ಸೋಮವಾರ, ಜೂನ್ 1, 2026

ಸಂಚಿಕೆ - ೨೨

ನಾಗಬನ

      ಒಂದು ಸುಂದರ ಬಯಲು ಪ್ರದೇಶ, ಕಣ್ಣು ಹಾಯಿಸಿದ್ದಷ್ಟು ದೂರದವರೆಗೆ ಹಚ್ಚ ಹಸಿರಿನಿಂದ ಕಂಗೊಳಿಸುವ ಹೊಲಗದ್ದೆಗಳು. ಆಕಾಶದೆತ್ತರಕ್ಕೆ ಹಾರಿ ಸಂಭ್ರಮಿಸುವ ಪಕ್ಷಿ ಪತಂಗಗಳು, ಪ್ರಕೃತಿ ತನ್ನೆಲ್ಲ ಸೌಂದರ್ಯವನ್ನು ಧಾರೆ ಎರೆದಂತಿತ್ತು ಆ ಬಯಲು. ಆ ಬಯಲಿನ ಮಧ್ಯದಲ್ಲೊಂದು ಸುಂದರವಾದ ನಾಗಬನ ನಾಗನೊಂದಿಗೆ ಬೆರೆತ ಬ್ರಹ್ಮ ರಾಕ್ಷಸನ ಸಾನಿಧ್ಯ ತಲತಲಾಂತರದಿಂದ ಆ ಊರಿನ ಜನರು ಭಯ ಭಕ್ತಿ ಶ್ರದ್ದೆ ಗೌರವದಿಂದ ಆರಾಧಿಸುತ್ತಿದ್ದ ನಾಗದೇವತೆಯ ಹುತ್ತ ಮತ್ತು ಬ್ರಹ್ಮ ರಾಕ್ಷಸನ ಕಲ್ಲು ಬನದೊಳಗಿತ್ತು. ಜನರು ಹಲವು ಬಾರಿ ಅಲ್ಲಿ ಜೀವಂತ ನಾಗನ ದರ್ಶನವನ್ನು ಪಡೆದು ಕೃತಾರ್ಥರಾಗಿದ್ದರು. ಸಾಮಾನ್ಯವಾಗಿ ಜನರು ಅಲ್ಲಿ ಸಂಚರಿಸಲು ಭಯಪಡುತ್ತಿದ್ದರು. ನಾಗರ ಪಂಚಮಿಯಂದು ಜೀವಂತ ನಾಗನಿಗೆ ಇರುವ ಹುತ್ತಕ್ಕೆ ಹಾಲೆರೆದು ಭಕ್ತಿಯಿಂದ ನಮಿಸುತ್ತಿದ್ದರು. ಎಷ್ಟೋ ಜೀವಿಗಳಿಗೆ ಆಶ್ರಯವಾಗಿತ್ತು ಆ ನಾಗಬನ. ಯಾರ ಭಯವೂ ಇಲ್ಲದೆ ನೆಮ್ಮದಿಯಿಂದ ಅಲ್ಲಿ ವಾಸವಾಗಿದ್ದವು. ಬನದೊಳಗಿನ ತಂಪಾದ ವಾತಾವರಣವೇ ಅವುಗಳು ಅಲ್ಲಿ ಜೀವಿಸಲು ಮುಖ್ಯ ಕಾರಣವಾಗಿತ್ತು.

      ಆದರೆ ಇಂದು ಕಾಲ ಬದಲಾಯಿತು. ಮನುಷ್ಯನಲ್ಲಿ ದುರಾಲೋಚನೆಗಳು ಅಧಿಕಗೊಂಡವು. ಪ್ರಕೃತಿಯ ಸಹಜ ಸೃಷ್ಟಿಯನ್ನು ನಾಶ ಮಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಆಧುನಿಕತೆಗೆ ತೆರೆದುಕೊಳ್ಳುವ ನಿಟ್ಟಿನಲ್ಲಿ ಅಲ್ಲಿದ್ದ ಸುಂದರ ನಾಗಬನವನ್ನು ನಾಶ ಮಾಡಿದರು. ಊರವರೆಲ್ಲ ಸೇರಿ ಅಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಮನೋಹರವಾದ ನಾಗಬನವನ್ನು ನಾಶ ಮಾಡಿದರು. ಕೆಲವೇ ದಿನಗಳಲ್ಲಿ ಕಾಂಕ್ರೀಟಿನ ಕಟ್ಟೆ ಮೇಲೆದ್ದು ನಿಂತಿತು. ಬ್ರಹ್ಮಕಲಶ, ನಾಗ ಪ್ರತಿಷ್ಠಾಪನೆ ಇತ್ಯಾದಿಗಳ ಮೂಲಕ ಧಾರ್ಮಿಕ ಕಾರ್ಯಕ್ರಮವೇನೂ ವಿಜೃಂಭಣೆಯಿಂದ ನಡೆಯಿತು. ಆದರೆ ಜೀವಂತ ನಾಗನಿದ್ದ ನಾಗಬನದಲ್ಲಿ ಕಲ್ಲಿನ ನಾಗನನ್ನು ಇರಿಸಿ ಪೂಜಿಸಿದರು. ಎಲ್ಲರೂ ಸಂತೃಪ್ತ ಭಾವನೆಯಿಂದ ಪ್ರಸಾದ ಸ್ವೀಕರಿಸಿ ತೆರಳಿದರು. ಆದರೆ ಪಾಪ ಆ ನಾಗಬನದಲ್ಲಿದ್ದ ಮೂಕ ಜೀವಿಗಳು ನಾಗ ಸಂತತಿಗಳು ಬಿರು ಬಿಸಿಲಿನ ಜಳವನ್ನು ತಾಳಲಾರದೆ ಸಮೀಪ ಯಾರದ್ದೋ ಹಿತ್ತಲಿಗೆ ಹೋಯಿತು. ಇದನ್ನು ಕಂಡ ಮನೆಯವರು ಹಾವಾಡಿಗನನ್ನು ಕರೆದು ಹಾವನ್ನು ಹಿಡಿಸಿ ದೂರದ ಕಾಡಲ್ಲಿ ಬಿಡುವಂತೆ ಹೇಳಿದರು. ಇನ್ನೂ ಕೆಲವು ಹಾವುಗಳು ಬಿಸಿಲಿನ ತಾಪವನ್ನು ತಾಳಲಾರದೆ ತಮ್ಮ ಪ್ರಾಣವನ್ನೇ ಕಳೆದುಕೊಂಡವು. ಹಾಗೆಯೇ ಅಲ್ಲೇ ಇದ್ದ ಬ್ರಹ್ಮ ರಾಕ್ಷಸನು ತನ್ನ ನೆಲೆಯನ್ನೇ ಕಳೆದುಕೊಂಡು ದೂರದ ಕಾಡಿಗೆ ಹೊರಟು ಹೋದ. ಇಂದು ಅಲ್ಲಿ ಪೂಜೆ, ಅಭಿಷೇಕ ಎಲ್ಲವೂ ನಡೆಯುತ್ತಿದೆ. ಆದರೆ ಜೀವಂತ ನಾಗನಿಗಲ್ಲ, ಬದಲಾಗಿ ಕಲ್ಲಿನ ನಾಗನಿಗೆ. ಬಹುಷಃ ಪ್ರಕೃತಿಯೊಳಗಿನ ಜೀವಂತಿಕೆಯನ್ನು ನಾಶ ಮಾಡುವುದು ಎಂದರೆ ಇದೇ ಅನ್ನಿಸುತ್ತದೆ.

      ಪ್ರಿಯ ಓದುಗರೇ, ನಮ್ಮ ಹಿರಿಯರು ಅನಾದಿಕಾಲದಿಂದಲೂ ಆಚರಿಸಿಕೊಂಡು ಬಂದ ಪ್ರತಿಯೊಂದು ಆಚರಣೆಯಲ್ಲೂ ಒಂದೊಂದು ಅರ್ಥವಿದೆ, ವೈಜ್ಞಾನಿಕ ಕಾರಣಗಳಿವೆ. ಆದರೆ ನಾವಿಂದು ಆಧುನಿಕತೆ ಹೆಸರಿನಲ್ಲಿ ಪ್ರಕೃತಿ ಮಾತೆಯ ಸಹಜ ಸೌಂದರ್ಯವನ್ನು ನಾಶ ಮಾಡುತ್ತಿದ್ದೇವೆ. ನಾವೂ ನಾಶ ಹೊಂದುತ್ತಿದ್ದೇವೆ. ಆಧುನಿಕತೆ, ನಗರೀಕರಣ ಎಂಬ ಹೆಸರಿನಲ್ಲಿ ಮರ-ಗಿಡಗಳನ್ನು ಕಡಿದು ಹಾಕುತ್ತಿದ್ದೇವೆ. ಬಹು ಅಂತಸ್ತಿನ ಗಗನಚುಂಬಿ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಆದರೆ ದಣಿದು ಬಂದಾಗ ಕೂರಲು ತಂಪಾದ ಗಾಳಿ ಬೀಸಲು ಒಂದು ಮರವಿರದಂತಾಗಿದೆ. ಇದರ ಪರಿಣಾಮವಾಗಿಯೇ ನಾವಿಂದು ಅನುಭವಿಸುತ್ತಿರುವ ತಡೆಯಲಾರದ ತಾಪಮಾನ ಏರಿಕೆ. ಮುಂದೆಯೂ ಹೀಗಾದರೆ ಈ ಭೂಮಿಯಲ್ಲಿ ನಮ್ಮ ಮುಂದಿನ ತಲೆಮಾರಿಗೆ ಏನಿದೆ?

ಸ್ನೇಹ ಬಿ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...