ಸೋಮವಾರ, ಏಪ್ರಿಲ್ 6, 2026

ಸಂಚಿಕೆ - ೧೫

ಒಂದು ಗುಟುಕು

      ಜ್ಯೋತಿ ಮನೆಯ ಹೊರಗೆ ಜಗಲಿ ಮೇಲೆ ಕುಳಿತುಕೊಂಡು ಏನನ್ನೋ ಯೋಚನೆ ಮಾಡುತ್ತಾ ಕುಳಿತಿದ್ದಳು. ಅಲ್ಲಿಗೆ ಅವಳ ತಂಗಿ ಜಾನಕಿ ಓಡಿ ಬಂದು ಅಕ್ಕನ ಬಳಿ ತನ್ನ ಶಾಲೆಯಲ್ಲಿ ನಡೆದಂತಹ ಘಟನೆಯನ್ನು ಹೇಳಲು ಪ್ರಾರಂಭಿಸಿದಳು. ಆದರೆ ಜ್ಯೋತಿಯು ತನ್ನ ಮೌನದ ಮಾತಿನಲ್ಲಿ ಅವಳಿಗೆ ಉತ್ತರ ನೀಡುತ್ತಿದ್ದಳು. ಆಗ ಜಾನಕಿ ಏನು ಅಕ್ಕ ನಾನು ಅಷ್ಟೊಂದು ಮಾತನಾಡುತ್ತಿದ್ದೇನೆ ನೀನು ಸುಮ್ಮನಿದ್ದೀಯಲ್ಲ ಏನಾಯ್ತು? ಎಂದು ಕೇಳಿದಳು. ಅದಕ್ಕೆ ಜ್ಯೋತಿ ಏನಿಲ್ಲ ಅಂದಳು. ಜಾನಕಿ ಪುನಃ ಏನೋ ಯೋಚನೆ ಮಾಡುತ್ತಿದ್ದೀಯಾ? ಹೇಳು ಏನು ವಿಷಯ ಅಂತ ಎಂದು ಒತ್ತಾಯ ಮಾಡಿ ಕೇಳಿದಳು.

      ಜ್ಯೋತಿ ಅದು ನಿನ್ನೆ ರಾತ್ರಿ ನಾನು ೧೧ ಗಂಟೆಗೆ ಇಲ್ಲಿಯೇ ಕುಳಿತುಕೊಂಡು ಪುಸ್ತಕ ಓದುತ್ತಾ ಇದೆ. ಆಗ ದಾರಿಯಲ್ಲಿ ಹೋಗುತ್ತಿದ್ದ ಒಬ್ಬ ಹೆಂಗಸು ನಮ್ಮ ಮನೆಯ ಗೇಟಿನ ಬಳಿ ಬಂದು ನಿಂತು ಬಿಟ್ಟಳು ಯಾಕೆ ಎಂದು ತಿಳಿಯಲಿಲ್ಲ. ನಾನು ಏನಾದರೂ ಬೇಕಾ ಎಂದು ಕೇಳಿದೆ. ಅದಕ್ಕೆ ಆಕೆ ಯಾವುದೇ ರೀತಿಯ ಉತ್ತರ ಕೊಡಲಿಲ್ಲ ಆದರೆ ಅಲ್ಲೆ ನಿಂತಿದ್ದಳು. ನನ್ನನ್ನು ನೋಡಿ ನಕ್ಕಳು ಯಾಕೆ ಅಂತ ತಿಳಿಯಲಿಲ್ಲ. ಮತ್ತೆ ಸ್ವಲ್ಪ ಅಲ್ಲೇ ನಿಂತು ಹೊರಟು ಹೋದಳು. ನನ್ನಗೆ ಹೆದರಿಕೆಯಾಗಿ ಮನೆಯ ಒಳಗೆ ಬಂದೆ ಆದರೆ ಆಕೆ ಯಾರು? ಯಾಕೆ ನಕ್ಕಳು? ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ.

      ಮರುದಿನ ಬೆಳಿಗ್ಗೆ ಎದ್ದು ಕಾಲೇಜಿಗೆ ಹೊರಡುವಾಗ ದಾರಿಯಲ್ಲಿ ಆ ಹೆಂಗಸು ಸಿಕ್ಕಿದ್ದಳು. ಅವಳೇ ನಿನ್ನೆ ನಕ್ಕ ಹೆಂಗಸು ಆದರೆ ಇವತ್ತು ಮಾತ್ರ ನನ್ನ ನೋಡಿ ಕೂಡ ನಾನು ಯಾರೆಂದು ತಿಳಿಯದ ಹಾಗೆ ಹೋದಳು. ನನಗೆ ಅದನ್ನು ನೋಡಿ ಅಚ್ಚರಿಯಾಯಿತು! ಹಾಗಾದರೆ ನಿನ್ನೆ ರಾತ್ರಿ ನಕ್ಕ ಹೆಂಗಸು ಇವಳೋ ಅಥವಾ ಬೇರೆ ಯಾರೋ ಎಂದು ತಿಳಿಯದೆ ಹೋಯಿತು. ಅದೇ ಯೋಚಿಸುತ್ತಾ ಇದ್ದೆ ಎಂದು ಹೇಳಿದಳು. ಅದಕ್ಕೆ ಜಾನಕಿ ಯಾರೋ ತಲೆ ಕೆಟ್ಟವಳು ಇರಬೇಕೆಂದು ಅಕ್ಕನನ್ನು ಸಮಾಧಾನಿಸಿ ಮನೆಯ ಒಳಗೆ ಕರೆದುಕೊಂಡು ಹೋದಳು.

      ಕಾಲೇಜಿಗೆ ರಜೆ ಇದ್ದ ಕಾರಣ ಜ್ಯೋತಿ ತಡವಾಗಿ ಎದ್ದು ತನ್ನ ಮನೆಗೆಲಸವೆಲ್ಲವನ್ನು ಮುಗಿಸಿ ಪೇಟೆಗೆ ಹೋಗಲೆಂದು ತಯಾರಾದಳು. ಜ್ಯೋತಿ ಬಸ್ಸಿಗೆಂದು ಬಸ್ ನಿಲ್ದಾಣದಲ್ಲಿ ಕಾಯುತ್ತಿರುವಾಗ ಅಲ್ಲೆ ಪಕ್ಕದಲ್ಲಿ ಇದ್ದಂತಹ ಬ್ಯಾನರ್‌ನ ಮೇಲೆ ಜ್ಯೋತಿಯ ಕಣ್ಣು ಹೋಯಿತು. ಅದರಲ್ಲಿ ಭಾವಪೂರ್ವ ಶ್ರದ್ಧಾಂಜಲಿ ಬರೆದಿತ್ತು. ಯಾವುದೋ ಹೆಂಗಸಿನ ಫೋಟೋ ಎಂದು ನೋಡಿದಾಗ ಅದೇ ಹೆಂಗಸು ನೆನ್ನೆ ನಕ್ಕವಳು! ಜ್ಯೋತಿಗೆ ಹೆದರಿಕೆಯಿಂದ ಕೈ ಕಾಲು ನಡುಕ ಬಂತು. ಆ ಹೆಂಗಸು ಸತ್ತು ಹದಿಮೂರು ದಿನ ಆಗಿತ್ತು. ಜ್ಯೋತಿ ಹೆದರಿ ಮನೆಗೆ ಓಡಿದಳು. ಮನೆಗೆ ಹೆದರಿ ಬಂದ ಜ್ಯೋತಿಯ ಅಮ್ಮ ನೋಡಿ ಏನಾಯ್ತು ಎಂದು ಕೇಳಿದಳು. ಅದಕ್ಕೆ ಜ್ಯೋತಿ ನಡೆದ ಸಂಗತಿಯೆಲ್ಲ ಹೇಳಿದಳು. ಆಕೆ ಯಾರು? ಆಕೆ ಹೇಗೆ ಸತ್ತಳು? ನಿನಗೆ ಪರಿಚಯವಿದೆಯೆ? ಎಂದು ತಾಯಿಯ ಬಳಿ ಕೇಳಿದಳು.

      ಅದಕ್ಕೆ ಜ್ಯೋತಿಯ ತಾಯಿ ಅವಳ ಹೆಸರು ಲಕುಮಿ. ಆಕೆಗೆ ಒಬ್ಬಳು ತಂಗಿ ಇದ್ದಾಳೆ. ಅವರಿಬ್ಬರು ಅವಳಿ-ಜವಳಿ ಪಕ್ಕದ ಬೀದಿಯಲ್ಲಿ ಅವರ ಮನೆ. ಆದರೆ ಅವಳು ಪುಣೆಯಲ್ಲಿ ಇರುವುದು. ಮೊನ್ನೆ ತಾನೆ ಪುಣೆಯಿಂದ ಬಂದು ನಾಲೈದು ವಾರವಾಯಿತು. ಅವಳು ಮೊನ್ನೆ ಪೇಟೆಗೆ ಎಂದು ತನ್ನ ಸ್ಕೂಟರ್‌ನಲ್ಲಿ ಸಂಜೆ ಹೋಗುವಾಗ ಲಾರಿ ಬಂದು ಡಿಕ್ಕಿ ಹೊಡೆದು ಆಕೆ ರಸ್ತೆಗೆ ಉರುಳಿ ಬಿದ್ದಿದ್ದರಿಂದ ತಲೆಗೆ ಪೆಟ್ಟಾಯಿತು. ತಲೆಯಿಂದ ರಕ್ತ ಹೋಗುತ್ತಿದ್ದರು ಅಲ್ಲೆ ನಿಂತಿದ್ದ ಜನರು ಯಾರು ಕೂಡ ಆಕೆ ಸಹಾಯಕೆ ಬಂದಿರಲಿಲ್ಲ. ಆದರೆ ಅಲ್ಲಿ ಇದ್ದ ಒಂದು ಹುಡುಗಿ ಅಂಬುಲೆನ್ಸ್‌ ಗೆ ಪೋನ್ ಮಾಡಿ ಆಕೆಯ ಹತ್ತಿರಕ್ಕೆ ಬಂದು ನೀರು ಕುಡಿಸಿದಳಂತೆ ಆದರೆ ಏನು ಪ್ರಯೋಜನ ಆಂಬುಲೆನ್ಸ್ ಆಸ್ಪತ್ರೆಗೆ ತಲುಪುವ ಮೊದಲು ದಾರಿ ಮಧ್ಯದಲ್ಲಿ ಸತ್ತು ಹೋದಳು. ಜ್ಯೋತಿಯು ತನ್ನ ತಾಯಿ ಹೇಳಿದ್ದನ್ನು ಕೇಳಿದಾಗ ಆ ಹೆಂಗಸು ಯಾರು? ಯಾಕೆ ನಕ್ಕಳು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತ್ತು.

ಪಲ್ಲವಿ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...