ಸೋಮವಾರ, ಏಪ್ರಿಲ್ 6, 2026

ಸಂಚಿಕೆ - ೧೫

ಕನ್ನಡಕ್ಕೆ ಕಾವಲ್ಯಾರು?

      ಶತ ಶತಮಾನಗಳ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆ ಪ್ರಸ್ತುತ ದಿನಗಳಲ್ಲಿ ಅದರ ಬಳಕೆ ಹೇಗಿದೆ. ಕನ್ನಡವನ್ನು ಉಳಿಸಿ ಬೆಳೆಸಲು ಸರ್ಕಾರಗಳು ಯಾವ ಕ್ರಮಗಳನ್ನು ಕೈಗೊಂಡಿವೆ? ಬರಿ ಮಾತಲ್ಲಿ ಕನ್ನಡ ಕನ್ನಡ ಎನ್ನುವವರು ತಮ್ಮ ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದ್ದಾರೆ? ನಾಡಿನಲ್ಲಿ ಕನ್ನಡದ ಸ್ಥಾನ ಏನು? ಪರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಕನ್ನಡದ ಬಳಕೆ, ಕಲಿಕೆ ಹೇಗಿದೆ ಎಂದು ನೋಡಿದರೆ ಎಲ್ಲವೂ ಶೂನ್ಯ. ಪರಭಾಷೆ ಬಳಕೆಗೂ ಮೊದಲು ನಮ್ಮ ನಾಡಿನ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಇದರ ಕುರಿತು ಸಾರ್ವಜನಿಕರೂ ಅದರಲ್ಲೂ ವಿದ್ಯಾವಂತ ವರ್ಗದವರು, ಸರ್ಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ ಇಲ್ಲದಿದ್ದಲ್ಲಿ ಬೇಲಿಯೇ ಎದ್ದು ಹೊಲವೆಲ್ಲ ಮೇದಂತೆ ಆಗುವುದು.

      ಪ್ರಸ್ತುತ ದಿನಗಳಲ್ಲಿ ಪರಭಾಷೆಯೆ ನಲಿದಾಡುತ್ತಿದೆ ಅದು ಬಸ್ಸು ನಿಲ್ದಾಣದಿಂದ ಹಿಡಿದು ವಿಶ್ವವಿದ್ಯಾನಿಲಯಗಳ ವರೆಗೆ, ಅದರಲ್ಲೂ ವಿದ್ಯಾವಂತ ವರ್ಗದವರ ಆಂಗ್ಲ ಭಾಷೆಯ ಮೊಹ ಹೇಳತೀರದು, ಹಾಗಾದರೆ ಬೇರೆ ಭಾಷೆಗಳು ಕಲಿಯಬಾರದು ಎಂದಲ್ಲ ಎಲ್ಲವನ್ನೂ ಎಲ್ಲರನ್ನೂ ಸ್ವೀಕರಿಸುವ ವ್ಯಕ್ತಿತ್ವವಿರಬೇಕು ನಿಜ. ಆದರೆ ತಮ್ಮತನವನ್ನೆ ಕಳೆದುಕೊಂಡು ಪರರಲ್ಲಿ ಶರಣಾಗುವುದನ್ನು ಬಿಟ್ಟು ಬೇರೆ ಭಾಷೆಯ ಅವಶ್ಯಕತೆ ಇಲ್ಲದ ಸಂದರ್ಭಗಳಲ್ಲಿ, ಸ್ಥಳಗಳಲ್ಲಿ ಕನ್ನಡವನ್ನು ಬಳಸಬೇಕು. ಕನ್ನಡಿಗರಾಗಿ ನಾವೇ ಕನ್ನಡವನ್ನು ಬಳಸದಿದ್ದರೆ ಅದು ಬೆಳೆಯುವುದಿರಲಿ ಉಳಿಯುವುದಾದರೂ ಹೇಗೆ.

      ಬಹು ಮುಖ್ಯವಾಗಿ ದೇಶೀಯ ಭಾಷೆಗಳ ಸ್ಥಾನವನ್ನು ಇಂದು ಬಹುಮಟ್ಟಿಗೆ ಆಂಗ್ಲಭಾಷೆಯೆ ಆವರಿಸಿದೆ ಅವರು ನಮ್ಮನ್ನು ಬಿಟ್ಟರೂ, ನಾವು ಅವರನ್ನು ಬಿಡುತ್ತಿಲ್ಲ.

      ಯಾವುದೇ ಸಂದರ್ಭದಲ್ಲಿ ಕನ್ನಡ ಮಾತಾಡುವ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಎಲ್ಲರಲ್ಲೂ ಇದ್ದಾಗಲೂ ಅನಾವಶ್ಯಕವಾಗಿ ಆಂಗ್ಲ ಭಾಷೆಯನ್ನು ಬಳಸುವುದು ಇದು ಏನನ್ನು ಸೂಚಿಸುತ್ತದೆ ನೀವೆ ಹೇಳಿ?. ಆಂಗ್ಲ ಭಾಷೆಗೆ ವಿಶ್ವದೆಲ್ಲೆಡೆ ಆಹ್ವಾನವಿದೆ. ಆದರೆ ಕನ್ನಡಕ್ಕೆ ಕರ್ನಾಟಕದಲ್ಲಿ ಕೆಲವೆಡೆ ವಿರೋಧವಿದೆ ಅದು ಶೈಕ್ಷಣಿಕ ಸಂಸ್ಥೆಗಳಲ್ಲಿ ಇರಬಹುದು, ಮಹಾನಗರಗಳ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಇರಬಹುದು. ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಯಾವುದೆ ಭೀತಿ ಇಲ್ಲದೆ ಪರ ಭಾಷಿಕರು ವೃತ್ತಿ ಮಾಡುವರು ಆದರೆ ಕನ್ನಡಿಗರ ಸ್ಥಿತಿ ಗತಿ ಹೇಗಿದೆ ಎಂದು ತಿಳಿದಿದೆಯೆ. ಹೀಗೆಯೆ ಪರಭಾಷೆಯ ಮೋಹದಲ್ಲಿ ಶಿಕ್ಷಣ ಸಮಾಜ ಮುಂದುವರಿದರೆ,

      ಭವಿಷ್ಯದಲ್ಲಿ ಕನ್ನಡ ಭಾಷಿಗರೆ ಅಲ್ಪಸಂಖ್ಯಾತರಾಗುವ ಕಾಲ ದೂರವಿಲ್ಲ. ವಿಶ್ವ ಲಿಪಿಗಳ ರಾಣಿ ಕಾಣದೆ ಮಾಯವಾದರೂ ಆಶ್ಚರ್ಯವೇನಿಲ್ಲ. ಕನ್ನಡವನ್ನು ಬಳಸಿ ಉಳಿಸುವುದು ಯಾರು?

      ಕನ್ನಡಕ್ಕೆ ಕಾವಲಾದರು ಯಾರು? ಜನಸಾಮಾನ್ಯರೊ?, ವಿದ್ಯಾವಂತ ವರ್ಗದವರೊ?, ಆಡಳಿತಗಾರರೊ?, ಸರ್ಕಾರಗಳೊ?, ಪರಭಾಷಿಕರೊ ಇಲ್ಲ ಪರ ದೇಶಿಗರೊ? ನೀವೆ ಹೇಳಿ.

ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...