ಹಿಂದಿ ಬೇಡವೆ?
ನಿಮಗೆ ಯಾವಾಗಲಾದರೂ ಅನ್ನಿಸಿದೆಯೆ ಹಿಂದಿ ಭಾಷೆಯಿಂದ ಕನ್ನಡಕ್ಕೆ ಬಹಳಷ್ಟು ಅಪಾಯವಾಗಿದೆ ಎಂದು ಅಥವಾ ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಕಲಿಯುತ್ತಿರುವ ಹಿಂದಿ ಭಾಷೆಯಿಂದ ಕನ್ನಡದ ಮಾನ್ಯತೆ ಮತ್ತು ಬಳಕೆ ಕಡಿಮೆಯಾಗುತ್ತಿದೆ ಎಂದು. ಅಥವಾ ಹಿಂದಿ ಭಾಷೆಯಿಂದ ಶಾಲಾ ಮಕ್ಕಳು ಭಯಭೀತರಾಗಿ ಎಷ್ಟೋ ಮಕ್ಕಳು ಶಾಲೆ ತೊರೆದಿದ್ದಾರೆಂದು?. ಇರಿ ಇರಿ ಈಗಲೆ ಹೌದು ಇಲ್ಲ ಎಂದು ಹೇಳಬೇಡಿ. ನಿಜವಾಗಿಯೂ ಮಕ್ಕಳಲ್ಲಿ ಹಿಂದಿ ಶಿಕ್ಷಣ ಹೊರೆಯಾಗಿದೆಯೆ? ನಿಜವಾಗಿಯೂ ಹೊರೆಯಾದ ಭಾಷೆಗಳಾವು? ಮಕ್ಕಳನ್ನು ಕುಗ್ಗಿಸುತ್ತಿರುವ ಭಾಷೆಗಳಾವು? ಕನ್ನಡದ ಬಳಕೆಗೆ ಅಡ್ಡಿಯಾದ ಭಾಷೆಗಳಾವು? ಕನ್ನಡ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವುದಾವ ಭಾಷೆಯಿಂದ?. ನಿಜ ಕನ್ನಡ ಭಾಷಾ ಕಲಿಕೆ ಮತ್ತು ಬಳಕೆಯ ವಿಚಾರವಾಗಿ ನೋಡಿದರೆ ಹಿಂದಿಯೂ ಒಂದು ಕಾರಣವೆ ಹೌದು ಆದರೆ ಹಿಂದಿಗಿಂತಲೂ ಮುಖ್ಯ ಕಾರಣವಾದವುಗಳು ಬೇರೆಯೆ ಇದ್ದಾವೆ. ಅವುಗಳಿಂದ ಎಷ್ಟೋ ವಿದ್ಯಾರ್ಥಿಗಳು ಶಿಕ್ಷಣವನ್ನೆ ತೊರೆದಿದ್ದಾರೆ. ಆದರೆ ಪ್ರಸ್ತುತ ರಾಜ್ಯ ಸರ್ಕಾರಗಳು ಯಾಕೆ ಹಿಂದಿಯನ್ನೆ ಮುಖ್ಯವಾಗಿಸುತ್ತಿವೆಯೊ ನಾ ಕಾಣೆ. ನಾವು ಕಲಿತಂದಿನಿಂದ ಇಂದಿನವರೆಗೂ ಹಿಂದಿ ಭಾಷಾ ವಿಷಯವು ಬಹುಪಾಲು ಮಕ್ಕಳಿಗೆ ಹೊರೆಯಾದುದಲ್ಲ ಅದನ್ನು ತುಂಬಾ ಸಂತೋಷದಿಂದಲೆ ಕಲಿಯುತಿರುವುದು ನಾ ಬಲ್ಲೆ, ಬಹುಪಾಲು ಮಕ್ಕಳಿಗೆ ಹೊರೆಯಾದ ವಿಷಯಗಳ ಬೇರಿವೆ. ಆದರೆ ಅದರ ಕುರಿತು ಯಾರು ಮಾತನಾಡರ್ಯಾಕೆ?.
ಕರ್ನಾಟಕದಲ್ಲಿರುವ ಬಹು ಜನರು ಈ ನೆಲದವರೆಂದು ಹೇಳಿಕೊಳ್ಳುವ ಇಲ್ಲೆ ಹುಟ್ಟಿ ಬೆಳೆದ ಎಷ್ಟೋ ಜನರಿಗೆ ಅವರ ಮಕ್ಕಳಿಗೆ ಕನ್ನಡವೇ ಬರುವುದಿಲ್ಲ. ಇಲ್ಲ ಇಲ್ಲ ಕಲಿಯುವುದಿಲ್ಲ ಮತ್ತು ಕಲಿಸುವುದಿಲ್ಲ. ಅಂತಹ ವಿಚಾರಗಳು ಈ ಸರ್ಕಾರಗಳಿಗೆ ಬೇಕಾಗಿಯೂ ಇಲ್ಲ, ಇವರಿಗೆ ಕಾಣುವುದು ಹಿಂದಿ ಭಾಷೆಯೊಂದೆ ಏಕೆ? ಹಾಗೆ ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲದಿದ್ದರೂ ರಾಷ್ಟ್ರದ ಜನರನ್ನು ಒಗ್ಗೂಡಿಸುವಂತದ್ದು ಭಾರತೀಯರು ಪರದೇಶಗಳಿಗೆ ಹೋದಾಗ ನಮ್ಮ ನಾಡಿನವರೆಂಬ ಭಾವನೆ ಮೂಡಿಸುತ್ತದೆ. ಬೇರೆ ರಾಜ್ಯಗಳಲ್ಲಿ ಕನ್ನಡಿಗರು ಹೋದರೆ ಅವರಿಗೆ ಕನ್ನಡ ಬರದು ನಮಗೆ ಆ ರಾಜ್ಯ ಭಾಷೆ ಬರದು, ಯಾವ ಭಾಷೆಯಲ್ಲಿ ಮಾತನಾಡಬೇಕು?, ಹಿಂದಿ ಭಾಷೆ ಭಾರತೀಯರನ್ನು ಒಂದು ಮಾಡುತ್ತದೆ. ಹಿಂದಿ ಭಾಷೆಯನ್ನು ತೆಗೆದು ಹಾಕುವುದು ಕೇವಲ ಒಂದು ರಾಜಕೀಯವೆ ಹೊರತು ಮತ್ತೇನು ಅಲ್ಲ. ಅಷ್ಟು ಕನ್ನಡದ ಪ್ರೇಮವುಳ್ಳ ಸರ್ಕಾರಗಳು ರಾಜ್ಯದ ಪ್ರಮುಖ ಭಾಷೆಯಾದ ಕನ್ನಡದಲ್ಲಿ ಎಲ್ಲವನ್ನು ಕಲಿಸಲಿ!, ಕರ್ಮ ಮರೆತೇ ಹೋದೆ ನೋಡಿ ನಾನು. ಕನ್ನಡ ಕಲಿಸುವುದಕ್ಕೆಯೆ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಇನ್ನು ಕನ್ನಡದಲ್ಲಿ ಎಲ್ಲವನ್ನು ಹೇಗೆ ಕಲಿಸಿಯಾರು? ಪ್ರಸ್ತುತ ನಮ್ಮ ದೇಶದ ಚಿಂತನೆ ಹೇಗಿದೆ ಎಂದರೆ ಬೇರೆ ದೇಶಗಳ ಭಾಷೆ ಇಲ್ಲಿ ರಾರಾಜಿಸುತ್ತ ಪ್ರಾಂತೀಯ ಭಾಷೆಗಳನ್ನು ನುಂಗಿದರೂ ಅದು ಅಪ್ರಸ್ತುತವೆ. ಆದರೆ ಭಾರತೀಯರ ಕೊಡುಕೊಳ್ಳುವಿಕೆಗೆ ಉಪಯುಕ್ತವಾಗುವ ಭಾಷೆ ಬೇಡ ಎನ್ನುವರು. ಇದು ಕೇವಲ ನಮ್ಮ ರಾಜ್ಯದ ಆಲೋಚನೆಯಲ್ಲ, ದೇಶದ ಪ್ರತಿಯೊಂದು ರಾಜ್ಯದ ಸಿದ್ಧಾಂತವಿದು. ಅದೇ ಈ ಸರ್ಕಾರಗಳಿಗೆ ಪರಮಾನಂದ. ಅದಕ್ಕೆ ಅಲ್ಲವೇ ನಮ್ಮ ಜನಪದರು ಹೇಳಿದ್ದು "ಬೇವೂರು ದೆವ್ವ ಬಂದು ಇದ್ದೂರು ದೇವನ್ನೊಡಿಸಿತ್ತಂತೆ".
ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ