ಯಾರಿಗೆ ಬೇಕು?
ಯಾರಿಗೆ ಬೇಕು ನೀನು ಹೇಳು
ಬದುಕಿದ್ದಾಗ ಓಡಾಡಿ ಒಟ್ಟಿಗೆ ಇದ್ದವರು
ಉಸಿರು ನಿಂತಮೇಲೆ ಹೆಣವೆನ್ನುವರು
ಒಂದೇ ತಟ್ಟೆಯಲುಂಡವರು ಪಿಂಡ ಕೂಳು ಹಿಡಿಯರು
ಹೇಳು ಯಾರಿಗೆ ಬೇಕಿದೆ ಇಲ್ಲಿ ನೀನು?
ಕಟ್ಟೆಗೆ ಕುಳಿತು ಹರಟೆ ಹೊಡೆದವರು
ಚಟ್ಟ ಹೋರಲು ಹೆದರಿ ಸರಿಯುವರು
ಬದುಕಿಗೆಲ್ಲ ಮುಳ್ಳು ಹಚ್ಚಿದವರು
ಆಗ ಹೂವೋ ಮಂಡಕ್ಕಿ ಚೆಲ್ಲುವರು
ಮತ್ತೆ ಬರಬಾರದೆಂದು ನವಣೆಯನ್ನೂ ಬಿತ್ತುವರು
ಹೇಳು ಇನ್ನು ನೀನು ಯಾರಿಗೆ ಬೇಕು?
ನಿನ್ನನ್ನ ಹೊತ್ತು ಊರಿಂದ ಹೋಗುವಾಗ
ಮಕ್ಕಳು ಹೆದರಿ ಮರೆಗೆ ಓಡುವರು
ಹಿರಿಯರು ಮನೆಯ ಬಾಗಿಲು ಮುಚ್ಚುವರು
ಹೋಟೆಲ್ಲು ಅಂಗಡಿಗೆಲ್ಲ ಅಪಶಕುನ ನೀನು
ಇನ್ನು ಹೇಳು ನೀನು ಯಾರಿಗೆ ಬೇಕು
ಯಾತ್ರೆಯನ್ನೆ ಜಾತ್ರೆಯಾಗಿಸುವ ಕೆಲವರು
ಸುದ್ದಿಗೆ ಜಾರುವ ಹೆಂಗಸರು
ತಮಾಷೆ ಮಾಡುವ ಗಂಡಸರು
ನೆನೆವವರು ಕೆಲವರಾದರೆ
ದೂರುವವರು ಹಲವರಿಲ್ಲಿ
ದತ್ತಿ ಕೊಟ್ಟಾಗ ದೇವರೆಂದ ಪೂಜಾರಿ
ದೆವ್ವವಾಗದಿರು ಎಂದು ದೂರ ನಿಂತಾಗ
ಇನ್ನಾರಿಗೆ ಬೇಕು ನೀನು ಹೇಳಿಬಿಡು
ಮಸಣದಲ್ಲೆ ಆಸ್ತಿಗಾಗಿ ಜಗಳಗಳು
ಮಡದಿಯ ಗೋಳಾಟದಲ್ಲೂ ಬೈಗುಳ
ಬಂದವರೆಲ್ಲ ತೋರಿಕೆಗೆ ಅತ್ತು ಕರೆಯಲು
ಭೂತಾಯಿಗೆ ನಾನು ಬೇಕೆಂದು ಸಮಾಧಾನಿಯಾದೆಯಾ?
ನೀನೆ ಹೇಳಿಗ ಇಲ್ಯಾರಿಗೆ ಬೇಕು ನೀನು?
ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ