ಪ್ರೊ. ನಾಗಪ್ಪ ಗೌಡ ಆರ್.
ಅಧ್ಯಕ್ಷರು ಮತ್ತು 'ಬಿತ್ತಿ' ಪ್ರಧಾನ ಸಂಪಾದಕರು
ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ,
ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ
ಆಶಯ ನುಡಿ
ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಗೆ ೫೮ ವರ್ಷಗಳ ಸುದೀರ್ಘ ಇತಿಹಾಸವಿದೆ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಮಂಗಳೂರಿನಲ್ಲಿ ೧೯೬೮ ರಲ್ಲಿ ಸ್ಥಾಪನೆಯಾದುದರಿಂದಲೇ ಕನ್ನಡ ವಿಭಾಗ ಆರಂಭವಾಗಿದೆ. ಎಸ್.ವಿ.ಪರಮೇಶ್ವರ ಭಟ್ ಇವರು ಇದರ ಮೊದಲು ನಿರ್ದೇಶಕರಾಗಿ ವಿಭಾಗಕ್ಕೆ ಒಂದು ಭದ್ರ ಅಸ್ತಿಭಾರವನ್ನು ಹಾಕಿದ್ದಾರೆ. ಆನಂತರ ಬಂದ ಅಧ್ಯಾಪಕರು, ಪ್ರಾಧ್ಯಾಪಕರು ವಿಭಾಗವನ್ನು ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಕಟ್ಟಿ ಬೆಳೆಸುವ ಕಾಯಕ ಮಾಡಿದ್ದಾರೆ. ೧೯೬೮ ರಿಂದಲೇ ಕನ್ನಡ ಎಂ.ಎ. ವಿದ್ಯಾರ್ಥಿಗಳಿಗೆ ಸಾಹಿತ್ಯಕ ಬರವಣಿಗೆಯಲ್ಲಿ ಆಸಕ್ತಿ ಮೂಡಿಸುವ, ಅವರ ಸೃಜನಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ನಿರಂತರವಾಗಿ ವಿಭಾಗದ ಅಧ್ಯಕ್ಷರು ಮತ್ತು ಅಧ್ಯಾಪಕರು ಮಾಡುತ್ತಾ ಬಂದಿದ್ದಾರೆ. ಅಂದಿನಿಂದ ಇಂದಿನವರೆಗೂ ಗೋಡೆ ಪತ್ರಿಕೆ ಅಥವಾ ಬಿತ್ತಿ ನಮ್ಮ ವಿಭಾಗದ ಹಾಗೂ ಅನ್ಯ ವಿಭಾಗಗಳ ಪ್ರತಿಭಾವಂತ ಸೃಜನಶೀಲ ವಿದ್ಯಾರ್ಥಿಗಳ ಸಾಹಿತ್ಯಕ ಬರಹಗಳಿಗೆ ಸೂಕ್ತ ವೇದಿಕೆಯನ್ನು ಒದಗಿಸುತ್ತಾ ಬಂದಿದೆ. ೧೯೬೮ ರಿಂದ ಗೋಡೆ ಪತ್ರಿಕೆಯು ವಿಭಾಗದ ವಿದ್ಯಾರ್ಥಿಗಳ ಬರಹಗಳಿಗೆ ಅವಕಾಶ ನೀಡುತ್ತಿತ್ತು.
೧೯೯೧ರಲ್ಲಿ ಅದು 'ಬಿತ್ತಿ' ಎಂಬ ಹೆಸರಿನಲ್ಲಿ ಅಧಿಕೃತವಾಗಿ ವ್ಯವಸ್ಥಿತ ರೂಪವನ್ನು ಪಡೆದುಕೊಂಡಿತು. ವಿದ್ಯಾರ್ಥಿಗಳೇ ಸಂಪಾದಕ, ಉಪಸಂಪಾದಕ ಹಾಗೂ ಸಂಪಾದಕ ಮಂಡಳಿಯ ಸದಸ್ಯರಾಗಿ ಸಾಹಿತ್ಯಕ ಬರಹಗಳನ್ನು ವ್ಯವಸ್ಥಿತವಾಗಿ ಸಂಚಿಕೆಗಳನ್ನಾಗಿ ರೂಪಿಸಿ ಪ್ರಕಟಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದ್ದಾರೆ. ವರ್ಷದ ಕೊನೆಯಲ್ಲಿ ಸಂಚಿಕೆಗಳನ್ನು ಒಟ್ಟು ಸೇರಿಸಿ ಒಂದು ಸಂಪುಟವನ್ನಾಗಿ ಪ್ರಕಟಿಸುವ ಪದ್ಧತಿಯನ್ನು ಆರಂಭಿಸಲಾಯಿತು. ಅಂದಿನಿಂದ ಇಂದಿನವರೆಗೆ ೩೫ ಸಂಪುಟಗಳು ಹೊರಬಂದಿವೆ. ಇದು ವಿದ್ಯಾರ್ಥಿಗಳಿಗೆ ಬರಹದ ಬಗ್ಗೆ ಆಸಕ್ತಿ, ಅಭಿರುಚಿಯನ್ನು ಮೂಡಿಸುವುದರ ಜೊತೆಗೆ ವಿಭಾಗವನ್ನು ಸೃಜನಶೀಲವಾಗಿಸಲು ಸಹಕಾರಿಯಾಗಿದೆ. 'ಬಿತ್ತಿ'ಯ ಮೂಲಕ ಬರಹಗಾರರಾದವರು ಇಂದು ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಹೆಜ್ಜೆಗುರುತುಗಳನ್ನು ಮೂಡಿಸಿ ಪ್ರಸಿದ್ಧ ಸಾಹಿತಿಗಳಾದವರು ಅನೇಕರಿದ್ದಾರೆ. ಹೀಗೆ ರೂಪಿತವಾದ ಅದೆಷ್ಟೋ ವಿದ್ಯಾರ್ಥಿ ಬರಹಗಾರರು ಮಾಧ್ಯಮಗಳಲ್ಲಿ ಉದ್ಯೋಗ ಮಾಡುವ ಅವಕಾಶಗಳನ್ನು ಪಡೆದುಕೊಂಡಿದ್ದಾರೆ.
೨೦೨೫-೨೬ನೇ ವರ್ಷದ 'ಬಿತ್ತಿ'ಯ ಸಂಪಾದಕಿಯಾಗಿ ಪ್ರಥ್ವಿ ನಾಯ್ಕ್, ಉಪಸಂಪಾದಕರಾಗಿ ಜಗದೀಶ ಇವರು ಸಂಪಾದಕ ಮಂಡಳಿಯ ಸದಸ್ಯರ ಸಹಕಾರದಿಂದ ಹಾಗೂ ತಮ್ಮ ಸಹಪಾಠಿ ವಿದ್ಯಾರ್ಥಿಗಳ ನೆರವಿನಿಂದ ಉತ್ತಮವಾದ ರೀತಿಯಲ್ಲಿ ಬಿತ್ತಿಯನ್ನು ನಿರ್ವಹಿಸಿದ್ದಾರೆ. ಹಿಂದಿನ ವರ್ಷಗಳಲ್ಲಿ ಸಂಪಾದಕ, ಉಪಸಂಪಾದಕರು ಮಾತ್ರ ಬಿತ್ತಿಯ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಅದನ್ನು ಈ ವರ್ಷ ಬಿತ್ತಿಯನ್ನು ವಿನೂತನವಾಗಿ ಹಾಗೂ ಇನ್ನಷ್ಟು ಸೃಜನಾತ್ಮಕವಾಗಿ ಎಲ್ಲರನ್ನೂ ಒಳಗೊಂಡು ರೂಪಿಸುವ ಉದ್ದೇಶದಿಂದ ಸಂಪಾದಕರು, ಉಪಸಂಪಾದಕರ ಜೊತೆಗೆ ಪ್ರಥಮ ಮತ್ತು ದ್ವಿತೀಯ ವರ್ಷದ ತರಗತಿಯಿಂದಲೂ ಕೆಲವರನ್ನು ಸಂಪಾದಕ ಮಂಡಳಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಈ ಸಂಪಾದಕ ಮಂಡಳಿಗೆ ಸೂಕ್ತವಾದ ಸಲಹೆ ಸೂಚನೆಗಳನ್ನು ನೀಡುವುದಕ್ಕಾಗಿ ಡಾಕ್ಟರ್ ಯಶುಕುಮಾರ್ ಇವರನ್ನು ಅಧ್ಯಾಪಕ ಸಲಹೆಗಾರರನ್ನಾಗಿ ನೇಮಿಸಲಾಯಿತು. ವಿಭಾಗದ ಅಧ್ಯಕ್ಷರು ಹಾಗೂ ಪ್ರಾಧ್ಯಾಪಕರು ವಿದ್ಯಾರ್ಥಿ ಬರಹಗಾರರಿಗೆ ಸೂಕ್ತವಾಗಿ ಮಾರ್ಗದರ್ಶನವನ್ನು ನೀಡುತ್ತಾ ಬಂದಿರುತ್ತಾರೆ.
ಈ ವರ್ಷ ರೂಪಿತವಾಗಿರುವ ಬಿತ್ತಿಯು ೩೫ನೇ ಸಂಪುಟವಾಗಿದೆ ಇದರಲ್ಲಿ ಒಟ್ಟು ೨೪ ಸಂಚಿಕೆಗಳು ಸಂಪಾದಿತವಾಗಿರುವುದು ವಿಶೇಷವಾಗಿದೆ. ಇದರಲ್ಲಿ ನಮ್ಮ ವಿಭಾಗದ ವಿದ್ಯಾರ್ಥಿಗಳ ಜೊತೆಗೆ ಅನ್ಯ ವಿಭಾಗದ ವಿದ್ಯಾರ್ಥಿಗಳ ಬರಹಗಳು ಇರುವುದು ಗಮನಾರ್ಹವಾಗಿದೆ ಈ ಸಂಪುಟಗಳಲ್ಲಿ ವಿದ್ಯಾರ್ಥಿಗಳು ಬರೆದಿರುವ ಕವಿತೆಗಳು, ಚುಟುಕುಗಳು, ಕತೆಗಳು, ಲೇಖನಗಳು, ಚಿತ್ರಗಳು, ಗಾದೆಗಳು, ಅನುಭವದ ಚಿತ್ರಗಳು, ಪುಸ್ತಕ ವಿಮರ್ಶೆ ಹಾಗೂ ವಿಭಾಗದಲ್ಲಿ ನಡೆದ ಕಾರ್ಯಕ್ರಮಗಳ ವರದಿಯನ್ನು ಹೀಗೆ ವೈವಿಧ್ಯಮಯವಾದ ಬರಹಗಳಿವೆ. ಬಿತ್ತಿಯ ಬರಹಗಳನ್ನು ಉಪಸಂಪಾದಕರಾದ ಜಗದೀಶ ಇವರು ವಾಟ್ಸಾಪ್ ಮತ್ತು ಇನ್ನಾ ಗ್ರಾಮ್ ಮೂಲಕ ಹೆಚ್ಚು ಜನರಿಗೆ ಓದುವ ಅವಕಾಶವನ್ನು ಒದಗಿಸಿರುವುದು ಅಭಿನಂದನೆಯ ಕಾರ್ಯವಾಗಿದೆ ತುಂಬಾ ಆಕರ್ಷಕ ಹಾಗೂ ಸೃಜನಾತ್ಮಕವಾಗಿ ಬಿತ್ತಿಯ ೩೫ನೇ ಸಂಪುಟವನ್ನು ರೂಪಿಸಿ ಹೊರತಂದಿರುವ ಸಂಪಾದಕ ಪ್ರಥ್ವಿ ನಾಯ್, ಉಪಸಂಪಾದಕರಾದ ಜಗದೀಶ ಇವರಿಗೆ ವಿಶೇಷ ಅಭಿನಂದನೆಗಳು. ಇವರಿಗೆ ಉತ್ತಮ ಸಹಕಾರ ನೀಡಿರುವ ಸಂಪಾದಕ ಮಂಡಳಿಯ ಎಲ್ಲಾ ಸದಸ್ಯರಿಗೂ ಹಾಗೂ ಅಧ್ಯಾಪಕ ಸಲಹೆಗಾರರಾದ ಡಾ.ಯಶುಕುಮಾರ್, ಹಿರಿಯ ಪ್ರಾಧ್ಯಾಪಕರಾದ ಪ್ರೊಫೆಸರ್ ಸೋಮಣ್ಣ, ಸಹ ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ, ಕಚೇರಿ ಸಿಬ್ಬಂದಿಗಳಾದ ವಿದ್ಯಾ ಮತ್ತು ಜನಿತ ಇವರಿಗೆ ಅಭಿನಂದನೆಗಳು, ಈ ಸಂಪುಟದ ೨೪ ಸಂಚಿಕೆಗಳಿಗೆ ಉತ್ತಮ ಬರಹಗಳನ್ನು ನೀಡಿರುವ ಎಲ್ಲಾ ಪ್ರತಿಭಾವಂತ ಯುವ ಬರಹಗಾರರಿಗೆ ಅಭಿನಂದನೆಗಳು ಹಾಗೂ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಮುಂದಿನ ವರ್ಷಗಳಲ್ಲಿ 'ಬಿತ್ತಿ' ಒದಗಿಸುವ ಸುವರ್ಣಾಕಾಶವನ್ನು ಯೋಗ್ಯವಾದ ರೀತಿಯಲ್ಲಿ ಬಳಸಿಕೊಂಡು ಉತ್ತಮ ಸಾಹಿತಿಗಳು ರೂಪಿತವಾಗಲಿ ಎಂದು ಆಶೀರ್ವದಿಸುತ್ತೇನೆ.
ದಿನಾಂಕ : ೦೯/೦೬/೨೦೨೬

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ