ಗುರುವಾರ, ಜೂನ್ 18, 2026

ಬಿತ್ತಿ ಶೀರ್ಷಿಕೆ ಲೇಖನ

 ಬಿತ್ತಿ - ಶೀರ್ಷಿಕೆಗಳೊಂದಿಗಿನ ನೆನಪಿನಾಟ


ದೃಶ್ಯಂ ೧ (ಉಳುಮೆ)

      ನಿಸರ್ಗದ ಜೊತೆ ಕಳೆದ ಕೆಲವು ಕ್ಷಣಗಳನ್ನು ಮೆಲುಕು ಹಾಕುವ ಆಸೆಯೊಂದಿಗೆ ನನ್ನ ಈ ಸಣ್ಣ ಪಯಣ. ನಲ್ಲೆಯ ಮನಂ ಒಪ್ಪದ ನುಡಿಯಲ್ಲಿಯೇ ಮನೆಯಿಂದ ಮಂಗಳೂರಿಗೆ ಮುಸ್ಸಂಜೆಯ ಪಯಣದ ಊರ ಹಾದಿಯಲಿ ಬ್ರಹ್ಮಗಲ್ಲು ದಾಟಿ ನನ್ನ ಯಾನವ ಬೆಳೆಸಿದೆ. ಧರಣಿಯ ಮೇಲೆ ಬಾಳಿನ ಬಂಡಿಯ ಸದ್ದಿನಲಿ ಪ್ರಕೃತಿಯ ಮಾತೆಯ ಕೂಗಿನಲಿ, ನಿಸರ್ಗದ ಮೌನ ಗೀತೆ ಕೇಳಲು, ಕಡಲಿನ ಮೌನ ನೋಡಲು, ಆ ಘಟ್ಟದ ದಿನದ ಅರಿವಿನಲ್ಲಿ ಪ್ರಕೃತಿಯೊಂದಿಗೆ ನಮ್ಮ ಜೀವನ ಸಾಗುತಿದೆ.ಅಖಂಡವಾದ ಶಕ್ತಿ ಈ ಪ್ರಕೃತಿಯ ಸೌಂದರ್ಯ ನೋಡುತ್ತಾ, ಬಾನ ದಾರಿಯಲ್ಲಿ ಗಿಳಿಗಳ ಕಲರವ ಕೇಳುತ್ತಾ ಬೆಳಕು ಕತ್ತಲಿನಾಟದಲಿ ವಿಶ್ವದ ಅತಿ ದೊಡ್ಡ ಹೂವ ಕಂಡೆ. ಇಳಿ ಸಂಜೆಯ ಭಾವ ಮೂಡುತಿರಲು ದೇವ ಮಂದಿರದಲ್ಲಿ ಕಂಡ ದೇವತೆಯಂತೆ ನನ್ನವಳು ಕಂಡಳು. ಆಕೆ ಎಂದರೆ ನಿಸರ್ಗದಲ್ಲಿ ಕಂಡವಳು, ನಿಷ್ಕಳಂಕ ಪ್ರೀತಿ ತೋರಿದವಳು. ಎಲ್ಲಿರುವಳೋ ಅವಳು? ಬರೆಯಲೊಂದು ಸಾಲು ಇದೆ ಅವಳಿಲ್ಲದ ರಾತ್ರಿಯಲಿ ಏನೆಂದು ಬರೆಯಲಿ? ನಾ ಕೊಟ್ಟ ಗುಲಾಬಿ ತಲುಪಿದೆಯೇ? ಏಕೆ ನನ್ನ ಪ್ರಶ್ನೆಗೆ ಉತ್ತರವಿಲ್ಲ? ಎಂಬೆಲ್ಲ ಪ್ರಶ್ನೆಗಳಿಗೆ ಹೇಳಿ ಹೋಗು ಕಾರಣ. ಅಪ್ಪನ ಅರಗಿಣಿ ನೀನು, ಅಮ್ಮನ ಪ್ರೀತಿಯ ಮಗಳು ನೀನು, ನನ್ನ ಅತ್ತೆ ಕೊಟ್ಟ ಉಡುಗೊರೆ ನೀನು, ನನ್ನ ಪ್ರೀತಿಯ ಸವಿನೀನು, ನನ್ನ ಅಮ್ಮನ ಮುದ್ದಿನ ಸೊಸೆ ನೀನು, ಅಮ್ಮನ ನೆರಳಿನಲಿ ಮಗಳ ನಾಳೆಯ ಕನಸ ಹೊತ್ತಿರುವವಳು ನೀನು. ಅಪ್ಪ ಅಮ್ಮನನ್ನು ತೊರೆದು. ಸಂಪ್ರದಾಯದ ಪಾಲನೆಯಲಿ ಸ್ತ್ರೀಯರ ಪಾತ್ರದ ಕತ್ತಲ ಕನ್ನಡಿಯಂತೆ ಪ್ರತಿಬಿಂಬಿಸಿದೆ. ನೀನು ಒಬ್ಬ ತಾಯಿ ಮಹಾತಾಯಿಯಾದೆ. ನನ್ನವಳ ನೋಟವೇ ಭಕ್ತಿ ಪ್ರೇಮದ ನೋಟ, ನನ್ನಾಸೆ ಮಲ್ಲಿಗೆಯೇ ಪ್ರೇಮದೊಂದಿಷ್ಟು ದೂರ ಬಂದರು ನಿನದೇ ನೆನಪು ದಿನವೂ ಮನದಲ್ಲಿ ಹೋಳಿ ಹಬ್ಬದಲ್ಲಿ ರಂಗು ಎರಚಿದ ನೆನಪು. ನನ್ನವಳ ಸೌಂದರ್ಯದ ಸೊಬಗು ನನ್ನನ್ನು ಹೃದಯದಾನವ ಮಾಡಿ ಪ್ರೇಮ ಖೈದಿಯಲಿ ಬಂಧಿಯಾಗಿಸಿದೆ. ಹುಚ್ಚು ಮನಸ್ಸಿನ ಮನದ ಮಾತು ಕನಸಿನಲಿ ಕಂಡು ಎಚ್ಚರವಾಯಿತು. ಕನಸಿನಲ್ಲಿನ ಚಿಂತೆ ನೀನೇಕೆ ಹೀಗೆ? ಕಲ್ಪನೆಯ ಛಾಯೆಯ ಹಾಗೆ ಕಾಡುವೆ ಎಂದು ಮರಳಿ ಕೌದಿ ಹೊದ್ದುಕೊಂಡು ಮಲಗಿದೆ. ಅಂತೂ ಪ್ರಕೃತಿಯ ಧಾರಧಾರೇಂದ್ರನ ಮಡಿಲಲಿ ಮುನಿದ ಮೋಡಣ್ಣನೊಟ್ಟಿಗೆ ಕಾನನವ ದಾಟಿ ಮಂಗಳೂರು ತಲುಪಿದೆ. 'ನೋಂಬ್' ಆಚರಣೆಯಂತೆ ಒಂದು ಗುಟುಕು ನೀರು ಕುಡಿಯದೆ ಹಸಿವಾಗಿತ್ತು ವಿಶ್ವ ಸಂಚಾರಿ ಕಬಾಬ್ ತಿಂದೆ. ಆ ರಾತ್ರಿ ಪಾಳಿಯ ಅಂಗಡಿಗೆ ಕೊನೆಯ ಗಿರಾಕಿ ನಾನೇ ಆಗಿದ್ದೆ. ಮುಂಜಾನೆ ಮಸುಕಿನಲಿ ಪಯಣದ ದಾರಿಯಲ್ಲಿನ ಘಟನೆ ಅವಿಸ್ಮರಣೀಯವಾಗಿದೆ.


ದೃಶ್ಯಂ ೨ (ಬಿತ್ತಿ)

      ಮಂಗಳೂರು ವಿಶ್ವವಿದ್ಯಾನಿಲಯದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ತಲುಪಿದೆನು. ಕಂಡೊಡನೆ ನನ್ನವನು ನಿತ್ಯ ಸತ್ಯದಂತೆ ಹೇಳಿದನು ನೀವ್ಯಾರೋ? ನಾವ್ಯಾರೋ? ಶ್ರಾವಣದ ಸುಗ್ಗಿಯಲಿ ಚರಗದ ದಿನ ಮುಗಿಸಿ ವೃಕ್ಷ ಮಾತೆಯ ಮಡಿಲಲಿ ಮಿಂದು ಒಣ ಎಲೆಯ ಮೇಲೆ ಬೆಳಕಿನ ರೂಪದಲಿ ಹೆಜ್ಜೆಯನಿಟ್ಟು ಬಂದಿರುವ ನನಗೆ ಈ ಸಾಲಿನಲ್ಲೇ ಅವನ ನೋವಿನ ಸಂಕಟ ಅರ್ಥವಾಯಿತು. ಇವನೇ ಅಲ್ಲವೇ ಎಲ್ಲರ ಮೊದಲ ಸಂಬಳದಲ್ಲಿ ತೇಜಸ್ವಿ ಪ್ರತಿಷ್ಠಾನ, ಕರಿಂಜೇಶ್ವರ ಬೆಟ್ಟ, ಮಂಜರಾಬಾದ ಕೋಟೆ, ಬೆಳ್ಳಲ್ ತೀರ್ಥ, ನಾಗಬನ, ಎಲ್ಲಮ್ಮನ ಜಾತ್ರೆಯಲಿ ರಥ ಎಳೆಯೋಣ ಎಂಬೆಲ್ಲಾ ಪ್ರವಾಸ ಯೋಜನೆಯ ಕೈಗೊಂಡಿದ್ದು ಅದು ಸಫಲವಾಗದೆ ಆಯಾ ತಪ್ಪಿ ಬಿದ್ದು ಹೋದವನು. ಇವನ ಪ್ರಾಮಾಣಿಕತೆಗೆ ಸಿಕ್ಕ ಪ್ರತಿಫಲವೇ ಇದು. ನಮ್ಮ ಕ್ಲಾಸೇ ಚೆಂದ ಅಂತ ಹೇಳಿ ಸುಮ್ಮನಿರುವೆ ನೀನು ಎಂದುಕೊಂಡರೆ ಸಂಕಲ್ಪ ಗೀತೆಯಂತೆ ನೀವೇಕೆ ಹೀಗೆ? ಅವರೇಕೆ ಹಾಗೆ?, ರಾಜಕೀಯ ನಾಯಕರಲ್ಲ ಧಾರ್ಮಿಕ ನಾಯಕರು ಎಂಬೆಲ್ಲಾ ಪ್ರಶ್ನೆಗಳನ್ನು ಎತ್ತಿದ ಕೆಚ್ಚೆದೆಯ ವೀರ, ನಾ ಕಂಡ ಕರ್ಣ ಈ ಪುಟ್ಟ ಜೀವ, ಹೌದು ಗೆಳೆಯ 'ನಮ್ ಅತ್ರ ಬೇಡ' ಎನ್ನುವವರಿಗೆ ಹೇಳು ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಗೆಳೆಯರೆಂದರೆ ಯಾರು? ಹಸಿರು ಹಾದಿಯ ಸ್ನೇಹದಲಿ ಗೋಡೆಗಳು ನಿಂತರು ಒಡೆದು ಮುನ್ನುಗಿಸುವವರು. ಪುಷ್ಪರಾಜ್ ಅವರ ಪುಷ್ಪನ ಬರಹಗಳನ್ನು ಸ್ಮೃತಿಸಿಕೊ, ಹುಟ್ಟಿಗೊಂದೇ ಬದುಕು ಯಾಂತ್ರಿಕ ಬದುಕು ಯಾಕೆ? ಸರಪಳಿಯ ಪ್ರಜಾಪ್ರಭುತ್ವದಲ್ಲಿ ಶಾಸ್ತ್ರಗುಳು ನುಡಿಯುತ್ತವೆ ದಲಿತರೇಕೆ ಇನ್ನೂ ದಾರಿದ್ರರು? ಯಾರದೋ ಕೈಗೊಂಬೆಯಾದ ನಾವು ಗುಲಾಮರಂತೆ, ಒಳರೋಗಿಗಳಂತೆ ಬದುಕುವ ಬದಲು ಭಿಕ್ಷಾಟನೆ ವಿರುದ್ಧ ಸಮುದಾಯ ಜವಾಬ್ದಾರಿ ಹೊತ್ತು ಒಳ್ಳೆಯ ಅಭ್ಯಾಸ ರೂಡಿಸಿಕೊಳ್ಳೋಣ. ಇವುಗಳಿಂದಲೇ ಜೀವನ ಚಕ್ರದ ಸೋಲು ಗೆಲುವಿನ ಜ್ಞಾನದ ಅರಿವು ಉಂಟಾಗುವುದು. ಹುಡುಗರೇ ಹೀಗೆ! ಕಲ್ಲು ಬಂಗಾರ ಕೊಡುತ್ತಿತ್ತು ಎಂದು ನಂಬಿ ಮೌನದ ಮಮತೆಯ ರೂಪ ಅಪ್ಪನಂತೆ ಯಾರಿಗೂ ಕಾಣದಂತೆ ಕಣ್ಣೀರ ಧಾರೆ ಹಾಕುವರು. ಆನ್ ಎಜುಕೇಟೆಡ್ ಅಪ್ಪ ಅಮ್ಮ ಪರೀಕ್ಷೆ ಎದುರಿಸಿದಂತೆ ಸಮಾಧಾನ, ತಾಳ್ಮೆಯೊಂದಿಗೆ ಬದುಕಿನ ಪರೀಕ್ಷೆ ಎದುರಿಸುವರು, ಹಣೆಗೆ ಸಿಂಧೂರವಿಟ್ಟು ಯುದ್ಧಕ್ಕೆ ಸಿದ್ದರಾಗುವುದು, ಯುದ್ಧವೆಂದರೆ ಜಾಗತಿಕ ಯುದ್ಧವಲ್ಲ ಮನಸಿನ ಮನಿಷಾ ಯುದ್ಧ. ಹೆಪ್ಪುಗಟ್ಟಿದ ರಕ್ತದ ಕ್ಷೇತ್ರದಲ್ಲಿ ಯುದ್ಧ ಮೌನ ತಾಳಿದರು ಯುದ್ಧ ಅಲ್ಲಿ ಪರಿಣಾಮ ಇಲ್ಲಿ ಎಂಬಂತೆ ಎಲ್ಲರ ಮನಸಲ್ಲಿ ಮೌನ ಚಿಂತನೆಯ ಬೀಜ ಬಿತ್ತುವುದು.


ದೃಶ್ಯಂ ೩ (ಕಟಾವು)

      ನೀನು ಬಸ್ಸೇರಿದ ಮೇಲೆಯೇ “ಚಾಲಕರೇ ನಿಧಾನವಾಗಿ ಚಲಿಸಿ ಮಳೆ ಬರುತ್ತಿದೆ" ಎನ್ನೋ ಮಾತು ಕೇಳಿ ನಿನ್ನೊಡನೆ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು. ಈ ವಿಭಾಗಕ್ಕೆ ತಲುಪಿದೆ. ಅಣ್ಣ ತಂಗಿಯರ ಅನುಬಂಧದಲಿ ಎಲ್ಲರೊಂದಿಗೆ ಬೆರೆತೆ. ತರಗತಿಯಲ್ಲಿ ನವಿಲು ಗರಿಯ ನೋಟ, ನನ್ನ ಪುಟ್ಟ ಕವನಗಳ ಸುಳಿದಾಟ, ಮಿನುಗು ನಕ್ಷತ್ರಗಳ ಓಡಾಟ, ಚಂದ ಮುಕುಂದನಿವನು ಎನ್ನೋ ಆಟ ಪಾಠ, ಹಾ! ಹಾ! ನಮ್ ಕ್ಲಾಸೇ ಚೆಂದ, ವಸಂತದ ಸ್ಪರ್ಶದಲಿ ಮಳೆ ಸುರಿವ ಪರಿ ಈ ಪ್ರೀತಿಯೋಲ್ ಮೊದಲ ಮಳೆಯ ಮೊದಲ ಕವಿತೆ ಹುಟ್ಟಿತು. ನಿತ್ಯೋತ್ಸವದ ನೆಪದಲ್ಲಿ, ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಬಣ್ಣದ ವೇಷದ ರಂಗೋಲಿ ಮತ್ತು ಅವರೊಂದಿಗೆ ಮಾತು ಕತೆ ನಡೆಯಿತು. ಬಾಲ್ಯದ ಗೆಳತಿಯಂತಿರುವ ಬಿತ್ತಿ ಮತ್ತು ಅವಳು ಅಂದರೆ ಸಂಪಾದಕೀಯೊಂದಿಗೆ ನನ್ನ ನೆನಪುಗಳನ್ನು ಹಂಚಿಕೊಂಡೆ. ಸಭೆಯ ಬಿಸಿ ಕಾವಿನಲ್ಲಿ ಮೊದಲು ಮಾಡಿದ ಆಡುಗೆ ಊಟವ ಉಂಡು ತರಗತಿಗೆ ಕುಳಿತೆ. ವಿಶ್ವವಿದ್ಯಾನಿಲಯದ ವತಿಯಿಂದ ಉಪನ್ಯಾಸ ಮಾಲಿಕೆ ನೀಡುವ ಸೋಮಣ್ಣ ಸರ್ ಅವರು ಸ್ಪರ್ಧಾರ್ಥಿಗಳ ಓದಿನ ಸಹಾಯಕ್ಕಾಗಿ ನಾ ಹೊಲೆಯ ಪುಸ್ತಕ ಪರಿಚಯದೊಂದಿಗೆ ಹಳೆಯ ಪುಸ್ತಕದ ರಾಶಿಯನ್ನೇ ಉಣಬಡಿಸಿದರು. ನಾಗಪ್ಪ ಸರ್ ಅವರು ಬಸವಣ್ಣನವರ ವಚನ ರಚನದ ತತ್ವವನ್ನೇ ಬೋಧಿಸಿದರು. ಧನಂಜಯ ಸರ್ ಅವರು ಮರಳಿ ಮಣ್ಣಿಗೆಯ ಪುಸ್ತಕ ವಿಮರ್ಶೆಯೊಂದಿಗೆ ಕನಕ ಕೀರ್ತನದ ಕವನಗಳ ಸುರಿಮಳೆಯನ್ನೇ ನೀಡಿದರು. ಯಶು ಸರ್ ಅವರು ಸ್ತ್ರೀವಾದ ಚಿಂತನೆಯ ವಿಮುಕ್ತಿಯಂತಹ ನನ್ನೆದೆಯ ಪುಸ್ತಕದ ಮೂಲಕ ಬುದ್ಧನಾದರೇನು ಶಿಷ್ಯರು ತರಗತಿಯಲ್ಲಿ ತೂಗಡಿಕೆ ಬಿಡುವರೇ. ಇವರೆಲ್ಲ ಬುದ್ಧಿವಂತರು. ಭವಿಷ್ಯದ ಭಾರತ ಗೆಲುವಾಗಲು ಕೆಲವು ಆಲೋಚನೆಗಳನ್ನು ಬಿತ್ತಿದವರು. ಕನ್ನಡವೇಗಿದೆ? ಕನ್ನಡಕ್ಕೆ ಕಾವಲ್ಯಾರು? ಹಿಂದಿ ಬೇಡವೆ? ಎಂಬೆಲ್ಲ ಪ್ರಶ್ನೆಗಳಿಗೆ ಸ್ಫೂರ್ತಿ ನೀಡಿದವರು. ಭಾರತಾಂಬೆಯಲ್ಲಿ ಬಿನ್ನಹ, ವಿಶ್ವ ಗುರು ನಮ್ಮ ಭಾರತ, ನಮ್ಮ ಹೆಮ್ಮೆ ಕರುನಾಡಿನ ಕನ್ನಡಿಗನ ಕರುಳ್ಳುಡಿ. ಕನ್ನಡವ್ವನ ಮೇಲಿನ ಅಭಿಮಾನ ಹೆಚ್ಚಿಸಿತು. ನಿನ್ನ ಸಾರ್ವಭೌಮಕ್ಕೆ ಸರಿ ಸಾಟಿ ಯಾರು?


ದೃಶ್ಯಂ ೪ (ಬೆಳೆ)

      ಅವನಿ ಪ್ರಕೃತಿಯ ಮಂಗಳ ಸಾಬಾಂಗಣದಲಿ ನಡೆದ ಸಂಭ್ರಮದಲ್ಲಿ ಸ್ತ್ರೀಯರ ಪಾತ್ರ. ಹೆಣ್ಣು ಮಕ್ಕಳ ಸೊಬಗಿನ ನೋಟ. ಹುಡುಗರಲಿ ಕಾಣದ ಹಂಬಲ ಹುಟ್ಟಿಸಿತು. ಓ ಕನ್ನಡಿಯೇ ನೀನೆಷ್ಟು ಕ್ರೂರಿ ನಿನ್ನ ಬಳಿಯೇ ಅವಳ ನೋಟ. ಮಸುಕು ಕನ್ನಡಿಯಲಿ ನಸು ನಕ್ಕ ಗೆಳತಿಯ ನೋಡಿ ಯಾರ ಹೃದಯದಲ್ಯಾರ ನೆನಪು ಹುಟ್ಟಿ ತಮ್ಮ ಇರುವಿಕೆಯನ್ನು ಮರೆವು ಆವರಿಸಿಕೊಂಡಿತೋ ಬಲ್ಲವರ್ಯಾರು. ಮುದ್ದಾಗಿರುವವಳು ಮುಟ್ಟುವಂಗ ಎಂಬ ಚೆಲುವೆಯ ನೋಡಿ ಸುಂದರವಾದ ಹುಡುಗಿ ನೀನು ಸಂತೆಗೆ ಯಾಕೆ ಹೋಗಿದ್ದೆ ಎಂದಿತು ಮನ. ಸೂರ್ಯಕಾಂತಿಯ ಕಣ್ಣು ಎಲ್ಲರನ್ನು ಸೆಳೆಯಿತು. ಕೇಳೇ ಕೇಳೇ ನನ್ನಯ ನೋವಿನ ಹಾಡಿನಲ್ಲಿಯೂ ಚಂಚಲೆ ನಿನ್ನ ಮನಸೇ ಹಾಗೆ ಎಂದು ಕುಣಿದರು. ಹೆಣ್ಣೆಂಬ ಮಾಯೆ ಎಲ್ಲರನು ಆವರಿಸಿದರು ನಾನೆಂದರೆ ಇಷ್ಟೇ ಎನ್ನುವಂತೆ ಚಂಚಲಗೊಳಿಸಿದ ಚಂಚಲೆಯರ ಮನಸ್ಸಿನವಳೊಂದಿಗೆ ಎಲ್ಲರೂ ಕುಣಿದು ಕುಪ್ಪಳಿಸಿದರು. ಸೀಕ್ರೆಟ್ ಸಂತ ಆಟದ ಅಭಿಪ್ರಾಯದಲಿ ಬಾಲ್ಯ ಜೀವನದ ಬೊಳ್ಳಿಯೊಂದಿಗಿನ ಆಟ ನೆನಪಾಗಿ ಪ್ರಿಯ ಸಖಿಗೆ ವರ್ಣಧಾರೆ ಎಂಬ ಕವನ ಬರೆದೆ. ನಿರ್ಧಾರ ತೆಗೆದುಕೊಳ್ಳುವ ಸಿದ್ದಾಂತದ ಗೊಂದಲದಲಿ 'ನಾನು ಕಾರಂತ' ನಾಟಕದಲಿ ಪಂಜರದ ಗಿಳಿಯಂತೆ ನಾನ್ಯಾಕ ಬಲಿಯಾದೆ? ಯಾರಿಗೆ ಬೇಕು ಈ ಟಿವಿ ಕಾರ್ಯಕ್ರಮ, ಚಲನಚಿತ್ರ ವಿಮರ್ಶೆಯ ನಾಟಕ? ನನ್ನದೇ ಅಸ್ತಿತ್ವದ ಅನ್ವೇಷಣೆಯಲ್ಲಿ ಹುಡುಕ ಹೊರಟಿದೆ. ಅರ್ಥವಿಲ್ಲದ ಜೀವನದಲ್ಲಿ ಅರ್ಥಪೂರ್ಣ ಸಾಲುಗಳು ಕಂಡವು. ಆಂಟೋನಿಯೊ ಗ್ರಾಮ್ಮಿ ಅವರ ಚಿಂತನೆ. ಕನಕ ತಿದ್ದಿದ ಮನಸ್ಸು, ನೆಹರೂಜಿಯನ್ನು ಕಾಡಿದ ಘೋಸ್ಟಿನ ಕವಿತೆ. ಅಜ್ಜನೇಳಿದ ತೀರ್ಪು ನೆನಪಾಯಿತು. ಕುರುಡನ ಕಣ್ಣು ಎಲ್ಲಿ ಹೋದರು ಒಂದು ಊಹೆ ಮೇಲೆಯೇ ನಡೆಯುತ್ತಾನೆ. ಹಾಗೆಯೇ ಇಲಿಯ ಮೇಲಿನ ದ್ವೇಷವ ಬಿಟ್ಟು ಸ್ವಾತಂತ್ರ್ಯದೆಡೆಗೆ ಸಾಗಬೇಕು. ನನ್ನ ಆರಾಧ್ಯ ಓ! ಒಳ್ಳೆ ದೇವರೇ, ನಾ ಬಯಸುವೆ ನವಜೀವನ ಎಂದು ಬೇಡಿಕೊಂಡೆ. ದೇವರ ಕರೆ ಬರದೆ ಇರಲು ದೇವರಿಗೂ ನೋವುಂಟು ಎಂದು ನನ್ನ ಗೆಳೆಯ ಹೇಳಿದ ಮೇಲೆ ಕೆಲಸ ಬದಲು ಕಲಿಕೆಗೆ ಮನಸಿಟ್ಟು ನನ್ನ ಹೆಜ್ಜೆಯ ಹಾದಿಯಲಿ ಮುನ್ನಡೆದೆ.  ಸೊಲೈಲು ತುಳುನಾಡ್, ಈ ತುಳು ನಾಡಿಗೆ ನಮನಗಳು, ತುಳು ನೇಲಕಿ ನಮಸ್ಕಾರಂ, ತುಳು ಭೂಮಿಲ ನಮನ್......


      ಈ ಲೇಖನವು ಕೇವಲ ನನ್ನ ಬದುಕಿನ ಪುಟವಲ್ಲ. ಅವು ನಿಮ್ಮದೆ ಬರಹದ ನೋಟ. ನೀವು ಇದುವರೆಗೂ ನೀಡಿರುವ ಲೇಖನ, ಕಾವ್ಯಗಳ ಶೀರ್ಷಿಕೆಯನ್ನೆ ಇಟ್ಟುಕೊಂಡು ಬರೆದ ಸತ್ಯಾಸತ್ಯದ ನನ್ನ ನೆನಪಿನೊಂದಿಗಿನ ಇದು ನಿಮ್ಮದೆ ಆಟ. ನೀವು ಬಿತ್ತಿದ ಪದಗಳು ಇಂದು ನೆನಪುಗಳ ಮರವಾಗಿ ಬೆಳೆದಿದೆ. ಆ ಮರದ ನೆರಳಿನಲ್ಲಿ ಕುಳಿತು ಹಿಂದುರುಗಿ ನೋಡಿದಾಗ, ನನ್ನ ಬದುಕೇ ಒಂದು ಕವನದಂತೆ ಕಾಣುತ್ತಿದೆ.


ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...