ಸೋಮವಾರ, ಏಪ್ರಿಲ್ 20, 2026

ಸಂಚಿಕೆ - ೧೭

 ಗ್ರಾಮಿಯ ಚಿಂತನೆಗಳು ಭಾಗ-೨

      ಮಾರ್ಕ್ಸವಾದಿ ತತ್ವಜ್ಞಾನದಲ್ಲಿ ವಿಶಿಷ್ಟವಾದ ಹೆಸರೆಂದರೆ ಗ್ರಾಮ್ಮಿಯದ್ದು, ಆತ ಹೋರಾಟಗಾರ ಮಾತ್ರವಲ್ಲದೇ ಕಮ್ಯುನಿಷ್ಟ ಪಾರ್ಟಿಯ ನಾಯಕನೂ ಆಗಿದ್ದ. ಬಹುಶಃ ಗ್ರಾಮಿ ಜನನಾಯಕನಾಗಿ ಜನಗಳ ನಡುವೆಯಿದ್ದ ಕಾರಣದಿಂದಲೇ ಅವನ ಚಿಂತನೆಯು ೨೦ನೆಯ ಶತಮಾನದಲ್ಲಿ ವಿಶೇಷ ಗಮನ ಸೆಳೆದಿತ್ತು. ಗ್ರಾಮಿಯ ಮರಣದ ನಂತರವೇ ಅವನ ಚಿಂತನೆಗಳು ಜನರನ್ನು ತಲುಪಿದವು. ಜಗತ್ತಿಗೆ ಈ ಚಿಂತನೆಗಳು ತೆರೆದುಕೊಂಡಾಗ ಮಾಕ್ಸ್ವಾದಿಗಳು ಮಾತ್ರವಲ್ಲದೇ ಬೂರ್ಜ್ವಾ ಹಾಗೂ ಬಲಪಂಥೀಯರು ಕೂಡ ಆಕರ್ಷಿತರಾದರು. ಗ್ರಾಮ್ಮಿ ಸಮಾಜದ ಮೇಲು ರಚನೆಯೆಂದು ಕರೆಸಿಕೊಳ್ಳುವ ಸಂಸ್ಕೃತಿಯ ಕುರಿತು ಚಿಂತನೆ ಮಾಡುತ್ತಾನೆ. ಒಂದರ್ಥದಲ್ಲಿ "ಗ್ರಾಮ್ಮಿಯನ್ನು ನೋಡುವುದು ಅಂದರೆ ಮತ್ತೆ ಸಂಸ್ಕೃತಿಯ ಚಿಂತನೆಗಳನ್ನು ಮರುಯೋಚನೆ ಮಾಡುವುದೂ ಹೌದು.” (ಕೆ. ಕೇಶವಶರ, ೨೦೨೪, ಪು.೧) ಹಾಗೆಂದು ಗ್ರಾಮ್ಮಿ ಬರೀ ಸಂಸ್ಕೃತಿಯನ್ನು ಮಾತ್ರ ಹೇಳಿದ್ದಾನೆ ಎಂದು ಹೇಳಲು ಬರುವುದಿಲ್ಲ. ಆದರೆ ಸಂಸ್ಕೃತಿ ಚಿಂತನೆ ಗ್ರಾಮ್ಪಿಯ ಹೊರತಾಗಿ ಅಸ್ಪಷ್ಟ ಅನ್ನುವುದಷ್ಟೇ ಸತ್ಯ. ಒಂದು ಗುಂಪು ಅಥವಾ ಗುಂಪುಗಳು ಇನ್ನೊಂದು ಗುಂಪು ಅಥವಾ ಗುಂಪುಗಳ ಮೇಲೆ ಹಿಂಸೆಯ ಮೂಲಕ ಸಾಧಿಸುವ ಅಧಿಪತ್ಯಕ್ಕೆ ಪ್ರಭುತ್ವವೆಂದು ಹೆಸರು. ಈ ಪ್ರಭುತ್ವ ದೀರ್ಘಾಯುಷಿಯಾಗಿರಲು ಸೈದ್ಧಾಂತಿಕ ಅಧಿಪತ್ಯವನ್ನು ಸ್ಥಾಪಿಸುತ್ತದೆ. ಇಲ್ಲಿ ಸಂಸ್ಕೃತಿಯ ಮೂಲಕ ಜ್ಞಾನವನ್ನು ಕಟ್ಟುವ ಕ್ರಿಯೆಯನ್ನು ಪ್ರಭುತ್ವವು ಮಾಡುತ್ತದೆ. ಅದೇ ಸಾಂಸ್ಕೃತಿಕ ಅಧಿಪತ್ಯ ಅಥವಾ ಸೈದ್ಧಾಂತಿಕ ಆಧಿಪತ್ಯಕ್ಕೆ ಪೂರಕವಾಗುತ್ತದೆ. ಹಾಗಾಗಿ ನಾಗರೀಕ ಸಮಾಜದಲ್ಲಿ ಕಾರ್ಯಪ್ರರ್ವತ್ತರಾಗುವ ಮೂಲಕ ಪ್ರಭುತ್ವದ ಸೈದ್ಧಾಂತಿಕ ಹಿಡಿತವನ್ನು ಮುರಿಯುವ ಸಾಂಸ್ಕೃತಿಕ ಕ್ರಾಂತಿಯತ್ತ ಸಾಗಬೇಕಾದದ್ದನ್ನು ಗ್ರಾಮಿ ಹೇಳುತ್ತಾನೆ. ಅವನು ಸಂಸ್ಕೃತಿಯ ಕ್ರಾಂತಿಗೆ ಸಿದ್ಧಾಂತ ಮತ್ತು ಅದರ ಕ್ರಿಯಾಚರಣೆ ಅಗತ್ಯವಾದುದರ ಬಗ್ಗೆ ಒತ್ತಿಹೇಳಿದ್ದಾನೆ. ಈ ಎಲ್ಲಾ ಕಾರಣದಿಂದ ಇವನ ಚಿಂತನೆಯನ್ನು ಅಧ್ಯಯನ ಮಾಡುವುದು ಸೂಕ್ತವಾದದ್ದು.


ಸಂಸ್ಕೃತಿಯ ಕ್ರಾಂತಿಯೆಂಬ ಸಾಮಾಜಿಕ ಪರಿವರ್ತನೆ :-

      ನಮ್ಮ ಕಾಲದಲ್ಲಿ ಅತ್ಯಂತ ಹೆಚ್ಚು ಬಳಕೆಗೊಂಡ ಪರಿಭಾಷೆಯೆಂದರೆ ಅದು 'ಸಂಸ್ಕೃತಿ'ಯದ್ದು, ಇದೊಂದು ರಾಜಕೀಯ ಪರಿಭಾಷೆಯಾಗಿ ಈಗ ವಿಜೃಂಭಿಸುತ್ತಿರುವುದನ್ನು ನಾವು ಕಾಣುತ್ತವೆ. ಬಹು ಸಂಕಥನಗಳನ್ನು ಸೃಷ್ಟಿಸಿರುವ ಈ ಪರಿಭಾಷೆಯನ್ನು ಅತಿ ಹೆಚ್ಚು ಬಳಸಿದ್ದೇ ಅಪವ್ಯಾಖ್ಯಾನದ ನೆಲೆಯಲ್ಲಿ, ಸಂಸ್ಕೃತಿಯೆಂದರೇನು? ಅನ್ನುವ ಪ್ರಶ್ನೆಗೆ ನಮ್ಮಲ್ಲಿ ಇಂದು ಸರಳೀಕೃತವಾದ ಕ್ಲೀಷೆಯ ಉತ್ತರಗಳು ಚಲಾವಣೆಯಲ್ಲಿದ್ದಾವೆ. ಇವುಗಳು ನಮ್ಮ ಕಾಲದ ಪ್ರಭುತ್ವಾಧಿಕಾರದ ಸಂಕಥನಗಳನ್ನು ಮುಂದಿಡುತ್ತದೆ. "ಸಂಸ್ಕೃತಿಯೆಂದರೆ ಸರ್ವಸಾಮಾನ್ಯವಾದದ್ದು" ಎಂದು ರೇಮಂಡ್ ವಿಲಿಯಂಮ್ಸ್ ಹೇಳುತ್ತಾನೆ. ಅವನೇ ಮುಂದುವರೆದು "ಸಂಸ್ಕೃತಿ ಎಂದರೆ ಜನರ ನಿತ್ಯ ಬದುಕಿನ ಸಹಜ ವಿವರಗಳಿಂದ ಪಡೆಯುವ ಅರಿವೇ ಹೊರತು ಅಮೂರ್ತವಾದ ವಿಚಾರಗಳಲ್ಲ." ಇಲ್ಲಿ ಅರಿವು ಮುಖ್ಯವಾಗುತ್ತದೆ. ಮತ್ತು ಈ ಅರಿವಿಗೆ ಸಮಾಜದ ಜೊತೆಗೆ ಅಂತರ್ ಸಂಬಂಧವಿರುತ್ತದೆ. ಅದು ಜನರ ಸಾಮಾನ್ಯ ಜ್ಞಾನವಾಗಿರುತ್ತದೆ. ಪ್ರಭುತ್ವವು ಹೇಗೆ ತನ್ನ ಹಿಡಿತವನ್ನು ದೀರ್ಘಕಾಲದವರೆಗೆ ಭದ್ರಪಡಿಸಿಕೊಳ್ಳುತ್ತದೆ ಎಂದರೆ ಅದು ಜನರ ಸಾಮಾನ್ಯ ಜ್ಞಾನವನ್ನು ನಿಯಂತ್ರಿಸುವ ಮೂಲಕ. ಸಮಾಜದಲ್ಲಿನ ಸಾಹಿತ್ಯ, ಕಲೆ, ಸಂಸ್ಕೃತಿಗಳ ಕುರಿತು ಗ್ರಾಮಿ ವಿಶೇಷವಾದ ಚಿಂತನೆ ಮಾಡುತ್ತಾನೆ. ಪ್ಲೇಟೊ ತನ್ನ ಆದರ್ಶ ರಾಜ್ಯದಲ್ಲಿ ಸಾಹಿತ್ಯ ಮತ್ತು ಕಲೆಯನ್ನು ನಿರಾಕರಿಸಿದ್ದಾನೆ. ಅವನು ಸಾಹಿತ್ಯ ಮತ್ತು ಕಲೆಗಳು ಉಂಟು ಮಾಡುವ ಭ್ರಮೆಯ ಬಗ್ಗೆ ಗಮನ ಸೆಳೆದಿದ್ದಾನೆ.

      ಆದರೆ ಸಾಹಿತ್ಯ ಕೇವಲ ಅನುಕರಣೆಯ ಕೆಲಸವಲ್ಲ. ಅದಕ್ಕೆ ಸಾವಯವವಾದ ಸಾಮಾಜಿಕ ಸಂಬಂಧವಿರುತ್ತದೆ. ಸಾಹಿತ್ಯ ಮತ್ತು ಕಲೆಯು ಕ್ರಿಯೆಯಿಂದ ಹೊರತಾದುಲ್ಲ. ಅದೇ ರೀತಿ ಸಮಾಜವು ಕ್ರಿಯೆಯಿಂದಲೇ ಅಸ್ತಿತ್ವಕ್ಕೆ ಬರುವಂತದ್ದು. ಸಂಸ್ಕೃತಿಯು ಸಮಾಜದ ಯಾಜಮಾನಿಕೆ ರಚನೆಗಳನ್ನು ಒಳಗೊಂಡಿರುವ ಕಾರಣ ಗ್ರಾಮಿ ಸಂಸ್ಕೃತಿಯ ಕ್ರಾಂತಿ ಅತ್ಯಗತ್ಯವೆಂದು ಸಾರುತ್ತಾನೆ. ಈ ಕುರಿತ ಕೆಲವು ಚಿಂತನೆಗಳನ್ನು ಈ ಮುಂದಿನಂತೆ ನೋಡಬಹುದು.


ಸಾಮಾನ್ಯ ಜ್ಞಾನದ ಕುರಿತು (ಕಾಮನಸೆನ್ಸ್) :-

      ಯಾವುದು ಒಪ್ಪಿತವಾದದ್ದು, ಯಾವುದು ಅನೈತಿಕವಾದದ್ದು, ಯಾವ ನಡುವಳಿಕೆ ಯಾವ ಮಿತಿಯಲ್ಲಿ ಇರಬೇಕು. ಯಾವ ವರ್ತನೆಗಳು ಸಹ್ಯ ಯಾವುದು ಅಸಹ್ಯ, ಇತ್ಯಾದಿಗಳನ್ನು ಯಾವ ವಿಶೇಷ ತರಬೇತಿ ಇಲ್ಲದೆ ಸಮಾಜದಲ್ಲಿ ಜೀವಿಸುವ ಮೂಲಕವೇ ಪಡೆಯುವ ಗ್ರಹಿಕೆಯನ್ನು ಸಾಮಾನ್ಯ ಗ್ರಹಿಕೆ (ಕಾಮನ್ ಸೆನ್ಸ್) ಎನ್ನಬಹುದು. ಈ ಅರಿವಿಗೆ ಸಾಕ್ಷಿ-ಪುರಾವೆಗಳ ಅಗತ್ಯವಿಲ್ಲ. ಜನ ತಮ್ಮ ದಿನ ನಿತ್ಯದ ಬದುಕಿನ ಅನುಭವದಿಂದಲೇ ಈ ಅರಿವನ್ನು ಕಂಡುಕೊಳ್ಳುತ್ತಾರೆ. ಅದಕ್ಕೆ ಸಾಮಾಜಿಕ ಶಿಷ್ಟಾಚಾರವೇ ಮುಖ್ಯವಾಗಿದೆ. ಹೆಂಗಸರ ಬುದ್ದಿ ಮೊಳಕಾಲ ಕೆಳಗೆ; ಬ್ರಾಹ್ಮಣರು ಬೌದ್ಧಿಕ ಕೆಲಸಕ್ಕೆ. ಶೂದ್ರರು ದೈಹಿಕ ಕೆಲಸಕ್ಕೆ ಲಾಯಖು; ಮುಸ್ಲಿಮರು ಡಜನ್‌ಗಟ್ಟಲೆ ಮಕ್ಕಳನ್ನು ಹಡೆಯುತ್ತಾರೆ: ಕೆಳಜಾತಿಯ ಜನರಿಗೆ ಮೀಸಲಾತಿ ಕೊಟ್ಟು ಸರಕಾರಿ ಸಂಸ್ಥೆಗಳಲ್ಲಿ ಶಿಸ್ತು, ದಕ್ಷತೆಯಿಲ್ಲದಂತಾಯಿತು; ಮಿಸಲಾತಿಯಿಂದ ದಲಿತರು ಅರ್ಹತೆಯಿಲ್ಲದೆ ಕೆಲಸ ಪಡೆಯುತ್ತಾರೆ; ಮಾಂಸ ತಿನ್ನುವುದು ತಾಮಸ ಕ್ರಿಯೆ; ಈ ರೀತಿಯ ವಿಚಾರಗಳು ಭಾರತೀಯ ಸನ್ನಿವೇಶದಲ್ಲಿ ಚಲಾವಣೆಯಲ್ಲಿದೆ. ಆದರೆ ಇವುಗಳಿಗೆ ಯಾವುದೇ ಸಾಕ್ಷಿ-ಆಧಾರಗಳಿಲ್ಲಿ ನೀರು ಕುಡಿದಷ್ಟೆ ಸರಳವಾಗಿ ಜನ ಈ ರೀತಿಯ ವಿಚಾರಗಳನ್ನು ಹಂಚುತ್ತಾರೆ. ಇಂತಹ ಜ್ಞಾನದಲ್ಲಿ ಆಳುವ ವರ್ಗದ ಹಿತಕಾಯುವ ಅನೇಕ ಅಂಶಗಳಿರುತ್ತವೆ. ಇವುಗಳ ಬಗ್ಗೆ ಗ್ರಾಮಿ ಗಮನಹರಿಸುತ್ತಾನೆ. ಆಳುವ ವರ್ಗ ಅಥವಾ ಅಧಿಕಾರ ವರ್ಗವು ಅನೇಕ ನಿರೂಪಣೆಗಳನ್ನು ಸಮಾಜದಲ್ಲಿ ಸಾಮಾನ್ಯ ಜ್ಞಾನದ ಸೋಗಿನಲ್ಲಿ ನುಗ್ಗಿಸುತ್ತದೆ. ಅಂಟೋನಿಯೊ ಗ್ರಾಮ್ಮಿ ತನ್ನ 'ಪ್ರಿಸನ್ ನೋಟ್ ಬುಕ್'ನಲ್ಲಿ ಈ ವಿಚಾರದ ಬಗ್ಗೆ ಪರಿಶೀಲಿಸುತ್ತಾನೆ. ಅವನ ಪ್ರಕಾರ, "ಕಾಮನ್‌ಸೆನ್ಸ್ ಅಥವಾ ಲೋಕಜ್ಞಾನ ಎನ್ನುವುದು ಯಾವುದೇ ಒಂದು ನಿರ್ದಿಷ್ಟ ಸಮಯದಲ್ಲಿ ಏಕರೂಪದ ಅರ್ಥ ಹೊಂದಿರುವ ವಿಶಿಷ್ಟ ಪರಿಕಲ್ಪನೆಯಲ್ಲ. ಅದೊಂದು ತತ್ವಶಾಸ್ತ್ರದ ಜನಪದ. ಅದು ಆಗಾಗ ಅನೇಕ ರೂಪಗಳನ್ನು ಪಡೆಯುತ್ತಿರುತ್ತದೆ. ಅದರ ಮೂಲಭೂತ ಗುಣವೇನೆಂದರೆ, ಅದು ಒಬ್ಬನೇ ವ್ಯಕ್ತಿಯಲ್ಲಿ ಪ್ರಕಟವಾದರು ಕೂಡ ಅದು ಛಿದ್ರಗೊಂಡ ರೂಪದಲ್ಲಿರುತ್ತದೆ. ಸರಿಯಾಗಿ ಸಂಯೋಜನೆಗೊಂಡಿರುವುದಿಲ್ಲ. ಮತ್ತು ಪರಿಣಾಮ ಬೀರುವಂಥದ್ದೂ ಆಗಿರುವುದಿಲ್ಲ." ಇದು ಜನಪದ ಸ್ವರೂಪದಲ್ಲಿ ರೂಪುಗೊಂಡದ್ದು. ತನ್ನಷ್ಟಕ್ಕೆ ನಾನು ರೂಪುಗೊಂಡಿದ್ದಲ್ಲ. ಸಾಮಾಜಿಕ ಯಾಜಮಾನಿಕೆಯು ಈ ಜ್ಞಾನಕ್ಕೆ ಸಾಕಷ್ಟು ಕೊಡುಗೆಯನ್ನು ಕೊಟ್ಟಿರುತ್ತದೆ. ಇದು ಛಿದ್ರಗೊಂಡಿರುವುದು ಸಾಮಾಜಿಕ ಯಾಜಮಾನಿಕೆಗೆ ಹೆಚ್ಚು ಪೂರಕವಾಗಿರುತ್ತದೆ. ಈ ಸಾಮಾನ್ಯ ಜ್ಞಾನದಿಂದ ಕಟ್ಟಿಕೊಂಡ ಜನ ಸಂಸ್ಕೃತಿಯು ಆಳುವವರ ಪರವಾದ ಒಪ್ಪಿಗೆಯನ್ನು ಉತ್ಪಾದಿಸುತ್ತದೆ. ಒಮ್ಮೆ ಅಧಿಕಾರಸ್ತರ ವಿಚಾರಗಳು ಸಾಮಾನ್ಯ ಜ್ಞಾನವಾಗಿ ರೂಪಾಂತರ ಹೊಂದಿದರೆ ಅದರ ಚಲಾವಣೆಯು ಸುಲಲಿತವಾಗುತ್ತದೆ. ಅವರ ವಿಚಾರಗಳಿಂದ ಪ್ರೇರಿತವಾದ ಮೌಲ್ಯಗಳಿಗೆ ಜನಮನ್ನಣೆ ದೊರಕಿಬಿಡುತ್ತದೆ. "ಇಂತಹ ಸಾಮಾನ್ಯಗ್ರಹಿಕೆಗಳು ಆಳುವ ಮಂದಿ ತಮ್ಮ ಯಜಮಾನಿಕೆಯನ್ನು ಜಮಾ ಮಾಡಿ, ಬಡ್ಡಿಸಹಿತ ಲಾಭ ಗಳಿಸುವ ರಾಷ್ಟ್ರೀಯ ಬ್ಯಾಂಕುಗಳು ಎಂದು ಗ್ರಾಮಿ ಹೇಳುತ್ತಾನೆ." (ಕೆ. ಫಣಿರಾಜ್, ೨೦೧೧.ಪು.೪೯)

      ಜನರಲ್ಲಿ ಅಂತರತವಾಗಿ ಸಾಮಾನ್ಯ ಜ್ಞಾನಗಳನ್ನು ಅಧಿಕಾರಸ್ತರು ಬಿತ್ತಿದ ಮೌಡ್ಯವೆಂದು ಸಾಂಪ್ರದಾಯಿಕ ಮಾರ್ಕ್ಸವಾದಿಗಳ ಅಭಿಮತ. ಹೌದು ಇದು ಆಳುವ ವರ್ಗದ ಮೌಡ್ಯವೆ ಆಗಿದೆ. ಆದರೆ ನಾವು ಸಾಮಾನ್ಯಗ್ರಹಿಕೆಯನ್ನು ಕೇವಲ ಮೌಡ್ಯವಾಗಿ ನೋಡಬಾರದು. ಅದನ್ನು ಪ್ರತಿಯಜಮಾನಿ ಕಟ್ಟಲು ಅಡಿಗಲ್ಲಾಗಿಸಿಕೊಳ್ಳಬೇಕು. ಈ ಸಾಮನ್ಯ ಗ್ರಹಿಕೆಗಳು ಪ್ರತಿಯಜಮಾನಿಕೆಗೆ ಯಾವುದೇ ತರಹದ ಕೊಡುಗೆ ನೀಡಲ್ಲ ಅನ್ನುವುದು ಸ್ಪಷ್ಟ ಹಾಗಿದ್ದಾಗಲೂ ಅದು ರೂಪುಗೊಂಡ ಸನ್ನಿವೇಶ, ಹಿಂದಿನ ತಾತ್ವಿಕತೆ ಮೊದಲಾದವನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಬೇಕು. ಹೀಗೆ ಮಾಡುವುದರಿಂದ ಆ ಜ್ಞಾನದ ಒಳಗೆ ಛದ್ಮವೇಶ ಹಾಕಿಕೊಂಡಿರುವ ಅಧಿಕಾರ ನಿರೂಪಣೆಗಳನ್ನು ನಾವು ಕಾಣಬಹುದು. ಸಮಾಜದಲ್ಲಿ ಅಧಿಕಾರದ ವರ್ಗವು ಕಟ್ಟಿರುವ ಸಾಮಾನ್ಯಗ್ರಹಿಕೆಗೂ ಜನರ ಬದುಕಿನಲ್ಲಿನ ಅನುಭವಗಳ ನಡುವೆ ಬಿರುಕು ಇರುತ್ತವೆ. ಇವುಗಳು ಅಧಿಕಾರದ ಪ್ರಭಾವಲಯಕ್ಕೆ ಸಿಕ್ಕಿ ಮಸುಕಾಗಿ ಇರುತ್ತದೆ. ಜನಗಳ ಸಾಮಾನ್ಯ ಗ್ರಹಿಕೆಯಲ್ಲಿನ ಯಜಮಾನ ಪ್ರೇರಿತವಾದ ಅಂಶವನ್ನು ತೆಗೆದುಹಾಕಿ ಸತ್ವಪೂರ್ಣ ಗ್ರಹಿಕೆಗಳನ್ನಾಗಿ ಮಾಡುವುದು ಪ್ರತಿಯಜಮಾನಿಕೆಯ ರಾಜಕೀಯಕ್ಕೆ ಜೀವ ತುಂಬಿದಂತೆ ಎಂದು ಗ್ರಾಮಿ ನಂಬಿದ್ದ, ಜನಗಳ ಸತ್ವಪೂರ್ಣವಾದ ಜೀವಂತ ತಿಳುವಳಿಕೆಗಳಿದ್ದರೂ ಅದರಲ್ಲಿ ಆಳುವವರ್ಗ ಅವಿತುಕೊಂಡಿರುತ್ತದೆ. ಹಾಗೆಂದ ಮಾತ್ರಕ್ಕೆ ಜನಗಳ ಜೀವವಂತ ಭಾಗವಾದ ಈ ತಿಳುವಳಿಕೆಯನ್ನು ಬಿಟ್ಟುಕೊಡಬೇಕೇ? ಜನರ ಲೌಕಿಕ ಬದುಕಿನ ಚೈತನ್ಯ ಪೂರ್ಣ ಜಾಗಗಳನ್ನು ನಾಶಮಾಡುವುದು ಸರಿಯೇ? ಹೀಗೆಂದು ಗ್ರಾಮಿ ಪ್ರಶ್ನಿಸುತ್ತಾನೆ. ಅವನಲ್ಲಿ ಈ ಕುರಿತು ಸ್ಪಷ್ಟವಾದ ಉತ್ತರವಿಲ್ಲ. ಆದರೆ ಈ ಕಾಮನ್‌ಸೆನ್ಸ್‌ಗಳನ್ನು ಅಧಿಕಾರಸ್ತರಿಂದ ಮುಕ್ತವಾಗಿಸುವ ಒಂದು ಕ್ರಾಂತಿಯನ್ನು ಮಾಡಬೇಕೆಂದು ಹೇಳುತ್ತಾನೆ. ಇದುವೇ "ಪ್ಯಾಸಿವ್ ರೆವೆಲ್ಯುಷನ್."


ಪರಾಮರ್ಶನ ಗ್ರಂಥಗಳು :-

  1. ಕೆ. ಫಣಿರಾಜ್, ಅಂಟೋನಿಯೊ ಗ್ರಾಮಿ, ಅಭಿನವ, ಬೆಂಗಳೂರು, ೨೦೧೧,
  2. ಕೆ. ಕೇಶವಶರ್ಮ, ಆಂಟೋನಿಯೊ ಗ್ರಾಮಿ, ಸೃಷ್ಟಿ ಪಬ್ಲಿಕೇಷನ್ಸ್, ಬೆಂಗಳೂರು, ೨೦೨೪,
  3. ಡಾ. ಸಿ.ಜಿ. ಲಕ್ಷ್ಮೀಪತಿ, ಲೋಕದೃಷ್ಟಿ, ಕೌಟಿ ಪ್ರಕಾಶನ, ಅನೇಕಲ್, ೨೦೨೩,
  4. ಇ.ಎಂ.ಎಸ್. ನಂಬೂದರಿಪಾಡ್, ಪಿ. ಗೋವಿಂದ ಒಳ್ಳೆ ಗ್ರಾಮ್ಮಿಯ ಚಿಂತನೆಗಳು, (ಕನ್ನಡಕ್ಕೆ ಪ್ರಭಾಕರನ್ ಕೆ.. ಕ್ರಿಯಾ ಮಾಧ್ಯಮ. ಬೆಂಗಳೂರು, ೨೦೨೫.
  5. ವಿಜಯ್ ಪೂಣಚ್ಚ ತಂಬಂಡ. ಕೆಳವರ್ಗದ ಪ್ರತಿಭಟನೆ ಸಬಾಲ್ಟರ್ ಚರಿತ್ರೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೯.
  6. ಕೇಶವಶರ ಕೆ.. ಫ್ರಾಂಕ್ ಫರ್ಟ್ ಸ್ಕೂಲ್, ದೇಸಿ ಪುಸ್ತಕ, ಬೆಂಗಳೂರು, ೨೦೨೫,
  7. ಡಾ. ರಾಜೇಂದ್ರ ಚೆನ್ನಿ, ಸಾಹಿತ್ಯ ಮತ್ತು ಸಿದ್ಧಾಂತಗಳು, ಅಭಿನವ, ಬೆಂಗಳೂರು, ೨೦೨೨.


ವಿನಯ ಕುಮಾರ್, ಸಂಶೋಧನಾರ್ಥಿ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...