“ವಿಶ್ವದ ಅತಿ ದೊಡ್ಡ ಹೂವು”
ಪ್ರಕೃತಿಯ ವೈಶಿಷ್ಟ್ಯವೆ ವಿಭಿನ್ನವಾಗಿರುತ್ತದೆ. ನಾವು ನೋಡಿದಕ್ಕಿಂತ ನೋಡದೆ ಇರುವುದು ಹಲವಾರು ಪ್ರಕೃತಿಯ ಮಡಿಲಲ್ಲಿ ಸೇರಿಕೊಂಡಿರುತ್ತದೆ. ಇವುಗಳಲ್ಲಿ ಅಪರೂಪವಾಗಿರುವ ಮತ್ತು ಅಳಿವಿನಂಚಿನಲ್ಲಿರುವ ಪ್ರಪಂಚದ ಅತೀ ದೊಡ್ಡ ಹೂ ಆಗಿರುವ ರಾಫ್ ಲೆಸಿಯಾ (Rafflesia), ಬ್ರಿಟಿಷ್ ಅಧಿಕಾರಿ ಸರ್ ಸ್ಪ್ಯಾಮ್ ಫೋರ್ಡ್ ರಾಫೆಲ್ಸ್ ಮತ್ತು ಸಸ್ಯವಿಜ್ಞಾನಿ ಡಾ. ಜೋಸೆಫ್ ಅರ್ನಾಲ್ಡ್ ಅವರು ೧೮೧೮ರಲ್ಲಿ ಇದನ್ನು ಮೊದಲು ಗುರುತಿಸುತ್ತಾರೆ. ಈ ಕಾರಣಕ್ಕೆ ಅವರ ಗೌರವಾರ್ಥವಾಗಿ ಇದಕ್ಕೆ 'ರಾಫೆಸಿಯಾ ಅರ್ನಾಲ್ಲಿ' (Rafflesia Arnoldi) ಎಂದು ಹೆಸರಿಡಲಾಯಿತು. ಈ ಪ್ರಭೇದದ ಹೂವುಗಳು ಸುಮಾರು ೩ ಅಡಿ ೧ ಮೀಟರ್ ವ್ಯಾಸದವರೆಗೆ ಬೆಳೆಯಬಲ್ಲವು ಮತ್ತು ಇವುಗಳ ತೂಕ ಸುಮಾರು ೭ ರಿಂದ ೧೧ ಕಿಲೋ ಗ್ರಾಂಗಳವರೆಗೆ ಇರುತ್ತದೆ. ಈ ಸಸ್ಯ ಆಹಾರಕ್ಕಾಗಿ 'ಟೆಟ್ರಾಸ್ಟಿಗ್ಗಾ' (Tetrastigma) ಎಂಬ ಬಳ್ಳಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ರಫೀಸಿಯ ಆವೃತಬೀಜಸಸ್ಯಗಳ (ಆಂಜಿಯೋಸ್ಪರ್ಮ್ಸ್) ಪೈಕಿ ರಫೀಸಿಯೇಸಿ ಕುಟುಂಬಕ್ಕೆ ಸೇರಿರುವ ಸಸ್ಯ ವಲಯ. ದ್ವೀಪ ಸಮೂಹಗಳಲ್ಲಿ ಮಾತ್ರ ಕಂಡುಬರುವ ಈ ಸಸ್ಯ ಒಂದು ಪರಾವಲಂಬಿ ಸಸ್ಯ. ವಿವಿಧ ಜಾತಿಯ ಸಸ್ಯಗಳ ಮೇಲೆ ಇದು ಪರಾವಲಂಬಿಯಾಗಿ ಜೀವನ ನಡೆಸುತ್ತದೆ. ಆವೃತಬೀಜ ಸಸ್ಯಗಳ ಮುಖ್ಯ ಭಾಗಗಳಾದ ಬೇರು, ಕಾಂಡ, ಎಲೆಗಳಾವುವೂ ಈ ಸಸ್ಯದಲ್ಲಿ ಇರುವುದಿಲ್ಲ. ಸಸ್ಯ ಬಿಳಿಯ ಸೂಕ್ಷ್ಮ ನಾಳಗಳ ತಂತುಜಾಲದಂತಿದ್ದು ಆತಿಥೇಯ ಸಸ್ಯದ ಒಳಭಾಗದಲ್ಲಿ ಹರಡಿಕೊಂಡಿರುತ್ತದೆ. ಹೀಗಾಗಿ ಹೊರನೋಟಕ್ಕೆ ಸಸ್ಯದ ಇರುವಿಕೆಯ ಅರಿವೇ ಆಗುವುದಿಲ್ಲ. ಶವದ ಹೂವು (Corpse Flower) ಎಂದು ಸಹ ಕರೆಯಲಾಗುತ್ತದೆ. ಏಕೆಂದರೆ ಇದು ಅರಳಿದಾಗ ಕೊಳೆತ ಮಾಂಸದಂತಹ ಅಸಹ್ಯಕರ ವಾಸನೆಯನ್ನು ಬೀರುತ್ತದೆ. ಈ ವಾಸನೆಯು ಪರಾಗಸ್ಪರ್ಶಕ್ಕಾಗಿ ನೊಣಗಳನ್ನು ಮತ್ತು ಕೀಟಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಇದನ್ನು ಸ್ಥಳೀಯವಾಗಿ 'ಶವದ ಹೂವು' ಅಥವಾ 'ಮಾಂಸದ ಹೂವು' ಎಂದು ಕರೆಯಲಾಗುತ್ತದೆ. ಸಸ್ಯದ ರಚನೆ ಎಷ್ಟು ಭಿನ್ನವೊ ಅದರ ಹೂ ಕೂಡ ಅಷ್ಟೇ ವಿಶಿಷ್ಟವಾದ್ದು. ಹೂವಿನ ಸುತ್ತ ಪುಷ್ಪ ಪಾತ್ರೆಯಿರುತ್ತದೆ. ಪುಷ್ಪದಳಗಳಿರುವುದಿಲ್ಲ. ಹೂಗಳಲ್ಲಿ ಗಂಡು ಹೆಣ್ಣುಗಳೆಂಬ ಭೇಧವಿದೆ. ಗಂಡುಹೂಗಳಲ್ಲಿರುವುದು ಕೇಸರಗಳು ಮಾತ್ರ. ಅಗಣಿತ ಸಂಖ್ಯೆಯಲ್ಲಿರುವ ಕೇಸರಗಳ ತುದಿಯಲ್ಲಿ ಎರಡು ಪರಾಗಕೋಶಗಳಿವೆ.
ಪೂಜಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ