ಸೋಮವಾರ, ಏಪ್ರಿಲ್ 6, 2026

ಸಂಚಿಕೆ - ೧೫

 ಭವಿಷ್ಯದ ಭಾರತ ಗೆಲುವಾಗಲು ಕೆಲವು ಆಲೋಚನೆಗಳು

      ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಭಾರತ, ಇಲ್ಲಿ ಸಾವಿರಾರು ಸಂಸ್ಕೃತಿಗಳು, ಅಷ್ಟೇ ಆಚರಣೆಗಳು, ಹಲವು ಧರ್ಮಗಳು, ಪಂಗಡಗಳು ಕಾಣಬಹುದು. ಭಾರತವನ್ನು ಹಲವು ರಾಜರುಗಳು, ಹಲವು ಮನೆತನಗಳು ಆಳಿ ಹೋಗಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಇವರುಗಳ ಕನಸು ಭಾರತವನ್ನು ಬ್ರಿಟಿಷರಿಂದ ಮುಕ್ತವಾಗಿಸಿ. ನಮ್ಮದೇ ಸಂಸ್ಕೃತಿಯನ್ನು ಅನುಸರಿಸಿ ಗುಲಾಮ ಪರಂಪರೆಯನ್ನು ಬಿಟ್ಟು ನಿಲ್ಲಿವುದಾಗಿತ್ತು. ಸ್ವಾತಂತ್ರ್ಯ ಬಂದ ನಂತರದಲ್ಲಿ ಭಾರತೀಯರ ಕನಸು ಬೇರೆನೇ ಆಗಿತ್ತು. ಅಂದು ಮೇಧಾವಿಗಳು ಕಂಡ ಕನಸೆಲ್ಲವೂ ಕನಸಾಗಿಯೇ ಉಳಿದುಕೊಂಡಿದೆ. ಭಾರತದ ಅಭಿವೃದ್ಧಿಯಾಗಬೇಕೆಂಬ ದೂರದೃಷ್ಟಿಯಿಂದ ಹಲವು ಕನಸುಗಳನ್ನು ಭಾರತೀಯ ಪ್ರಜೆಗಳು ಹೊತ್ತುಕೊಂಡಿದ್ದಾರೆ. ನನ್ನ ಕನಸಿನ ಭಾರತದ ನಿರ್ಮಾಣಕ್ಕೆ ಇನ್ನೂ ಹಲವು ಚಿಂತನೆಗಳು ಹುಟ್ಟಬೇಕಿದೆ. ನನ್ನ ಕನಸಿನ ಭಾರತ ಹೀಗಿರಲಿ;


ನ್ಯಾಯ ವ್ಯವಸ್ಥೆಯ ಸುಧಾರಣೆ : -

      ನ್ಯಾಯ ವ್ಯವಸ್ಥೆಯ ಒಳಗೆ ಅಮೂಲಾಗ್ರ ಸುಧಾರಣೆಯಾಗುವುದು ಇಂದಿನ ಬಹುದೊಡ್ಡ ಬೇಡಿಕೆ. ಮುಖ್ಯವಾಗಿ ಸಹಸ್ರಾರು ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಅದು ಈಗಲೂ ಕೊಳೆಯುತ್ತಿದೆ. ನ್ಯಾಯಾಧೀಶರ ಕೊರತೆ ಇದಕ್ಕೆ ಮುಖ್ಯ ಕಾರಣ. ಇದನ್ನು ತುಂಬುವಲ್ಲಿ ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಭಾರತದ ಅಭಿವೃದ್ಧಿಯ ಕನಸನ್ನು ನಾವು ಕಾಣುವುದು ಅಸಾಧ್ಯದ ಮಾತು. ನ್ಯಾಯಾಲಯದಲ್ಲಿ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕು. ಹಾಗೆಯೇ ದಲಿತರು ಹಿಂದುಳಿದ ವರ್ಗ ಸಮುದಾಯಕ್ಕೆ ಸೇರಿದ ನ್ಯಾಯಾಧೀಶರ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕು. ಈಗಲೂ ನ್ಯಾಯಾಲಯದಲ್ಲಿ ಮಹಿಳೆಯರ ಬಗ್ಗೆ ನೀಚವಾಗಿ ಮಾತನಾಡುವುದು, ನ್ಯಾಯದ ವಿರುದ್ಧ ಅನ್ಯಾಯದ ತೀರ್ಪನ್ನು ಕೊಡುವುದು ಇವೆಲ್ಲವೂ ಹೇರಳವಾಗಿ ನಡೆಯುತ್ತಿದೆ. ನ್ಯಾಯವ್ಯವಸ್ಥೆ ಸುಧಾರಣೆಯಾದರೆ ಭಾರತದ ಅಭಿವೃದ್ಧಿ ಪಥದಲ್ಲಿ ಒಂದು ದೊಡ್ಡ ಮೈಲಿಗಲ್ಲಿಯಾಗಬಹುದು.


ಬಡವರೂ ಭಾರತದವರೇ : -

      ಭಾರತವು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗಳನ್ನು ಸಾಧಿಸುವ ಆರ್ಥಿಕತೆಯಲ್ಲಿ ಸಮಗ್ರ ಬದಲಾವಣೆಯನ್ನು ತರುವಲ್ಲಿ ಯಶಸ್ವಿಯಾಗಿದೆಯೇ ಎಂದು ಕೇಳಿದರೆ ಖಂಡಿತವಾಗಿಯೂ ಭಾರತದಲ್ಲಿರುವ ಬಡವರು ಬಡವರಾಗಿಯೇ ಉಳಿದಿದ್ದಾರೆ. ಬಡವರನ್ನು ಮೇಲೆಕ್ಕೆತ್ತುವ ಕೆಲಸದಲ್ಲಿ, ಅದಕ್ಕೆ ಬೇಕಾದ ಪರಿಹಾರವನ್ನು ಕಂಡುಕೊಳ್ಳುವುದರಲ್ಲಿ ವಿಫಲವಾಗುತ್ತಿದೆ ಎಂದು ಇತ್ತೀಚಿನ ವರದಿಗಳಿಂದ ನಮಗೆ ತಿಳಿಯಬಹುದು. ಸದೃಢ ಭಾರತ ನಿರ್ಮಾಣವಾಗಲು ಭಾರತದ ಪ್ರತಿಯೊಬ್ಬ ಪ್ರಜೆಯು ಉನ್ನತ ಹುದ್ದೆಯಲ್ಲಿದ್ದು ಮೂರು ಹೊತ್ತಿನ ತುತ್ತಿಗೆ ಅನ್ಯರ ಮುಂದೆ ಕೈಚಾಚದೆ ಬದುಕಿದರೆ ನನ್ನ ಕನಸಿನ ಭಾರತ ಬೆಳಗಬಹುದು. ಇಲ್ಲಿ ಮಧ್ಯಮ ವರ್ಗದ ಜನರು, ಬಡವರು ಕಷ್ಟವನ್ನು ಅನುಭವಿಸುವವರು. ಅವರಿಗೆ ಬೇಕಾದ ಸರಿಯಾದ ಯೋಜನೆಗಳನ್ನು, ಅಭಿವೃದ್ಧಿಯ ಮಾರ್ಗವನ್ನು ಕಂಡುಕೊಳ್ಳಬೇಕು.


ಮಾನವ ಸಂಪತ್ತು, ಬಳಕೆಯಾಗಲಿ : -

      ಭಾರತ ಚೀನಾವನ್ನು ಹಿಂದಿಕ್ಕಿ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಜನಸಂಖ್ಯೆಯ ವಿಚಾರದಲ್ಲಿ ಚರ್ಚೆಗಳು ನಡೆದರೂ ರಾಜಕೀಯವನ್ನು ಬದಿಗಿಟ್ಟು ಭಾರತದ ಜನಸಂಖ್ಯೆ ನಿಜಕ್ಕೂ ಸಮಸ್ಯೆಯೋ ಅಥವಾ ಸಂಪನ್ಮೂಲವೋ ಎನ್ನುವುದನ್ನು ಮುಕ್ತ ಮನಸ್ಸಿನಿಂದ ಚರ್ಚಿಸುವುದಕ್ಕೆ ನಮ್ಮ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಜನಸಂಪನ್ಮೂಲವನ್ನು ಬಳಸಿಕೊಂಡು ಭಾರತ ಅಭಿವೃದ್ಧಿಯ ಪಥದಲ್ಲಿ ಚಲಿಸಲು ಯಥೇಚ್ಛವಾದ ಅವಕಾಶಗಳಿವೆ. ಯುವಶಕ್ತಿಯನ್ನು ಬಳಸಿಕೊಂಡು ಭಾರತದ ಭವಿಷ್ಯವನ್ನು ಚೆನ್ನಾಗಿ ಕಟ್ಟಿಕೊಳ್ಳಲು ಸಾಧ್ಯವಾಗಬಹುದು. ಚೀನಾ ಭಾರತಕ್ಕಿಂತ ಅದೆಷ್ಟೋ ಅಭಿವೃದ್ಧಿಯನ್ನು ಕಂಡುಕೊಂಡಿದೆ. ಭಾರತವು ಜನ ಸಂಪನ್ಮೂಲವನ್ನು ಆ ನಿಟ್ಟಿನಲ್ಲಿ ಬಳಸಿಕೊಂಡರೆ ಭವ್ಯ ಭಾರತದ ಕನಸನ್ನು ನಾವು ಕಾಣಬಹುದು.


ಸಂಸ್ಕೃತಿಯನ್ನು ಉಳಿಸೋಣ : -

      ಭಾರತವು ಹಲವು ಸಂಸ್ಕೃತಿಗಳ ತವರೂರು. ಇಲ್ಲಿ ಸಂಸ್ಕೃತಿಗಳ ಕೊಂಡುಕೊಳ್ಳುವಿಕೆ ಸದಾ ನಡಿಯುತ್ತಲೇ ಬಂದಿದೆ. ಪ್ರತಿ ಆಚಾರ ವಿಚಾರಗಳಲ್ಲಿ ಧರ್ಮವನ್ನು ಮರೆತು ಒಗ್ಗೂಡುವ ಪರಿಪಾಠ ನಮ್ಮ ನಡುವೆ ಇದೆ. ಭಾರತದ ಸೌಂದರ್ಯವನ್ನು ಹೆಚ್ಚಿಸುವ ಕೆಲಸಗಳು ಸಂಸ್ಕೃತಿಯ ನಡುವೆ ನಡೆಯುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸಂಸ್ಕೃತಿಗಳು ಪರಸ್ಪರ ಬೆರೆತುಕೊಂಡಾಗ ಮನುಷ್ಯರ ನಡುವೆ ದ್ವೇಷ ಗಲಭೆಗಳು ಇಲ್ಲವಾಗಿ ಸುಂದರ ಭಾರತದ ಕನಸನ್ನು ಕಾಣಲು ಸಾಧ್ಯವಾಗಬಹುದು. ಭಾರತವನ್ನು ಹೊರ ರಾಷ್ಟ್ರಗಳಲ್ಲಿ ಗುರುತಿಸುವಂತೆ ಮಾಡಿದ್ದು ಇಲ್ಲಿನ ಸಂಸ್ಕೃತಿ, ಭಾಷೆ, ವಸ್ತ್ರಧಾರಣೆಯ ಶೈಲಿ, ಆಹಾರ ಪದಾರ್ಥ ಹಾಗು ಆಚರಣೆಗಳಾಗಿವೆ. ಎಲ್ಲರಿಗೂ ಅವರವರ ಧಾರ್ಮಿಕ ಸ್ವಾತಂತ್ರ್ಯವನ್ನು ಕೊಟ್ಟು ಪ್ರಜಾಪ್ರಭುತ್ವವನ್ನು ಬೆಳೆಸಿಕೊಂಡರೆ ಬಲಿಷ್ಠ ಭಾರತದ ನಿರ್ಮಾಣ ಮಾಡಬಹುದು.


ಭ್ರಷ್ಟಾಚಾರ ಭಯೋತ್ಪಾದನೆಯ ನಿರ್ಮೂಲನೆ : - 

      ಭಾರತ ದೇಶವು ಹಲವು ಕ್ಷೇತ್ರಗಳಲ್ಲಿ ಭ್ರಷ್ಟ ಆಡಳಿತವನ್ನು ನಡೆಸುತ್ತಿರುವುದು ಖೇದಕರ ಸಂಗತಿ. ಜನಸಾಮಾನ್ಯರ ಸಂಪತ್ತನ್ನು ಲೂಟಿ ಮಾಡಿ, ಅನಧಿಕೃತವಾದ ದಾರಿಯಲ್ಲಿ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ತಮಗೆ ಅರ್ಹವಲ್ಲದ ಹಣವನ್ನು ಹೂಡಿಕೆ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾರಿಗೆ ಯಾವ ಸಂಪತ್ತು ಸೇರಬೇಕೋ ಅದು ಸರಿಯಾಗಿ ತಲುಪುವಲ್ಲಿ ವಿಫಲವಾಗುತ್ತಿದೆ. ತನಗೆ ಸೇರ ಬೇಕಾದ ಸಂಪತ್ತನ್ನು ಮಾತ್ರ ತನ್ನ ಪ್ರಾಮಾಣಿಕತೆಯನ್ನು ಅರಿತು ಜೀವಿಸಿದರೆ ಆ ಸಂಪತ್ತನ್ನು ಭಾರತೀಯ ಪ್ರಜೆಗಳ ಅಗತ್ಯತೆಗೆ ಬಳಸಲು ಸಾಧ್ಯವಾಗಬಹುದು. ಸಂಪತ್ತಿನ ಸಮಾನ ಹಂಚಿಕೆ, ಅವುಗಳ ಸರಿಯಾದ ಬಳಕೆಯಿಂದ ಭಾರತದ ಭವಿಷ್ಯವನ್ನು ಬೆಳಗಲು ಸಾಧ್ಯವಾಗಬಹುದು. ಭಯೋತ್ಪಾದನೆ ಕೂಡ ಭಾರತದ ಕಪ್ಪು ಚುಕ್ಕೆಯಾಗಿ ಕಾಣಿಸುತ್ತಿದೆ. ಮನುಷ್ಯ ಮನಸ್ಸುಗಳಲ್ಲಿ ಭೀತಿಯನ್ನು ಹುಟ್ಟಿಸಿ ಅವರಿಗೆ ಸರಿಯಾಗಿ ಜೀವಿಸುವ ಹಕ್ಕನ್ನು ಕೊಡದೇ ಮಾನಸಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಕುಗ್ಗಿಸಲು ಭಯೋತ್ಪಾದನೆ ಎಂಬ ಮಾರಕ ಅಸ್ತ್ರವನ್ನು ಬಳಸಿಕೊಳ್ಳಲಾಗುತ್ತಿದೆ. ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯ ನಿರ್ಮೂಲನೆಯಿಂದ ಚಂದದ ಭಾರತದ ಸಮಾಜ ನಿರ್ಮಾಣಕ್ಕೆ ನಮ್ಮಿಂದ ಸಾಧ್ಯವಾಗಬಹುದು.


ನಾಗರಿಕ ಪ್ರಜ್ಞೆಯ ಮರು ಹುಟ್ಟು : - 

      ಭಾರತೀಯ ಪ್ರಜೆಗಳಾದ ನಮ್ಮ ಮೇಲು ಹಲವು ಕರ್ತವ್ಯಗಳಿವೆ. ಅವುಗಳನ್ನು ಸರಿಯಾಗಿ ಪಾಲಿಸಿಕೊಂಡು ಹೋಗಬೇಕಾದದ್ದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಕೂಡ ಹೌದು. ಸುಂದರ ಭಾರತದ ನಿರ್ಮಾಣದಲ್ಲಿ ತನಗಿರುವ ಪಾತ್ರದ ಬಗ್ಗೆ ಚಿಂತಿಸುತ್ತ ಹೋದರೆ ಸದೃಢ ಭಾರತದ ಕನಸನ್ನು ನಾವು ಕಾಣಬಹುದು. ನಾಗರಿಕನು ಸ್ವತಂ ಪ್ರಜ್ಞಾವಂತನಾಗಿ ಇಲ್ಲಿ ಬಾಳಿದರೆ ಹಲವು ಪ್ರಯೋಜನಗಳು ನಮ್ಮ ದೇಶಕ್ಕೂ ಇಲ್ಲಿನ ಮಾನವ ಸಮೂಹ ಕರೆದೊಯ್ಯುವುದರಲ್ಲಿ ಎರಡು ಮಾತಿಲ್ಲ. ನಾಗರಿಕರು ಪ್ರಜ್ಞಾವಂತರಾಗಿ, ಬೇಕಾದಲ್ಲಿ ಸರಿಯಾದ ರೀತಿಯಲ್ಲಿ ಪ್ರಶ್ನಿಸಿ, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡು, ಸಮಾಜದಲ್ಲಿ ನಡೆಯುವ ಕೃತ್ಯಗಳಿಗೆ ಸರಿಯಾದ ಉತ್ತರವನ್ನು ಕೊಟ್ಟು, ಅನ್ಯಾಯವಗುವಲ್ಲಿ ನ್ಯಾಯದ ಪರವಾಗಿ ಮಾತನಾಡಿ, ಸುಂದರ ಸಮಾಜ ನಿರ್ಮಾಣಕ್ಕೆ ಆಲೋಚಿಸಿ, ಅವುಗಳ ವಿರುದ್ಧ ಕ್ರಮ ಕೈಗೊಂಡರೆ ನಮ್ಮ ಭಾರತ ಗೆಲುವಾಗಬಹುದು.


ಮೂಲ ಸೌಕರ್ಯಗಳ ಒದಗಿಸುವಿಕೆ : - 

      ಸರಕಾರಗಳ ಬಹಳ ಮುಖ್ಯ ಗುರಿ ಮೂಲ ಸೌಕರ್ಯಗಳನ್ನು ಎಲ್ಲರಿಗೂ ತಲಿಪಿಸುವುದಾಗಿದೆ. ಆದರೆ ಅವುಗಳನ್ನು ಮಾಡುವುದರಲ್ಲಿ ಸರಕಾರಗಳು ವಿಫಲವಾಗುತ್ತಾ ಬಂದಿದೆ. ಇನ್ನು ಕೂಡ ಬಡವರು ಬಡವರಾಗಿಯೇ ಉಳಿದ ಘಟನೆಗಳು ನಮ್ಮ ಮುಂದಿದೆ. ಅವರಿಗೆ ಸಿಗಬೇಕಾದ ಮೂಲ ಸೌಕರ್ಯಗಳು ಕೂಡ ನೀಡಲು ಅಸಾಧ್ಯವಾಗಿದೆ. ಸ್ವಾತಂತ್ರ್ಯದ ನಂತರದಲ್ಲೂ ಕೂಡ ಇಷ್ಟು ವರ್ಷಗಳ ಅಂತರದಲ್ಲಿ ಇಲ್ಲಿರುವ ಜನರಿಗೆ ತಮ್ಮ ಮೂಲ ಸೌಕರ್ಯಗಳನ್ನು ಏರ್ಪಡಿಸುವುದರಲ್ಲಿ ವಿಫಲವಾಗಿದೆ ಎಂಬುದರಲ್ಲಿ ಬಹಳ ಖೇದವಿದೆ. ಮೂಲ ಸೌಕರ್ಯಗಳು ಕೊಟ್ಟರೆ ಅವರಿಗೆ ತಮ್ಮ ಜೀವನ ಮಾರ್ಗವನ್ನು ಸುಧಾರಿಸಿಕೊಳ್ಳಲು ಸುಲಭವಾಗುತ್ತದೆ. ತನ್ನ ಹೊಟ್ಟೆಪಾಡಿಗಾಗಿ ಎಲ್ಲೆಲ್ಲೋ ಅಲೆದಾಡುವ ಪರಿಸ್ಥಿತಿಯಲ್ಲಿ ಜನರಿರುವಾಗ, ಅವರ ಮೂಲ ಸೌಕರ್ಯಗಳನ್ನು ಪೂರೈಸಿಕೊಟ್ಟರೆ ಆ ಕುಟುಂಬವು ಬೆಳೆದು, ಊರು ಬೆಳೆದು. ಆ ಗ್ರಾಮವು ಬೆಳೆದು ಮುಂದೆ ಭಾರತದ ಅಭಿವೃದ್ಧಿಯಲ್ಲಿ ಅವನ ಚಿಂತನೆಗಳನ್ನು ಬಳಕೆ ಮಾಡುವುದರಲ್ಲಿ ಸಹಾಯಕವಾಗಬಹುದು.


ನಿಷ್ಪಕ್ಷ ಮಾಧ್ಯಮ ತಂಡ : - 

      ಪತ್ರಿಕೆಗಳು ಇಂದಿಗೂ ಸುದ್ದಿ ಮತ್ತು ಮಾಹಿತಿ ಪ್ರಸಾರ ಪ್ರಚಾರದ ಬಹಳ ಮುಖ್ಯ ಸಾಧನವಾಗಿ ಉಳಿದಿದೆ. ಒಂದು ಸರಕಾರವನ್ನು ಬೀಳಿಸುವ ತಾಕತ್ತು ಮತ್ತು ಸರಕಾರವನ್ನು ಉಳಿಸಿಕೊಳ್ಳುವ ತಾಕತ್ತು ಮಾಧ್ಯಮ ಕ್ಷೇತ್ರಕ್ಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರವು ತಮ್ಮ ಜವಾಬ್ದಾರಿಯನ್ನು ಮರೆತು ಸುದ್ದಿ ಬಿತ್ತರಿಸುತ್ತಿದೆ. ಸರಿಯಾದ ಮಾಹಿತಿಯನ್ನು ಹಂಚದೇ ಯಾರದೋ ಕೈ ಆಳುಗಳಾಗಿ ಕೆಲಸ ಮಾಡುವುದರಿಂದ ಸಮಾಜದಲ್ಲಿ ಸತ್ಯ ಅಂಶವನ್ನು ಹೊರಗಿಟ್ಟು ಸುಳ್ಳನ್ನು ಪ್ರಚಾರಪಡಿಸುವ ಉದ್ದೇಶವನ್ನು ಮಾಧ್ಯಮ ಕ್ಷೇತ್ರ ಹೊತ್ತಂತಿದೆ. ಒಂದು ಪ್ರದೇಶದಲ್ಲಿ ಅಥವಾ ಊರಿನಲ್ಲಿ ಒಂದು ಘಟನೆಯು ನಡೆದರೆ, ಅದರ ಸತ್ಯಾಂಶವನ್ನು ಹೊರ ಜಗತ್ತಿಗೆ ತಿಳಿಸುವ ಸಾಧನವಾದ ಮಾಧ್ಯಮವು ಸರಿಯಾದ ರೀತಿಯಲ್ಲಿ ಸುದ್ದಿಯನ್ನು ಬಿತ್ತರಿಸದೆ ಇದ್ದರೆ, ಅಲ್ಲಿ ಹಲವಾರು ಅನಾಹುತಗಳು ಸಂಭವಿಸುತ್ತದೆ. ಪ್ರಮುಖವಾಗಿ ನಿರಪರಾಧಿಯು ಅಪರಾಧವನ್ನು ಎದುರಿಸುವ ಸನ್ನಿವೇಶವೂ ಕೂಡ ಅಲ್ಲಿ ಸಂಭವಿಸುತ್ತದೆ. ಭಾರತದ ವಿವಿಧ ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ನಡೆಯುವ ಹಲವಾರು ಘಟನೆಗಳು ಸತ್ಯಾಂಶವನ್ನು ಮುಚ್ಚಿಟ್ಟು ಸುಳ್ಳನ್ನು ಪ್ರಸಾರ ಪಡಿಸುತ್ತಿದೆ. ಹೀಗೆ ಮಾಡಿದರೆ ಭಾರತದ ಭವಿಷ್ಯ ತೀರ ಕೆಳಮಟ್ಟದಲ್ಲಿ ಸಾಗಲು ಕಾರಣವಾಗಬಹುದು. ಮಾಧ್ಯಮವು ಸರಿಯಾದ ನಿಟ್ಟಿನಲ್ಲಿ ಸುದ್ದಿ ಪ್ರಸಾರ ಮಾಡಿದರೆ ಎಲ್ಲರಿಗೂ ನ್ಯಾಯವನ್ನು ಒದಗಿಸಿದಂತೆ ಆಗೋದರಲ್ಲಿ ಸಂಶಯವಿಲ್ಲ.


ಚರಿತ್ರೆಯನ್ನು ಮರೆಯದಿರೋಣ : - 

      ನಮ್ಮ ಈ ಕಾಲದ ದೊಡ್ಡ ದುರಂತವೇನೆಂದರೆ, ನಾವು ಆಗಿ ಹೋದ ಮೇಧಾವಿಗಳ ಚರಿತ್ರೆಯನ್ನು ಮರೆಯುವುದು. ಭಾರತದ ನಿರ್ಮಾಣಕ್ಕಾಗಿ ಸ್ವಾತಂತ್ರ್ಯ ಸಂದರ್ಭದಲ್ಲಿ ನಡೆದ ಆಲೋಚನೆಗಳು ಈ ಸಂದರ್ಭದಲ್ಲಿ ನೆನಪಿಸದೆ ಅವರದೇ ಆದ ಆಲೋಚನೆಗಳಲ್ಲಿ ಮುನ್ನಡೆಯುತ್ತಿದ್ದಾರೆ. ಅವರ ಆಲೋಚನೆಗಳು ಭಾರತದ ಅಭಿವೃದ್ಧಿಯನ್ನು ಬಯಸಿದಂತಿಲ್ಲ. ಈಗಲೂ ಸ್ವಾತಂತ್ರ್ಯದ ಸಂದರ್ಭದಲ್ಲಿ ನಡೆದ ಆಲೋಚನೆಗಳು ಪ್ರಸ್ತುತ ವಿನಿಸುತ್ತಿದೆ. ಕಾಲಕಾಲಕ್ಕೆ ಪ್ರಸ್ತುತವೇನಿಸುವ ಅವರ ಆಲೋಚನೆಗಳನ್ನು ಈಗಿನ ಕಾಲದಲ್ಲಿ ಅಳವಡಿಸಿಕೊಂಡರೆ ಅವರ ಚರಿತ್ರೆಯನ್ನು ಕಲಿತುಕೊಂಡರೆ ಅವರು ಕಂಡುಕೊಂಡ ಕನಸಿನ ಭಾರತವನ್ನು ನಮಗೆ ಮನಗಾಣಬಹುದು. ಗಾಂಧೀಜಿಯವರು ಶಾಂತಿಯ ಮೂಲಕ ಇಲ್ಲಿ ಸಮಾಧಾನವನ್ನು ಸ್ಥಾಪಿಸಬಹುದು, ತಮ್ಮ ಭಾರತವನ್ನು ಕಟ್ಟಬಹುದು ಎಂಬ ಕನಸನ್ನು ಕಂಡಿದ್ದರು. ಡಾ. ಬಿ.ಆರ್. ಅಂಬೇಡ್ಕರ್, ನೆಹರು, ಜ್ಯೋತಿಬಾ ಪುಲೆ, ರಾಜಾರಾಮ್ ಮೋಹನ್ ರಾಯ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು ಅವರದೇ ಆದ ಆಲೋಚನೆಗಳನ್ನು ಹೊಂದಿದ್ದರು. ಅವೆಲ್ಲವೂ ನಮ್ಮ ಕನಸಿನ ಭಾರತದ ಭವಿಷ್ಯವನ್ನು ಹೇಳುತ್ತದೆ.


     ಒಟ್ಟಾರೆಯಾಗಿ ಭಾರತವು ಜಗತ್ತಿನ ಇತರ ಮಾದರಿ ರಾಷ್ಟ್ರವಾಗಬೇಕಾದರೆ, ಭಾರತವು ಒಳಗೊಂಡಿರುವ ವಿವಿಧತೆಯಲ್ಲಿ ಏಕತೆ ಎಂಬ ಧೈಯವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಸಂಸ್ಕೃತಿ, ಆಚಾರ-ವಿಚಾರ, ಆಲೋಚನೆಗಳು, ಧರ್ಮಗಳು, ನಂಬಿಕೆಗಳು ಇವೆಲ್ಲವನ್ನು ಸರಿಯಾದ ನಿಟ್ಟಿನಲ್ಲಿ ಇಲ್ಲಿ ಕಾಪಾಡಿಕೊಂಡು ಬಂದರೆ ಭಾರತದ ಭವಿಷ್ಯದ ಕನಸನ್ನು ನಾವು ಉತ್ಸುಕತೆಯಿಂದ ಕಾಯಬಹುದು. ನಾವು ಕಂಡ ಕನಸುಗಳನ್ನು ನನಸಾಗಿಸಲು ಭಾರತೀಯರಾದ ಪ್ರತಿಯೊಬ್ಬ ಪ್ರಜೆಯ ಬೆಂಬಲ ಆಲೋಚನೆಗಳು ಅತ್ಯಗತ್ಯ. ಜೊತೆಗೆ ಸರ್ಕಾರದ ಸಹಕಾರಗಳು, ಜನೋಪಯೋಗಿ ಯೋಜನೆಗಳು ಸೇರಿಕೊಂಡರೆ ಸುಲಭ ಸಾಧ್ಯವಾದ ಕೆಲಸ.

ಟಿ.ಎ ಸುಮನ್ ಜಬೀನಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...