ಚಾಲಕರೇ ನಿಧಾನವಾಗಿ ಚಲಿಸಿ...!
ಇಂದು ಬೆಳಗ್ಗೆ ಸುಳ್ಯದಿಂದ ಕೊಣಾಜೆ ಯುನಿವರ್ಸಿಟಿ ಪ್ರಯಾಣಿಸುವ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಕೆಲವು ನಾಯಿಗಳು ಸತ್ತು ಬಿದ್ದಿರುವುದನ್ನು ಕಂಡೆ. ಎಪ್ಪತ್ತು ಕಿಲೋಮೀಟರ್ ಕ್ರಮಿಸುವ ಹೊತ್ತಿಗೆ ಮೂರು ನಾಯಿ, ಬೆಕ್ಕು, ಕಾಗೆ, ಹಾವು ಇಷ್ಟೆಲ್ಲಾ ರಸ್ತೆ ಮಧ್ಯೆ ಸತ್ತು ಬಿದ್ದಿದ್ದವು. ನಾಯಿಯ ತಲೆಯಭಾಗ ಒಡೆದು, ಮೆದುಳು ಹೊರಚೆಲ್ಲಿದ್ದು, ತಿನ್ನಲು ಪಕ್ಕದಲ್ಲೇ ಕಾಗೆಗಳ ಗುಂಪು ಹಾರಾಡುತ್ತಿದ್ದವು. ವಾಹನಗಳ ವೇಗಕ್ಕೆ ಸತ್ತ ಹಾವಿನ ಚರ್ಮ ಹಾಗೆಯೇ ರಸ್ತೆಗೆ ಅಚ್ಚಾಗಿತ್ತು.
ಪುತ್ತೂರು ಬೈಪಾಸ್ ಬಳಿ ಗಾಡಿಗಳೆಲ್ಲ ನಿಧಾನವಾಗಿ ಚಲಿಸುತ್ತಿದ್ದವು. ಬದಿಯಲ್ಲಿ ನೋಡಿದರೆ ನಾಯಿಯೊಂದು ಮಲಗಿದಂತಿದ್ದು, ಹತ್ತಿರ ಹತ್ತಿರ ಸಾಗುತ್ತಿದ್ದಂತೆ ಪಾಪ ನಾಯಿ ಮಲಗಿದ್ದಲ್ಲೇ ಆಸುನೀಗಿತ್ತು. ಅದರ ತಲೆ ಅಲ್ಲೇ ಅಪ್ಪಚ್ಚಿಯಾಗಿ ರಸ್ತೆಗೆ ಅಂಟಿಕೊಂಡಿತ್ತು. ರಾತ್ರಿ ವೇಳೆಗೆ ಗಾಡಿಗಳ ಓಡಾಟದ ಸಂಖ್ಯೆ ಕಡಿಮೆ ಇದ್ದದ್ದು ಕಂಡು ಮಲಗಿದ ನಾಯಿಯು ಬೆಳಗ್ಗೆ ಏಳುವ ಮೊದಲೇ ಪ್ರಾಣ ಹಾರಿರಬೇಕು. ಸುತ್ತೆಲ್ಲ ನಾಯಿಗಳು ಅಸಹಾಯಕದಿಂದ ಕುಳಿತಿದ್ದವು.
ಇದು ಕೇವಲ ಎಪ್ಪತ್ತು ಕಿಲೋಮೀಟರ್ ಕ್ರಮಿಸುವ ಹೊತ್ತಿಗೆ ನಾನು ಕಂಡ ದೃಶ್ಯ. ಈ ಸಾವಿಗೆ ಕಾರಣವೇನೆಂದು ಹುಡುಕಿ ಹೋಗಬೇಕಾದ ಅಗತ್ಯ ಇಲ್ಲ. ಮೊದಲನೇಯದು ಚಾಲಕರ ಅತಿವೇಗವೇ ಆಗಿರಬೇಕು. ಬೆಳ್ಳಂಬೆಳಗ್ಗೆ ಅಷ್ಟೇನೂ ಗಾಡಿಗಳಿಲ್ಲದ ಕಾರಣ ದೂರದೂರಿಗೆ ಸಾಗುವ ಲಾರಿ, ಬಸ್ಸು, ಟ್ರಕ್ಕು ಎಲ್ಲವೂ ರಸ್ತೆಯಲ್ಲಿ ಅತಿವೇಗದಿಂದ ಓಡಿಸಿ, ಇವೆಲ್ಲ ಗಾಡಿಯ ಚಕ್ರಕ್ಕೆ ಬಿದ್ದಿರಬೇಕು. ಈ ಎಲ್ಲಾ ಮೂಕ ಪ್ರಾಣಿಗಳ ಸಾವಿಗೆ ಅವುಗಳನ್ನು ಬೈಯುವುದು ಸರಿಯಲ್ಲ. ಅವುಗಳು ಮೂಕ ಪ್ರಾಣಿಗಳು. ರಸ್ತೆಯ ನಿಯಮಗಳನ್ನು ಕಲಿತು ಓಡಾಡುವ ಜೀವಿಗಳಲ್ಲ. ತನ್ನ ಹಸಿವನ್ನು ನೀಗಿಸಲು ಅಲ್ಲಲ್ಲಿ ಬಿದ್ದುಕೊಂಡು, ಸಿಕ್ಕಿದ್ದು ಹೊಟ್ಟೆಗಿಳಿಸಿಕೊಂಡು ಬದುಕುವ ಜೀವಿಗಳು.
ಕೊಳೆತು ದುರ್ವಾಸನೆ ಬಂದರೂ ಅದನ್ನು ಬದಿಗೆ ಸರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡುವ ಗೋಜಿಗೆ ಯಾರೂ ಹೋಗುವವರಲ್ಲ. ಗಾಡಿ ಬದಿಗಿಟ್ಟು ಶುಚಿ ಮಾಡುವ ಅಂತ ಅಂದುಕೊಂಡರೆ, ಎಲ್ಲಿ ಹಿಂದಿನಿಂದ ಗಾಡಿ ಬಂದು ನಮ್ಮ ಜೀವ ತೆಗೆದಾರೋ ಅಂತ ಭಯ. ಎಲ್ಲರೂ ಅವುಗಳನ್ನು ನೋಡಿ, ಮೂಗು ಮುಚ್ಚಿಕೊಂಡು ನೋಡುತ್ತಾ ಮುಂದೆ ಸಾಗುತ್ತಾರಷ್ಟೆ.
ಪ್ರೀತಿಯ ಚಾಲಕರೇ... ನನ್ನನ್ನೂ ಸೇರಿದಂತೆ ನಾವೆಲ್ಲರೂ ವಾಹನ ಚಲಾಯಿಸುವಾಗ ನಮ್ಮದೇ ಆದ ವೇಗದ ಮಿತಿಯೊಂದನ್ನು ಇಟ್ಟುಕೊಳ್ಳೋಣ. ರಸ್ತೆಬದಿಯಲ್ಲಿ ಪ್ರಾಣಿಗಳು ನಿಂತಿದ್ದು ಕಂಡರೆ ಅವುಗಳಿಗೆ ರಸ್ತೆ ದಾಟಲು ಸಮಯ ಕೊಡೋಣ. ದನಕರುಗಳನ್ನು ರಸ್ತೆಬದಿಯಲ್ಲಿ ಹುಲ್ಲು ಮೇಯಲು ಕಟ್ಟಿಹಾಕುವ ಬದಲು ರಸ್ತೆ ಬಿಟ್ಟು ಸ್ವಲ್ಪ ದೂರದಲ್ಲಿ ಕಟ್ಟುವಂತೆ ಪ್ರಯತ್ನಿಸೋಣ. ತ್ಯಾಜ್ಯಗಳನ್ನು ರಸ್ತೆ ಬದಿ ಎಸೆಯದೆ, ಕಸದ ತೊಟ್ಟಿಗೆ ಹಾಕಿ ಸುಖ ಪ್ರಯಾಣಕ್ಕಾಗಿ ದಾರಿಯನ್ನು ಬಿಟ್ಟು ಕೊಡೋಣ. ನಮ್ಮನ್ನು ಪಾಲನೆ ಮಾಡುವ ಪರಿಸರಕ್ಕೆ ನಾವೇ ದಬ್ಬಾಳಿಕೆ ಮಾಡಿದರೆ ಪೋಷಿಸುವವರು ಯಾರು..!? ಪ್ರಯಾಣಿಕರಿಗೆ, ದಾರಿಹೋಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಚಾಲಕರಾಗಿರುವ ನಮ್ಮ ಜವಾಬ್ದಾರಿ. ಶ್ರಮಿಸೋಣ....
ಸಲೀಂ ಸುಳ್ಯ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ