'ಸೀಕ್ರೆಟ್ ಸಂತ' ಆಟದ ಅಭಿಪ್ರಾಯ
ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿ ಮಿತ್ರರು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ 'ಸೀಕ್ರೆಟ್ ಸಂತ'ಎಂಬ ಆಟವನ್ನು ಆಯೋಜಿಸಿದ್ದರು. ಈ ಆಟವು ವಿಭಿನ್ನವಾಗಿದ್ದು ಬಹಳ ವಿಶೇಷತೆಯನ್ನು ಹೊಂದಿತ್ತು. ಮೊದಲು ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಹೆಸರುಗಳನ್ನು ಚೀಟಿಗಳಲ್ಲಿ ಬರೆದು. ಹೆಸರು ಕಾಣದಂತೆ ಚೀಟಿಗಳನ್ನು ಮಡಚಿ ಒಂದು ಪೆಟ್ಟಿಗೆಯಲ್ಲಿ ಹಾಕಿ ಚೆನ್ನಾಗಿ ಕುಲುಕಲಾಯಿತು. ನಂತರ ಪ್ರಥಮ ಮತ್ತು ದ್ವಿತೀಯ ವರ್ಷದ ಸಹಪಾಠಿಗಳನ್ನು ಒಟ್ಟಾಗಿ ಸೇರಿಸಿ ಎಲ್ಲರಿಗೂ ಒಂದೊಂದು ಚೀಟಿಯನ್ನು ತೆಗೆದುಕೊಳ್ಳುವಂತೆ ಹೇಳಲಾಯಿತು. ಚೀಟಿಯಲ್ಲಿ ಹೆಸರು ಬಂದವರಿಗೆ ಒಂದು ಸೀಮಿತ ಮೌಲ್ಯದೊಳಗೆ ತಮಗೆ ಇಷ್ಟವಾದ ಉಡುಗೊರೆಯನ್ನು ನೀಡಬೇಕು ಎಂಬುದೇ ಈ ಆಟದ ನಿಯಮವಾಗಿತ್ತು. ಹಾಗೆಯೇ ಯಾರು ಸಹ ತಮ್ಮ ಚೀಟಿಯಲ್ಲಿ ಬಂದ ಹೆಸರನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಮತ್ತು ತಾವು ತಂದ ಉಡುಗೊರೆಯ ವಿಷಯವನ್ನೂ ಯಾರಿಗೂ ಹೇಳಬಾರದು ಎಂಬ ನಿಯಮವಿತ್ತು.
ಈ ಆಟವು ಎಲ್ಲರಿಗೂ ಒಂದಲ್ಲೊಂದು ಕುತೂಹಲವನ್ನು ಮೂಡಿಸಿತು. ಎಲ್ಲರೂ ಒಬ್ಬೊಬ್ಬರಾಗಿ ಬಂದು ಚೀಟಿಯನ್ನು ತೆಗೆದು. ಗೌಪ್ಯವಾಗಿ ಹೆಸರನ್ನು ನೋಡಿ, ಕಿರು ನಗುವಿನೊಂದಿಗೆ ತಮ್ಮ ಆಸನಕ್ಕೆ ತೆರಳಿದರು. ಆ ಪೆಟ್ಟಿಗೆಯಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಹೆಸರುಗಳಿದ್ದುದರಿಂದ ಹಿರಿಯ ಮಿತ್ರರಿಗೆ-ಕಿರಿಯ ಮಿತ್ರರ ಹೆಸರು, ಕಿರಿಯ ಮಿತ್ರರಿಗೆ ಹಿರಿಯ ಮಿತ್ರರ ಹೆಸರು, ಹುಡುಗರಿಗೆ-ಹುಡುಗಿಯರ ಹೆಸರು. ಹುಡುಗಿಯರಿಗೆ-ಹುಡುಗರ ಹೆಸರು, ಹೇಗೆ ಬೇಕಾದರೂ ಬರುವ ಅವಕಾಶವಿತ್ತು. ಯಾರಿಗೆ ಯಾರ ಹೆಸರಿನ ಚೀಟಿ ಬಂದಿದೆ ಎನ್ನುವುದೇ ಎಲ್ಲರಿಗೂ ಕುತೂಹಲವಾಗಿತ್ತು. ಆದರೆ ಯಾರು ಸಹ ಹೆಸರನ್ನು ಹೇಳುವಂತಿರಲಿಲ್ಲ. ದಿನಾಂಕ ೩೧ ಡಿಸೆಂಬರ್ ೨೦೨೫ರಂದು ಎಲ್ಲರೂ ತಮ್ಮ ಉಡುಗೊರೆಯೊಂದಿಗೆ ತಮಗೆ ಬಂದ ಹೆಸರನ್ನು ಪ್ರಕಟಿಸಿ ಅವರಿಗೆ ಉಡುಗೊರೆ ನೀಡಬೇಕು ಎಂದು ಹೇಳಲಾಗಿತ್ತು.
ನನ್ನ ಸರದಿಯಲ್ಲಿ ನಾನು ಚೀಟಿಯನ್ನು ತೆಗೆದುಕೊಂಡು ನನ್ನ ಆಸನಕ್ಕೆ ಬಂದು ಸ್ವಲ್ಪ ಭಾಗವನ್ನು ಮಾತ್ರ ತೆರೆದು ನೋಡಿದೆ. ನನಗೆ ತುಂಬಾ ಆಶ್ಚರ್ಯವಾಯಿತು. ಆದರೂ ನನ್ನ ಮುಖದಲ್ಲಿ ಯಾವ ಭಾವವನ್ನೂ ವ್ಯಕ್ತಪಡಿಸದೆ ಸಾಮಾನ್ಯವಾಗಿ ನಟಿಸಿದೆ. ನಾನು ತರಗತಿಯಲ್ಲಿ ಪ್ರಥಮ ವರ್ಷದಿಂದಲೂ ಯಾರೊಂದಿಗೂ ಹೆಚ್ಚು ಮಾತಾಡುವವನಲ್ಲ. ಕೆಲವು ಸೀಮಿತ ಸಹಪಾಠಿಗಳೊಂದಿಗೆ ಮಾತ್ರ ನನ್ನ ಮಾತುಕತೆ ನಡೆಯುತ್ತಿತ್ತು. ಪ್ರಥಮ ವರ್ಷದ ಸಹಪಾಠಿಗಳ ಪರಿಚಯವೂ ಅಪರೂಪವೇ. ನಮ್ಮ ತರಗತಿಯಲ್ಲಿ ನನ್ನನ್ನು ಸೇರಿಸಿ ಒಟ್ಟು ೨೦ ವಿದ್ಯಾರ್ಥಿಗಳಿದ್ದರೂ, ನಾನು ಅವರೆಲ್ಲರೊಂದಿಗೂ ಕಡಿಮೆ ಪ್ರಮಾಣದಲ್ಲೇ ಮಾತಾಡುತ್ತಿದ್ದೆ. ಆಪ್ತರು ಬಹಳ ಕಡಿಮೆ. ಒಟ್ಟು ೩೯ ಚೀಟಿಗಳಲ್ಲಿ ನನಗೆ ಬಂದ ಚೀಟಿಯ ವ್ಯಕ್ತಿ ನನ್ನ ಬಹು ಆಪ್ತರಾಗಿರುವುದು ನನಗೆ ಆಶ್ಚರ್ಯವಾಯಿತು.
ಅವರು ಪ್ರಥಮ ವರ್ಷದಿಂದಲೂ ನನ್ನೊಂದಿಗೆ ಮುಕ್ತವಾಗಿ ಮಾತಾಡುತ್ತಿದ್ದರು. ನಮ್ಮ ಪರಿಚಯ ಮೊದಲು ಯಕ್ಷಗಾನದಿಂದ ಆಯಿತು. ಅಂದಿನಿಂದ ಇಬ್ಬರೂ ಆಪ್ತ ಸ್ನೇಹಿತರಾದೆವು. ಪ್ರಥಮ ವರ್ಷದ ಕೊನೆಯ ಹಂತದಲ್ಲಿ ಬಿತ್ತಿ ಗೋಡೆ ಬರಹಕ್ಕೆ ಸಂಪಾದಕ ಮತ್ತು ಉಪಸಂಪಾದಕರ ಆಯ್ಕೆಯ ವೇಳೆ ಚೀಟಿ ಎತ್ತಲಾಯಿತು. ಸಂಪಾದಕರಾಗಿ ಅವರು. ಉಪಸಂಪಾದಕರಾಗಿ ನನ್ನ ಹೆಸರು ಚೀಟಿಯಲ್ಲಿ ಬಂದಿತ್ತು. ಅಂದು ಬೆನ್ನು ಹತ್ತಿದ ಬೇತಾಳ, ಇಂದು ಸಹ ನನ್ನ ಬೆನ್ನು ಬಿಡದಂತೆ, ನಾನು ತೆಗೆದ ಚೀಟಿಯಲ್ಲಿ ಅವಳ ಹೆಸರೇ ಬಂದಿತ್ತು. ಈ ಬೆನ್ನು ಹತ್ತಿದ ಬೇತಾಳ ಬರಿಗೈಯಲ್ಲಿ ಹೋಗುವುದಿಲ್ಲ ಎಂಬುದು ನನಗೆ ತಿಳಿಯಿತು. ಆದ್ದರಿಂದ ಆ ಕೈಗೆ ಏನಾದರೂ ಕೊಡಬೇಕು ಎಂದು ನಿರ್ಧರಿಸಿದೆ.
ಆ ಸಮಯದಲ್ಲಿ ಮಂಗಳೂರಿನಲ್ಲಿ ನಮ್ಮ ವಿಭಾಗದ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆವು. ಕಾರ್ಯಕ್ರಮ ಮುಗಿದ ನಂತರ ಪಥ್ವಿ ಉಡುಗೊರೆ ತರುವುದಕ್ಕೆ ಹೋಗೋಣ ಎಂದು ನನ್ನನ್ನು ಕರೆದುಕೊಂಡು ಹೋದಳು. ನಾವು ಇಬ್ಬರೂ ಅಂಗಡಿಗಳಲ್ಲಿ ತಿರುಗಿ ಉಡುಗೊರೆ ಹುಡುಕುತ್ತಿದ್ದೆವು. ಅವಳು ಅಲ್ಲಿ ಇಲ್ಲಿ ನೋಡುತ್ತಾ ಒಂದು ಉಡುಗೊರೆಯನ್ನು ಆಯ್ಕೆ ಮಾಡಿದರು. ನನಗೆ ಏನು ತೆಗೆದುಕೊಳ್ಳಬೇಕು ಎಂಬುದು ಅಷ್ಟೊಂದು ತಿಳಿಯುತ್ತಿರಲಿಲ್ಲ. ಅವಳಿಗೆ ಏನು ಬೇಕು ಎಂದು ನೇರವಾಗಿ ಕೇಳಲು ಸಾಧ್ಯವಿರಲಿಲ್ಲ, ಏಕೆಂದರೆ ಇದು ಗುಪ್ತ ಉಡುಗೊರೆ ಆಟವಾಗಿತ್ತು. ಹುಡುಗಿಯರಿಗೆ ಏನು ಕೊಡಬಹುದು ಎಂದು ನಾನು ಪ್ರಥ್ವಿಯನ್ನೇ ಕೇಳಿದೆ. "ನಿಮಗೆ ಏನು ಕೊಡಬೇಕು ಅನಿಸುತ್ತದೋ ಅದನ್ನೇ ತೆಗೆದುಕೊಳ್ಳಿ" ಎಂದಳು. ಆದರೂ ನಾನು ಅವಳ ಬೆನ್ನು ಬಿಡದೆ "ನಿನಗೆ ಏನು ಇಷ್ಟ ಆಗುತ್ತದೆಯೋ ಅದನ್ನೇ ಕೊಡಿಸು. ನಿನಗೆ ಇಷ್ಟವಾಗಿದೆ ಅವಳಿಗೆ ಕೊಡುವೆನು" ಎಂದು ಕಾಡಿದೆ.
ಅವಳು ಬಳೆಯನ್ನು ಸೂಚಿಸಿದಳು. ನಾನು ಒಪ್ಪಿಕೊಂಡು ಮೂರು ನಾಲ್ಕು ಅಂಗಡಿಗಳಲ್ಲಿ ಹುಡುಕಿದೆವು. ಅಂಗಡಿಯವನು ಬಳೆಯ ಅಳತೆ ಕೇಳಿದಾಗ ನಾನು ಪ್ರಥ್ವಿಯ ಕೈ ತೋರಿಸಿ "ಇದೇ ಅಳತೆಯಲ್ಲಿ ಕೊಡಿ" ಎಂದೆ. ಅವನು ಕೆಲವು ಆಯ್ಕೆಗಳನ್ನು ಇಟ್ಟನು. ಪ್ರಥ್ವಿಯು ತನಗೆ ಇಷ್ಟವಾದ ಬಳೆಯನ್ನು ಆಯ್ಕೆ ಮಾಡಿದಳು. ಅದನ್ನು ತೆಗೆದುಕೊಂಡು ಬಂದೆವು. ಆಟದ ನಿಯಮದಂತೆ, ಉಡುಗೊರೆ ಯಾರಿಗೆ ಕೊಡಬೇಕೋ ಅವರಿಗೆ ತಿಳಿಯದಂತೆ. ಹಾಗೆಯೇ ನನಗೆ ಬಂದ ಹೆಸರೂ ಹೊರಗೆ ಬಾರದಂತೆ ನಾನು ಉಡುಗೊರೆಯನ್ನು ತಂದುಕೊಂಡೆ.
ಈ ಆಟ ಯಾರ್ಯಾರಿಗೆ ಎಷ್ಟೆಷ್ಟು ಖುಷಿ ನೀಡಿದೆಯೋ ನನಗೆ ತಿಳಿಯದು. ಆದರೆ ನನಗೆ ಮಾತ್ರ, ನಾನು ಆಡಿದ ಆಟದೊಳಗಿನ ಆಟ ಅಪಾರ ಖುಷಿ ನೀಡಿತು. ಕೊಟ್ಟಿರುವ ಗುಪ್ತ ಆಟದೊಳಗೆ ನಾನು ಇನ್ನೊಂದು ಗುಪ್ತ ಆಟವಾಡಿದ್ದೆ. ಅಂದರೆ ನಾನು ಯಾರಿಗೆ ಉಡುಗೊರೆ ಕೊಡಬೇಕಿತ್ತೋ ಅವರಿಂದಲೇ ಆ ಉಡುಗೊರೆಯ ಆಯ್ಕೆ ಮಾಡಿಸಿಕೊಂಡಿದ್ದೆ. ಕೊನೆಯವರೆಗೂ ಪಾಪ ಅವಳಿಗೆ ಗೊತ್ತಾಗಲೇ ಇಲ್ಲ. ಈ ಬಳೆ ಮುಂದೆ ಅವಳ ಕೈ ಸೇರುವುದು ಎಂದು. ಮೊದಲೇ ಇದು ಗುಪ್ತವಾದ (ಸೀಕ್ರೆಟ್) ಆಟ, ಆದರೊಳಗೆ ಅವಳಿಗೆ ಕೊಡಬೇಕಾದ ಉಡುಗೊರೆಯನ್ನು ಅವಳಿಗೇ ತಿಳಿಯದಂತೆ ಅವಳಿಂದಲೇ ಆಯ್ಕೆ ಮಾಡಿಸಿ. ಕೊನೆಯಲ್ಲಿ ಅವಳಿಗೇ ನೀಡುವುದು – ಏನೋ ಒಂದು ತರದ ಖುಷಿ ಅಲ್ವಾ!
ಏನೇ ಇರಲಿ, ಈ ಆಟದಲ್ಲಿ ನಾನು ಆಟಗಾರನಾಗಿದ್ದು, ಅವಳನ್ನು ವಿಭಿನ್ನ ರೀತಿಯಲ್ಲಿ ಆಡಿಸಿದ್ದು, ಇಷ್ಟು ಅಲ್ಲದೇ ನಮ್ಮ ವಿಭಾಗದ ಸ್ನೇಹಿತರಿಗೆ ಅವರ ಹೆಸರನ್ನು ಸೂಚಿಸಲು ಬಿತ್ತಿ ಗೋಡೆಯ ಮೂಲಕ ಒಂದು ಚಿಕ್ಕ ಸ್ಪರ್ಧೆ ಆಯೋಜಿಸಿದ್ದೆ. ನನ್ನೆಲ್ಲಾ ಸ್ನೇಹಿತರು ಬಹಳ ಕಷ್ಟ ಪಟ್ಟು ಹುಡುಕಿದ್ದಾರೆ. ಒಟ್ಟು ೧೮ ಜನರು ೧೨ ಹೆಸರನ್ನು ಊಹಿಸಿದ್ದಾರೆ. ಅದರಲ್ಲಿ ಒಬ್ಬರು ಮಾತ್ರ ಸರಿಯಾದ ಉತ್ತರ ನೀಡಿದ್ದಾರೆ. ಸರಿಯಾದ ಹೆಸರನ್ನು ಸೂಚಿಸಿದವರಿಗೆ ಉಡುಗೊರೆ ನೀಡುವ ಅವಕಾಶ ನೀಡಿದ್ದೆ. ಅವರಿಗೂ ಸಹಾ ಉಡುಗೊರೆ ತಂದು ನೀಡುವೆನು ಇದು ನನಗೆ ಎಂದೂ ಮರೆಯದ ಸ್ಮೃತಿಯಾಗಿರುತ್ತದೆ.
ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ