ಸೋಮವಾರ, ಮಾರ್ಚ್ 9, 2026

ಸಂಚಿಕೆ - ೧೧

 ಅಂಟೋನಿಯೊ ಗ್ರಾಮ್ಷಿ: ಸಧ್ಯ ನಮಗೆ ಬೇಕಾದ ಚಿಂತಕ

      ಆಧುನಿಕ ಜಗತ್ತಿನ ಮಹಾನ್ ಚಿಂತಕರಲ್ಲಿ ಆಂಟೋನಿಯೊ ಗ್ರಾಮಿ ಕೂಡ ಒಬ್ಬ. ಮೂಲತಃ ಮಾರ್ಕ್ಸವಾದಿ ಚಿಂತಕನಾದ ಗ್ರಾಮ್ಷಿ ಕಾರ್ಮಿಕ ನಾಯಕನಾಗಿದ್ದು ಇಟಲಿಯ ಕಮ್ಯುನಿಷ್ಟ ಪಾರ್ಟಿಯ ಸ್ಥಾಪನೆಗೆ ಕಾರಣೀಕರ್ತರಲ್ಲಿ ಒಬ್ಬನು, ಮೊಸಲನಿಯ ಫ್ಯಾಸಿಸ್ಟ್ ಸರ್ಕಾರ ಗ್ರಾಂತಿಯನ್ನು ಜೈಲಿಗೆ ಅಟ್ಟಿ, "ಈ ಮೆದುಳು ಇನ್ನು ಇಪ್ಪತ್ತು ವರ್ಷಗಳ ಕಾಲ ಕಾರ್ಯ ನಿರ್ವಹಿಸದಂತೆ ಮಾಡಬೇಕು" ಎಂದು ತೀರ್ಪನ್ನು ನೀಡಿ ಶಿಕ್ಷಿಸಿತು. ಎರಡನೆಯ ಮಹಾಯುದ್ಧದ ನಂತರ ಅಂದರೆ ಗ್ರಾಮ್ಮಿಯ ಮರಣದ ನಂತರ ಅವನ ಬರಹಗಳು "ಜೈಲು ಟಿಪ್ಪಣಿಗಳು" ಮತ್ತು "ಜೈಲು ಪೂರ್ವ ಬರಹಗಳು" ಎಂದು ಎರಡು ಸಂಪುಟದಲ್ಲಿ ೧೯೫೧ರಲ್ಲಿ ಇಟಲಿಯಲ್ಲಿ ಪ್ರಕಟವಾಯಿತು. ಅವನ ಜೈಲು ಟಿಪ್ಪಣಿಗಳು ಸರಿ ಸುಮಾರು ೨೮೪೮ ಪುಟಗಳಿದ್ದವು. ಇವುಗಳನ್ನು ಜೈಲಿನಲ್ಲಿದ್ದಾಗ ಬರೆದು ರಹಸ್ಯ ಮಾರ್ಗದ ಮೂಲಕ ಹೊರಗಡೆ ಕಳಿಸಲಾಗಿತ್ತು. ಇವನ ಬರಹ ಪ್ರಕಟವಾಗುತ್ತಿದ್ದಂತೆ ಮಾರ್ಕ್ಸ್ ವಾದಿಗಳು ಮತ್ತು ಮಾರ್ಕ್ಸ್ ವಾದಿ ಅಲ್ಲದವರೂ ಕೂಡ ವಿಶೇಷ ಆಸಕ್ತಿಯನ್ನು ತೋರಿದರು. ಆಧುನಿಕ ರಾಜಕೀಯ ತತ್ವಶಾಸ್ತ್ರವನ್ನು ಅಭ್ಯಾಸಿಸುವವರು ಗ್ರಾಮ್ಷಿ ಬರಹಗಳನ್ನು ಅವಸ್ಥೆ ಮಾಡಲಾಗಲಿಲ್ಲ. ಅದರೊಂದಿಗೆ ಮಾರ್ಕ್ಸ್ವಾದಕ್ಕೆ ಒಂದು ಬೇರೆಯದೇ ಆದ ವಿಸ್ತಾರವನ್ನು ಇವನ ಬರಹವು ನೀಡಿತೆನ್ನುವುದು ಸ್ಪಷ್ಟವಾಗಿದೆ.

      ಗ್ರಾಮ್ಷಿಯನ್ನು ಅರ್ಥ ಮಾಡಿಕೊಳ್ಳಲು ಅವನ ಸಂಕಷ್ಟಪೂರ್ಣ ಮತ್ತು ತ್ಯಾಗಪೂರ್ಣ ಜೀವನ ಕಥೆಯನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಇಟಲಿಯ ದಕ್ಷಿಣ ಪ್ರಾಂತ್ಯದ ಒಂದು ಮೆಡಿಟರೇನಿಯನ್ ದ್ವೀಪವಾದ ಸಾರ್ಡೀನಿಯದಲ್ಲಿ ಗ್ರಾಮ್ಷಿ ಹುಟ್ಟಿದನು. ಇಟಲಿಯ ಭಾಗವಾಗಿದ್ದರೂ ಅತ್ಯಂತ ಬಡತನ ಮತ್ತು ಹಿಂದುಳಿಯುವಿಕೆಯಿಂದ ಕೂಡಿದ್ದ ದ್ವೀಪವಿದು. ಸಾಮ್ರಾಜ್ಯಶಾಹಿಗಳ ದಾಳಿ, ವಿದೇಶಿ ಯಜಮಾನಿಕೆಯ ವಿರುದ್ಧ ಸ್ಥಳಿಯ ಪ್ರತಿರೋಧದ ಚಳವಳಿಗಳು, ಸ್ವಾತಂತ್ರಕ್ಕಾಗಿ ದಂಗೆಗಳು ಮತ್ತು ಹೋರಾಟಗಳಿಂದ ಕೂಡಿದ್ದ ಪ್ರದೇಶವಿದು. ಇದೆಲ್ಲದರ ಜೊತೆಯಲ್ಲಿ ಸಾರ್ಡೀನಿಯದ ಬಹುತೇಕ ಭೂ ಪ್ರದೇಶಗಳು ಉತ್ತರ ಇಟಲಿಯ ಜಮಿನ್ದಾರರ ಹಿಡಿತದಲ್ಲಿತ್ತು. ನಂತರದಲ್ಲಿ ಈ ದ್ವೀಪವನ್ನು ಬೆಲೆಬಾಳುವ ಲೋಹದ ಗಣಿಗಾರಿಕೆಗೆ ಬಳಸಿಕೊಂಡರು. "ಜುಸೆಪ್ ಮಜಿನಿ, ಜುಸೆಪ್ ಗಾರಿಬಾಲ್ಡಿ ಮುಂತಾದ ಕ್ರಾಂತಿಕಾರಿ ರಾಷ್ಟ್ರವಾದಿಗಳ ಮುಂದಾಳತ್ವದ ಯಶಸ್ವಿ ಹೋರಾಟದ ಫಲವಾಗಿ 'ಪುನರ್-ಏಕೀಕರಣ' (ರಿಸೊರ್ಜಿಮೆಂಟೋ) ಸಹ, ಉತ್ತರದ ಯಜಮಾನಿಕೆ ಮತ್ತು ದಕ್ಷಿಣದ ವಸಾಹತೀಕರಣವನ್ನು ಮಾತ್ರ ಸ್ಥಾಪಿಸಿದ್ದವು ಎಂಬುದು ಸಾರ್ಡೀನಿಯಾದ ರಾಷ್ಟ್ರವಾದಿಗಳ ಅಳಲಾಗಿತ್ತು." (ಗ್ರಾಮ್ಷಿಯ ಚಿಂತನೆಗಳು, ೨೦೨೫, ಪು.೨೦) ಇಷ್ಟೆಲ್ಲಾ ಸಮಸ್ಯೆಯಿರುವ ನಾಡಿನಲ್ಲಿ ಗ್ರಾಮಿ ೧೮೯೧ರಲ್ಲಿ ಜನಿಸಿದನು. ಫಿಲಾರಾದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಹೈಸ್ಕೂಲನ್ನು ಸಾಡೀನಿಯಾದ ಕಶ್ಚಿಯಾರಿನಲ್ಲಿ ಪೂರೈಸಿದನು. ತಂದೆ ಫ್ರಾನ್ಸೆಸ್ಕೊ ಗ್ರಾಮ್ಷಿ ಸರ್ಕಾರಿ ನೌಕರನಾಗಿದ್ದು ಯಾವುದೋ ಕರ್ತವ್ಯ ಲೋಪದ ಆರೋಪದಲ್ಲಿ ಬಂದಿಸಿ ಜೈಲಿಗೆ ಹಾಕಲಾಯಿತು. ಆಗ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ನೆರವಾಗಬೇಕೆಂದು ನಿಶ್ಚಯಿಸಿದ ಗ್ರಾಮ್ಷಿಯು ವಿದ್ಯಾಭ್ಯಾಸವನ್ನು ನಿಲ್ಲಿಸಿ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ. ಮುಂದೆ ತಂದೆ ಶಿಕ್ಷೆ ಮುಗಿಸಿ ಮರಳಿ ಬಂದ ಮೇಲೆ ಶಿಕ್ಷಣ ಮುಂದುವರೆಸುತ್ತಾನೆ. ಮಗುವಾಗಿರುವಾಗಲೇ ಬೆನ್ನಿನ ಮೇಲೆ ಬೆನ್ನೆಲುಬಿನ ಕ್ಷಯದಿಂದಾಗಿ ಅನಾರೋಗ್ಯಕರವಾದ ಬೆಳವಣಿಗೆ ಉಂಟಾಯಿತು. ಚಿಕಿತ್ಸೆಗಳು ಫಲಕಾರಿಯಾಗಲಿಲ್ಲ. ಇದರ ಫಲವಾಗಿ ಜೀವನ ಪರ್ಯಂತ ಗೂನು ಬೆನ್ನಿಗನಾದನು. ಮುಂದಿನ ಶಿಕ್ಷಣವನ್ನು ಅಣ್ಣ ಗೆನ್ನಾರೊ ಗ್ರಾಮ್ಷಿ ಜೊತೆಯಿದ್ದು ಮುಂದುವರೆಸಿದನು. ಗೆನ್ನಾರೊಗೆ ಸಮಾಜವಾದದತ್ತ ಒಲವಿತ್ತು. ಅದು ಅಂಟೋನಿಯೋ ಗ್ರಾಮ್ಷಿಗೆ ಸಮಾಜವಾದತ್ತ ಪ್ರೇರಣೆಯನ್ನು ನೀಡಿತ್ತು. ಗೆನ್ನಾರೊ ತನ್ನ ಮೊದಲ ರಾಜಕೀಯ ಗುರುವೆಂದು ಹೆಮ್ಮೆಯಿಂದ ಗ್ರಾಮ್ಷಿ ಹೇಳಿಕೊಳ್ಳುತ್ತಾನೆ. ಮುಂದೆ ಸರ್ಕಾರಿ ಸ್ಕಾಲರ್‌ಶಿಪ್ ಸಿಕ್ಕಿದರಿಂದ ತುರಿನ್ ವಿಶ್ವವಿದ್ಯಾನಿಲಯ ಸೇರಲು ಸಾಧ್ಯವಾಯಿತು. ಅಲ್ಲಿ ಸಮಾಜವಾದಿ ಪಕ್ಷದ ಕಡೆಗೆ ಚಲಿಸಿದನು. ಮುಂದೆ ಕಮ್ಯೂನಿಸ್ಟ್ ಪಕ್ಷದ ನಾಯಕನಾದನು. ಇಟಲಿಗೆ ಹಿಂತಿರುಗಿ ವಿರೋಧ ಪಕ್ಷದ ನಾಯಕನಾದನು. ಮುಂದೆ ಫ್ಯಾಸಿಸ್ಟ್ ಸರಕಾರ ಇವನನ್ನು ಜೈಲಿಗೆ ಹಾಕಿತು. ಜೈಲಿನಲ್ಲಿ ಅಪಾರ ಹಿಂಸೆ ನೋವನ್ನು ಅನುಭವಿಸಿ ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಮಡಿದನು.


ಗ್ರಾಮ್ಷಿಯ ಚಿಂತನೆಗಳು :-

      ಮೂಲತಃ ಮಾರ್ಕ್ಸ್ವಾದಿಯಾದ ಅಂಟೋನಿಯೊ ಗ್ರಾಮ್ಷಿಯು ಈ ಚಿಂತನಶಾಲೆಗೆ ಹೊಸ ದಿಕ್ಕನ್ನು ನೀಡಿದನು. ಮಾರ್ಕ್ಸ್ ಮತ್ತು ಏಂಗೆಲ್ಸ್ ಚಿಂತನೆಗಳನ್ನು ಹಳಹಳಿಕೆಯಾಗಿ ಬಳಸುತ್ತಿದ್ದ ಕಾಲದಲ್ಲಿ ಅದಕ್ಕೆ ನೂತನ ಸಂವಾದಗಳನ್ನು ಕೊಟ್ಟಿದ್ದು ಗ್ರಾಮ್ಷಿ. ಮಾರ್ಕ್ಸವಾದವು ಸಮಾಜಿಕ ವ್ಯವಸ್ಥೆಯಲ್ಲಿ ಬೇಸ್ ಸ್ಪೆಕ್ಟರ್ ಮತ್ತು ಸೂಪರ್‌ಸ್ಟ್ರಕ್ಟರ್ ಎಂದು ಎರಡು ವಿಭಾಗ ಮಾಡಿಕೊಳ್ಳುತ್ತದೆ. ಬೇಸ್‌ಸ್ಪೆಕ್ಟರ್ ಅಂದರೆ ಉತ್ಪಾದನ ವ್ಯವಸ್ಥೆ. ಅಂದರೆ ಶ್ರಮ ಮತ್ತು ಶ್ರಮಿಕ ವರ್ಗವೇ ಇಲ್ಲಿನ ಪ್ರಧಾನವಾಗಿರುತ್ತದೆ. ಆದರೆ ಸೂಪರ್ ಸ್ಪೆಕ್ಟರ್ ಅಂದರೆ ಸಮಾಜದಲ್ಲಿ ಇರಬಹುದಾದ ಜಾತಿ, ವರ್ಗ, ವರ್ಣ, ಧರ್ಮ, ಆಚರಣೆ ಇತ್ಯಾದಿಗಳು. ಆರಂಭದ ಮಾರ್ಕ್ಸ್ ವಾದಿಗಳು ಈ ಸಾಂಸ್ಕೃತಿಕ ವಿಚಾರದ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿಲ್ಲ. ಅವರ ಪ್ರಕಾರ ''ಸಂಸ್ಕೃತಿ ಉತ್ಪಾದನ ವ್ಯವಸ್ಥೆಗೆ ಅಂಟಿಕೊಂಡಿರುವ ಬಂದಳಿಕ." ಸಮಾಜದಲ್ಲಿ ಅಸಮಾನತೆಯಿದೆ ಅದನ್ನು ಬಗೆಹರಿಸುವುದೆಂದರೆ ಉತ್ಪಾದನ ವ್ಯವಸ್ಥೆಯಲ್ಲಿನ ಬಂಡವಾಳಶಾಹಿ/ಉಳಿಗಮಾನ್ಯಶಾಹಿಗಳ ಹಿಡಿತವನ್ನು ಕ್ರಾಂತಿಯ ಮೂಲಕ ಮುಕ್ತವಾಗಿಸಿ ಶ್ರಮಿಕ ಸರ್ಕಾರವನ್ನು ಸ್ಥಾಪಿಸುವುದು. ಹೀಗೆ ಮಾಡುವುದರಿಂದ ಎಲ್ಲಾ ಬಗೆಯ ಅಸಮಾನತೆ ದೂರವಾಗಿ ದುಡಿಯುವ ವರ್ಗ ಕಲ್ಯಾಣವಾಗುತ್ತದೆ. ಎಂದು ನಂಬಲಾಗಿತ್ತು. ಇದು ಪೂರ್ಣ ಸತ್ಯವಲ್ಲ. ಸಂಸ್ಕೃತಿಯ ಮೂಲಕ ನಮ್ಮನ್ನು ನಿಯಂತ್ರಿಸುವಲ್ಲಿ ಸಂಸ್ಕೃತಿಯ ಕೊಡುಗೆಯನ್ನು ಗ್ರಾಮ್ಷಿ ತೋರಿಸಿದ್ದಾನೆ. ಹಾಗಾಗಿ ಅವನು ಸಂಸ್ಕೃತಿಯ ಬಗ್ಗೆ ಹೆಚ್ಚು ಚಿಂತಿಸಿದನು.

      ಗ್ರಾಮ್ಷಿ ಚಿಂತನೆಯ ಮುಖ್ಯವಾಗಿ ಸಾಂಸ್ಕೃತಿಕ ಯಾಜಮಾನಿಕೆಯನ್ನು ಕುರಿತದ್ದು, ಸಂಸ್ಕೃತಿಯೆಂದರೆ ಏನು? ಎನ್ನುವುದಕ್ಕೆ ನಾವು ಅತ್ಯಂತ ಅಗ್ಗದ ಜನಪ್ರಿಯವಾದ ನಿರೂಪಣೆಯನ್ನು ನಂಬಿಕೊಂಡಿದ್ದೆವೆ. ಒಂದು ಸಮುದಾಯದ ಆಚರಣೆ, ಉಡುಪು, ಧರ್ಮ, ದೇವರು ಇವುಗಳೇ ಸಂಸ್ಕೃತಿಯೆಂದು ನಾವು ತಿಳಿದಿದ್ದೇವೆ. ಮಾತ್ರವಲ್ಲ ಸಂಸ್ಕೃತಿಯೆಂದರೆ ಅದು ಅಸಮಾನ್ಯವಾದದ್ದು ಮತ್ತು ಅಪೌರುಷೇಯವಾದದ್ದು ಎಂದು ನಂಬಿದ್ದೇವೆ. ನಿಜವಾಗಿ ಸಂಸ್ಕೃತಿ ಎಂದರೆ ಸರ್ವಸಾಮಾನ್ಯವಾದ ದಿನ ನಿತ್ಯದ ಮನುಷ್ಯ ಬದುಕು ಎಂದರ್ಥ. "ಸಂಸ್ಕೃತಿ ಎಂದರೆ ಜನರ ನಿತ್ಯ ಬದುಕಿನ ಸಹಜ ವಿವರಗಳಿಂದ ಪಡೆಯುವ ಅರಿವೇ ಹೊರತು, ಅಮೂರ್ತವಾದ ವಿಚಾರಗಳಲ್ಲ.” (ಹೊಸತು, ಸೆಪ್ಟೆಂಬರ್, ೨೦೨೨, ಪು.೬೦) ಎಂದು ರೇಮಂಡ್ ವಿಲಿಯಮ್ಸ್ ಹೇಳುತ್ತಾರೆ. ಈ ಅರಿವನ್ನು ಪ್ರಭುತ್ವಾಧಿಕಾರವು ನಿಯಂತ್ರಿಸಿ ತಮ್ಮ ಪರವಾಗುವಂತೆ ಮಾಡುತ್ತದೆ. ಈ ಪ್ರಕ್ರಿಯೆಗೆ ಸಾಂಸ್ಕೃತಿಕ ಯಾಜಮಾನ್ಯ (Cultural Hegemony) ಎಂದು ಗ್ರಾಮ್ಷಿ ಕರೆಯುತ್ತಾನೆ. ನಮ್ಮ ಜನರ ಜ್ಞಾನ ವ್ಯವಸ್ಥೆಯನ್ನು ಸಂಸ್ಕೃತಿ, ಸಾಮಾಜಗಳ ಮೂಲಕ ತಮಗೆ ಬೇಕಾದ ಒಪ್ಪಿಗೆಯನ್ನು ಉತ್ಪಾದಿಸಿಕೊಂಡು ದೀರ್ಘಕಾಲದವರೆಗೆ ತಮ್ಮ ಹಿಡಿತವನ್ನು ಸಾಧಿಸುತ್ತಾರೆ. ಹಾಗಾಗಿ ಸಾಂಸ್ಕೃತಿಕ ಯಜಮಾನಿಕೆಯ ವಿರುದ್ಧ ಸಂಸ್ಕೃತಿ ಕ್ರಾಂತಿ ಮಾಡುವ ತುರ್ತನ್ನು ಗ್ರಾಮ್ಷಿ ಚಿಂತನೆಯಿಂದ ಕಲಿಯಬಹುದು.


ಪರಾಮರ್ಶನ ಗ್ರಂಥಗಳು :-

  1. ಕೆ. ಫಣಿರಾಜ್, ಅಂಟೋನಿಯೊ ಗ್ರಾಮ್ಷಿ, ಅಭಿನವ, ಬೆಂಗಳೂರು, ೨೦೧೧,
  2. ಇ. ಎಂ. ಎಸ್. ನಂಬೂದರಿಪಾಡ್, ಪಿ. ಗೋವಿಂದ ಪಿಳ್ಳೆ, ಗ್ರಾಮ್ಷಿಯ ಚಿಂತನೆಗಳು, (ಅನು-ಪ್ರಭಾಕರನ್ ಕೆ.) ಕ್ರಿಯಾ ಮಾಧ್ಯಮ, ಬೆಂಗಳೂರು, ೨೦೨೫.
  3. ಡಾ. ಕೆ. ಕೇಶವಶರ್ಮ, ಆಂಟೋನಿಯೊ ಗ್ರಾಮ್ಷಿ, ಸೃಷ್ಟಿ ಪಬ್ಲಿಕೇಷನ್ಸ್, ಬೆಂಗಳೂರು, ೨೦೨೪.
  4. ಡಾ. ಕೆ. ಕೇಶವಶರ, ಫ್ರಾಂಕ್‌ ಫರ್ಟ್ ಸ್ಕೂಲ್, ದೇಸಿ ಪುಸ್ತಕ, ಬೆಂಗಳೂರು, ೨೦೨೫.
  5. ಡಾ. ರಾಜೇಂದ್ರ ಚೆನ್ನಿ, ಸಾಹಿತ್ಯ ಮತ್ತು ಸಿದ್ಧಾಂತಗಳು, ಅಭಿನವ, ಬೆಂಗಳೂರು, ೨೦೨೨.


ವಿನಯ ಕುಮಾರ್, ಸಂಶೋಧನಾರ್ಥಿ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...