ದಲಿತರೇಕೆ ಇನ್ನೂ ದಾರಿದ್ರರು?
ಹೌದು, ನಾಡಿಗೆ ಸ್ವಾತಂತ್ರ ಬಂದು ಸುಮಾರು ೭೯ ವರ್ಷಗಳು ಕಳೆದರೂ ಕಡು ಬಡತನ, ನಿರುದ್ಯೋಗ, ಅಸಮಾನತೆ, ನೋವು ಮತ್ತು ಹಸಿವಿನಿಂದ ದಾರಿದ್ರದಲ್ಲಿ ಬದುಕುತ್ತಿರುವವರು ಬಹು ಸಂಖ್ಯಾತರಾದ ದಲಿತರೆ. ರಾಷ್ಟ್ರದಲ್ಲಿ ಯಾವುದೇ ಪಕ್ಷಗಳು ಆಡಳಿತಕ್ಕೆ ಬಂದರೂ ಯಾರು? ಏನು? ಎಷ್ಟು? ದಲಿತರಿಗೆ ನ್ಯಾಯ ಒದಗಿಸಿದ್ದಾರೆ?.
ಕಳೆದ ೭೯ ವರ್ಷಗಳಲ್ಲಿ ಸರ್ಕಾರಗಳು ಮನಸ್ಸು ಮಾಡಿದ್ದರೆ ದಲಿತರು ಇಷ್ಟೊತ್ತಿಗಾಗಲೆ ಸಮಾಜದ ಮುಖ್ಯ ನೆಲೆಗೆ ಬರುತ್ತಿದ್ದರು. ಆದರೆ ಸರ್ಕಾರಗಳು, ರಾಜಕೀಯ ಪಕ್ಷಗಳು ಏನು ಮಾಡುತ್ತಿವೆ?. ಪಂಪನಿಂದ ಹಿಡಿದು ಶರಣರು, ದಾಸರು, ಯತಿಗಳು, ಹೆಸರಾಂತ ಲೇಖಕರು, ಕವಿಗಳು, ದಾರ್ಶನಿಕರು ಎಲ್ಲಾರು ಹೇಳಿರುವುದು ಜಾತಿ ಮತಗಳು ತೊಲಗಿ ಮಾನವ ಧರ್ಮವೆ ಮೊದಲಾಗಬೇಕು ಎಂದು. ಆದರೆ ಅದೇ ಜ್ಞಾನಿಗಳ ಕುಲದವರೆಂದು ಹೇಳಿಕೊಳ್ಳುವವರೆ ತಾರತಮ್ಯಕ್ಕೆ ಮುಖ್ಯ ಬಾಗಿಲಾಗಿದ್ದಾರೆ. ಇನ್ನು ರಾಜಕೀಯ ಪಕ್ಷಗಳಂತೂ ಜಾತಿ ಮತಗಳ ಹೆಸರಿನಲ್ಲಿ ಉತ್ತಮ ಬೆಳೆಯನ್ನೆ ಬೆಳೆಯುತ್ತಿವೆ. ಸರ್ಕಾರದ ಯೋಜನೆಗಳಿಂದ, ಮೀಸಲಾತಿಯಿಂದ ಎಷ್ಟು ದಲಿತರ ಮನೆಯಲ್ಲಿ ಒಲೆ ಉರಿಯುತಿದೆಯೊ ನಾ ಕಾಣೆ. ಆದರೆ ರಾಜಕೀಯ ಪಕ್ಷಗಳಂತೂ ಅವುಗಳಿಂದ ಕುಕ್ಕರಿಗಿಂತಲೂ ವೇಗವಾಗಿ ತಮ್ಮ ಬೇಳೆ ಬೆಮ್ಮಿಸಿಕೊಳ್ಳುತ್ತಿರುವುದರಲ್ಲಿ ಎರಡು ಮಾತಿಲ್ಲ.
ಶಿಕ್ಷಣವನ್ನು ಪಡೆದು ಎಲ್ಲವನ್ನೂ ಓದಿ ತಿಳಿದವರೆ ಜಾತಿ ತಾರತಮ್ಯ ವರ್ಗ ತಾರತಮ್ಯವನ್ನು ಮಾಡುವರು. ರಾಷ್ಟ್ರದಲ್ಲಿ ಮನುಷ್ಯನು ಸಮಾಜವನ್ನೆ ತೊರೆದು ಬದುಕಬಹುದೇನೊ ಆದರೆ ಜಾತಿಯನ್ನು ತೊರೆದು ಬದುಕಲು ಸಾಧ್ಯವೆ ಇಲ್ಲದಂತೆ ಹುಟ್ಟಿನಿಂದ ಮಸಣಕ್ಕೆ ಹೋಗುವವರೆಗೂ ಪ್ರತಿಯೊಂದರಲ್ಲೂ ಜಾತಿ ಬೇಕು ಎನ್ನುವ ಮಟ್ಟಿಗೆ ಸಮಾಜ ಮಾಡಿದೆ. ಒಂದು ವೇಳೆ ಸಮಾಜ ಅದನ್ನು ಮರೆಯದರೂ ಸರ್ಕಾರಗಳು, ರಾಜಕೀಯ ಪಕ್ಷಗಳು ತಕ್ಷಣವೆ ನೆನಪಿಸುವ ಕಾರ್ಯ ಮಾಡುತ್ತವೆ. ಜಾತಿಯತೆಯನ್ನು ಹೊಗಲಾಡಿಸುವ ಗೋಜಿಗೆ ಸರ್ಕಾರಗಳು ಹೋಗಿಲ್ಲ ಮತ್ತು ಅದು ಅವರಿಗೆ ಬೇಕಾಗಿಯೂ ಇಲ್ಲ. ವಿಪರ್ಯಾಸವೆಂದರೆ ಅವರೆ ಅದನ್ನು ಇನ್ನು ನೀರು ಗೊಬ್ಬರಹಾಕಿ ಗಟ್ಟಿ ಗೊಳಿಸುತ್ತಿದ್ದಾರೆ.
ಸ್ವಾತಂತ್ರ ನಂತರವೂ ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ರಾಜಕೀಯವಾಗಿ ದಲಿತರೆ ಇನ್ನೂ ದಾರಿದ್ರರಾಗಿದ್ದಾರೆ. ತಾವು ಜಾತ್ಯಾತೀತರೆಂದು ಹೇಳಿಕೊಳ್ಳುವವರೇ ಪ್ರತಿಯೊಂದರಲ್ಲೂ ಜಾತಿ ಕೇಳುವರು, ಜಾತಿ ಜಾತಿಗಳ ನಡುವೆ ಒಳಕಿಚ್ಚು ಹಚ್ಚುವರು. ತಾನೂ ದಲಿತನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ರಾಜಕೀಯಕ್ಕೆ ಹೊದರೆ ಅವನಾದರೂ ಇತರೆ ದಲಿತರಿಗೆ ಬೆಳೆಸುವನೆ? ಸನ್ಯಾಸಿ ಸಹವಾಸದಿಂದ ಸಂಸಾರಿ ಕೆಟ್ಟ ಎನ್ನುವ ಜನಪದರ ನುಡಿಯಂತೆ, ಅವನೂ ಇತರರಂತೆ ಪರಿವಾರ ರಾಜಕಾರಣವನ್ನೆ ಬೆಳೆಸುವನು. ಸರ್ಕಾರದ ತಪ್ಪುಗಳನ್ನು ಜನ ಸಾಮಾನ್ಯರು ಎತ್ತಿ ಹೇಳಿ, ಕೇಳಿದರೆ ಅದು ಅಪರಾಧವಂತೆ ಆದರೆ ರಾಜಕೀಯ ಪಕ್ಷಗಳನ್ನು ಕೇಳಿ ಟೀಕಿಸಬಹುದಂತೆ, ರಾಜಕೀಯ ಪಕ್ಷಗಳಲ್ಲಿ ಇಲ್ಲದವರು ಬಂದು ಸರ್ಕಾರಗಳನ್ನು ನಡೆಸುವರೆ? ಈ ರಾಷ್ಟ್ರದಲ್ಲಿ ದಲಿತರು ಮುಖ್ಯ ವಾಹಿನಿಗೆ ಬರಲು ಇನ್ನು ಎಷ್ಟು ಕಾಲಗಳು ಕಳೆಯಬೇಕೊ ತಿಳಿಯದು. ಆ ಕಾಲವಾದರೂ ಬರಬಲ್ಲದೆ ಎನ್ನುವುದೆ ಯಕ್ಷ ಪ್ರಶ್ನೆಯಾಗಿದೆ?.
ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ