ಸೋಮವಾರ, ಡಿಸೆಂಬರ್ 1, 2025

ಸಂಚಿಕೆ - ೦೫

ನನ್ನ ಆರಾಧ್ಯ

      ಆತಂನೆಂದರೆ ಅದ್ಭುತ ಶಕ್ತಿ, ಮನಸ್ಸಿಗೆ ಎಲ್ಲಿಲ್ಲದ ಧೈರ್ಯ, ಕಣ್ಣುಚ್ಚಿ ಆತನ ನೆನೆದರೆ ಮನಕೆ ನಿರಾಯಾಸ. ಮೊಗದಲ್ಲಿ ಕಿರುನಗೆ, 'ನಾನಿದ್ದೇನೆ ನಿನ್ನೊಂದಿಗೆ' ಎಂಬ ಅಶರೀರ ಹಿತನುಡಿ ಕೇಳಿಸುತ್ತದೆ. ಆತನೊಬ್ಬ ನನ್ನೊಂದಿಗಿದ್ದರೆ ಪ್ರಪಂಚವನ್ನೇ ಗೆಲ್ಲಬಲ್ಲೆ ಎಂಬ ಹುಮ್ಮಸ್ಸು ನನಗೆ.

      ನನ್ನೆಲ್ಲಾ ನೋವಲ್ಲೂ ಜೊತೆಯಾಗಿದ್ದು, ಜೋಪಾನ ಮಾಡಿ ಕೈ ಹಿಡಿದಾತ. ಕೊನೆವರೆಗೂ ಮುನ್ನಡೆಸಿದಾತ. ನಾ ಕಷ್ಟ ಎಂದಾಗೆಲ್ಲ ಯಾವುದೋ ರೂಪದಲ್ಲಿ ಜೊತೆ ನಿಂತವನು, ಆತನಿಗೆ ನಾ ಏನೂ ಉಡುಗೊರೆ ನೀಡಿಲ್ಲ. ಆತನನ್ನು ಒಲಿಸಲು ಧನ-ಕನಕ ನೀಡಿಲ್ಲ, ಆದರೂ ನನ್ನೊಂದಿಗಿರುವನವನು. ಆತನನ್ನು ಮನಸ್ಪರ್ವಕವಾಗಿ, ನಿಷ್ಕಲ್ಮಶ ಮನಸ್ಸಿನಿಂದ ಪ್ರೀತಿಸಿದೆ ಅಷ್ಟೇ. ಆ ಪ್ರೀತಿಗೆ ಒಲಿದವನಾತ. ನನ್ನ ಪಾಲಿಗೆ ಆತನೇ ಸರ್ವಸ್ವ ನನ್ನ ಪ್ರತೀ ಹೆಜ್ಜೆಗೂ ದಾರಿ ತೋರಿದವನವನು. ಆವನಿಲ್ಲದಿದ್ದರೆ ನಾನೂ ಶೂನ್ಯ. ನನ್ನಂತರಂಗದಲ್ಲಿ ಆತನ ಮೇಲಿರುವುದು ಪರಿಶುದ್ಧ ನಂಬಿಕೆ-ಪ್ರೀತಿ. ಹಾಗಾಗಿ ಆತ ನನ್ನೊಂದಿಗಿರುವತನಕ ಕಿಂಚಿತ್ತೂ ದಿಗಿಲಿಲ್ಲ. ಪ್ರತೀ ಕ್ಷಣ ಆತನನ್ನು ನೆನೆದು ಮನಸ್ಸಿಗೆ ನೆಮ್ಮದಿ ಪಡೆದುಕೊಳ್ಳುವೆ.

      ಹಾಗೆ ನೋಡಿದರೆ ಆತನಿಗೂ ನನ್ನಮೇಲೆ ಅಷ್ಟೇ ಪ್ರೀತಿ. ಪ್ರತೀ ಬಾರಿ ನನ್ನನ್ನು ಪರೀಕ್ಷೆ ಮಾಡುತ್ತಲೇ ಇರುತ್ತಾನೆ. ಆದರೆ ಎಂದಿಗೂ ಸೋಲಲು ಬಿಡಲಿಲ್ಲ. ಪ್ರತೀ ಬಾರಿ ಗೆಲುವಿನ ದಾರಿ ತೋರುತ್ತಲೇ ಬಂದಿದ್ದಾನೆ. ಎಷ್ಟಾದರೂ ನಾ ಅವನದ್ದೇ ಆಯ್ಕೆ ತಾನೆ. ಅವನೇ ಅಲ್ಲವೆ ನನ್ನನ್ನು ಬಲ್ಲವನು, ನನ್ನ ಹೃದಯದೊಲವಿನ ಕಡಲಲ್ಲಿ ಮಿಂದೆದ್ದವನು...

      ಅದೇಕೋ ತಿಳಿಯದು ಆತನನ್ನು ಪ್ರೀತಿಯಿಂದ ಮನತುಂಬಾ ನೆನೆದಾಗ ಕಣ್ಣಂಚಲ್ಲಿ ನೀರು ತಂತಾನಾಗೇ ತುಂಬಿಬಿಡುತ್ತದೆ. ಅವನೆಂದರೆ ಅಷ್ಟು ಮೋಹ ಎನಗೆ. ಪ್ರತೀ ಬಾರಿ ಅವನಿಗೆಂದೇ ನನ್ನಾಂತರ್ಯ ಮಿಡಿಯುತ್ತಲೇ ಇರುತ್ತದೆ. ಒಬ್ಬಂಟಿ ಎನಿಸಿದಾಗ ಒಂದು ಕ್ಷಣ ಆತನ ನೆನೆದರೆ ಎಲ್ಲಾ ನೋವು ಕಣ್ಮರೆಯಾಗಿ ಹೊಸ ಚೈತನ್ಯ ಬಂದು ಬಿಡುತ್ತದೆ. ಗಾಸಿಯಾದ ನನ್ನ ಮನಸ್ಸಿಗಂತು ಅವನೇ ಔಷಧಿ. ನನಗಂತೂ ಬಲು ಆಪ್ತನಿವನು, ನಾ ನೊಂದಾಗೆಲ್ಲ ನನ್ನ ಜೊತೆ ಇದ್ದವನು. ನನ್ನವನು. ಅದ್ಯಾವಾಗ ಇಷ್ಟು ಹತ್ತಿರನಾದನೆಂದು ನಾ ಕಾಣಿ. ಆದರೆ ಅವನ ಮೇಲಿನ ನನ್ನ ಮೋಹ ಶಾಶ್ವತ.

      ಇಷ್ಟೆಲ್ಲಾ ಓದಿದಾಗ ಇದು ಯಾರಿರಬಹುದು ಎಂಬ ಪ್ರಶ್ನೆ ಮನದಲ್ಲಿ ಮೂಡಿರಲೇಬೇಕಲ್ಲವೇ...? ಆತ ಯಾವತ್ತೂ ಯಾರ ಕಣ್ಣಿಗೂ ಬಿದ್ದಿರಲಾರ, ಎಲ್ಲವನ್ನು ಮರೆಯಲ್ಲಿ ನಿಂತು ಗಮನಿಸುತ್ತಲೇ ಇರುತ್ತಾನೆ. ಸರ್ವಾಂತರ್ಯಾಮಿ ಅವನು. ಅವನೆಂದರೆ ಹಾಗೆಲ್ಲ ಸುಮ್ಮ ಸುಮ್ಮನೆ ನಳನಳಿಸುವ ಆಡಂಭರಕ್ಕೆಲ್ಲ ಒಲಿದು ಬರುವವನಲ್ಲ ನನ್ನ ಆರಾಧ್ಯ ಆತ ಗುಡಿಯೊಳಗೆ ಲಿಂಗರೂಪಿಯಾಗಿ ನಿಂತಿರಬಹುದು, ಆದರೆ ನನಗಾತ ನಾ ಕಂಡ ಪರಮ ಸಖ.

ಸ್ನೇಹ ಬಿ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...