ಸೋಮವಾರ, ಜೂನ್ 1, 2026

ಸಂಚಿಕೆ - ೨೨

ನಾನು ಕಾರಂತ' ನಾಟಕದ ಪ್ರೇಕ್ಷಕರ ಅಭಿಪ್ರಾಯ

      ದಿನಾಂಕ ೨೯-೦೫-೨೦೨೬ರಂದು ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಶಿವರಾಮ ಕಾರಂತ ಅಧ್ಯಯನ ಪೀಠದ ವತಿಯಿಂದ ಮಂಗಳ ಸಭಾಂಗಣದಲ್ಲಿ 'ನಾನು ಕಾರಂತ' ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಈ ಕಾರ್ಯಕ್ರಮಕ್ಕೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಮಂಗಳೂರು ಮತ್ತು ಸುತ್ತಮುತ್ತಲಿನ ಭಾಗಗಳ ನಾಟಕಾಸಕ್ತರು ಹಾಗೂ ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ವಿಭಾಗದ ವಿದ್ಯಾರ್ಥಿಗಳು ನಾಟಕದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿ ತಮ್ಮ ಅಭಿನಯ ಕೌಶಲ್ಯವನ್ನು ಮೆರೆದರು.

      ನಾಟಕ ವೀಕ್ಷಿಸಿದ ಪ್ರೇಕ್ಷಕರಲ್ಲಿ ಹಲವರು ತಮ್ಮ ಅನಿಸಿಕೆಗಳು ಮತ್ತು ಮೆಚ್ಚುಗೆಗಳನ್ನು ನಮ್ಮ ವಿಭಾಗದ ವಾಟ್ಸ್ ಆಪ್ ಗುಂಪಿನ ಮೂಲಕ ಹಂಚಿಕೊಂಡಿದ್ದಾರೆ. ನಾಟಕದ ಕಥಾವಸ್ತು. ವಿದ್ಯಾರ್ಥಿಗಳ ಅಭಿನಯ, ನಿರ್ದೇಶನ ಹಾಗೂ ಕಾರಂತರ ವ್ಯಕ್ತಿತ್ವವನ್ನು ರಂಗಭೂಮಿಯ ಮೂಲಕ ಪರಿಣಾಮಕಾರಿಯಾಗಿ ಮೂಡಿಬಂದಿರುವ ಕುರಿತು ಅವರು ಪ್ರಶಂಸಿಸಿದ್ದಾರೆ. ಪ್ರೇಕ್ಷಕರು ವ್ಯಕ್ತಪಡಿಸಿದ ಕೆಲವು ಅಭಿಪ್ರಾಯಗಳನ್ನು ಈ ಮುಂದಿನಂತೆ ನೀಡಲಾಗಿದೆ.


ಪ್ರೇಕ್ಷಕರ ಅಭಿಪ್ರಾಯಗಳು :-

      ನಮ್ಮ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಇವತ್ತು ನಡೆದ 'ಶಿವರಾಮ ಕಾರಂತರ ಬದುಕು ಮತ್ತು ಬರಹ'ವನ್ನು ಆಧರಿಸಿದ ನಾಟಕ ನಿಜಕ್ಕೂ ಮನಮುಟ್ಟುವ ಅನುಭವ ನೀಡಿತು. ಕಾರಂತರಾಗಿ ಅಭಿನಯಿಸಿದ ಕಲಾವಿದರು ಅವರ ಸರಳತೆ, ಜಿಜ್ಞಾಸೆ ಮತ್ತು ಬಂಡಾಯದ ಗುಣವನ್ನು ಅದ್ಭುತವಾಗಿ ತೆರೆದಿಟ್ಟರು. ಯಕ್ಷಗಾನದ ಕಲಾವಿದನಿಂದ ಹಿಡಿದು ಕೊನೆಯ ತನಕ ಬಂದ ಪಾತ್ರಗಳು ಕಾರಂತರ ಬಹುಮುಖಿ ವ್ಯಕ್ತಿತ್ವವನ್ನು ಒಂದೇ ವೇದಿಕೆಯಲ್ಲಿ ಕಾಣುವಂತೆ ಮಾಡಿದರು. ಕರಾವಳಿಯ ಹಿನ್ನೆಲೆ, ಯಕ್ಷಗಾನದ ಚಂಡೆ-ಮದ್ದಳೆ, ಜಾನಪದ ಹಾಡುಗಳು ಪ್ರೇಕ್ಷಕರನ್ನು ನೇರವಾಗಿ ಕಾರಂತರ ಪುಟಗಳಿಗೆ ಕರೆದೊಯ್ದವು. ಬೆಳಕಿನ ವಿನ್ಯಾಸದಲ್ಲಿ ಮೂಡಿಬಂದ ಮೂಕಜ್ಜಿಯ ಮಾತುಗಳು, ಚೋಮನ ಮಾತುಗಳು ಕಣ್ಣಿಗೆ ಕಟ್ಟಿದಂತಿದ್ದವು.

      ಕಾರಂತರು ಎತ್ತಿದ ಪ್ರಶ್ನೆಗಳನ್ನು ಇಂದಿನ ತಲೆಮಾರಿಗೆ ತಲುಪಿಸುವ ಪ್ರಯತ್ನವೇ ಈ ನಾಟಕದ ಜೀವಾಳ, ಪರಿಸರ, ಶಿಕ್ಷಣ, ಕಲೆಗಳ ಬಗ್ಗೆ ಅವರ ನಿಲುವು ಇಂದಿಗೂ ಎಷ್ಟು ಪ್ರಸ್ತುತ ಎಂಬುದನ್ನು ಮನದಟ್ಟು ಮಾಡಿಕೊಟ್ಟಿತು. ಈ ನಾಟಕ ನೋಡಿದ ಮೇಲೆ ಕಾರಂತರು ಕೇವಲ ಲೇಖಕರಲ್ಲ, ಒಬ್ಬ ಪೂರ್ಣಕಾಲಿಕ 'ಜೀವನ ಶೋಧಕ' ಅನ್ನೋದು ಮತ್ತೆ ಮನವರಿಕೆಯಾಯಿತು.

      ಒಟ್ಟಿನಲ್ಲಿ, ಇದು ಕೇವಲ ನಾಟಕವಾಗಿರದೆ ಕಾರಂತರನ್ನು ಮತ್ತೊಮ್ಮೆ ಓದಬೇಕೆಂಬ ಹಂಬಲ ಹುಟ್ಟಿಸಿದ ಸಾಂಸ್ಕೃತಿಕ ಯಾತ್ರೆ. ಇಂತಹ ಪ್ರಯೋಗಗಳು ಕನ್ನಡದ ಮೇರು ವ್ಯಕ್ತಿತ್ವಗಳನ್ನು ಹೊಸ ತಲೆಮಾರಿಗೆ ಪರಿಚಯಿಸಲು ದಾರಿದೀಪ. ಸಂಸ್ಥೆಯ ಎಲ್ಲ ಕಲಾವಿದರಿಗೆ ಮತ್ತು ಹಿಂದಿನ ಶ್ರಮಕ್ಕೆ ಅಭಿನಂದನೆಗಳು.

      ಡಾ. ಶಿವರಾಮ ಕಾರಂತ ಪೀಠದ ನಿರ್ದೇಶಕರಾದ ಪ್ರೊ. ನಾಗಪ್ಪ ಗೌಡ ಸರ್, 'ನಾನು ಕಾರಂತ' ನಾಟಕದ ಕರ್ತೃ ರಾಜಶ್ರೀ ಪೆರ್ಲ, ನಿರ್ದೇಶಕರಾದ ಜಗನ್ ಪವಾರ್, ಸಂಶೋಧನ ಸಹಾಯಕ ಯತೀಶ್ ಕುಡುಪು, ಸಹಾಯಕ ಚೇತನ್ ಇವರಿಗೆ ಅಭಿನಂದನೆಗಳು. ಹಾಗೆ ಇಂದಿನ ನಾಟಕದ ಕೇಂದ್ರ ಬಿಂದುಗಳಾದ ನಮ್ಮ ವಿಭಾಗದ ಪ್ರೀತಿಯ ಗೆಳೆಯರಿಗೂ ಹೃದಯಾಂತರಾಳದ ಅಭಿನಂದನೆಗಳು, ಸಂಸ್ಥೆಯ ಎಲ್ಲಾ ಪ್ರಾಧ್ಯಾಪಕರ, ಸಿಬ್ಬಂದಿ ವರ್ಗದವರ, ವಿವಿಧ ಪೀಠಗಳ ಸಿಬ್ಬಂದಿಗಳ ಹಾಗೂ ಗೆಳೆಯರ ಇರುವಿಕೆಯು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತು.

ಸಲೀಂ ಸುಳ್ಯ, ದ್ವಿತೀಯ ಎಂ.ಎ, ಎಸ್.ವಿ.ಪಿ. ಕನ್ನಡ ವಿಭಾಗ.

..........................


      ವಿಭಾಗದ ಅಸ್ಥಿತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ ವಿದ್ಯಾರ್ಥಿ ಬಳಗಕ್ಕೆ ಅಭಿನಂದನೆಗಳು. ನಿರೀಕ್ಷೆ ಮೀರಿದ ಅಭಿನಯ, ಯಾವ ಪಾತ್ರದ ಬಗ್ಗೆ ಏನ ಹೇಳಲಿ? ಒಂದರ್ಥದಲ್ಲಿ ಮಾತು ಮರೆಸಿದ ಪ್ರದರ್ಶನ. ಎಲ್ಲರೂ ಚತುರ ರಂಗ ಕಲಾವಿದರಂತೆ ತೊಡಗಿಕೊಂಡ ಬಗೆ ನಿಜವಾಗಲೂ ಮೆಚ್ಚುಗೆಗೆ ಅರ್ಹವಾದುದು. ತಿಂಗಳ ಒಳಗೆ ತಯಾರಿ ನಡೆಸಿ, ಎಲ್ಲರ ಮೆಚ್ಚುಗೆ ಪಡೆದ ಪ್ರದರ್ಶನದ ಬರವಣಿಗೆ, ನಿರ್ದೇಶನ, ಅಭಿನಯ ಪ್ರಶಂಸೆಗೆ ಪಾತ್ರವಾಯಿತು. ಇನ್ನು ಕಾರಂತರನ್ನು ಮರು ಓದಿಗೆ ಒತ್ತಾಯಿಸಿದ ಸಾರ್ಥಕತೆ ನಾಟಕದಿಂದ ಸಾಧ್ಯಯವಾದುದು ಇನ್ನೊಂದು ಗುರುತರ ಅಂಶ. ಪ್ರತೀ ಪಾತ್ರಗಳ ಪ್ರವೇಶವೂ ನನ್ನನ್ನು ಭಾವೋದ್ವೇಗಕ್ಕೆ ಒಳಪಡಿಸಿತು. 'ನಾನು ಕಾರಂತ' ದ ಒಳಗೆ ನಾನೇ ಕಳೆದುಹೋಗುವಂತೆ ಆದ ಈ ಪ್ರದರ್ಶನದ ಭಾಗವಾಗಿರುವ ಎಲ್ಲರಿಗೂ ನಮನಗಳು.

ಡಾ. ಯಶುಕುಮ‌ರ್. ಡಿ., ಅಧ್ಯಾಪಕರು, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ.

..........................


      ನಾನು ಕಾರಂತ ನಾಟಕದ ಪ್ರಯೋಗಕ್ಕೆ ಒಂದು ಭಾಷಾ ವಿಭಾಗದ ಬಳಗವನ್ನು ತೊಡಗಿಸಿಕೊಂಡು ಯಶಸ್ವಿಯಾಗಿರುವುದಕ್ಕೆ ವಿಭಾಗ ಮುಖ್ಯಸ್ಥರಿಗೆ ಮೊದಲ ವಂದನೆಗಳು, ಶಿವರಾಮ ಕಾರಂತ ಅವರ ವಿವಿಧ ಓದುಗಳಿಂದ ಹೆಕ್ಕಿ ರಂಗದ ಮೂಲಕ ನೆನಪಿಸುವ ಪ್ರಯತ್ನದಲ್ಲಿ ಕರ್ತೃ ರಾಜಶ್ರೀ ಅವರು ಭರವಸೆಯನ್ನು ಮೂಡಿಸಿದ್ದಾರೆ. ಇಡೀ ನಾಟಕದ ಸಂರಚನೆ ಚೆನ್ನಾಗಿದೆ. ಆದರೆ ಈ ಕಾಲಕ್ಕೆ ಅವರ ಬದುಕಿನ ಹೊಳಹುಗಳನ್ನು ಕಾಣಿಸಲೇ ಬೇಕಾದ ಭಾಗಗಳನ್ನು ಜೋಡಿಸಲು ಸ್ಕ್ರಿಪ್ಟ್ ಸ್ವಲ್ಪ ವೀಕ್ ಆಗಿದೆ ಅನಿಸಿತು. ಅದನ್ನು ಇನ್ನಷ್ಟು ರಂಜನೀಯವೂ ಹಾಗೂ ಅನುಕರಣೀಯವೂ ಆಗಿಸುವ ಎಲ್ಲಾ ಸಾಧ್ಯತೆಗಳೂ ಇವೆ.

      ಪುಸ್ತಕದ ಹುಳಗಳಾಗಿ ಯೂನಿವರ್ಸಿಟಿಯಿಂದ ಹೊರ ಹೋಗಬಹುದಾಗಿದ್ದ ವಿದ್ಯಾರ್ಥಿಗಳನ್ನು ಒಂದು ಅನುಭವಕ್ಕೆ ತೆರೆದುಕೊಳ್ಳಲು ಹಿರಿಯ ರಂಗಕರ್ಮಿ ಜಗನ್ ಅಣ್ಣ ಅವರ (ಸಿಕ್ಕ ಅಷ್ಟೇ ಸಮಯದ ಪ್ರಯತ್ನ ಸಫಲವಾಗಿದೆ. ಲೈಟಿಂಗ್ ಬಹಳ ಚೆನ್ನಾಗಿತ್ತು. ಲೈಟಿಂಗ್ ಜೊತೆಗೆ ಇಂನ್ನಷ್ಟು ತಾಲೀಮು ಸಿಕ್ಕರೆ ನೋಡುಗರಿಗೆ ಇನ್ನಷ್ಟು ಭಾವವೃದ್ಧಿಗೆ ಸಹಕಾರಿ. ಹಾಡುಗಾರರು ಬಹಳ ಭಾವ ಹಾಗೂ ಪಠ್ಯ ಪೂರಕವಾಗಿ ಹಾಡಲು ಸಾಧ್ಯವಾಗುವವು ಅನಿಸಿತು. ಆದರೆ ಅವರ ಮೈಕ್ ಸೌಂಡ್ ಮಾತ್ರ ಇಡೀ ನಾಟಕವನ್ನು ಸದ್ದಡಗಿಸಲು ಹಠಕ್ಕೆ ಬಿದ್ದಂತೆ ಇತ್ತು. ಬಹುತೇಕ ಪಾತ್ರಗಳ ಮಾತುಗಳನ್ನು ಕೇಳಲು ಸಾಧ್ಯ ಆಗದಷ್ಟು ಹಾಡುಗಳ ಸದ್ದು ಹೆಚ್ಚಾಗಿತ್ತು. ಜೊತೆಗೆ Instrument ಗಳ ಸದ್ದು ಕೂಡ ಹೆಚ್ಚಾಗಿ ತೊಡಕಾಯ್ತು, ದಯವಿಟ್ಟು ರಂಗ ಸಂಗೀತ ರಂಗಕ್ರಿಯೆಗೆ ಪೂರಕ ಆಗುವಷ್ಟೇ ಇರುವ ಹಾಗೆ ಮುಂದಿನ ತಾಲಿಮು ಸಿದ್ದ ಮಾಡುವುದು ಬಹಳ ಅಗತ್ಯ ಅನಿಸಿತು.

      ಜೊತೆಗೆ Bridge Music ಒಂಚೂರು ಸೇರಿಸಬಹುದೇ? ಮೈಮನಗಳ ಸುಳಿಯ ತುಣುಕು ಕಾರಂತರನ್ನು ಏನಂತ ಪರಿಚಯಿಸಲು ಪ್ರಯತ್ನಿಸುತ್ತಿದೆ ಎಂದು Convey ಆಗಲಿಲ್ಲ. ಸ್ವಲ್ಪ ಸ್ಪಷ್ಟ ಮಾಡಲು ಸಾಧ್ಯವೇ? ಸರಸಮ್ಮನ ಸಮಾದಿ ಚೆನ್ನಾಗಿ ಬಂತು. ಮೂಕಜ್ಜಿಯ ಭಾಗವೂ ಚೆನ್ನಾಗಿ ಬಂತು. ಹತ್ತು ಮುಖಗಳ ಭಾಗವೂ ಸ್ವಲ್ಪ ಸ್ಪಷ್ಟ ಮಾಡಬೇಕೆ ಗಮನಿಸಬಹುದೇ? ಇನ್ನು ಬಹಳ ಮುಖ್ಯವಾಗಿ ಕಾರಂತ ಅವರ ಪಾತ್ರ ಚೆನ್ನಾಗಿದೆ. ಪಾತ್ರಧಾರಿ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಅವರ ವಾಚಿಕ ಭಾಗದಲ್ಲಿ ಹೆಚ್ಚು ಕೆಲಸ ಮಾಡಬೇಕು ಅನಿಸ್ತು. ಮತ್ತುಳಿದ ಹಾಗೆ ಎಲ್ಲಾ ವಿದ್ಯಾರ್ಥಿ/ನಿ ಯರೂ ಚೆನ್ನಾಗಿ ಪ್ರಯತ್ನಿಸಿದ್ದಾರೆ. ಒಟ್ಟು ಯೂನಿವರ್ಸಿಟಿಯೊಳಗೆ ಈ ಥರದ ಜೀವಂತ ಪ್ರಕ್ರಿಯೆಗಳು ನಡೆಯುತ್ತಿರುವುದೇ ಬಹಳ ಆಶಾವಾದದ ಬೆಳವಣಿಗೆ..... ತಮಗೆಲ್ಲರಿಗೂ ವಂದನೆಗಳು.

ನಾದ ಮಣಿನಾಲ್ಕೂರು

..........................


      ನಮಸ್ಕಾರ ಸರ್.. ನೆನ್ನೆ ತಮ್ಮಲ್ಲಿ ಹೇಳದೇ ಹೊರಟೆವು.. ಕ್ಷಮೆಯಿರಲಿ.. ಪ್ರಥಮ ಪ್ರಯೋಗ.. ಹೊಸಬರು ರಂಗಭೂಮಿಗೆ ಪಾದಬೆಳೆಸುವುದೇ ಅಪರೂಪವಾದ ಪ್ರಸಕ್ತ ಸನ್ನಿವೇಶದಲ್ಲಿ ನಿಮ್ಮ ತಂಡದ ಪ್ರಯತ್ನ ಸ್ತುತ್ಯಾರ್ಹ... ರಂಗಭೂಮಿಯ ಚಟುವಟಿಕೆಗಳಿಗೆ ವಿಶ್ವವಿದ್ಯಾಲಯದ ಮನಸುಗಳು ಇನ್ನಷ್ಟು ತೆರೆದುಕೊಳ್ಳಲಿ ಎಂದು ಹಾರೈಸುವೆ.. ನೋಡೋಣ.. ನಿಮ್ಮ ವಿದ್ಯಾರ್ಥಿಗಳು ಮನಸು ಮಾಡಿದರೆ ನಾನೂ ಒಂದು ನಾಟಕದ ಕಟ್ಟುವಿಕೆಗೆ ಸಹಕರಿಸುವೆ.. ಒಳ್ಳೆಯದಾಗಲಿ..

ಚಂದ್ರಹಾಸ ಉಳ್ಳಾಲ್, ಹಿರಿಯ ರಂಗಕರ್ಮಿ

..........................


      ನಮಸ್ತೆ, ನಾನು ಕಾರಂತ. ನಿನ್ನೆ ರಂಗದ ಮೇಲೆ ತಮ್ಮ ಭಾವಾಭಿನಯದ ಪ್ರದರ್ಶನವನ್ನು ನೀಡಿದ ಎಲ್ಲಾ ಕಲಾವಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಪ್ರೇಕ್ಷಕರ ಭಿನ್ನ ಅಭಿಪ್ರಾಯಗಳನ್ನೂ ಕೇಳಿದ್ದೀರಿ (ಅಭಿಪ್ರಾಯ, ಅನಿಸಿಕೆಯನ್ನು ಮೀರಿದ್ದು ನಿಮ್ಮೆಲ್ಲರ ಪರಿಶ್ರಮ, ಒಳಗೊಳ್ಳುವಿಕೆ. ಅನುಭವ, ಸಂತೃಪ್ತಿ ನಿಮ್ಮ ಸ್ವಂತದ್ದು). ಈ ಒಟ್ಟು ನಾಟಕವನ್ನು ಕಟ್ಟಿಕೊಳ್ಳುವಲ್ಲಿ ವಸ್ತುವನ್ನು ಸಿದ್ದಗೊಳಿಸಿದ ರಚನೆಕಾರರು, ಪೂರ್ಣ ಪ್ರಮಾಣದ ಸಿದ್ಧತೆಯೊಂದಿಗೆ ರಂಗದ ಎಲ್ಲಾ ವಿಭಾಗದಲ್ಲಿ ತೊಡಗಿಸಿಕೊಂಡ ಚೇತನ್ ರವರ ಪರಿಶ್ರಮಕ್ಕೆ ಪ್ರೀತಿಯ ಅಭಿನಂದನೆಗಳು. ಬೆಳಕು ನಿರ್ವಹಣೆ ಮಾಡಿ ನಾಟಕಕ್ಕೆ ಮೆರುಗು ಹುಟ್ಟಿಸಿದ ಅಕ್ಷಿತ್ ಮುಲ್ಲಕ್ಕಾಡ್: ರಂಗದ ಮೇಲೆ ಪ್ರದರ್ಶನ ಗೊಳ್ಳುವವರೆಗೆ ಸದಾ ಜೊತೆಯಲ್ಲಿ ಇದ್ದು ಸರಿಯಾದ ವ್ಯವಸ್ಥೆ ಮಾಡಿ, ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಿದ ಯತೀಶ್ ಕುಡುಪು; ರಂಗ ರೂಪವಾಗಿ ಕಾರಂತರನ್ನು ಪರಿಚಯಿಸುವ ಮಹತ್ತರ ಕಾರ್ಯಕ್ಕೆ ಮುಂದಾಗಿ, ಪ್ರದರ್ಶನಗೊಳ್ಳಲು ಕಾರಣರಾದ ಡಾ. ನಾಗಪ್ಪ ಗೌಡ ಸರ್, ರವರಿಗೆ ಅಭಿನಂದನೆಗಳು....

ಜಗನ್ ಪವಾರ್, ನಾಟಕ ನಿದೇಶಕ.

..........................


ನಮಸ್ತೆ ಎಲ್ಲರಿಗೂ...

ಬಹಳ ಉದ್ದವಾಗಿದೆ ಬರಹ, ಸಮಯ ಕೊಟ್ಟು ಬೈಯದೆ ಓದಿ....


      ನಾಟಕ ಪ್ರದರ್ಶನದ ಪಯಣ ಒಂದು ಅನುಭವ. ಹುಚ್ಚು ಮನಸ್ಸಿನ ಹತ್ತು ಮುಖಗಳಂತೆ ಭಿನ್ನ ಭಿನ್ನವಾದ ಸಮಸ್ಯೆ ಗೊಂದಲ, ತಮಾಷೆ, ಕೋಪ, ನಗುವಿನ ಜೊತೆ ಸಾಗಿದ್ದು ನಾನು ಕಾರಂತ ನಾಟಕದ ಪರಿಕಲ್ಪನೆ. ಕಾರಂತರು ನಡೆದು ನಡೆದು ತೀರ ತಲುಪಿ ಒಂದುಷ್ಟು ಜನ ಸಾಮನ್ಯರ, ವಿದ್ವಾಂಸ ಹೃದಯ ಗುಡಿಯಲ್ಲಿ ಶುದ್ಧ ವಿಚಾರವನ್ನು ಬಿತ್ತಿ ಕತ್ತಲ ಬೆಳಕಿಗೆ ನಡೆದರು.

      ನಾವು ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ವತಿಯಿಂದ ನಾಟಕ ತಂಡ ಕಟ್ಟುವುದಕ್ಕಿಂತ ಹೆಚ್ಚು ಸವಾಲು ಇಲ್ಲಿ ಒದಗಿ ಬಂದಿದ್ದು ನಿಜ. 'ನಾನು ಕಾರಂತ' ಡಾ.ನಾಗಪ್ಪ ಗೌಡ ಆರ್ ಇವರ ಕನಸಿನ ಕೂಸು. ಅವರ ಸಂಪೂರ್ಣ ಒಳಗೊಳ್ಳುವಿಕೆ ಈ ನಾಟಕ ರಚನೆಯಲ್ಲಿ ಇಲ್ಲದೆ ಹೋಗಿದ್ದರೆ ಈ ನಾಟಕ ಕಾದಂಬರಿ ಓದಲು ಹೋರಟು ಮೊದಲು ಪುಟ ತಿರುವಿ ಮಡಚಿಟ್ಟಂತಾಗುತ್ತಿತ್ತು. ಸಲಹಾ ಸಮಿತಿಯಲ್ಲಿ ನಾಟಕ ರಚನೆಯ ಕುರಿತು ಪ್ರಸ್ತಾಪಿಸಿ ಅದಕ್ಕೆ ಒಪ್ಪಿಸಿ, ಹಣಕಾಸಿನ ವ್ಯವಸ್ಥೆಯನ್ನು ಹೇಗೆ ಮಾಡಬಹುದು ಎಂಬುದಾಗಿ ಯೋಚಿಸಿ ನಾಟಕ ಪ್ರದರ್ಶನಕ್ಕೆ ಇಳಿದವರು. ಕಾರಂತ ಪೀಠದಲ್ಲಿ ಹಣಕಾಸಿನ ಕೊರತೆ ತುಂಬಾಯಿದೆ ಅದನ್ನು ಸಮರ್ಥವಾಗಿ ನಿಭಾಯಿಸಿ ನಾಟಕ ತಂಡ ಕಟ್ಟಿದ್ದು ದೊಡ್ಡ ಕೆಲಸ. ನಿವೃತ್ತಿ ಹಂಚಿನಲ್ಲಿದ್ದರೂ ಯಾಕೆ ಇದ್ದೆಲ್ಲ ಎಂದು ಭಾವಿಸದರೆ ವಿಭಾಗ ಮತ್ತು ಪೀಠಗಳಲ್ಲಿ ಕಾರ್ಯ ಚಟುವಟಿಕೆಗಳು ನಡೆಯಬೇಕು ಅದು ವಿದ್ಯಾರ್ಥಿಗಳನ್ನು ಬೆಳೆಸಬೇಕು ಎಂಬ ಅವರ ಆಶಯವ ನಾವು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ನೋಡಿಕೊಂಡಿದ್ದಾರೆ. ಗೊಂದಲವನ್ನು ಬಹಳ ತಾಳ್ಮೆಯಿಂದ ನಿರ್ವಹಿಸಿದ್ದಾರೆ. ಈ ನಾಟಕ, ಈ ಸಮಯ. ಅವರ ವೃತ್ತಿ ಧರ್ಮ, ಬದ್ಧತೆ, ಪ್ರಾಮಾಣಿಕತೆಯನ್ನು ಸೂಚಿಸುತ್ತದೆ.

      ಒಂದು ನಾಟಕ, ಸಿನೆಮಾಗಳಿಗೆ ಮುಖ್ಯ ಜೀವಾಳ ಕಥೆ, ಸಂಭಾಷಣೆ, ಬರವಣಿಗೆ ಈ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವದು ಶ್ರೀಮತಿ ರಾಜಶ್ರೀ ಪೆರ್ಲ ಇವರು. ಬಹಳ ಪ್ರಬುದ್ಧವಾದ ಬರವಣಿಗೆ ನಾಟಕದ ಗಂಭೀರತೆಯನ್ನು ಹೆಚ್ಚಿಸಿದೆ. ನಾಟಕ ತರಬೇತಿ ಸಂಧರ್ಭದಲ್ಲಿಯೂ ಜೊತೆಗಿದ್ದು, ನಾಟಕದ ಕುರಿತು ಅಪಾರ ಕಾಳಜಿ ವಹಿಸಿದ್ದರು. ಅಹಂ ಇಲ್ಲದ ಬರಹಗಾರ್ತಿ ಇವರು. ಸರಳ ವ್ಯಕ್ತಿತ್ವ ಇವರದ್ದು. ಕಥೆಯ ಭಾಷಾ ಬಳಕೆ ಅವರ ಅಪಾರ ಓದಿಗೆ ಸಾಕ್ಷಿ.

      ನಾಟಕವನ್ನು ನಮ್ಮ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಲೋಪ, ದೋಷಗಳನ್ನು ತಿದ್ದಿ, ಅವರ ಭಯವನ್ನು ಹೋಗಲಾಡಿಸಿ ಅವರ ಕಲಾ ಪ್ರತಿಭೆಯನ್ನು ಪ್ರಕಟಿಸುವಲ್ಲಿ, ಮುಖ್ಯರಾದವರು ಜಗನ್ ಪವಾರ್ ಸರ್ ಅವರು. ಹಿರಿಯ ನಿರ್ದೇಶಕರು, ಅಪಾರ ಶಿಷ್ಯ ವರ್ಗವನ್ನು ಹೊಂದಿದವರು. ಮಕ್ಕಳೊಂದಿಗೆ ಬೆರೆತು ಅವರಲ್ಲಿ ಪಾತ್ರಕ್ಕೆ ಬೇಕಾದ ನಟನೆಯನ್ನು ಹೊರ ತೆಗೆದವರು. ಒಂದು ನಾಟಕ ರಚನೆಗೆ ನಿರ್ದೇಶಕರ ಪಾತ್ರ ಅಪಾರ, ಕಥೆಗಾರನ ಆಲೋಚನೆಗಳು ರಂಗದಲ್ಲಿ ಪ್ರಸ್ತುತ ಪಡಿಸುವಲ್ಲಿ ನಿರ್ದೇಶಕರಾದ ಜಗನ್ ಸರ್ ಅವರ ಪ್ರತಿಭೆ ಕೌಶಲ್ಯ ಕೆಲಸ ಮಾಡಿದೆ. ನಿರ್ದೇಶಕ, ಸೂತ್ರಧಾರ ಅವನಿಲ್ಲದೆ ನಾಟಕ ಅಪೂರ್ಣ.

      ನಾಟಕದ ಕುರಿತ ಹೊಸ ಆಲೋಚನೆ, ಹೊಸ ಆಯಾಮ, ಹೊಸ ಹಾದಿಯನ್ನು ಅರಿತವರು ಚೇತನ್ ಅವರು. ಅವರ ರಂಗ ಸಜ್ಜು, ವಸ್ತ್ರಾಲಂಕಾರದ ಜ್ಞಾನ, ರಂಗದ ಕುರಿತ ಹೊಸ ಚಿಂತನೆ ನಾನು ಕಾರಂತ ನಾಟಕಕ್ಕೆ ಸಿಕ್ಕಿದ್ದು ಒಳ್ಳೆಯದಾಯಿತು. ಇವರು ಜಗನ್ ಸರ್ ಅವರ ಶಿಷ್ಯರೆ, ದೂರದ ಸುರತ್ಕಲಿನಿಂದ ಎಲ್ಲಾ ಪರಿಕರಗಳನ್ನು ಹೊತ್ತು ತರುವುದು ಅಷ್ಟು ಸುಲಭವಲ್ಲ. ವೇದಿಕೆಗೆ ಬೇಕಾದ ಪರಿಕರಗಳನ್ನು ತಯಾರಿಸುವಲ್ಲಿ ಅವರ ಪಾತ್ರವಿದೆ. ಪ್ರೇಕ್ಷಕ ವರ್ಗವನ್ನು ಹಿಡಿದುಕೊಳ್ಳುವಲ್ಲಿ ಸಂಗೀತ ಪರಿಕರಗಳ ಸರಿಯಾದ ಸಂಯೋಜನೆ ಪ್ರಮುಖವಾಗುತ್ತದೆ. ಇಲ್ಲಿಯೂ ಚೇತನ್ ಅವರ ಪ್ರತಿಭೆ ಕೆಲಸಮಾಡಿದೆ.

      ರಂಗ ಗೀತೆ ಎಲ್ಲರ ಹೃದಯ ಗೆದ್ದಿದೆ. ಬೈಯೋ ಸೈನ್ಸ್ ವಿಭಾಗದ ವಿದ್ಯಾರ್ಥಿನಿಯಾದ ಮೇಧ ಅವರು ನಾಟಕಕ್ಕೆ ಸಿಕ್ಕಿದ್ದು, ನಾಟಕ ತಂಡಕ್ಕೆ ಸಮಯ ಕೊಟ್ಟದ್ದು, ನಾಟಕಕ್ಕೆ ಮತ್ತಷ್ಟು ಹೆಚ್ಚು ಮೆರುಗು, ಗಟ್ಟಿತನವನ್ನು ಕೊಟ್ಟಿದೆ. ಒಂಚೂರು ಅಹಂ ಇಲ್ಲದ, ನನಗೆನೂ ಸಂಗೀತದ ಬಗ್ಗೆ ಅರಿವಿಲ್ಲ ನಾನು ಇನ್ನೂ ಕಲಿಯಬೇಕು ಎಂಬ ಅವರ ಮಾತು ಅವರ ಬೆಳವಣಿಗೆಗೆ ಮುಖ್ಯ ಕಾರಣ. ಇವರ ಹಾಡು ಒಂದು ರಂಗದ ಕಂಪನವನ್ನು ಹೆಚ್ಚಿಸಿದೆ ಸರಳ ಪ್ರತಿಭೆ ನೀವು ಹೀಗೆ ಇರಿ. ಸಂಗೀತ ಕ್ಷೇತ್ರ ನಿಮ್ಮನ್ನು ಎತ್ತರಕ್ಕೆ ಏರಿಸಲಿ.

      ಎಲ್ಲವೂ ಇದ್ದು ಪಾತ್ರಗಳಿಗೆ ನಟರು, ನಟಿಯರು ಇಲ್ಲವಾದರೆ ನಾಟಕ ಅಪೂರ್ಣವೆ. ತಮ್ಮ ತರಾತುರಿಯ ದಿನಗಳಲ್ಲಿ ನಾಟಕ್ಕೆ ಸಮಯ ಮಾಡಿಕೊಂಡು ತರಬೇತಿಗೆ ಬಂದದ್ದು. ವೇದಿಕೆಯಲ್ಲಿ ಪಾತ್ರಕ್ಕೆ ಜೀವಕೊಟ್ಟ ವಿದ್ಯಾರ್ಥಿಗಳು ಮುಖ್ಯರಾಗುತ್ತಾರೆ. ಇದು ನಿಮಗಾಗಿ ನಾಟಕ, ನಿಮ್ಮ ಅನುಭವ ಕಲಿಕೆಗಾಗಿ ಈ ನಾಟಕ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೀರಾ, ಭಯವಿತ್ತು ಆ ಭಯವನ್ನು ಕಿತ್ತು ದೂರ ಎಸೆದಿದ್ದೀರಾ. ಸಂತಸವಾಗಿದೆ. ಕಾರಂತರು ಹೇಳಿದಂತೆ ನಿಮ್ಮ ನಟನೆ ನಾನು ಅಂದುಕೊಂಡ ನನ್ನ ಅಳತೆಗೆ ಮೀರಿದ್ದಾಗಿದೆ.

      ಜಗದೀಶ ಅವರ ಮುಗ್ಧತೆಯ, ಪರಿಶ್ರಮದ ನಟನೆ ರಂಗದಲ್ಲಿ ಕಂಡಿದೆ. ಅವರ ಲೋಪಗಳನ್ನು ಸರಿಪಡಿಸಿ ನಟಿಸಿದ್ದಾರೆ. ಸೂರ್ಯ ಅವರು ಅಪರೂಪಕ್ಕೆ ತರಬೇತಿಯಲ್ಲಿ ಉದಯವಾಗುತ್ತಿದ್ದರೂ. ಅವರ ನಟನೆ ಇಷ್ಟವಾಯಿತು. ಭಯವಿತ್ತು ಆದರೆ ಅವರು ಹಿಂದಿನ ವೇದಿಕೆಯಲ್ಲಿ ಪದೆ ಪದೆ ತಯಾರಿ ನಡೆಸುವುದನ್ನು ಕಂಡು ನಂಬಿಕೆ ಬಂದ್ದಿತ್ತು. ದುಡಿಯನ್ನು ಬಾರಿಸುತ್ತ, ಚೋಮನಾಗಿ, ಮದುಮಗನಾಗಿ, ಡೋಮಿಗೊ ಆಗಿ ನಟಿಸಿದ ಅಭಿಷೇಕ್ ಅವರ ಪಾತ್ರದ ವಿಭಿನ್ನತೆ ನಟನೆ ಖುಷಿ ಕೊಟ್ಟಿತು. ಪಾತ್ರದ ಒಳಗೊಳ್ಳುವಿಕೆ. ಅದಕ್ಕಾಗಿ ಅವರ ಮೇಕಪ್ ಬಗ್ಗೆ ಅವರು ಕಾಳಜಿ ವಹಿಸಿದ್ದು ಕಂಡಿದ್ದೆ.

      ಮೇಳದವರಾಗಿ ಪವಿತ್ರ, ಪೂಜ, ಪಲ್ಲವಿ, ತ್ರಿವೇಣಿ, ನೇತ್ರ - ಇವರ ನೃತ್ಯ, ನಟನೆ, ನೋಡುಗರನ್ನು ಆಕರ್ಷಿಸಿತು. ಇಡೀ ನಾಟಕವನ್ನು ಉಲ್ಲಾಸವಾಗಿರುಸುವಲ್ಲಿ ಇವರ ಪಾತ್ರ ಗೆದ್ದಿದೆ. ಬಾಲಾಜಿ(ಆತ) ಮತ್ತು ರೇಷ್ಮಾ(ಆಕೆ) ಅವರ ನಟನೆ ಪ್ರಬುದ್ಧವಾಗಿತ್ತು. ಎಲ್ಲರನ್ನೂ ಮೂಕರನ್ನಾಗಿಸಿತು. ರೇಷ್ಮಾ ಅವರ ಪಾತ್ರಕ್ಕಾಗಿ ಅಗತ್ಯ ಇರುವ ಹೂವಿಗಾಗಿ ಅಲೆದಾಡಿ ಹೂ ತಂದು ಕೊಟ್ಟದ್ದು ಸಾರ್ಥಕವಾಯಿತು. ಆ ಹೂ ಪರಿಮಳ ಬೀರಿದೆ. ಬಾಲಾಜಿ ಅವರ ಉಳಿದ ಪಾತ್ರಗಳು ನೋಡುಗರ ಗಮನ ಸೆಳೆದಿದೆ. ಬೆಳ್ಳಕ್ಕನ ನೃತ್ಯ ಅವರ ಜೊತೆ 'ಜೊ ಎನ್ನಿರೆ' ಹಾಡಿಗೆ ನೃತ್ಯ ಮಾಡಿದ್ದು ಆಕರ್ಷಕವಾಗಿತ್ತು. ಮುಖ್ಯವಾಗಿ ಪಲ್ಲವಿ ಅವರು ಈ ನೃತ್ಯದಲ್ಲಿ ಗಮನ ಸೆಳೆಯುತ್ತಾರೆ. ಬೆಳ್ಳಕ್ಕ ಅವರ ಪಾತ್ರ ಪ್ರೌಡವಾಗಿತ್ತು. ಭಾವನೆಯಿಂದ ಕೂಡಿದ್ದು ಎಲ್ಲರನ್ನೂ ಆವರಿಸಿತ್ತು.

      ಮೂಕಜ್ಜಿಯ ನಟನೆ ಪ್ರೇಕ್ಷರನ್ನು ಮೂಕರನ್ನಾಗಿಸಿ ಗೆದ್ದಿತು. ಡಾ. ಶಿವರಾಮ ಶೆಟ್ಟಿ ಸರ್ ಅವರಿಗಂತೂ ಬಹಳ ಇಷ್ಟವಾಯಿತು. ನಟನೆ, ಮೇಕಪ್, ದೇಹ ಭಾಷೆ ಎಲ್ಲವೂ ಗಮನ ಸೆಳೆಯಿತು. ಸೂತ್ರಧಾರ ಹೆಚ್ಚು ರಂಗವನ್ನು, ನಾಟಕವನ್ನು ಆವರಿಸಿದವನು. ಕಾರಂತರನ್ನು ಪ್ರತಿನಿಧಿಸಿದವನು. ಅಷ್ಟು ದೊಡ್ಡ ಸಂಭಾಷಣೆಯನ್ನು ಕಷ್ಟವಿಲ್ಲದೆ ನೆನಪಿಟ್ಟು ಸಲಿಸಾಗಿ ವಾಚಿಸಿ ಕಾರಂತರಿಗೆ ಜೀವ ಕೊಟ್ಟ ಕಲಾವಿದ. ಮುಖ ಭಾವ ಕೊಂಚ ಬದಲಾಯಿಸಿ ಎಂದು ಒಮ್ಮೆ ಹೇಳಿದೆ. ನಿನ್ನೆ ರಂಗದಲ್ಲಿ ಆ ಕುರಿತು ಅವರು ಕೆಲಸ ಮಾಡಿದ್ದು ಕಂಡಿದೆ. ಕಾರಂತರನ್ನು ಮತ್ತೆ ಎಬ್ಬಿಸಿದ್ದಿಯ, ಸಮಾಧಿಯೊಳಗೆ ಮಲಗಿ, ಗೆದ್ದಲು, ಬಲೆ ಹಿಡಿದ ಚಿಂತನೆಗಳನ್ನು ನಿಮ್ಮ ನಟನೆಯ ಮೂಲಕ ಮಣ್ಣನ್ನು ಸರಿಸಿ ಮತ್ತೆ ಮರಳಿ ಮಣ್ಣಿನ ಮನೆಗೆ ಕರೆ ತಂದಿರಿ.

      ಎಲ್ಲರ ಪರಿಶ್ರಮದಿಂದ ನಾಟಕ ಬಹಳ ಚೆನ್ನಾಗಿ ಮೂಡಿ ಬಂದಿದೆ. ಯಾರೂ ರಂಗ ಕಲಾವಿದರಲ್ಲ, ನಿನ್ನೆ ನಾಟಕ ನೋಡಿದವರು ಪ್ರಬುದ್ಧ ಪ್ರೇಕ್ಷರು, ರಂಗ ಕಲಾವಿದರು ಅವರ ಅಭಿಪ್ರಾಯ ಉನ್ನತವಾದದ್ದು. ಅದನ್ನು ಸ್ವೀಕರಿಸುವ ನೀವು ವಿದ್ಯಾರ್ಥಿಗಳು, ನೀವು ಬಹಳ ಅದ್ಭುತವಾಗಿ ನಟಿಸಿದ್ದಿರಿ. ನಾಟಕವನ್ನು ಯಶಸ್ವಿಯಾಗಿಸಿದ್ದಿರಿ. ನಿಮಗೆ ವಂದನೆಗಳು. ಅಭಿನಂದನೆಗಳು.

      ವಿದ್ಯಾರ್ಥಿಗಳಾಗಿ ನಾನು ಎಂಬುದು ಮರೆತು ನಾವು ಎಂಬುದು ಉಳಿದಾಗ ಎಲ್ಲವೂ ಸಾಧ್ಯ. ಇಂದಿನ ನಾಟಕ ವರುಷಗಳು ಕಳೆದ ಮೇಲೆ ನಮಗೆ ಕೊಡುವ ಖುಷಿ ಎಲ್ಲಕ್ಕೂ ಮೀರಿದ್ದು. ಇಲ್ಲಿ ತಾವಾಗಿ ಬಂದವರು ಇದ್ದೀರಾ, ಒತ್ತಾಯಕ್ಕೆ ಬಂದವರು ಇದ್ದೀರ. ಆದರೆ ನಿಮಗೆ ಒಂದು ಹೊಸ ಅನುಭವ, ತೃಪ್ತಿ ಖುಷಿ ಈ ನಾಟಕ ಕೊಟ್ಟಿದೆ ಎಂದು ಭಾವಿಸಿದ್ದೇನೆ. ನಿಮ್ಮ ವಿದ್ಯಾರ್ಥಿ ಜೀವನ ಮುಗಿದ ಬಳಿಕ ಯಾವುದು, ಯಾರು ಕರೆದು ಏನನ್ನೂ ಕೊಡುವುದಿಲ್ಲ. ನಿಮ್ಮ ತಲೆಯ ಮೇಲೆ ನಿಮ್ಮ ಕೈ. ಸಿದ್ಧಾಂತಗಳ ಆಚೆಗೂ ಬದುಕಿಗೆ. ಮೊದಲು ಮನುಷ್ಯ ಪ್ರೀತಿ ಬೆಳೆಸಿ, ಉಳಿಸುವ, ಮುಂದೆ ನೀವು ವಿಭಾಗದಿಂದ ಹೊರಡುವ ಸಮಯ ಈ ನಾಟಕದ ನೆನಪು, ಭಾವನೆಗಳಾಗಿ ಬರುತ್ತದೆ. ವರುಷಗಳು ಕಳೆದರು ಈ ನೆನಪು ಮತ್ತೆ ಮತ್ತೆ ನಮ್ಮ ಜೊತೆ ಮಾತನಾಡುತ್ತದೆ ಇದು ಸತ್ಯ. ವಿಭಾಗವನ್ನು, ವಿ.ವಿ. ಪ್ರಾಧ್ಯಾಪಕರನ್ನು ಮರೆಯದಿರೋಣ, ಗೌರವಿಸೋಣ. ನಾವೆಲ್ಲರೂ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ರಾಯಭಾರಿಗಳು ಎಂಬುದು ನಮಗೆ ಅರಿವಿರಲಿ. ಒಳ್ಳೆದಾಗಲಿ.


ಗಮನಿಸಿ : -

      ನಾನು ಕಿರಿಕಿರಿ, ಕೋಪದಿಂದ ಬೈದಿರಬಹುದು ಕಾರಣ ನಾಟಕ ಪ್ರದರ್ಶನವಾಗಬೇಕಿತ್ತು ಅಷ್ಟೇ ನನ್ನ ಮಾತಿನಿಂದ ಬೇಜರಾಗಿದ್ದರೆ ಅದನ್ನು ಹೊಟ್ಟೆಗೆ ಹಾಕಿಕೊಳ್ಳಿ, ಏನಾದರೂ ಹಿತವಾಗಿದ್ದರೆ ಹೃದಯಕ್ಕೆ ಹಾಕಿಕೊಳ್ಳಿ, ಮುಖ್ಯವಾಗಿ ಜಗದೀಶ್, ಅಭಿಷೇಕ್, ಬಾಲಾಜಿ ಅವರಿಗೆ ಕೊಂಚ ಕಟುವಾಗಿ ಮಾತಾಡಿರಬಹುದು. ಅದಕ್ಕೆ ಕ್ಷಮೆ ಇರಲಿ.

      ನಾಟಕ ತರಬೇತಿಗೆ ಸರಿಯಾದ ಸಮಯಕ್ಕೆ ಬಂದವರು ಇದ್ದೀರಿ, ತಪ್ಪಿಸದೆ ಬಂದವರು ಇದ್ದೀರಿ. ಹಾಗೆಯೆ ಸಮಯಕ್ಕೆ ಸರಿಯಾಗಿ ಬಾರದೆ. ತರಬೇತಿಗೆ ಪ್ರತಿದಿನ ಅಲ್ಲೊಮ್ಮೆ ಇಲ್ಲೊಮ್ಮೆ ಬಂದವರು ಇದ್ದೀರಿ. ಮುಂದಿನ ದಿನಗಳಲ್ಲಿ ಇವುಗಳನ್ನು ಸರಿಪಡಿಸಿ, ಸಮಯ ಪಾಲನೆ ಮತ್ತು ಬದ್ಧತೆ ಬಹಳ ಮುಖ್ಯವಾಗುತ್ತದೆ ಬದುಕಿಗೆ, ನಾಟಕವನ್ನು ಇನ್ನೂ ಉತ್ತಮವಾಗಿ ಅಭಿನಯಿಸುವ, ಪ್ರೇಕ್ಷರ ಮುಂದೆ ಇನ್ನೂಷ್ಟು ಉತ್ತಮವಾಗಿ ಪ್ರಸ್ತುತಿ ಪಡಿಸುವ ಅವಕಾಶ ತುಂಬಾ ಇದೆ. ಮುಂದಿನ ಪ್ರದರ್ಶನಗಳಲ್ಲಿ ಅವುಗಳ ಬಗ್ಗೆ ಗಮನಿಸುವ. ಮತ್ತೊಮ್ಮೆ ನಾಟಕ ಬಹಳ ಚಂದವಾಗಿ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ನಿಮ್ಮೆಲ್ಲರ ಸಹಕಾರ ಮತ್ತು ನಟನೆಯಿಂದ ಎಲ್ಲರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಒಳ್ಳೆಯದಾಗಲಿ, ಮತ್ತೊಮ್ಮೆ ನನ್ನ ಮಾತುಗಳು ನಿಮ್ಮ ಮನದ ಮೂಲೆಗೆ ಬೇಸರದ ಬಾಣವಾಗಿ ಬಡಿದಿದ್ದರೆ ಕ್ಷಮೆ ಇರಲಿ. ಮುಂದಿನ ಪ್ರದರ್ಶನಕ್ಕೆ ಪೂರ್ವ ತಯಾರಿಯನ್ನು ಮತ್ತಷ್ಟು ಉತ್ತಮವಾಗಿ ಮಾಡೋಣ ಮತ್ತೆ ಸಿಗೋಣ. ಈ ನಾಟಕದ ಯಶಸ್ಸು ನಿಮಗೆ ಸೇರಿದ್ದು, ಇದು ವಿದ್ಯಾರ್ಥಿಗಳಾದ ನಿಮ್ಮದೇ ಗೆಲುವು. ವಂದನೆಗಳು ಪ್ರೀತಿ ಇರಲಿ.....

ಯತೀಶ್ ಕುಡುಪು, ಸಂಶೋಧನ ಸಹಾಯಕ, ಕಾರಂತ ಪೀಠ, ಮಂಗಳೂರು ವಿಶ್ವವಿದ್ಯಾನಿಲಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...