ಬಿತ್ತಿ ಸಂಪಾದಕ ಮಂಡಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...