ಮೊದಲ ಸಂಬಳ
ಅಂದು ಶಾಲೆಗೆ ರಜಾದಿನಗಳಾದ್ದರಿಂದ ಎಲ್ಲಾ ಶಾಲಾ ಮಕ್ಕಳು ಆ ರಜಾ ದಿನಗಳಲ್ಲಿ ತಮ್ಮ ಅಜ್ಜಿಯ ಮನೆಗೆ. ಮಾವನ ಮನೆಗೆ, ಪ್ರವಾಸ ಅಂತ ಹೋಗಿದ್ದರು; ಅದರಲ್ಲಿ ಎಲ್ಲರಂತೆ ಮಧು ಕೂಡ ತನ್ನ ಅಜ್ಜಿಯ ಮನೆಯಿಂದ ತನ್ನಮ್ಮನ ಬಳಿಗೆ ಬಂದಿದ್ದಳು. ಆಕೆ ಆಗಿನ್ನೂ ೭ರ ಹರೆಯದವಳು, ತನ್ನ ಸಮ ವಯಸ್ಕರ ಜೊತೆಗೆ ಆಡಿ ನಲಿಯಬೇಕಾದ ವಯಸ್ಸದು. ಆಕೆ ಸಣ್ಣ ವಯಸ್ಸಲ್ಲೇ ತನ್ನ ತಂದೆಯನ್ನು ಕಳೆದುಕೊಂಡಿದ್ದಳು; ತಾಯಿಯೇ ಆಕೆಯ ಎಲ್ಲಾ ಬೇಕು-ಬೇಡಗಳಿಗೆ ಬೆಂಗಾವಲಾಗಿ ಅತೀ ಪ್ರೀತಿ, ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಈಕೆಗೂ ತಾನು ದುಡಿದು ತಾಯಿಯನ್ನು ಸಾಕುವ ಕನಸು ಆ ಕಿರಿಯ ವಯಸ್ಸಲ್ಲಿಯೇ ಹೊತ್ತಿದ್ದಳು. ಆದರೆ ಆಕೆಯ ತಾಯಿ ಆಕೆಯನ್ನು ಆ ದಾರಿಯಡೆಗೆ ಸಾಗಲು ಬಿಡದೆ ಓದಿಗೆ ಹೆಚ್ಚು ಒತ್ತು ನೀಡುತ್ತಿದ್ದರು. ಹೀಗಿರಲು ಒಂದು ದಿನ ಬೆಳ್ಳಂಬೆಳಗ್ಗೆ ಆ ಗಲ್ಲಿಯಲಿ ಒಂದು ಸುದ್ದಿ ಸದ್ದು, ಎಲ್ಲಾ ಮಕ್ಕಳು ಆ ಊರಲ್ಲಿ ಇರೋ ಕೋಳಿ ಫಾರಂನಲ್ಲಿ ಕೋಳಿಗಳ ಸಾಗಣಿಕೆ ಒಂದು ಹೊಸ ಕಟ್ಟಡಕ್ಕೆ ಹೋಗ್ತಾ ಇದ್ದಾರೆ ಮತ್ತು ಧಣಿಗಳು ಸಂಬಳ ಕೊಡುವುದಾಗಿ ಹೇಳಿದ್ದರೆಂದು; ಆಕೆಯ ದುಡಿಯುವ ಆಸೆಗೆ ದಾರಿ ಸಿಕ್ಕ ಖುಷಿಗೆ ಬುತ್ತಿ, ನೀರು ಬಾಟಲಿ ಹಿಡಿದು ಹೊರಡಲು ಅಣಿಯಾಗಿ; ಅಮ್ಮನಿಗೆ ಆಟಕೆಂದು ಹೇಳಿ ಹೊರಟೆ ಬಿಟ್ಟಳು ಆ ಸುಡುಬಿಸಿಲ ಅರಿವಿಲ್ಲದೆ ಸುಮಾರು ೪ಕಿ.ಮೀ. ದೂರದ ಆ ಕೆಲಸದ ಕಟ್ಟಡಕ್ಕೆ ತನ್ನ ಗೆಳೆಯರೊಂದಿಗೆ ಹೊಸ ಹುಮ್ಮಸ್ಸಲ್ಲಿ ಕೆಲಸಕ್ಕೆ ಅಣಿಯಾದಳು. ಕೆಲಸಕ್ಕೆ ಆಳುಗಳ ಸಂಖ್ಯೆ ಹೆಚ್ಚಿರುವುದರಿಂದ ಕೆಲಸ ಮಧ್ಯಾಹ್ನವೇ ಮುಗಿಯಿತು. ಊಟ ಮುಗಿಸಿ ಧಣಿಗಳು ಕೊಟ್ಟ ೪೦ ರೂಪಾಯಿಗಳನ್ನು ಪಡೆದದ್ದು ಆಕೆಗೆ ದುಡಿದ ಆಯಾಸವನ್ನೇ ಮರೆಸಿಬಿಟ್ಟಿತು; ಆಕೆಗೆ ಆ ಸಂಭ್ರಮ ಉಹೆಗೂ ನಿಲುಕದಂತಹದಾಗಿತ್ತು. ಅದೇ ಭರದಲ್ಲಿ ಮನೆಗೆ ಓಡಿ ಬಂದಳು. ಆ ಸಂಭ್ರಮ ತನ್ನ ತಾಯಿಗೆ ಹೆಗಲಾಗುವ ಕನಸಿನ ಒಂದು ಮೆಟ್ಟಿಲು ಎಂಬ ಭಾವದಲ್ಲಿ ಅಕ್ಕರೆಯಿಂದ ತನ್ನ ತಾಯಿಗೆ ನೀಡಿದಳು. ಈ ವಿಷಯ ಅರಿತು ಅಂಗಳದಲ್ಲಿ ಕುಳಿತಿದ್ದ ಸುಧಕ್ಕಾ "ಏನೇ ಇವಾಗ್ಲೆ ದುಡಿಯೋಕೆ ಶುರು ಮಾಡ್ಡಿಟ್ಟಿದ್ದೀಯ ಅಂದ್ರೆ ಹಣ ಕೂಡಿಡೊ ವಿಚಾರದಲ್ಲಿ ನಿನ್ನ ನಾವು ಮೀರಿಸೋಕ್ಕಾಗಲ್ಲ ಬಿಡು" ಎಂದದಕ್ಕೆ ಅಲ್ಲೇ ಕುಳಿತಿದ್ದವರೆಲ್ಲ ಒಮ್ಮೆಲೆ ನಕ್ಕರು. ಯಾಕೆ ಹೋದೆ ಎಂದು ಗದರಿಸುವ ತಾಯಿ ತನ್ನ ಮಗಳ ಶ್ರಮ ಮತ್ತು ತಂದ ಚಿಕ್ಕ ಮೊತ್ತದ ಮೇಲೆ ಅಪಾರ ಅಭಿಮಾನ ಹೆಚ್ಚಾಗಿ ಸಂತಸದಿಂದ ಬೆನ್ನು ಸವರಿದಳು. ತಾನು ದುಡಿದು ತಂದ ಮೊದಲ ಸಂಬಳಕ್ಕೆ ಮಧು ಸಂಭ್ರಮಿಸಿದಳು.
ಪವಿತ್ರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ