ಅಜ್ಜನೇಳಿದ ತೀರ್ಪು
ನೆನಪಿದೆ ನನಗೆ ಹಲವು ವರ್ಷಗಳ ಹಿಂದೆ ನನ್ನಜ್ಜ ಹೇಳಿದ ಕತೆ. ಬಯಲು ಸೀಮೆಯ ಒಂದಳ್ಳಿ ಹಳ್ಳಿಯಲೊಂದು ಓಣಿ ಆ ಓಣಿಯಲ್ಲಿ ಅತ್ತಿತ್ತ ಹೊಂದಿರುವ ಅಂಕಣದ ಮನೆಗಳು ನಡುವೆ ಇಕ್ಕಟ್ಟಾದ ರಸ್ತೆ. ಎದುರು ಮನೆಯ ಬಂಕದ ಕಟ್ಟೆಯ ಮೇಲೆ ಮನೆ ಮಂದಿಯೊಂದಿಗೆ ಸಂಭ್ರಮದಿಂದ ನಗುತ್ತ ಯಾವುದೊ ಕಾರ್ಯಕ್ರಮದ ತಯಾರು ಮಾಡುತ್ತಿದ್ದಾನೆ ಶಿವಣ್ಣ .
ಅದೆ ಸಮಯಕ್ಕೆ ಪೊಸ್ಟ್ ಮ್ಯಾನ್ ಬಂದು ಯಾವುದೊ ಒಂದು ಕಾಗದ ಕೊಟ್ಟು ಹೊರಟನು ಎಲ್ಲಾರು ತುಸು ಸುಮ್ಮನಾಗಿ ನೋಡುತಿದ್ದಂತೆ. ಆ ಕಾಗದವನ್ನು ತೆಗೆದು ನೋಡಿ ಮುಖ ಬಾಡಿಸಿಕೊಂಡು ಯಾವುದೊ ನೆಪ ಹೇಳಿ ಮೆಲ್ಲನೆ ಅಲ್ಲಿಂದ ಜಾರಿ ಶಿವಣ್ಣ ಮನೆಗೆ ನಡೆದನು. ಸ್ವಲ್ಪ ಸಮಯದ ನಂತರ ಅವನ ಹೆಂಡತಿಯೂ ಅಲ್ಲಿಂದ ಮನೆಗೆ ಬಂದು. ಗಂಡನನ್ನು ಕೇಳುವಳು ಏನಾಯಿತು ನಿಮಗೆ, ಪತ್ರ ನೋಡಿದಾಗಿಂದ ಮಂಕಾಗಿರುವಿರಲ್ಲ ಅಂತಹುದೇನಿದೆ ಅದರಲ್ಲಿ, ಯಾವ ಪತ್ರವದು. ಯಾರು ಬರೆದದ್ದು ಹೇಳಿ ಎಂದು ಗಂಟಲು ಕಿತ್ತಿಕೊಂಡರೂ ಯಾವುದೆ ಉತ್ತರ ನೀಡದೆ ಸುಮ್ಮನೆ ಕುಳಿತಿದ್ದಾನೆ. ಮೆಲ್ಲನೆ ಅವಳು ಕೋಣೆಯಲ್ಲಿ ಹೋಗಿ ಅಲ್ಲಿದ್ದ ಪತ್ರವನ್ನು ಸೆರಗಲ್ಲಿ ಅಡಗಿಸಿ ಹೊರ ನಡೆದಳು. ಪತ್ರ ನೋಡಿದಾಗಿನಿಂದ ಶಿವಣ್ಣನಲ್ಲಿ ದ್ವೇಷ, ರೋಷ ಅಸೂಯೆ, ಅಸಹಾಯಕತೆ, ಎಲ್ಲವೂ ಕುಣಿಯುತ್ತಿದ್ದವು. ಅವನ ಹೆಂಡತಿ ಪಕ್ಕದ ಮನೆಯ ಹುಡುಗನ ಹತ್ತಿರ ಆ ಪತ್ರವನ್ನು ಓದಿಸಿ ಎಲ್ಲಾ ವಿಷಯ ತಿಳಿದು ಮರಳಿ ಮನೆಯತ್ತ ಭಾರವಾದ ಹೆಜ್ಜೆ ಹಾಕಿದಳು. ಅವಳಿಗೆ ಆ ಪತ್ರದ ಮೇಲೆ ಕೆಟ್ಟ ಸಿಟ್ಟು ಬಂದಿತ್ತು, ಕಾರಣ ಅದರಿಂದ ಆದಿಬದಿಯ ಸಂಬಂಧ ಕೆಟ್ಟವೇನೊ ಗಂಡನ ಮನಸು ಮುರಿಯಿತೇನೊ ಎಂಬ ಸಂಶಯ ಅವಳೊಳು ಮೂಡಲಾರಂಭವಾಯಿತು.
ಅಂತಹುದೇನಿಹುದು ಆ ಪತ್ರದಲ್ಲಿ ಉತ್ತಮ ಸಂಬಂಧಗಳನ್ನು ಹಾಳು ಮಾಡುವಂತಹದ್ದು ಎಂದುಕೊಂಡಿರಾ. ಸುಮಾರು ವರ್ಷಗಳ ಹಿಂದೆ ಶಿವಣ್ಣನ ತಂದೆ ಮತ್ತು ಎದುರು ಮನೆಯ ಭೀಮಪ್ಪಯ್ಯನ ತಂದೆಯವರು ತಮ್ಮ ಮಹಡಿ ಮೇಲಿನ ಮಳೆ ನೀರನ್ನು ಮನೆ ಮುಂದೆ ಬೀಳುವಂತೆ ವ್ಯವಸ್ಥೆ ಮಾಡಿಕೊಂಡಿದ್ದರು. ಮತ್ತೆ ಬೇರೆ ಕಡೆ ಬಿಡಲು ಅವಕಾಶ ಇರಲಿಲ್ಲ. ಮಳೆಗಾಲದಲ್ಲಿ ಜೋರು ಮಳೆಯಿಂದ ತುಂಬಾ ನೀರು ಬರುತ್ತಿತ್ತು, ಒಮ್ಮೆ ಮಳೆ ಜಾಸ್ತಿ ಆದ ಕಾರಣ ಅವರ ಡೋಣಿ (ಮಳೆ ನೀರು ಹೋಗಲು ಮಹಡಿಗೆ ಹಾಕಿದ ಮಣ್ಣಿನ ನೇರವಾದ ಪೈಪು) ನೀರು ಇವರ ಮನೆ ಬಾಗಿಲಿಗೆ, ಮತ್ತು ಇವರ ಡೋಣಿ ನೀರು ಅವರ ಮನೆ ಬಾಗಿಲಿಗೆ ಬೀಳುತ್ತಿದ್ದ ಕಾರಣ. ಅದಕ್ಕೆ ಮಾತಿಗೆ ಮಾತು ಬೆಳೆದು ಹೊಡೆದಾಟ ಬಡಿದಾಟವೂ ಆದವು. ದೊಡ್ಡ ಕಲಹವೇ ಆಯಿತು ಮತ್ತೆ ಅದು ಕಂಪ್ಲೆಂಟ್ ಮತ್ತು ನ್ಯಾಯಾಲಯದ ಮೆಟ್ಟಿಲೇರಿತು. ಆಗಿನ್ನು ಶಿವಣ್ಣ ಮತ್ತು ಭೀಮಪ್ಪಯ್ಯ ಬಹು ಸಣ್ಣ ವಯಸ್ಸಿನ ಬಾಲಕರು.
ಇಂದು ಆದ್ಯಾವುದೂ ನೆನಪಿರಲಿಲ್ಲ. ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ ಅವರಿಬ್ಬರ ತಂದೆಯರೂ ಕೂಡ ಬದುಕಿರಲಿಲ್ಲ. ಎಷ್ಟೋ ವರ್ಷಗಳ ನಂತರ ನ್ಯಾಯಾಲಯದ ತೀರ್ಪು ಬಂದಿದೆ ಅದೇ ಆ ಪತ್ರವಾಗಿದೆ. ಆ ಪತ್ರದಲ್ಲಿ ನ್ಯಾಯಾಲಯದ ತೀರ್ಪು ಏನಿರಬಹುದೆಂದು ನೀವು ಕಾತುರರಾದಿರ? ತೀರ್ಪು ಹೀಗಿದೆ "ವಾದಗಳ ಮಂಡನೆಯ ಮೇರೆಗೆ ಓಣಿಯ ರಸ್ತೆ ಸಣ್ಣದಾದ ಕಾರಣ ಮತ್ತು ಸುತ್ತ ಮೂರು ಕಡೆಗಳಲ್ಲೂ ಬೇರೆ ಮನೆಗಳಿರುವ ಕಾರಣ ಈ ಇಬ್ಬರೂ ವ್ಯಕ್ತಿಗಳು ಕೂಡ ತಮ್ಮ ಮನೆಯ ಮಹಡಿಯ ಮಳೆಯ ನೀರನ್ನು ನೇರವಾಗಿ ಅಲ್ಲದೆ ಕೆಳಮುಖವಾಗಿ ಉದ್ದನೆಯ ಪೈಪಿನ ಮೂಲಕ ಕೆಳಗೆ ರಸ್ತೆಗೆ ಬಿಡಬೇಕೆಂದು ನ್ಯಾಯಾಲಯವು ಆದೇಶಿಸುತ್ತದೆ." ಎಂದು ತೀರ್ಪು ಬಂದಿದೆ. ಆದರೆ ಆ ಕೆಲಸವಾಗಿ ಎಷ್ಟೋ ವರ್ಷಗಳು ಕಳೆದಾಗಿದೆ.
ಆ ಪತ್ರ ಓದಿದ ಶಿವಣ್ಣನಿಗೆ ದ್ವೇಷ, ಸಿಟ್ಟು, ಅದಕ್ಕಾಗಿ ಅವನ ತಂದೆ ಹೊಡೆದಾಡಿದ ಸನ್ನಿವೇಶಗಳು ಕಣ್ಣಮುಂದೆ ಬಂದು ಏಕಾಂಗಿಯಾಗಿ ಅಸಹಾಯಕತೆಯಿಂದ ಕುಳಿತಿರುವುದು ಕಂಡು ಮಡದಿ ಮೆಲ್ಲನೆ ಮನೆಯೋಳಗೆ ನಡೆದಳು.
ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ