ಸೋಮವಾರ, ಏಪ್ರಿಲ್ 13, 2026

ಸಂಚಿಕೆ - ೧೬

ಪುಸ್ತಕ ವಿಮರ್ಶೆ

ಪುಸ್ತಕದ ಹೆಸರು : ಸಂಸ್ಕಾರ (ಕಾದಂಬರಿ)

ಲೇಖಕರು : ಯು. ಆರ್. ಅನಂತಮೂರ್ತಿ

      ಯು. ಆ‌ರ್. ಅನಂತಮೂರ್ತಿ ಅವರ ಪ್ರಸಿದ್ಧ ನವ್ಯ ಕಾದಂಬರಿ ಸಂಸ್ಕಾರವು ಜಾತಿ, ಆಚಾರ-ವಿಚಾರ, ಸಾಂಪ್ರದಾಯಿಕ ಮೌಲ್ಯಗಳು ಮತ್ತು ಮಾನವೀಯ ಸಂಬಂಧಗಳ ನಡುವಿನ ಸಂಘರ್ಷವನ್ನು ವಸ್ತುನಿಷ್ಠವಾಗಿ ಚಿತ್ರಿಸುತ್ತದೆ. ಈ ಕಾದಂಬರಿಯು ಜಾತಿ ವ್ಯವಸ್ಥೆ ಮತ್ತು ಬ್ರಾಹ್ಮಣ್ಯದ ವಿಮರ್ಶೆಯ ಕುರಿತಾಗಿ ಮಲೆನಾಡಿನ ಆಗ್ರಹಾರದ ಹಿನ್ನೆಲೆಯಲ್ಲಿ ಬ್ರಾಹ್ಮಣ ಸಮುದಾಯದ ಸಂಕುಚಿತ ಮನೋಭಾವ, ನಾರಣಪ್ಪನಂತಹ ಬಂಡಾಯಗಾರನ ಸಾವಿನ ನಂತರ ಶವಸಂಸ್ಕಾರದ ವಿಷಯದಲ್ಲಿ ಬ್ರಾಹ್ಮಣರಲ್ಲಿ ಉಂಟಾಗುವ ಧರ್ಮಸಂಕಟ ಮತ್ತು ಕಪಟತನವನ್ನು ಅನಾವರಣಗೊಳಿಸುತ್ತದೆ. ಪರಂಪರೆ ಮತ್ತು ಆಧುನಿಕತೆಯ ಸಂಘರ್ಷದ ವಿಷಯವಾಗಿ ಸಾಂಪ್ರದಾಯಿಕ ಆಚಾರ-ವಿಚಾರಗಳನ್ನು ಅಂಧವಾಗಿ ಅನುಸರಿಸುವ ಪ್ರಾಣೇಶಾಚಾರ್ಯರು, ನಾರಣಪ್ಪನ ಸಾವು ಮತ್ತು ಚಂದ್ರಿಯೊಂದಿಗಿನ ಸಂಬಂಧದ ನಂತರ ವೈಚಾರಿಕತೆಯನ್ನು ಎದುರಿಸುವಂತದನ್ನು ನಾವು ಈ ಕಾದಂಬರಿಯಲ್ಲಿ ಕಾಣುತ್ತೇವೆ. ಇದು ಹಳೆಯ ಮೌಲ್ಯಗಳಿಗೂ ಹೊಸ ಆಲೋಚನೆಗಳಿಗೂ ನಡುವಿನ ಹೋರಾಟವಾಗಿದೆ.

      ಕಾದಂಬರಿಯು ಕೇವಲ ಶವಸಂಸ್ಕಾರದ ಬಗ್ಗೆ ಮಾತ್ರವಲ್ಲ, ಮನುಷ್ಯನ ಆಂತರಿಕ ಶುದ್ದೀಕರಣ ಅಥವಾ 'ಸಂಸ್ಕಾರ'ದ ಬಗ್ಗೆಯೂ ಮಾತನಾಡುತ್ತದೆ. ಪ್ರಾಣೇಶಾಚಾರ್ಯರು ತಮ್ಮ ಅಸ್ತಿತ್ವದ ಪ್ರಶ್ನೆಯನ್ನು ಎದುರಿಸಿ, ಮೌಲ್ಯಗಳನ್ನು ಮರುಪರಿಶೀಲಿಸುವ ಪ್ರಕ್ರಿಯೆ ಇದಾಗಿದೆ. ಕಾಮ ಮತ್ತು ಆಧ್ಯಾತ್ಮದ ಮುಖಾಮುಖಿಯನ್ನು ನಾವು ಇಲ್ಲಿ ಕಾಣುತ್ತೇವೆ. ಚಂದ್ರಿ ಮತ್ತು ಪ್ರಾಣೇಶಾಚಾರ್ಯರ ನಡುವಿನ ದೃಶ್ಯಗಳು, ನಾರಣಪ್ಪನ ಜೀವನಶೈಲಿ ಇವೆಲ್ಲವೂ ಕಾಮನೆ ಮತ್ತು ಅಧ್ಯಾತ್ಮಿಕ ಶಿಸ್ತಿನ ನಡುವಿನ ಸಂಘರ್ಷವನ್ನು ತೋರಿಸುತ್ತವೆ. ಜವಾಬ್ದಾರಿ ಮತ್ತು ಸ್ವಾತಂತ್ರ್ಯದ ನಡುವಿನ ವಿಚಾರಗಳನ್ನೂ ಈ ಕಾದಂಬರಿಯು ಕಣ್ಣಿಗೆ ಕಟ್ಟುವಂತೆ ತಿಳಿಯ ಪಡಿಸುತ್ತದೆ. ಸಮಾಜದ ನಿಯಮಗಳಿಗೆ ಕಟ್ಟುಬಿದ್ದಿದ್ದ ಪ್ರಾಣೇಶಾಚಾರ್ಯರು, ಅಂತಿಮವಾಗಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಧ್ವನಿಯನ್ನು ಆಲಿಸಿ, ಅಗ್ರಹಾರದಿಂದ ಹೊರಬರುತ್ತಾರೆ. ಒಟ್ಟಾರೆಯಾಗಿ, 'ಸಂಸ್ಕಾರ'ವು ಮನುಷ್ಯ ತನ್ನ ಅರಿವಿನ ಹಾದಿಯಲ್ಲಿ ಮೌಡ್ಯಗಳನ್ನು ತೊರೆದು ಹೇಗೆ ಮರುಜನ್ಮ ಪಡೆಯುತ್ತಾನೆ ಎಂಬುದನ್ನು ನಿರೂಪಿಸುವ ಕೃತಿಯಾಗಿದೆ.

ಆಶಿತಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...