ಸೋಮವಾರ, ಏಪ್ರಿಲ್ 27, 2026

ಸಂಚಿಕೆ - ೧೮

ಸಾವಿತ್ರಮ್ಮನವರ ವಿಮುಕ್ತಿ ಕಾದಂಬರಿ-ನನ್ನ ಪ್ರಕಾರ

      ಸಾವಿತ್ರಮ್ಮನವರ 'ವಿಮುಕ್ತಿ' ಕಾದಂಬರಿಯು 'ಉತ್ತರಕಾಂಡ'ದಿಂದ ಪ್ರೇರಿತವಾಗಿರುವ ಕೃತಿಯಾಗಿದೆ. ಈ ಕಾದಂಬರಿಯು ೧೦೩ ಪುಟಗಳನ್ನು ಹೊಂದಿದ್ದು ಓದಲು ಸ್ವಲ್ಪ ಕಷ್ಟವಾಯಿತು. 'ಧಣಿಯರ ಸತ್ಯನಾರಾಯಣ' ಕಥೆಯಂತೆ ೪-೫ ಪುಟಗಳಿದ್ದರೇ ಸುಲಭವಾಗಿ ಓದಬಹುದಿತ್ತು. ಆದರೂ ಕೊನೆಗೂ ಈ ಕಾದಂಬರಿಯನ್ನು ಓದಿ ಮುಗಿಸಿದೆ.

      ಮುನ್ನುಡಿಯಲ್ಲಿ ಎ.ಎನ್ ಮೂರ್ತಿರಾವ್‌ರು "ರಾಮನು ದೇವರೆಂದು ನಂಬಿದವರಿಗೆ ಈ ಕಾದಂಬರಿ ಇಷ್ಟವಾಗದು" ಎಂದು ಹೇಳಿದ್ದಾರೆ. ನನಗೂ ಈ ಕೃತಿಯ ೨೦-೩೦ ಪುಟಗಳನ್ನು ಓದಿದಾಗ ಈ ಕಾದಂಬರಿಯು ಹಿಡಿಸಲಿಲ್ಲ, ಬದಲಿಗೆ ಸಾವಿತ್ರಮ್ಮನವರ ಕುರಿತು ಒಂದು ವಿಭಿನ್ನ ಆಲೋಚನೆಯನ್ನು ವಾಸ್ತವಕ್ಕೆ ಅನ್ವಯಿಸಿ ನೋಡಿದೆ. ಅದೇನೆಂದರೆ ಇವರು ಯಾವ ಪಂಥದವರು ಇರಬಹುದು? ಎಡಪಂಥವೋ? ಅಥವಾ ಬಲಪಂಥವೋ? ಎಂಬ ಪ್ರಶ್ನೆ ನನ್ನನ್ನು ಕಾಡಿತು, ವಾಲ್ಮೀಕಿಯ ರಾಮಾಯಣದಲ್ಲಿ ರಾಮನು 'ಮರ್ಯಾದಾ ಪುರುಷೋತ್ತಮ'ನಾಗಿ ಮೆರೆದರೆ, ಸಾವಿತ್ರಮ್ಮನವರ ರಾಮ 'ಅನುಮಾನದ ವ್ಯಕ್ತಿತ್ವ'ವಾಗಿ ನಮ್ಮ ಮುಂದೆ ಕಾಣಿಸುತ್ತಾನೆ. ಅದು ಏನೇ ಇದ್ದರೂ ಕಾದಂಬರಿಯು ನಮ್ಮನ್ನೂ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ.

      ಕಾದಂಬರಿಯು, ರಾವಣನ ಸಂಹಾರವಾಗಿ ಸೀತೆಯೊಡನೆ ವಾಪಾಸು ಅಯೋಧ್ಯೆಗೆ ಪುಷ್ಪಕವಿಮಾನದಲ್ಲಿ ಬರುವುದರಿಂದ ಪ್ರಾರಂಭವಾಗುತ್ತದೆ. ಮುಖ್ಯವಾಗಿ ಇಲ್ಲಿ ಎರಡು ವಿಚಾರಗಳು ಮುನ್ನೆಲೆಗೆ ಬರುತ್ತದೆ. ಒಂದು ರಾಮನು ಲಂಕಾಧಿಪತಿಯ ಸಂಹಾರದ ಪೂರ್ವಭಾಗದಲ್ಲಿ ಸುಗ್ರೀವನೊಡನೆ ಹಸ್ತಲಾಘವ ಹಾಗೂ ವಾಲಿಯನ್ನೂ ಕೊಂದ ರೀತಿ. ಇವತ್ತಿನವರೆಗೂ ನನ್ನ ಈ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ರಾಮ ಕದ್ದು ಮುಚ್ಚಿ ಕೊಲ್ಲುವ ಬದಲು ಮುಖಾಮುಖಿಯಾಗಿ ವಾಲಿಯ ಜೊತೆ ಯುದ್ಧ ಮಾಡಿದ್ದರೇ. ಸ್ವತಃ ವಾನರರೇ ರಾಮನನ್ನು ಕೊಂಡಾಡುತ್ತಿದ್ದರೇನೊ? ಆದರೆ ಕಣ್ಣಪ್ಪಿಸಿ ಹೊಡೆದ ಬಾಣ ವಾಲಿಯ ಎದೆಯನ್ನು ಸೀಳುತ್ತಿದ್ದಂತೆ ವಾನರರು ಬೆಚ್ಚಿಬಿದ್ದರು. ಆ ಭಯಕ್ಕೋ ಎನೋ ವಾನರರು ರಾಮನ ಜೊತೆ ಸೇರಿದರೋ?

      ಎರಡನೆಯದು ರಾಮನು ಕಾದಂಬರಿಯ ಉದ್ದಕ್ಕೂ ಸೀತೆಯನ್ನು ನೋಡುವ ಪರಿ. ರಾವಣನ ಅಂತ್ಯವಾಗುತ್ತಿದ್ದಂತೆ ರಾಮನ ಮನಸ್ಸಿನಲ್ಲಿ ಸೀತೆಯ ಪಾವಿತ್ರತೆಯ ಬಗ್ಗೆ ಅನುಮಾನ ಮುಡುತ್ತದೆ. ಅದು ಎಷ್ಟು ಅಂದರೆ ಸೀತೆಯನ್ನೇ ತ್ಯಜಿಸುವಷ್ಟು ಗಾಢವಾಗಿ ಮುಂದುವರೆಯುತ್ತದೆ. ಲಂಕಾದಲ್ಲಿಯೆ ಜನರು ಪರಮ ಸಾಧಿಯಾದ ಸೀತೆಯ ಬಗ್ಗೆ ಎತ್ತುವ ಪ್ರಶ್ನೆಗೆ ರಾಮನು ತಲೆಯಾಡಿಸಿ ಜನಕನಂದನಿಗೆ ಅಗ್ನಿಪ್ರವೇಶ ಮಾಡಿ ತನ್ನ ಪವಿತ್ರತೆ ಸಾಬೀತು ಪಡಿಸು ಎಂದಾಗ ಸ್ವತಃ ಸೀತೆಯೇ ತನ್ನ ಪತಿಯ ಬಗ್ಗೆ ಹೆದರಿಕೆ ಭಾವ ತೋರುತ್ತಾಳೆ. ಕೊನೆಗು ಅಗ್ನಿಪ್ರವೇಶ ಮಾಡಿ ತಾನು ಸಾಧ್ಯ ಎಂದು ಸಾಬೀತುಪಡಿಸಿ ಅಯೋಧ್ಯೆಗೆ ಬಂದರೂ, ರಾಮ ಹಾಗೂ ಸೀತೆಯ ನಡುವೆ ರಾವಣನೆಂಬ ಸಂಶಯದ ಭೂತ ಅಡ್ಡವಾಗಿ ನಿಂತಿರುತ್ತದೆ. ರಾಮನ ಈ ಗುಣದ ಬಗ್ಗೆ ಲಕ್ಷ್ಮಣನೇ ಕ್ರೋಧಗೊಳ್ಳುವ ಘಟನೆ ನಡೆಯುತ್ತದೆ. ಇಷ್ಟೆ ಅಲ್ಲದೆ ರಾಮನ ಸಂಶಯದ ಭೂತ ಹೆಚ್ಚುತ್ತಾ ಹೋದಂತೆ ತನ್ನ ಮಡದಿಯನ್ನೇ ಕಾಡಿಗೆ ಕಳಿಸಿ ಶಾಶ್ವತವಾಗಿ ತನ್ನಿಂದ ದೂರ ಇಡುತ್ತಾನೆ. ಊರ್ಮಿಳೆಯಿಂದ ಸೀತೆ ಗರ್ಭಿಣಿಯೆಂದು ತಿಳಿದು ಲಕ್ಷ್ಮಣ ರಾಮನಿಗೆ ಹೇಳಿದಾಗ ಅದು ತನ್ನ ವಂಶದ ಕುಡಿಯೋ ಅಲ್ಲವೋ ಎಂಬ ಮಾತು ಸಾವಿತ್ರಮ್ಮನ್ನವರ ರಾಮನ ಪರಾಕ್ರಮ ಮತ್ತು ಕೀರ್ತಿ ಸೀತೆಯ ಕಣ್ಣೀರಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದಂತೆ ಇಲ್ಲಿ ರಾಮ ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾನೆ. ಕೊನೆಗೆ ಅಣ್ಣನ ವ್ಯಕ್ತಿತ್ವಕ್ಕೆ ಬೇಸತ್ತು ಲಕ್ಷ್ಮಣ ಊರ್ಮಿಳೆಯೊಡನೆ ತೀರ್ಥಯಾತ್ರೆಗೆ ಹೋಗಿಯೇ ಬಿಡುತ್ತಾನೆ. ಆ ಕಡೆ ಸೀತೆ ಕಾಡಿನಲ್ಲಿ ವಾಲ್ಮೀಕಿ ಋಷಿಯ ಆಶ್ರಮವನ್ನು ಆಶ್ರಯಿಸಿ, ಲವ-ಕುಶರೆಂಬ ಗಂಡು ಮಕ್ಕಳನ್ನು ಪಡೆದು ಅವರಿಗೆ ಸಕಲ ಜ್ಞಾನವನ್ನು ಕೊಡಿಸುತ್ತಾಳೆ. ಹೀಗೆ ಅನೇಕ ವರ್ಷಗಳು ಕಳೆದರೂ ಸೀತೆಯ ಸುಳಿವೇ ಗೊತ್ತಾಗುವುದಿಲ್ಲಾ, ಬಳಿಕ ಸೀತೆ ವಾಲ್ಮೀಕಿಯ ಆಶ್ರಮದಲ್ಲಿ ಆಶ್ರಯಿಸಿದ್ದಾಳೆಂದು ತಿಳಿದು ರಾಮನಿಗೆ ವಿಚಾರ ಮುಟ್ಟಿಸುತ್ತಾರೆ.

      ಕಾದಂಬರಿಯು ಕೊನೆಯ ಹಂತಕ್ಕೆ ಬಂದಂತೆ ಮತ್ತೆ ರಾಮ ಸೀತೆ ಎಲ್ಲವನ್ನು ಮರೆತು ತಮ್ಮ ಮಕ್ಕಳೊಂದಿಗೆ ವಾಪಾಸು ಬರುವರೆಂಬ ಇರಾದೆ ನನ್ನಲ್ಲಿ ಇತ್ತು. ಆದರೆ ರಾಮ "ಆಕೆಯನ್ನು ಮಕ್ಕಳನ್ನೂ ಕರೆದುಕೊಂಡು ಹೋದರೇ ಆ ಮಕ್ಕಳು ತನ್ನವೇ ಎಂದು ಜನರಿಗೆ ಹೇಗೆ ತಿಳಿಯ ಹೇಳುವುದು" ಎಂದುಬಿಟ್ಟನು. ಮೊದಲೆ ರಾಮನ ಮೇಲಿನ ಪ್ರೀತಿ ಕಳಚಿ ಒಬ್ಬಂಟಿಯಾಗಿದ್ದ ಸೀತೆಗೆ ಈ ಮಾತು ಏನೂ ವ್ಯತ್ಯಾಸ ಮಾಡಲಿಲ್ಲ. ಕೊನೆಗೆ ಸೀತೆ ಎಲ್ಲವನ್ನೂ ಬಿಟ್ಟು ಪುನಃ ಆಶ್ರಮಕ್ಕೆ ಹೋಗುತ್ತಾಳೆ.

      ಸಾವಿತ್ರಮ್ಮನವರ ರಾಮನಲ್ಲಿ ಮನೆ ಮಾಡಿದ್ದ ಈ ಅನುಮಾನವೂ ಅವರ ಸುಂದರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿತು. ಇಬ್ಬರು ಕೂತು ಮಾತಾಡಿದ್ದರೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿತ್ತೋ ಏನೋ? ಕೆಲವರಿಗೆ ರಾಮ ಆದರ್ಶ ವ್ಯಕ್ತಿಯಾಗಿ ಕಂಡರೂ, ಸಾವಿತ್ರಮ್ಮನವರ ರಾಮ ನನ್ನ ಪ್ರಕಾರ ಯಾರಿಗೂ ಹಿಡಿಸದ ವ್ಯಕ್ತಿಯಾಗಿ ಕಾಣುತ್ತಾನೆ.

ಶ್ರೇಯಸ್ ಬನ್ನಡ್ಕ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...