ಸೋಮವಾರ, ಮೇ 11, 2026

ಸಂಚಿಕೆ - ೧೯

 ಸಂಪಾದಕೀಯ


ಸಮಾನತೆ : ಹೋರಾಟದ ಗುರಿಯೇ, ಅಥವಾ ಹೊಸ ಅಸಮತೋಲನದ ಆರಂಭವೇ?

      ಇಂದಿನ ಸಮಾಜದಲ್ಲಿ "ಸಮಾನತೆ" ಎಂಬ ಪದವು ಕೇವಲ ಒಂದು ಶಬ್ದವಲ್ಲ; ಅದು ಚಳುವಳಿ, ಘೋಷಣೆ. ಹೋರಾಟ ಮತ್ತು ಚರ್ಚೆಗಳ ಕೇಂದ್ರವಾಗಿದೆ. ಮಹಿಳಾ ಹಕ್ಕುಗಳು, ಸ್ತ್ರೀವಾದ, ಮೀಸಲಾತಿ, ಸಾಮಾಜಿಕ ನ್ಯಾಯ, ಕಾನೂನು ರಕ್ಷಣೆ ಇವೆಲ್ಲವೂ ಸಮಾನತೆಯ ಹೆಸರಿನಲ್ಲಿ ನಡೆಯುತ್ತಿರುವ ಪ್ರಯತ್ನಗಳೇ. ಆದರೆ ಈ ಎಲ್ಲಾ ಚರ್ಚೆಗಳ ಮಧ್ಯೆ ಸಮಾಜವು ತನ್ನನ್ನೇ ಪ್ರಶ್ನಿಸಬೇಕಾದ ಒಂದು ಗಂಭೀರ ಸಂಗತಿ ಇದೆ. ನಾವು ನಿಜವಾಗಿಯೂ ಸಮಾನತೆಯತ್ತ ಸಾಗುತ್ತಿದ್ದೇವೆಯೇ? ಅಥವಾ ಕೆಲವೊಮ್ಮೆ ಸಮಾನತೆಯ ಹೆಸರಿನಲ್ಲಿ ಮತ್ತೊಂದು ಅಸಮತೋಲನವನ್ನು ಸೃಷ್ಟಿಸುತ್ತಿದ್ದೇವೆಯೇ? ಇತಿಹಾಸವನ್ನು ನೋಡಿದರೆ ಮಹಿಳೆಯರು ಅನೇಕ ಶತಮಾನಗಳ ಕಾಲ ಶಿಕ್ಷಣದಿಂದ, ಆರ್ಥಿಕ ಸ್ವಾತಂತ್ರದಿಂದ, ರಾಜಕೀಯ ಹಕ್ಕುಗಳಿಂದ ಮತ್ತು ಸಾಮಾಜಿಕ ಗೌರವದಿಂದ ವಂಚಿತರಾಗಿದ್ದರು. ಮನೆಯ ಅಂತರಾಳದಲ್ಲೇ ಸೀಮಿತವಾಗಿದ್ದ ಮಹಿಳೆಯರ ಧ್ವನಿ ಬಹಳ ಸಮಯ ಸಮಾಜದ ಹೊರಗೆ ಕೇಳಿಸಲೇ ಇಲ್ಲ. ಈ ಅನ್ಯಾಯವನ್ನು ತಿದ್ದಬೇಕೆಂಬ ಉದ್ದೇಶದಿಂದ ಮಹಿಳಾ ಚಳುವಳಿಗಳು ಹುಟ್ಟಿಕೊಂಡವು. ಮಹಿಳಾ ರಕ್ಷಣಾ ಕಾನೂನುಗಳು, ಮೀಸಲಾತಿಗಳು, ಜಾಗೃತಿ ಕಾರ್ಯಕ್ರಮಗಳು ರೂಪುಗೊಂಡವು. ಇವೆಲ್ಲವೂ ಸಮಾಜದ ಪ್ರಗತಿಗೆ ಅಗತ್ಯವಾಗಿದ್ದವು ಎಂಬುದರಲ್ಲಿ ಸಂಶಯವಿಲ್ಲ.

      ಆದರೆ ಕಾಲ ಬದಲಾಗುತ್ತಿದ್ದಂತೆ ಸಮಾನತೆಯ ಚರ್ಚೆಗಳ ಸ್ವರೂಪವೂ ಬದಲಾಗತೊಡಗಿದೆ. ಸಮಾನತೆ ಎಂದರೆ ಒಂದು ವರ್ಗಕ್ಕೆ ಹೆಚ್ಚು ಬೆಂಬಲ ನೀಡುವುದೇ? ಅಥವಾ ಎಲ್ಲರಿಗೂ ಸಮಾನ ನ್ಯಾಯ ಮತ್ತು ಸಮಾನ ಗೌರವ ಒದಗಿಸುವ ಸಮತೋಲನದ ವ್ಯವಸ್ಥೆಯೇ? ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಈ ಪ್ರಶ್ನೆಗಳು ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುತ್ತಿವೆ. ಕೆಲ ವಿವಾದಗಳಲ್ಲಿ ಮಹಿಳೆಯರ ಗುರುತನ್ನು ಗೌಪ್ಯತೆಯ ಹೆಸರಿನಲ್ಲಿ ಮರೆಮಾಚಿ, ಪುರುಷರ ಗುರುತನ್ನು ಮಾತ್ರ ಬಹಿರಂಗಪಡಿಸಲಾಗುತ್ತದೆ ಎಂಬ ವಿಷಯವನ್ನು ಗಮನಿಸಬಹುದಾಗಿದೆ. ಗೌಪ್ಯತೆ ಎಂಬ ಹಕ್ಕು ಇದ್ದರೆ ಅದು ಇಬ್ಬರಿಗೂ ಸಮಾನವಾಗಿರಬೇಕಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇದೇ ವೇಳೆ ಮಹಿಳೆಯರ ಸಾಧನೆಗಳಿಗೆ ವಿಶೇಷ ಪ್ರೋತ್ಸಾಹ ದೊರೆಯುತ್ತಿರುವುದು ಒಂದು ಸಾಮಾಜಿಕ ಆಗತ್ಯವೂ ಆಗಿದೆ. ಹಿಂದೆ ಅವಕಾಶಗಳಿಂದ ದೂರವಿದ್ದ ವರ್ಗದ ಸಾಧನೆಯನ್ನು ಸಮಾಜ ಮುಂದಿಟ್ಟುಕೊಳ್ಳುವುದು ಬದಲಾವಣೆಯ ಸಂಕೇತ. ಆದರೆ ಅದೇ ಸಮಯದಲ್ಲಿ ಪುರುಷರ ಪರಿಶ್ರಮ ಮತ್ತು ಸಾಧನೆಗಳನ್ನು "ಅದು ಸಾಮಾನ್ಯ" ಎಂದು ನಿರ್ಲಕ್ಷಿಸುವ ಮನೋಭಾವ ಬೆಳೆದುಬಂದರೆ ಅದು ಕೂಡ ಸಮಾನತೆಯ ಆತ್ಮಕ್ಕೆ ವಿರುದ್ಧವೇ ಆಗುತ್ತದೆ. ಸಮಾನತೆ ಎಂದರೆ ಒಬ್ಬರನ್ನು ಎತ್ತಿಹಿಡಿಯಲು ಮತ್ತೊಬ್ಬರನ್ನು ಕುಗ್ಗಿಸುವುದಲ್ಲ; ಇಬ್ಬರನ್ನೂ ಸಮಾನ ಗೌರವದಿಂದ ನೋಡುವ ಮನೋಭಾವ,

      ಸಾಮಾಜಿಕ ಮಾಧ್ಯಮಗಳನ್ನು ಗಮನಿಸಿದರೆ. ಭಾವನೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ. ಇಂದು ಮಹಿಳೆಯರು ತಮ್ಮ ಅನುಭವಗಳು, ಆರೋಗ್ಯ, ಸಂಬಂಧಗಳು ಮತ್ತು ವೈಯಕ್ತಿಕ ಭಾವನೆಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಇದು ಆರೋಗ್ಯಕರ ಬದಲಾವಣೆ, ಆದರೆ ಪುರುಷರು ಇದೇ ವಿಷಯಗಳ ಕುರಿತು ಮಾತನಾಡಿದಾಗ ಅವರಿಗೆ ಹಾಸ್ಯ, ಅನುಮಾನ ಅಥವಾ ತಿರಸ್ಕಾರದ ಪ್ರತಿಕ್ರಿಯೆಗಳು ಸಿಗುತ್ತವೆ. "ಗಂಡಸು ಅಂದ್ರೆ ಗಟ್ಟಿಯಾಗಿರಬೇಕು" ಎಂಬ ಹಳೆಯ ಕಲ್ಪನೆ ಇನ್ನೂ ಅನೇಕ ಮನಸ್ಸುಗಳಲ್ಲಿ ಜೀವಂತವಾಗಿದೆ. ಪರಿಣಾಮವಾಗಿ ಅನೇಕ ಪುರುಷರು ತಮ್ಮ ನೋವುಗಳನ್ನು ಮೌನದಲ್ಲೇ ಹೂತುಬಿಡುತ್ತಿದ್ದಾರೆ. ಕಾನೂನು ವ್ಯವಸ್ಥೆಯಲ್ಲಿಯೂ ಇದೇ ರೀತಿಯ ಚರ್ಚೆಗಳು ಮುಂದುವರಿಯುತ್ತಿವೆ. ಮಹಿಳೆಯರ ಸುರಕ್ಷತೆಗಾಗಿ ರೂಪುಗೊಂಡ ಕಾನೂನುಗಳು ಅತ್ಯಂತ ಅಗತ್ಯವಾಗಿದ್ದವು. ಏಕೆಂದರೆ ಇತಿಹಾಸದಲ್ಲಿ ಮಹಿಳೆಯರು ಗೃಹಹಿಂಸೆ, ಲೈಂಗಿಕ ಕಿರುಕುಳ ಮತ್ತು ಸಾಮಾಜಿಕ ಅಸುರಕ್ಷತೆಯನ್ನು ಹೆಚ್ಚು ಅನುಭವಿಸಿದ್ದರು. ಆದರೆ ಇದೇ ಸಮಯದಲ್ಲಿ ಪುರುಷರೂ ಮಾನಸಿಕ ಹಿಂಸೆ, ಸುಳ್ಳು ಆರೋಪಗಳು, ಕುಟುಂಬದ ಒತ್ತಡಗಳು ಮತ್ತು ಸಂಬಂಧಗಳ ಗೊಂದಲಗಳನ್ನು ಎದುರಿಸುತ್ತಾರೆ ಎಂಬ ವಾದವೂ ಸತ್ಯವೇ ಆಗಿದೆ. ಕಾನೂನುಗಳು ರಕ್ಷಣೆಯ ಸಾಧನವಾಗಬೇಕು: ಪ್ರತೀಕಾರದ ಸಾಧನವಾಗಬಾರದು ಎಂಬ ಎಚ್ಚರಿಕೆ ಇಲ್ಲಿ ಬಹಳ ಮುಖ್ಯ.

      ಇಂತಹ ಪ್ರಶ್ನೆಗಳನ್ನು ವಿರೋಧದ ಧ್ವನಿಯಾಗಿ ನೋಡುವುದಕ್ಕಿಂತ, ಸಮತೋಲನದ ದೃಷ್ಟಿಯಿಂದ ಚರ್ಚಿಸುವುದು ಪ್ರಜಾಸತ್ತಾತ್ಮಕ ಸಮಾಜದ ಲಕ್ಷಣ. ಯಾವುದೇ ಚಳುವಳಿ ಒಂದು ಲಿಂಗದ ನೋವನ್ನು ಮಾತ್ರ ಒತ್ತಿ ಹೇಳಿ, ಮತ್ತೊಂದು ಲಿಂಗದ ಅನುಭವಗಳನ್ನು ಸಂಪೂರ್ಣ ನಿರ್ಲಕ್ಷಿಸಲು ಆರಂಭಿಸಿದರೆ, ಅದರ ವಿರುದ್ಧ ಪ್ರತಿಕ್ರಿಯಾತ್ಮಕ ಚಿಂತನೆಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಸ್ತ್ರೀವಾದದ ಮೂಲ ಉದ್ದೇಶ ಮಹಿಳೆಯರ ಹಕ್ಕು ಮತ್ತು ಗೌರವವನ್ನು ಸ್ಥಾಪಿಸುವುದೇ ಹೊರತು ಪುರುಷರನ್ನು ವಿರೋಧಿಸುವುದಲ್ಲ. ಆದರೆ ಸಮತೋಲನ ಕಳೆದುಹೋದರೆ ಅತಿರೇಕದ ಪ್ರತಿಕ್ರಿಯೆಗಳು ಸಮಾಜವನ್ನು ಮತ್ತಷ್ಟು ವಿಭಜಿಸುವ ಅಪಾಯವಿದೆ.

      ಕೊನೆಯಲ್ಲಿ ಒಂದು ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕು ನಿಜವಾದ ಸಮಾನತೆ ಎಂದರೆ ಕೇವಲ ಹಕ್ಕುಗಳ ಸಮಾನತೆ ಅಲ್ಲ; ಗೌರವದಲ್ಲೂ, ಹೊಣೆಗಾರಿಕೆಯಲ್ಲಿ, ಕಾನೂನಿನ ಮುಂದೆ ಮತ್ತು ಅವಕಾಶಗಳಲ್ಲಿ ಸಮಾನತೆ. ಮಹಿಳೆಯರ ಮೇಲಿನ ಅನ್ಯಾಯವನ್ನು ತಿದ್ದುವುದು ಎಷ್ಟು ಮುಖ್ಯವೋ, ಪುರುಷರ ಮೇಲಿನ ಪೂರ್ವಗ್ರಹಗಳನ್ನು ದೂರಿಸುವುದೂ ಅಷ್ಟೇ ಮುಖ್ಯ. ಇಂದು ಸಮಾಜಕ್ಕೆ ಬೇಕಾಗಿರುವುದು "ಪುರುಷ ಪರ" ಅಥವಾ "ಮಹಿಳಾ ಪರ" ಮನೋಭಾವವಲ್ಲ. ಬದಲಾಗಿ, ವ್ಯಕ್ತಿಯ ಲಿಂಗಕ್ಕಿಂತ ಮಾನವೀಯತೆಯನ್ನು ದೊಡ್ಡದಾಗಿ ನೋಡುವ ಪರಿಪಕ್ವ ಚಿಂತನೆ. "ಸಮಾನತೆ" ಎಂಬ ಪದವು ಘೋಷಣೆಗಳಲ್ಲಿ ಮಾತ್ರ ಉಳಿಯದೆ. ಕಾನೂನುಗಳಲ್ಲಿ ಸಾಮಾಜಿಕ ನಡವಳಿಕೆಯಲ್ಲಿ ಮತ್ತು ಪರಸ್ಪರ ಗೌರವದಲ್ಲಿ ಜೀವಂತವಾಗಬೇಕು. ಆಗಲೇ ಸಮಾನತೆ ಒಂದು ಘೋಷಣೆಯಲ್ಲ, ಸಮಾಜದ ನಿಜವಾದ ಮೌಲ್ಯವಾಗುತ್ತದೆ.

ಉಪಸಂಪಾದಕ, ಬಿತ್ತಿ ಸಂಪಾದಕ ಮಂಡಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...