ಎಸ್.ಎಸ್.ವಿ. ಜಗದೀಶ
ಉಪಸಂಪಾದಕ, ಬಿತ್ತಿ ಗೋಡೆ ಬರಹ,
ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ,
ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ
ಆಶಯ ನುಡಿ
ಬಿತ್ತುವೆನಕ್ಷರವ ಬಿತ್ತಿಯ ಗೋಡೆಯನಲಂಕರಿಸಲುರೈತಾದಿಗಳು ಬಿತ್ತುವರು ಜಗಕ್ಕೆ ಊಟವನ್ನೀಡಲು
ಹಿರಿಯರು ಬಿತ್ತುವರು ನಮ್ಮಯ ಬದುಕನ್ನ ರೂಪಿಸಲುಗುರುಗಳು ಬಿತ್ತುವರು ಜಗಕ್ಕೆ ಜ್ಞಾನ ಬೆಳಕನ್ನಿಡಲುಕವಿಗಳು ಬಿತ್ತುವರು ಜಗದ ಬದುಕನ್ನ ತೋರಿಸಲುನಾವೆಲ್ಲ ಬಿತ್ತುವೆವು ನಮ್ಮ ಮನದ ಬೆಳಕನ್ನ ಮೂಡಿಸಲು...
"ಜನ್ಮ ನೀಡಿದವಳು ಭೂದೇವಿ. ನೆಲೆ ಕೊಟ್ಟವಳು ಭಾರತಾಂಬೆ, ಮಾತು ಕಲಿಸಿದವಳು ಕನ್ನಡವ್ವ"
ಈ ನಮ್ಮ ತಾಯಂದಿರನ್ನು ಸ್ಮರಿಸುತ್ತಾ ಈ ಉಪಸಂಪಾದಕನ ಆಶಯ ನುಡಿ, ಮೊದಲಿಗೆ 'ಬಿತ್ತಿ' ಎಂಬ ಪದದ ಅರ್ಥವನ್ನು ನೋಡುವುದಾದರೆ, ಕೃಷಿ ಭೂಮಿಯಲ್ಲಿ ಬೀಜ ಬಿತ್ತುವುದು ಇದರ ಸಾಮಾನ್ಯ ಅರ್ಥವಾಗಿದೆ. ಆದರೆ ಸಾಹಿತ್ಯ ವಿದ್ಯಾರ್ಥಿಗಳಾದ ನಾವು ಕೃಷಿ ಭೂಮಿಯ ಬಿತ್ತನೆಯ ಅರ್ಥವನ್ನೇ ಸಾಹಿತ್ಯ ಕ್ಷೇತ್ರದಲ್ಲಿ ಬಳಸಿರುವುದು ಅರ್ಥಪೂರ್ಣವಾಗಿದೆ. ರೈತನು ಭೂಮಿಯಲ್ಲಿ ಬೀಜ ಬಿತ್ತಿ ಕೃಷಿ ಮಾಡಿ ಬೆಳೆ ಪಡೆದಂತೆ ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತ್ಯಕಾರರು ಬಿತ್ತುವ ಅಕ್ಷರದ ಬೀಜದಿಂದ ಸಾಹಿತ್ಯ ಕೃತಿಗಳೆಂಬ ಫಸಲನ್ನು ಕಾಣಬಹುದಾಗಿದೆ. ಅದರಿಂದ ಬಿತ್ತಿ ಎನ್ನುವ ಪದ ಅರ್ಥಪೂರ್ಣವಾಗಿದೆ. ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ: ಇಂದಲ್ಲ ನಾಳೆ ಫಲ ಕೊಟ್ಟೇ ಕೊಡುತ್ತದೆ ಎನ್ನುವ ಸಾಲಿಗೆ ಈ ಬಿತ್ತಿ ಬರಹವು ಉತ್ತಮ ನಿದರ್ಶನವಾಗಿದೆ. ನಮ್ಮ ಹಿರಿಯರು ಬಹು ಹಿಂದಿನ ಕಾಲದಿಂದಲೂ ಈ ಬಿತ್ತಿ ಬರಹದ ಕೃಷಿ ಕಾರ್ಯ ಉತ್ತಮವಾಗಿ ನಡೆಸಿಕೊಂಡು ಬಂದಿರುವುದು ನಮ್ಮ ವಿಭಾಗದ ಗೋದಾಮು ಅಂದರೆ ಗ್ರಂಥಾಲಯದಲ್ಲಿರುವ ಅದರ ಫಸಲನ್ನು (ಬಿತ್ತಿ ಸಂಪುಟಗಳನ್ನು) ನೋಡಿದರೆ, ನಮ್ಮ ಹಿರಿಯರು ಎಷ್ಟೊಂದು ಸಮೃದ್ಧವಾದ ಫಸಲನ್ನು ಬೆಳೆದಿದ್ದರೆ ಎಂಬುದು ತಿಳಿಯುತ್ತದೆ. ೧೯೯೧ರಲ್ಲಿ ಪ್ರಾರಂಭಗೊಂಡ ಈ ಕೃಷಿ ಕಾರ್ಯದ ೩೪ ವರ್ಷದ ಫಸಲನ್ನು ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದೆ. ಯಾವ ಸಾಹಿತ್ಯಾಸಕ್ತರೂ ನಮ್ಮ ಗ್ರಂಥಾಲಯ ಎಂಬ ಗೋದಾಮಿಗೆ ಬಂದು ಈ ಫಸಲನ್ನು ಮನಃಪೂರ್ವಕವಾಗಿ ಸವಿದು ಜ್ಞಾನವೆಂಬ ಹೊಟ್ಟೆಯನ್ನು ತುಂಬಿಸಿಕೊಳ್ಳಬಹುದು. ಹಾಗೆಯೇ ಈ ವರ್ಷದ ೩೫ನೇ ಫಸಲನ್ನೂ ನಿಮ್ಮ ಮುಂದೆ ತರಲು ಸಾಧ್ಯವಾಗಿರುವುದು ನನಗೆ ತುಂಬ ಖುಷಿಯನ್ನು ತಂದಿದೆ. ಪ್ರತಿ ವರ್ಷವೂ ಬಿತ್ತಿ ಬರಹದ ಕೃಷಿಯ ಚಟುವಟಿಕೆ ನಡೆಯುತ್ತಲೇ ಬಂದಿದೆ. ಹಾಗೆಯೇ ಈ ವರ್ಷದ ಬಿತ್ತಿ ಬರಹದ ಕೃಷಿ ಉಳುಮೆಗೆ ಅತಿಥಿಯಾಗಿ ಪ್ರೊ. ಕೃಷ್ಣಮೂರ್ತಿ, ನಿವೃತ್ತ ಪ್ರಾಂಶುಪಾಲರು, ಗೋವಿಂದದಾಸ ಕಾಲೇಜು, ಸುರತ್ಕಲ್, ಇವರನ್ನು ಆಹ್ವಾನಿಸಲಾಗಿತ್ತು. ಹಾಗೆಯೇ ವಿಭಾಗದ ಅಧ್ಯಕ್ಷರು ಹಾಗೂ ಪ್ರಾದ್ಯಾಪಕರು ಉಳುಮೆ ಕಾರ್ಯವನ್ನು ಪ್ರಾರಂಭಿಸಿದರು. ಇನ್ನು ಬಿತ್ತನೆ ಕಾರ್ಯವನ್ನು ಯಶಸ್ವಿಗೊಳಿಸಲು ನಮ್ಮ ವಿಭಾಗದ ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾನಿಲಯದ ಹಲವು ವಿದ್ಯಾರ್ಥಿಗಳು ತಮ್ಮ ಲೇಖನ ಮತ್ತು ಕಾವ್ಯಗಳ ಮೂಲಕ ಸಹಕರಿಸಿದರು. ಬಿತ್ತಿದ ಬೆಳೆಯನ್ನು ಕಟಾವು ಮಾಡಲು ನಮ್ಮ ವಿಭಾಗವು ಬಿತ್ತಿ ಸಂಪಾದಕ ಮಂಡಳಿಯನ್ನು ರಚಿಸಿದೆ. ಈ ಸಂಪಾದಕ ಮಂಡಳಿಗೆ ಮೇಲ್ವಿಚಾರಕರಾಗಿ ಡಾ. ಯಶುಕುಮಾರ್ ಡಿ., ಅಧ್ಯಾಪಕರು, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಇವರು ಕಟಾವಿನ ಕೆಲಸಕ್ಕೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಉಳುಮೆ, ಬಿತ್ತನೆ, ಕಟಾವಿನ ಫಲವಾಗಿ ನೀವು ಬಿತ್ತಿದ ಫಸಲು ಇಂದು ನಿಮ್ಮ ಮುಂದಿದೆ.
ಉಳುಮೆಯ ಕಾರ್ಯ ನಿರ್ವಹಿಸಿದ ಪ್ರೊ.ಕೃಷ್ಣಮೂರ್ತಿ, ಪ್ರೊ.ನಾಗಪ್ಪ ಗೌಡ ಆರ್. ಪ್ರೊ.ಸೋಮಣ್ಣ ಹೊಂಗಳ್ಳಿ, ಪ್ರೊ.ಧನಂಜಯ ಕುಂಬ್ಳೆ; ಬಿತ್ತನೆಯ ಕಾರ್ಯ ಮಾಡಿದ ಪ್ರಥಮ ವರ್ಷದ ಮತ್ತು ದ್ವಿತೀಯ ವರ್ಷದ ಎಂ.ಎ. ವಿದ್ಯಾರ್ಥಿಗಳು. ಸಂಶೋಧಕರು ಹಾಗೂ ವಿಶ್ವವಿದ್ಯಾನಿಲಯದ ಹಲವು ವಿದ್ಯಾರ್ಥಿಗಳು: ಕಟಾವು ಕಾರ್ಯದ ಮಾರ್ಗದರ್ಶಕರಾದ ಡಾ.ಯಶುಕುಮಾರ್ ಡಿ., ಸಂಪಾದಕ ಮಂಡಳಿ: ಸಣ್ಣಪುಟ್ಟ ಸಲಹೆ-ಸಹಕಾರ ನೀಡಿದ ಸಂಶೋಧನಾರ್ಥಿಗಳಾದ ವಿನಯ್ `ಕುಮಾರ್ ಮತ್ತು ಅರತಿ ಹಾಗೂ ವಿಭಾಗದ ಕಚೇರಿ ಸಿಬ್ಬಂದಿಗಳಾದ ವಿದ್ಯಾ ಮತ್ತು ಜನಿತ: ಅಕ್ಷರ ತಿದ್ದುಪಡಿಗೆ ಸಹಕಾರ ನೀಡಿದ ನನ್ನೆಲ್ಲ ಪ್ರಿಯ ಸ್ನೇಹಿತರಿಗೂ ಈ ಬಿತ್ತಿಯ ಉಪಸಂಪಾದಕನಾಗಿ ನನ್ನ ಹೃತ್ತೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ