ಸೋಮವಾರ, ಮೇ 11, 2026

ಸಂಚಿಕೆ - ೧೯

ಎಲ್ಲಿ ಹೋದರು..?

ಮರಳಿ ಮಣ್ಣಿಗೆ ಸೇರಿದ ದಿನದಂದು 

ನೂಕುನುಗ್ಗಲು ಮಾಡಿ 

ದರ್ಶನಕ್ಕೆ ಬಂದವರೆಲ್ಲ 

ಎಲ್ಲಿ ಹೋದರು..? ಮರೆತುಬಿಟ್ಟರು..!


'ಮೀಝಾನ್' ಕಲ್ಲು ಎತ್ತಿಟ್ಟು 

ಗಿಡವ ನೆಟ್ಟು, ನೀರು ಸುರಿದು 

ಕರ್ಮ ಮಾಡಿದವರೆಲ್ಲ 

ಎಲ್ಲಿ ಹೋದರು..? ಮರೆತುಬಿಟ್ಟರು..!


ತುಂತುರು ಮಳೆಗೂ ಛತ್ರಿ ಹಿಡಿದು 

ನೀರಾಗದಂತೆ ನೋಡಿ 

ಕಾಳಜಿವಹಿಸಿದವರೆಲ್ಲ 

ಎಲ್ಲಿ ಹೋದರು..? ಮರೆತು ಬಿಟ್ಟರು..!


ಬಿಳಿಬಟ್ಟೆಯಲಿ 

ಕಪ್ಪು ಚುಕ್ಕಿಯೊಂದು ಮೂಡಿದಾಗ 

ನೀರೆರೆದು ತೊಳೆದುಕೊಟ್ಟವರೆಲ್ಲ 

ಎಲ್ಲಿ ಹೋದರು..? ಮರೆತು ಬಿಟ್ಟರು..!


ಮೂರು, ಏಳು, ನಲ್ವತ್ತರ 

ದಿನದಂದು ಬಂದು 

ಸಾಂತ್ವನ ಮಾಡಿದವರೆಲ್ಲ 

ಎಲ್ಲಿ ಹೋದರು..? ಮರೆತು ಬಿಟ್ಟರು..!


ನೀನೇ ಸರ್ವಸ್ವವೆಂದು 

ಮಾತು ಮಾತಿಗೂ ಭಾಷೆ ಕೊಟ್ಟು 

ಬಣ್ಣಬಣ್ಣದಿ ಮಾತಾಡಿದವರೆಲ್ಲ 

ಎಲ್ಲಿ ಹೋದರು..? ಮರೆತು ಬಿಟ್ಟರು..!


ಒಂದೆರಡು ವಾರ ಅಗರಬತ್ತಿ ಹಚ್ಚಿ 

ಸಮಾಧಿಯ ಬಳಿ ಬಂದ 

ಬಂಧು-ಬಳಗ-ಗೆಳಯರೆಲ್ಲ 

ಎಲ್ಲಿ ಹೋದರು..? 

ಹೆಸರೇ ಗೊತ್ತಿಲ್ಲದಂತೆ ಮರೆತು ಬಿಟ್ಟರು..!


ಸಲೀಂ ಸುಳ್ಯ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...