ತೇಜಸ್ವಿ ಪ್ರತಿಷ್ಠಾನ
ತೇಜಸ್ವಿ ಪ್ರತಿಷ್ಠಾನ ೧-೧-೨೦೧೮ ರಂದು ಸ್ಥಾಪನೆ ಆಯಿತು. ಪ್ರತಿಷ್ಠಾನವು ನಕ್ಷತ್ರ ವೀಕ್ಷಣೆ. ವಸ್ತು ಮತ್ತು ನಾಟಕ ಪ್ರದರ್ಶನ, ವಿಚಾರ ಸಂಕಿರಣ, ಸಂವಾದ ಮೊದಲಾದ ಅನೇಕ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ಇಲ್ಲಿ ಸಾಹಿತ್ಯಾಸಕ್ತರಿಗೆ ಮತ್ತಷ್ಟು ಕುತೂಹಲ ಮತ್ತು ಅಚ್ಚರಿ ಮೂಡಿಸುವ ಪ್ರಕೃತಿಯಲ್ಲಿನ ವಿಭಿನ್ನ ರೀತಿಯ ಕೀಟ, ಪತಂಗ, ಮಿಡತೆ, ಜೇನು ಇನ್ನೂ ಹಲವು ವಿಭಿನ್ನ ರೀತಿಯ ಕೀಟಗಳ ದೊಡ್ಡ ಸಂಗ್ರಹಾಲಯವು ಇದೆ. ಜೊತೆಗೆ ಹಳೆಯ ಕಾಲದ ವಸ್ತು ಸಂಗ್ರಹಾಲಯ ಅದರಲ್ಲಿ ೧೯೫೭ ರ ಕಾಲದಲ್ಲಿನ ನಾಣ್ಯಗಳು, ಬ್ರಿಟಿಷರ ಆಡಳಿತ ಕಾಲದಲ್ಲಿನ ನಾಣ್ಯಗಳು, ಆದಿವಾಸಿ ಜನಾಂಗದ ಆಭರಣದ ವಸ್ತುಗಳು, ರಾಜಾಡಳಿತ ಅವಧಿಯ ಯುದ್ಧದ ಆಯುಧಗಳು, ಪ್ರಾಚೀನ ಕಾಲದಲ್ಲಿನ ಅಡುಗೆಗೆ ಸಂಬಂಧಿಸಿದ ವಸ್ತುಗಳು, ಕೃಷಿಗೆ ಸಂಬಂಧಿಸಿದ ಪರಿಕರಗಳು ಹಾಗೆಯೆ ತೇಜಸ್ವಿಯವರ ಆಸಕ್ತಿಗೆ ಸಂಬಂಧಿಸಿದ ಹಳೆಯ ಮಾದರಿಯ ಕ್ಯಾಮರಾಗಳು, ಟೇಪ್ ರೆಕಾರ್ಡ್, ಅಚ್ಚು ಯಂತ್ರಗಳು, ವಿಶೇಷವಾಗಿ ತೇಜಸ್ವಿಯವರ ಹಸ್ತಾಕ್ಷರ ಪತ್ರಗಳು ಹಾಗೂ ತೇಜಸ್ವಿಯವರ ವಿವಾಹದ ಪತ್ರ(ವೆಡ್ಡಿಂಗ್ ಕಾರ್ಡ್) ಇವೆ. ಜೊತೆಗೆ ಪ್ರಸಿದ್ಧ ಕಾದಂಬರಿಗಳು. ಇಂಗ್ಲಿಷ್ ಇತರ ಭಾಷೆಗಳಿಗೆ ಅನುವಾದಗೊಂಡ ಕೃತಿಗಳನ್ನು ನೋಡಬಹುದು. ಹಾಗೆ ಅವರ ಪ್ರತಿಯೊಂದು ಕೃತಿಯ ಮುಖ್ಯ ವಿಚರಗಳನ್ನು ಸಹ ಅಲ್ಲೇ ಸೂಚಿಸಿದ್ದಾರೆ. ಆ ವಿಷಯ ಓದಿದಾಗ ಬೇಟಿ ನೀಡಿದ ಪ್ರತಿಯೊಬ್ಬ ಸಾಹಿತ್ಯಾಸಕ್ತರಿಗೂ ಆ ಕೃತಿ ಲೇಖನವನ್ನು ಓದಲೇಬೇಕು ಎಂದೆನಿಸುವುದು.
ತೇಜಸ್ವಿಯವರ ಪ್ರಸಿದ್ಧ ಕಾದಂಬರಿಯಾದ 'ಕರ್ವಾಲೋ' ಕೃತಿಯಲ್ಲಿ ಬರುವ ವಿಶೇಷ ಜೀವಿಯು ಸಹ ಪ್ರದರ್ಶನಕ್ಕೆ ಇಡಲಾಗಿದೆ. ಅದನ್ನು ನೋಡಿದಾಗ ನಮ್ಮ ಸುತ್ತಮುತ್ತಲಿನ ವಿಶಿಷ್ಟ ಜೀವಿಗಳನ್ನು ನಾವು ನೋಡದೆ ಕಾಣದೆ ಇರುವಷ್ಟು ಇತರೆ ಚಟುವಟಿಕೆ(ಅಂತರ್ಜಾಲ, ಮೊಬೈಲ್ ಫೋನ್)ಯಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಿದ್ದೇವೆ ಎಂದೆನಿಸಿತು. ನಮ್ಮ ಊರಿನಲ್ಲಿಯೇ ಇಷ್ಟೊಂದು ಅದ್ಭುತವಾದ ಸ್ಥಳವಿತ್ತೆ ಎಂದೆನಿಸಿತು. ಏಕೆಂದರೆ ಬೇರೆ ಬೇರೆ ಸ್ಥಳಗಳನ್ನು ನೋಡಿ ಸಂತೋಷಪಟ್ಟು ಬರುವ ನಾವು ಹತ್ತಿರದಲ್ಲೇ ಇರುವ ಉತ್ತಮ ಲೇಖಕರ ಪ್ರತಿಷ್ಠಾನಕ್ಕೆ ಈ ವರಿಗೆ ಬೇಟಿ ನೀಡದೆ ಇದ್ದದ್ದು ನನಗೆ ಬೇಸರವೆನಿಸಿತು. ಪ್ರಕೃತಿಯ ನಡುವೆ ಇರುವ ಈ ಪ್ರತಿಷ್ಠಾನಕ್ಕೆ ಬೇಟಿ ಕೊಟ್ಟರೆ ನಮ್ಮನ್ನು ವಿಶೇಷ ವಿಭಿನ್ನ ಜಗತ್ತಿಗೆ ಹೋದಂತೆ ಭಾಸವಾಗುವುದು. ಅದರಲ್ಲೂ ಮಳೆಗಾಲದಲ್ಲಿ ಹೋದರೆ ಮತ್ತಷ್ಟು ಹೊಸ ಹುರುಪು ತುಂಬುವುದು. ಪ್ರತಿಷ್ಠಾನದಲ್ಲಿ ಗಾಜಿನ ಓದಿನ ಮನೆ, ಕೀಟ ಸಂಗ್ರಹಾಲಯ, ವಸ್ತು ಸಂಗ್ರಹಾಲಯ, ಉದ್ಯಾನವನ ಇವೆಲ್ಲವೂ ಸಾರ್ವಜನಿಕರಿಗೆ ವೀಕ್ಷಿಸಲು ಮುಕ್ತವಾಗಿದ್ದು ಅವರ ಎಲ್ಲಾ ಕೃತಿಗಳು ಕೂಡ ವಿಶೇಷ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ.
ಇನ್ನೊಂದು ವಿಷಯ ಹೇಳುವುದನ್ನು ಬಿಟ್ಟೆ. ಅದೇನೆಂದರೆ 'ಆರ್ಕಿಡ್ಸ್' ಹೂಗಳ ಉದ್ಯಾನವನ. ಈ ಹೂಗಳು ಎಲ್ಲಾ ಹೂಗಳಂತೆ ಬೆಳೆಯುವುದಿಲ್ಲ. ಇದರ ಬೆಳೆಯುವಿಕೆ ವಿಧಾನವೇ ವಿಭಿನ್ನವಾಗಿದ್ದು ಇವು ಇತರ ಮರಗಳ ಆಶಯದಲ್ಲಿಯೇ ಇಲ್ಲವೇ ಬಿದಿರಿನ ಕೊಳವೆ ಮಾದರಿಯನ್ನು ಕತ್ತರಿಸಿ ಅದಕ್ಕೆ ಮಸಿ. ಮಡಕೆ ಚೂರು, ತೆಂಗಿನ ಸಿಪ್ಪೆ, ಇನ್ನು ಕೆಲವು ವಸ್ತುಗಳನ್ನು ಹಾಕಿ ಬೆಳೆಯಲಾಗುತ್ತದೆ. ಈ ಹೂಗಳು ಕೀಟಗಳ ಆಕಾರದಲ್ಲಿ, ಹೂವಿನ ಹಾರದಂತೆ, ಇಲಿಯ ಬಾಲದಂತೆ, ಹಾರುವ ಹಕ್ಕಿಯಂತೆ, ಬೇಟೆಯಾದ ಪಕ್ಷಿಯಂತೆ, ಜೇಡರ ಹುಳುವಿನಂತೆ ಹೀಗೆ ವಿಭಿನ್ನ ಆಕಾರದ ಹೂಗಳನ್ನು ನೋಡಿದೆನು. ಪ್ರಕೃತಿಯೇ ವಿಸ್ಮಯ ಅದರ ಜೊತೆಗೆ ಈ ಹೂಗಳು ಕೂಡ ಎಷ್ಟೊಂದು ವಿಸ್ಮಯ ಪಡುವ ಆಕಾರವನ್ನು ಹೊಂದಿದೆ ಎಂದೆನಿಸಿತು. ಹಾಗೆಯೇ ಬಹು ಸುಂದರವಾದ ಚಿಟ್ಟೆಗಳ ಉದ್ಯಾನವನವು ಇದೆ. ಈ ಪ್ರತಿಷ್ಠಾನಕ್ಕೆ ಬೇಟಿ ನೀಡಿದರೆ ಸಂತೋಷದ ಜೊತೆ ವಿಭಿನ್ನ ಲೋಕಕ್ಕೆ ಒಮ್ಮೆ ಕಾಲಿಟ್ಟಿದ್ದೇವೆಯೋ ಎಂದೆನಿಸಿತು. ಹಾಗಾಗಿ ಎಲ್ಲರೂ ಒಮ್ಮೆಯಾದರೂ ಈ ತೇಜಸ್ವಿ ಪ್ರತಿಷ್ಠಾನಕ್ಕೆ ಬೇಟಿ ನೀಡಿ, ಮೇಲ್ನೋಟಕ್ಕೆ ಸಣ್ಣ ಪ್ರತಿಷ್ಠಾನವೆನಿಸಿದರು ಅಲ್ಲಿರುವ ಪ್ರತಿಯೊಂದು ವಸ್ತು ವಿಶೇಷತೆಯನ್ನು ಹೊಂದಿದೆ. ಹಾಗಾದರೆ ಎಲ್ಲಾರು ಬೇಟಿ ನೀಡುತ್ತೀರಿ ಅಲ್ಲವೇ? ಬೇಟಿಕೊಡಿ ಇದರ ಸುಂದರ ಅನುಭವ ಸ್ವತಃ ನೀವೇ ಪಡೆಯಿರಿ.
ಸೌಮ್ಯ ಟಿ ಎಸ್., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ