ಸೋಮವಾರ, ಏಪ್ರಿಲ್ 6, 2026

ಸಂಚಿಕೆ - ೧೫

ಅವಳಿಲ್ಲದ ರಾತ್ರಿ

ಸಮಯ ರಾತ್ರಿ ಹನ್ನೊಂದು 

ಕವಿತೆ ಸಿದ್ಧವಾಗಿತ್ತು 

ನಿನ್ನ ಬರುವಿಕೆಗಾಗಿ ಕಾದು ಕೂತವನಿಗೆ 

ನಿನ್ನ ಮೇಲೆ ನಿರೀಕ್ಷೆಯಿತ್ತು 

ಇವಳೀಗ ಬಂದು 

ಕವಿತೆ ಓದುವಳು, ಖುಷಿಯಾಗುವಳು.


ಸಮಯ ಹನ್ನೊಂದು ಹದಿನೈದು 

ಅವಳು ಬರುವ ಸೂಚನೆ ಕಾಣಿಸಲಿಲ್ಲ 

ಕಾದು ಕೂತು ಸುಸ್ತಾಗಲಿಲ್ಲ 

'ಅವಳು ನನ್ನ ನಿರೀಕ್ಷೆಯ ಹುಸಿಯಾಗಿಸಲ್ಲ' 

ನಿರೀಕ್ಷೆಯಿತ್ತು... 

ಆದರೆ ಅವಳು ಬರಲಿಲ್ಲ 

ಬಂದರೂ ಓದಲು ಅವಳು ತಯಾರಿರಲಿಲ್ಲ.


ನಿನ್ನೆ ಎಲ್ಲವೂ ಚೆನ್ನಾಗಿಯೇ ಇತ್ತು 

ರಾತ್ರಿವರೆಗೂ ಹಾಗೆಯೇ ಇತ್ತು 

ಕೊನೆಗೆ ಮಾತ್ರ 

ಸರಿಯಾಗಿ ಹೇಳದೇ ಹೋದದ್ದು 

ತುಸು ಬೇಸರ ತಂದಿತ್ತು


ನನ್ನನ್ನೇ ಸಮಾಧಾನಿಸಿಕೊಂಡೆ 

"ಅವಳಿಗೆ ಹುಷಾರು ತಪ್ಪಿರಬಹುದು, 

ಬಳಿ ತಂದೆಯಿರಬಹುದು, 

ಇಲ್ಲಾಂದ್ರೆ ಇನ್ನೊಂದು ಕಾರಣವಿರಬಹುದು"


ಸಮಯ ಎಷ್ಟಾಯಿತು ಗೊತ್ತಿಲ್ಲ 

ನಾನರಿಯದೇ ನಿದ್ದೆಗೆ ಜಾರಿದೆ 

ಅವಳದೇ ನೆನಪಿತ್ತು 

ರಾತ್ರಿ ಮಧ್ಯೆ ಮಧ್ಯೆ ಕನಸೂ ಬಿದ್ದಿತ್ತು.


ಸಮಯ ಮುಂಜಾನೆ ಐದು ಮೂವತ್ತು 

ಮತ್ತೆ ನಿನ್ನ ನೆನಪಾಯಿತು 

ಜ್ವರ ಕಡಿಮೆ ಆಗಿರಬಹುದೇ 

ಎದ್ದಿರಬಹುದೇ 

ನನ್ನ ಮೇಲೆ ಹಳೇ ಕೋಪ ಹೆಚ್ಚಿರಬಹುದೇ?


ಸಲೀಂ ಸುಳ್ಯ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...