ಸೋಮವಾರ, ಏಪ್ರಿಲ್ 20, 2026

ಸಂಚಿಕೆ - ೧೭

ನೀನು ಬಸ್ಸೇರಿದ ಮೇಲೆ


ಚಿತ್ರ ರಚನೆ :- ಟಿ.ಎ. ಸುಮನ್ ಜಬೀನಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ


ನೀನು ಬಸ್ಸೇರಿದ ಮೇಲೆ 

ನನ್ನೂರಿನಲ್ಲಿ ಒಂದರ್ಧ ಗಂಟೆ 

ಗುಡುಗು, ಮಿಂಚು, ಮಳೆಯಾಯಿತು 

ಮೋಡ ಕರಗಿ ನೀಲಾಕಾಶದ ದರ್ಶನವಾಯಿತು 

ನಿನ್ನ ಜೊತೆಗಿನ ನೆನಪು ಹೆಪ್ಪುಗಟ್ಟಿ 

ಕಣ್ಣು ಕುರುಡಾಯಿತು


ನೀನು ಬಸ್ಸೇರಿದ ಮೇಲೆ 

ಬುಟ್ಟಿ ಸೇರಿದ ಕಸಕ್ಕೆ ಬೆಂಕಿಯಾಯಿತು 

ವಾರದಿಂದೆ ಕುಡಿದ ಲೋಟ ಶುಚಿಯಾಯಿತು 

ಅಮ್ಮಳಿಗೆ ಎರಡು ಬಾರಿ ಕರೆ ಹೋಯಿತು


ನೀನು ಬಸ್ಸೇರಿದ ಮೇಲೆ 

ಮಾವಿನ ಬುಡಕ್ಕೆ ನೀರಾಯಿತು 

ಎರಡೆರಡು ಬಾರಿ ಮನೆ ಸುತ್ತು ಬಂದಾಯಿತು 

ಬಿದ್ದ ಅಡಿಕೆ ಅಂಗಳ ಸೇರಿತು 

ಆಡಿಗೆ ಸೊಪ್ಪಾಯಿತು


ನೀ ಬಸ್ಸೇರಿದ ಮೇಲೆ 

ತೇಜಸ್ವಿ, ಲಂಕೇಶರು ಕೈಸೇರಿತು 

ತರ್ಕ, ತತ್ವ, ಸಿದ್ದಾಂತ ತಲೆ ಹೊಕ್ಕಿತು 

ಹೊಸ ಪುಸ್ತಕದ ಪಟ್ಟಿ ತಯಾರಾಯಿತು 

ಅರ್ಧ ಓದಿದ ಪುಸ್ತಕಕ್ಕೆ ಮುಕ್ತಿಯಾಯಿತು


ನೀನು ಬಸ್ಸೇರಿದ ಮೇಲೆ 

ನೀ ಗೀಚಿ ಕೊಟ್ಟ ಚಿತ್ರಕ್ಕೆ ಅರ್ಥ ಬಂತು 

ಪತ್ರಿಕೆಯ ಧೂಳು ಹಾರಿತು 

ಕವಿತೆಗೆ ವಸ್ತುವಾಯಿತು 

ಅದು ಪ್ರಕಟವಾಯಿತು


ಸಲೀಂ ಸುಳ್ಯ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...