'ನೋಂಬ್' ಕಾಲದ ವಿಶೇಷತೆಗಳು
ಆಕಾಶದಲ್ಲಿರುವ ಚಂದ್ರನ ಮೇಲಿನ ಗೆರೆಯ ಗುರುತನ್ನು ನೋಡಿ 'ತಕ್ಷೀರ್' ಕೊಡುವ ಮೂಲಕ ರಂಝಾನ್ ತಿಂಗಳ ಆಗಮನವಾಗುತ್ತದೆ. ರಂಝಾನ್ ತಿಂಗಳು ಆರಂಭವಾಗುತ್ತಿದ್ದಂತೆ ದೇವರ ಮೇಲಿನ ಭಕ್ತಿ, ಅವನ ಮೇಲಿನ ಸತ್ಕರ್ಮಗಳು ಹೆಚ್ಚಾಗುತ್ತದೆ. ತಿಂಗಳು ಪೂರ್ತಿ ಎಲ್ಲರ ಮನಸ್ಸಿನಲ್ಲಿ ಉತ್ಸಾಹ ತುಂಬಿರುತ್ತದೆ. ಪಿಶಾಚಿಗಳನ್ನು ಬಂಧಿಸಿ, ನರಕದ ಬಾಗಿಲನ್ನು ಮುಚ್ಚಿಸ್ವರ್ಗದ ಬಾಗಿಲು ತೆರೆದಿರುತ್ತದೆ. ನಾವು ಮಾಡುವ ಸತ್ಕರ್ಮಗಳಿಗೆ ಎಲ್ಲಾ ತಿಂಗಳಿಗಿಂತ ಹೆಚ್ಚಿನ ಪ್ರತಿಫಲ ದೊರೆಯುತ್ತದೆ ಎಂದು ಮದರಸದ ಗುರುಗಳು ಕಲಿಸಿಕೊಟ್ಟಿದ್ದು ನೆನಪಾಗುತ್ತದೆ. ರಂಝಾನ್ ಮದರಸಗಳಿಗೆ ರಜೆಯ ತಿಂಗಳು. ಚಂದ್ರ ದರ್ಶನವಾದಂದಿನಿಂದ ೩೦ದಿವಸ ರೋಜಾ ಹಿಡಿಯಲಾಗುತ್ತದೆ. ಕೆಲವರು ಮೊಹರಂ ಶಹಬಾನ್ ರಂಝಾನ್ ಹೀಗೆ ನಿರಂತರವಾಗಿ ಮೂರು ತಿಂಗಳುಗಳ ಕಾಲ ಉಪವಾಸ ಹಿಡಿಯುತ್ತಾರೆ. ಆದರೆ ರಂಝಾನ್ ತಿಂಗಳು ಉಪವಾಸ ಹಿಡಿಯುವುದು ಕಡ್ಡಾಯವಾಗಿರುತ್ತದೆ. ಹತ್ತು ವರ್ಷದ ಕೆಳಗಿನ ಮಕ್ಕಳಿಗೆ. ವೃದ್ಧರಿಗೆ ಅನಾರೋಗ್ಯವಾಗಿ ಬಳಲುತ್ತಿರುವವರಿಗೆ ಕಡ್ಡಾಯವಲ್ಲ. ಮುಟ್ಟಾದ ಮಹಿಳೆಯರು ಉಪವಾಸ ಕಡ್ಡಾಯವಿಲ್ಲ. ಅವರು ರಂಝಾನ್ ತಿಂಗಳ ಬಳಿಕ ಮುಂದಿನ ವರ್ಷದ ರಂಝಾನ್ ತಿಂಗಳು ಬರುವ ಮೊದಲು ಹಿಡಿದು ಪೂರ್ಣಗೊಳಿಸಬೇಕು. ಉಪವಾಸ ಹಿಡಿಯುವವರು ರಾತ್ರಿ ಮಲಗುವ ಮುನ್ನ ನಿಯತ್ (ಮರುದಿನದ ಉಪವಾಸದ ಸಂಕಲ್ಪವನ್ನು ಮೊದಲನೇ ದಿನದ ರಾತ್ರಿ ಮಾಡುವುದು) ಮಾಡಿ ಮಲಗಿ 'ಸುಬಹಿ ನಮಾಝಿನ ಬಾಂಗ್' ಆಗುವ ಮೊದಲು ಲಘು ಆಹಾರ ಸೇವಿಸಬೇಕು. ಅಝಾನ್ ಆಗುವವರೆಗೆ ಓದುತ್ತಾ ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಸಮಯ ಕಳೆಯಬೇಕು. ಅಝಾನ್ ಆದ ಬಳಿಕ ಲಾಲರಸವನ್ನು ಹೊರತುಪಡಿಸಿ ಬೇರೆ ಯಾವುದೇ ಘನ ವಸ್ತುಗಳು ಸೇವಿಸಬಾರದು. ನೀರು ಕೂಡ ಕುಡಿಯಬಾರದು. ಕಫವನ್ನು ನುಂಗುವುದು ನಿಷಿದ್ಧವಾಗಿದೆ. ಆ ದಿನ ಸತ್ಕರ್ಮಗಳನ್ನು ಮಾಡುತ್ತಾ ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಕಾಲ ಕಳೆಯಬೇಕು.
ಉಪವಾಸ ಬಿಡುವ ವೇಳೆಗೆ ವಿವಿಧ ಖಾದ್ಯಗಳನ್ನು ತಯಾರಿಸಿ. ಸೂರ್ಯಾಸ್ತದ ಬಳಿಕ 'ಮಗ್ರಿಬ್ ಬಾಂಗ್' ಆಗುವಾಗ ಖರ್ಜರ ತಿನ್ನುವ ಮೂಲಕ ಅದಿಲ್ಲದಿದ್ದರೆ ನೀರಿನ ಮೂಲಕ ಉಪವಾಸ ತೆರೆಯುವುದು 'ಸುನ್ನತಾಗಿದೆ'. ಪುರುಷರು ಉಪವಾಸ ಬಿಡುವ ವೇಳೆಗೆ ಮಸೀದಿಗೆ ತೆರಳುತ್ತಾರೆ. ಅಲ್ಲಿ 'ಇಪ್ತಾರ್' ಕೂಟ ಆಯೋಜನೆ ಮಾಡಲಾಗಿರುತ್ತದೆ. "ಇಶಾ ನಮಾಜ್' ಬಳಿಕ 'ತರಾವೀಹ್' ಎಂಬ ವಿಶೇಷ ನಮಾಜ್ ನಿರ್ವಹಿಸಿ ಮನೆಗೆ ತೆರಳುತ್ತಾರೆ.
ಉಪವಾಸದಿಂದ ಶರೀರದ ಮೇಲೆ ಹಲವು ವೈಜ್ಞಾನಿಕ ಪ್ರಯೋಜನಗಳಿವೆ. ಜೊತೆಗೆ ಮಾನಸಿಕವಾಗಿಯೂ ಮನುಷ್ಯನ ಶರೀರದ ಮೇಲೆ ಪ್ರಭಾವಗಳು ಬೀರುತ್ತದೆ. ಹನ್ನೊಂದು ತಿಂಗಳುಗಳ ಕಾಲ ಹೊಟ್ಟೆ ತುಂಬಿಸಿದ ಪರಿಣಾಮವಾಗಿ ಹಲವು ರೋಗಗಳಿಗೆ ತುತ್ತಾಗುತ್ತಾರೆ. ಮಾನವನ ದೇಹದ ಪ್ರಮುಖ ಅಂಗವಾದ ಲಿವರ್ ಅನ್ನು ಮಾರಕ ರೋಗಗಳಿಂದ ಮುಕ್ತಮಾಡಲು ಉಪವಾಸ ಸಹಕಾರ ಮಾಡುತ್ತದೆ. ಶರೀರದ ಜೀರ್ಣಾಂಗಗಳು ನಿರಂತರ ಕೆಲಸದಲ್ಲಿರುತ್ತದೆ. ರಂಝಾನ್ ತಿಂಗಳಲ್ಲಿ ಜೀರ್ಣಾಂಗಕ್ಕೆ ಬಿಡುವು ಸಿಗುತ್ತದೆ. ರಂಝಾನ್ ತಿಂಗಳ ರೋಝಾವನ್ನು ಎಲ್ಲರೂ ಆಚರಿಸಬೇಕು. ಶ್ರೀಮಂತರೂ, ಬಡವರೂ ಇಲ್ಲಿ ಸರಿಸಮಾನರು. ಇದರಿಂದ ಬಡವರ ಕಷ್ಟಗಳನ್ನು ಅರಿಯಲು ಸಾಧ್ಯವಾಗುತ್ತದೆ. ಹಸಿವಿನ ತೀವ್ರತೆಯನ್ನು ಅರಿಯಲು ಇದು ಸಹಾಯ ಮಾಡುತ್ತದೆ. ಜಗತ್ತಿನಾದ್ಯಂತ ಹಸಿವಿನಿಂದ ಸಾಯುವ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಶ್ರೀಮಂತರಾದವರು ಬಡವರ ಕಷ್ಟಗಳನ್ನು ಅರಿಯದೇ ಹೋದರೆ ಅವರು ಸಮಾಜದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಶ್ರೀಮಂತರು ಬಡವರ ಹಸಿವಿನ ತೀವ್ರತೆಯನ್ನು ಅರಿತುಕೊಂಡರೆ ಅವರು ಬಡವರ ಕಷ್ಟದಲ್ಲಿ ಭಾಗಿಯಾಗುತ್ತಾರೆ. ಆ ಮೂಲಕ ಬಡವರನ್ನು ಮೇಲೆತ್ತುವ ಕೆಲಸವು ಸಾಧ್ಯವಾಗುತ್ತದೆ.
ಕೇವಲ ಆಹಾರವನ್ನು ಬಿಟ್ಟು ನಿಂತರೆ ವೃತ ಆಗುವುದಿಲ್ಲ. ಶರೀರವನ್ನು ಕೆಟ್ಟ ಚಟಗಳಿಂದ ಬಿಟ್ಟು ನಿಂತು ಸಂಪೂರ್ಣವಾಗಿ ದೇವರ ಸ್ಮರಣಿಯಲ್ಲಿ ತೊಡಗಿಸಿಕೊಂಡರೆ ವೃತವು ಪೂರ್ಣವಾಗುತ್ತದೆ.
ಟಿ. ಎ. ಸುಮನ್ ಜಬೀನಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ