ಅಸ್ತಿತ್ವದ ಅನ್ವೇಷಣೆಯಲ್ಲಿ
ಪರಿಶುದ್ಧ ಪ್ರೀತಿಯ ಅರಸಿ ಹೊರಟವಳಿಗೆ
ಕೊನೆಗೆ ಜೊತೆಯಾಗಿದ್ದು ಅವಳದೇ ಒಂಟಿತನ
ಈ ವಿಶಾಲ ಜಗತ್ತಿನಲಿ ನನಗೂ ಒಬ್ಬರಿದ್ದಾರೆ ಎಂದು
ಭ್ರಮಿಸಿ ಕೊನೆಗೆ ನಿಸ್ಸಹಾಯಕಳಾಗಿ ನಿಂತವಳು
ನಂಬಿಕೆಯೇ ಬದುಕಿನ ಅಡಿಪಾಯ ಎಂದಿದ್ದವಳು
ಅದು ಹುಸಿಯಾದಾಗ ಗಾಜಿನಂತೆ ಚೂರಾದವಳು
ಒಳಗೆ ನೋವಿನ ಸುನಾಮಿ ಪರದೆ ಇಟ್ಟು
ನೋವಿಲ್ಲದಂತೆ ನಟಿಸುತ್ತಲೇ ತನ್ನನ್ನು ತಾನು ಕಳೆದುಕೊಂಡವಳು
ಒಂದು ಬೆಚ್ಚಗಿನ ಅಪ್ಪುಗೆಗೆ ಒಂದು ಪುಟ್ಟ ಮನ್ನಣೆಗೆ ಹಂಬಲಿಸಿದ ಜೀವ
ತನ್ನ ಅಸ್ತಿತ್ವಕೆ ಎಲ್ಲೊ ಒಂದು ಕಡೆ ಮಾನ್ಯತೆ ಸಿಗಬಹುದೆಂದು ಕಾದು ಸುಸ್ತಾದವಳು
ಹೇಳಲಾಗದ ನೋವು ಬಿಚ್ಚಿಡಲಾಗದ ಭಾವನೆಗಳನ್ನು ಎದೆಯಾಳದಲೆ ಬಚ್ಚಿಟ್ಟು
ತನ್ನ ಬೆಲೆ ತಿಳಿಯದವರಿಗಾಗಿ ಅವಳ ಅಮೂಲ್ಯ ಸಮಯವನ್ನ ಅರ್ಪಿಸಿ ವಿಫಲಳಾದವಳು
ಚೂರಾದ ಮನಸಿನ ಚೂಪಾದ ತುಣುಕುಗಳು ಅವಳನ್ನ ಚುಚ್ಚುತ್ತಿದ್ದರೂ
ಪರರ ಕಣ್ಣೀರನ್ನು ತನ್ನ ಸೆರಗಿನಲ್ಲಿ ಒರೆಸುವ ಹಟ ಅವಳದು
ಪರರ ಬಾಳಿನಲಿ ನಂದಾದೀಪವಾಗಲು ಹೋಗಿ
ತನ್ನ ಒಳಗಿನ ಚೈತನ್ಯವನ್ನು ಧಾರೆ ಎರೆದಿದ್ದಾಳೆ
ಜಗತ್ತಿನ ಕಣ್ಣಿಗೆ ಅವಳು ಗೆದ್ದವಳು; ಆದರೆ ತನ್ನೊಳಗಿನ ಜೀವಂತಿಕೆಯನ್ನು ಉಳಿಸುವ ಕದನದಲಿ ಅವಳು ಪ್ರತಿದಿನವೂ ಸೋತವಳು.
ತ್ರಿವೇಣಿ ವಿ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ